ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕಾದರೆ ಮಮತಾ ಬ್ಯಾನರ್ಜಿಯವರು ಗೆಲ್ಲಲೇಬೇಕಾದ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಭಬನೀಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಶುರುವಾಗಿದ್ದು, ಮಮತಾ ಬ್ಯಾನರ್ಜಿ ಅವರು ಆರಂಭಿಕ ಮುನ್ನಡೆ ಸಾಧಿಸಿದ್ದಾರೆ.
ದಕ್ಷಿಣ ಕೋಲ್ಕತ್ತಾದ ಭಬನಿಪುರ ಕ್ಷೇತ್ರದ ಮತ ಎಣಿಗೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದೆ. 21 ಸುತ್ತಿನ ಮತ ಎಣಿಕೆ ನಡೆಯಲಿದೆ. ಬಿಜೆಪಿಯು ವಕೀಲರಾದ ಪ್ರಿಯಾಂಕ ತಿಬ್ರೇವಾಲ್ ಅವರನ್ನು ಕಣಕ್ಕೆ ಇಳಿಸಿತ್ತು. 41 ವರ್ಷದ ತ್ರಿಬ್ರೇವಾಲ್ ಇತ್ತೀಚಿನ ವಿಧಾನಸಭೆ ಚುನಾವಣೆ ಮತ್ತು 2015ರ ಮುನ್ಸಿಪಲ್ ಚುನಾವಣೆಯಲ್ಲಿ ಸೋತರೂ ಚುನಾವಣೆಯ ನಂತರದ ಹಿಂಸಾಚಾರ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವಿರುದ್ಧದ ಅರ್ಜಿದಾರರಲ್ಲಿ ಒಬ್ಬರಾಗಿ ಪ್ರಸಿದ್ಧರಾಗಿದ್ದಾರೆ.
ಮಾರ್ಚ್ ಹಾಗೂ ಎಪ್ರಿಲ್‌ನಲ್ಲಿ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮಮತಾ ಬ್ಯಾನರ್ಜಿಯವರು ಬಿಜೆಪಿಯ ಅಭ್ಯರ್ಥಿ ಹಾಗೂ ಈ ಹಿಂದೆ ಟಿಎಂಸಿ ನಾಯಕರಾಗಿದ್ದು, ಚುನಾವಣೆ ವೇಳೆಗೆ ಬಿಜೆಪಿ ಸೇರಿದ್ದ ಸುವೇಂದು ಅಧಿಕಾರಿ ಅವರಿಂದ ಪರಾಜಿತರಾಗಿದ್ದರು.
ಭಬನಿಪುರ ಕ್ಷೇತ್ರವು ಮಮತಾ ಬ್ಯಾನರ್ಜಿಯವರ ಸಾಂಪ್ರದಾಯಿಕ ಕ್ಷೇತ್ರವಾಗಿತ್ತು. ಆದರೆ ಅದನ್ನು ತ್ಯಜಿಸಿದ್ದ ಮಮತಾ ಬ್ಯಾನರ್ಜಿಯವರು ಸುವೇಂದು ಅಧಿಕಾರಿ ಅವರನ್ನು ಮಣಿಸಲು ನಂದಿಗ್ರಾಮದಲ್ಲಿ ಕಣಕ್ಕಿಳಿದಿದ್ದರು. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದರು. ಚುನಾವಣೆ ಸೋತರೂ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅವರು ಚುನಾವಣೆಯಲ್ಲಿ ಗೆಲ್ಲದಿದ್ದರೆ ಆರು ತಿಂಗಳ ಬಳಿಕ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆ. ಹೀಗಾಗಿ ಬಂಗಾಳದ ಕೃಷಿ ಸಚಿವ ಶೋಭಂದೇಬ್ ಚಟ್ಟೋಪಾಧ್ಯಾಯ ಅವರನ್ನು ಶಾಸಕ ಸ್ಥಾನದಿಂದ ಕೆಳಗಿಳಿದರು, ಮಮತಾ ಬ್ಯಾನರ್ಜಿಯವರು ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಭಬನಿಪುರ ಹೊರತಾಗಿ ಮುರ್ಷಿದಾಬಾದ್‌ನ ಸಂಸರ್‌ಗಂಜ್ ಮತ್ತು ಜಂಗೀಪುರ ಕ್ಷೇತ್ರಗಳಲ್ಲೂ ಮತ ಎಣಿಕೆ ನಡೆಯುತ್ತಿದೆ. ಕ್ರಮವಾಗಿ ಈ ಕ್ಷೇತ್ರಗಳಲ್ಲಿ ಶೇ. 79.92 ಮತ್ತು ಶೇ. 77.63 ಮತದಾನ ನಡೆದಿದೆ.
ಇದನ್ನೂ ಓದಿರಿ: ರೋಮ್ ಭೇಟಿಗೆ ಅನುಮತಿ ನಿರಾಕರಣೆ: ಕೇಂದ್ರದ ‘ಅಸೂಯೆ’ ಎಂದ ದೀದಿ


