ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಕೇಂದ್ರ ಸಚಿವನ ಮಗ ರೈತರ ಮೇಲೆ ಕಾರು ಹರಿಸಿ ನಾಲ್ವರನ್ನು ಕೊಂದ ಘಟನೆಯ ವಿಡಿಯೋವೊಂದು ಸೋಮವಾರ ರಾತ್ರಿಯಿಂದ ದೇಶಾದ್ಯಂತ ವೈರಲ್ ಆಗುತ್ತಿದೆ. ಅದೇ ವಿಡಿಯೋವನ್ನು ಉತ್ತರ ಪ್ರದೇಶದ ಫಿಲಿಬಿತ್ ಲೋಕಸಭಾ ಕ್ಷೇತ್ರದ ಸಂಸದ ವರುಣ್ ಗಾಂಧಿ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
“ಲಖಿಂಪುರ್ ಖೇರಿಯಲ್ಲಿ ಉದ್ದೇಶಪೂರ್ವಕವಾಗಿ ವಾಹನವನ್ನು ರೈತರ ಮೇಲೆ ಹರಿಸುವ ಈ ವಿಡಿಯೋ ಎಲ್ಲರ ಆತ್ಮವನ್ನೂ ಅಲ್ಲಾಡಿಸುತ್ತದೆ. ಪೊಲೀಸರು ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿ ಈ ವಾಹನಗಳ ಮಾಲೀಕರು, ಅದರಲ್ಲಿ ಕುಳಿತಿರುವ ಜನರು ಮತ್ತು ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳನ್ನು ತಕ್ಷಣ ಬಂಧಿಸಬೇಕು” ಎಂಂದು ವರುಣ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
लखीमपुर खीरी में किसानों को गाड़ियों से जानबूझकर कुचलने का यह वीडियो किसी की भी आत्मा को झखझोर देगा।
पुलिस इस वीडियो का संज्ञान लेकर इन गाड़ियों के मालिकों, इनमें बैठे लोगों, और इस प्रकरण में संलिप्त अन्य व्यक्तियों को चिन्हित कर तत्काल गिरफ्तार करे।
#LakhimpurKheri@dgpup pic.twitter.com/YmDZhUZ9xq
— Varun Gandhi (@varungandhi80) October 5, 2021
ರೈತರ ಮೇಲೆ ಹರಿದ ಆ ಕಾರು ಕೇಂದ್ರ ಸಚಿವ ಅಜಯ್ ಮಿಶ್ರಾರವರಿಗೆ ಸೇರಿದ್ದು ಅದರಲ್ಲಿ ಅವರ ಮಗ ಆಶಿಶ್ ಮಿಶ್ರಾ ಇದ್ದು ಕಾರು ಚಲಾಯಿಸುತ್ತಿದ್ದರು ಎಂದು ರೈತರು ದೂರಿದ್ದಾರೆ.
ವಿಡಿಯೋದಲ್ಲಿ ಘೋಷಣೆ ಕೂಗುತ್ತಾ ಹೊರಟಿದ್ದ ರೈತರ ಗುಂಪಿನ ಮೇಲೆ ಹಿಂದಿನಿಂದ ಎಸ್‌ಯುವಿಯೊಂದು ಉದ್ದೇಶಪೂರ್ವಕವಾಗಿ ನುಗ್ಗುತ್ತಿದೆ. ರೈತರು ಚಲ್ಲಾಪಿಲ್ಲಿಯಾಗುತ್ತಾರೆ. ಕೆಲ ರೈತರ ಮೇಲೆ ನೇರವಾಗಿ ಕಾರು ಹರಿದಿದೆ. ನಾನುಗೌರಿ.ಕಾಂ ಈ ವಿಡಿಯೋವನ್ನು ಪರಿಶೀಲಿಸಲು ಯತ್ನಿಸುತ್ತಿದೆ..
ಮತ್ತೊಂದು ವೈರಲ್ ವಿಡಿಯೋದಲ್ಲಿ ರೈತರ ಮೇಲೆ ಹರಿಸಿದ ನಂತರ ಅದೇ ಕಾರಿನಿಂದ ಇಬ್ಬರು ಇಳಿದು ಓಡಿ ಹೋಗುತ್ತಿರುವ ದೃಶ್ಯಗಳು ಸೆರೆಯಾಗಿವೆ. ಕಾರಿನ ಚಕ್ರಕ್ಕೆ ರೈತನೊಬ್ಬ ಸಿಕ್ಕಿ ನರಳುತ್ತಿರುವ ಹೃದಯ ವಿದ್ರಾವಕ ದೃಶ್ಯ ಕಂಡುಬಂದಿದೆ. ಕಾರು ಯಾರು ಚಲಾಯಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.
ನಿನ್ನೆ ರೈತರು ಆರೋಪಿಸಿದಂತೆ ಕಾರಿನ ಬಣ್ಣಕ್ಕೂ ಇಂದು ವೈರಲ್ ಆಗಿರುವ ಕಾರಿನ ಬಣ್ಣಕ್ಕೂ ಹೊಂದಾಣಿಕೆಯಾಗಿದೆ. ಅದೇ ರೀತಿ ಹಿಂದಿನಿಂದ ಬಂದು ಗುದ್ದಿದ್ದು ಸಹ ದಾಖಲಾಗಿದೆ. ವಿಡಿಯೋದಲ್ಲಿ ದಾಖಲಾಗಿರುವ ರೈತರೇ ಮೃತಪಟ್ಟಿರುವುದರಿಂದ ಈ ವಿಡಿಯೋಗೆ ಸಾಕಷ್ಟು ಮಾನ್ಯತೆ ಸಿಕ್ಕಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಈ ವಿಡಿಯೋವನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಟ್ವೀಟ್ ಮಾಡಿ “ನರೇಂದ್ರ ಮೋದಿಯವರೆ ಈ ವಿಡಿಯೋ ನೋಡಿದ್ದೀರಾ? ನಿಮ್ಮ ಸರ್ಕಾರ ನನ್ನನ್ನು ಯಾವುದೇ ಎಫ್‌ಐಆರ್ ಅಥವಾ ಯಾವುದೇ ಆದೇಶವಿಲ್ಲದೆ ಕಳೆದ 28 ಗಂಟೆಗಳಿಂದ ಬಂಧನದಲ್ಲಿಟ್ಟಿದೆ. ಆದರೆ ಅನ್ನದಾತರ ಮೇಲೆ ಕಾರು ಹರಿಸಿದ ಈ ವ್ಯಕ್ತಿಯನ್ನುಇದುವರೆಗೂ ಬಂಧಿಸಿಲ್ಲ ಏಕೆ” ಎಂದು ಪ್ರಶ್ನಿಸಿದ್ದಾರೆ.
ಲಖಿಂಪುರ್ ಖೇರಿಯಲ್ಲಿ ಭಾನುವಾರ ರೈತರ ಮೇಲೆ ಕಾರು ಹರಿಸಿ 4 ರೈತರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಬೇಕು ಮತ್ತು ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿ ಬಿಜೆಪಿ ಸಂಸದ ವರುಣ್ ಗಾಂಧಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಸೋಮವಾರ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ರೈತರ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಒತ್ತಾಯಿಸಿ ಯುಪಿ ಸಿಎಂಗೆ ಪತ್ರ ಬರೆದ ಬಿಜೆಪಿ ಸಂಸದ ವರುಣ್ ಗಾಂಧಿ


