Homeಅಂಕಣಗಳುನಾಗಸುಧೆ ಜಗಲಿಯಿಂದಮಮತೆಯ ಮಮತಾಗೆ 'ಮಯೂರ' ನ ಮನ್ನಣೆ: ಪ್ರಕಾಶ ಕಡಮೆ

ಮಮತೆಯ ಮಮತಾಗೆ ‘ಮಯೂರ’ ನ ಮನ್ನಣೆ: ಪ್ರಕಾಶ ಕಡಮೆ

ಸದಾ ಹೆಣ್ಣಿನ ಅಸ್ಮಿತೆಯ ಕುರಿತಾಗಿ ಕವಿತೆ ಬರೆಯುತ್ತಾ, ಹೆಣ್ಣಿನ ನೋವು, ಅನ್ಯಾಯದ ಕುರಿತಾಗಿ ತೀವ್ರ ಪ್ರತಿಭಟನೆಯ ಉಸಿರಾಗಿರುವ ಮಮತ ಅರಸೀಕೆರೆಯವರ ಕುರಿತು

- Advertisement -
- Advertisement -

ಹಸಿವಲ್ಲೂ ಸೊಗಸಿತ್ತು, ಬಗೆಬಗೆಯ ವಿಧವಿತ್ತು
ಮರಿ ಹಸಿವು, ಮುದಿ ಹಸಿವು,
ಗಂಡು ಹೆಣ್ಣಸಿವು ಮತ ಜಾತಿಯ ಹಂಗಿಲ್ಲದ ಹಸಿವು
ಏಕತೆಯಿತ್ತು ವೈವಿಧ್ಯಮಯಲ್ಲಿ
ಒಗ್ಗಟ್ಟಾಯಿತು ಧರ್ಮ ಗಡಿ ಮೀರಿದ ಭಾವದಲ್ಲಿ

ಎಂಬ ಮಾನವೀಯ ಭಾವನೆಗಳ ಕವಿತೆ ಬರೆಯುತ್ತಾ ಮತ್ತೊಬ್ಬರ ಹಸಿವು, ನೋವು, ಸಂಕಟ, ಸಂಕಷ್ಟಗಳನ್ನು ಅರಿತು ಶಿಕ್ಷಣ-ರಂಗಭೂಮಿ-ತಿರುಗಾಟ, ಸಾಹಿತ್ಯ-ಸಂಘಟನೆಗಳಲ್ಲಿ ತೊಡಗಿಸಿಕೊಂಡು ತನ್ನ ವೃತ್ತಿ ಬದುಕಿಗೆ ಧಕ್ಕೆ ಬರದ ಹಾಗೇ ಸದಾ ಜಾಗೃತೆಯೊಂದಿಗೆ; ಪ್ರಗತಿಪರ ನಿಲುವನ್ನು ಮೈಗೂಡಿಸಿಕೊಂಡು, ಅನ್ಯಾಯ ಕಂಡಲ್ಲೆಲ್ಲಾ ಪ್ರತಿಭಟಿಸುವ ಜನಪರ ನಿಲುವಿನ ಲೇಖಕಿ ಮಮತ ಅರಸೀಕೆರೆ ಇವರಿಗೆ, ಸಾಹಿತ್ಯದ ವಿವಿಧ ಪ್ರಕಾರದಲ್ಲಿ ಗಣನೀಯ ಸೇವೆ ಸಲ್ಲಿಸಿದ ನಲವತ್ತೈದು ವರ್ಷದೊಳಗಿನ ಯುವ ಸಾಹಿತಿಗಳಿಗೆ, ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆಯವರು ಕೊಡ ಮಾಡುವ ರಾಜ್ಯ ಮಟ್ಟದ “ಮಯೂರವರ್ಮ” ಪ್ರಶಸ್ತಿಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ ನೇತೃತ್ವದ ಆಯ್ಕೆ ಸಮಿತಿಯಿಂದ ಇನ್ನಿತರ ನಾಲ್ವರು ಯುವ ಸಾಧಕರೊಂದಿಗೆ ಆಯ್ಕೆ ಮಾಡಿರುವುದು ಅಭಿನಂದನೀಯ.

ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಮತ ಅರಸೀಕೆರೆ

ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿಯಲ್ಲಿ ಜನಿಸಿದ ಮಮತಾಗೆ ತಂದೆ-ತಾಯಿ ಸರಕಾರೀ ನೌಕರಿ ಮಾಡುತ್ತಿದ್ದರಿಂದ ಚಿಕ್ಕಂದಿನಿಂದಲೂ ಬಡತನದ ಅರಿವಿಲ್ಲದಿದ್ದರೂ ಬಡತನಕಾಗಿ ಮಿಡಿಯುವ ಮನಸ್ಸು ಮತ್ತು ಹೃದಯವಿತ್ತು. ಅಪ್ಪ ಅಂಚೆಯಣ್ಣನಾದರೆ, ಅಮ್ಮ ಮಕ್ಕಳ ಹೃದಯದಲ್ಲಿ ಅಕ್ಷರಗಳ ಬೀಜ ಬಿತ್ತುವ ಶಿಕ್ಷಕಿ. ಇದರಿಂದಾಗಿ ಮಮತಾ ಭಾವೈಕ್ಯತೆಯ ಮಡಿಲಲ್ಲೇ ಬೆಳೆದರು. ಊರಿನ ಸುಖ-ದುಃಖ, ನೋವು-ನಲಿವು, ಸಂಭ್ರಮ, ಮಂದಿರ-ಮಸೀದೆಯ ಸುದ್ಧಿ, ಮನಿಆರ್ಡರ್, ಪೆನ್ಷನ್, ದೇಶ ವಿದೇಶಗಳ ಸಣ್ಣ ಸಣ್ಣ ವಿಷಯದ ದೊಡ್ಡ ದೊಡ್ಡ ಸುದ್ದಿಗಳು ಸಂಜೆ ಅಪ್ಪ ಖುಷಿಯಲಿ ವಿವರಿಸುತ್ತಿದ್ದಂತೇ ಮಮತಾರಿಗೆ ಆಗಿನಿಂದಲೇ ಜಗತ್ತಿನ ಜನ ಲೋಕದ ಪರಿಚಯ ಮನೆ ಮಾಡುತ್ತಿದ್ದಂತೇ ಅಮ್ಮನ ಬದುಕು ಕಟ್ಟಿಕೊಳ್ಳುವಿಕೆಯ, ಮನುಷ್ಯ ಸಂಬಂಧದ ಪಾಠ ಮನೆಯಲ್ಲಿಯೂ ನಡೆದುದರಿಂದ, ಚಿಕ್ಕಂದಿನಿಂದಲೂ ಪುಸ್ತಕದ ಗೆಳೆತನ ಬೆಳೆದು ಭಾವನೆಗಳ ಹೊರ ಹಾಕಲೇಬೇಕಾದ ಅನಿವಾರ್ಯತೆ, ಒತ್ತಡಗಳಿಂದ ತಾನು ಅಕ್ಷರ ಲೋಕಕ್ಕೆ ಪಾದಾರ್ಪಣೆ ಮಾಡಬೇಕಾಯಿತು ಎನ್ನುವಾಗ ಇವರ ಕಣ್ಣಲ್ಲಿ ಕ್ರಾಂತಿ-ಶಾಂತಿಯ ಹೊಳಪು ಹೊರಹೊಮ್ಮುತಿತ್ತು. ಬದುಕು ರೂಪಿಸಿದ ಅಮ್ಮ, ಕಥೆಗಳನ್ನು ಹೊತ್ತು ತರುವ ಅಪ್ಪ ಮತ್ತು ಪುಸ್ತಕದ ಒಡನಾಟದ ಓದು ನನ್ನ ಭವಿಷ್ಯತ್ತನ್ನು ರೂಪಿಸಿತು ಎನ್ನುವಾಗ ಮಮತೆಯ ಮಮತಾಳ ಮೊಗದಲ್ಲಿ ವಿಶ್ವಾಸದ ನಗೆ ತುಂಬಿ ತುಳುಕುತ್ತಿತ್ತು.

ಮಮತಾರದು ಬಹುಮುಖ ಪ್ರತಿಭೆಯ ನಗು ಮೊಗದ ಮಗು ಮನಸ್ಸು. ಶಾಲೆಯಲ್ಲಿ ಶಿಕ್ಷಕಿಯಾಗಿ ಆ ಮಕ್ಕಳೊಡನೆಯ ಒಡನಾಟವೇ ಒಂದು ಅವಿಸ್ಮರಣೀಯ ಖುಷಿ ಎಂದು ನೆನೆದು ತಾವೂ ಮಗುವಾಗಿ ಬಿಡುವರು. ಸಾಹಿತ್ಯದೊಂದಿಗೆ ನಾಟಕ-ನಟನೆಯ ಅಭಿರುಚಿಯೂ ಬೆಳೆಯತೊಡಗಿತು. ಸಂಗೀತ-ರಂಗಭೂಮಿಯೂ ಮನದಲ್ಲಿ ಹಸಿರಾಯಿತು. ವಿಜ್ಞಾನ ಪರಿಷತ್ತಿನ ಕೆಲಸವೆಂದರೆ ಮಮತಾಗೆ ಪಂಚ ಪ್ರಾಣ. ಬೀದಿ ನಾಟಕ, ಪಪೆಟ್ ಶೋ, ಚಾರಣ, ಪರಿಸರ ಪಾಠ, ಬೀಜ ಬಿತ್ತುವಿಕೆ, ಗಿಡ ನಡುವದು, ನಟನೆ-ಸಂಘಟನೆಯಿಂದಾಗಿ ರಾಜ್ಯಾದ್ಯಂತ ಪ್ರವಾಸ; ತಮ್ಮ ಇತಿ ಮಿತಿಯ ಸಮಯದಲ್ಲಿ. ಓಡಾಟ ಒಡನಾಟದಿಂದಲೇ ಆತ್ಮಸ್ಥೈರ್ಯ ಎನ್ನುವ ಮಮತಾರಿಗೆ, ಗುರಿ ಉದ್ದೇಶ ಮುಖ್ಯ ಎನ್ನುವ ಕಾರ್ಯ ಸಾಧನೆಯ ಮನಸ್ಸಿದೆ. ಸಂಪ್ರದಾಯಿಕ ಹಿನ್ನೆಲೆಯಿಂದ ಬಂದ ಮಮತಾ ಅಂಜಿಕೆ, ಹಿಂಜರಿಕೆ, ಅಡಗಿಕೊಳ್ಳುವಿಕೆಯನ್ನು ಭೇದಿಸಿ ಸ್ತ್ರೀವಾದಿ ಪಟ್ಟ ಕಟ್ಟಿಕೊಳ್ಳುವಾಗ ಅನೇಕರ ಕೆಂಗಣ್ಣಿಗೂ ಗುರಿಯಾದರು. ಸಂಘಟನೆ-ತಿರುಗಾಟದ ನಡುವೆ ತಮ್ಮ ಸೃಜನಶೀಲತೆ ಬತ್ತಿಹೋಗದಂತೆ ಎಲ್ಲವನ್ನೂ ಕಾಪಿಟ್ಟು ನಿಭಾಯಿಸಿಕೊಂಡು ಬಂದವರು.

ಅರಸೀಕೆರೆಯ ಆ ಸುಂದರ ನೆಲದಲ್ಲಿ ಸುಮಾರು 15 ವರ್ಷಗಳ ಕಾಲ ಮಕ್ಕಳ ಬೇಸಿಗೆ ಶಿಬಿರ, ಮಕ್ಕಳ ನಾಟಕ ನಿರ್ಮಾಣ, ನಾಟಕೋತ್ಸವ, ಸಾಹಿತ್ಯ ಮತ್ತು ಜಾನಪದ ಕಮ್ಮಟಗಳು, ಕವಿಗೋಷ್ಠಿಗಳು, ಮಹಿಳೆಯರು ಮತ್ತು ಮಕ್ಕಳಿಗಾಗಿಯೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಘಟನಾ ಕ್ಷೇತ್ರದಲ್ಲಿ ಮಮತಾ ತಮ್ಮನ್ನು ತಾವೇ ತೊಡಗಿಸಿಕೊಂಡು, ಈ ಪುಟ್ಟ ಊರನ್ನು ಕನ್ನಡ ನಾಡಿಗೇ ಪರಿಚಯಿಸಿ ತಮ್ಮ “ಅರಸೀ ಸಾಂಸ್ಕೃತಿಕ ವೇದಿಕೆ”ಯ ಮುಖಾಂತರ ಹಿರಿಯ ಸಾಹಿತಿಗಳು, ಕಲಾವಿದರು, ರಂಗ ಕರ್ಮಿಗಳು ಈ ಊರನ್ನು ಬೆರಗಿನಿಂದ ಕಾಣಲು ಕಾರಣರಾದವರು ಮಮತ ಅರಸೀಕೆರೆಯವರೇ.

ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ ಮತ್ತು ಸಿಆರ್‌ಪಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮಮತಾ ರಾಜ್ಯ ಶಾಸ್ತ್ರದ ಎಂಎ ಸ್ನಾತಕೋತ್ತರ ಪದವೀಧರೆ. ಹಿಂದಿಯಲ್ಲಿ ಬಿ.ಎ, ಬಿಎಡ್ ಮುಗಿಸಿದ ಇವರು ಅಭಿರುಚಿಗೆ ತಕ್ಕಂತೇ ಸಂಗೀತದ ಜ್ಯೂನಿಯರ್ ಪರೀಕ್ಷೆಯಲ್ಲೂ ತೇರ್ಗಡೆ ಹೊಂದಿರುವರು. ಶಿಕ್ಷಣದಲ್ಲಿ ರಂಗ ಕಲೆ ತರಬೇತಿಯನ್ನು ಎನ್.ಎಸ್.ಡಿ ಬೆಂಗಳೂರು ಮುಖಾಂತರ ಮುಗಿಸಿದ ಇವರು ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣವನ್ನೇ ತಮ್ಮ ಉಸಿರೆಂದು ನಂಬಿದವರು.

ಮಮತಾ ಸಾಂಸ್ಕೃತಿಕ ಸಂಘಟನೆ, ಅನ್ನ ಕೊಡುವ ವೃತ್ತಿ ಮತ್ತು ತಿರುಗಾಟದ ನಡುವೆ ತಾನು ಬರೆದದ್ದನ್ನು ಪ್ರಕಟಿಸಲು ವಿಳಂಬವಾದರೂ ಸಂತೆಯ ಸರಕು (ಕವನ ಸಂಕಲನ) ಕಾಲಡಿಯ ಮಣ್ಣು(ಹಿಂದಿಯಿಂದ ಅನುವಾದ) ಮಕ್ಕಳ ಮೂರು ನಾಟಕ (ವಿವಿಧ ಲೇಖಕರನ್ನೊಳಗೊಂಡು) ಕೃತಿಗಳನ್ನು ಪ್ರಕಟಿಸಿದ್ದು ಸದ್ಯದಲ್ಲಿಯೇ ಎರಡು ಕವನ ಸಂಕಲನ ಮತ್ತು ಒಂದು ಮಕ್ಕಳ ನಾಟಕ ಪುಸ್ತಕ ಹೊರಬರಲಿದೆ. ‘ಸಂತೆಯ ಸರಕು’ ಕವಿತೆಗಳು ಈಗಾಗಲೇ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿದ್ದು ಅದಕ್ಕೆ ಹಾವೇರಿಯ ಕಣವಿ ಕಾವ್ಯ ಪುರಸ್ಕಾರ, ಮಂಡ್ಯದ ಬಿ.ಎಂ.ಶ್ರೀ ಕಾವ್ಯ ಪುರಸ್ಕಾರ, ಬೆಂಗಳೂರಿನ ಹರಿಹರ ಯುವ ಪ್ರತಿಭಾ ಪುರಸ್ಕಾರ ಮತ್ತು ಹರಿಹರ ಶ್ರೀ ಪ್ರಶಸ್ತಿ ದೊರಕಿದೆ. ಅನುವಾದವೆಂದರೆ ಭಾಷೆಯ ಕೊಡ ಕೊಳ್ಳುವಿಕೆ; ಮತ್ತೊಂದು ಸಂಸ್ಕೃತಿಯ ಚಿತ್ರ. ಹಿಂದಿಯಿಂದ ಅನುವಾದ ಮಾಡಿದ ‘ಕಾಲಡಿಯ ಮಣ್ಣು’ ನವಿರಾದ ಭಾಷೆ ಮತ್ತು ವಸ್ತು ವಿನ್ಯಾಸದಲ್ಲಿ ಹೊಸತನದಿಂದ ತುಂಬಿದೆ. ಗೆಳೆಯರಿಂದೊಡಗೂಡಿ ರಚಿಸಿದ ‘ಮಕ್ಕಳ ಮೂರು ನಾಟಕ’ವೂ ವಿಭಿನ್ನ ದೃಷ್ಟಿಕೋನದಿಂದ ಒಳಗೊಂಡಿದ್ದು ಅನೇಕ ರಂಗ ಪ್ರಯೋಗವನ್ನು ಕಂಡು ಪ್ರೇಕ್ಷಕರ ಮನ ಸೂರೆಗೊಂಡಿದೆ.

ಆ ಹುಡುಗಿಯ ನೋವಿನ ಕೂಗು
ಇನ್ನೂ ಮಾರ್ಧನಿಸುತ್ತಲೇ ಇದೆ
ನನ್ನ ಕಿವುಡಿಯ ಮಾಡಯ್ಯ ತಂದೆ
ಆಕೆಯ ಮೇಲಿನ ದೌರ್ಜನ್ಯದ ಕಥೆಯ
ಪದ ಪದಗಳಲಿ ವಿವರಿಸದಂತೆ
ಎನ್ನ ಮೂಕಿಯ ಮಾಡಯ್ಯ ತಂದೆ
ಕಾರಣಕ್ಕೇ ಕಾರಣವಾದ
ದೂರ್ತರನ್ನೆಲ್ಲಾ
ಹೆಳವರ ಮಾಡಯ್ಯ ತಂದೆ
ಕ್ಷಮಿಸು ಹಿಂಸೆಯ ತಾಳಲಾರದ
ಈ ಹಳಹಳಿಕೆ
ಕೊನೆಗೊಳ್ಳಲಿ ಇಂದೆ

ಎನ್ನುವ ಮಮತಾರ ಮನಸ್ಸಿನ ಧ್ವನಿಯು ಸದಾ ಮಕ್ಕಳ, ಮಹಿಳೆಯರ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯ, ಅತ್ಯಾಚಾರದ ವಿರುದ್ಧ ಪ್ರತಿಭಟಿಸುತ್ತಲೇ ಇರುತ್ತದೆ. ಮಮತಾ, ಮಹಿಳೆಯರು ಮತ್ತು ಮಕ್ಕಳಿಗಾಗಿ ಅನೇಕ ಸಾಮಾಜಿಕ ಜನಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವರು.

ಮಮತಾ ರಾಜ್ಯದ ಒಳಗೂ ಹೊರಗೂ ನೂರಾರು ಕವಿಗೋಷ್ಠಿಯಲ್ಲಿ ಭಾಗವಹಿಸಿ ಕೆಲ ಕಾವ್ಯ ಪ್ರೇಮಿಗಳ ಮನದಲ್ಲಿ ಇವರ ಕವಿತೆಗಳು ರಿಂಗಣಿಸುವದು. ಧಾರವಾಡದ ಮೇ ಸಾಹಿತ್ಯ ಮೇಳ, ಸಾಹಿತ್ಯ ಸಂಭ್ರಮ, ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನ, ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗಳ ಅನೇಕ ಕವಿಗೋಷ್ಠಿ, ಮಹಾರಾಷ್ಟ್ರದ ಅಕ್ಕಲಕೋಟೆಯ ಕವಿ ಸಮ್ಮೇಳನ, ಮುಧೋಳದ ರನ್ನ ಉತ್ಸವದ ಕವಿಗೋಷ್ಠಿ, ಮೈಸೂರಿನ ದಸರಾ ಕವಿಗೋಷ್ಠಿ, ಹಂಪಿ ಉತ್ಸವದ ಕವಿಗೋಷ್ಠಿ ಇವುಗಳಲ್ಲಿ ಅತೀ ಮುಖ್ಯವಾಗಿರುತ್ತದೆ.

ಡಾ.ಎಚ್.ಆರ್ ಸ್ವಾಮಿಯವರೊಂದಿಗೆ ವೇದಿಕೆಯಲ್ಲಿ

ತನ್ನ ಈ ಎಲ್ಲಾ ಪ್ರಗತಿಪರ ಧೋರಣೆಗಳ ಕಾರ್ಯಕ್ರಮಕ್ಕೆ ಪ್ರೇರಣೆ ಡಾ.ಎಚ್.ಆರ್ ಸ್ವಾಮಿ ಮತ್ತು ನನ್ನ ಸಾಹಿತ್ಯಕ್ಕೆ ಬೆನ್ನೆಲವಾಗಿ ನಿಂತವರು ಸತೀಶ ಕುಲಕರ್ಣಿ, ಸರಜೂ ಕಾಟ್ಕರ್ ಮತ್ತು ಬರಗೂರ ರಾಮಚಂದ್ರಪ್ಪನವರು ಎನ್ನುವಾಗ ಇವರ ಮೊಗದಲ್ಲಿ ಧನ್ಯತಾ ಭಾವ ಎದ್ದು ಕಾಣುವುದು.

ಅವಳ ಒಂದೊಂದು ಹೆಜ್ಜೆ ಲಯದ ಸೂಕ್ಷ್ಮ ಸದ್ದಾಗಬೇಕು
ಅರಮನೆಯಿಂದ ಆನೆ ಲಾಯದ ದೂರ ಅಳೆಯಬೇಕು
ಅವಳುಟ್ಟ ಬಟ್ಟೆಯಿಂದ ಮುಸುಕು ಮುಚ್ಚಿಕೊಳ್ಳಬೇಕು
ಹೊಸ್ತಿಲ ದಾಟಿ ಪಾದ ಹೊರಗಿಟ್ಟ ಸಮಯ ತಿಳಿಯಬೇಕು
ಅದು ಅರ್ಧರಾತ್ರಿಯೇ ಆಗಿದ್ದರೆ ಸಮಯದ ಸಾಂದ್ರ
ಸವಿಯಬೇಕು
ನಾನೂ ಒಮ್ಮೆ ಅಮೃತಮತಿಯಾಗಬೇಕು.

ಎಂದು ಇವರು ಸದಾ ಹೆಣ್ಣಿನ ಅಸ್ಮಿತೆಯ ಕುರಿತಾಗಿ ಕವಿತೆ ಬರೆಯುತ್ತಾ, ಹೆಣ್ಣಿನ ನೋವು, ಅನ್ಯಾಯದ ಕುರಿತಾಗಿ ತೀವ್ರ ಪ್ರತಿಭಟನೆಯ ಉಸಿರಾಗಿರುವರು.

“ನೀವು ನಿಮ್ಮ ಅರಿವಿನ ಸಮಾಧಿಗೆ ಮೌನದ ಚಾದರ ಹೊದ್ದಿಸಿದ್ದಿರಿ” ಎಂಬ ಮಡುಗಟ್ಟಿದ ನೋವಿನಲ್ಲೂ ಸದಾ ಮೌನದ ನಗುಮೊಗದಲ್ಲೇ ಇಲ್ಲಿ ನಡೆಯುವ ಅನ್ಯಾಯ, ಅನಾಚಾರ, ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸುತ್ತಲೇ ಇರುವ “ನಾಗಸುಧೆ”ಯ ಮಮತೆಯ ಮಮತಾಳಿಗೆ ನಾಡಿನ ಪ್ರತಿಷ್ಠಿತ “ಮಯೂರ ವರ್ಮ” ಪ್ರಶಸ್ತಿಗಾಗಿ ಶುಭ ಹಾರೈಸಿ ಅಭಿನಂದಿಸುವೆನು.

-ಪ್ರಕಾಶ ಕಡಮೆ

ಪ್ರಕಾಶ ಕಡಮೆ

(ಜನಪರ ಕಾಳಜಿಯ ಕವಿ ಪ್ರಕಾಶ ಕಡಮೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಗಾಣದೆತ್ತು ಮತ್ತು ತೆಂಗಿನಮರ, ಆ ಹುಡುಗಿ, ಅಮ್ಮನಿಗೊಂದು ಕವಿತೆ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ)


ಇದನ್ನೂ ಓದಿ: ಸಪ್ತ ಸಾಗರದಾಚೆ ಕನ್ನಡ ಕಹಳೆಯೂದಿದ ನಾಗ ಐತಾಳ -ಪ್ರಕಾಶ ಕಡಮೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...