ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಿಎಂ ಸ್ಥಾನವನ್ನು ಉಳಿಸಿಕೊಳ್ಳಲು ತಮ್ಮ ಸ್ವಕ್ಷೇತ್ರ ಭವಾನಿಪುರದಿಂದ ಚುನಾವಣೆಗೆ ಇಳಿಯುತ್ತಿದ್ದಾರೆ. ಬಂಗಾಳದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ಟಿಎಂಸಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

ವಿಧಾನಸಭಾ ಚುನಾವಣೆಯಲ್ಲಿ ತನ್ನ ಸ್ವಕ್ಷೇತ್ರ ಭವಾನಿಪುರ ಬಿಟ್ಟು, ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಸುವೆಂದು ಅಧಿಕಾರಿ ವಿರುದ್ಧ ನಂದಿಗ್ರಾಮದಿಂದ ಮಮತಾ ಬ್ಯಾನರ್ಜಿ ಸ್ಪರ್ಧಿಸಿದ್ದರು. ಗೆಲುವು ಇನ್ನೆನ್ನು ದಕ್ಕಿತು ಎನ್ನುವ ಹಂತದಲ್ಲೇ ಸುವೆಂದು ಅಧಿಕಾರಿ ಗೆಲುವು ದಾಖಲಿಸಿದ್ದರು.

ನಂದಿಗ್ರಾಮ ಫಲಿತಾಂಶದ ವಿರುದ್ಧ ಮಮತಾ ಬ್ಯಾನರ್ಜಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ. ಇದೇ ಸಮಯದಲ್ಲಿ ತಮ್ಮ ಸಿಎಂ ಸ್ಥಾನ ಉಳಿಸಿಕೊಲ್ಳುವ ಸಲುವಾಗಿ ತಮ್ಮ ಭದ್ರಕೋಟೆ ಭವಾನಿಪುರದಿಂದ ಕಣಕ್ಕಿಳಿಯುತ್ತಿದ್ದಾರೆ.

ಇದನ್ನೂ ಓದಿ: ಮಮತಾ ಬ್ಯಾನರ್ಜಿ ಸ್ಪರ್ಧಿಸುವ ಭವಾನಿಪೋರ್ ಸೇರಿ 3 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ

ಸೆಪ್ಟಂಬರ್ 30 ರಂದು ಪಶ್ಚಿಮ ಬಂಗಾಳದ ಭವಾನಿಪುರ ಸೇರಿ 3 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ. ಅಕ್ಟೋಬರ್ 3 ರಂದು ಫಲಿತಾಂಶ ಘೋಷಣೆಯಾಗಲಿದೆ.

ಮುರ್ಷಿದಾಬಾದ್‌ನ ಜಂಗೀಪುರ ಕ್ಷೇತ್ರದಿಂದ ಮಾಜಿ ಸಚಿವ ಜಾಕಿರ್ ಹುಸೇನ್, ಸಮ್‌ಸೇರ್‌ಗಂಜ್ ಕ್ಷೇತ್ರದಿಂದ ಅಮಿರುಲ್ ಇಸ್ಲಾಂ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಟ್ವೀಟ್ ಮಾಡಿದೆ. ಈ ಎರಡೂ ಕ್ಷೇತ್ರಗಳ ಶಾಸಕರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದರು.

ಪಶ್ಚಿಮ ಬಂಗಾಳ ರಾಜ್ಯದ ಸಾಂವಿಧಾನಿಕ ತುರ್ತುಸ್ಥಿತಿ ಮತ್ತು ವಿಶೇಷ ವಿನಂತಿಯನ್ನು ಪರಿಗಣಿಸಿ, ಎಸಿ 159 – ಭವಾನಿಪುರಕ್ಕೆ ಉಪಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಕೊರೊನಾ ಹಿನ್ನೆಲೆ ಆಯೋಗವು ಹೆಚ್ಚಿನ ಎಚ್ಚರಿಕೆಯಂತೆ ಹೆಚ್ಚು ಕಟ್ಟುನಿಟ್ಟಾದ ಕ್ರಮಗಳನ್ನು ಸೂಚಿಸಿದೆ ಎಂದು ತಿಳಿಸಿದೆ.


ಇದನ್ನೂ ಓದಿ: ಬಿಜೆಪಿಯನ್ನು ಸೋಲಿಸಲು ವಿಪಕ್ಷಗಳು ಒಂದಾಗಬೇಕು: ಮಮತಾ ಬ್ಯಾನರ್ಜಿ

LEAVE A REPLY

Please enter your comment!
Please enter your name here