ಕಳೆದುಹೋದ ದಿನಗಳು -7
ಗಣಪಯ್ಯವನರ ಹಾರ್ಲೆ ಎಸ್ಟೇಟಿಗೆ ಹಾಗೂ ಅವರ ಬೆಂಬಲದಲ್ಲಿ ಅನೇಕ ಕುಟುಂಬಗಳು ಬರುವುದು ಮುಂದುವರಿದಿತ್ತು. 1962 ರಲ್ಲಿ ಈ ರೀತಿ ಕೊಡಗನ್ನು ಬಿಟ್ಟು ಸಕಲೇಶಪುರಕ್ಕೆ ಬರುವ ಸರದಿ ನನ್ನ ತಂದೆಯ ಕುಟುಂಬದ್ದಾಗಿತ್ತು.
ನನ್ನ ಹಿರಿಯರು ಕೂಡಾ ಕೊಡಗಿನ ವಿರಾಜಪೇಟೆಯ ಪಕ್ಕದ ನರಿಯಂದಡ ಗ್ರಾಮದವರೇ. (ಗಣಪಯ್ಯನವರದೂ ಅದೇ ಗ್ರಾಮ) ನನ್ನ ಅಜ್ಜ ಮಕ್ಕಿಮನೆ ಮಂಜಯ್ಯ. ಅವರನ್ನು ನಾನು ನೋಡಿದ್ದು ಎರಡೇ ಸಲ. ಅದೂ ಅರ್ಧ ದಿನದ ಮಟ್ಟಿಗೆ ಮಾತ್ರ. ಅಪ್ಪ ಅಜ್ಜನ ಬಗ್ಗೆ ಹೆಚ್ಚೇನೂ ಹೇಳುತ್ತಿರಲಿಲ್ಲ.
ಅಜ್ಜ ನೋಡಲು ಸುಮಾರು ಐದೂ ಕಾಲಡಿ ಎತ್ತರದ ಕುಳ್ಳಗಿನ ಆಳು. ಸುಂದರನೂ ಅಲ್ಲ. ಅಜ್ಜಿ ಚೆಂದದವಳು. ನಾನು ಅಜ್ಜಿಯನ್ನು ನೋಡುವಾಗ ಆಕೆಗೆ ಎಪ್ಪತ್ತು ಕಳೆದಿತ್ತು. ಆಗಲೂ ಸುಂದರವಾಗಿಯೇ ಇದ್ದಳು.
ನನ್ನಪ್ಪ ಶಾಲೆಗೆ ಹೋಗುವಾಗಲೇ ಅಜ್ಜ ಪಿತ್ರಾರ್ಜಿತ ಆಸ್ತಿಯನ್ನೆಲ್ಲ ಮಾರಾಟ ಮಾಡಿ ವಿರಾಜಪೇಟೆ ಊರು ಸೇರಿಯಾಗಿತ್ತು. ಹಾಗಾಗಿ ಅಪ್ಪನ ವಿದ್ಯಾಭ್ಯಾಸ ವಿರಾಜಪೇಟೆ ಮತ್ತು ಮಡಿಕೇರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಯಿತು.
ಅಜ್ಜ ಮಂಜಯ್ಯ ಹಲವು ಗುಣಗಳ ಸಂಗಮದಂತಿದ್ದವ. ಅದೊಂದು ದೊಡ್ಡ ಮಳೆಗಾಲದಲ್ಲಿ ಕೊಡಗಿನಲ್ಲಿ ಭೂಕುಸಿತವಾಗಿ ಅಜ್ಜನ ಪಾಲಿನ ಗದ್ದೆಗೆ ಮಣ್ಣು ತುಂಬಿ ನಂತರ ಕೃಷಿ ಸಾದ್ಯವಾಗದೆ ಅಜ್ಜ ಗದ್ದೆಯನ್ನು ಮಾರಿದ ಎಂದು ಅಜ್ಜಿ ಹೇಳುತ್ತಿದ್ದಳು. ಅದು ಅರ್ಧ ಸತ್ಯ ಮತ್ತು ಗಂಡನ ಮುಖವುಳಿಸುವ ಬೆಂಬಲ ಎಂದು ನನ್ನ ಗುಮಾನಿ.

ನನ್ನ ಅತ್ತೆಯರು (ಅಪ್ಪನ ತಂಗಿಯರು) ಹೇಳಿದ ವಿಚಾರವೇ ಬೇರೆ. ಸುಂದರಿಯಾದ ಹೆಂಡತಿಯಿದ್ದರೂ ಅಜ್ಜ ಇನ್ನಿಬ್ಬರು ಮಹಿಳೆಯರ ಜೊತೆ ಸಂಬಂಧವಿಟ್ಟುಕೊಂಡಿದ್ದನಂತೆ!. ಜೊತೆಗೆ ನಾಟಕದ ಹುಚ್ಚು ಬೇರೆ ಇತ್ತು. ಒಬ್ಬ “ಹಂದಿ ತಿನ್ನುವ ಕೊಡಗನ ಜೊತೆ ಸೇರಿ ನಾಟಕದ ಹುಚ್ಚಿನಲ್ಲಿ ಆತ ಮೈಸೂರಿನವರೆಗೂ ಹೋಗುತ್ತಿದ್ದ” ಎಂದು ನನ್ನ ಅಪ್ಪನ ತಂಗಿಯರು ಹೇಳಿದ್ದರು. ಈ ಹಂದಿ ತಿನ್ನುವ ಕೊಡಗ ಬೇರಾರೂ ಅಲ್ಲ ಕೊಡಗಿನ ಶೇಕ್ಸ್ ಪಿಯರ್ ಎಂದು ನಂತರ ಖ್ಯಾತರಾದ ಕವಿ ಹರದಾಸ ಅಪ್ಪಚ್ಚನವರು ಎಂದು ಇತ್ತೀಚೆಗೆ ನನಗೆ ಇಂದಿನ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರಿಯಪ್ಪ ತಿಳಿಸಿದರು. ಹೀಗಿದ್ದರೂ ಅಜ್ಜ ಅಜ್ಜಿ ತುಂಬ ಅನ್ಯೋನ್ಯವಾಗಿ ಇದ್ದರಂತೆ. ಅಜ್ಜನಿಗೆ ಅಜ್ಜಿಯ ಮೇಲೆ ತುಂಬ ಪ್ರೀತಿ ಇತ್ತು ಎಂದೂ ಅತ್ತೆಯರು ಹೇಳುತ್ತಿದ್ದರು.
ಇದೇ ಕಾರಿಯಪ್ಪನವರ ಸೃಷ್ಟಿ ಕೊಡವರಂಗ ನಾಟಕ ತಂಡ ನಮ್ಮ ಬೆಳ್ಳೇಕೆರೆಗೆ ಬಂದಾಗ (1990 ರಲ್ಲಿ) ಅದರಲ್ಲಿ ಹರದಾಸ ಅಪ್ಪಚ್ಚ ಕವಿಗಳ ಮೊಮ್ಮಗ ತ್ಯಾಗರಾಜ ಸಂಗೀತ ನಿರ್ವಹಣೆ ಮಾಡುತ್ತಿದ್ದರು. ಅವರು ನನ್ನ ತಂದೆಯೊಡನೆ ತುಂಬ ಹೊತ್ತು ಮಾತಾಡುತ್ತಿದ್ದರು. (ನಾನು ನಾಟಕೋತ್ಸವದ ಗಡಿಬಿಡಿಯ ಕೆಲಸಗಳಲ್ಲಿ ಇದ್ದುದರಿಂದ ಇವರ ಮಾತುಕತೆಯ ವಿವರಗಳು ತಿಳಿಯಲಿಲ್ಲ)
ಅಜ್ಜ ಮುಂಗೋಪಿಯೂ ಕೂಡಾ. ಸಿಟ್ಟು ಬಂದಾಗ ಒಟ್ಟಿಗೆ ಜೊತೆಯಾಗಿ ಹಿಡಿದು ಎರಡು ಬೀಡಿ ಸೇದುತ್ತಿದ್ದನಂತೆ. ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವವನಲ್ಲ.
ಒಮ್ಮೆ ವಿರಾಜಪೇಟೆಯ ಗಡಿಯಾರ ಕಂಬದ ಬಳಿ (ಅದು ಈಗಲೂ ಇದೆ) ಜನರನ್ನು ಗುಂಪು ಸೇರಿಸಿ ಪಂಚಾಂಗವನ್ನು ಕೈಯಲ್ಲಿ ಹಿಡಿದು ಇದೆಲ್ಲ ಸುಳ್ಳು ನಂಬಬೇಡಿ ಎಂದು ಹೇಳಿ ಸುಟ್ಟು ಹಾಕಿದನಂತೆ. ಆಗ ಜಾತಿ ಬಂಧುಗಳೆಲ್ಲ ಸೇರಿ ಇವನಿಗೆ ಬಹಿಷ್ಕಾರ ಹಾಕೋಣ ಎಂದು ಹೊರಟರಂತೆ. ಆದರೆ ಅಜ್ಜ ಯಾವುದಕ್ಕೂ ಜಗ್ಗಲಿಲ್ಲ.
ನನ್ನಪ್ಪನ ಹಿರಿಯ ತಂಗಿ ವಿಧವೆಯಾಗಿ ಸಣ್ಣ ವಯಸ್ಸಿನಲ್ಲೇ ತವರಿಗೆ ಬಂದಿದ್ದರು. ಗಂಡನ ಮನೆಯಲ್ಲಿ ಬಡತನ. ಇರಲೊಂದು ಗುಡಿಸಲೂ ಇರಲಿಲ್ಲ. ಆಕೆ ಮತ್ತು ಆಕೆ ನಾಲ್ಕು ಮಕ್ಕಳನ್ನೂ ಅಜ್ಜನೇ ಸಾಕಿದ. ಮಗಳ ಇಬ್ಬರು ಹೆಣ್ಣು ಮಕ್ಕಳನ್ನು, ಸಮಾಜವನ್ನೆದುರಿಸಿಕೊಂಡು ನಿಂತು ಬೇರೆ ಜಾತಿಯವರಿಗೆ ತಾನೇ ಧಾರೆಯೆರೆದು ಮದುವೆ ಮಾಡಿದ.
ಕೊನೆಗೆ ಊಟಕ್ಕೂ ಕಷ್ಟವಾದಾಗ ಅದೇ ವಿರಾಜಪೇಟೆಯ ಗಣಪತಿ ದೇವಸ್ಥಾನದಲ್ಲಿ ಪೂಜೆಗೆ ನಿಂತ!
ಅಜ್ಜ ಮಹಾ ಸ್ವಾಭಿಮಾನಿ ಕೂಡಾ. ಸಾಯುವ ಮೊದಲು ತಾನು ಮತ್ತು ತನ್ನ ಹೆಂಡತಿ ಇಬ್ಬರೂ ಸತ್ತಾಗ ಮಕ್ಕಳಿಗೆ ಹೊರೆಯಾಗಬಾರದು ಎಂದು ಖರ್ಚು ಮಾಡಲು ಒಂದಷ್ಟು ಹಣವನ್ನು ಬಟ್ಟೆಯಲ್ಲಿ ಪ್ರತ್ಯೇಕ ಗಂಟು ಕಟ್ಟಿ ಇಟ್ಟಿದ್ದ.!
ಅಜ್ಜ ಒಳ್ಳೆಯ ಬಡಗಿಯೂ ಹೌದು. ಅವರು ಮಾಡಿದ ಶಾಲಾ ಡೆಸ್ಕು, ಬೆಂಚು, ಮರದ ಇತರ ಸಾಮಗ್ರಿಗಳನ್ನು ನೋಡಿದ್ದೇನೆ. ಅಜ್ಜನ ಮರಗೆಲಸದ ಉಪಕರಣಗಳನ್ನು ಆ ನಂತರವೂ ಸಾಕಷ್ಟು ಕಾಲ ನನ್ನ ಹಿರಿಯ ಸೋದರತ್ತೆ ಕಾಪಾಡಿದ್ದರು. ನಂತರ ಏನಾದವು ತಿಳಿಯದು.
ಇಂತ ಅಜ್ಜನಿಗೆ ಸಿ.ಎಂ.ಪೂಣಚ್ಚನವರ ತಂದೆ ಮುತ್ತಣ್ಣನವರ ಒಡನಾಟವಿತ್ತಂತೆ. ಮುತ್ತಣ್ಣನವರು ಒಳ್ಳೆಯ ನಾಟಿ ಪಶುವೈದ್ಯರಂತೆ, ಅವರಲ್ಲಿ ಯಾವುದೇ ಸಮಾರಂಭವಾದರೂ ಮಂಜಯ್ಯನವರಿಗೆ ಕರೆ ಬರುತ್ತಿತ್ತಂತೆ. ವಾಪಸ್ ಬರುವಾಗ ಸಾಕಷ್ಟು ತಿಂಡಿಯೂ ಅಲ್ಲಿಂದ ಬರುತ್ತಿತ್ತಂತೆ. ಇವರಿಬ್ಬರ ಒಡನಾಟದ ಬಗ್ಗೆ ಪೂಣಚ್ಚನವರೂ ಒಮ್ಮೆ ನನ್ನಲ್ಲಿ ಹೇಳಿದ್ದರು. ಅಲ್ಲಿನ ಯಾವುದೋ ಶಾಲೆಗೆ ಅಜ್ಜ ಪೀಠೋಪಕರಣ ತಯಾರಿಸಿ ಕೊಟ್ಟಿದ್ದರಂತೆ.
ಇಂತ ಅಜ್ಜನ ಹಿರಿಯ ಮಗ ನನ್ನಪ್ಪ ನಾರಾಯಣ. ಆರಡಿ ಒಂದಿಂಚು ಎತ್ತರದ ಆಳು, ರೂಪದಲ್ಲಿ ಅಜ್ಜನ ಬದಲು ಅಜ್ಜಿಯ ಹೋಲಿಕೆ ಹೆಚ್ಚು. ಸ್ವಭಾವದಲ್ಲೂ ಅಜ್ಜನ ತದ್ವಿರುದ್ಧ. ಯಾರಿಗೂ ಗಟ್ಟಿಯಾಗಿ ಹೇಳಲಾರದ ಹಿಂಜರಿಕೆಯ ಗುಣ, ಮೃದು ಸ್ವಭಾವ. ತಂಗಿ ವಿಧವೆಯಾಗಿ ಬಂದಾಗ ಮನೆಯಲ್ಲಿ ಕಷ್ಟವಾಗಬಾರದೆಂದು ತಾನು ಮದುವೆಯಾಗದೆ, ತಮ್ಮನಿಗೆ ಮೊದಲು ಮದುವೆ ಮಾಡಿಸಿದರು. ನಂತರ ಅಜ್ಜ ಅಜ್ಜಿಯರ ಒತ್ತಾಯಕ್ಕೆ ತಡವಾಗಿ ಮದುವೆಯಾದರು.
ಅಪ್ಪ ಶಾಲೆಗೆ ಹೋಗುವಾಗ ಮಡಿಕೇರಿಯಲ್ಲಿ ಸಂಬಂಧಿಗಳ ಮನೆಯಲ್ಲಿ ವಾಸ. ವಾರಕ್ಕೊಮ್ಮೆ ಮಡಿಕೇರಿಯಿಂದ ಮೂವತ್ತು ಕಿ.ಮೀ.ದೂರದ ವಿರಾಜಪೇಟೆಗೆ ನಡಿಗೆ. ಅಪ್ಪ ಒಳ್ಳೆಯ ಕ್ರೀಡಾ ಪಟು. ಈಜುವುದರಲ್ಲಿ ಎರಡು ಸಲ ಕೂರ್ಗ್ ಚಾಂಪಿಯನ್ ಆಗಿದ್ದರು. ಶಾಲೆಯಲ್ಲಿ ಪೂಣಚ್ಚನವರು ಅಪ್ಪನ ಹಿರಿಯ ಸಹಪಾಠಿ.
ಅಪ್ಪ ಒಂದಷ್ಟು ಸಂಗೀತ ಕಲಿತಿದ್ದರು. ಹಾರ್ಮೋನಿಯಂ ಮತ್ತು ಕೊಳಲು ನುಡಿಸುತ್ತಿದ್ದರು. ಒಂದು ಕತೆಯನ್ನೂ ಬರೆದಿದ್ದರಂತೆ. ಅವರ ಸಂಗೀತದ ಗುರುಗಳೇ ತಮ್ಮ ಈ ಶಿಷ್ಯನಿಗೆ ಅಂದಿನ ಕಾಲಕ್ಕೆ ಬಹುದೂರವೆನಿಸುವ ಸುಳ್ಯದಿಂದ ಹುಡುಗಿ ಹುಡುಕಿ ಕೊಟ್ಟರು.
ಅಪ್ಪ ಕೆಲಕಾಲ ಮಕ್ಕಳಿಗೆ ಪಾಠ ಹೇಳುತ್ತಿದ್ದರಂತೆ. ನಂತರ ಮುನ್ಸೀಫ್ ಕೋರ್ಟಿನಲ್ಲಿ ಸ್ಟೆನೊ ಆಗಿ ಕೆಲಸ ಮಾಡಿದರು. ಅಪ್ಪ ಟೈಪಿಂಗ್ ಮತ್ತು ಶಾರ್ಟ್ ಹ್ಯಾಂಡ್ ಕಲಿತಿದ್ದರು.

ನಂತರ ಸರ್ಕಾರಿ ಕೆಲಸ ಬೇಡವೆಂದು ಬಿಟ್ಟು ಲಿಪ್ಟನ್ ಟೀ ಕಂಪೆನಿ ಸೇರಿದರು.
ಸುಳ್ಯ ತಾಲ್ಲೂಕಿನಲ್ಲಿ ಬೆಳೆದ, ನನ್ನಮ್ಮ ಗೌರಮ್ಮ ಮದುವೆಯಾಗಿ ಬಂದ ನಂತರ ಅವಳಿಗೆ ಕೊಡಗಿನ ತಂಪು ಹವೆ ಹಿಡಿಸಲಿಲ್ಲ, ಆರೋಗ್ಯ ಕೆಟ್ಟಿತು. ಅಪ್ಪ ಬೇರೆಡೆಗೆ ಹೋಗಿದ್ದರೆ ಅಮ್ಮನ ಆರೋಗ್ಯ ಸುಧಾರಿಸುತ್ತಿತ್ತೋ ಏನೋ. ಅಪ್ಪ ಕೊಡಗನ್ನು ಬಿಟ್ಟು ಹೊರಡುವ ಮನಸ್ಸು ಮಾಡಲೇ ಇಲ್ಲ. ಹೀಗಾಗಿ ಅಮ್ಮ ಜೀವಮಾನದುದ್ದಕ್ಕೂ ಅನಾರೋಗ್ಯದಿಂದ ನರಳಿದಳು.
ಅಪ್ಪ ಅಮ್ಮನ ಮೂರು ಮಕ್ಕಳಲ್ಲಿ ನಾನು ಕೊನೆಯವನು. ನಾನು ಹುಟ್ಟುವ ವೇಳೆಗೇ ನಾನಾ ಕಾರಣಗಳಿಂದ ಮನೆಯಲ್ಲಿ ದರಿದ್ರ ದೇವತೆ ನೆಲೆಸಿದ್ದಳು. ನಂತರ ಇದ್ದ ಒಬ್ಬ ಅಣ್ಣ ಮನೆಯ ಬಡತನವೇ ಕಾರಣವಾಗಿ ಮನೆಬಿಟ್ಟು ಹೋಗಿದ್ದ. ಈ ಎಲ್ಲ ಕಾರಣಗಳಿಂದ ಜರ್ಜರಿತರಾಗಿದ್ದ ಅಪ್ಪ ಸರಿಯಾಗಿ ಕೆಲಸವೂ ಮಾಡಲಾಗದೇ ಕೆಲಸ ಬಿಟ್ಟು ಮನೆಯಲ್ಲಿ ಕುಳಿತರು. ಸುಮಾರು ಒಂದು ವರ್ಷಕಾಲ ಅಪ್ಪ ನಿರುದ್ಯೋಗಿ.
ಆಗ ನೆರವಿಗೆ ಬಂದವರು ಅಪ್ಪನ ಗೆಳೆಯರೂ ಹಾಗೂ ಕೊಡಗಿನ ಅಂದಿನ ವಿದ್ಯಾಧಿಕಾರಿಗಳೂ ಆಗಿದ್ದ ರಾಮದಾಸ್ ಅವರು. ಅವರು ಗಣಪಯ್ಯನವರ ಕುಟುಂಬದವರೇ. ಅವರು ಗಣಪಯ್ಯನವರಿಗೆ ಪತ್ರ ಬರೆದು ಹೀಗೆ ಒಬ್ಬರಿಗೆ ಕೆಲಸ ಕೊಡಲು ಸಾಧ್ಯವೇ ಎಂದು ವಿಚಾರಿಸಿದರು.
ಆಗ ತಾನೇ ತೋಟದ ಕೃಷಿ ಪ್ರಾರಂಭಿಸಿದ ಸಿ.ಎಂ ಪೂಣಚ್ಚನವರ ಪೂರ್ಣಿಮಾ ಎಸ್ಟೇಟ್ ನೋಡಿಕೊಳ್ಳಲು ಯಾರೂ ಇರಲಿಲ್ಲ. ಕೂಡಲೇ ಗಣಪಯ್ಯನವರು ಅಪ್ಪನನ್ನು ಬರಲು ಹೇಳಿದರು. ಅಪ್ಪನಿಗೆ ಪೂಣಚ್ಚನವರ ತೋಟ ಎಂದಾಗ ಸ್ವಲ್ಪ ಹಿಂಜರಿಕೆಯಾಯಿತು. ಶಾಲಾ ಸಹಪಾಠಿ ಅವರು, ಅಲ್ಲಿ ಕೆಲಸಕ್ಕೆ ಸೇರಿದರೆ ಏನಾದರೂ ಹೇಳಲು ಅವರಿಗೂ ಕಷ್ಟ ಹೇಳಿಸಿಕೊಳ್ಳಲು ತನಗೂ ಕಷ್ಟ ಎಂದು ಯೋಚಿಸಿದರು. ಆಗ ಒತ್ತಾಯ ಮಾಡಿ ಗಟ್ಟಿಯಾಗಿ ನಿಂತು ಹೋಗೋಣ ಎಂದವಳು ಅಮ್ಮ.
ಮುಂದೆ ಅಂತ ಯಾವುದೇ ಭಾವನೆಗೆ ಅವಕಾಶವಿಲ್ಲವೆಂದು ಗಣಪಯ್ಯ ತೋರಿಸಿಕೊಟ್ಟರು. ಸಾಕಮ್ಮನವರ ತೋಟದಲ್ಲಿ ಗಣಪಯ್ಯನವರ ಸಹೋದ್ಯೋಗಿಯಾಗಿದ್ದ ಮುತ್ತಣ್ಣ ಎಂಬವರ ಮಗನಿಗೂ ಗಣಪಯ್ಯನವರು ಹಾರ್ಲೆಯಲ್ಲಿ ಉದ್ಯೋಗ ನೀಡಿದ್ದರು.
ಪೂಣಚ್ಚನವರು ಕೂಡಾ ಅಷ್ಟೇ ಕೊನೆಯವರೆಗೂ ಅಪ್ಪನನನ್ನು ನೌಕರನೆಂಬ ಭಾವನೆಗೆ ಅವಕಾಶವೇ ಇಲ್ಲದೆ ಗೆಳೆಯನಂತೆ ಕಂಡರು.
ಹೀಗೆ ಸಕಲೇಶಪುರಕ್ಕೆ ವಲಸೆ ಬಂದ ಅಪ್ಪನಿಗೆ ಪೂಣಚ್ಚನವರ ಪೂರ್ಣಿಮಾ ಎಸ್ಟೇಟ್ ಮತ್ತು ಜೊತೆಯಲ್ಲಿ ಇನ್ನೊಂದು ತೋಟದ ರೈಟರಾಗಿ ಉಸ್ತುವಾರಿ ಸಿಕ್ಕಿತು.
ಅಪ್ಪ ಬಾಲ್ಯವನ್ನು ತೋಟದಲ್ಲಿ ಕಳೆದಿದ್ದುದರಿಂದ ಕೃಷಿಯೇನೂ ಹೊಸತಾಗಿರಲಿಲ್ಲ. ಅದಲ್ಲದೆ ಮೊದಲೇ ಹಿಂಜರಿಕೆಯ ಸ್ವಭಾವದವನಾದ ಅಪ್ಪನಿಗೆ ಎಲ್ಲರಿಂದ ದೂರವಾಗಿ ಈ ರೀತಿ ಅಜ್ಞಾತ ವಾಸದಂತಿದ್ದ ಬದುಕು ಹಿಡಿಸಿರಬೇಕು. ಇಲ್ಲಿಗೆ ಬಂದ ನಂತರ ಒಂಬತ್ತು ವರ್ಷಗಳ ಕಾಲ ಒಂದು ದಿನವೂ ರಜೆ ಹಾಕದೆ ಕೆಲಸಮಾಡಿದರು. ಅಪ್ಪ ಪ್ರಥಮ ಬಾರಿಗೆ ರಜೆ ಹಾಕಿದ್ದು ಅಜ್ಜ ಸತ್ತಾಗ. ಈ ಒಂಭತ್ತು ವರ್ಷಗಳ ಕಾಲ ಅಪ್ಪ ತನ್ನಪ್ಪನನ್ನು ನೋಡಲು ಹೋಗಲೂ ಇಲ್ಲ. ಅಜ್ಜ ಅಜ್ಜಿ ಮಗನನ್ನು ನೋಡಲು ಬಂದದ್ದೂ ಇಲ್ಲ. ವರ್ಷಕ್ಕೆ ಒಂದೋ ಎರಡು ಪತ್ರ ವ್ಯವಹಾರ ಮಾಡಿದರೆ ಅದೇ ಹೆಚ್ಚು. ನನ್ನಕ್ಕ ಅಪ್ಪನಿಗೆ “ಸೈಲಾಸ್ ಮಾರ್ನರ್” ಎಂದು ಗುಟ್ಟಾಗಿ ಹೆಸರಿಟ್ಟಿದ್ದಳು.
ಹೀಗೆ ನನ್ನಪ್ಪನ ಕುಟುಂಬ ಹಾರ್ಲೆ ಸಮುದಾಯದಲ್ಲಿ ಗುರುತಿಸಿಕೊಂಡಿತು. ನಾನಾಗ ಮೂರನೆ ತರಗತಿಯಲ್ಲಿದ್ದೆ. ನನ್ನ ಅಕ್ಕ ವತ್ಸಲಾ ಪ್ರೌಢಶಾಲೆಯಲ್ಲಿದ್ದಳು. ನಾವು ಹಾನುಬಾಳಿನ ಸರ್ಕಾರಿ ಶಾಲೆಗಳಿಗೆ ಸೇರಿದೆವು.
- ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)
ಇದನ್ನೂ ಓದಿ: ಕಳೆದು ಹೋದ ದಿನಗಳು -5: ಗಣಪಯ್ಯ ಎಂಬ ಅನ್ನದಾತ, ಉದ್ಯೋಗದಾತ


