ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಮತ್ತೆ ಸುದ್ದಿಗೆ ಬಂದಿದೆ. ಚಿಕ್ಕಮಗಳೂರಿನ ಸಮೀಪ ಇರುವ ಈ ಸೂಫಿ ಶ್ರದ್ಧಾಕೇಂದ್ರ ಮೂರು ದಶಕಗಳ ಕಾಲದ ಕರ್ನಾಟಕದ ರಾಜಕಾರಣದ ಗತಿಯನ್ನು
ನಿರ್ಧರಿಸಿದೆ.
ದರ್ಗಾದಲ್ಲಿನ ಧಾರ್ಮಿಕ ಆಚರಣೆಗಳನ್ನು ಮುಜಾವರ್ ನಡೆಸಬೇಕೆಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ2018ರಲ್ಲಿ ಹೊರಡಿಸಿದ್ದ ಆದೇಶವನ್ನು, ಕಳೆದ ವಾರ (ಸೆಪ್ಟೆಂಬರ್27) ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ರದ್ದುಗೊಳಿಸಿದೆ. ಹಾಗೂ ಈಗಿನ ಸರಕಾರ ಈ ಪ್ರಕರಣವನ್ನು ಹೊಸದಾಗಿ ಪರಿಶೀಲಿಸಬೇಕು, ಮತ್ತು ಮರುಪರಿಶೀಲನೆ ಮಾಡುವಾಗ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ನೇತೃತ್ವದ ತ್ರಿಸದಸ್ಯ ಸಮಿತಿ ನೀಡಿದ್ದ ವರದಿಯನ್ನು ಗಣನೆಗೆ ತೆಗೆದುಕೊಳ್ಳಬಾರದು ಎಂದು ಹೇಳಿದೆ. ಈ ತೀರ್ಪನ್ನು ಬಿಜೆಪಿ ನಾಯಕರು ಸ್ವಾಗತಿಸಿದರು. ಇಷ್ಟು ದಿನಗಳ ಕಾಲ ತಾವು ಎದುರು ನೋಡುತ್ತಿದ್ದ ದಿನ ಬಂದೇಬಿಟ್ಟಿತು ಎಂದು ಸಂಘ ಪರಿವಾರದ ನಾಯಕರು ಸಂಭ್ರಮಿಸಿದರು.
ಧಾರ್ಮಿಕ ಆಚರಣೆಗಳನ್ನು ನಡೆಸಲು ಮುಜಾವರ್ ಅವರ ನೇಮಕ ಸಂವಿಧಾನದ ಆರ್ಟಿಕಲ್ 25ಕ್ಕೆ ವ್ಯತಿರಿಕ್ತವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಮುಸಲ್ಮಾನ ಧರ್ಮಕ್ಕೆ ಸೇರಿದ ಮುಜಾವರ್ ದೀಪ ಬೆಳಗಿಸಿ ಪೂಜೆ ಮಾಡುವುದು ಅವರ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾದುದು; ಹಾಗೂ ಭಕ್ತರಾಗಿ ಹೋಗುವ ಹಿಂದೂಗಳ ಹಕ್ಕುಗಳಿಗೂ ಚ್ಯುತಿ ಎಂದು ತೀರ್ಪಿನಲ್ಲಿ ಉಲ್ಲೇಖವಾಗಿದೆ. ಆ ಕಾರಣ ನ್ಯಾಯಾಲಯವು ಹಿಂದೂ ಅರ್ಚಕರ ನೇಮಕದ ಪರವಾಗಿದೆ ಎಂದು ಗ್ರಹಿಸಲಾಗಿದೆ.
ತೀರ್ಪು ಹೊರಬಂದ ಎರಡು ದಿನಗಳ ನಂತರ (ಸೆಪ್ಟೆಂಬರ್ 29) ಕಾಳಿ ಮಠದ ರಿಷಿಕುಮಾರ ಎಂಬ ಸ್ವಾಮೀಜಿ ಬಾಬಾಬುಡನ್ ಗಿರಿಗೆ ಹೋಗಿ ಅಲ್ಲಿ ದರ್ಗಾದ ಎದುರು ಧರಣಿ ಕುಳಿತಿದ್ದರು. ಈಗಲಾದರೂ ಎಲ್ಲಾ ಹಿಂದು ಸ್ವಾಮಿಗಳು ಒಂದಾಗಿ ಹಿಂದು ಅರ್ಚಕರ ನೇಮಕಕ್ಕೆ ಒತ್ತಾಯ ಮಾಡಬೇಕು ಎಂದರು. ಇಂಧನ ಸಚಿವ ವಿ.ಸುನೀಲ್ ಕುಮಾರ್, ಮಾಜಿ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಇನ್ನೂ ಅನೇಕ ನಾಯಕರು ಹಿಂದೂ ಅರ್ಚಕರ ನೇಮಕ ಆಗಬೇಕೆಂಬ ಹಲವು ದಿನಗಳ ಒತ್ತಾಯಕ್ಕೆ ಕೋರ್ಟ್ ತೀರ್ಪು ಪೂರಕವಾಗಿದೆ ಎಂದರು.
ನಾಗಮೋಹನ ದಾಸ್ ಸಮಿತಿ

ಈ ವ್ಯಾಜ್ಯ 2003ರ ಹೊತ್ತಿಗೇ ಸುಪ್ರೀಂ ಕೋರ್ಟ್ ತಲುಪಿತ್ತು. ಸರ್ವೋಚ್ಚ ನ್ಯಾಯಾಲಯ ೨೦೧೫ರ ಸೆಪ್ಟೆಂಬರ್‌ನ ತನ್ನ ಆದೇಶದಲ್ಲಿ ಈ ಶ್ರದ್ಧಾಕೇಂದ್ರಕ್ಕೆ ಸಂಬಂಧಪಟ್ಟ ಎಲ್ಲರೊಂದಿಗೂ ಸಮಾಲೋಚನೆ ನಡೆಸಿ ಅದು ಯಾರಿಗೆ ಸೇರಬೇಕಾದ್ದು ಎಂಬ ಬಗ್ಗೆ ತೀರ್ಮಾನಕ್ಕೆ ಬರಬೇಕೆಂದು ರಾಜ್ಯ ಸರಕಾರಕ್ಕೆ ನಿರ್ದೇಶಿಸಿತ್ತು. ಅದರಂತೆ ರಾಜ್ಯ ಸರಕಾರ ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ನಾಗಮೋಹನ ದಾಸ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು. ಸಮಿತಿಯು ಪ್ರಕರಣದ ಬಗ್ಗೆ ಎಲ್ಲಾ ಬಣಗಳ ಹೇಳಿಕೆ ಪಡೆದು 2017ರ ಡಿಸೆಂಬರ್‌ನಲ್ಲಿ ವರದಿ ಸಲ್ಲಿಸಿತು.
ಸಮಿತಿಯ ಸದಸ್ಯರು 1837ರಿಂದ ಲಭ್ಯವಿದ್ದ ವಿವಿಧ ದಾಖಲೆಗಳನ್ನು ಪರಿಶೀಲಿಸಿ ಕೆಲವು ಅಂಶಗಳಲ್ಲಿ ಅಂತಿಮ ಅಭಿಪ್ರಾಯಕ್ಕೆ ಬಂದಿದ್ದರು. ಮೊದಲನೆಯದಾದಿ ಶ್ರದ್ಧಾಕೇಂದ್ರದ ಹೆಸರು – ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ. ಹಿಂದು ಹಾಗೂ ಮುಸಲ್ಮಾನರಿಬ್ಬರೂ ಭಕ್ತರಿದ್ದಾರೆ ಎಂಬುದು ನಿರ್ವಿವಾದ. ಅಲ್ಲಿ ನಡೆಯುತ್ತಿದ್ದ ಧಾರ್ಮಿಕ ಆಚರಣೆಗಳು – ಬಂದ ಯಾತ್ರಿಗಳಿಗೆ ಆಹಾರ ಧಾನ್ಯ ಕೊಡುವುದು (ಫತೇಹ), ಸಮಾಧಿಗಳಿಗೆ ಹಾಗೂ ಪಾದುಕೆಗಳಿಗೆ ಹೂವನ್ನು ಅರ್ಪಿಸುವುದು, ಗಂಧ ಲೇಪನ, ಗಂಧದ ಕಡ್ಡಿ ಹಚ್ಚುವುದು, ನಂದಾದೀಪ ಹಚ್ಚುವುದು, ಬಾವುಟ ಹಾರಿಸುವುದು, ನಗಾರಿ ಬಾರಿಸುವುದು ಹಾಗೂ ಭಕ್ತರಿಗೆ ತೀರ್ಥ ನೀಡುವುದು – ಇವೆಲ್ಲಾ ದರ್ಗಾ ಮುಜರಾಯಿ ಇಲಾಖೆ ಅಡಿ ಕೆಲಸ ನಿರ್ವಹಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತ್ತು. ಶಾಖಾದ್ರಿಯವರೇ ಆಡಳಿತಾಧಿಕಾರಿಯಾಗಿ ಮುಂದುವರಿಯಬೇಕು ಹಾಗೂ ಮುಜಾವರ್ ಅವರೇ ಧಾರ್ಮಿಕ ಆಚರಣೆಗಳನ್ನು ನಡೆಸಬೇಕು ಎಂದಿತ್ತು. ಜೊತೆಗೆ ಧಾರ್ಮಿಕ ದತ್ತಿ ನಿಧಿ ಆಯುಕ್ತರು 2010ರ ಮಾರ್ಚ್ 10ರಂದು ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಿದ ಹೇಳಿಕೆಯಲ್ಲಿ, ಹಿಂದೂ ಅರ್ಚಕರ ನೇಮಕಾತಿ ಪರವಾಗಿ ಮಾಡಿದ್ದ ಶಿಫಾರಸ್ಸನ್ನು ಸಮಿತಿ ತಿರಸ್ಕರಿಸಿತ್ತು. ಸರಕಾರ ಸಮಿತಿಯ ವರದಿಯ ಆಧಾರದ ಮೇಲೆ ೨೦೧೮ರಲ್ಲಿ ಆದೇಶ ಹೊರಡಿಸಿತ್ತು.
ವಿವಾದ
ಇಡೀ ವಿವಾದದ ಕೇಂದ್ರ ಇರುವುದು ಶ್ರದ್ಧಾಕೇಂದ್ರದ ಮೂಲ ಗುಣಲಕ್ಷಣಗಳು ಹಾಗೂ ಅವನ್ನು ಹಾಗೆಯೇ ಉಳಿಸಿಕೊಳ್ಳುವ ಬಗ್ಗೆ. ಶಾಂತಿಗಾಗಿ ನಾಗರಿಕರ ವೇದಿಕೆ ಬಯಸುವುದು ಸೂಫಿ ಸಂತರ ನೆಲವೀಡು ಹಾಗೆ ಉಳಿಯಬೇಕು ಎಂಬುದು. ಅನುವಂಶಿಕ ಆಡಳಿತಾಧಿಕಾರಿ ಶಾಖಾದ್ರಿ ಪ್ರಕಾರ ಆ ಜಾಗದ ನಿರ್ವಹಣೆ ಅವರಲ್ಲೇ ಮುಂದುವರಿಯಬೇಕು ಎಂದಿದೆ. ಇನ್ನು ಶ್ರೀಗುರು ದತ್ತಾತ್ರೇಯ ಪೀಠ ಸಂವರ್ಧನಾ ಸಮಿತಿಯು ಅದು ದರ್ಗಾ ಅಲ್ಲ ದತ್ತಪೀಠ ಹಾಗಾಗಿ ಅಲ್ಲಿ ಆಗಮ ಪದ್ಧತಿಯಂತೆ ಅರ್ಚಕರ ನೇಮಕವಾಗಿ ತ್ರಿಕಾಲ ಪೂಜೆ ಆಗಬೇಕು ಎಂದು ಒತ್ತಾಯಿಸುತ್ತಿದೆ.
ವಿವಾದ ಹುಟ್ಟಿಕೊಂಡದ್ದು 1975ರಲ್ಲಿ. ಆಗ ಇದು ಹಿಂದೂ-ಮುಸ್ಲಿಂ ಮಧ್ಯೆ ಹಿಂದಿರುವ ವಿವಾದದ ರೂಪವಾಗಿರಲಿಲ್ಲ. ವಕ್ಫ್ ಬೋರ್ಡ್ ದರ್ಗಾವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಾಗ ಅದರ ವಿರುದ್ಧ ಅಂದಿನ ಆಡಳಿತಾಧಿಕಾರಿ ನ್ಯಾಯಾಲಯಕ್ಕೆ ಹೋದರು. ಚಿಕ್ಕಮಗಳೂರು ನ್ಯಾಯಾಲಯ 1980ರಲ್ಲಿ ದರ್ಗಾವನ್ನು ಪುನಃ ಮುಜರಾಯಿ ಇಲಾಖೆಗೆ ವರ್ಗಾಯಿಸಲು ಆದೇಶಿಸಿತು. ಹಾಗೂ ತನ್ನ ತೀರ್ಪಿನಲ್ಲಿ ಇದೊಂದು ಸೌಹಾರ್ದ ಪರಂಪರೆಯ ಸ್ಥಳ, ಹಿಂದೂ ಹಾಗೂ ಮುಸಲ್ಮಾನ ಇಬ್ಬರಿಗೂ ಇದು ಶ್ರದ್ಧಾಕೇಂದ್ರ ಎಂದು ಅಭಿಪ್ರಾಯಪಟ್ಟಿತು. ಸರಕಾರ ಶ್ರದ್ಧಾಕೇಂದ್ರವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದಾಗ ವಿವಾದ ಮತ್ತೆ ಕೋರ್ಟ್ ಮೆಟ್ಟಿಲೇರಿತು. ಕರ್ನಾಟಕ ಹೈಕೋರ್ಟ್ 1980ರ ತನ್ನ ತೀರ್ಪಿನಲ್ಲಿ 19ಕ್ಕಿಂತ ಮೊದಲು ಶ್ರದ್ಧಾಕೇಂದ್ರದಲ್ಲಿ ಚಾಲ್ತಿಯಲ್ಲಿದ್ದ ಧಾರ್ಮಿಕ ಆಚರಣೆಗಳನ್ನು ಗುರುತಿಸಿ ಆದೇಶ ಮಾಡಲು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ನಿರ್ದೇಶಿಸಿತು. ಅದರಂತೆ ಆಯುಕ್ತರು 1989ರಲ್ಲಿದ್ದ ಆಚರಣೆಗಳನ್ನು ಪಟ್ಟಿ ಮಾಡಿದರು.
ಆ ನಂತರ 2003ರಲ್ಲಿ ಸಂವರ್ಧನಾ ಸಮಿತಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿತು. ವಿಚಾರಣೆ ನಡೆದು 2007ರಲ್ಲಿ ಮರುತನಿಖೆ ನಡೆಸಿ ವರದಿ ಸಲ್ಲಿಸಲು ಹೈಕೋರ್ಟ್ ಆದೇಶಿಸಿತು. ಅದೇ ತೀರ್ಪನ್ನು 2008ರಲ್ಲಿ ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿಯಿತು. ಆ ಜಾಗದಲ್ಲಿ 1989ರ ಆಯುಕ್ತರ ಆದೇಶದಂತೆ ಯಥಾಸ್ಥಿತಿ ಜಾರಿಯಾಗಬೇಕೆಂದು ನ್ಯಾಯಾಲಯ ಹೇಳಿತು. ನಂತರ 2010ರಲ್ಲಿ ಅಂದಿನ ಸರಕಾರ ಮುಚ್ಚಿದ ಲಕೋಟೆಯಲ್ಲಿ ತನ್ನ ವರದಿ ಸಲ್ಲಿಸಿತು. ಆಗ ಅಂದಿನ ಧಾರ್ಮಿಕ ದತ್ತಿ ನಿಧಿ ಆಯುಕ್ತರು ಆಗಮ ಪದ್ಧತಿಯಂತೆ ಹಿಂದೂ ಅರ್ಚಕರ ನೇಮಕಾತಿಯನ್ನು ಶಿಫಾರಸ್ಸು ಮಾಡಿದ್ದರು.
ರಾಜಕಾರಣ
ಇಷ್ಟರಲ್ಲಾಗಲೇ ಬಿಜೆಪಿ ಹಾಗೂ ಅದರ ಬೆಂಬಲಕ್ಕಿದ್ದ ಸಂಘಪರಿವಾರ ಇದೇ ವಿಚಾರವನ್ನು ರಾಜಕಾರಣಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ ಹೊಸ ಹೊಸ ಆಚರಣೆಗಳನ್ನು ಆರಂಭಿಸಿ ಹಲವು ವರ್ಷಗಳೇ ಆಗಿದ್ದವು. ದತ್ತ ಜಯಂತಿ, ದತ್ತ ಮಾಲಾ ಅಭಿಯಾನ, ಅನಸೂಯ ಜಯಂತಿ, ಶೋಭಾ ಯಾತ್ರೆ, ಸಂಕೀರ್ತನಾ ಯಾತ್ರೆ – ಹೀಗೆ ನಾನಾ ಕಾರ್ಯಕ್ರಮಗಳ ಮೂಲಕ ಆ ಜಾಗ ಹಿಂದೂಗಳ ಪವಿತ್ರ ಕ್ಷೇತ್ರ ಎಂದು ಘೋಷಣೆ ಆಗಬೇಕೆಂದು ಒತ್ತಾಯಿಸಿದರು. ಕೇಂದ್ರ ಮಂತ್ರಿಯಾಗಿದ್ದ ಅನಂತ ಕುಮಾರ್ 2003ರಲ್ಲಿ ಒಮ್ಮೆ “ಬಾಬಾಬುಡನಗಿರಿ ದಕ್ಷಿಣ ಭಾರತದ ಅಯೋಧ್ಯ ಆಗಲಿದೆ” ಎಂದು ಘೋಷಿಸಿದ್ದರು. ಅದಕ್ಕೂ ಮೊದಲು 1999ರಲ್ಲಿ ’ಮುಸಲ್ಮಾನರ ಹಿಡಿತದಿಂದ ದತ್ತಪೀಠವನ್ನು ಮುಕ್ತಗೊಳಿಸಲು ಆತ್ಮಹತ್ಯಾ ದಳವನ್ನು’ ಕಳುಹಿಸುವ ಬೆದರಿಕೆ ಹಾಕಿದ್ದವರು ಅನಂತ ಕುಮಾರ್ ಹೆಗಡೆ. ಅವರೂ ಇತ್ತೀಚೆಗೆ ಕೇಂದ್ರದಲ್ಲಿ ಮಂತ್ರಿ ಆಗಿದ್ದರು.
ಪ್ರತಿವರ್ಷ ಡಿಸೆಂಬರ್‌ನಲ್ಲಿ ದತ್ತಮಾಲಾ ಅಭಿಯಾನ, ದತ್ತ ಜಯಂತಿ ನಡೆಯುತ್ತದೆ. ಸಾವಿರಾರು ಹಿಂದುತ್ವದ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ನಡೆದುಕೊಂಡು ಗುಹೆ ಪ್ರವೇಶ ಮಾಡುವತನಕ ಅವರು ಕೂಗುವ ಘೋಷಣೆಗಳನ್ನು ಒಮ್ಮೆ ಕೇಳಬೇಕು. ಅವರಲ್ಲಿ ಭಕ್ತಿಗಿಂತ ದ್ವೇಷ ಉಕ್ಕಿ
ಹರಿಯುತ್ತಿರುತ್ತದೆ. ದಾರಿಯುದ್ದಕ್ಕೂ ರಾಜಕೀಯ ದ್ವೇಷದ, ಕೋಮುದ್ವೇಷದ ಹೇಳಿಕೆಗಳೇ ಏರಿಳಿಯುತ್ತವೆ!

ಸೂಫಿ ಸಂತರು
ಈ ನೆಲದ ಸೌಹಾರ್ದ ಪರಂಪರೆಯ ಬಗ್ಗೆ ಅಲ್ಪ ಸ್ವಲ್ಪ ಅರಿವು ಇರುವ ಯಾರೂ ಈ ದ್ವೇಷದ ಮಾತುಗಳಿಗೆ ಸೊಪ್ಪು ಹಾಕಲಾರರು. ಅದೇ ಕಾರಣಕ್ಕೆ ಈ ನಾಡಿನ ನೂರಾರು ಪ್ರಗತಿಪರ ಮನಸ್ಸುಗಳು ಸಂಘಪರಿವಾರದ ರಾಜಕಾರಣದ ವಿರುದ್ಧ ಬೀದಿಗಿಳಿದು ಹೋರಾಡಿದ್ದಾರೆ. ಹಲವು ಗಣ್ಯಮಾನ್ಯ ಸಾಹಿತಿಗಳು, ಚಿಂತಕರು, ಹೋರಾಟಗಾರರು ಈ ಚಳವಳಿ ಜೊತೆ ಇದ್ದಾರೆ. ಅವರ ಪರ ವಾದಕ್ಕೆ ಐತಿಹಾಸಿಕ ದಾಖಲೆಗಳೂ ಇವೆ. ಶತಮಾನಗಳಿಂದ ಈ ನೆಲಕ್ಕೆ ಯಾರೆಲ್ಲಾ ಯಾತ್ರಾರ್ಥಿಗಳು ಶ್ರದ್ಧೆ ವ್ಯಕ್ತ ಪಡಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಇದು ಮೂಲತಃ ಸೂಫಿ ಸಂತ ದಾದಾ ಹಯಾತ್ ಮೀರ್ ಖಲಂದರ್ ಅವರ ದರ್ಗಾ ಎಂದು ಹೇಳಲಾಗಿದೆ. ಆತ ಪ್ರವಾದಿ ಮೊಹಮ್ಮದ್ ಅವರ ಸಹಚರ. ಇಸ್ಲಾಂ ಸಾರಲೆಂದು ಇಲ್ಲಿಗೆ ಬಂದು ನೆಲೆಸಿದ್ದು ಎಂದು ಸ್ಥಳೀಯರ ನಂಬಿಕೆ. ಅದೇ ಕಾರಣಕ್ಕೆ ಈ ಬೆಟ್ಟವನ್ನು ’ದಾದಾ ಕಾ ಪಹಾಡ್ ಎಂದೂ ಕರೆಯುತ್ತಾರೆ. ಹಾಗೆಯೇ ಹಿಂದೂಗಳು ಇದು ಮೂರು ಮುಖಗಳ ದತ್ತಾತ್ರೇಯನ ತಾಣ ಎಂದು ನಂಬಿದ್ದಾರೆ. ದಾದ ಹಯಾತ್ ಹಾಗೂ ದತ್ತಾತ್ರೇಯ ಎರಡೂ ಪದಗಳು ಒಂದೇ ರೀತಿ ಕೇಳಿಸುವುದನ್ನೂ ಇಲ್ಲಿ ಗಮನಿಸಬಹುದು. ಮುಂದೆ ಮತ್ತೊಬ್ಬ ಸೂಫಿ ಬಾಬಾ ಬುಡನ್ ಅಲ್ಲಿ ಬಂದು ನೆಲೆಸಿದರು. ಅವರೇ ಈ ಭಾಗಕ್ಕೆ ಕಾಫಿ ತಂದವರು ಎಂಬ ಮಾತಿದೆ.
ಅವರ ವಂಶಜರೇ ಅಂದಿನಿಂದ ಕೇಂದ್ರದ ಆಡಳಿತಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೈಸೂರು ಸಂಸ್ಥಾನದ ದಾಖಲೆಗಳ ಪ್ರಕಾರ 1904-05ರ ಸಾಲಿನಲ್ಲಿ ಒಟ್ಟು 9788 ಯಾತ್ರಾರ್ಥಿಗಳು ಈ ಸ್ಥಳಕ್ಕೆ ಭೇಟಿ ನೀಡಿದ್ದರು. ಅವರಲ್ಲಿ7,237 ಮಂದಿ ಮುಹಮ್ಮದೀಯರು, 638ಮಂದಿ ಹಿಂದೂಗಳು, 83 ಮಂದಿ ಬ್ರಾಹ್ಮಣರು, 140 ಗೋಸಾಯಿಗಳು,984ಫಕೀರರು ಹಾಗೂ 706 ಪರಯ್ಯಾಗಳು. (ಆ ಪಟ್ಟಿಯಲ್ಲಿ ಬ್ರಾಹ್ಮಣರನ್ನು ಹಿಂದೂಗಳಿಂದ ಪ್ರತ್ಯೇಕಿಸಿ ಗುರುತಿಸಿದ್ದಾರೆ). ಹೀಗೆ ಅನೇಕ ಐತಿಹಾಸಿಕ ಕುರುಹುಗಳ ಆಧಾರದ ಮೇಲೆ ಇದು ಯಾವುದೋ ಒಂದು ಧರ್ಮಕ್ಕೆ ಸೀಮಿತವಾದ ಶ್ರದ್ಧಾಕೇಂದ್ರವಲ್ಲ ಎಂಬುದು ಸಾಬೀತಾಗುತ್ತದೆ. ಬದಲಿಗೆ, ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಸೌಹಾರ್ದ ಪರಂಪರೆಯ ಹಿನ್ನೆಲೆ ಇರುವ ತಾಣ.
ಹಿಂದಿನಿಂದಲೂ ಮುಜಾವರ್ ಅವರೇ ಧಾರ್ಮಿಕ ಆಚರಣೆಗಳನ್ನು ಮಾಡುತ್ತಿದ್ದಾರೆ. ಇದು ಇಲ್ಲಿ ಮಾತ್ರವಲ್ಲ, ದೇಶದ ಬೇರಾವುದೇ ಸೂಫಿ ಕೇಂದ್ರಗಳಲ್ಲೂ ಇದೇ ಪದ್ಧತಿ ಇದೆ. ಹಾಗಿರುವಾಗ, ದೀಪ ಬೆಳಗಿದರೆ, ಅಥವಾ ಕಾಯಿ ಒಡೆದರೆ ಅಲ್ಲಿ ಮುಸ್ಲಿಂ ಧರ್ಮಕ್ಕೆ ಸೇರಿದ ಮುಜಾವರ್ ಅವರಿಗೆ ಕಸಿವಿಸಿ ಆಗುವ ಪ್ರಮೇಯವೇನೂ ಇಲ್ಲ. ಜೊತೆಗೆ ಇಷ್ಟು ವರ್ಷಗಳ ಕಾಲ, ಅಂದರೆ ಹಿಂದುತ್ವದ ರಾಜಕಾರಣ ಆರಂಭ ಆಗುವ ಮೊದಲಿನ ತನಕ, ಹಿಂದೂ ಯಾತ್ರಾರ್ಥಿಗಳು ಮುಜಾವರ್ ಮೂಲಕವೇ ಪೂಜೆ ಸಲ್ಲಿಸುತ್ತಿದ್ದರಲ್ಲ. ಎಲ್ಲವನ್ನೂ ಹಿಂದು-ಮುಸ್ಲಿಂ ಎಂಬ ವಿಭಾಗ ಮಾಡಿ ನೋಡುವವರಿಗೆ ಈ ಸೂಕ್ಷ್ಮಗಳು ಅರ್ಥವಾಗಲಾರವು. ಎಲ್ಲರನ್ನೂ ತಮ್ಮವರು ಎಂಬಂತೆ ಕಾಣುವ ಪರಂಪರೆ ಇಲ್ಲಿದೆ. ಇಂತಹ ಆಚರಣೆ ನಮ್ಮ ಪರಂಪರೆಯ ಭಾಗವಾಗಿಯೇ ಇದೆ ಎಂಬುದನ್ನು ಇತ್ತೀಚಿನ ತೀರ್ಪಿನಲ್ಲಿ ನ್ಯಾಯಾಲಯವೂ ಪರಿಗಣಿಸಿದಂತಿಲ್ಲ.
ದತ್ತ ಪೀಠ ಸಂವರ್ಧನಾ ಸಂರಕ್ಷಣಾ ಸಮಿತಿ ಸರಕಾರದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಈಗ ಈ ತೀರ್ಪ ಬಂದಿದೆ. ಮುಂದಿನದ್ದನ್ನು ಸರಕಾರ ತೀರ್ಮಾನ ಮಾಡಬೇಕಿದೆ. ಈ ಹಿಂದಿನ ಸರಕಾರವೇನೊ ಎಲ್ಲಾ ಬಣಗಳ ಅಭಿಪ್ರಾಯ ಸಂಗ್ರಹಿಸಲು ಸಮಿತಿಯನ್ನು ನೇಮಿಸಿತ್ತು. ಈಗ ಹೇಗೆ ನಡೆಯುತ್ತದೆಯೋ ಕಾದು ನೋಡಬೇಕು. ಕ್ಯಾಬಿನೆಟ್ ಏಕಾಏಕಿ ತೀರ್ಮಾನ ತೆಗೆದುಕೊಂಡು ಆದೇಶ ಹೊರಡಿಸಬಹುದು. ಹಾಗೆ ತೆಗೆದುಕೊಂಡ ತೀರ್ಮಾನದ ಬಗ್ಗೆ ಯಾರಿಗೇ ಆಗಲಿ ತಕರಾರುಗಳಿದ್ದರೆ ಅವರು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಹುದು. ಮತ್ತೊಂದು ನ್ಯಾಯಾಂಗದ ಹೋರಾಟಕ್ಕೆ ಅದು ದಾರಿ ಆಗಬಹುದು.
ಜಿತೇಶ್ ಎಸ್
ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು


