ಬೆಂಗಳೂರು: ಸಿಂಧಗಿ ಕ್ಷೇತ್ರದ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯನ್ನಾಗಿ ನಾಜಿಯಾ ಶಕೀಲಾ ಅಂಗಡಿ ಅವರನ್ನು ಜೆಡಿಎಸ್ ಆಯ್ಕೆ ಮಾಡಿದೆ.
ನಾಜಿಯಾ ಶಕೀಲಾ ಅಂಗಡಿ ಅವರು ಎಂ.ಎ. ಬಿ.ಇಡಿ ಪದವೀಧರರಾಗಿದ್ದು, ಜೆಡಿಎಸ್ ಪಕ್ಷದಲ್ಲಿ ಸಕ್ರಿಯರಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
“ಅನೇಕ ವರ್ಷಗಳಿಂದ ಸಮಾಜಮುಖಿ ಕೆಲಸಗಳನ್ನು ನಿರ್ವಹಿಸುತ್ತಿರುವ ನಾಜಿಯಾ ಶಕೀಲಾ ಅಂಗಡಿ ಅವರು ಅತ್ಯುತ್ತಮ ಅಭ್ಯರ್ಥಿ ಆಗಿದ್ದು, ಸಮಾಜದ ಎಲ್ಲ ವರ್ಗದ ಜನರಿಗೂ ಸಲ್ಲುವ ಮಹಿಳೆಯಾಗಿದ್ದಾರೆ. ಪಕ್ಷನಿಷ್ಠೆಯ ಜತೆಗೆ ಪ್ರಾಮಾಣಿಕ ಹಾಗೂ ಸೇವಾ ಮನೋಭಾವ ಹೊಂದಿರುವ ನಾಜಿಯಾ ಶಕೀಲಾ ಅಂಗಡಿ ಅವರನ್ನು ಸಮಸ್ತ ಸಿಂಧಗಿ ಮತದಾರರು ಆಶೀರ್ವದಿಸಿ ಆಯ್ಕೆ ಮಾಡಬೇಕು” ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದ್ದಾರೆ.

ಈಗಾಗಲೇ ಹಾನಗಲ್ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿಯನ್ನಾಗಿ ಬಿ.ಇ. ಎಂ.ಟೆಕ್ ಪದವೀಧರರಾಗಿರುವ ನಿಯಾಜ್ ಶೇಕ್ ಅವರನ್ನು ಎಚ್.ಡಿ.ಕುಮಾರಸ್ವಾಮಿ ಅವರು ಆಯ್ಕೆ ಮಾಡಿದ್ದಾರೆ.

ಎರಡೂ ಕ್ಷೇತ್ರಗಳಲ್ಲಿ ಉತ್ತಮ ಶಿಕ್ಷಣ ಪಡೆದಿರುವ ವಿದ್ಯಾವಂತರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿದ್ದು, ಎರಡು ಕ್ಷೇತ್ರಗಳಲ್ಲಿ ಜನರು ಜೆಡಿಎಸ್ ಅಭ್ಯರ್ಥಿಗಳಿಗೆ ಮತ ನೀಡಿ ಆಶೀರ್ವಾದ ಮಾಡಬೇಕು ಎಂದು ಅವರು ಕೋರಿದ್ದಾರೆ.
ಬಿಜೆಪಿಯ ಅಭ್ಯರ್ಥಿ ಯಾರು?: ಸಿಂದಗಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ರಮೇಶ್ ಭೂಸನೂರು ಕಣಕ್ಕಿಳಿಯುವ ಸಾಧ್ಯತೆಯಿದೆ. ಹಾನಗಲ್ ಕ್ಷೇತ್ರಕ್ಕೆ ಗದಗ ಸಂಸದ ಶಿವಕುಮಾರ್ ಉದಾಸಿ ಪತ್ನಿ ರೇವತಿ ಉದಾಸಿ ಅವರನ್ನು ಕಣಕ್ಕಿಳಿಸಲಾಗುವುದು ಎನ್ನಲಾಗುತ್ತಿದೆ.
ಕಾಂಗ್ರೆಸ್‌ನಲ್ಲಿ ಬೆಳವಣಿಗೆ ಏನು?: ಹಾನಗಲ್ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಗಳಾಗಿರುವ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಚಿವ ಮನೋಹರ ತಹಶೀಲ್ದಾರ ಸೇರಿದಂತೆ ಇನ್ನು ಆನೇಕರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸಲೀಂ ಅಹಮ್ಮದ್, ಆರ್.ಧ್ರುವನಾರಾಯಣ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಇಂದು (ಅ.2) ಸಭೆ ನಡೆದಿದೆ. ಸೆಪ್ಟೆಂಬರ್ 28ರಂದೇ ಕಾಂಗ್ರೆಸ್, ಸಿಂದಗಿ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಅಶೋಕ್ ಮನಗೂಳಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಹಾನಗಲ್ ಕ್ಷೇತ್ರದ ಅಭ್ಯರ್ಥಿ ಯಾರೆಂಬುದು ಇಂದು ಅಥವಾ ನಾಳೆ ಕಾಂಗ್ರೆಸ್ ಘೋಷಿಸುವ ಸಾಧ್ಯತೆ ಇದೆ.

ಸಿಂಧಗಿಯ ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ಹಾಗೂ ಹಾನಗಲ್ ಶಾಸಕ ಸಿ.ಎಂ.ಉದಾಸಿ ಅವರ ನಿಧನದಿಂದ ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದೆ. 2018ರ ಚುನಾವಣೆಯಲ್ಲಿ ಎಂ.ಸಿ.ಮನಗೂಳಿ ಅವರು 70,865 ಮತಗಳನ್ನು ಪಡೆದು ಜಯಗಳಿಸಿದ್ದರು. ಪ್ರತಿಸ್ಪರ್ಧಿ ಬಿಜೆಪಿಯ ರಮೇಶ ಭೂಸನೂರ 61,560 ಮತಗಳನ್ನು ಪಡೆದು, 9305 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಯ ಸಿ.ಎಂ.ಉದಾಸಿ 80,529 ಮತಗಳನ್ನು ಪಡೆದು ಜಯಭೇರಿ ಭಾರಿಸಿದ್ದರು. ಅವರ ವಿರುದ್ಧ ಕಾಂಗ್ರೆಸ್‌ನ ಮಾನೆ ಶ್ರೀನಿವಾಸ್ 74,015 ಮತಗಳನ್ನು ಪಡೆದಿದ್ದರು.
ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಮಹಿಳೆಯರಿಗೆ 30-35 ಸ್ಥಾನ ಮೀಸಲು: ಎಚ್.ಡಿ.ಕುಮಾರಸ್ವಾಮಿ


