ನಲವತ್ತು ಲಕ್ಷ ಕಟ್ಟಡ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರಿಗೆ ಕೋವಿಡ್ ಲಸಿಕೆ ಕೊಡುವ ಯೋಜನೆ ಹಾಕಿ ಕಾರ್ಮಿಕ ಕಲ್ಯಾಣ ಮಂಡಳಿಯ 312 ಕೋಟಿ ಲೂಟಿಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹಾಗೂ ಮಂಡಳಿಯ ಅಧಿಕಾರಿಗಳು ಯತ್ನಿಸುತ್ತಿದ್ದಾರೆ ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ರಾಜ್ಯ ಉಪಾಧ್ಯಕ್ಷ ಹರೀಶ್ ನಾಯ್ಕ್ ಆರೋಪಿಸಿದ್ದಾರೆ.
ಕಾರ್ಮಿಕ ಮಂತ್ರಿ ಶಿವರಾಮ್ ಹೆಬ್ಬಾರ್ ಕಾರ್ಮಿಕರಿಗೆ ಕೋವಿಡ್ ಲಸಿಕೆ ವಿತರಣೆಗೆಂದು 312 ಕೋಟಿ ರೂಗಳನ್ನು ಖಾಸಗಿ ಆಸ್ಪತ್ರೆ ಮಾಲೀಕರಿಗೆ ಧಾರೆಯೆರೆಯಲು ಮುಂದಾಗಿರುವುದು ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟ ನಿಧಿಯ ದುರ್ಬಳಕೆಯೆಂದು ಅವರು ಕಿಡಿಕಾರಿದ್ದಾರೆ.
ಕಾರ್ಮಿಕ ಸಚಿವರು, ಕಾರ್ಮಿಕ ಕಲ್ಯಾಣ ಮಂಡಳಿ ಅಧಿಕಾರಿಗಳು ಮತ್ತು ಖಾಸಗಿ ಆಸ್ಪತ್ರೆ ಧಣಿಗಳ ನಡುವೆ ನಡೆದ ಮಾತುಕತೆ ವೇಳೆ ರಾಜ್ಯದ 30 ಲಕ್ಷ ನೋಂದಾಯಿತ ಕಾರ್ಮಿಕರಿಗೆ ಮತ್ತು 10 ಲಕ್ಷ ವಲಸೆ ಕಾರ್ಮಿಕರಿಗೆ ಪ್ರತಿ ಲಸಿಕೆಗೆ 780 ರೂ ದರದಲ್ಲಿ ಕೋವಿಡ್ ಲಸಿಕೆ ಕೊಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಕಾರ್ಮಿಕ ಕಲ್ಯಾಣ ಮಂಡಳಿಯ ನಿಧಿ ಪೋಲು ಮಾಡುವ ಕೆಲಸ ಇದಾಗಿದೆ. ಏಕೆಂದರೆ ಸರ್ಕಾರವೇ ನೇರವಾಗಿ ಉಚಿತ ಲಸಿಕೆ ನೀಡಬೇಕಾದರೆ ಇಲ್ಲಿ ಮಾತ್ರ ಏಕೆ ಹಣ ನೀಡಬೇಕು? ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಾಗಿರುವ ಈ ನಿಧಿ ದುರ್ಬಳಕೆಗೆ ಸಚಿವರು ಮತ್ತು ಮಂಡಳಿಯ ಅಧಿಕಾರಿಗಳ ಕೂಟ ಪ್ರಯತ್ನ ನಡೆಸಿದೆಯೆಂದು ನಾಯ್ಕ್ ಹೇಳಿದ್ದಾರೆ.

ಈಗಾಗಲೇ ಕಾರ್ಮಿಕ ಇಲಾಖೆಯಲ್ಲಿ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಹಲವು ಅವ್ಯವಹಾರ ನಡೆಸಲಾಗಿದೆ. ಟೂಲ್ ಕಿಟ್, ರೇಶನ್ ಕಿಟ್, ಬೂಸ್ಟಪ್ ಕಿಟ್, ಸುರಕ್ಷಾ ಕಿಟ್, ಕಂಪ್ಯೂಟರ್ ಖರೀದಿ, ಹೊಸ ತಂತ್ರಾಂಶ ಅಳವಡಿಕೆ, ಟಿವಿ ಖರೀದಿ, ಇನೋವಾ ಕಾರ್ ಖರೀದಿಯಲ್ಲಿ ಕೋಟ್ಯಾಂತರರೂ ಗೋಲ್ಮಾಲ್ ನಡೆಸಲಾಗಿದೆ. ಇದಲ್ಲದೆ ಮಂಡಳಿಯ 2688.90 ಕೋಟಿ ರೂ.ವಿವಿಧ ಬಾಬತ್ತುಗಳಿಗೆ 2021-22ನೇ ಸಾಲಿನಲ್ಲಿ ವ್ಯಯಿಸಲು ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಅವಕಾಶ ಬಳಸಿಕೊಂಡು ಕಾರ್ಮಿಕ ಮಂತ್ರಿ ಹೆಬ್ಬಾರ್, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮತ್ತು ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಯದರ್ಶಿ ಕೋಟಿ ಕಬಳಿಸಲು ನೋಡುತ್ತಿದ್ದಾರೆ. ಬಡ ಕಾರ್ಮಿಕರ ಹೆಸರಲ್ಲಿ ನಡೆಯುತ್ತಿರುವ ಹಗಲು ದರೋಡೆಯಿದು. ಇದಕ್ಕೆ ಕಡಿವಾಣ ಹಾಕಬೇಕಿದೆಯೆಂದು ಹರೀಶ್ ನಾಯ್ಕ್ ಹೇಳಿದ್ದಾರೆ.
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸೆಸ್ ರೂಪದಲ್ಲಿ ಸಂಗ್ರಹಿಸಿದ 10,000 ಕೋಟಿಗೂ ಅಧಿಕ ಹಣವಿದೆ. ಅದನ್ನು ಕಾರ್ಮಿಕ ಕಲ್ಯಾಣ ಉದ್ದೇಶಕ್ಕಾಗಿ ಮಾತ್ರ ಬಳಸಬಹುದಾಗಿದೆ. ಆದರೆ ರೇಷನ್ ಕಿಟ್, ಲಸಿಕೆ ಹೆಸರಲ್ಲಿ ಅದನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಪದೇ ಪದೇ ಕೇಳಿಬರುತ್ತಿದೆ.
ಈಗಾಗಲೇ ಖಾಸಗಿ ಶಾಲೆಗಳು ಲಸಿಕೆ ನೀಡಲು ಹಲವು ಕೋಟಿ ರೂ ಪಾವತಿಸಲಾಗಿದೆ ಮತ್ತು ಕಾರ್ಯಾದೇಶ ನೀಡಲಾಗಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ. ನಾವು ಖರ್ಚು ಮಾಡುತ್ತಿರುವುದು ಕಡಿಮೆ ಮೊತ್ತ. ಉಚಿತ ಸರ್ಕಾರಿ ಲಸಿಕೆ ತಡವಾಗುವುದರಿಂದ ಪಾವತಿ ಮಾಡುತ್ತಿದ್ದೇವೆ ಎಂದು ತಮ್ಮ ನಡೆಯನ್ನು ಸಚಿವ ಶಿವರಾಮ್ ಹೆಬ್ಬಾರ್ ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ: ಹೆಬ್ಬಾರ್‌ರ ಯಲ್ಲಾಪುರದಿಂದ ಸ್ಪರ್ಧೆಗೆ ದೇಶಪಾಂಡೆ ಮಗ ಸಜ್ಜು


