ಪ್ರಖ್ಯಾತ ವನ್ಯಜೀವಿ ಕಾರ್ಯಕರ್ತ ಡಿವಿ ಗಿರೀಶ್ ಮತ್ತು ಅವರ ಸ್ನೇಹಿತರ ಮೇಲೆ ಆಗಸ್ಟ್ 30 ರಂದು ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಶಾಂತವೇರಿಯಲ್ಲಿ ಕುಡಿದ ಅಮಲಿನಲ್ಲಿದ್ದ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗಿರೀಶ್ ಹಾಗೂ ಅವರ ಸ್ನೇಹಿತರು ಚಿಕ್ಕಮಗಳೂರು ಜಿಲ್ಲೆಯ ಮೀಸಲು ಅರಣ್ಯದಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಮೇಲೆ ಈ ದಾಳಿ ನಡೆಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ, ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದ ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ನಾಲ್ಕು ಜನರು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ಚಿಕ್ಕಮಗಳೂರು ಎಸ್‌ಪಿ ಅಕ್ಷಯ್ ಎಂಎಚ್ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ: ಅಲಹಾಬಾದ್ ಹೈಕೋರ್ಟ್ ವಿವಾದಾತ್ಮಕ ನಿಲುವು
ಡಿವಿ ಗಿರೀಶ್ ಅವರು ವೈಲ್ಡ್ ಕ್ಯಾಟ್-ಸಿ ಎಂಬ ಎನ್‌ಜಿಒದ ಸಂಚಾಲಕರಾಗಿದ್ದು ಭದ್ರಾ ಹುಲಿ ಸಂರಕ್ಷಿತ ಪ್ರದೇಶವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಪ್ರತಿಷ್ಠಿತ ಆರ್‌ಬಿಎಸ್ ‘ಹುಲಿಯನ್ನು ರಕ್ಷಿಸಿ’ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ತನ್ನ ಸ್ನೇಹಿತರು ಮತ್ತು ಸ್ನೇಹಿತನ ಮಗಳೊಂದಿಗೆ ಕೆಮ್ಮನಗುಂಡಿ ಬಳಿಯ ಎಸ್ಟೇಟ್‌ನಿಂದ ಶಾಂತವೇರಿಯ ಕಡೆಗೆ ಜೀಪಿನಲ್ಲಿ ಪ್ರಯಾಣಿಸುತ್ತಿದ್ದಾಗ ದುಷ್ಕರ್ಮಿಗಳು ಅವರ ಮೇಲೆ ದಾಳಿ ಮಾಡಿದ್ದಾರೆ.
ಶಾಂತವೇರಿಯಲ್ಲಿ, ಮದ್ಯಪಾನ ಮಾಡಿದ್ದ ಎಂಟು ಮಂದಿ ಯುವಕರು ಗಿರೀಶ್ ಅವರೊಂದಿಗೆ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಬಾಲಕಿಯ ಬಗ್ಗೆ ಅಸಭ್ಯವಾದ ಮಾತುಗಳನ್ನು ಆಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಗಿರೀಶ್ ಮತ್ತು ಅವರ ಸ್ನೇಹಿತ ಯುವಕರಿಗೆ ತಾಕೀತು ಮಾಡಿ ಅವರನ್ನು ಅಲ್ಲಿಂದ ಓಡಿಸಿದ್ದರು.
ಇದನ್ನೂ ಓದಿ: ಕಾರವಾರದಲ್ಲಿ ಹವಳ ದ್ವೀಪದ ಗಿಡುಗ ಕಡಲಾಮೆ ಕಳೇಬರ ಪತ್ತೆ!
ನಂತರ ಆರೋಪಿಗಳು ತಮ್ಮ ಬೈಕ್‌ಗಳ ಮೂಲಕ ಗಿರೀಶ್ ಅವರು ಪ್ರಯಾಣಿಸುತ್ತಿದ್ದ ಜೀಪ್ ಅನ್ನು ಹಿಂಬಾಲಿಸಿ, ಅವರನ್ನು ತಡೆದು, ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ, ಅವರನ್ನು ಹೊರಗೆಳೆದು ಹಲ್ಲೆ ಕೂಡಾ ಮಾಡಿದ್ದಾರೆ. ಹಲ್ಲೆ ನಡೆಸಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೊದಲ್ಲಿ ಆರೋಪಿಗಳು ಗಿರೀಶ್ ಮತ್ತು ಅವರ ಸ್ನೇಹಿತರ ಮೇಲೆ ಹಲ್ಲೆ ನಡೆಸುವುದನ್ನು ಕಾಣಬಹುದಾಗಿದೆ. ಅವರ ಮೇಲೆ ಹಲ್ಲೆ ಇನ್ನೂ ಹೆಚ್ಚಾಗುತ್ತಿದ್ದಾಗ ಸ್ಥಳೀಯರು ಮಧ್ಯಪ್ರವೇಶಿಸಿ ತಡೆದಿದ್ದಾರೆ. ಹಲ್ಲೆಯಿಂದಾಗಿ ಗಿರೀಶ್ ಮತ್ತು ಅವರ ಸ್ನೇಹಿತರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.
“ಆರೋಪಿಗಳು ನೆರೆಯ ಗ್ರಾಮದವರಾಗಿದ್ದಾರೆ. ಐಪಿಸಿಯ ಸೆಕ್ಷನ್‌ಗಳ ಹೊರತಾಗಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 12 (ಲೈಂಗಿಕ ಉದ್ದೇಶದಿಂದ ವರ್ತಿಸುವುದು) ಮತ್ತು 18 (ಅಪರಾಧ ಮಾಡುವ ಪ್ರಯತ್ನ) ಅಡಿಯಲ್ಲಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದು ಚಿಕ್ಕಮಗಳೂರು ಎಸ್‌ಪಿ ಅಕ್ಷಯ್ ಎಂಎಚ್ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದನ್ನೂ ಓದಿ: ಆಸ್ತಿ ಮಾರಾಟ, ಬೆಲೆ ಏರಿಕೆ: ಕರ್ನಾಟಕ ಕಾಂಗ್ರೆಸ್‌ನಿಂದ ’ಬಿಜೆಪಿಯ ಲೂಟಿಯ ವಿರುದ್ದ ಭಾರತ’ ಅಭಿಯಾನ


