Homeಕರ್ನಾಟಕPM CARES ಮಾಹಿತಿ ಹಕ್ಕಿನಡಿ ಬರುವುದಿಲ್ಲವೇ?

PM CARES ಮಾಹಿತಿ ಹಕ್ಕಿನಡಿ ಬರುವುದಿಲ್ಲವೇ?

- Advertisement -
- Advertisement -

ಸ್ವಾತಂತ್ರ್ಯ ಬಂದನಂತರ ದಿನಗಳಲ್ಲಿ ಸರ್ಕಾರದ ಬಜೆಟ್‌ನಿಂದಾಚೆಗೆ, ಅಸಾಮಾನ್ಯ ಮತ್ತು ವಿಪತ್ತಿನ ಪರಿಸ್ಥಿತಿಗಳಲ್ಲಿ ಬಡ ಮತ್ತು ಜನಸಾಮಾನ್ಯರ ನೆರವಿಗಾಗಿ ನಿಧಿ ಸ್ಥಾಪಿಸುವ ಸಲುವಾಗಿ ಜವಾಹರಲಾಲ್ ನೆಹರೂರವರು ಯೋಜನೆಯೊಂದನ್ನು ರೂಪಿಸಿದರು. ಅದರಂತೆ 1948ರಲ್ಲಿ “ಪ್ರಧಾನ ಮಂತ್ರಿ ಪರಿಹಾರ ನಿಧಿಯನ್ನು ಸ್ಥಾಪಿಸಿದರು. ಇದು ಆ ದಿನಗಳಿಂದ ಬಡಜನರ ತುರ್ತು ಚಿಕಿತ್ಸೆ, ಭೂಕಂಪ, ವಿಪತ್ತು ನಿರ್ವಹಣೆ ಸೇರಿದಂತೆ ಮುಂತಾದ ಕಾರ್ಯಗಳಿಗೆ ಸರ್ಕಾರದ ಬಜೆಟ್ ಹೊರತಾದ ನಿಧಿಯಾಗಿ ರೂಪುಗೊಂಡಿತ್ತು. ಇದು 2019ರವರಗೆ, ಸಾರ್ವಜನಿಕರ ಮತ್ತು ಸಂಸ್ಥೆಗಳ ದೇಣಿಗೆ ಪಡೆದು ಜನರ ಕಷ್ಟ ಕಾರ್ಪಣ್ಯಗಳಿಗೆ ಮಿಡಿಯುತ್ತಾ, ನೆರವಾಗುತ್ತಾ ಬಂದಿತ್ತು. 2020ರಲ್ಲಿ ಪ್ರಾರಂಭವಾದ ಕೊರೊನಾ ಸಾಂಕ್ರಾಮಿಕ ಉಂಟುಮಾಡಿದ ಅಕಾಲಿಕ ಬಿಕ್ಕಟ್ಟನ್ನು ನಿರ್ವಹಿಸಲು ಇದೇ ನಿಧಿಯನ್ನು ವಿಸ್ತರಿಸುವ ಮತ್ತು ಬಳಸಿಕೊಳ್ಳುವ ಅವಕಾಶ ಈಗಿನ ಪ್ರಸ್ತುತ ಒಕ್ಕೂಟ ಸರ್ಕಾರಕ್ಕಿತ್ತು. ಆದರೆ, ಈಗಿನ ಪ್ರಧಾನ ಮಂತ್ರಿಯವರು, ಪ್ರಧಾನ ಮಂತ್ರಿ ಪರಿಹಾರ ನಿಧಿ ಬದಲಾಗಿ, ಹೊಸದಾಗಿ “PM CARES” ಎಂಬ ನೂತನ ನಿಧಿಯನ್ನು ಘೋಷಣೆ ಮಾಡಿದರು. ಇದಕ್ಕೆ ಪರಿಣಾಮಕಾರಿಯಾಗಿ ಹಣ ಸಂಗ್ರಹಿಸಲು ಕೆಲವೊಂದು ಕಠಿಣ ನಿಯಮಗಳನ್ನು ಘೋಷಣೆ ಮಾಡಿದರು. ಅದರ ಭಾಗವಾಗಿ ಮಾಡಿದ ಎರಡು ಪ್ರಮುಖ ಘೋಷಣೆಗಳು ಇಂತಿವೆ:

1) ಸರ್ಕಾರದ ಸಾರ್ವಜನಿಕ ಉದ್ದಿಮೆಗಳು ಸೇರಿದಂತೆ ಖಾಸಗಿ ಉದ್ದಿಮೆಗಳು ಕಡ್ಡಾಯವಾಗಿ ಸರ್ಕಾರ, ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕಾದ ತಮ್ಮ CSR (ಕಾರ್ಪೊರೆಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ) ಫಂಡ್‌ನ ಹಣವನ್ನು PM CARESಗೆ ನೀಡಿದರೆ ಮಾತ್ರ ತೆರಿಗೆ ವಿನಾಯಿತಿ ಸಿಗುವ 80ಜಿ ನಿಯಮ ಅನ್ವಯಿಸುತ್ತದೆ. ಸ್ಥಳೀಯಾಡಳಿತ, ಅಥವಾ ಮುಖ್ಯಮಂತ್ರಿ ನಿಧಿ ಸೇರಿದಂತೆ ಬೇರೆ ಯಾವುದೇ ತುರ್ತು ಪರಿಹಾರ ನಿಧಿಗೆ CSR ಹಣವನ್ನು ಕೊಟ್ಟರೆ ತೆರಿಗೆ ವಿನಾಯಿತಿ ಸಿಗುವುದಿಲ್ಲ ಎಂದು ಒಕ್ಕೂಟ ಸರ್ಕಾರ ಘೋಷಣೆ ಮಾಡಿತ್ತು. ಇದರ ಪರಿಣಾಮವಾಗಿ, ಖಾಸಗಿ ಉದ್ದಿಮೆಗಳು ತಾವು ಕೈಗಾರಿಕೆಗಳನ್ನು ಸ್ಥಾಪಿಸಿರುವ ಪ್ರದೇಶದ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ನಗರ ಸಭೆ, ಮಹಾನಗರ ಪಾಲಿಕೆ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಗಳಿಗೆ CSR ಹಣ ನೀಡಿ ಅಧಿನಿಯಮ ೮೦ಜಿ ಅಡಿ ತೆರಿಗೆ ವಿನಾಯಿತಿ ಪಡೆದುಕೊಂಡು ಸ್ಥಳೀಯ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಅವಕಾಶವನ್ನು ಕಳೆದುಕೊಂಡವು.

PC : Corporate Professionals

ಈ ಆದೇಶದಿಂದ ತಮ್ಮ CSR ಹಣವನ್ನು ನೇರವಾಗಿ PM CARESಗೆ ತಲುಪಿಸಿ ತೆರಿಗೆ ವಿನಾಯಿತಿ ಪಡೆದುಕೊಳ್ಳುವ ಅನಿವಾರ್ಯತೆ ಸಿಲುಕಿದವು. ಇನ್ನು, ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟ ಸಾರ್ವಜನಿಕ ಉದ್ದಿಮೆಗಳೇ 2100 ಕೋಟಿ ರೂಪಾಯಿಗಳನ್ನು ಈ ನಿಧಿಗೆ CSR ಆಕ್ಟಿವಿಟಿಯಲ್ಲಿ ನೀಡಿದವು. ಇದರಲ್ಲಿ ಪ್ರಮುಖವಾಗಿ ಕೋಲ್ ಇಂಡಿಯಾ 221 ಕೋಟಿ, ಪವರ್ ಕಾರ್ಪೊರೇಷನ್ 200 ಕೋಟಿ ನೀಡಿದವು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಪವರ್ ಕಾರ್ಪೊರೇಷನ್‌ನ CSR ನಿಧಿಯು ಮಿತಿ 150 ಕೋಟಿ ಇದ್ದರೂ, ಅದು 200 ಕೋಟಿಯನ್ನು ಈ PM CARESಗೆ ನೀಡಿತ್ತು. ಇನ್ನು ನಮ್ಮ ದೇಶದ ಜತೆ ಸದಾ ಜಗಳ ಕಾಯುತ್ತಾ ನಿಲ್ಲುತ್ತಿರುವ ಚೀನಾ ದೇಶದ ಕಂಪನಿಗಳಾದ ಕ್ಸಿಯೋಮಿ – 10 ಕೋಟಿ, ಹುವಾಯಿ- 10 ಕೋಟಿ, ಟಿಕ್ ಟಾಕ್ -30 ಕೋಟಿ ಸೇರಿದಂತೆ ದೇಶದ ಬಹುತೇಕ ಉದ್ದಿಮೆಗಳು ಈ PM CARESಗೆ ಕೋಟಿಗಟ್ಟಲೇ ಹಣ ನೀಡಿವೆ.

2) ಸಂಸದರ ಸ್ಥಳೀಯಾಭಿವೃದ್ದಿಗೆ ಪ್ರತಿ ವರ್ಷ ಸಿಗುತ್ತಿದ್ದ ಎರಡು ಕೋಟಿ ಹಣವನ್ನು ಎರಡು ವರ್ಷಗಳ ಮಟ್ಟಿಗೆ ಮೊದಲೇ PM CARES ನಿಧಿಗೆ ಅನಾಮತ್ತು ವರ್ಗಾಯಿಸಿಕೊಂಡಿತ್ತು.

ಇನ್ನು ರೆವಿನ್ಯೂ ಮತ್ತು ಹಣಕಾಸು ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಒಂದು ದಿನದ ಸಂಬಳವನ್ನು PM CARES ನಿಧಿಗೆ ಕಟಾಯಿಸಿಕೊಳ್ಳುವಂತೆ ಈ ಎರಡು ಇಲಾಖೆಗಳಿಗೆ ಒಕ್ಕೂಟ ಸರ್ಕಾರ ಆದೇಶ ನೀಡಿತ್ತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಸರ್ಕಾರ ಈ ಎರಡು ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ PM CARESಗೆ ಒಂದು ದಿನದ ಸಂಬಳವನ್ನು ಕೊಡುಗೆಯಾಗಿ ಕೇಳಲಿಲ್ಲ ಬದಲಿಗೆ ಕಡ್ಡಾಯವಾಗಿ ಕಟಾಯಿಸಿ ವರ್ಗಾವಣೆ ಮಾಡಿಕೊಂಡಿತ್ತು!

ಇದರ ಜತೆಗೆ ದೇಶದ ಬಹುತೇಕ ಜನರು ತಮ್ಮ ಉಳಿತಾಯದ ಸಣ್ಣ ಕಾಣಿಕೆ ಹಣವನ್ನು ಈ ನಿಧಿಗೆ ಕೊಟ್ಟರು. ಇವೆಲ್ಲದರ ಪರಿಣಾಮ, PM CARES ನಿಧಿಗೆ ಎಷ್ಟು ಹಣ ಬಂದಿರಬಹುದು, ಎಷ್ಟೆಷ್ಟು ಹಣ ಎಲ್ಲಿ ಖರ್ಚಾಗಿರಬಹುದು ಎಂಬ ಕುತೂಹಲ ಜನಸಾಮಾನ್ಯರಿಗಿತ್ತು. ಹಲವರು RTI (ಮಾಹಿತಿ ಹಕ್ಕು) ಅಡಿಯಲ್ಲಿ ಪ್ರಧಾನ ಮಂತ್ರಿ ಕಚೇರಿ ವಿಳಾಸದಲ್ಲಿದ್ದ PM CARESಗೆ ಅರ್ಜಿ ಹಾಕಿದ್ದರು. ಈ ಕ್ಷಣದಿಂದ PM CARESಗೆ ಅಸಲಿತನ ಬಯಲಾಗತೊಡಗಿತ್ತು. ಇಂತಹ ಅರ್ಜಿಗಳಿಗೆ PM CARESಗೆ ಕೊಟ್ಟ ಹೇಳಿಕೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು! “ನಮ್ಮದು ಖಾಸಗಿ ಟ್ರಸ್ಟ್. ಆದ್ದರಿಂದ ನಾವು ಮಾಹಿತಿ ಹಕ್ಕು ಕಾಯ್ದೆಯಡಿ ಬರುವುದಿಲ್ಲ, ಎಂದು ಕೇಳಿದ ಪ್ರಶ್ನೆಗಳಿಗೆ ಉತ್ತರಿಸದೆ ಕೈತೊಳೆದುಕೊಂಡಿತ್ತು! ಇದರಿಂದ ಜನಸಾಮಾನ್ಯರಿಗೆ ಒಂದು ಕಡೆ ಆಶ್ಚರ್ಯ-ಆಘಾತ, ಇನ್ನೊಂದು ಕಡೆ ಕೋಪ ಉಮ್ಮಳಿಸಿತ್ತು. ಇದರ ಪರಿಣಾಮ, ಲೋಕಸಭೆಯಲ್ಲಿ ಟಿಎಂಸಿ ಸಂಸದೆ ಮಹುವಾ ಮೊಹಿತ್ರಾ ಪ್ರಶ್ನೆ ಕೇಳಿ, ಸರ್ಕಾರಕ್ಕೆ ಬೆವರಿಳಿಸಿದರು. ಇಷ್ಟೆಲ್ಲಾ ಆದರೂ, ಇದರ ಬಗ್ಗೆ ಉತ್ತರಿಸುವ ಅನಿವಾರ್ಯಕ್ಕೆ ಸರ್ಕಾರ ಬೀಳಲೇ ಇಲ್ಲ.

ನಂತರ ಕೆಲವರು ದೆಹಲಿ ಕೋರ್ಟಿಗೆ ಹೋಗಿ, ಮಾಹಿತಿ ಹಕ್ಕಿನಡಿ PM CARES ಹಣಕಾಸು ವಹಿವಾಟಿನ ಲೆಕ್ಕ ಕೊಡುವಂತೆ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೇಸು ದಾಖಲಿಸಿದರು. ಇದರ ಪರಿಣಾಮ ಕೆಲವು ದಿನಗಳ ಹಿಂದೆ ದೆಹಲಿ ಹೈಕೋರ್ಟ್‌ನಲ್ಲಿ ಕೇಂದ್ರ ಸರ್ಕಾರ PM CARESನ ಹಣಕಾಸು ವಹಿವಾಟನ್ನು ಮಾಹಿತಿ ಹಕ್ಕಿನಡಿ ಬಹಿರಂಗಪಡಿಸಲು ವಿನಾಯಿತಿ ಪಡೆದುಕೊಳ್ಳಲು, ಮಾಹಿತಿ ಹಕ್ಕು ಅಧಿನಿಯಮದ 2[ h ]ನ
ಅರ್ಥದಲ್ಲಿ ಸಾರ್ವಜನಿಕ ಪ್ರಾಧಿಕಾರ ಆಗಿರಲಿ, ಸೆಕ್ಷನ್ 8 ಮತ್ತು ಉಪವಿಭಾಗ [e] ಮತ್ತು [j] ನಲ್ಲಿರುವ ನಿಬಂಧನೆಗಳು, ನಿರ್ದಿಷ್ಟವಾಗಿ, ಮಾಹಿತಿ ಹಕ್ಕು ಕಾಯಿದೆಯ ಪ್ರಕಾರ ಮೂರನೇ ವ್ಯಕ್ತಿಯ ಮಾಹಿತಿಯನ್ನು ಬಹಿರಂಗಪಡಿಸಲು ಅನುಮತಿ ಇಲ್ಲ ಎಂದು ಪ್ರಧಾನ ಮಂತ್ರಿ ಕಚೇರಿಯ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶ್ರೀವಾಸ್ತವ ಕೋರ್ಟ್‌ಗೆ ಹೇಳಿದ್ದಾರೆ.

ಹಾಗಾದರೆ ಸೆಕ್ಷನ್ 8 ಮತ್ತು ಉಪವಿಭಾಗ [e] ಮತ್ತು [j] ಏನಿದೆ ಎಂಬುದನ್ನು ನಾವು ನೋಡುವುದಾದರೆ,

8:- ಮಾಹಿತಿ ಹಕ್ಕು ಬಹಿರಂಗಪಡಿಸುವುದರಿಂದ ವಿನಾಯಿತಿ.

[e]:- ತನ್ನ ನಂಬಿಕೆಯ ವಿಶ್ವಾಸದ ಸಂಬಂಧದಲ್ಲಿ ಒಬ್ಬ ವ್ಯಕ್ತಿಗೆ ದೊರಕುವ ಮಾಹಿತಿ, ಅಂಥ ಮಾಹಿತಿಯನ್ನು ಬಹಿರಂಗಪಡಿಸುವುದು ಬಹುಸಂಖ್ಯೆಯ ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯವೆಂದು ಸಕ್ಷಮ ಪ್ರಾಧಿಕಾರದ ಮನದಟ್ಟಾಗದ ಹೊರತು;

[j]:- ಸಂದರ್ಭಾನುಸಾರ, ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಅಪೀಲು ಪ್ರಾಧಿಕಾರಕ್ಕೆ ಅಂಥ ಮಾಹಿತಿಯನ್ನು ಬಹಿರಂಗಪಡಿಸುವುದು ಬಹುಸಂಖ್ಯೆಯ ಸಾರ್ವಜನಿಕರ ಹಿತದೃಷ್ಟಿಯಿಂದ ನ್ಯಾಯಸಮ್ಮತ ಎಂದು ಮನದಟ್ಟಾಗದ ಹೊರತು, ಯಾವ ಮಾಹಿತಿಯ ಬಹಿರಂಗಪಡಿಸುವಿಕೆಯು ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಹಿತಾಸಕ್ತಿಗೆ ಸಂಬಂಧಪಡುವುದಿಲ್ಲವೋ ಅಥವಾ ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವ್ಯಕ್ತಿಗತ ಗೌಪ್ಯತೆಯನ್ನು ಅನಗತ್ಯವಾಗಿ ಅತಿಕ್ರಮಿಸಿದಂತಾಗುತ್ತದೆಯೋ ಅಂಥ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿ ಮಾಹಿತಿ;

ಪರಂತು, ಸಂಸತ್ತು ಅಥವಾ ರಾಜ್ಯ ವಿಧಾನ ಮಂಡಲಕ್ಕೆ ನಿರಾಕರಿಸಲಾಗದಂಥ ಮಾಹಿತಿಯನ್ನು ಯಾವುದೇ ವ್ಯಕ್ತಿಗೆ ನಿರಾಕರಿಸತಕ್ಕದಲ್ಲ.

PC : iPleaders

ಅಂದರೆ,

[e]:- ಈ ಉಪವಿಭಾಗದ ಸಾರಾಂಶ ಹೀಗಿದೆ: ಮಾಹಿತಿಗೆ ಸಂಬಂಧಿಸಿ ವಿಷಯವು, ಮಾಹಿತಿ ಕೋರಿರುವ ವ್ಯಕ್ತಿಗೆ ದೊರಕುವ ಮಾಹಿತಿಯು ಬಹಿರಂಗಪಡಿಸುವುದರಿಂದ ಬಹುಸಂಖ್ಯೆಯ ಸಾರ್ವಜನಿಕರಿಗೆ ಉಪಯೋಗ ಆಗುತ್ತದೆ ಎಂದು ಸಕ್ಷಮ ಪ್ರಾಧಿಕಾರಕ್ಕೆ ಮನದಟ್ಟಾದರೆ ಮಾತ್ರ ಅದನ್ನು ಬಹಿರಂಗಪಡಿಸಬಹುದು. ಇಲ್ಲದಿದ್ದರೆ ಆ ಮಾಹಿತಿಯನ್ನು ಬಹಿರಂಗಪಡಿಸಲು ವಿನಾಯಿತಿ ಕೊಡಲಾಗುತ್ತದೆ.

[j]:- ಈ ಉಪವಿಭಾಗದ ಸಾರಾಂಶವೆಂದರೆ, ಯಾವ ಮಾಹಿತಿ ಸಾರ್ವಜನಿಕ ಚಟುವಟಿಕೆಗಳಿಗೆ ಅಥವಾ ಹಿತಾಸಕ್ತಿಗೆ ಸಂಬಂಧಪಡುವುದಿಲ್ಲವೋ ಅಥವಾ ವ್ಯಕ್ತಿಗತ ಗೌಪ್ಯತೆಯನ್ನು ಅನಗತ್ಯವಾಗಿ
ಅತಿಕ್ರಮಿಸಿದಂತಾಗುತ್ತದೆಯೋ ಅಂಥ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಲು ವಿನಾಯಿತಿ ಕೊಡಲಾಗಿದೆ ಎಂದು ಪ್ರಧಾನಮಂತ್ರಿ ಕಛೇರಿಯ ಅಧೀನ ಕಾರ್ಯದರ್ಶಿಗಳು ಹೇಳಿದ್ದಾರೆ.

ಇಲ್ಲಿ ನಾವು ಒಟ್ಟು ಸಾರಾಂಶ ಗಮನಿಸುವುದಾದರೆ, ಒಕ್ಕೂಟ ಸರ್ಕಾರ ಹೇಳಿರುವಂತೆ PM CARES ಹಣಕಾಸು
ವಹಿವಾಟು ಬಹಿರಂಗಪಡಿಸುವುದರಿಂದ ಬಹುಸಂಖ್ಯೆಯ ಸಾರ್ವಜನಿಕರಿಗೆ ಉಪಯೋಗ ಆಗುತ್ತದೆ ಎಂದು ನಾವು ಸಕ್ಷಮ ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಮತ್ತು ಮಾಹಿತಿ ಬಹಿರಂಗಪಡಿಸುವುದರಿಂದ ವ್ಯಕ್ತಿಗತ ಗೌಪ್ಯತೆ ಅತಿಕ್ರಮಿಸುವುದಿಲ್ಲ ಎಂದು ನಾವು ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಇದು ಹಲವು ಪ್ರಶ್ನೆಗಳನ್ನು ಎತ್ತುತ್ತದೆ.

PM CARES ನಿಧಿಯ ಹಣಕಾಸು ವಹಿವಾಟು ಬಹಿರಂಗಪಡಿಸುವುದರಿಂದ ಸಾರ್ವಜನಿಕರಿಗೆ ತನ್ನ ತೆರಿಗೆ ಹಣ ಹೇಗೆ ಖರ್ಚಾಗುತ್ತಿದೆ ಎಂದು ತಿಳಿದುಕೊಳ್ಳಬಹುದು. ಇದನ್ನು ಸಕ್ಷಮ ಪ್ರಾಧಿಕಾರಕ್ಕೆ ಮನದಟ್ಟು ಮಾಡಿಸುವ ಅಗತ್ಯ ಏನಿದೆ? ಅದರ ಜತೆಗೆ, ಈ ಹಣದ ವಹಿವಾಟನ್ನು ಬಹಿರಂಗಪಡಿಸುವುದರಿಂದ ವ್ಯಕ್ತಿಗತವಾಗಿ ಯಾರಿಗೆ ತೊಂದರೆ ಆಗುತ್ತದೆ? ಇದು ಸಾರ್ವಜನಿಕರ ಹಣ, ಅದನ್ನು ಮಾಹಿತಿ ಹಕ್ಕಿನಡಿ ಬಹಿರಂಗಪಡಿಸುವುದು ಸರ್ಕಾರದ ಆದ್ಯ ಕರ್ತವ್ಯ ಅಲ್ಲವೇ?

PM CARES ನಿಧಿ ಸರ್ಕಾರದ ಅಧೀನ ಸಂಸ್ಥೆ ಅಲ್ಲ, ಇದು ಒಂದು ಟ್ರಸ್ಟ್ ಅಂಥ ಒಕ್ಕೂಟ ಸರ್ಕಾರ ಹೇಳುತ್ತದೆ. ಆದರೆ ಈ ನಿಧಿಗೆ ಸರ್ಕಾರಿ ಹಣವಾದ ದೇಶದ ಎಲ್ಲಾ ಸಂಸದರ ಸ್ಥಳೀಯ ಅಭಿವೃದ್ಧಿ ನಿಧಿಯನ್ನು ಪಡೆಯಲಾಗಿದೆ. ಸರ್ಕಾರಿ ಮತ್ತು ಖಾಸಗಿ ಕೈಗಾರಿಕೆಗಳಿಂದ CSR ಕಾರ್ಯಕ್ರಮದಲ್ಲಿ ಸರ್ಕಾರದ ಸ್ಥಳೀಯ ಸಂಸ್ಥೆಗಳು, ರಾಜ್ಯ ಸರ್ಕಾರಕ್ಕೆ ಬರುತ್ತಿದ್ದ ಹಣವನ್ನು ಈ ಟ್ರಸ್ಟ್‌ಗೆ ಬಳಸಿಕೊಳ್ಳುವ ಸಲುವಾಗಿ, ಈ ನಿಧಿಗೆ CSR ಹಣವನ್ನು ನೀಡಿದರೆ ಮಾತ್ರ ತೆರಿಗೆ ವಿನಾಯಿತಿ ಕೊಡಲಾಗುತ್ತದೆ, ಈ ನಿಧಿಗೆ ಬಿಟ್ಟು ರಾಜ್ಯ ಸರ್ಕಾರದ CM fund ಸೇರಿದಂತೆ ಯಾವುದೇ ನಿಧಿಗೆ CSR ವಂತಿಗೆ ನೀಡಿದರೆ ತೆರಿಗೆ ವಿನಾಯಿತಿ ಸಿಗುವುದಿಲ್ಲ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಮಾಹಿತಿ ಅಧಿನಿಯಮ 2ರ (A)(1) ಮತ್ತು (2) ಸಂಬಂಧಪಟ್ಟಂತೆ, “ಸೂಕ್ತ ಸರ್ಕಾರ” ಎಂದರೆ ಸರ್ಕಾರೀ ಪ್ರಾಧಿಕಾರಕ್ಕೆ ಸಂಬಂಧಪಟ್ಟಂತೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ಥಾಪಿಸಲ್ಪಟ್ಟ, ರಚಿತವಾದ, ಅದರ ಒಡೆತನಕ್ಕೆ, ನಿಯಂತ್ರಣಕ್ಕೆ ಒಳಪಟ್ಟ ಅಥವಾ ಕೇಂದ್ರ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶ ಅಥವಾ ರಾಜ್ಯ ಸರ್ಕಾರದ ಆಡಳಿತವು ನೇರವಾಗಿ ಅಥವಾ ಪರೋಕ್ಷವಾಗಿ ಒದಗಿಸಿರುವ ನಿಧಿಗಳಿಂದ ಗಣನೀಯ ಆರ್ಥಿಕ ನೆರವು ಪಡೆದ ಸಾರ್ವಜನಿಕ ಪ್ರಾಧಿಕಾರವು, (C) “ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ” ಎಂದರೆ 5ನೇ ಪ್ರಕರಣದ (1)ನೇ ಉಪಪ್ರಕರಣದ ಅಡಿಯಲ್ಲಿ ಹಾಗೆ ಹೆಸರಿಸಲಾದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು (2)ನೇ ಉಪಪ್ರಕರಣದ ಅಡಿಯಲ್ಲಿ ಹೆಸರಿಸಲಾದ ಕೇಂದ್ರ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ಒಳಗೊಳ್ಳುತ್ತದೆ.

ಇದರ ಸಾರಾಂಶ ಇಷ್ಟೇ, ಸರ್ಕಾರಕ್ಕೆ ಸೇರಿದ ಹಣವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಪಡೆದುಕೊಂಡ ಯಾವುದೇ ಸಾರ್ವಜನಿಕ ಪ್ರಾಧಿಕಾರಗಳು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಬರುತ್ತವೆ. ಅದರಂತೆ PM CARES ಹಣದ ವಹಿವಾಟನ್ನು ಬಹಿರಂಗಪಡಿಸುವುದು ಕಡ್ಡಾಯ.

ಇನ್ನು PM CARES ಸರ್ಕಾರಿ ಸಂಸ್ಥೆ ಅಲ್ಲ, ಅದು ಒಂದು ಟ್ರಸ್ಟ್ ಎಂದು ಒಕ್ಕೂಟ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ಹೇಳುತ್ತದೆ. ಆದರೆ ನಾವು ಗಮನಿಸಬೇಕಾದ ಅಂಶವೆಂದರೆ ಅದರ ವೆಬ್‌ಸೈಟ್ WWW.PMcares.gov.in ಆಗಿದೆ. ಅಂದರೆ ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಮಾತ್ರ ಬಳಸುವ ಮತ್ತು ಬಳಸಬಹುದಾದ gov.in ಡೊಮೇನ್‌ಅನ್ನು ಇದು ಪಡೆದಿದೆ. ಅಂದರೆ ಇದೂ ಕೂಡಾ ಸರ್ಕಾರಿ ಸಂಸ್ಥೆ ಆಗಿದೆ ಎಂದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಈ ಸಂಬಂಧವಾಗಿ ಈ ಡೊಮೇನ್ ಅನ್ನು PM CARESಗೆ ಹೇಗೆ ನೀಡಲಾಯಿತು ಎಂದು ಮಾಹಿತಿ ಹಕ್ಕಿನಡಿ ಕೇಳಿದ್ದ ಅರ್ಜಿಯನ್ನು MeitY (ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ) ತಳ್ಳಿಹಾಕಿತ್ತು. ಇದರ ಮಾಹಿತಿ ನೀಡದಂತೆ ಪ್ರಧಾನಮಂತ್ರಿ ಕಾರ್ಯಾಲಯ ಸೂಚಿಸಿದೆ ಎಂದು ಕೂಡ ವರದಿಯಾಗಿತ್ತು.

ಹಾಗಾದರೆ ಮಾಹಿತಿ ಹಕ್ಕಿನಡಿ ವಿನಾಯಿತಿ ಯಾವುದಕ್ಕೆ ಪಡೆದುಕೊಳ್ಳಬಹುದು?

ಮಾಹಿತಿ ಹಕ್ಕು ಅಧಿನಿಯಮ 24 (1)ರಡಿ “ಕೇಂದ್ರ ಸರ್ಕಾರವು ಸ್ಥಾಪಿಸಿ ನಡೆಸುತ್ತಿರುವ ಸಂಸ್ಥೆಗಳಾಗಿರುವ ಗುಪ್ತ ಮಾಹಿತಿ ಮತ್ತು ಭದ್ರತಾ ಸಂಸ್ಥೆಗಳಿಗೆ ಅಥವಾ ಅಂಥ ಸಂಸ್ಥೆಗಳು ಸರ್ಕಾರಕ್ಕೆ ಒದಗಿಸಿರುವ ಮಾಹಿತಿ ಮಾತ್ರ ಮಾಹಿತಿ ಹಕ್ಕಿನಡಿ ಅನ್ವಯಿಸುವುದಿಲ್ಲ. ಪರಂತು, ಇದರಲ್ಲಿಯೂ ಭ್ರಷ್ಟಾಚಾರ ಆರೋಪ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದೆ.

ಅಂದರೆ ಕೇಂದ್ರ ಸರ್ಕಾರ ಸ್ಥಾಪಿಸಿರುವ ಭದ್ರತಾ ಮತ್ತು ಗುಪ್ತ ಮಾಹಿತಿಯನ್ನು ಕೊಡುವ ಸಂಸ್ಥೆಗಳ ವರದಿ ಅಥವಾ ಮಾಹಿತಿಯನ್ನು ಮಾಹಿತಿ ಹಕ್ಕಿನಡಿ ಕೊಡಲುಬರುವುದಿಲ್ಲ, ಆದರೆ ಇದರಲ್ಲಿನ ಭ್ರಷ್ಟಾಚಾರ ಮತ್ತು ಮಾನವ ಹಕ್ಕು ಉಲ್ಲಂಘನೆಗಳ ಪ್ರಕರಣಗಳು ಮಾಹಿತಿ ಹಕ್ಕಿನಡಿ ಬರುತ್ತವೆ. ಅಂದರೆ, PM CARES ಹಣಕಾಸು ವಹಿವಾಟು ಮಾಹಿತಿ ಹಕ್ಕು ಅಧಿನಿಯಮ 24(1)ದಲ್ಲಿ ಸ್ಪಷ್ಟವಾಗಿ ವಿನಾಯಿತಿಗೆ ಬರುವುದಿಲ್ಲ.

PC : Live law

ಇಲ್ಲಿ ಇನ್ನೊಂದು ಅಂಶ ಗಮನಿಸುವುದಾದರೆ, ಕೇಂದ್ರ ಸರ್ಕಾರ PM CARESಅನ್ನು ಖಾಸಗಿ ಟ್ರಸ್ಟ್ ಎಂದು ಪ್ರತಿಪಾದಿಸಿ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಸರ್ಕಾರಿ, ಖಾಸಗಿ ಉದ್ದಿಮೆಗಳ CSR ನಿಧಿ ಮತ್ತು ಸಂಸದರ, ಶಾಸಕರ ಸ್ಥಳೀಯ ಅಭಿವೃದ್ಧಿ ಹಣವು ರಾಜಕಾರಣಿಗಳ ತಿಜೋರಿ ತುಂಬುವುದರಲ್ಲಿ ಅನುಮಾನವಿಲ್ಲ. ಅದು ಹೇಗೆಂದರೆ, ಮುಂದಿನ ದಿನಗಳಲ್ಲಿ ಬಹುತೇಕ ರಾಜಕಾರಣಿಗಳು PM CARES ಮಾದರಿಯಲ್ಲೇ ಯಾವುದೋ ಒಂದು ತಲೆ ಮಾಸಿದ ಟ್ರಸ್ಟ್ ಮಾಡಿಕೊಳ್ಳುತ್ತಾರೆ. ತಮ್ಮ ಪ್ರಭಾವದ ಅನುಸಾರವಾಗಿ ಸಂಸದರ, ಶಾಸಕರ ಸ್ಥಳೀಯ ಅಭಿವೃದ್ಧಿ ನಿಧಿಯನ್ನು ತಮ್ಮ ಈ ಟ್ರಸ್ಟ್‌ಗಳಿಗೆ ವರ್ಗಾಯಿಸಿಕೊಳ್ಳುತ್ತಾರೆ.

ಇದರ ಜತೆಗೆ ಕೇಂದ್ರ-ರಾಜ್ಯ ಸಚಿವರು ತಮ್ಮ ವ್ಯಾಪ್ತಿಗೆ ಬರುವ ಸರ್ಕಾರಿ ಮತ್ತು ಖಾಸಗಿ ಉದ್ದಿಮೆಗಳ ಹಣವನ್ನು ತಾವು ಸ್ಥಾಪಿಸಿರುವ ಟ್ರಸ್ಟ್‌ಗೆ ವರ್ಗಾಯಿಸಿಕೊಳ್ಳುತ್ತಾರೆ. ಅಲ್ಲಿ ತಮ್ಮ ಖಾಸಗಿ ಆಡಿಟರ್‌ಗಳಿಗೆ ಕಳ್ಳ ಲೆಕ್ಕ ತೋರಿಸಿ ಸರ್ಕಾರದಿಂದ ಜನರಿಗೆ ಬರುತ್ತಿದ್ದ ಹಣವನ್ನು ಇಡಿಗಂಟಾಗಿ ಲಪಟಾಯಿಸುವ ಹುನ್ನಾರದಲ್ಲಿ ಯಶಸ್ವಿಯಾಗುತ್ತಾರೆ. ಆನಂತರ ಈ ಟ್ರಸ್ಟ್‌ಗಳು ಕೂಡಾ ಕೇಂದ್ರ ಸರ್ಕಾರ ಹೇಳಿದ PM CARES ನಂತೆ RTI ವ್ಯಾಪ್ತಿಗೆ ಬರದ ಕಾರಣ, ಅವುಗಳಿಂದ ಜನರು ಲೆಕ್ಕ ಕೇಳುವುದಕ್ಕೆ ಆಗುವುದಿಲ್ಲ. ಈ ಮೂಲಕ ಸಾರ್ವಜನಿಕರ ಹಣವನ್ನು ಲೂಟಿ ಹೊಡೆಯಲು PM CARES ಭ್ರಷ್ಟ ರಾಜಕಾರಣಿಗಳಿಗೆ ಹೊಸ ದಾರಿ ತೋರಿದಂತಾಗುತ್ತದೆ. ಆದುದರಿಂದ ಇದಕ್ಕೆ ಅವಕಾಶ ನೀಡಿದೆ, PM CARES ಹಣಕಾಸು ವಹಿವಾಟನ್ನು ಸಾರ್ವಜನಿಕರ ಅವಗಾಹನೆಗೆ ಮುಕ್ತವಾಗಿಸಿ ಪಾರದರ್ಶಕತೆಯನ್ನು ಪ್ರದರ್ಶಿಸಬೇಕಿದೆ.

ಕೊನೆಮಾತು: ಬದುಕಿರುವ ವ್ಯಕ್ತಿ, ಸುಳ್ಳೆಂಬ ಬಾಯಿಯ ಕೆಟ್ಟ ವಾಸನೆಯನ್ನು ಒಂದೆರಡು ಕ್ಷಣ ತಡೆದು ಹಿಡಿದುಕೊಳ್ಳಬಹುದು. ಆದರೆ ಸತ್ಯಕ್ಕೆ ಹೆದರಿಕೊಂಡು ಅತಿ ಹೆಚ್ಚು ಕ್ಷಣಗಳವರೆಗೆ ಅದುಮಿಟ್ಟುಕೊಂಡರೆ ತನ್ನ ಜೀವಕ್ಕೆ ಅಪಾಯವಾಗಬಹುದು!

ಕುಮಾರಸ್ವಾಮಿ ಮಾಕವಳ್ಳಿ

ಕುಮಾರಸ್ವಾಮಿ ಮಾಕವಳ್ಳಿ
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಮಾಕವಳ್ಳಿಯ ಕುಮಾರಸ್ವಾಮಿ ಕೃಷಿಕರು. ಸ್ಥಳೀಯವಾಗಿಯೂ ಸಾಮಾಜಿಕವಾಗಿ ಕ್ರಿಯಾಶೀಲರಾದ ಅವರು ರಾಜ್ಯ ಹಾಗೂ ದೇಶದ ಆಗುಹೋಗುಗಳ ಕುರಿತು ಗಂಭೀರವಾಗಿ ಚಿಂತಿಸಿ ಬರೆಯುತ್ತಾರೆ.


ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ 2020; ಶಿಕ್ಷಕರ ಮೇಲಿನ ಪರಿಣಾಮ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...