ಭಾಷಿಕ ರಚನೆಯಲ್ಲಿ ಮತ್ತು ಸಾಂಸ್ಕೃತಿಕವಾಗಿ ಅಲ್ಪಸಂಖ್ಯಾತ ಸಮುದಾಯಗಳು, ದಮನಿತ ಜನಾಂಗಗಳನ್ನು ಅವಮಾನಿಸುವ, ನಿಂದಿಸುವ ಅಥವಾ ಸ್ಟೀರಿಯೋಟೈಪ್ ಮಾಡಿ ಹಂಗಿಸುವ ಸಂಗತಿಗಳನ್ನು ವಿರೋಧಿಸಿ ಪಶ್ಚಿಮದ ಅಕಾಡೆಮಿಕ್ ವಲಯದಲ್ಲಿ ಸುಮಾರು 70ರ ದಶಕದಲ್ಲಿ ಪ್ರಾರಂಭವಾದ ಚಳವಳಿ ಮುಂದಿನ ಹಲವು ಘಟ್ಟಗಳಲ್ಲಿ ಹೆಚ್ಚು ವಿರೋಧಗಳನ್ನೇ ಎದುರಿಸಿ ’ಪೊಲಿಟಿಕಲ್ ಕರೆಕ್ಟ್‌ನೆಸ್’ ಎಂದು ಕರೆಸಿಕೊಂಡಿತು. ಈ ನುಡಿಗಟ್ಟನ್ನು ಹೆಚ್ಚು ಋಣಾತ್ಮಕವಾದ ನೆಲೆಯಲ್ಲಿ ಬಳಸಿ ಹಾಸ್ಯಕ್ಕೀಡು ಮಾಡಿದ್ದೇ ಹೆಚ್ಚು. 90ರ ದಶಕದಿಂದ ಸ್ವಲ್ಪಸ್ವಲ್ಪವೇ ಗಂಭೀರತೆ ಪಡೆದುಕೊಂಡು ಒಂದು ದೊಡ್ಡ ಮಟ್ಟದಲ್ಲಿ ಹಾಗೂ ವಿಶಾಲ ನೆಲೆಯಲ್ಲಿ ಈ ಅಭಿಯಾನ ಅಥವಾ ಚಳವಳಿ ರೂಪುಗೊಂಡಿತಲ್ಲದೆ, ಹಲವು ದೇಶಗಳಿಗೂ ಅಲ್ಲಿನ ಪ್ರಾದೇಶಿಕ ಅಲ್ಪಸಂಖ್ಯಾತ ಸಮುದಾಯಗಳ ಸಮಸ್ಯೆಗಳುನ್ನು ಅಡ್ರೆಸ್ ಮಾಡುವತ್ತ ಹಬ್ಬಿತು.
ಪಶ್ಚಿಮದಲ್ಲಿ ಈ ಚಳವಳಿಯ ಭಾಗವಾಗಿ ಎದ್ದ ದೊಡ್ಡ ಕೂಗು ಕಪ್ಪು ಸಮುದಾಯಕ್ಕೆ ಸೇರಿದವರದ್ದು. ಆಡುವ ಮಾತಿಗೆ ಸಂಬಂಧಪಟ್ಟಂತೆ ನಿಗ್ಗರ್ ಅಥವಾ ನಿಗ್ರೋ ಪದದ ಬಳಕೆಯನ್ನು ವಿರೋಧಿಸುವುದರಿಂದ ಹಿಡಿದು ಹಲವು ಸುಧಾರಣೆಗಳಿಗೆ ಅದು ಕರೆಕೊಟ್ಟಿತು. ತಮ್ಮನ್ನು ಕಪ್ಪು ಎಂದು ಕರೆಯಬೇಕೆಂದೂ, ಕೊನೆಗೆ ಅದನ್ನೂ ದಾಟಿ ಆಫ್ರಿಕನ್-ಅಮೆರಿಕನ್ ಸಮುದಾಯ ಎಂದು ಕರೆಯಬೇಕೆಂಬ ಕೂಗು ಗಟ್ಟಿಯಾಗಿ ನಿಂತಿತು. ಇದರ ಮುಂದುವರಿದ ಮತ್ತು ವಿಸ್ತರಣೆಯ ಭಾಗವಾಗಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ಸ್ ಚಳವಳಿ ಇಂದಿಗೂ ಗಟ್ಟಿಯಾಗಿ ಮುನ್ನಡೆದಿದೆ. ಪೊಲೀಸ್‌ರನ್ನು ಆಫ್ರಿಕನ್-ಅಮೆರಿಕನ್ ಸಮುದಾಯದ ಬಗ್ಗೆ ಸಂವೇದನಾಶೀಲರನ್ನಾಗಿಸುವ ಸುಧಾರಣೆಯಂತಹ ಅತ್ಯಗತ್ಯ ಮತ್ತು ತುರ್ತಾದ ನಿರ್ದಿಷ್ಟ ಕಾರ್ಯಸಾಧು ಯೋಜನೆಗಳೂ ಅದರ ಭಾಗವಾಗಿದೆ.

ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇಂತಹ ಯೋಜನೆಗಳನ್ನು ವಿರೋಧಿಸುತ್ತಿದ್ದಾರೆ, ಅದು ಬೇರೆಯದೇ ಚರ್ಚೆ. ಆದರೆ ಪೊಲೀಸ್ ಸುಧಾರಣೆಗಳಂತಹ ಯೋಜನೆಗಳನ್ನು ತಾತ್ವಿಕವಾಗಿ ಒಪ್ಪಿ, ಭಾಷೆಯ ಪ್ರಯೋಗದ ಬಗ್ಗೆ ಮುಂದಿಟ್ಟ ಬೇಡಿಕೆಗಳಿಗೆ ಆಕ್ಷೇಪ ಎತ್ತಿದವರೂ ಇದ್ದರು. ಭಾಷೆಯ ಬಳಕೆ ಕೂಡ ಸಾಂಕೇತಿಕವಾದದ್ದು ಮತ್ತು ಅದು ಕೂಡ ಸುಧಾರಣೆಗೊಂಡರೆ ಒಟ್ಟಾರೆಯಾಗಿ ದಮನಿತ ಸಮುದಾಯಗಳ ಬಗ್ಗೆ ಇರುವ ಪೂರ್ವಾಗ್ರಹಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಸ್ವಲ್ಪವಾದರೂ ಸಹಕರಿಸೀತು ಎಂಬ ತಿಳಿವಳಿಕೆ ಮುಂದಿನ ದಿನಗಳಲ್ಲಿ ಮೂಡಿದ್ದಂತೂ ನಿಜ. ಒಟ್ಟಿನಲ್ಲಿ ದಮನಿತ ಸಮುದಾಯಗಳು ತಮ್ಮ ಘನತೆಗೆ ಬೇಕಾದ್ದನ್ನು ಆಗ್ರಹಿಸಿದಾಗ ಅದನ್ನು ಕೇಳಿಸಿಕೊಳ್ಳುವ, ಕೊನೆ ಪಕ್ಷ ಆರೋಗ್ಯಪೂರ್ಣವಾಗಿ ಚರ್ಚಿಸುವ ಮತ್ತು ಒಳಗೊಳ್ಳುವ ಮುಕ್ತಮನಸ್ಸನ್ನಾದರೂ ಹೊಂದಿರಬೇಕು ಎಂಬದು ನಿರ್ವಿವಾದ.
ಒಂದು ಸರಳ ಉದಾಹರಣೆಯನ್ನೇ ನೋಡೋಣ. ಎಷ್ಟೋ ಸಾರಿ ತುಸು ತಿಳಿವಳಿಕೆಯುಳ್ಳ ಪುರುಷರು ಕೂಡ ’ನಾನೇನು ಬಳೆ ತೊಟ್ಟುಕೊಂಡಿಲ್ಲ’, ’ಬಳೆ ತೊಟ್ಟುಕೊಳ್ಳುವುದಕ್ಕೆ ಹೇಳು’ ಇಂತಹ ಪ್ರಯೋಗಗಳನ್ನು ಲೀಲಾಜಾಲವಾಗಿ ಮಾಡುತ್ತಾರೆ. ತಮ್ಮ ಮನೆಯಲ್ಲಿ ತಮ್ಮ ತಾಯಿಯದ್ದೋ, ತಮ್ಮ ಅಕ್ಕ-ತಂಗಿಯರದ್ದೋ ಕಷ್ಟದ ಹಾಗೂ ಸವಾಲಿನ ಬದುಕುಗಳನ್ನು ನೋಡಿ ಬೆಳೆದಿದ್ದರೂ, ಇಂತಹ ಪದಪ್ರಯೋಗಗಳನ್ನು ಮಾಡುವುದರ ಹಿಂದೆ ಪಿತೃಪ್ರಧಾನ ವ್ಯವಸ್ಥೆ ಕೆಲಸ ಮಾಡುತ್ತಿರುತ್ತದೆ. ಆ ಪದಪುಂಜ ಸ್ತ್ರೀವಿರೋಧಿ ಎಂಬುದು ಕೂಡ ಎಷ್ಟೋ ಜನರ ತಿಳಿವಳಿಕೆಯ ಭಾಗ ಆಗಿರುವುದಿಲ್ಲ. ಇಂತಹ ಸ್ತ್ರೀ ವಿರೋಧಿ, ವಲಸಿಗರ ವಿರೋಧಿ, ಇಡೀ ಮುಸ್ಲಿಂ ಸಮುದಾಯವನ್ನು ಸ್ಟೀರಿಯೋಟೈಪ್ ಮಾಡಿ ಅವರ ವಿರುದ್ಧ ಹೇಳಿಕೆ ನೀಡುವುದನ್ನು ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇಪದೇ ಮಾಡುತ್ತಿದ್ದ. ಇದರ ವಿರುದ್ಧ ಯಾರಾದರೂ ದನಿ ಎತ್ತಿದರೆ ಈ ’ಪೊಲಿಟಿಕಲ್ ಕರೆಕ್ಟ್‌ನೆಸ್’ ಇಡೀ ದೇಶಕ್ಕೆ ಮತ್ತು ದೇಶದ ಭದ್ರತೆಗೆ ಮಾರಕ ಎಂದು ’ಪೊಲಿಟಿಕಲ್ ಕರೆಕ್ಟ್‌ನೆಸ್’ನನ್ನೇ ತನ್ನ ಶತ್ರುವನ್ನಾಗಿ ಮಾಡಿಕೊಂಡಿದ್ದ.

ಭಾಷಿಕ ಬಳಕೆಯ ಅಸೂಕ್ಷ್ಮತೆಯನ್ನು ಬಗೆಹರಿಸಿಕೊಳ್ಳುವುದರ ಜೊತೆಜೊತೆಗೇ ದಮನಿತ ಸಮುದಾಯಗಳು ತಮ್ಮ ಹಕ್ಕುಗಳಿಗೆ ಹೋರಾಟ ಮಾಡುವುದನ್ನೂ ಈ ಅಭಿಯಾನದ ಭಾಗವಾಗಿಸಿಕೊಂಡಿವೆ. ಇಲ್ಲಿ ಟ್ರಾನ್ಸ್‌ಜೆಂಡರ್ ಸಮುದಾಯವನ್ನೇ ನಾವು ಪರಿಗಣಿಸಿದರೆ, ಸಾಮಾನ್ಯ ಜನರು ಆಡುವ ಮಾತುಗಳಲ್ಲಿ ’ಚಕ್ಕ’, ’ಹಿಜ್ಡ’ ಹೀಗೆ ಅವರು ಅಪಹಾಸ್ಯಕ್ಕೆ, ಬೈಗುಳಗಳಿಗೆ ಗುರಿಯಾಗುತ್ತಿದ್ದು ಒಂದು ಕಡೆಯಾದರೆ, ಭಾರತೀಯ ಸಿನಿಮಾಗಳಲ್ಲಿ ಟ್ರಾನ್ಸ್‌ಜೆಂಡರ್ ಸಮುದಾಯವನ್ನು ಕೆಟ್ಟದ್ದಾಗಿ ಚಿತ್ರಿಸುವ ದೃಶ್ಯಗಳು ಕೂಡ ಸರ್ವೇಸಾಮಾನ್ಯವಾಗಿರುದ್ದವು. ಒಂದು ಕಡೆ ಕಾನೂನಾತ್ಮಕವಾಗಿಯು (ಐಪಿಸಿ 377 ಪ್ರಕಾರ ಈ ಸಮುದಾಯಗಳ ಸೆಕ್ಷುಯಲ್ ಓರಿಯೆಂಟೇಶನ್‌ಅನ್ನು ಅಪರಾಧೀಕರಣಗೊಳಿಸಲಾಗಿತ್ತು) ಸಮಸ್ಯೆ ಎದುರಿಸುತ್ತಿದ್ದರೆ ಮತ್ತೊಂದು ಕಡೆ, ಸಮಾಜದಲ್ಲಿ ಅವಕಾಶಗಳಿಗಾಗಿ, ಪ್ರಾತಿನಿಧ್ಯಕ್ಕಾಗಿ, ಜನಸಾಮಾನ್ಯರ ಮಾತುಗಳಲ್ಲಿ, ಕಲೆಯಲ್ಲಿ ತೀವ್ರ ತಾರತಮ್ಯವನ್ನು ಎದುರಿಸುತ್ತಿದ್ದರು. ಇವುಗಳ ವಿರುದ್ಧ ಈ ಅಲ್ಪಸಂಖ್ಯಾತ ಸಮುದಾಯ ನಡೆಸಿದ ಹೋರಾಟ ಅಭೂತಪೂರ್ವವಾದದ್ದು.
ಭಾಷೆಯ ಬಳಕೆಯಲ್ಲಿ ’ಚಕ್ಕ’, ’ಹಿಜ್ಡ’ ಪದಗಳ ವಿರುದ್ಧ ಒಂದು ನಿರಂತರವಾದ ತಿಳಿವಳಿಕೆಯ ಅಭಿಯಾನ ನಡೆದು ಕೊನೆಗೆ ’ಮಂಗಳಮುಖಿ’ ಎಂಬ ಪದವೂ ಸರಿಯಲ್ಲ, (ಮಂಗಳ ಅಮಂಗಳ ಎಂಬುದಿಲ್ಲ, ಇರುವುದು ಮನುಷ್ಯರು ಮತ್ತು ಮಾನವೀಯತೆ ಎಂದು ಅಕ್ಕೈ ಪದ್ಮಶಾಲಿ ನ್ಯಾಯಪಥ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು), ತೃತೀಯ ಲಿಂಗ ಬಳಕೆ ಕೂಡ ಸರಿಯಾದುದ್ದಲ್ಲ (ಅದು ಮೊದಲನೆ ಲಿಂಗ, ಎರಡನೆಯದು ಎಂಬ ಗ್ರೇಡಿಂಗ್ ಸಮಸ್ಯೆ ಉಂಟುಮಾಡುತ್ತದೆ) ಎಂದು ಹೇಳಿ ಟ್ರಾನ್ಸ್‌ಜೆಂಡರ್ ಅಥವಾ ಟ್ರಾನ್ಸ್‌ಲಿಂಗ ಎಂದು ಬಳಕೆ ಮಾಡುವಂತೆ ಸಮುದಾಯ ಅಥವಾ ಸಮುದಾಯದ ಪ್ರತಿನಿಧಿಗಳು ಹೇಳುತ್ತಿದ್ದಾರೆ. ಅದನ್ನು ಪ್ರಜ್ಞಾವಂತ ಸಮಾಜ ಕೇಳಿಸಿಕೊಳ್ಳಬೇಕಿದೆ. ಹಲವು ದಶಕಗಳ ಹೋರಾಟದ ಬಳಿಕೆ ಐಪಿಸಿ 377 ರದ್ದುಗೊಳಿಸುವುದರಲ್ಲೂ ಯಶಸ್ವಿಯಾಗಿದ್ದಾರೆ. ಈಗ ಉದ್ಯೋಗ, ರಾಜಕೀಯ ಅವಕಾಶಗಳಲ್ಲಿ ಸಮಾನ ಪ್ರಾತಿನಿಧ್ಯಕ್ಕೆ ಧ್ವನಿ ಎತ್ತುವಾಗ ಭಾಷಿಕ ಸಮಸ್ಯೆಗಳನ್ನು ಪರಿಹರಿಸಿಕೊಂಡಂತೆಯೇ ಆ ಸಮಸ್ಯೆಗಳಿಗೂ ಪ್ರಭುತ್ವ ಮತ್ತು ಜನಸಮುದಾಯ ಗಮನಹರಿಸಿ ಸಹಾಯಹಸ್ತ ಚಾಚಬೇಕಿದೆ.
ಕನ್ನಡದ ಮಟ್ಟಿಗೆ ತಳಸಮುದಾಯಗಳನ್ನು, ಮಹಿಳೆಯರನ್ನು ಮತ್ತು ಬುಡಕಟ್ಟುಸಮುದಾಯಗಳನ್ನು ಅವಮಾನಿಸುವ ಮಾತುಗಳು ಗಾದೆಗಳಲ್ಲಿ, ಬೈಗುಳಗಳಲ್ಲಿ ಯಥೇಚ್ಚವಾಗಿ ಕಾಣಬಹುದು. ಹಜಾಮ, ಹೊಲೆಯ ಹೀಗೆ ಹಲವು ಶೋಷಿತ ಸಮುದಾಯಗಳ ಹೆಸರುಗಳನ್ನು ಬೈಗುಳಗಳಾಗಿ ಬಳಸುವ ಹೊಲಸು ಪರಿಪಾಠ ನಮ್ಮ ನಾಡಿನಲ್ಲಿ ಬೆಳೆದುಬಂದಿದೆ. ದೊಂಬರಾಟ, ಶಿಳ್ಳೆಕ್ಯಾತ ಮುಂತಾದ ಬುಡಕಟ್ಟು ಸಮುದಾಯಗಳ ಹೆಸರುಗಳನ್ನು ಅಪಹಾಸ್ಯಕ್ಕೆ ಉಪಯೋಗಿಸಿಕೊಳ್ಳುವುದು ಕೂಡ. ಶೋಷಿತ ಸಮುದಾಯಗಳ ಹೆಸರುಗಳನ್ನು ಹಲವು ಬಾರಿ ಪ್ರಜ್ಞಾಪೂರ್ವಕವಾಗಿಯೇ ಬಳಸಿದರೆ, ದೊಂಬರಾಟ, ಶಿಳ್ಳೆಕ್ಯಾತ ಪದಗಳನ್ನು ಹಲವು ಬಾರಿ ಅಪ್ರಜ್ಞಾಪೂರ್ವಕವಾಗಿ, ಆ ಸಮುದಾಯಗಳ ಅಸ್ತಿತ್ವದ ಬಗ್ಗೆ ಅರಿವೇ ಇಲ್ಲದೆಯೂ ಬಳಸುವುದು ಕೂಡ ನಡೆದಿದೆ. ಆದುದರಿಂದ ಒಂದು ಕಡೆ ಪ್ರಜ್ಞಾಪೂರ್ವಕವಾಗಿ ಮಾಡುತ್ತಿರುವ ತಪ್ಪಿನ ವಿರುದ್ಧ ಕಾನೂನು ಹೋರಾಟಗಳವರೆಗೂ ನಡೆದಿದ್ದರೆ, ಅಪ್ರಜ್ಞಾಪೂರ್ವಕವಾದ ಅಸೂಕ್ಷ್ಮ ನಡವಳಿಕೆಯ ವಿರುದ್ಧ ತಿಳಿವಳಿಕೆಯ ಅಭಿಯಾನ ನಡೆಯುತ್ತಿದೆ. ಅದಿನ್ನೂ ತೀವ್ರವಾಗಬೇಕಿದೆ.
ಈ ನಿಟ್ಟಿನಲ್ಲಿಯೇ ಇತ್ತೀಚೆಗೆ ಕರ್ನಾಟಕದ ಪ್ರಸಕ್ತ ಕಾರ್ಟೂನಿಸ್ಟ್‌ಗಳಲ್ಲಿ ಒಬ್ಬರಾದ ದಿನೇಶ್ ಕುಕ್ಕುಜಡ್ಕ ಅವರು ರಚಿಸಿದ್ದ ಒಂದು ಕಾರ್ಟೂನ್ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದ ಚರ್ಚೆಗೆ ಗ್ರಾಸವಾಯಿತು. ಯಡಿಯೂರಪ್ಪನವರನ್ನು ಕೋಲೆಬಸವನನ್ನಾಡಿಸುತ್ತಿರುವ ವ್ಯಕ್ತಿಯಂತೆಯೂ, ಸದ್ಯದ ಮುಖ್ಯಮಂತ್ರಿಯವರನ್ನು ಬಸವನನ್ನಾಗಿಯೂ ಚಿತ್ರಿಸಿದ್ದ ಕಾರ್ಟೂನ್ ಸದ್ಯದ ಕರ್ನಾಟಕ ಮುಖ್ಯಮಂತ್ರಿ ಆಯ್ಕೆಯನ್ನು ವ್ಯಂಗ್ಯದ ರೂಪದಲ್ಲಿ ಪ್ರಸ್ತುತಪಡಿಸಿತ್ತು. ಆದರೆ ಸಮಾಜದ ಅಂಚಿಗೆ ನೂಕಲ್ಪಟ್ಟಿರುವ ಮತ್ತು ಬಡತನದಲ್ಲಿ ಇರುವ ಕೋಲೆಬಸವ ಸಮುದಾಯವನ್ನು ಈ ವ್ಯಂಗ್ಯಕ್ಕೆ ಆಯ್ದುಕೊಂಡ ಬಗ್ಗೆ ಒಂದು ಬೌದ್ಧಿಕ ವಲಯದಿಂದ ಆಕ್ಷೇಪ ವ್ಯಕ್ತವಾಯಿತು. ಇದು ವ್ಯಕ್ತಿಕೇಂದ್ರಿತ ಚರ್ಚೆಯನ್ನಾಗಿ ಮಾರ್ಪಾಡಾಗಿದ್ದನ್ನು ಹೊರತುಪಡಿಸಿದರೆ, ವಸ್ತುವಿನ ದೃಷ್ಟಿಯಿಂದ ಆಗಬೇಕಿದ್ದ ಚರ್ಚೆಯೇ! ಒಂದುಕ್ಷಣ ಚಿತ್ರದಲ್ಲಿ ಬಿಂಬಿತವಾಗಿರುವುದನ್ನು ಮರೆತುಬಿಡೋಣ. ’ಕೋಲೆಬಸವನ ತರ ಎಲ್ಲಾದಕ್ಕು ತಲೆ ಆಡಿಸುತ್ತಾನೆ’ ಎಂಬ ಅಪಹಾಸ್ಯದ ಮಾತು ನಮ್ಮಲ್ಲಿ ಪ್ರಚಲಿತವಾದದ್ದೇ. ಒಂದು ಪಕ್ಷದಲ್ಲಿ ಅಂತಹ ಪ್ರಯೋಗದ ಬಗ್ಗೆ ಆ ಸಮುದಾಯದವರು, ಅದರ ಪ್ರತಿನಿಧಿಗಳು ಅಥವಾ ಸಾಮುದಾಯಿಕ ಕಾಳಜಿ ಹೊಂದಿರುವವರು ಆಕ್ಷೇಪ ಎತ್ತಿದರೆ ಅದನ್ನು ಬದಲಿಸಿಕೊಳ್ಳಬೇಕು ಎಂಬುದು ನಮ್ಮ ಪ್ರಾಥಮಿಕ ತಿಳಿವಳಿಕೆಯಾಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೇ ಮಾತು ಉಳಿದ ದೃಶ್ಯ ಮಾಧ್ಯಮಗಳಿಗೂ ಅನ್ವಯವಾಗುತ್ತದಲ್ಲವೇ!
ಭಾರತೀಯ ಸಿನಿಮಾಗಳಲ್ಲಿ ವಿಕಲ ಚೇತನರನ್ನು ಅಪಹಾಸ್ಯಗೊಳಿಸಿ ಚಿತ್ರಿಸುವ ದೃಶ್ಯಗಳು ಹೇರಳವಾಗಿವೆ. ನಡೆದಾಡುವ ಸಮಸ್ಯೆಯಿರುವ ವ್ಯಕ್ತಿಗಳನ್ನು ಅಪಹಾಸ್ಯದ ರೀತಿಯಲ್ಲಿ ಚಿತ್ರಿಸುವ ಬಗೆ ’ಸೈರಾಟ್’ನಂತಹ ಸಿನಿಮಾವನ್ನೂ ಬಿಟ್ಟಿಲ್ಲ. ಇಂತಹ ದೃಶ್ಯಗಳು ವೀಕ್ಷಕನ ಮೇಲೆ ಬೀರಬಹುದಾದ ಪರಿಣಾಮ, ಅದು ವಿಕಲ ಚೇತನರ ಬಗ್ಗೆ ಮೂಡಿಸಬಹುದಾದ ಅಸೂಕ್ಷ್ಮ ನಡವಳಿಕೆ ಇವೆಲ್ಲವನ್ನೂ ಅವಲೋಕಿಸಿದರೆ ಅಂತಹ ಸಂಗತಿಗಳ ವಿರುದ್ಧ ಧ್ವನಿಯೆತ್ತಬೇಕಾದ ಅವಶ್ಯಕತೆ ತಿಳಿದೀತು. ವಿಕಲ ಚೇತನ ಎಂಬ ಪ್ರಯೋಗವೇ ಹಲವು ಹಂತಗಳನ್ನು ದಾಟಿ ಬಂದಿದೆ. ಅಂಗವಿಕಲ, ವಿಕಲಾಂಗ ಇವುಗಳಿಗಿಂತ ವಿಕಲ ಚೇತನ ಸೂಕ್ಷ್ಮವಾದದ್ದು ಎಂಬುದು ಆ ಸಮುದಾಯದ ಅಭಿಪ್ರಾಯವಾಗಿದ್ದರೆ ಅದನ್ನು ಗೌರವಿಸುವುದು ಮುಖ್ಯ. ಮುಂದೊಂದು ದಿನ ಮತ್ತೊಂದು ಹೆಸರಿನಲ್ಲಿ ಕರೆಯಬೇಕು ಎಂದರೆ ಅದನ್ನೂ ಸ್ವೀಕರಿಸಬೇಕು. ಹೆಸರಿನಲ್ಲಿ ಬದಲಾವಣೆ ಮಾತ್ರ ಮಾಡಿ ಆ ಸಮುದಾಯಗಳಿಗೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸಿಕೊಡುವಲ್ಲಿ ಸೋತರೆ ಉಪಯೋಗವಿಲ್ಲ ಎಂಬ ಚರ್ಚೆಯೂ ಪ್ರಧಾನವಾಗಿದೆ.
ಕರೆಯುವಿಕೆಯನ್ನು ಬದಲಾಯಿಸಿ ನಡೆಯಲು ಸಮಸ್ಯೆ ಇರುವವರಿಗೆ, ವೀಲ್ ಚೇರ್ ಅವಲಂಬಿತವಾಗಿರುವವರಿಗೆ ಸುಲಭವಾಗಿ ಚಲಿಸಲು ಬೇಕಾದ ಸೌಲಭ್ಯ ಒದಗಿಸದಿದ್ದರೆ ಸಮಸ್ಯೆಯ ಪರಿಹಾರ ಅಪೂರ್ಣವಾದೀತು ಎಂಬಂತಹ ಚರ್ಚೆ ಅದು. ಎರಡು ವಾರಗಳ ಹಿಂದೆ ಸ್ತ್ರೀವಾದಿ ಚಿಂತಕಿ ಎಚ್ ಎಸ್ ಶ್ರೀಮತಿಯವರು ನ್ಯಾಯಪಥ ಪತ್ರಿಕೆಗೆ ಬರೆದ ಒಂದು ಬರಹದ ಚರ್ಚೆಯೂ ಅದೇ ಜಾಡಿನಲ್ಲಿದೆ. ಕೇರಳ ಸರ್ಕಾರ ಪಠ್ಯಪುಸ್ತಕಗಳನ್ನು ಆಡಿಟ್ ಮಾಡಿ ಲಿಂಗ ತಟಸ್ಥವಾದ ನಿರೂಪಣೆಯನ್ನು ತರುವುದರ ಬಗ್ಗೆ ಚರ್ಚಿಸಿದ್ದ ಆ ಬರಹ ಅಷ್ಟಕ್ಕೆ ನಿಂತರಷ್ಟೇ ಸಾಲದು ವಿವಿಧ ಲಿಂಗಗಳ ಬಗ್ಗೆ ಸಂವೇದನೆಯನ್ನು ರೂಪಿಸುವಂತಹ ಕೆಲಸವಾಗಬೇಕು ಎಂದು ಚರ್ಚಿಸಿದ್ದರು. ಈ ನಿಟ್ಟಿನಲ್ಲಿ ಭಾಷಿಕ ರೂಪದಲ್ಲಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಮೂಡಬೇಕಿರುವ ಸೂಕ್ಷ್ಮತೆ ಜೊತೆಗೆ, ಆ ಸಮುದಾಯಗಳ ಬದುಕಿನಲ್ಲಿ ಅವರು ಬಯಸುವ ಬದಲಾವಣೆಗಳ ಕೆಲಸಗಳೂ ಒಟ್ಟಿಗೆ ಆಗಬೇಕಿದೆ.
ಎಷ್ಟೋ ಬಾರಿ ಇಂತಹ ಚರ್ಚೆಯನ್ನು ದಾರಿ ತಪ್ಪಿಸುವ ಕೆಲಸಗಳು ಕೂಡ ಅದೇ ವೇಗದಲ್ಲಿ ನಡೆಯುತ್ತವೆ. ಉದಾಹರಣೆಗೆ ಮೇಲೆ ಉದಾಹರಿಸಿದ ಕಾರ್ಟೂನ್ ಬಗೆಗಿನ ಚರ್ಚೆಯಲ್ಲಿಯೇ, ಯಾವುದಾದರೂ ಪ್ರಾಣಿಯನ್ನು ಚಿತ್ರದಲ್ಲಿ ಬಳಸಿಕೊಂಡರೆ ಆ ಪ್ರಾಣಿಯ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲವೇ ಎಂಬುದರಿಂದ ಹಿಡಿದು ಮೇಲ್ಜಾತಿಗಳನ್ನು ಕೂಡ ಅಪಹಾಸ್ಯ ಮಾಡುವುದಿಲ್ಲವೇ ಎಂಬಂತಹ ವಿತಂಡವಾದಗಳಿಗೂ ಅದು ಎಡೆಮಾಡಿಕೊಟ್ಟಿತು. ಶೋಷಕ ಜಾತಿಗಳ ಶೋಷಣೆಯನ್ನು ಅಪಹಾಸ್ಯ ಮಾಡುವುದನ್ನೂ, ಶೋಷಿತ ಸಮುದಾಯಗಳನ್ನು ಅಪಹಾಸ್ಯ ಮಾಡುವುದನ್ನು ಒಂದೇ ತಕ್ಕಡಿಯಲ್ಲಿ ತೂಗುವುದಕ್ಕೆ ಆಗುವುದಿಲ್ಲ. ಶೋಷಕ ಜಾತಿಯ ಪುರೋಹಿತಶಾಹಿಯನ್ನು ಅಪಹಾಸ್ಯಕ್ಕೀಡುಮಾಡಿದರೆ ಅದು ಸಮಸ್ಯೆಯಲ್ಲಿರುವ ಪುರೋಹಿತಶಾಹಿಗೆ ಬಿಡುಗಡೆ ನೀಡುವ ಪ್ರಚೋದನೆಯಾದೀತು. ಆದರೆ ಶೋಷಿತ ಸಮುದಾಯದ ಮೇಲೆ ಪ್ರಯೋಗಿಸುವ ಅಥವಾ ಅವರ ಹೆಸರನ್ನು ಬಳಸಿಕೊಂಡು ಮಾಡುವ ಪ್ರತಿ ವ್ಯಂಗ್ಯವೂ ಇತಿಹಾಸದ ಗಾಯಕ್ಕೆ ಉಪ್ಪು ಸವರಿದಂತೆ. ಒಟ್ಟಿನಲ್ಲಿ ಸಮುದಾಯ ಕೇಂದ್ರಿತ ಆರೋಗ್ಯಕರ ಮನಸ್ಸು ಕೆಲಸ ಮಾಡುವಾಗ ಅದು ಭಾಷಿಕ ರಚನೆಯಲ್ಲಾಗಲೀ, ದೃಶ್ಯಗಳನ್ನು ಕಟ್ಟುವಾಗಾಗಲೀ ಒಂದು ಮಟ್ಟದ ಸೂಕ್ಷ್ಮತೆ ಕೆಲಸ ಮಾಡುತ್ತಿರುತ್ತದೆ. ಅಪ್ರಜ್ಞಾಪೂರ್ವಕವಾಗಿ ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳುವ, ಚರ್ಚಿಸುವ ಮುಕ್ತತೆ ಅಲ್ಲಿರುತ್ತದೆ.
ಈ ಪೊಲಿಟಿಕಲ್ ಕರೆಕ್ಟ್‌ನೆಸ್ ಕೆಲವೊಮ್ಮೆ ದಮನಿತ ಸಮುದಾಯಗಳ ವಿರುದ್ಧವಾಗಿಯೂ ಕೆಲಸ ಮಾಡಿರುವ ಉದಾಹರಣೆಗಳಿರಬಹುದು. ಸಾಮಾನ್ಯವಾಗಿ ಅದು ಆಯಾ ಸಮುದಾಯದಿಂದ ರೂಪಿತವಾಗಿರುವ ಪೊಲಿಟಿಕಲ್ ಕರೆಕ್ಟ್‌ನೆಸ್ ಆಗಿರದೆ, ಸಮಸ್ಯೆಗಳಿಂದ ಜಾರಿಕೊಳ್ಳುವ ಅಧಿಕಾರ ಕೇಂದ್ರಗಳು ರೂಪಿಸಿರುವಂತವಾಗಿರುತ್ತವೆ. ’ಮಲ ಹೊರುವ ಪದ್ಧತಿ’, ’ಮ್ಯಾನ್‌ಹೋಲ್ ಕ್ಲೀನಿಂಗ್’ ಎಂಬ ಪದಗಳು ಇಂತಹ ಅನಿಷ್ಟ ಪದ್ಧತಿಗಳನ್ನು ಇನ್ನೂ ಸಮಾಜದಲ್ಲಿರುವ ಉಳಿಸಿಕೊಂಡಿರುವ ಬಗ್ಗೆ ಒಪ್ಪಿಗೆ ಪಡೆಯುವಂತ ನಿರೂಪಣೆಯನ್ನು ಹುಟ್ಟುಹಾಕಿಬಿಡುತ್ತವೆ. ಇದೇ ಕಾರಣಕ್ಕಾಗಿ ತಾವು ಪೌರಾಡಳಿತ ಸಚಿವರಾಗಿದ್ದಾಗ ’ಮಲ ಹೊರುವ ಪದ್ಧತಿಯನ್ನು’ ನಿಷೇಧಿಸಿದ್ದ ದಿವಂಗತ ರಾಜಕಾರಣಿ ಬಿ ಬಸವಲಿಂಗಪ್ಪನವರು ಅದನ್ನು ಮಲ ಅನ್ನಬೇಡಿ, ಹೇಲು ಅಥವಾ ಕಕ್ಕಸ್ಸು ಎನ್ನಿ ಎಂದು ಹೇಳುತ್ತಿದ್ದುದು. ಇದೇ ರೀತಿ ಪೊಲಿಟಿಕಲ್ ಕರೆಕ್ಟ್‌ನೆಸ್ ಕೆಲವು ತಪ್ಪು ವ್ಯಾಖ್ಯಾನಗಳಿಗೂ ಆಸ್ಪದ ನೀಡಿದೆ ಎಂಬ ಚರ್ಚೆಗಳಿವೆ. ’ಹಿಸ್ಟರಿ’ ಎಂಬ ಪದದಲ್ಲಿ ’ಹಿಸ್’ ಪುರುಷಸೂಚಕ ಅದನ್ನು ಹರ್‌ಸ್ಟೋರಿ ಎಂದು ಬದಲಿಸಿ ಬರೆಯಬೇಕು ಎಂಬ ಚರ್ಚೆಗಳು ಒಂದು ಕಾಲಕ್ಕೆ ನಡೆದಿದ್ದವು. ಇತಿಹಾಸ ಹೆಚ್ಚು ಪುರುಷಪ್ರಧಾನವಾಗಿ ರೂಪುಗೊಂಡಿರುವುದು ನಿಜವಾದರೂ, ’ಹಿಸ್ಟರಿ’ ಎಂಬ ಪದ ಗ್ರೀಕ್ ಮೂಲದ್ದಾಗಿದ್ದೂ ಅದರಲ್ಲಿ ಪುರುಷಸೂಚಕ ’ಹಿಸ್’ ಇಲ್ಲ ಎಂಬ ಚರ್ಚೆಗಳೂ ಕೂಡ ನಡೆದಿದ್ದವು.

ನಮ್ಮದು ಬಹುಸಂಸ್ಕೃತಿಯ ಮತ್ತು ಅದಕ್ಕೂ ಹೆಚ್ಚು ತಾರತಮ್ಯವಿರುವ ನಾಡು. ಇಲ್ಲಿ ಮಾಧ್ಯಮಗಳು ಕೊರೊನಾ ರೋಗವೊಂದನ್ನು ಒಂದು ಸಮುದಾಯಕ್ಕೆ ತಳಕು ಹಾಕಿ ಸ್ಟೀರಿಯೋಟೈಪ್ ಮಾಡಿ ಹಂಗಿಸುವ ವಾತಾವರಣ ನೆಲೆಸಿದೆ. ಇನ್ನು ಪರಂಪರಾಗತವಾಗಿ ತಳ ಸಮುದಾಯಗಳನ್ನು ದಮನಿಸಿದ, ಈ ದಿನಕ್ಕೂ ಅವರನ್ನು ಹಲವು ರೀತಿಯಲ್ಲಿ ಶೋಷಿಸುವ, ಅವಮಾನಕ್ಕೀಡುಮಾಡುವ ಸಂಗತಿಗಳು ಮುಂದುವರೆದಿದೆ. ’ಅ’-’ಹ’ ಉಚ್ಚಾರಣೆಯನ್ನು ಹಿಡಿದೇ ಹಂಗಿಸುವ ದೊಡ್ಡ ಪರಂಪರೆ ಇಲ್ಲಿದೆ. ಅದರ ಬೆನ್ನಲ್ಲೇ ಹತ್ತಾರು ಡಯಲೆಕ್ಟ್‌ಗಳನ್ನು ಅಪಹಾಸ್ಯ ಮಾಡುವ ಸಂಗತಿಗಳೂ ಇವೆ. ತಳ ಸಮುದಾಯ, ಬುಡಕಟ್ಟು ಸಮುದಾಯಗಳ ಮತ್ತು ಮಹಿಳೆಯರನ್ನು ಅಪಹಾಸ್ಯ ಮಾಡುವ ಬಗ್ಗೆಯೇ ಹೆಚ್ಚು ಗಾದೆಗಳು ಮತ್ತು ಬೈಗುಳಗಳು ಇಲ್ಲಿರುವುದು. ಇಂತಹ ಸಂದರ್ಭದಲ್ಲಿ ಯಾವುದೇ ನೆಲೆಯಲ್ಲಿ ಅಂಚಿಗೆ ತಳ್ಳಲ್ಪಟ್ಟ ಸಮುದಾಯದ ಪರವಾಗಿ, ಅವರ ಘನತೆಯ ದೃಷ್ಟಿಯಿಂದ ಅವರು ಏನನ್ನಾದರೂ ಅಸರ್ಟ್ ಮಾಡಿದಾಗ, ಆಗ್ರಹಿಸಿದಾಗ ಅದನ್ನು ಕೇಳಿಸಿಕೊಳ್ಳುವ, ಚರ್ಚಿಸುವ ಅರ್ಥಪೂರ್ಣ ಸಂವಾದ ನಡೆಸುವ ಮತ್ತು ಅದೇ ನೆಲೆಯಲ್ಲಿ ಎಲ್ಲರೂ ಒಗ್ಗೂಡಿ ಮುನ್ನಡೆಯುವ ಅವಶ್ಯಕತೆ ಇದೆ.
ಇದನ್ನೂ ಓದಿ: ಸರ್ವಾಧಿಕಾರದ ಧೋರಣೆಗೆ ವಿರುದ್ಧವಾಗಿ ಪ್ರಜಾಸತ್ತಾತ್ಮಕ ಮೌಲ್ಯಗಳ ’ಸರ್‌ಪಟ್ಟ ಪರಂಪರೈ’



What message had Hollywood movie THANDAV of Saif ali Khan..was banned in up..lodged fir too..good mobe by up government filling against for disturbing communal sentiments..