ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಇತ್ತೀಚೆಗೆ ನೀಡಿದ್ದ ‘ಅಬ್ಬಾ ಜಾನ್’ ಹೇಳಿಕೆಯ ಕುರಿತು ವಿಶೇಷ ವರದಿ ಕೇಳಿದ್ದ ಔಟ್‌ಲುಕ್ ನಿಯತಕಾಲಿಕೆಯ ಪ್ರಧಾನ ಸಂಪಾದಕ ರುಬೆನ್ ಬ್ಯಾನರ್ಜಿ ಅವರನ್ನು, ವರದಿ ಕೇಳಿದ ಎರಡು ಗಂಟೆಯ ಒಳಗೆ ‘ಔಟ್‌ಲುಕ್ ಗ್ರೂಪ್’ ಅವರನ್ನು ವಜಾಗೊಳಿಸಿದೆ.
ಅವರು, 33 ದಿನಗಳ ರಜೆಯನ್ನು ಮುಗಿಸಿ ಬುಧವಾರಷ್ಟೆ ಸಂಸ್ಥೆಗೆ ಹಿಂತಿರುಗಿದ್ದು, “ಆದಿತ್ಯನಾಥ್ ಮತ್ತು ಅಬ್ಬಾ ಜಾನ್” ಕುರಿತು ವಿಶೇಷ ವರದಿ ಕೇಳಿ ಹಿರಿಯ ಸಂಪಾದಕರಿಗೆ ಸಂದೇಶ ಕಳುಹಿಸಿದ ಒಂದೆರೆಡು ಗಂಟೆಗಳಲ್ಲೇ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಅವರು ಒಂದು ತಿಂಗಳ ರಜೆಯ ಮೇಲೆ ಹೋಗಿದ್ದರ ಬಗ್ಗೆ ಆಗಸ್ಟ್ ತಿಂಗಳಲ್ಲಿ ವರದಿ ಮಾಡಿದ್ದ ನ್ಯೂಸ್‌ಲಾಂಡ್ರಿ ಸುದ್ದಿ ಸಂಸ್ಥೆ, “ಒಂದು ತಿಂಗಳ ರಜೆಯನ್ನು ಅವರನ್ನು ಕೆಲಸದಿಂದ ವಜಾಗೊಳಿಸಲೆಂದೇ ನೀಡಲಾಗಿದೆ” ಮೂಲಗಳನ್ನು ಉಲ್ಲೇಖಿಸಿ ಹೇಳಿತ್ತು.
ಇದನ್ನೂ ಓದಿ: ವೈಚಾರಿಕತೆಯನ್ನು ಕಡೆಗಣಿಸಿ ಅಬ್ಬರಿಸುವ ಜನಪ್ರಿಯ ನಟರ ಸಿನಿಮಾದಾಚೆಗಿನ ವಿಚಾರ
ಮೇ ತಿಂಗಳ ಔಟ್‌ಲುಕ್ ಸಂಚಿಕೆಯಲ್ಲಿ ಒಕ್ಕೂಟ ಸರ್ಕಾರವನ್ನು ಟೀಕಿಸಿ “ಕಾಣೆಯಾಗಿದ್ದಾರೆ”(Missing) ಎಂಬ ವಿಶೇಷ ವರದಿಯೊಂದನ್ನು ಪ್ರಕಟಿಸಿದ್ದಾಗ, ವರದಿಯ ಬಗ್ಗೆ ಔಟ್‌ಲುಕ್ ಗ್ರೂಪ್ ಆಡಳಿತ ಆಕ್ಷೇಪ ವ್ಯಕ್ತಪಡಿಸಿತ್ತು ಎಂದು ನ್ಯೂಸ್ ಲಾಂಡ್ರಿ ವರದಿ ಮಾಡಿದೆ.
ಜೊತೆಗೆ ದೇಶವನ್ನೇ ತಲ್ಲಣಗೊಳಿಸಿದ್ದ ‘ಪೆಗಾಸಸ್ ಗೂಢಾಚಾರ’ ಕುರಿತು ಕೂಡಾ ವಿಶೇಷ ವರದಿ ಆಗಬಾರದು ಎಂದು ನಿಯತಕಾಲಿಕೆಯ ಸಂಪಾದಕೀಯ ತಂಡಕ್ಕೆ ಸೂಚನೆ ಬಂದಿತ್ತು ಎಂದು ಅದು ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು.

ಆದರೆ ಸಂಸ್ಥೆಯು ಅವರು ಶಿಸ್ತು ಉಲ್ಲಂಘನೆ ಮಾಡಿದ್ದಕ್ಕಾಗಿ ಅವರನ್ನು ಸೇವೆಯಿಂದ ವರಜಾಗೊಳಿಸಲಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: ಮುಂಬೈ ದಾಳಿಯ ಬಗ್ಗೆ ಮನಮೋಹನ್ ಸಿಂಗ್ ಅವರನ್ನು ಪ್ರಶ್ನಿಸಿದ ಮಾಧ್ಯಮ ಪುಲ್ವಾಮ ದಾಳಿ ಬಗ್ಗೆ ಮೋದಿಯನ್ನು ಪ್ರಶ್ನಿಸಲಿಲ್ಲ!
ಆಗಸ್ಟ್ 12 ರಿಂದ ರಜೆಯ ಮೇಲೆ ಹೋಗಿದ್ದ ತನ್ನನ್ನು ಯಾವುದೇ ಸೂಚನೆ ಇಲ್ಲದೆ ಅವರನ್ನು ವಜಾ ಮಾಡಲಾಗಿದೆ ಎಂದು ರುಬೆನ್ ಬ್ಯಾನರ್ಜಿ ಆರೋಪಿಸಿದ್ದಾರೆ ಎಂದು ದಿ ಪ್ರಿಂಟ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
“ನನಗೆ ಆರೋಗ್ಯ ಸರಿಯಿಲ್ಲದ ಕಾರಣ ಸೆಪ್ಟೆಂಬರ್ 12 ರಂದು ನನ್ನ ರಜೆಯನ್ನು ವಿಸ್ತರಿಸಲು ನಾನು ಕೇಳಿದ್ದೆ. ಇದೀಗ ನಾನು ಚೇತರಿಸಿಕೊಂಡು ಇಂದು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ಮತ್ತೆ ಸಂಸ್ಥೆಗೆ ಕೆಲಸಕ್ಕಾಗಿ ಹಾಜರಾಗುವುದು ಶಿಸ್ತಿನ ಉಲ್ಲಂಘನೆ ಹೇಗೆ ಆಗುತ್ತದೆ” ಎಂದು ಅವರು ಪ್ರಶ್ನಿಸಿದ್ದಾರೆ.
ರುಬೆನ್ ಬ್ಯಾನರ್ಜಿ ಅವರು 2018 ರಲ್ಲಿ ಔಟ್‌ಲುಕ್‌ಗೆ ಸಂಪಾದಕರಾಗಿ ಸೇರಿದ್ದರು. 2019 ರಲ್ಲಿ ಪ್ರಧಾನ ಸಂಪಾದಕರಾಗಿ ಬಡ್ತಿ ಪಡೆದಿದ್ದರು ಮತ್ತು 2020 ರಲ್ಲಿ ಔಟ್‌ಲುಕ್ ಮನಿ ಮತ್ತು ಔಟ್‌ಲುಕ್ ಹಿಂದಿಯ ಸಂಪಾದಕರಾಗಿಯು ನೇಮಕಗೊಂಡಿದ್ದರು. ಇದಾಗಿ ಅವರು ಈ ವರ್ಷವಷ್ಟೇ ಗ್ರೂಪ್‌ನ ಎಲ್ಲಾ ಮಾಧ್ಯಮಗಳಿಗೂ ಪ್ರಧಾನ ಸಂಪಾದಕರಾಗಿ ಬಡ್ತಿ ಪಡೆದಿದ್ದರು.
ಇದನ್ನೂ ಓದಿ: ಸಹೋದರ ಸಂಬಂಧಿಗಳ ಪ್ರೇಮ ಪ್ರಕರಣಕ್ಕೆ ‘ಲವ್ ಜಿಹಾದ್’ ಪಟ್ಟ ಕಟ್ಟಿದ ಬಿಜೆಪಿ ಪರ ಸಂಘಟನೆ ಮತ್ತು ಮಾಧ್ಯಮಗಳು


