Homeಮುಖಪುಟಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನ ಮತ್ತು ಶೀತಲ ಸಮರ 2.0

ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನ ಮತ್ತು ಶೀತಲ ಸಮರ 2.0

- Advertisement -
- Advertisement -

ಹಾಲಿವುಡ್ ಚಲನಚಿತ್ರ ರಾಂಬೊIII 1988ರಲ್ಲಿ ಬಿಡುಗಡೆಯಾಯಿತು. ಮುಖ್ಯ ಪಾತ್ರದಲ್ಲಿ ಸಿಲ್ವೆಸ್ಟರ್ ಸ್ಟಲ್ಲೋನ್ ಅಮೆರಿಕದ ಸೈನಿಕ ಜಾನ್ ರಾಂಬೊ ಪಾತ್ರವನ್ನು ನಿರ್ವಹಿಸಿದ. ರಾಂಬೋ ವಿಯೆಟ್ನಾಂನಲ್ಲಿ ಅಕ್ಕಿ ಬೆಳೆಯುವ ರೈತರ ಮೇಲೆ ಬಾಂಬುಗಳ ಸುರಿಮಳೆಗೈದು ’ಧೀರೋದ್ದಾತ’ ಹೋರಾಟವನ್ನು ಮಾಡಿ, ನಂತರ ಅಫ್ಘಾನಿಸ್ತಾನದಲ್ಲಿ ಸೋವಿಯತ್ ಪಡೆಗಳ ಕೈಗೆ ಸಿಕ್ಕಿಬಿದ್ದ ತನ್ನ ಹಳೆಯ ಸ್ನೇಹಿತ ಸ್ಯಾಮ್ ಟ್ರೌಟ್‌ಮನ್‌ನನ್ನು ರಕ್ಷಿಸುತ್ತಾನೆ. ಚಲನಚಿತ್ರದಲ್ಲಿ ರಾಂಬೊ ಅಫ್ಘಾನಿಸ್ತಾನದ ಮುಜಾಹಿದ್ದೀನ್ ಪಡೆಗಳಿಗೆ (ಧಾರ್ಮಿಕ ಯೋಧರು) ಅಮೆರಿಕ ಪೂರೈಸಿದ ಶಸ್ತ್ರಾಸ್ತ್ರಗಳೊಂದಿಗೆ ಹೋರಾಡುತ್ತಾನೆ. ಸ್ಯಾಮ್ ಟ್ರೌಟ್‌ಮನ್ ಸೋವಿಯತ್ ಸೇನಾ ಮುಖ್ಯಸ್ಥನೊಂದಿಗೆ ಅಫ್ಘನ್ನರ ಶೌರ್ಯದ ಬಗ್ಗೆ ಹೇಳುತ್ತಾ, ಈವರೆಗೂ ಹೇಗೆ ಅಫ್ಘನ್ನರನ್ನು ಯಾರೂ ಯುದ್ಧದಲ್ಲಿ ಮಣಿಸಿಲ್ಲ ಎಂಬ ಮಾತು ಅದೇ ವರ್ಷ ಅಫ್ಘಾನಿಸ್ತಾನದಿಂದ ಸೋವಿಯತ್ ಹಿಮ್ಮೆಟ್ಟುವಿಕೆಗೆ ಒಂದು ರೂಪಕದಂತಿದೆ.

ಚಲನಚಿತ್ರದ ಕೊನೆಯಲ್ಲಿ “ಈ ಚಲನಚಿತ್ರವನ್ನು ಅಫ್ಘಾನಿಸ್ತಾನದ ಧೀರ ಜನರಿಗೆ ಸಮರ್ಪಿಸಲಾಗಿದೆ” ಎಂದು ತೋರಿಸಲಾಗಿದೆ. ವಿಪರ್ಯಾಸವೆಂದರೆ ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಕಾಲ ತನ್ನ ಈವರೆಗಿನ ಅತಿ ಸುದೀರ್ಘ ಯುದ್ಧವನ್ನು ನಡೆಸಿದ ಅಮೆರಿಕ ಈಗ ಅದೇ ಸೊವಿಯಟ್ ಒಕ್ಕೂಟದ ಪರಿಸ್ಥಿತಿಯಲ್ಲಿದೆ.

ಆಗಸ್ಟ್ 16ರಂದು ತಾಲಿಬಾನ್ ರಾಜಧಾನಿ ಕಾಬೂಲ್‌ಅನ್ನು ವಶಪಡಿಸಿಕೊಳ್ಳುವ ಮುನ್ಸೂಚನೆ ಸಿಕ್ಕ ನಂತರ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ್ದಾರೆ. 2001ರಲ್ಲಿ ಸೆಪ್ಟೆಂಬರ್ ಹನ್ನೊಂದನೇ ತಾರೀಕು ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮತ್ತು ಪೆಂಟಗನ್ ಮೇಲೆ ದಾಳಿ ನಡೆಯಿತು. ನಂತರ ಜಾರ್ಜ್ ಬುಷ್ ಅಫ್ಘಾನಿಸ್ತಾನದ ಮೇಲೆ ಆಕ್ರಮಣ ನಡೆಸುವ ಮುಂಚೆ ಅಧಿಕಾರದಲ್ಲಿದ್ದ ತಾಲಿಬಾನ್ ಈಗ ಆ ಯುದ್ಧದ 20ನೇ ವಾರ್ಷಿಕೋತ್ಸವಕ್ಕೆ ಮುನ್ನವೇ ಮತ್ತೆ ಅಧಿಕಾರಕ್ಕೆ ಬಂದಿದೆ.

ಅಶ್ರಫ್ ಘನಿ

ಕಳೆದ ಮೂರು ತಿಂಗಳಲ್ಲಿ ತಾಲಿಬಾನ್ ಅಫ್ಘಾನಿಸ್ತಾನದ ಒಂದೊಂದೇ ಪ್ರಾಂತ್ಯವನ್ನು ವಶಪಡಿಸಿಕೊಳ್ಳುತ್ತಾ ರಾಜಧಾನಿ ಕಾಬುಲ್‌ಅನ್ನು ಸುತ್ತುವರೆದು ವಶಪಡಿಸಿಕೊಂಡಿದೆ. ಅಧ್ಯಕ್ಷರ ರಾಜೀನಾಮೆ ತನಕ, ತಾಲಿಬಾನ್ 34 ಪ್ರಾಂತ್ಯಗಳ ರಾಜಧಾನಿಗಳಲ್ಲಿ 18ಅನ್ನು ನಿಯಂತ್ರಿಸುತ್ತಿತ್ತು. ಕಾಬೂಲ್ ಏರ್‌ಪೋರ್ಟ್‌ನಲ್ಲಿನ ಅಲ್ಲೋಲ ಕಲ್ಲೋಲ ದೃಶ್ಯಗಳು, ಜನರು ವಿಮಾನಗಳತ್ತ ದೌಡಾಯಿಸುವುದು ಮತ್ತು ಆಕಾಶದಿಂದ ಬೀಳುವ ಮಾನವೀಯ ಬಿಕ್ಕಟ್ಟಿನ ದೃಶ್ಯಾವಳಿಗಳನ್ನು ಟೆಲಿವಿಷನ್ ಚಾನೆಲ್‌ಗಳು ಪದೇಪದೇ
ಬಿತ್ತರಿಸುತ್ತಿವೆ.

ತಾಲಿಬಾನ್ ಭಯೋತ್ಪಾದನೆ ವಿರುದ್ಧ ಅಮೆರಿಕ ಮತ್ತು ನ್ಯಾಟೋ ಒಕ್ಕೂಟ ನಡೆಸಿದ 20 ವರ್ಷಗಳ ಯುದ್ಧವು ಇದ್ದಕ್ಕಿದ್ದಂತೆ ಕೊನೆಗೊಂಡಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಪುನರುತ್ಥಾನದ ಸೂಚನೆಗಳು ಸಿಕ್ಕಿದ್ದು ಜುಲೈ 2ರಂದು. ಕಾಬೂಲ್ ಹೊರವಲಯದಲ್ಲಿರುವ ತನ್ನ ಅತಿದೊಡ್ಡ ಬಾಗ್ರಾಮ್ ವಾಯುನೆಲೆಯಿಂದ ಮಧ್ಯರಾತ್ರಿಯಲ್ಲಿ ಸಮ್ಮಿಶ್ರ ಸರ್ಕಾರಕ್ಕೂ ತಿಳಿಸದೇ ಅಮೆರಿಕಾ ಪಡೆಗಳು ಪಲಾಯನ ಮಾಡಿದಾಗ ಆ ಸುಳಿವು ಸಿಕ್ಕಿದ್ದು. ತಾಲಿಬಾನ್‌ನ ಪುನರುತ್ಥಾನವು ಜಾಗತಿಕ ಪರಿಣಾಮಗಳನ್ನು ಹೊಂದಿದ್ದು ಪ್ರಾದೇಶಿಕ ಅಸ್ಥಿರತೆಗೆ ಹೆಚ್ಚಿನ ಅಪಾಯವನ್ನು ತಂದೊಡ್ಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ 43 ವರ್ಷಗಳಿಂದ ಅಫ್ಘಾನಿಸ್ತಾನವು ವಿವಿಧ ದೇಶಗಳ ಪ್ರಾಕ್ಸಿ ಯುದ್ಧಗಳಿಗೆ ಸಾಕ್ಷಿಯಾಗಿದೆ.

ಸೌರ್ ಕ್ರಾಂತಿ ಮತ್ತು ಸೋವಿಯತ್ ಒಕ್ಕೂಟ ಹಿಮ್ಮೆಟ್ಟುವಿಕೆ

ಪ್ರಸ್ತುತ ಸಂಘರ್ಷದ ಬೇರುಗಳನ್ನು 1978ರಲ್ಲಿ ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ನಡುವಿನ ಶೀತಲ ಸಮರದ ಸಮಯದಲ್ಲಿ ನಡೆದ ಸೌರ್ ಕ್ರಾಂತಿಯಲ್ಲಿ ಕಾಣಬಹುದು. 1973ರ ನಂತರ ಅಫ್ಘಾನಿಸ್ತಾನವು ರಾಜಪ್ರಭುತ್ವದಿಂದ ಗಣರಾಜ್ಯಕ್ಕೆ ಪರಿವರ್ತನೆಯಾಯಿತು. 1978ರಲ್ಲಿ, ಪ್ರಧಾನಿ ಸರ್ದಾರ್ ಮೊಹಮ್ಮದ್ ದಾವೂದ್ ಖಾನ್ ಹತ್ಯೆಯ ನಂತರ ಸೋವಿಯಟ್ ಒಕ್ಕೂಟ ಬೆಂಬಲಿತ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಆಫ್ ಅಫ್ಘಾನಿಸ್ತಾನ (ಪಿಡಿಪಿಎ) ಅಧಿಕಾರವನ್ನು ವಶಪಡಿಸಿಕೊಂಡಿತು. ಈ ಕ್ರಾಂತಿಯನ್ನು ನಗರಗಳ ಮಧ್ಯಮ ವರ್ಗದ ಜನರು ಸಾಧಿಸಿದ್ದರು ಮತ್ತು ಅದು ರಾಷ್ಟ್ರದಾದ್ಯಂತ ಸಾಮೂಹಿಕ ಬೆಂಬಲವನ್ನು ಹೊಂದಿರಲಿಲ್ಲ. ಇದು ಮೇಲ್ಮಟ್ಟದ ಕ್ರಾಂತಿಯಾಗಿತ್ತು. ಅಲ್ಲದೆ ಅಫ್ಘಾನಿಸ್ತಾನವು ಪ್ರಧಾನವಾಗಿ ಬುಡಕಟ್ಟು ಸಮಾಜವಾಗಿದ್ದು ಧಾರ್ಮಿಕ ಸಂಪ್ರದಾಯವಾದಿಗಳ ಆಳ್ವಿಕೆಯಲ್ಲಿತ್ತು. ಧಾರ್ಮಿಕ ಸಂಪ್ರದಾಯವಾದಿಗಳ ಅಭಿಪ್ರಾಯಗಳನ್ನು ಅಫ್ಘಾನಿಸ್ತಾನದ ಸಾರ್ವಜನಿಕರ ಅಭಿಪ್ರಾಯವೆಂದು ಬಣ್ಣಿಸಲಾಯಿತು.

ಆಡಳಿತಾತ್ಮಕವಾಗಿ ಪಿಡಿಪಿಎ ಪರಿಚಯಿಸಿದ ಆಮೂಲಾಗ್ರ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಳು, ಭೂ ಸುಧಾರಣೆಗಳು, ಊಳಿಗಮಾನ್ಯ ಸಂಬಂಧಗಳ ನಿರ್ಮೂಲನೆ, ಮಹಿಳೆಯರ ಹಕ್ಕುಗಳ ಸಮಾನತೆಯನ್ನು ಖಾತ್ರಿಪಡಿಸುವುದು ಮತ್ತು ಆರ್ಥಿಕತೆಯ ರಾಷ್ಟ್ರೀಕರಣದ ಸುಧಾರಣೆಗಳನ್ನು ಅಫ್ಘಾನಿಸ್ತಾನದ ಪ್ರಾಚೀನ ಸಂಸ್ಕೃತಿಯ ವಿರುದ್ಧ ಯೋಜಿಸಲಾಗಿದೆ ಎಂದು ಬಿಂಬಿಸಿ ಅದರ ವಿರುದ್ಧ ಎತ್ತಿಕಟ್ಟಲಾಯಿತು. ಸಮಾಜವಾದಿ ಸರ್ಕಾರವನ್ನು ರಕ್ಷಿಸಲು ಅಫ್ಘಾನಿಸ್ತಾನಕ್ಕೆ ಪ್ರವೇಶಿಸಿದ ಸೋವಿಯತ್ ಸೈನಿಕರ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರರು ಎಂದು ಕರೆಯುವ ಮುಜಾಹಿದ್ದೀನ್ (ಧಾರ್ಮಿಕ ಯೋಧರು) ಅವರನ್ನು ಶಸ್ತ್ರಸಜ್ಜಿತಗೊಳಿಸಲು ಮತ್ತು ತರಬೇತಿ ನೀಡಲು ಅಮೆರಿಕ 3 ಬಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು ಹಣವನ್ನು ಪೂರೈಕೆ ಮಾಡಿತು. ಸೋವಿಯತ್ ಒಕ್ಕೂಟದ ವಿರುದ್ಧ ಧಾರ್ಮಿಕ ಯುದ್ಧವನ್ನು ಮಾಡಲು, ಧಾರ್ಮಿಕ ಅಭಿಯಾನಗಳಗೆ ತರಬೇತಿ ನೀಡುವಲ್ಲಿ ಸೌದಿ ಬಹುಮುಖ್ಯ ಪಾತ್ರವಹಿಸಿತು ಮತ್ತು ನಾಸ್ತಿಕರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದಾರೆ ಎಂದು ವ್ಯಾಪಕ ಅಪಪ್ರಚಾರ ಮಾಡಲಾಯಿತು.

ಈ ಧಾರ್ಮಿಕ ಯೋಧರ ಮನೆಯ ಮಹಿಳೆಯರು ಮತ್ತು ಮಕ್ಕಳು ನೆರೆಯ ದೇಶಗಳಿಗೆ ಮತ್ತು ಹೆಚ್ಚಿನವರು ಪಾಕಿಸ್ತಾನಕ್ಕೆ ಪಲಾಯನ ಮಾಡಿದರು. ಪಾಕಿಸ್ತಾನದ ಐಎಸ್‌ಐ, ಸೌದಿ ಅರೇಬಿಯಾದ ಧರ್ಮಗುರುಗಳ ಆಶ್ರಯದಲ್ಲಿ ಪಾಕಿಸ್ತಾನದ ಮದರಸಾಗಳಲ್ಲಿ ಶಿಕ್ಷಣ ಪಡೆದ ಮಕ್ಕಳನ್ನು ತಾಲಿಬಾನ್ ಎಂದು ಕರೆಯಲಾಗುತ್ತಿತ್ತು. ’ತಾಲಿಬಾನ್’ ಎಂಬ ಪದದ ಅರ್ಥ ’ವಿದ್ಯಾರ್ಥಿಗಳು’. 1988ರಲ್ಲಿ ಸೋವಿಯತ್ ಹಿಮ್ಮೆಟ್ಟಿದಾಗ, 90ರ ದಶಕದ ಮೊದಲಾರ್ಧದಲ್ಲಿ ಅಫ್ಘಾನಿಸ್ತಾನವನ್ನು ಮುಜಾಹಿದ್ದೀನ್‌ನ ವಿವಿಧ ಬುಡಕಟ್ಟು ಸೇನಾಧಿಕಾರಿಗಳ ನಡುವಿನ ಆಂತರಿಕ ಶಕ್ತಿಯು ಕಿತ್ತುತಿಂದಿತ್ತು. ಹಿಮ್ಮೆಟ್ಟಿದ ನಂತರ, ಸೋವಿಯತ್ ಒಕ್ಕೂಟವು ವಿವಿಧ ದೇಶಗಳಾಗಿ ಒಡೆದು ಶೀತಲ ಸಮರ ಕೊನೆಗೊಂಡಿತು.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್, ಅಲ್ ಖೈದಾ ಉದಯ ಮತ್ತು ಅಮೆರಿಕದ ಆಕ್ರಮಣ

ವಿವಿಧ ಬುಡಕಟ್ಟು ಗುಂಪುಗಳು ಮತ್ತು ಅಗೋಚರ ಪಡೆಗಳು ಸೋವಿಯತ್ ವಿರುದ್ದ ಹೋರಾಡಲು ಇಸ್ಲಾಂ ಧರ್ಮವನ್ನು ಬಳಸಿಕೊಳ್ಳುತ್ತಿದ್ದವು. 1996ರಲ್ಲಿ ಉಂಟಾದ ಅಧಿಕಾರ ನಿರ್ವಾತ, ವಿವಿಧ ಸೇನಾಧಿಪತಿಗಳ ನಡುವಿನ ಅಂತರ್ಯುದ್ಧ, ಅಮೆರಿಕ ಬಿಟ್ಟುಹೋದ ವ್ಯಾಪಕ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ತಾಲಿಬಾನ್‌ಗೆ ಅಧಿಕಾರವನ್ನು ವಶಪಡಿಸಿಕೊಳ್ಳುವಂತಹ ಫಲವತ್ತಾದ ನೆಲವನ್ನು ತಯಾರುಗೊಳಿಸಿದವು. ಅವರು ಅಧಿಕಾರ ಹಿಡಿದ ಕೂಡಲೆ ಕಠಿಣವಾದ ಶರಿಯಾ ಕಾನೂನುಗಳನ್ನು ಚಾಲ್ತಿಗೆ ತರಲಾಯಿತು. ಮಹಿಳೆಯರನ್ನು ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರನ್ನಾಗಿ ಮಾಡಿ, ಅವರನ್ನು ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸಲಾಯಿತು. ತಾಲಿಬಾನನ್ನು ಧಿಕ್ಕರಿಸಿದ ಜನರನ್ನು ಸಾರ್ವಜನಿಕವಾಗಿ ಗುಂಡು ಹಾರಿಸಿ ಕೊಲ್ಲಲಾಯಿತು. ಇಸ್ಲಾಂ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸಿ ಅಫ್ಘಾನಿಸ್ತಾನವನ್ನು ಆಳಲಾಯಿತು.

ಈ ಮಧ್ಯೆ, ಸೋವಿಯತ್ ವಿರೋಧಿ ನಾಯಕ ಎಂದು ಬಿಂಬಿಸಲ್ಪಟ್ಟ ಒಸಾಮಾ ಬಿನ್ ಲಾಡೆನ್ ಅಮೆರಿಕ ವಿರುದ್ಧ ಬೆನ್ನು ತಿರುಗಿಸಲು ಪ್ರಾರಂಭಿಸಿದ. ಅವನ ನೇತೃತ್ವದಲ್ಲಿ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಹಿತಾಸಕ್ತಿಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಲಾಯಿತು. 90ರ ದಶಕದಲ್ಲಿ ಅಫ್ಘಾನಿಸ್ತಾನವು ಅಲ್ ಖೈದಾ ಮತ್ತು ತೀವ್ರವಾದಿ ಇಸ್ಲಾಮಿಕ್ ಗುಂಪುಗಳಿಗೆ ಅಭಯಾರಣ್ಯವಾಯಿತು. ತಮಗೆ ತರಬೇತಿ ನೀಡಿದ ಮತ್ತು ಹಣ ನೀಡಿದ ಅಮೆರಿಕದ ವಿರುದ್ಧವೆ ಅವರು ತಿರುಗಿಬಿದ್ದರು. ಅಲ್ ಖೈದಾದಿಂದ ಸೆಪ್ಟೆಂಬರ್ 11, 2001ರಂದು ವಿಶ್ವ ವಾಣಿಜ್ಯ ಕೇಂದ್ರ ಮತ್ತು ಪೆಂಟಗನ್ ಮೇಲೆ ಅಮೆರಿಕದ ವಿಮಾನಗಳನ್ನು ಹೈಜಾಕ್ ಮಾಡಿ ದಾಳಿ ಮಾಡುವ ತನಕ ಇದು ಮುಂದುವರೆಯಿತು. ಈ ದಾಳಿಯ ರುವಾರಿ ನಾನೆ ಎಂದು ಒಸಾಮಾ ಬಿನ್ ಲಾಡೆನ್ ಸ್ವತಃ ಒಪ್ಪಿಕೊಂಡ.

ಇದರ ಬೆನ್ನಲ್ಲೆ, ಬ್ರಿಟನ್‌ನ ಬೆಂಬಲದೊಂದಿಗೆ ಜಾರ್ಜ್ ಬುಷ್ ನೇತೃತ್ವದ ಅಮೆರಿಕವು ತಕ್ಷಣವೇ ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿತು. ಎರಡು ತಿಂಗಳ ಒಳಗೆ ತಾಲಿಬಾನ್‌ಅನ್ನು ಕಿತ್ತೊಗೆಯುವುದಾಗಿ ಹೇಳಿ, ಅಫ್ಘಾನಿಸ್ತಾನದಾದ್ಯಂತ ತಾಲಿಬಾನ್ ಮತ್ತು ಅಲ್ ಖೈದಾ ನೆಲೆಗಳೆಂದು ಬಿಂಬಿಸುತ್ತ ಹಲವಾರು ಸ್ಥಳಗಳ ಮೇಲೆ ಅಮೆರಿಕ ಅನಿರ್ದಿಷ್ಟ ಬಾಂಬ್ ದಾಳಿ ಮಾಡಿತು. ಅಮೆರಿಕ ತನ್ನ ಈ ಮಧ್ಯಪ್ರವೇಶದಿಂದ ಈಗಾಗಲೇ ದುರ್ಬಲಗೊಂಡಿರುವ ಅಫ್ಘಾನಿಸ್ತಾನದ ಸಾಮಾಜಿಕ ರಚನೆಯನ್ನು ಸಂಪೂರ್ಣವಾಗಿ ಅಲುಗಾಡಿಸಿತು. ದೇಶದ ಅರ್ಧದಷ್ಟು ಜನಸಂಖ್ಯೆ ಪ್ರಮುಖವಾಗಿ ಪಾಕಿಸ್ತಾನಕ್ಕೆ ಪಲಾಯನ ಮಾಡಿದರು. ಈ ಮೂಲಕ ಅಮೆರಿಕ ಅಫ್ಘನ್‌ನಲ್ಲಿ ಅತಿದೊಡ್ಡ ವಲಸಿಗರ ಬಿಕ್ಕಟ್ಟನ್ನು ಉಂಟುಮಾಡಲು ಕಾರಣವಾಯಿತು.

ಪ್ರಜಾಪ್ರಭುತ್ವದ ಹೆಸರಿನಲ್ಲಿ, ಅಮೆರಿಕದ ಜನರಲ್‌ಗಳ ಆದೇಶಗಳನ್ನು ಪಾಲಿಸುವ ಅತ್ಯಂತ ಭ್ರಷ್ಟರನ್ನು ಒಳಗೊಂಡ ಕೈಗೊಂಬೆ ಸರ್ಕಾರವನ್ನು ರಚಿಸಲಾಯಿತು. ಸುಮಾರು 4 ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ, ಕಳೆದ ಚುನಾವಣೆಯಲ್ಲಿ ಮತ ಚಲಾಯಿಸಿದವರು ಕೇವಲ 10 ಲಕ್ಷ ಜನರು ಮಾತ್ರ. ಇದರಲ್ಲಿ ಅಲ್ಲಿನ ಅಧ್ಯಕ್ಷ ಅಶ್ರಫ್ ಘನಿ ಪಡೆದಿದ್ದು 5 ಲಕ್ಷ ಮತಗಳು. ತಾಲಿಬಾನ್ ವಿರುದ್ಧ ಹೋರಾಡುತ್ತೇನೆ ಎಂದು ಹೇಳುವ ಅಮೆರಿಕ, ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಾ, ಲಕ್ಷಾಂತರ ಅಫ್ಘನ್ ನಾಗರಿಕರ ಹತ್ಯೆ ಮಾಡಿತು. 2009ರಿಂದ 2011ರವರೆಗಿನ ಅಫ್ಘನ್ ಯುದ್ಧದ ಉತ್ತುಂಗದಲ್ಲಿ 1 ಲಕ್ಷಕ್ಕೂ ಹೆಚ್ಚು ಅಮೆರಿಕನ್ ಸೈನಿಕರು ಅಫ್ಘಾನಿಸ್ತಾನದ ನೆಲದಲ್ಲಿದ್ದರು. ಈ ಅಂಕಿಅಂಶಗಳಲ್ಲಿ ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಹಾಗೂ ಗುತ್ತಿಗೆದಾರರ ಸೈನ್ಯಗಳು ಸೇರಿಲ್ಲ. ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಬರಾಕ್ ಒಬಾಮಾ ನೇತೃತ್ವದ ಅಮೆರಿಕಾ ಸೈನ್ಯ 2015ರಲ್ಲಿ ಕುಂಡುಸ್ ಪ್ರದೇಶದ ಆಸ್ಪತ್ರೆಯ ಮೇಲೆ ಬಾಂಬ್ ದಾಳಿ ನಡೆಸಿ 42 ಜನರನ್ನು ಕೊಂದಿತು!.

ಅಮೆರಿಕ ಪಡೆಗಳು ಎಸಗಿರುವ ಅಫ್ಘನ್ ಮಹಿಳೆಯರ ಮೇಲಿನ ಅತ್ಯಾಚಾರ, ಮಾನವ ಕಳ್ಳಸಾಗಣೆ, ಅಫೀಮು ಉತ್ಪಾದನೆ, ಮಾದಕವಸ್ತು ವ್ಯಾಪಾರ, ಮಕ್ಕಳನ್ನು ಕ್ರೀಡೆಗಾಗಿ ಬೇಟೆಯಾಡುವುದು ಮತ್ತು ಮನಸೋ ಇಚ್ಛೆ ಸ್ವೇಚ್ಛಾಚಾರ ನಡೆದಿರುವ ಬಗ್ಗೆ ಪುರಾವೆಗಳಿವೆ. ಅಮೆರಿಕ ಸೈನ್ಯ ನಡೆಸುವ ದೌರ್ಜನ್ಯಗಳು ಮತ್ತು ಕೈಗೊಂಬೆ ಸರ್ಕಾರಗಳ ಅಸಹಾಯಕ ಸ್ಥಿತಿ, ಅಫ್ಘನ್‌ನ ಬಹುತೇಕ ನಾಗರಿಕರಿಗೆ ತಾಲಿಬಾನ್‌ಅನ್ನು ಸ್ವೀಕಾರವಾಗುವಂತೆ ಮಾಡಿತ್ತು. ಅಮೆರಿಕದ ಮಾಜಿ ಅಧ್ಯಕ್ಷರಾದ ಜಾರ್ಜ್ ಬುಷ್, ಒಬಾಮಾ ಮತ್ತು ಟ್ರಂಪ್‌ರಿಂದ ಹಿಡಿದು ಪ್ರಸ್ತುತ ಅಧ್ಯಕ್ಷರಾಗಿರುವ ಜೋ ಬಿಡೆನ್‌ವರೆಗೂ ತಾಲಿಬಾನ್‌ಅನ್ನು ನಾವು ಸೋಲಿಸಿದ್ದೇವೆ ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ 20 ವರ್ಷಗಳ ನಿರರ್ಥಕ ಯುದ್ಧದಿಂದಾಗಿ ಲೆಕ್ಕವಿಲ್ಲದಷ್ಟು ಜನರು ಜೀವಗಳನ್ನು ಕಳೆದುಕೊಂಡಿದ್ದಾರೆ. 2.26 ಟ್ರಿಲಿಯನ್ ಡಾಲರ್‌ಗಳನ್ನು ಖರ್ಚು ಮಾಡಿದ ನಂತರ ಅಮೆರಿಕ ತನ್ನ ಗಂಟುಮೂಟೆ ಕಟ್ಟಿ, ಅಫ್ಘಾನಿಸ್ತಾನದ ಈ ಶೋಚನೀಯ ಸ್ಥಿತಿಗೆ ಅಫ್ಘಾನಿಸ್ತಾನವೇ ಕಾರಣ ಎಂದು ಬಿಂಬಿಸುತ್ತಿದೆ. ಆತಂಕಕಾರಿ ಸಂಗತಿಯೆಂದರೆ ವಾಹನದ ಮೇಲೆ ಒಂದೋ ಎರಡೋ ಬಂದೂಕುಗಳನ್ನು ಇಟ್ಟುಕೊಂಡು ಓಡಾಡುತ್ತಾ, ಹೋರಾಟ ಮಾಡುತ್ತಿದ್ದ ತಾಲಿಬಾನ್ ಪಡೆಗಳಿಗೆ ಈಗ ಅಮೆರಿಕ ಆಫ್ಘಾನಿಸ್ತಾನಕ್ಕೆ ನೀಡಿದ್ದ ಆಧುನಿಕ ಬಂದೂಕುಗಳು, ಲೇಸರ್ ಗನ್‌ಗಳು, ಸೈನಿಕ ವಿಮಾನಗಳು, ಹೆಲಿಕಾಪ್ಟರ್‌ಗಳು ಸಿಕ್ಕಿವೆ.

ಅಫ್ಘಾನಿಸ್ತಾನದಲ್ಲಿ ಅಮೆರಿಕದ ಹಸ್ತಕ್ಷೇಪದಿಂದಾದ ಮಾನವೀಯತೆಯ ಕ್ರೌರ್ಯ ದುರಂತದ ಕಥೆಯನ್ನು ಹೇಳುತ್ತದೆ. ಸಾವನ್ನಪ್ಪಿದ ಅಮೆರಿಕದ ಸೇವಾ ಸದಸ್ಯರ ಸಾವಿನ ಅಂದಾಜು 2,448, ಯುಎಸ್ ಗುತ್ತಿಗೆದಾರರು 3,846, ಅಫ್ಘನ್ ರಾಷ್ಟ್ರೀಯ ಸೇನೆ ಮತ್ತು ಪೊಲೀಸರು 66,000, ಒಕ್ಕೂಟದ ಪಡೆಗಳು 1,144, ಅಫ್ಘನ್ ನಾಗರಿಕರು 47,245, ತಾಲಿಬಾನ್ ಮತ್ತು ಇತರ ವಿರೋಧಿಗಳ ಸಂಖ್ಯೆ 51,191 ರಷ್ಟಿದೆ.

ಭಯೋತ್ಪಾದನೆ ವಿರುದ್ಧ ಹೋರಾಡುವ ಹೆಸರಿನಲ್ಲಿ ಅಮೆರಿಕವು ಅಫ್ಘಾನಿಸ್ತಾನ, ಇರಾಕ್, ಸಿರಿಯಾ, ಲಿಬಿಯಾ, ಸೊಮಾಲಿಯಾ, ಸುಡಾನ್ ಇನ್ನು ಇತರೆ ದೇಶಗಳನ್ನು ಛಿದ್ರ ಛಿದ್ರ ಮಾಡಿ ಧ್ವಂಸ ಮಾಡಿದೆ. ’ರಾಷ್ಟ್ರ ನಿರ್ಮಾಣ’, ’ಭಯೋತ್ಪಾದನೆಯ ವಿರುದ್ಧ ಹೋರಾಟ’, ’ಪ್ರಜಾಪ್ರಭುತ್ವವನ್ನು ರಕ್ಷಣೆ’, ’ಮಹಿಳೆಯರ ಹಕ್ಕುಗಳ ರಕ್ಷಣೆ’ ಎಂಬ ಪದಪುಂಜಗಳನ್ನು ಬಳಸಿ ಖನಿಜ ಶ್ರೀಮಂತ ದೇಶವನ್ನು ಲೂಟಿ ಮಾಡಲು ಅಮೆರಿಕ ಉಪಯೋಗಿಸಿಕೊಂಡಿತು. ಅಮೆರಿಕದ ವಿದೇಶಾಂಗ ನೀತಿ ಮತ್ತು ಅದರ ಮಿಲಿಟರಿ ಮಧ್ಯಸ್ಥಿಕೆ ಮತ್ತು ಹಸ್ತಕ್ಷೇಪಗಳಲ್ಲಿ ಎಳ್ಳಿನಷ್ಟೂ ತತ್ವ ಸಿದ್ಧಾಂತವಿಲ್ಲ ಎಂಬುದನ್ನು ನಿಸ್ಸಂದೇಹವಾಗಿ ರುಜುವಾತು ಮಾಡುತ್ತದೆ ಅಫ್ಘಾನಿಸ್ತಾನದ ಇಂದಿನ ಸ್ಥಿತಿ. ಅಮೆರಿಕದ ಸಾಮಾನ್ಯ ನಾಗರಿಕರು ಮತ್ತು ಅದು ಹಸ್ತಕ್ಷೇಪ ಮಾಡುವ ದೇಶಗಳ ವಿದೇಶಿ ಪ್ರಜೆಗಳ ಜೀವಗಳು ಅದರ ಕಾರ್ಪೊರೆಟ್ ಹಿತಾಸಕ್ತಿಗಳನ್ನು ಪೂರೈಸುವವರೆಗೂ ಮಾತ್ರ. ಪ್ರಪಂಚದ ಯಾವುದೇ ದೇಶವು ಅಮೆರಿಕದ ಮಿತ್ರರಾಷ್ಟ್ರವಾಗಿರುವುದರ ಬಗ್ಗೆ ಜಾಗರೂಕರಾಗಿರಬೇಕು ಏಕೆಂದರೆ ಅದರ ದ್ರೋಹ ಪದೇಪದೇ ಸಾಬೀತಾಗಿದೆ.

ಅಫ್ಘಾನಿಸ್ತಾನ ಮತ್ತು ಅದರ ನೆರೆಹೊರೆಯವರು

ಒಬಾಮಾ ಮತ್ತು ಟ್ರಂಪ್ ಇಬ್ಬರೂ ಸೇನೆಯನ್ನು ಅಮೆರಿಕಕ್ಕೆ ಮರಳಿ ತರುವ ಭರವಸೆ ನೀಡಿದರು. ಪ್ರಸ್ತುತ ಅಧ್ಯಕ್ಷ ಬಿಡೆನ್ ಅವರು ಸೆಪ್ಟೆಂಬರ್ 11ರೊಳಗೆ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವುದಾಗಿ ಆಫ್ಘಾನಿಸ್ತಾನ ಯುದ್ಧದ 20ನೇ ವಾರ್ಷಿಕೋತ್ಸವದ ಸಮಯದಲ್ಲಿ ಹೇಳಿದ್ದರು. ತಾಲಿಬಾನ್‌ನ ಪುನರುತ್ಥಾನವು ವಿದೇಶಗಳ ಮೇಲೆ ಅಮೆರಿಕದ ಮಧ್ಯಸ್ಥಿಕೆ ಮತ್ತು ಪ್ರಪಂಚದಾದ್ಯಂತದ ಅದರ ವಿದೇಶಿ ನೀತಿಗಳ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಂಘಟಿತವಲ್ಲದ ತಾಲಿಬಾನ್ ಅಧಿಕಾರ ಒಂದು ಸಂಘಟಿತ ರೀತಿಯಲ್ಲಿ ಮರುಹುಟ್ಟು ಪಡೆದ ವೇಗವು, ಅಮೆರಿಕ ಮತ್ತು ತಾಲಿಬಾನ್ ನಡುವೆ ನಡೆದಿರಬಹುದಾದ ಒಳಒಪ್ಪಂದವನ್ನು ಸೂಚಿಸುತ್ತಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆಳುವ ಸರ್ಕಾರದ ಪತನದ ಮುಂಚೆ ತಾಲಿಬಾನ್ ಸರ್ಕಾರದೊಂದಿಗೆ ಹೋರಾಡಲಿಲ್ಲ ಮತ್ತು ತಾಲಿಬಾನ್ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳಲು ದೊಡ್ಡ ಹೋರಾಟ ನಡೆಸಬೇಕಾಗಲಿಲ್ಲ, ಅಲ್ಲದೆ ಸಮ್ಮಿಶ್ರ ಪಡೆಗಳು ಹಂತ ಹಂತವಾಗಿ ಹಿಂದೆ ಸರಿದವು.

ತಾಲಿಬಾನ್ ಮುಖ್ಯವಾಗಿ ಪಾಕಿಸ್ತಾನದ ಐಎಸ್‌ಐನಿಂದ ತರಬೇತಿ ಪಡೆದಿದ್ದರಿಂದ ಇದು ಅನೇಕ ಊಹಾಪೋಹಗಳಿಗೆ ಎಡೆಮಾಡಿಕೊಡುತ್ತದೆ. ಪಾಕಿಸ್ತಾನವು ಸಾಂಪ್ರದಾಯಿಕವಾಗಿ ಅಮೆರಿಕದ ಮಿತ್ರರಾಷ್ಟ್ರವಾಗಿದೆ ಮತ್ತು ಅದರಿಂದ ಪಡೆಯುವ ಬೃಹತ್ ಆರ್ಥಿಕ ಸಹಾಯಕ್ಕೆ ಬದಲಾಗಿ ತಾಲಿಬಾನ್‌ನನ್ನು ಹೊಸ ರೀತಿಯಲ್ಲಿ ಸೃಷ್ಟಿಸಿ ಅಮೆರಿಕಕ್ಕೆ ಸಹಾಯ ಮಾಡಿದೆ ಎನ್ನಲಾಗುತ್ತಿದೆ. ಸೋವಿಯತ್ ವಿರೋಧಿ ಅಭಿಯಾನಗಳಿಗೆ ತಾಲಿಬಾನ್‌ಅನ್ನು ಬಳಸಿದ್ದಕ್ಕಾಗಿ ಮತ್ತು 9/11 ನಂತರ ಭಯೋತ್ಪಾದನೆಯ ನಂತರದ ಯುದ್ಧದ ಭಾಗವಾಗಿ ತಾಲಿಬಾನ್ ವಿರುದ್ಧದ ಯುದ್ಧದ ಕಾರ್ಯಾಚರಣೆಯಲ್ಲಿ ಅಮೆರಿಕ ಪಾಕಿಸ್ತಾನವನ್ನು ಲಾಂಚ್ ಪ್ಯಾಡ್ ಆಗಿ ಬಳಸಿತ್ತು. ಪಾಕಿಸ್ತಾನದ ಐಎಸ್‌ಐ ಈ ಎಲ್ಲ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರಿಂದ ಪ್ರಸ್ತುತ ಭೌಗೋಳಿಕ ರಾಜಕೀಯ ಸನ್ನಿವೇಶವು ಪಾಕಿಸ್ತಾನ ಮತ್ತು ತಾಲಿಬಾನ್ ಎರಡಕ್ಕೂ ಹೆಚ್ಚು ಚೌಕಾಶಿ ಮಾಡುವ, ಪರಸ್ಪರ ಹೊಂದಾಣಿಕೆಯನ್ನು ಮಡಿಕೊಳ್ಳುವ ಶಕ್ತಿಯನ್ನು ನೀಡಿದೆ.

ಚೀನಾ ತನ್ನ ಮಹತ್ವಾಕಾಂಕ್ಷೆಯ ಬೆಲ್ಟ್ ಮತ್ತು ರಸ್ತೆ (BRI) ಯೋಜನೆಯ ಭಾಗವಾಗಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ನಲ್ಲಿ (CPEC) 46 ಬಿಲಿಯನ್ ಡಾಲರ್‌ಗಳಷ್ಟು ಹೂಡಿಕೆ ಮಾಡಿದೆ. ಚೀನಾ ತನ್ನ ಸಿಪಿಇಸಿ ಯೋಜನೆಯಲ್ಲಿ ಅಫ್ಘಾನಿಸ್ತಾನವನ್ನು ಸೇರಿಸಲು ಬಯಸುತ್ತಿದೆ. ತಾಲಿಬಾನ್ ಜೊತೆ ಮೊದಲಾಗಿ ರಾಜತಾಂತ್ರಿಕ ಮಾತುಕತೆಯನ್ನು ಆರಂಭಿಸಿದವರು ರಷ್ಯಾ ಮತ್ತು ಚೀನಾ. ಚೀನಾ ತನ್ನ Shanghai Cooperation Organisation ಸದಸ್ಯತ್ವವನ್ನು ಕಾಬೂಲ್‌ಗೆ ವಿಸ್ತರಿಸಿದೆ ಮತ್ತು ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ತಾಲಿಬಾನಿಗಳನ್ನು ಒತ್ತಾಯಿಸಿದೆ. ಅಫ್ಘಾನಿಸ್ತಾನವು ಚೀನಾದೊಂದಿಗೆ ಗಡಿಯನ್ನು ಹಂಚಿಕೊಂಡಿರುವುದರಿಂದ ತಾಲಿಬಾನ್ ಕೂಡ ಚೀನಾ ಮತ್ತು ಎಲ್ಲಾ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಬಯಸಿದೆ. ಸದ್ಯದ ಪರಿಸ್ಥಿತಿಯಲ್ಲಿ ತಾಲಿಬಾನ್ ದೊಡ್ಡ ಚೌಕಾಶಿ ಶಕ್ತಿಯನ್ನು ಹೊಂದಿರುತ್ತದೆ.

ಮತ್ತೊಂದೆಡೆ ಭಾರತ ತಾಲಿಬಾನ್ ಜೊತೆ ಇತ್ತೀಚಿನವರೆಗೂ ಯಾವುದೇ ರೀತಿಯಲ್ಲಿ ತೊಡಗಿಸಿಕೊಂಡಿರಲಿಲ್ಲ. ಯುಎಸ್‌ಎ ಮತ್ತು ತಾಲಿಬಾನ್ ದೋಹಾದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದವು ಆದರೆ ಭಾರತವು ಬಹಳ ವಿಳಂಬದ ನಂತರ ಇಷ್ಟವಿಲ್ಲದೆ ಭಾಗವಹಿಸಿತು. ಒಪ್ಪಂದದ ನಿಬಂಧನೆಗಳು ಅಫ್ಘಾನಿಸ್ತಾನದಿಂದ ಎಲ್ಲಾ ಅಮೆರಿಕನ್ ಮತ್ತು ನ್ಯಾಟೋ ಪಡೆಗಳನ್ನು ಹಿಂತೆಗೆದುಕೊಳ್ಳುವುದು, ಅಲ್ ಖೈದಾ ತಾಲಿಬಾನ್ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವುದನ್ನು ತಡೆಯಲು ತಾಲಿಬಾನ್ ನೀಡಿರುವ ಆಶ್ವಾಸನೆಗಳನ್ನು ಅದು ಒಳಗೊಂಡಿದೆ.

ಈ ಒಪ್ಪಂದವನ್ನು ಚೀನಾ, ರಷ್ಯಾ ಮತ್ತು ಪಾಕಿಸ್ತಾನ ಬೆಂಬಲಿಸಿವೆ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸರ್ವಾನುಮತದಿಂದ ಅನುಮೋದಿಸಿದೆ. ಭಾರತವು ಅಫ್ಘಾನಿಸ್ತಾನದ ಪುನರ್ನಿರ್ಮಾಣದಲ್ಲಿ ಮತ್ತು ಅನೇಕ ಶ್ರೀಮಂತ ಖನಿಜ ಗಣಿಗಾರಿಕೆ ಉದ್ಯಮಗಳು ಅಮೆರಿಕದ ಹಿತಾಸಕ್ತಿಗಳಿಗೆ ಪೂರಕವಾಗಿ ಅಲ್ಲಿ ಹೂಡಿಕೆ ಮಾಡಿವೆ. ಇಲ್ಲಿಯವರೆಗೆ ಭಾರತವು ತಾಲಿಬಾನ್ ಬೆಳವಣಿಗೆಯ ಬಗ್ಗೆ ಯಾವುದೇ ಸ್ವತಂತ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿಲ್ಲ ಮತ್ತು ಈ ಪ್ರದೇಶದಲ್ಲಿ ಅದರ ಪರಿಣಾಮಗಳನ್ನು ವಿಶೇಷವಾಗಿ ಕಾಶ್ಮೀರ ಪ್ರದೇಶಕ್ಕಿರುವ ಅಪಾಯಗಳ ಬಗ್ಗೆ ವಿಶ್ಲೇಷಿಸಿಲ್ಲ.

ಮಧ್ಯಪ್ರಾಚ್ಯ ಮತ್ತು ಮಧ್ಯ ಏಷ್ಯಾದಲ್ಲಿ ಬದಲಾಗುತ್ತಿರುವ ಭೌಗೋಳಿಕ ರಾಜಕೀಯದೊಂದಿಗೆ ಸ್ವತಂತ್ರ, ಸ್ಥಿರವಾದ ನೀತಿಯನ್ನು ಹೊಂದುವ ಬದಲು, ಭಾರತವು ಅಮೆರಿಕದ ಹಿತಾಸಕ್ತಿಗಳೊಂದಿಗೆ ಅದರ ನೆರಳಿನಲ್ಲಿ ಕೆಲಸ ಮಾಡುತ್ತಿದೆ. ಭಾರತ ಪ್ರಜ್ಞಾಪೂರ್ವಕವಾಗಿ ಪಾಕಿಸ್ತಾನ ಸೇರಿದಂತೆ ಅಫ್ಘಾನಿಸ್ತಾನದ ಎಲ್ಲಾ ನೆರೆಯ ರಾಷ್ಟ್ರಗಳೊಂದಿಗೆ ಕೈಜೋಡಿಸಬೇಕು ಮತ್ತು ಶಾಶ್ವತ ಶಾಂತಿ ಮತ್ತು ಸಮೃದ್ಧಿಯನ್ನು ಸೃಷ್ಟಿಸಲು ಕೆಲಸ ಮಾಡಬೇಕು. ಭಾರತ, ಸೂಪರ್ ಪವರ್‌ಗಳೊಂದಿಗಿನ ಹಳೆಯ ಮೈತ್ರಿಯ ಚೌಕಟ್ಟಿನೊಂದಿಗೆ ಕೆಲಸ ಮಾಡುವ ಬದಲು ಬದಲಾಗುತ್ತಿರುವ ಮಲ್ಟಿಪೋಲಾರ್ ಚೌಕಟ್ಟಿನೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕಿದೆ.

ಅಫ್ಘಾನಿಸ್ತಾನವು ವಿವಿಧ ಪ್ರಾದೇಶಿಕ ಬುಡಕಟ್ಟು ಜನಾಂಗದ ಒಂದು ಒಕ್ಕೂಟವಾಗಿ ಇಸ್ಲಾಂ ಧರ್ಮಕ್ಕೆ ಸಮನ್ವಯವಾಗಿದೆ ಮತ್ತು ಈ ಪ್ರದೇಶದಲ್ಲಿ ಬದಲಾಗುತ್ತಿರುವ ಆಸಕ್ತಿಯಿಂದಾಗಿ ಈ ಗುಂಪಿನ ಒಕ್ಕೂಟದ ಸ್ಥಿರತೆಯನ್ನು ಖಾತರಿಪಡಿಸಲಾಗುವುದಿಲ್ಲ. ಚೀನಾ ಎಂದಿಗೂ ಬೇರೆ ದೇಶದಲ್ಲಿ ಮಿಲಿಟರಿ ಹಸ್ತಕ್ಷೇಪ ಮಾಡಿರುವ ಉದಾಹರಣೆಗಳಿಲ್ಲ. ಆದರೆ, ಅಫ್ಘಾನಿಸ್ತಾನದಲ್ಲಿ, ಭವಿಷ್ಯದಲ್ಲಿ ಅಮೆರಿಕ ಮತ್ತು ಚೀನೀ ಹಿತಾಸಕ್ತಿಗಳು ಘರ್ಷಣೆಯಾಗಬಹುದು. ಆದರೆ ಅಮೆರಿಕದ ’ಚೀನಾವನ್ನು ನಿಯಂತ್ರಿಸುವ’ ತಂತ್ರದ ಭಾಗವಾಗಿ ಭಾರತವು ಈ ಪ್ರದೇಶದಲ್ಲಿ ಅಮೆರಿಕದ ಹಿತಾಸಕ್ತಿಗೆ ಪೂರಕವಾಗಿ ಬಲಿಪಶುವಾಗಬಾರದು. ಭಾರತವು ಇಸ್ಲಾಮಿಕ್ ಪ್ರಪಂಚದೊಂದಿಗೆ ಆದಷ್ಟು ಬೇಗ ಸೇತುವೆಗಳನ್ನು ನಿರ್ಮಿಸಬೇಕು. ಚೀನಾ, ರಷ್ಯಾ, ಇರಾನ್ ಈಗಾಗಲೇ ಅಮೆರಿಕದ ಮಿಲಿಟರಿ ಸಾಮ್ರಾಜ್ಯಶಾಹಿ ಮತ್ತು ಈ ಪ್ರದೇಶದಲ್ಲಿನ ಅಸ್ಥಿರತೆಯ ವಿರುದ್ಧ ಹೊಸ ಬ್ಲಾಕ್‌ಅನ್ನು ರಚಿಸಿಕೊಂಡಿದೆ. ಪಾಕಿಸ್ತಾನವು ಇದರಲ್ಲಿ ಪ್ರಮುಖ ರಾಷ್ಟ್ರವಾಗಿದ್ದು, ಅದರ ಚೌಕಾಶಿ ಶಕ್ತಿ ಅಮೆರಿಕ ಮತ್ತು ಚೀನಾದೊಂದಿಗೆ ಹೆಚ್ಚಾಗಿದೆ. ಅಮೆರಿಕದ ನೆರಳನ್ನು ಅನುಸರಿಸಿ ಈಗಿನ ಮೋದಿ ಸರ್ಕಾರ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಮಾತ್ರ ಕಾದು ನೋಡಬೇಕಿದೆ. ಮೊದಲ ಶೀತಲ ಸಮರದ ಸಮಯದಲ್ಲಿ ಭಾರತವು ಅಲಿಪ್ತ ಚಳವಳಿಯ ಮುಂಚೂಣಿ ರಾಷ್ಟ್ರವಾಗಿತ್ತು ಮತ್ತು ಮುಂಬರುವ ಶೀತಲ ಸಮರದಲ್ಲಿ ಧಾರ್ಮಿಕ ಮತಾಂಧತೆಯಿಂದ ಆವೃತವಾದ ಪ್ರದೇಶದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಮತ್ತು ಕಗ್ಗತ್ತಲು ನಮ್ಮನ್ನು ಆವರಿಸದಂತೆ ಎಚ್ಚರಿಕೆ ವಹಿಸಬೇಕು.

ಭರತ್ ಹೆಬ್ಬಾಳ

ಭರತ್ ಹೆಬ್ಬಾಳ
ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ಭರತ್ ಸಾಮಾಜಿಕ ಚಳವಳಿಗಳ ಜೊತೆಗೆ ನಂಟು ಬೆಳೆಸಿಕೊಂಡವರು. ತಂತ್ರಜ್ಞಾನದ ಸಾಧ್ಯತೆಗಳು ಮತ್ತು ಜಾಗತಿಕ ಭೌಗೋಳಿಕ ರಾಜಕೀಯದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ಸಕ್ರಿಯವಾಗಿ ಲೇಖನಗಳನ್ನು ಬರೆಯುತ್ತಾರೆ.


ಇದನ್ನೂ ಓದಿ: ಅಫ್ಘಾನ್‌ನ ಹೊಸ ನಾಯಕರಾಗಲಿರುವ ತಾಲಿಬಾನ್‌‌ ಮುಖಂಡರಿವರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...