ಮುಂದಿನ ಚುನಾವಣೆಯಲ್ಲಿ ಮಹಿಳೆಯರಿಗೆ 30-35 ಸ್ಥಾನ ಮೀಸಲು: ಎಚ್.ಡಿ.ಕುಮಾರಸ್ವಾಮಿ

“ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 30 ರಿಂದ 35 ಜನ ಮಹಿಳೆಯರಿಗೆ ಟಿಕೆಟ್ ಕೊಡಲು ನಾನು ಸಿದ್ದನಿದ್ದೇನೆ. ಆದರೆ ನೀವು ಚುನಾವಣೆ ಎದುರಿಸಲು  ಮಾನಸಿಕವಾಗಿ ಸಿದ್ಧವಾಗಬೇಕು” ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಬಿಡದಿಯ ತೋಟದಲ್ಲಿ ಆಯೋಜಿಸಲಾಗಿರುವ  ಜೆಡಿಎಸ್ ಸಂಘಟನಾ ಕಾರ್ಯಗಾರದ ಮಹಿಳಾ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, “ಪಕ್ಷದ ಸಂಘಟನೆಗೆ ನಿಮ್ಮ ಶಕ್ತಿ ಮುಖ್ಯವಾಗಿದೆ. ಅದರ ಜತೆಗೆ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಹಲ್ಲೆ, ಅಕ್ರಮಗಳಿಗೆ ತಡೆ ಒಡ್ಡಬೇಕು. ದಿನ ಬೆಳಗಾದರೆ ನಮ್ಮ ಮನೆಗೆ ಹೆಣ್ಣು ಮಕ್ಕಳು ಬಂದು ಕಷ್ಟ ಹೇಳಿಕೊಳ್ಳುತ್ತಾರೆ. ಅವರ ದುಖಃ ದುಮ್ಮಾನ ಹತ್ತಿರದಿಂದ ನೋಡಿದ್ದೇನೆ. ಮಹಿಳೆಯರಿಗೆ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಅಂದುಕೊಂಡಿದ್ದೇನೆ” ಎಂದಿದ್ದಾರೆ.

“ಮಹಿಳೆಯರು ಅಬಲೆಯರಲ್ಲ. ಉತ್ತರ ಪ್ರದೇಶದಲ್ಲಿ ಮೊದಲ ಮುಖ್ಯಮಂತ್ರಿ ಮಹಿಳೆ ಆಗಿದ್ದರು. 1963 ರಲ್ಲಿ ಸಿಎಂ ಆಗಿದ್ದರು. ಪುರುಷರಿಗೆ ಸರಿ ಸಾಟಿಯಾಗಿ ಮಹಿಳೆಯರು ಕೆಲ ಮಾಡುತ್ತಿದ್ದಾರೆ. ಪ್ರತಿಭೆಯನ್ನು ಸರಿಯಾಗಿ ಉಪಯೋಗಿಸ ಬೇಕಾಗುತ್ತದೆ. ನೀವು ಪ್ರಾಮಾಣಿಕವಾಗಿ ಕೆಲಸ ಮಾಡುವ ನಾವು ಸಹಕಾರ ಕೊಡುತ್ತೇವೆ” ಎಂದಿದ್ದಾರೆ.

ಇದನ್ನೂ ಓದಿ: ಮಂಗಳೂರು: ಅತ್ಯಾಚಾರ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ- ಪೊಲೀಸ್ ಪೇದೆ ಬಂಧನ

“ರಾಜ್ಯದ ಉಳಿವಿಗಾಗಿ ಪಕ್ಷ ಅಧಿಕಾರ ಬರಬೇಕು. ಸಮ್ಮಿಶ್ರ ಸರಕಾರಕ್ಕೆ ಇತಿಶ್ರೀ ಹಾಡಿ ಸ್ವಂತ – ಸ್ವತಂತ್ರ ಸರಕಾರ ಮಾಡೋಣ. ನಿಮ್ಮ ಸಹಕಾರ ಇದ್ದರೆ  123ಕ್ಕೂ ಹೆಚ್ಚು ಸ್ಥಾನ ಗೆಲ್ಲಬಹುದು. ಬಿಜೆಪಿ- ಕಾಂಗ್ರೆಸ್ ಪಕ್ಷಗಳನ್ನು ನೋಡಿದ್ದೇವೆ. ಬಡತನ, ಕೊರೊನಾ ಸಮಯದಲ್ಲಿ ನಡೆದುಕೊಂಡ ರೀತಿ ನೋಡಿದ್ದೇವೆ” ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾನು ಸಿಎಂ ಆಗಿದ್ದಾಗಲೇ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ತೀರ್ಮಾನ ತೆಗೆದುಕೊಂಡಿದ್ದೆ. ಪ್ರತಿ ಕುಟುಂಬದಲ್ಲಿ ಮಕ್ಕಳಿಗೆ ಶಿಕ್ಷಣ ಮುಖ್ಯ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ನನ್ನ ಪರಿಕಲ್ಪನೆಯ ಎಲ್ಲಾ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುವುದು ಎಂದು ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.


ಇದನ್ನೂ ಓದಿ: ಪ್ರಮೀಳಾ ನಾಯ್ಡು ವಜಾಗೆ ಆಗ್ರಹಿಸಿ, ಮಹಿಳಾ ಆಯೋಗಕ್ಕೆ ಬೀಗ ಜಡಿದು ಎಎಪಿ ಪ್ರತಿಭಟನೆ

LEAVE A REPLY

Please enter your comment!
Please enter your name here