ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತಿಹಾದುಲ್ ಮುಸ್ಲಿಮೀನ್ (AIMIM) ನಾಯಕ ಅಸಾದುದ್ದೀನ್ ಒವೈಸಿ ಮತ್ತು ಬಿಜೆಪಿ ಒಂದೇ ತಂಡವಾಗಿದ್ದು, ರೈತರು ಅವರ ನಡೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಎಂದು ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕ ರಾಕೇಶ್ ಟಿಕಾಯತ್ ಮಂಗಳವಾರ ಹೇಳಿದ್ದಾರೆ.
“ಒವೈಸಿ ಮತ್ತು ಬಿಜೆಪಿ ಒಂದೇ ತಂಡವಾಗಿದ್ದು, ಅವರು ಬಿಜೆಪಿಯ ‘ಚಾಚಾ ಜಾನ್’ ಆಗಿದ್ದಾರೆ. ಅವರಿಗೆ ಬಿಜೆಪಿಯ ಆಶೀರ್ವಾದವಿದೆ. ಅವರು ಬಿಜೆಪಿ ವಿರುದ್ದ ಮಾತನಾಡಿದರೂ, ಅವರ ವಿರುದ್ಧ ಪಕ್ಷ ಕೇಸು ದಾಖಲಿಸುವುದಿಲ್ಲ. ಬಿಜೆಪಿ ಅವರ ಸಹಾಯವನ್ನು ತೆಗೆದುಕೊಳ್ಳುತ್ತದೆ. ರೈತರು ಅವರ ನಡೆಗಳನ್ನು ಅರ್ಥಮಾಡಿಕೊಳ್ಳಬೇಕು” ಎಂದು ಟಿಕಾಯತ್ ಹೇಳಿದ್ದಾರೆ.
“ಒವೈಸಿ ದ್ವಿಮುಖ ವ್ಯಕ್ತಿಯಾಗಿದ್ದು, ಅವರು ರೈತರನ್ನು ಹಾಳು ಮಾಡುತ್ತಾರೆ. ಚುನಾವಣೆ ಸಮಯದಲ್ಲಿ ಅವರು ಪಿತೂರಿಗಳನ್ನು ಮಾಡುತ್ತಾರೆ” ಎಂದು ಟಿಕಾಯತ್ ಹೇಳಿದ್ದಾರೆ.
ಇದನ್ನೂ ಓದಿ: ಯುಪಿ ವಿಧಾನಸಭೆ ಚುನಾವಣೆ-2022: 100 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ AIMIM
ಹೈದರಾಬಾದ್‌ನಲ್ಲಿ ಪ್ರಬಲವಾಗಿರುವ ಒವೈಸಿ ಅವರ ಪಕ್ಷವಾದ AIMIM ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸುಮಾರು ನೂರು ಅಭ್ಯರ್ಥಿಗಳನ್ನು ನಿಲ್ಲಿಸುತ್ತಿರುವುದಾಗಿ ಘೋಷಿಸಿದೆ. ಕಳೆದ ಬಾರಿ ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿದ್ದ AIMIM ಐದು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿತ್ತು. ಆದರೆ ಅಲ್ಲಿ ಬಿಜೆಪಿ ವಿರೋಧಿ ಅಲೆಯಿದ್ದರೂ ಬಿಜೆಪಿ ಮೈತ್ರಿ ಮತ್ತೆ ಅಧಿಕಾರ ಹಿಡಿದಿತ್ತು.
“ಸರ್ಕಾರವು ನಮ್ಮ ಬೇಡಿಕೆಗಳನ್ನು ಒಪ್ಪುದೆ ಕಾನೂನುಗಳನ್ನು ರದ್ದುಗೊಳಿಸುವುದಿಲ್ಲವೊ ಅಲ್ಲಿವರೆಗೂ ಪ್ರತಿಭಟನೆ ಮುಂದುವರಿಯುತ್ತದೆ. ಎಷ್ಟೆ ವರ್ಷಗಳಾಗಲಿ ನಾವು ದೆಹಲಿ ಗಡಿಯಿಂದ ಕದಲುವುದಿಲ್ಲ. ನಮ್ಮ ಕೊನೆಯ ಉಸಿರು ಇರುವವರೆಗೂ ನಾವು ಹೋರಾಡುತ್ತೇವೆ. ಸರ್ಕಾರಕ್ಕೆ ಹೆಚ್ಚು ಪ್ರೀತಿಯಿರುವುದು ರೈತರ ಮೇಲೋ ಅಥವಾ ಕಾರ್ಪೋರೇಟ್ ಮೇಲೋ ಎಂದು ಹೇಳಬಬೇಕು” ಎಂದು ಟಿಕಾಯತ್ ಹೇಳಿದ್ದಾರೆ.
“ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಕಾನೂನುಗಳನ್ನು ಪರಿಚಯಿಸುವವರೆಗೂ ರೈತರಿಗೆ ಲಾಭ ಸಿಗುವುದಿಲ್ಲ. ಒಕ್ಕೂಟ ಸರ್ಕಾರವನ್ನು ಕಾರ್ಪೊರೇಟ್‌ಗಳು ನಡೆಸುತ್ತಿದ್ದಾರೆ” ಎಂದು ಟಿಕಾಯತ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಯುಪಿ ಎಲೆಕ್ಷನ್-2022: ‘ಎಸ್‌ಪಿ ಜೊತೆ ಮೈತ್ರಿ’ ಎಂಬ ವರದಿ ನಿರಾಕರಿಸಿದ AIMIM


