ಯುಪಿ ಎಲೆಕ್ಷನ್-2022: ಎಸ್‌ಪಿ ಜೊತೆ ‘ಮೈತ್ರಿ’ ಎಂಬ ವರದಿ ನಿರಾಕರಿಸಿದ AIMIM | NaanuGauri

ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಪಕ್ಷ ಸಿದ್ಧವಾಗಿದೆ ಎಂಬ ವರದಿಗಳನ್ನು ಆಲ್‌ ಇಂಡಿಯಾ ಮಜ್ಲಿಸ್-ಎ-ಇತ್ತಿಹಾದುಲ್ ಮುಸ್ಲೀಮೀನ್ (AIMIM) ನಿರಾಕರಿಸಿದೆ. ಉತ್ತರ ಪ್ರದೇಶದಲ್ಲಿ ಮುಸ್ಲಿಮರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದರೆ ಎಸ್‌ಪಿ ಜೊತೆ ಕೈಜೋಡಿಸಲು ತಮ್ಮ ಪಕ್ಷ ಸಿದ್ಧವಾಗಿದೆ ಎಂದು AIMIM ಅಧ್ಯಕ್ಷ ಅಸದುದ್ದೀನ್ ಒವೈಸಿ ಹೇಳಿದ್ದಾರೆ ಎಂದು ಅನೇಕ ಮಾಧ್ಯಮಗಳು ಶನಿವಾರ ವರದಿ ಮಾಡಿದ್ದವು.

ಉತ್ತರ ಪ್ರದೇಶದ 2022 ರ ವಿಧಾನಸಭಾ ಚುನಾವಣೆಗೆ ತನ್ನ ಮೈತ್ರಿಕೂಟವಾದ ಭಾಗಿದರಿ ಸಂಕಲ್ಪ ಮೋರ್ಚಾವು ಸಮಾಜವಾದಿ ಪಕ್ಷದ ಜೊತೆಗೆ ಮೈತ್ರಿಗೆ ನಿರ್ಧರಿಸಿದರೆ ತನಗೆ ಯಾವುದೆ ಆಕ್ಷೇಪವಿಲ್ಲ ಎಂದು AIMIM ಹೇಳಿದೆ ಎಂದು ಈ ವರದಿಗಳು ಉಲ್ಲೇಖಿಸಿದ್ದವು.

ಇದನ್ನೂ ಓದಿ: ಕೊರೊನಾ ಕಾರಣ ಸದನದಲ್ಲಿ ಪ್ರಶ್ನೋತ್ತರ ವೇಳೆ ಇಲ್ಲ, ಆದರೆ ವಿದ್ಯಾರ್ಥಿಗಳಿಗೆ ಮಾತ್ರ ಜೆಇಇ, ನೀಟ್ ಪರೀಕ್ಷೆ: ಒವೈಸಿ

ಸುಹೆಲ್ದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ನೇತೃತ್ವದಲ್ಲಿ ಒಟ್ಟು ಹತ್ತು ಪಕ್ಷಗಳು ಮೈತ್ರಿ ಮಾಡಿಕೊಂಡಿದೆ. ಮೈತ್ರಿಗೆ ಭಾಗಿದರಿ ಸಂಕಲ್ಪ ಮೋರ್ಚಾ (ಬಿಎಸ್‌ಎಂ) ಎಂದು ಕರೆಯಲಾಗಿದ್ದು, AIMIM ಪಕ್ಷ ಕೂಡ ಈ ಮೈತ್ರಿಕೂಟದ ಭಾಗವಾಗಿದೆ.

ಈ ತಿಂಗಳ ಆರಂಭದಲ್ಲಿ, AIMIM ನಾಯಕ ಅಸಿಮ್ ವಾಕರ್ ಅವರು ರಾಜ್ಯದ ಉಪ ಮುಖ್ಯಮಂತ್ರಿ ಹುದ್ದೆಯನ್ನು ಮುಸ್ಲಿಮರಿಗಾಗಿ ಮೀಸಲಿಡಬೇಕು ಎಂದು ಹೇಳಿದ್ದರು. ಈ ವಿಷಯದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಗೊಳಿಸುವಂತೆ ಕಾಂಗ್ರೆಸ್, ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ಸಮಾಜವಾದಿ ಪಕ್ಷ (ಎಸ್ಪಿ) ಗೆ ಸೂಚಿಸಿದ್ದರು.

ಮಾಧ್ಯಮಗಳ ವರದಿಯ ಹಿನ್ನಲೆಯಲ್ಲಿ AIMIM ಉತ್ತರ ಪ್ರದೇಶದ ಅಧ್ಯಕ್ಷ ಶೌಕತ್ ಅಲಿ ಸ್ಪಷ್ಟೀಕರಣ ನೀಡಿದ್ದು ವರದಿಗಳನ್ನು ನಿರಾಕರಿಸಿದ್ದಾರೆ. “ಉತ್ತರಪ್ರದೇಶದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, ಮುಸ್ಲಿಂ ನಾಯಕನನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವುದಾದರೆ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ AIMIM ಎಂದೂ ಹೇಳಿಲ್ಲ” ಎಂದು ಅವರು ತಿಳಿಸಿದ್ದಾರೆ.

ಪಕ್ಷದ ಯುಪಿ ಅಧ್ಯಕನಾದ ತಾನಾಗಲಿ ಅಥವಾ AIMIM ಮುಖ್ಯಸ್ಥ ಅಸದುದ್ದೀನ್ ಒವೈಸಿ ಆಗಲೀ ಈ ರೀತಿಯ ಹೇಳಿಕೆಗಳನ್ನು ನೀಡಿಲ್ಲ ಎಂದು ಮಾಧ್ಯಮಗಳ ವರದಿಗಳನ್ನು ಅವರು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಯುಪಿ ವಿಧಾನಸಭೆ ಚುನಾವಣೆ-2022: 100 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಎಐಎಂಐಎಂ

“ಹಿಂದಿನ ಚುನಾವಣೆಗಳಲ್ಲಿ 20% ರಷ್ಟು ಮುಸ್ಲಿಂ ಮತಗಳನ್ನು ಗಳಿಸಿ ಅಧಿಕಾರಕ್ಕೆ ಬಂದರೂ, ಎಸ್‌ಪಿ ಅವರು ಯಾವುದೇ ಮುಸ್ಲಿಮರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ” ಎಂದಷ್ಟೇ ಪಕ್ಷವು ಹೇಳಿದೆ ಎಂದು ಶೌಕತ್‌‌ ಅಲಿ ಹೇಳಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಎಐಎಂಐಎಂ 100 ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಈ ಹಿಂದೆ ಘೋಷಿಸಿದ್ದರು.

ಪಕ್ಷದ ಅಧ್ಯಕ್ಷ ಒವೈಸಿ ಈ ಹಿಂದೆ ಲಕ್ನೋಗೆ ಭೇಟಿ ನೀಡಿ, ಸಣ್ಣ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಸಂಸತ್ತಿನ ಮಾನ್ಸೂನ್ ಅಧಿವೇಶನ ಮುಗಿದ ನಂತರ ಅವರು ಪ್ರಯಾಗರಾಜ್, ಕೌಶಂಭಿ ಮತ್ತು ಫತೇಪುರಕ್ಕೆ ಭೇಟಿ ನೀಡಲಿದ್ದಾರೆ.

2017 ರ ವಿಧಾನಸಭಾ ಚುನಾವಣೆಯಲ್ಲಿ, AIMIM ತನ್ನ ಅಭ್ಯರ್ಥಿಗಳನ್ನು 38 ಸ್ಥಾನಗಳಲ್ಲಿ ಕಣಕ್ಕಿಳಿಸಿತ್ತು. ಆದರೆ ಒಂದು ಕ್ಷೇತ್ರವನ್ನು ಸಹ ಗೆಲ್ಲಲು ಸಾಧ್ಯವಾಗಲಿಲ್ಲ. ನಂತರ 2019 ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿತ್ತು. ಅಲ್ಲದೆ ಪಕ್ಷವು ಬಿಜೆಪಿ ವಿರುದ್ಧ ಚುನಾವಣಾ ಪ್ರಚಾರ ನಡೆಸಿತ್ತು.

2017 ರಲ್ಲಿ ಬಿಜೆಪಿ 312 ವಿಧಾನಸಭಾ ಸ್ಥಾನಗಳನ್ನು ಗೆದ್ದಿದೆ. 403 ಸದಸ್ಯ ಬಲವಿರುವ ವಿಧಾನಸಭೆಯಲ್ಲಿ ಪಕ್ಷವು 39.67% ರಷ್ಟು ಮತಗಳನ್ನು ಗಳಿಸಿದೆ. ಸಮಾಜವಾದಿ ಪಕ್ಷ (ಎಸ್‌ಪಿ) 47 ಸ್ಥಾನಗಳನ್ನು, ಬಿಎಸ್‌ಪಿ 19 ಸ್ಥಾನಗಳನ್ನು ಹಾಗೂ ಕಾಂಗ್ರೆಸ್ ಕೇವಲ ಏಳು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿತ್ತು.

ಇದನ್ನೂ ಓದಿ: ಒವೈಸಿಯನ್ನು ’ಜಿನ್ನಾ ಅವತಾರ’ ಎಂದು ವಿವಾದವೆಬ್ಬಿಸಿದ ಸಂಸದ ತೇಜಸ್ವಿ ಸೂರ್ಯ!

LEAVE A REPLY

Please enter your comment!
Please enter your name here