ಪೌರತ್ವ ತಿದ್ದುಪಡಿ ಕಾಯ್ದೆ – 2019 ಜಾತ್ಯಾತೀತ ತತ್ವಗಳಿಗೆ ವಿರುದ್ಧವಾಗಿದ್ದು ಅದನ್ನು ಒಕ್ಕೂಟ ಸರ್ಕಾರ ಹಿಂಪಡೆಯಬೇಕೆಂದು ತಮಿಳುನಾಡು ಅಸೆಂಬ್ಲಿ ಇಂದು ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿತು.
ಈ ಕಾನೂನನ್ನು ಹಿಂಪಡೆಯುವ ಮೂಲಕ ಒಕ್ಕೂಟ ಸರ್ಕಾರವು ಐಕ್ಯತೆ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡಬೇಕು ಮತ್ತು ಖಾತರಿಗೊಳಿಸಬೇಕು ಎಂದು ತಮಿಳುನಾಡು ಸಿಎಂ ಸ್ಟಾಲಿನ್ ನಿರ್ಣಯ ಮಂಡಿಸಿದರು. ಬಿಜೆಪಿ ಸದಸ್ಯರು ಸದನದಿಂದ ಹೊರನಡೆದರೆ ಅದರ ಮಿತ್ರಪಕ್ಷವಾದ ಎಐಎಡಿಎಂಕೆ ಪಕ್ಷದ ಸದ್ಯಸರು ಸದನದಲ್ಲಿ ಹಾಜರಿರಲಿಲ್ಲ. ಬಿಜೆಪಿಯ ಮತ್ತೊಂದು ವಿರೋಧ ಪಕ್ಷ ಪಿಎಂಕೆ ನಿರ್ಣಯವನ್ನು ಬೆಂಬಲಿಸಿತು.
ಎಐಎಡಿಎಂಕೆ ಪಕ್ಷವು ಸಿಎಎ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಕಡೆ ಬೆಂಬಲಿಸಿತ್ತು. ಆದರೆ ತಮಿಳುನಾಡಿನಲ್ಲಿ ಅದಕ್ಕೆ ಭಾರೀ ಪ್ರತಿರೋಧ ವ್ಯಕ್ತವಾದ ನಂತರ ತನ್ನ ಪ್ರಣಾಳಿಕೆಯಲ್ಲಿ ಸಿಎಎ ವಿರುದ್ಧ ನಿಲುವು ತೆಗೆದುಕೊಂಡಿತ್ತು. ಈಗ ಸಿಎಎ ವಿರುದ್ಧ ನಿರ್ಣಯ ಮಂಡಿಸುವಾಗಿ ಸದನಕ್ಕೆ ಗೈರು ಹಾಜರಿಯಾಗಿದೆ.
ನಿನ್ನೆ ತಾನೇ ಮೂರು ಕೃಷಿ ಕಾನೂನುಗಳ ವಿರುದ್ಧ ನಿರ್ಣಯ ಕೈಗೊಂಡಿದ್ದ ತಮಿಳುನಾಡು ವಿಧಾನಸಭೆ ಇಂದು ಸಿಎಎ ವಿರುದ್ಧ ನಿರ್ಣಯ ಕೈಗೊಂಡಿದೆ. ಆ ಮೂಲಕ ಡಿಎಂಕೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಿದೆ.
ಇದನ್ನೂ ಓದಿ; ಬಂಗಾಳ ಉಪಚುನಾವಣೆ: ಮಮತಾ ಬ್ಯಾನರ್ಜಿ ಎದುರು ಸ್ಪರ್ಧಿಸದಿರಲು ಕಾಂಗ್ರೆಸ್ ನಿರ್ಧಾರ


