ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಶುಕ್ರವಾರ ಕರೆದಿದ್ದ ಆನ್‌ಲೈನ್ ಸಭೆಯಲ್ಲಿ ಮಾತನಾಡಿದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಜನರ ವಿಶ್ವಾಸವನ್ನು ಗೆಲ್ಲುವಂತೆ ವಿರೋಧ ಪಕ್ಷಗಳಿಗೆ ಹೇಳಿದ್ದಾರೆ. ಜೊತೆಗೆ ವಿರೋಧ ಪಕ್ಷಗಳು ದೃಡವಾಗಿ ಮತ್ತು ಒಗ್ಗಟ್ಟಿನಿಂದ ಇರಬೇಕು ಎಂದು ಅವರು ತಿಳಿಸಿದ್ದಾರೆ.
“ಸಭೆಯಲ್ಲಿ ಉದ್ಧವ್ ಠಾಕ್ರೆ ಅವರು ಪಕ್ಷಗಳು ಜನರ ವಿಶ್ವಾಸವನ್ನು ಗೆಲ್ಲಬೇಕು ಎಂದು ಒತ್ತಿ ಹೇಳಿದರು. ಇಂದಿನವರೆಗೂ, ವಿರೋಧ ಪಕ್ಷಗಳಲ್ಲಿ ಅಧಿಕಾರದ ಆಸೆ ಇಲ್ಲ. ಆದರೆ ಅಧಿಕಾರದ ಕುರ್ಚಿ ಇದ್ದಾಗಲೂ ವಿರೋಧ ಪಕ್ಷಗಳು ದೃಢವಾಗಿ ಮತ್ತು ಒಗ್ಗಟ್ಟಿನಿಂದ ಇರುತ್ತವೆ ಎಂದು ಜನರು ನಂಬುವಂತಾಗಬೇಕು” ಎಂದು ಉದ್ದವ್ ಠಾಕ್ರೆ ಸಭೆಯಲ್ಲಿ ಹೇಳಿದ್ದಾರೆಂದು ಶಿವಸೇನೆಯ ನಾಯಕ ಸಂಜಯ್ ರಾವತ್ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಮತ್ತೆ ಹೊಂದಾಣಿಕೆಗೆ ಪ್ರಯತ್ನಿಸುತ್ತಿದೆ: ಶಿವಸೇನೆಯ ಹಿರಿಯ ನಾಯಕ
ಶಿವಸೇನೆಯ ರಾಜ್ಯಸಭಾ ಸದಸ್ಯರಾಗಿರುವ ಸಂಜಯ್ ರಾವತ್, ಸೋನಿಯಾ ಗಾಂಧಿ ವೈಯಕ್ತಿಕವಾಗಿ ಎಲ್ಲಾ ನಾಯಕರಿಗೆ ಕರೆ ಮಾಡಿ ಸಭೆಗೆ ಸೇರುವಂತೆ ವಿನಂತಿಸಿದ್ದಾರೆ ಎಂದು ಹೇಳಿದ್ದಾರೆ.
ಸಭೆಯಲ್ಲಿ 19 ವಿರೋಧ ಪಕ್ಷದ ನಾಯಕರು ಭಾಗವಹಿಸಿದ್ದರು. ಎಸ್ಪಿ ನಾಯಕ ಅಖಿಲೇಶ್ ಯಾದವ್ ಸಭೆಯಲ್ಲಿ ಭಾಗವಹಿಸದಿದ್ದರೂ, ಅವರು ತಮ್ಮ ಅನುಪಸ್ಥಿತಿಯನ್ನು ವಿವರಿಸಿ ಸೋನಿಯಾ ಗಾಂಧಿಗೆ ಪತ್ರ ಬರೆದ್ದಾರೆ ಎಂದು ವರದಿಯಾಗಿದೆ.
2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗೂಡುವುದರ ಜೊತೆಗೆ, ಪೆಗಾಸಸ್ ಗೂಢಚಾರ, ರೈತರ ಸಮಸ್ಯೆಗಳು, ಬೆಲೆ ಏರಿಕೆ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯಂತಹ ಹಲವಾರು ಸಮಸ್ಯೆಗಳ ಬಗ್ಗೆ ಆನ್‌ಲೈನ್ ಸಭೆಯಲ್ಲಿ ಚರ್ಚೆಯಾದವು ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ BJP ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು: ಬಿಜೆಪಿ – ಶಿವಸೇನೆ ನಡುವೆ ವಾಕ್ಸಮರ


