ಗುಜರಾತ್‌ನಲ್ಲಿ ನಿನ್ನೆಯಷ್ಟೆ ರಾಜೀನಾಮೆ ನೀಡಿದ ಮಾಜಿ ಮುಖ್ಯಮಂತ್ರಿ ವಿಜಯ ರೂಪಾನಿ ಅವರ ಸ್ಥಾನಕ್ಕೆ ಗುಜರಾತಿನ ಶಾಸಕ ಭೂಪೇಂದ್ರ ಪಟೇಲ್ ಆಯ್ಕೆಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಈಗಾಗಲೆ ಗುಜರಾತ್ ಪಕ್ಷದ ಶಾಸಕಾಂಗ ಪಕ್ಷದ ನೂತನ ನಾಯಕನಾಗಿ ಅವರು ಆಯ್ಕೆಯಾಗಿದ್ದಾರೆ ಎಂದು ಒಕ್ಕೂಟ ಸರ್ಕಾರದ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಗುಜರಾತ್ ಮುಖ್ಯಮಂತ್ರಿಯಾಗಿದ್ದ ವಿಜಯ್ ರೂಪಾನಿ ಅವರು ಶನಿವಾರ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯದಲ್ಲಿ ಚುವಾವಣೆ ನಡೆಯಲು ಇನ್ನೂ ಒಂದು ವರ್ಷ ಬಾಕಿಯಿರುವಾಗ ಈ ಧಿಡೀರ್ ರಾಜೀನಾಮೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.
ಇದನ್ನೂ ಓದಿ: ‘ಕೊರೊನಾ ದುರಾಡಳಿತಕ್ಕಾಗಿ ರಾಜೀನಾಮೆ ನೀಡಿದ್ದರೆ ಗುಜರಾತಿನ ಜನ ಮೆಚ್ಚುತ್ತಿದ್ದರು’ – ಜಿಗ್ನೇಶ್ ಮೇವಾನಿ
“ಹೊಸ ಶಕ್ತಿಯೊಂದಿಗೆ ರಾಜ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು, ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ” ಎಂದು ರೂಪಾನಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಗುಜರಾತ್ ಬಿಜೆಪಿಯ ಹಿರಿಯ ನಾಯಕರಾಗಿರುವ ಭೂಪೇಂದ್ರ ಪಟೇಲ್ ಅವರು ರಾಜ್ಯದ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರ ಆಪ್ತರಾಗಿದ್ದಾರೆ. ಅಹ್ಮದಾಬಾದ್‌ನ ಘಾಟ್ಲೋಡಿಯಾ ಕ್ಷೇತ್ರದ ಶಾಸಕರಾಗಿದ್ದಾರೆ.
ರೂಪಾನಿ ರಾಜೀನಾಮೆಗೆ ಪ್ರತಿಕ್ರಿಯಿಸಿರುವ ಗುಜರಾತಿನ ಶಾಸಕ ಜಿಗ್ನೇಶ್ ಮೇವಾನಿ, “ಗುಜರಾತ್ ಸಿಎಂ ವಿಜಯ್ ರೂಪಾನಿ ರಾಜೀನಾಮೆ ನೀಡಿದ್ದಾರೆ. ಕೋವಿಡ್ ಬಿಕ್ಕಟ್ಟಿನ ನಿರ್ವಹಣೆಗಾಗಿ ರೂಪಾನಿ ರಾಜೀನಾಮೆ ನೀಡಿದ್ದರೆ ಗುಜರಾತಿನ ಜನರು ಮೆಚ್ಚುತ್ತಿದ್ದರು. 2022 ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಲೆಕ್ಕಾಚಾರಕ್ಕಾಗಿ ಈ ರಾಜೀನಾಮೆ ನೀಡಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ರಾಜೀನಾಮೆ


