ಹೈದರಾಬಾದ್ ಪಾಲಿಕೆ ಚುನಾವಣಾ ಪ್ರಚಾರ ಭಾಷಣದಲ್ಲಿ ಸಂಸದ ತೇಜಸ್ವಿ ಸೂರ್ಯ, ಎಐಎಂಐಎಂ ನಾಯಕ, ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿಯನ್ನು ಪಾಕಿಸ್ತಾನದ ರಾಷ್ಟ್ರಪಿತ ಮುಹಮ್ಮದ್ ಅಲಿ ಜಿನ್ನಾರಿಗೆ ಹೋಲಿಸಿ ವಿವಾದಾವೆಬ್ಬಿಸಿದ್ದಾರೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಒವೈಸಿ ವಿರುದ್ಧ ಮಾತನಾಡಿದ ಅವರು, “ಜಿನ್ನಾ ಅವರ ಅವತಾರವಾದ ಓವೈಸಿಗೆ ನೀಡುವ ಪ್ರತಿ ಮತವು ಭಾರತದ ವಿರುದ್ಧವಾಗಿದೆ” ಎಂದು ಹೇಳಿದ್ದಾರೆ.
ಒವೈಸಿ ಮತ್ತು ಅವರ ಸಹೋದರ ಅಕ್ಬರುದ್ದೀನ್ ಒವೈಸಿ ಕೋಮುವಾದ ಮತ್ತು ವಿಭಜನೆಯ ರಾಜಕೀಯ ಮಾಡುತ್ತಿದ್ದಾರೆ. ಅವರು ಹೈದರಾಬಾದ್ ಅಭಿವೃದ್ಧಿ ಬಿಟ್ಟು ರೋಹಿಂಗ್ಯಾ ನಿರಾಶ್ರಿತರ ಅಭಿವೃದ್ದಿ ಮಾಡುತ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
ಇದನ್ನೂ ಓದಿ: ಲವ್ ಜಿಹಾದ್‌ಗೆ ಕಠಿಣ ಶಿಕ್ಷೆ ಎಂದ ಮಧ್ಯಪ್ರದೇಶ: ರಾಜ್ಯ ಬಿಜೆಪಿ V/S ಕೇಂದ್ರ ಬಿಜೆಪಿ- ದ್ವಂದ್ವ!
“ನೀವು ಇಲ್ಲಿ ಒವೈಸಿಗೆ ಮತ ನೀಡಿದರೆ, ಅವರು ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಪ್ರಬಲರಾಗುತ್ತಾರೆ. ಒವೈಸಿ ಜಿನ್ನಾರ ಹೊಸ ಅವತಾರವಾಗಿದ್ದಾರೆ. ನಾವು ಅವರನ್ನು ಸೋಲಿಸಬೇಕು. ಬಿಜೆಪಿಗೆ ನೀವು ಹಾಕುವ ಪ್ರತಿಯೊಂದು ಮತವು ಭಾರತ ಮತ್ತು ಹಿಂದುತ್ವಕ್ಕೆ ನೀಡುವ ಮತವಾಗಿದೆ. ಅದು ನಮ್ಮ ದೇಶವನ್ನು ಬಲಪಡಿಸುತ್ತದೆ. ಒವೈಸಿಗೆ ನೀಡುವ ಪ್ರತಿಯೊಂದು ಮತವು, ಭಾರತದ ವಿರುದ್ಧ ನೀಡುವ ಮತವಾಗಿದೆ” ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
“ಆಸಾದುದ್ದೀನ್ ಒವೈಸಿ, ಜಿನ್ನಾ ಮಾತನಾಡುವ ತೀವ್ರ ಇಸ್ಲಾಮಿಕ್, ಪ್ರತ್ಯೇಕತಾವಾದಿ ಮತ್ತು ಉಗ್ರಗಾಮಿ ರಾಜಕಾರಣದ ಭಾಷೆಯನ್ನು ಮಾತನಾಡುತ್ತಾರೆ. ಒವೈಸಿ ಸಹೋದರರ ವಿಭಜಕ ರಾಜಕಾರಣದ ವಿರುದ್ಧ ಪ್ರತಿಯೊಬ್ಬ ಭಾರತೀಯನು ನಿಲ್ಲಬೇಕು. ಈ ಇಸ್ಲಾಮೀಕರಣವನ್ನು ನಾವು ಅನುಮತಿಸುವುದಿಲ್ಲ, ಇದು ನಮ್ಮ ನಿರ್ಧಾರ” ಎಂದು ಹೇಳಿದ್ದಾರೆ.
ಹೈದರಾಬಾದ್ ಪಾಲಿಕೆ ಚುನಾವಣೆ ಡಿಸೆಂಬರ್ 1 ರಂದು ನಡೆಯಲಿದೆ. ನಿನ್ನೆ ಹೈದರಾಬಾದ್ ಹೆಸರನ್ನು ಭಾಗ್ಯನಗರ ಎಂದು ಬದಲಿಸಬೇಕು ಎಂದಿದ್ದ ತೇಜಸ್ವಿ ಸೂರ್ಯ ಅವರನ್ನು ಟ್ವಿಟ್ಟರ್‌ನಲ್ಲಿ ಹೈದರಾಬಾದಿಗರು ತೀವ್ರವಾಗಿ ಟ್ರೋಲ್ ಮಾಡಿದ್ದರು.
ಇದನ್ನೂ ಓದಿ: ಹೈದರಾಬಾದಿಗರಿಂದ ಟ್ರೋಲ್‌ಗೊಳಗಾಗುತ್ತಿರುವ ಸಂಸದ ತೇಜಸ್ವಿ ಸೂರ್ಯ!