ಆಂಧ್ರಪ್ರದೇಶದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರ ಯುವಜನ್ ಶ್ರಮಿಕ ರೈತ (ವೈಎಸ್ಆರ್) ಕಾಂಗ್ರೆಸ್ ಪಕ್ಷವು ದಾಖಲೆಯ ಗೆಲುವು ಸಾಧಿಸಿದೆ.
ಭಾನುವಾರ ಫಲಿತಾಂಶ ಹೊರಬಿದ್ದಿದ್ದು, ಮಂಡಲ್ ಪರಿಷತ್ ಚುನಾವಣೆಯಲ್ಲಿ ಶೇ. 90ರಷ್ಟು ಕ್ಷೇತ್ರಗಳನ್ನು, ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಶೇ. 99 ಕ್ಷೇತ್ರಗಳನ್ನು ವೈಎಸ್ಆರ್ ಕಾಂಗ್ರೆಸ್ ಗೆದ್ದುಕೊಂಡಿದೆ.
ಏಪ್ರಿಲ್ 8ರಂದು 515 ಜಿಲ್ಲಾ ಪರಿಷತ್ ಹಾಗೂ 7,220 ಮಂಡಲ ಪರಿಷತ್ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಏಪ್ರಿಲ್ 10ರಂದು ಫಲಿತಾಂಶ ಪ್ರಕಟವಾಗಬೇಕಿತ್ತು. ಬಿಜೆಪಿ, ತೆಲುಗು ದೇಶಂ ಪಾರ್ಟಿ (ಟಿಡಿಪಿ) ಹಾಗೂ ಇತರರು ತಕರಾರು ಅರ್ಜಿ ಸಲ್ಲಿಸಿದ್ದರಿಂದ ಆಂಧ್ರಪ್ರದೇಶದ ಹೈಕೋರ್ಟ್ ಮತದಾನ ಎಣಿಕೆಗೆ ತಡೆ ಹಿಡಿದಿತ್ತು.
ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದ ದಿನಾಂಕದಿಂದ ಮಾದರಿ ನೀತಿ ಸಂಹಿತೆಯನ್ನು ಸರಿಯಾಗಿ ಪಾಲಿಸಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಅಂತಿಮವಾಗಿ ಕಳೆದ ಗುರುವಾರ ಮತ ಎಣಿಕೆಗೆ ಹೈಕೋರ್ಟ್ನ ವಿಭಾಗೀಯ ಪೀಠ ಅನುಮತಿ ನೀಡಿತ್ತು.
ಭಾನುವಾರ ಮತ ಎಣಿಕೆ ನಡೆದಿದ್ದು, ಸಂಜೆ 7.30ರ ವೇಳೆಗೆ ಬಂದ ಒಟ್ಟು ಫಲಿತಾಂಶದಲ್ಲಿ ವೈಎಸ್ಆರ್ ಕಾಂಗ್ರೆಸ್ 553 ಜಿಲ್ಲಾ ಪರಿಷತ್ ಕ್ಷೇತ್ರಗಳಲ್ಲಿ 547 ಸ್ಥಾನಗಳನ್ನು, 8,083 ಮಂಡಲ್ ಪರಿಷತ್ ಕ್ಷೇತ್ರಗಳಲ್ಲಿ 7,284 ಸ್ಥಾನಗಳನ್ನು ಗೆದ್ದುಕೊಂಡಿದೆ.
ಇದನ್ನೂ ಓದಿ: 86 ಮೇಯರ್/ಅಧ್ಯಕ್ಷ ಸ್ಥಾನಗಳಲ್ಲಿ 52 ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಟ್ಟ ‘ಜಗನ್’ ಸರ್ಕಾರ!


