ಮೃತ ವ್ಯಕ್ತಿಯ ಮೊಬೈಲ್ ಕದ್ದು, ಸಿಕ್ಕಿಬಿದ್ದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಒಬ್ಬರನ್ನು ಕೇರಳ ರಾಜ್ಯ ಸರ್ಕಾರ ಅಮಾನತು ಮಾಡಿದೆ.
ರೈಲು ಅಪಘಾತದಲ್ಲಿ ಮೃತಪಟ್ಟಿದ್ದ ಯುವಕನ ಮೊಬೈಲ್ ಅನ್ನು ಚತ್ತನ್ನೂರ್‌ನ ಕೋಲಂನಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿದ್ದ ಜ್ಯೋತಿ ಸುಧಾಕರ್ ಕದ್ದಿದ್ದರು. ಇವರು ಈ ಹಿಂದೆ ತಿರುವನಂತಪುರಂನ ಮಂಗಲಪುರಂ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿ ಸೇವೆ ಸಲ್ಲಿಸಿದ್ದರು. ತಿರುವನಂತಪುರಂನ ಪೆರುಬಂತ್ತೂರ್ ನಿವಾಸಿ ಸ್ಲೈನ್ ಅರುಣ್ ಜೆರ್‍ರಿ ಅವರು ಈ ಹಿಂದೆ ಮೃತಪಟ್ಟಿದ್ದರು. ತನಿಖೆ ವೇಳೆ ಸಿಕ್ಕಿದ್ದ ಮೊಬೈಲ್‌ಗೆ ಸುಧಾಕರ್ ತನ್ನ ನಂಬರ್ ಹಾಕಿಕೊಂಡು ಬಳಸುತ್ತಿದ್ದರು.
ಟ್ರೈನ್‌ಗೆ ಸಿಲುಕಿ ಜೆರ್‍ರಿ ಜೂನ್ 18, 2021ರಂದು ಸಾವನ್ನಪ್ಪಿದ್ದರು. ಜೆರ್‍ರಿಯ ಸಂಬಂಧಿಕರು ಮೃತದೇಹವನ್ನು ವಶಕ್ಕೆ ಪಡೆಯಲು ಬಂದಾಗ, ಮೊಬೈಲ್ ಸೇರಿದಂತೆ ಹಲವು ವಸ್ತುಗಳು ಕಾಣೆಯಾಗಿದ್ದವು. ಟ್ರೈನ್ ಅಡಿ ಸುಲುಕಿ ಈ ಎಲ್ಲ ವಸ್ತುಗಳು ನಾಶವಾಗಿವೆ ಎಂದು ಪೊಲೀಸರು ಹೇಳಿದ್ದರು. ಅದಾಗ್ಯೂ ಮೊಬೈಲ್ ಕಳೆದುಹೋಗಿರುವ ಸಂಬಂಧ, ಜೆರ್‍ರಿ ಸಂಬಂಧಿಕರು ಕೇರಳ ಡಿಜಿಪಿ ಹಾಗೂ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕೇರಳ ಸೈಬರ್ ಪೊಲೀಸರು ಈ ಮೊಬೈಲ್ ಚತ್ತನ್ನೂರ್‌ನಲ್ಲಿ ಆಕ್ಟೀವ್ ಆಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಹೆಚ್ಚಿನ ತನಿಖೆ ನಡೆಸಿದಾಗ ಈ ಪೋನ್ ಅನ್ನು ಇನ್‌ಸ್ಪೆಕ್ಟರ್ ಸುಧಾಕರ್ ಬಳಸುತ್ತಿರುವುದನ್ನು ಸೈಬರ್ ಪೊಲೀಸರು ದೃಢಪಡಿಸಿದ್ದಾರೆ.
ಜೆರ್‍ರಿ ಸಾವಿನ ವಿಚಾರಣೆಯನ್ನು ಮಂಗಲಪುರಂ ಎಸ್‌ಐ ಆಗಿದ್ದ ಸುಧಾಕರ್ ಅವರ ನೇತೃತ್ವದಲ್ಲಿ ನಡೆಸಲಾಗಿತ್ತು. ವಿಚಾರಣೆ ವೇಳೆ ಸುಧಾರಕ್ ಮೊಬೈಲ್ ಕದ್ದಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದ ವಸ್ತುಗಳ ದಾಖಲೆ ಸಂಗ್ರಹದಲ್ಲಿ ಮೊಬೈಲ್ ಅನ್ನು ಸೇರಿಸಿರಲಿಲ್ಲ. ಜ್ಯೋತಿ ಸುಧಾಕರ್ ವಿರುದ್ಧ ಹೆಚ್ಚಿನ ತನಿಖೆ ನಡೆಸಲು ತಿರುವನಂತಪುರ ಡಿಐಜಿ ಸೂಚಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.


