ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣಕ್ಕೆ ಸಾರ್ವಜನಿಕರು ಸಲಹೆ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದರು. ಅದಕ್ಕೆ ನೂರಾರು ಸಲಹೆಗಳು ವ್ಯಕ್ತವಾಗುತ್ತಿದ್ದು ಕರ್ನಾಟಕದಿಂದಲೇ ಹಲವಾರು ಜನ ಪ್ರತಿಕ್ರಿಯಿಸಿದ್ದು ಜನಸಮುದಾಯಗಳ ಮೇಲಿನ ದಾಳಿಯನ್ನು ಹೇಗೆ ನಿಲ್ಲಿಸುತ್ತೀರಿ ಎಂಬುದರ ಬಗ್ಗೆ ಮಾತನಾಡಿ ಎಂದು ತಾಕೀತು ಮಾಡಿದ್ದಾರೆ.
‘ಮಾತಾಡಿ ಪ್ರಧಾನಿಗಳೇ ಮಾತನಾಡಿ’ ಎಂಬ ಘೋಷವಾಕ್ಯದಡಿಯಲ್ಲಿ ಇಂದಿನಿಂದ ಪ್ರಚಾರಾಂದೋಲನ ಆರಂಭವಾಗಿದೆ. ದಲಿತರ ಮೇಲಿನ ದೌರ್ಜನ್ಯಗಳು ಶೇ. 74 ರಷ್ಟು ಹೆಚ್ಚಾಗಿವೆ ಏಕೆ? ಎಂಬುದನ್ನು ಮಾತನಾಡಿ, ದಲಿತ ಮಹಿಳೆಯರ ಮೇಲಿನ ಅತ್ಯಾಚಾರಗಳನ್ನು ತಡೆಯಲು ಏನು ಕ್ರಮ ಕೈಗೊಳ್ಳುತ್ತೀರಿ? ಮಾತನಾಡಿ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ದೆಹಲಿಯ ದಲಿತ ಕಂದಮ್ಮಳೊಬ್ಬಳನ್ನು ಕಾಮಪಿಶಾಚಿ ಪೂಜಾರಿಯೊಬ್ಬ ಬರ್ಬರವಾಗಿ ಅತ್ಯಾಚಾರಗೈದು ಕೊಂದು ಸುಟ್ಟು ಹಾಕಿದ ಸುದ್ದಿ ಕೇಳಿದಾಗಿನಿಂದ ನಾವು ಆಘಾತಕ್ಕೊಳಗಾಗಿದ್ದೇವೆ. ಇಂತಹ ಅಮಾನುಷ ಘಟನೆಗಳಿಗೆ ಕೊನೆಯೆಂದು? ದಲಿತರೊಟ್ಟಿಗೆ ಅಲ್ಪಸಂಖ್ಯಾತ- ಮಹಿಳೆ- ಕಾರ್ಮಿಕ-ರೈತ ಸೇರಿದಂತೆ ನಾಡಿನ ಜನತೆ ಎಲ್ಲಾ ರೀತಿಯಿಂದಲೂ ತೀವ್ರ ಸಂಕಷ್ಟಕ್ಕೀಡಾಗಿರುವುದು ನಮ್ಮನ್ನು ಚಿಂತಿತರನ್ನಾಗಿ ಮಾಡಿದೆ ಇದಕ್ಕೆ ಏನು ಮಾಡುತ್ತೀರಿ ಎಂದು ಮಾತನಾಡಿ ಎಂದು ಒತ್ತಾಯಿಸಿದ್ದಾರೆ.

ನಾವು ಆಗಸ್ಟ್ 10 ರಿಂದ 15ರವರೆಗೆ ಪ್ರತಿದಿನ ಒಂದೊಂದು ಜನಸಮುದಾಯಗಳ ನೋವಿನ ಕುರಿತು ಪ್ರಧಾನಿಯವರಿಗೆ ಸಲಹೆ ನೀಡಲಿದ್ದೇವೆ. ದಲಿತ, ಅಲ್ಪಸಂಖ್ಯಾತ, ಮಹಿಳೆ, ಕಾರ್ಮಿಕ ಮತ್ತು ರೈತರ ಹಕ್ಕೊತ್ತಾಯಗಳನ್ನು ಮುನ್ನಲೆಗೆ ತರುತ್ತೇವೆ. ಪ್ರತಿ ದಿನ ಒಂದೊಂದು ಜನಸಮುದಾಯದ ನೋವುಗಳನ್ನು ವಿಡಿಯೋ, ಪೋಸ್ಟರ್, ಹಾಡು, ಭಾಷಣ, ಚಿತ್ರಗಳ ಮೂಲಕ ಮುಂದಿಟ್ಟು ಈ ಕುರಿತು ಮಾತನಾಡಿ ಎಂದು ಆಗ್ರಹಿಸುತ್ತೇವೆ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸಂಚಾಲಕರಾದ ಸರೋವರ್ ಬೆಂಕಿಕೆರೆ ತಿಳಿಸಿದ್ದಾರೆ.
ಒಂದು ವೇಳೆ ಪ್ರಧಾನಿಗಳು ಆಗಸ್ಟ್ 15 ರಂದು ನಮ್ಮ ಬವಣೆಗಳ ಬಗ್ಗೆ ಮಾತನಾಡದಿದ್ದರೆ ಅಂದೇ ನಾವು ನಮ್ಮ ಜನಪ್ರತಿನಿಧಿಯ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಜನರ ಭಾಷಣವನ್ನು ಮಾಡಿಸುತ್ತೇವೆ. ಪ್ರಧಾನಿಗಳು ಮೌನ ಮುರಿಯಲಿ – ದೇಶ ಉಳಿಯಲಿ ಎಂದು ಅವರು ಒತ್ತಾಯಿಸಿದ್ದಾರೆ.
ದಲಿತರು ಉಳುಮೆ ಮಾಡುತ್ತಿರುವ ಸರ್ಕಾರಿ ಭೂಮಿಗಳಿಗೆ ಹಕ್ಕುಪತ್ರ ಯಾವಾಗ ನೀಡುತ್ತೀರಿ? ಮಾತನಾಡಿ. ಮೀಸಲಾತಿ ನೀಡುವ ಸರ್ಕಾರಿ ಉದ್ಯೋಗಗಳನ್ನು ಹೆಚ್ಚಿಸುವ ಕುರಿತು ಮಾತನಾಡಿ. ಖಾಸಗೀ ಕ್ಷೇತ್ರಗಳಲ್ಲೂ ಮೀಸಲಾತಿ ಜಾರಿಗೆ ತರುವ ಕುರಿತು ನಿಮ್ಮ ಆಲೋಚನೆ ಏನು? ಮಾತನಾಡಿ ಎಂಬ ವಿಷಯಗಳಿಂದ ಆರಂಭವಾಗಿ ರೋಹಿತ್ ವೇಮುಲನನ್ನು ಬಲಿ ತೆಗೆದುಕೊಂಡದ್ದರಲ್ಲಿ ನಿಮ್ಮ ಪಕ್ಷದ ಸಂಸದರೂ ಸಚಿವರೂ ಶಾಮೀಲಾಗಿದ್ದರು. ಸರ್ಕಾರವೂ ಶಾಮೀಲಾಗಿತ್ತು. ಆದರೆ ನ್ಯಾಯ ಸಿಗಲಿಲ್ಲ. ಕನಿಷ್ಠ ಪಕ್ಷ ರೋಹಿತ್ ಕಾಯ್ದೆಯನ್ನಾದರೂ ಜಾರಿ ಮಾಡಿ ಎಂಬ ಆಗ್ರಹಗಳು ಕೇಳಿಬಂದಿವೆ.
ಇದನ್ನೂ ಓದಿ: ವಂದನಾ ಕಟಾರಿಯಗೆ ಜಾತಿನಿಂದನೆ: ಮೊದಲ ಬಾರಿಗೆ ಸೆಮಿಫೈನಲ್ ತಲುಪಿದ್ದಕ್ಕೆ ದಲಿತರು ಹೆಚ್ಚು ಇದ್ದಿದ್ದು ಕಾರಣವಲ್ಲವೇ?


