ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಘಟನೆಗಳನ್ನು “ಗಂಭೀರ” ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ. ನ್ಯಾಯಾಂಗದ ಅಧಿಕಾರಿಗಳಿಗೆ ಒದಗಿಸುತ್ತಿರುವ ಭದ್ರತೆಯ ಕುರಿತ ಸ್ಥಿತಿಗತಿಗಳ ವರದಿಗಳನ್ನು ಸಲ್ಲಿಸುವಂತೆ ರಾಜ್ಯಗಳನ್ನು ಕೇಳಿದೆ.
ಇತ್ತೀಚೆಗೆ ಜಾರ್ಖಂಡ್‌ನ ಧನ್ಬಾದ್‌ನಲ್ಲಿ ನ್ಯಾಯಾಧೀಶರೊಬ್ಬರನ್ನು ರಸ್ತೆಯಲ್ಲಿ ವಾಹನವೊಂದರಿಂದ ಡಿಕ್ಕಿ ಹೊಡೆಸಿ ಕೊಲ್ಲಲಾಗಿದೆ ಎಂಬ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಪ್ರಕರಣದ ಬಗ್ಗೆ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನೊಳಗೊಂಡ ನ್ಯಾಯಪೀಠವು ಸಿಬಿಐಗೆ ನೋಟಿಸ್ ನೀಡಿದೆ.
ಜುಲೈ 28 ರ ಘಟನೆಯ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ ಎಂದು ಜಾರ್ಖಂಡ್ ಪರ ಹಾಜರಾದ ವಕೀಲರು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಜಾಮೀನು ನೀಡದ ನ್ಯಾಯಾಧೀಶನ ಬರ್ಬರ ಕೊಲೆ: ಸುಮೊಟೋ ಪ್ರಕರಣದ ದಾಖಲಿಸಿದ ಸುಪ್ರೀಂ
ನ್ಯಾಯಪೀಠವು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರಿಗೆ, ಗ್ಯಾಂಗ್‌ಸ್ಟರ್‌ಗಳು ಮತ್ತು ಉನ್ನತ ಮಟ್ಟದ ವ್ಯಕ್ತಿಗಳನ್ನು ಒಳಗೊಂಡಿರುವ ಹಲವಾರು ಪ್ರಕರಣಗಳಿದ್ದು, ನ್ಯಾಯಾಧೀಶರು ಬೆದರಿಕೆ ಅಥವಾ ನಿಂದನೀಯ ಸಂದೇಶಗಳನ್ನು ಪಡೆದ ಉದಾಹರಣೆಗಳಿವೆ ಎಂದು ಹೇಳಿದೆ.
“ದೂರು ಸಲ್ಲಿಸಲು ಕೂಡಾ ನ್ಯಾಯಾಧೀಶರಿಗೆ ಯಾವುದೇ ಸ್ವಾತಂತ್ರ್ಯವಿಲ್ಲ” ಎಂದು ಹೇಳಿರುವ ಪೀಠ, ಇಂತಹ ದೂರುಗಳನ್ನು ಸಲ್ಲಿಸಿದರೆ ಪೊಲೀಸರು ಅಥವಾ ಸಿಬಿಐ ನ್ಯಾಯಾಂಗಕ್ಕೆ ಸಹಾಯ ಮಾಡುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
“ನಾವು ಸೋಮವಾರ (ಆಗಸ್ಟ್ 9) ಜಾರ್ಖಂಡ್ ಪ್ರಕರಣವನ್ನು ವಿಚಾರಣೆ ನಡೆಸುತ್ತೇವೆ. ಈ ಬಗ್ಗೆ ನಾವು ಸಿಬಿಐಗೆ ನೋಟಿಸ್ ನೀಡುತ್ತಿದ್ದೇವೆ” ಎಂದು ಪೀಠ ಹೇಳಿದೆ.
ಜಾರ್ಖಾಂಡಿನ ಧನ್ಬಾದ್ ಘಟನೆಯ ಹಿನ್ನೆಲೆಯಲ್ಲಿ, ನ್ಯಾಯಾಲಯಗಳನ್ನು ಮತ್ತು ನ್ಯಾಯಾಧೀಶರನ್ನು ರಕ್ಷಿಸುವ ವಿಷಯದ ಕುರಿತು ಸುಪ್ರೀಂಕೋರ್ಟ್ ಸ್ವಯಂ ಪ್ರೇರಿತ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.
ಧನ್ಬಾದ್ ನ್ಯಾಯಾಲಯದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಅವರು, ಜುಲೈ 28 ರಂದು ಮುಂಜಾನೆ ವಾಕಿಂಗ್‌ಗೆ ಹೊರಟಿದ್ದಾಗ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಜಿಲ್ಲಾ ನ್ಯಾಯಾಲಯದ ಬಳಿಯ ರಣಧೀರ್ ವರ್ಮಾ ಚೌಕ್‌ನಲ್ಲಿ ಆಟೋ ರಿಕ್ಷಾ ಒಂದರಿಂದ ಡಿಕ್ಕಿ ಹೊಡೆದು ಮೃತಪಟ್ಟಿದ್ದರು.
ಇದನ್ನೂ ಓದಿ: ಜಾರ್ಖಂಡ್ ನ್ಯಾಯಾಧೀಶರಿಗೆ ಆಟೋದಿಂದ ಗುದ್ದಿ ಸಾಯಿಸಿದ ದುಷ್ಕರ್ಮಿಗಳು: ಸಿಸಿಟಿವಿಯಲ್ಲಿ ಸೆರೆ


