ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಲಾಕ್‌ಡೌನ್ ಸಂದರ್ಭದ ಆಹಾರಭತ್ಯೆ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ (KVS) ಇಂದು ರಾಜ್ಯಾದ್ಯಂತ ಹಕ್ಕೊತ್ತಾಯ ಸಲ್ಲಿಸಿದೆ.
ಕೊರೊನಾ ಕಾರಣದಿಂದ 2020ರ ಮಾರ್ಚ್‌ನಿಂದ ಹಾಸ್ಟೆಲ್‌ಗಳು ಮುಚ್ಚಿವೆ. ಇನ್ನು ಕೊರೊನಾ ಪ್ರಕರಣದ ಸಂಖ್ಯೆ ಹೆಚ್ಚಾದಾಗ ಹಾಸ್ಟೆಲ್‌ಗಳನ್ನೆ ಕೊರೊನಾ ಕೇಂದ್ರಗಳನ್ನಾಗಿ ಮಾರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಲ್ಲಿ ಉಳಿಸಿಕೊಳ್ಳದಿದ್ದ ಕಾರಣದಿಂದ ತಮ್ಮ ತಮ್ಮ ಊರುಗಳಿಗೆ ತೆರಳಿದ್ದರು. ಹಾಗಾಗಿ ಅವರ ಪಾಲಿನ ಆಹಾರ ಭತ್ಯೆಯನ್ನು ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಹಾಕಬೇಕೆಂದು ಒತ್ತಾಯಿಸಿದ್ದಾರೆ.

ಕೊರೊನಾ ಕಾಲದಲ್ಲಿಯೂ ವಿದ್ಯಾರ್ಥಿಗಳಿಂದ ಕಾಲೇಜುಗಳು ಶುಲ್ಕ ಕಟ್ಟಿಸಿಕೊಂಡಿವೆ. ಪರೀಕ್ಷಾ ಶುಲ್ಕ ಕಟ್ಟಿಸಿ ಪರೀಕ್ಷೆ ನಡೆಸಿವೆ. ಆದರೆ ಅವರ ಪಾಲಿಗೆ ಬರಬೇಕಿದ್ದ ಆಹಾರ ಭತ್ಯೆ ನೀಡಿಲ್ಲ. ಇದರಿಂದ ಪೋಷಕರು ಮತ್ತು ವಿದ್ಯಾರ್ಥಿಗಳು ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಕೆವಿಎಸ್ ದೂರಿದೆ.
ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಂಚಾಲಕ ಸರೋವರ್ ಬೆಂಕಿಕೆರೆ ನಾನುಗೌರಿ.ಕಾಂ ಜೊತೆ ಮಾತನಾಡಿ “ಇಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರನ್ನು ಭೇಟಿಯಾಗಿ ನಮ್ಮ ಹಕ್ಕೊತ್ತಾಯ ಸಲ್ಲಿಸಿದ್ದೇವೆ. ಅವರು ಕನಿಷ್ಟ 5 ತಿಂಗಳ ಆಹಾರಭತ್ಯೆಯನ್ನು ನೀಡಬೇಕೆಂದು ಮತ್ತು ಈಗ ಹಾಸ್ಟೆಲ್ ಆಂರಭವಾಗಿರುವುದರಿಂದ ಮೂರು ತಿಂಗಳ ಹಣ ಬಿಡುಗಡೆ ಮಾಡಬೇಕೆಂದು ಈ ಕುರಿತು ರಾಜ್ಯ ಹಣಕಾಸು ಇಲಾಖೆಗೆ ಪ್ರಸ್ತಾಪ ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ” ಎಂದರು.
ಉಪನಿರ್ದೇಶಕ ನೋಡೆಲ್ ಅಧಿಕಾರಿ ಸಹ ಆಹಾರ ಭತ್ಯೆ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ನಾವು ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ತರುತ್ತೇವೆ. ಲಾಕ್‌ಡೌನ್ ಸಂದರ್ಭದಲ್ಲಿ ಹಾಸ್ಟೆಲ್ ಅನ್ನೇ ನಂಬಿಕೊಂಡಿದ್ದ ವಿದ್ಯಾರ್ಥಿಗಳು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಕೆಲವರು ಸಾಲ ಮಾಡಿಕೊಂಡಿದ್ದಾರೆ. ಅವರಿಗೆ ಈ ಆಹಾರ ಭತ್ಯೆ ಒದಗಿಸುವುದು ಸರ್ಕಾರದ ಕರ್ತವ್ಯ ಎಂದು ಸರೋವರ್ ತಿಳಿಸಿದ್ದಾರೆ.

ಪ್ರತಿವರ್ಷವೂ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ರಜೆ ಇದ್ದ ಎರಡು ತಿಂಗಳುಗಳ ಆಹಾರ ಭತ್ಯೆಯನ್ನು ನೀಡುತ್ತಿತ್ತು. ಆದರೆ ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಈ ಸಮಯದಲ್ಲಿ ವಿದ್ಯಾರ್ಥಿಗಳ ಆಹಾರಕ್ಕಾಗಿ ಬಿಡುಗಡೆಯಾದ ಹಣ ವಿದ್ಯಾರ್ಥಿಗಳಿಗೆ ಇನ್ನೂ ತಲುಪಿಲ್ಲ. ವಿದ್ಯಾರ್ಥಿಗಳಿಗೆಂದೇ ಬಿಡುಗಡೆಯಾಗಿರುವ ಆಹಾರ ಭತ್ಯೆಯನ್ನು ನೇರವಾಗಿ ವಿದ್ಯಾರ್ಥಿಗಳ ಖಾತೆಗೇ ಹಾಕಬೇಕೆಂದು ಕೆವಿಎಸ್ ಪ್ರಚಾರಾಂದೋಲನ ಆರಂಭಿಸಿದೆ.
ಬೆಂಗಳೂರಿನಲ್ಲಿ ಜಂಟಿ ನಿರ್ದೇಶಕರನ್ನು ಭೇಟಿ ಮಾಡಿದ ನಿಯೋಗದಲ್ಲಿ ಕೆವಿಎಸ್ ಮುಖಂಡರಾದ ಮನೋಜ್, ಮಮತಾ, ಭುವನ್ ಕುಮಾರ್, ಗಜೇಂದ್ರ ಮತ್ತಿತರರು ಇದ್ದರು. ಬೆಂಗಳೂರು ಮಾತ್ರವಲ್ಲದೆ ಕಲಬುರಗಿ, ರಾಮನಗರ, ಕೊಪ್ಪಳ, ಯಲಬುರ್ಗ ಸೇರಿದಂತೆ ವಿವಿದೆಡೆ ಹಕ್ಕೊತ್ತಾಯ ಸಲ್ಲಿಸಲಾಗಿದೆ.

ಇದನ್ನೂ ಓದಿ: ರೈತ ಹೋರಾಟ: ತಾಳ್ಮೆ, ಬದ್ಧತೆ, ಶಿಸ್ತಿನ ಐತಿಹಾಸಿಕ ಹೋರಾಟಕ್ಕೆ 9 ತಿಂಗಳು



ಸರ್… ಇಂದಿಗೂ ನಮ್ಮ ಹಿರಿಯೂರು S/C S/T ಗೆ ಆಹಾರದ ಸರಬರಾಜು ಆಗುತ್ತಿಲ್ಲ ಎಂದು ಬೆಳಗಿನ ಆಹಾರ ವನ್ನು ಮದ್ಯಾಹ್ನ ಅದೇ ಆಹಾರ ನೀಡುತ್ತಿದ್ದಾರೆ ದಯವಿಟ್ಟು ಸಂಭಂದ ಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು … ಸಾಜಕರಣಿಗಳೇ ನಮ್ದು ಮತ ಇದೆ … ನಮ್ಮ ಕಡೆ ಸ್ವಲ್ಪ ಗಮನ ಹರಿಸಿ ಸರ್ಕಾರಕ್ಕೆ ಎಚ್ಚರಿಕೆ…?
ವಿದ್ಯಾರ್ಥಿಗಳು ತಾಳ್ಮೆ ಇಂದ ಇದ್ದೇವೇ ಯಾಕೇ…? ಅತೀ ಬೇಗ ಪರಿಹಾರ ಕೊಡಿ….ಇಲ್ಲವಾದಲ್ಲಿ ಪರಿಣಾಮ….?
UPPI MAHESH
BENKI BENKIKERE