Homeರಂಜನೆಕ್ರೀಡೆನಾನು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆದ್ದಿದ್ದು ಸುಳ್ಳೇ? ನೀರಜ್ ಚೋಪ್ರಾ ಮಾಜಿ ಕೋಚ್ ಕನ್ನಡಿಗ ಕಾಶಿನಾಥ್...

ನಾನು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆದ್ದಿದ್ದು ಸುಳ್ಳೇ? ನೀರಜ್ ಚೋಪ್ರಾ ಮಾಜಿ ಕೋಚ್ ಕನ್ನಡಿಗ ಕಾಶಿನಾಥ್ ನಾಯ್ಕ ಅಸಮಾಧಾನ

ನೀರಜ್ ಚೋಪ್ರಾಗೆ ಕಾಶಿನಾಥ್ ನಾಯ್ಕ ಎಂಬುವವರನ್ನು ಕೋಚ್ ಆಗಿ ನೇಮಿಸಿಲ್ಲ. ಕಾಶಿನಾಥ್ ಯಾರು ಎಂಬುದೇ ನಮಗೆ ಗೊತ್ತಿಲ್ಲ ಎಂಬ ಅಥ್ಲೆಟಿಕ್ಸ್ ಫೆಡರೇಷನ್ ಅಧ್ಯಕ್ಷರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

- Advertisement -
- Advertisement -

ಭಾರತ 120 ವರ್ಷಗಳ ನಂತರ ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕವೊಂದಕ್ಕೆ ಕೊರಳೊಡ್ಡಿತು. ಚಿನ್ನದ ತೋಳಿನ ಹುಡುಗ ನೀರಜ್ ಚೋಪ್ರಾ 87.65 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದರು. ಇಡೀ ದೇಶವೇ ಈ ಸಂಭ್ರಮಕ್ಕೆ ಸಾಕ್ಷಿಯಾಯಿತು. ಈ ಸಂದರ್ಭದಲ್ಲಿ ಚೋಪ್ರಾಗೆ ಕೋಚ್ ಆಗಿ ಸಾಧನೆ ಹಿಂದಿದ್ದ ಉವೆ ಹಾನ್, ಜೈವೀರ್ ಚೌಧರಿ, ಡಾ. ಕ್ಲಾಸ್ ಬಾರ್ಟೋನಿಯೆಟ್ಜ್, ಆಸ್ಟ್ರೇಲಿಯಾದ ಗ್ಯಾರಿ ಕ್ಯಾಲ್ವರ್ಟ್ ಮತ್ತು ಕನ್ನಡಿಗ ಕಾಶಿನಾಥ್ ನಾಯ್ಕರನ್ನು ಕೊಂಡಾಡಲಾಯಿತು.

ಇನ್ನು ನೀರಜ್ ಚೋಪ್ರಾಗೂ ಕರ್ನಾಟಕಕ್ಕೂ ನಿಕಟ ನಂಟಿದೆ. ಇಲ್ಲಿನ ಜೆಎಸ್‌ಡಬ್ಲು ಕಂಪನಿ ಅವರಿಗೆ ತರಬೇತಿಗೆ ಸ್ಪಾನ್ಸರ್ ಮಾಡಿದ್ದರು. ಕನ್ನಡಿಗ, ಸೈನಿಕ, ಶಿರಸಿಯ ಕಾಶಿನಾಥ್ ನಾಯ್ಕರವರು 2015 ರಿಂದ 2017ರವರೆಗೆ ಚೋಪ್ರಾಗೆ ಕೋಚ್ ಆಗಿ ತರಬೇತಿ ನೀಡಿದ್ದರು. ಇದು ಸಹಜವಾಗಿಯೇ ಕನ್ನಡಿಗರಲ್ಲಿ ಅಭಿಮಾನ ಮೂಡಿಸಿತ್ತು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಬೆಂಗಳೆ ಗ್ರಾಮದ ಕಾಶಿನಾಥ್ ನಾಯ್ಕ್‌ರವರ ಸಾಧನೆ ಗುರುತಿಸಿ ಅವರಿಗೆ ರಾಜ್ಯದ ಕ್ರೀಡಾ ಸಚಿವರು 10 ಲಕ್ಷ ರೂ ಗಳ ಬಹುಮಾನ ಘೋಷಿಸಿದ್ದಾರೆ.

ಈ ಸಂಭ್ರಮಕ್ಕೆ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೀರಜ್ ಚೋಪ್ರಾಗೆ ಕಾಶಿನಾಥ್ ನಾಯ್ಕ ಎಂಬುವವರನ್ನು ಕೋಚ್ ಆಗಿ ನೇಮಿಸಿಲ್ಲ. ಕಾಶಿನಾಥ್ ಯಾರು ಎಂಬುದೇ ನಮಗೆ ಗೊತ್ತಿಲ್ಲ. ಅವರಿಗೆ ಕರ್ನಾಟಕ ಸರ್ಕಾರ 10 ರೂ ಲಕ್ಷ ರೂ ಬಹುಮಾನ ಘೋಷಿಸಿರುವುದು ತಿಳಿದುಬಂದಿದೆ. ಅಧಿಕೃತ ಪತ್ರ ತಲುಪಿದಾಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿದ್ದಾರೆ.

2000 ದಲ್ಲಿ ದೇಶ ಸೇವೆಗೆ ಸೈನಿಕರಾಗಿ ಸೇರಿದ್ದ ಕಾಶಿನಾಥ್‌ ನಾಯ್ಕರವರು 2010ರಲ್ಲಿ ನವದೆಹಲಿಯಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಪಡೆದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ ಸಂದಿವೆ. 2015 ರಿಂದ 2017ರವರೆಗೆ ನೀರಜ್ ಚೋಪ್ರಾಗೆ ಸಹಾಯಕ ಕೋಚ್ ಆಗಿ ಕೆಲಸ ಮಾಡಿದ್ದಾರೆ.
ಇಂತಹ ವ್ಯಕ್ತಿಯ ಬಗ್ಗೆ ತಮಗೆ ಗೊತ್ತೆ ಇಲ್ಲ ಎಂದು ಅದಿಲ್ಲೆ ಸುಮರಿವಾಲಾ ಹೇಳಿಕೆ ನೀಡಿರುವುದು ದೊಡ್ಡ ವಿವಾದಕ್ಕೆ ಗುರಿಯಾಗಿದೆ. ಕನ್ನಡಿಗರು ಸುಮರಿವಾಲ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ನಾನುಗೌರಿ.ಕಾಂ ಕಾಶಿನಾಥ್ ನಾಯ್ಕರವರನ್ನು ಸಂಪರ್ಕಿಸಿದಾಗ “ನಾನು ಯಾರು ಅಂತ ಗೊತ್ತಿಲ್ಲವೆಂದು ಅದಿಲ್ಲೆ ಸುಮರಿವಾಲಾ ಹೇಳಿದ್ದಾರೆ. ಹಾಗಾದರೆ ನಾನು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆದ್ದಿದ್ದು ಸುಳ್ಳೇ? 2015 ರಿಂದ 2017ರ ವರೆಗೆ ಪಟಿಯಾಲದಲ್ಲಿ ನಾನು ಚೋಪ್ರಾಗೆ ಸಹಾಯಕ ಕೋಚ್ ಆಗಿ ಕೆಲಸ ಮಾಡಿದ್ದೇನೆ. ಈ ಮಧ್ಯೆ 2016ರಲ್ಲಿ ವಿದೇಶಿ ಕೋಚ್ ಗ್ಯಾರಿ ಕ್ಯಾಲ್ವರ್ಟ್ ನೇಮಕವಾದರು. ಆಗ ನಾವೆಲ್ಲರೂ ಪೋಲಾಂಡ್‌ಗೆ ತೆರಳಿ 20 ವರ್ಷದೊಳಗಿನ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಾಗ ನೀರಜ್ ಚಿನ್ನ ಗೆದ್ದಿದ್ದರು” ಎಂದರು.

“2015ರಲ್ಲಿ ಮಂಗಳೂರಿನಲ್ಲಿ ಅಂತರ್‌ರಾಜ್ಯ ಕಾಂಪಿಟೇಶನ್ ನಡೆದಿತ್ತು. ಆಗ ನನ್ನ ಶಿಷ್ಯಂದಿರಾದ ದೇವೇಂದ್ರ ಮೊದಲ ಸ್ಥಾನ ಪಡೆದರೆ ನೀರಜ್ ಚೋಪ್ರ ದ್ವಿತೀಯ ಸ್ಥಾನ ಪಡೆದಿದ್ದ. ನಾನು ನೀರಜ್ ಮಾತ್ರವಲ್ಲದೆ ಅನುರಾಣಿ, ಶಿವಪಾಲ್ ಸೇರಿದಂತೆ ಹಲವರಿಗೆ ಕೋಚ್ ಆಗಿ ಕೆಲಸ ಮಾಡಿದ್ದೇನೆ. ನಾನು 2017 ರಿಂದೀಚೆಗೆ ಸೈನ್ಯದ ಕಡೆ ಬಂದ ನಂತರವೇ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷರಾದ ಅದಿಲ್ಲೆ ಸುಮರಿವಾಲಾ ಅಧಿಕಾರ ವಹಿಸಿಕೊಂಡಿದ್ದಾರೆ. ಹಾಗಾಗಿ ತಿಳಿಯದೇ ಮಾತನಾಡುವುದು ಸರಿಯಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈ ವಿವಾದದ ಕುರಿತು ಸಾಮಾಜಿಕ ಕಾರ್ಯಕರ್ತರು ಮತ್ತು ಸಂಶೋಧಕರಾದ ಹರ್ಷಕುಮಾರ್ ಕುಗ್ವೆ ಮಾತನಾಡಿ, “ರಾಷ್ಟ್ರಮಟ್ಟದಲ್ಲಿ ಹಲವಾರು ಸಾಧನೆಗಳನ್ನು ಮಾಡಿ ದೇಶಕ್ಕೇ ಹೆಸರು ತಂದಿರುವ ಕನ್ನಡಿಗ ಕಾಶೀನಾಥ್ ಅವರು ತಮಗೆ ಗೊತ್ತೇ ಇಲ್ಲ ಎಂದು ಅಥ್ಲೆಟಿಕ್ ಸಂಸ್ಥೆಯ ಅಧಿಕಾರಿಗಳು ಹೇಳುತ್ತಿರುವುದು ನಾಚಿಕೆಗೇಡಿನ ವಿಷಯ. ಕರ್ನಾಟಕದ ಸರ್ಕಾರದ ಕ್ರೀಡಾ ಪಶಸ್ತಿಗೂ ಭಾಜನರಾಗಿರುವ ಈ ಯುವ ಪ್ರತಿಭೆಯನ್ನು ಗುರುತಿಸಿ ಬಹುಮಾನ ಘೋಷಿಸುವ ಮೂಲಕ ಕರ್ನಾಟಕ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಅದು ಈಗ ತನ್ನ ಬದ್ಧತೆಯಿಂದ ಹಿಂದೆ ಸರಿಯಬಾರದು” ಎಂದು ಆಗ್ರಹಿಸಿದ್ದಾರೆ.

ಕನ್ನಡಿಗ ಕಾಶೀನಾಥ್ ನಾಯ್ಕ ಅವರ ಸಾಧನೆಗಳು

2010ರ ಕಾಮನ್ವೆಲ್ತ್ ಗೇಮ್ಸ್: ಕಂಚಿನ ಪದಕ
2010ರ ದಕ್ಷಿಣ ಏಷ್ಯನ್ ಗೇಮ್ಸ್: ಚಿನ್ನ
2010ರ ಏಷ್ಯನ್ ಆಲ್ ಸ್ಟಾರ್ ಚಾಂಪಿಯನ್‌ಶಿಪ್: ಬೆಳ್ಳಿ
2008ರ ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್: ಬೆಳ್ಳಿ
2008ರ ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್: ಕಂಚು
14 ಬಾರಿ ರಾಷ್ಟ್ರೀಯ ಚಿನ್ನ
5 ಬಾರಿ ಬೆಳ್ಳಿ ಗೆದ್ದಿದ್ದಾರೆ.

ಇಷ್ಟೆಲ್ಲಾ ಸಾಧನೆ ಮಾಡಿರುವ, ನೀರಜ್‌ಗೆ ಸಹಾಯ ಮಾಡಿರುವ ಕಾಶಿನಾಥ್ ನಾಯ್ಕ್ ಕುರಿತು ಅಥ್ಲೆಟಿಕ್ಸ್ ಫೆಡರೇಷನ್ ಅಧ್ಯಕ್ಷರು ಹಾಗೇಕೆ ಹೇಳಿದರು? ಈ ರೀತಿಯ ಅಸಹಕಾರ ಇದ್ದುದ್ದರಿಂದಲೇ ನಮಗೆ ಒಲಿಂಪಿಕ್ ಮೆಡಲ್ ಸಿಗಲು 120 ವರ್ಷ ಬೇಕಾಗಿತು ಎನ್ನುವ ಪ್ರಶ್ನೆಯನ್ನು ಈ ವಿವಾದ ಎತ್ತಿ ತೋರಿಸುತ್ತದೆ.


ಇದನ್ನೂ ಓದಿ: ವಂದನಾ ಕಟಾರಿಯಗೆ ಜಾತಿನಿಂದನೆ: ಮೊದಲ ಬಾರಿಗೆ ಸೆಮಿಫೈನಲ್ ತಲುಪಿದ್ದಕ್ಕೆ ದಲಿತರು ಹೆಚ್ಚು ಇದ್ದಿದ್ದು ಕಾರಣವಲ್ಲವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...