ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತರನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಸಂಯುಕ್ತಾ ಕಿಸಾನ್ ಮೋರ್ಚಾ ಕರೆ ನೀಡಿದ್ದ ‘ರೈತ ಹುತಾತ್ಮ ದಿನ ಆಚರಣೆ’ಗೆ ಅನ್ನದಾತರ ಮಕ್ಕಳು ಬೆಂಗಳೂರಿನಲ್ಲೂ ಸ್ಪಂದಿಸಿದರು.
ನಗರದ ಮೌರ್ಯ ವೃತ್ತದಲ್ಲಿ ಸೇರಿದ ರೈತ ಮಕ್ಕಳು, ಮೇಣದ ಬತ್ತಿ ಹಿಡಿದು ಹುತಾತ್ಮ ರೈತರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ರೈತ ನಾಯಕಿ ಕವಿತಾ ಕುರುಗಂಟಿ ಮಾತನಾಡಿ, “ಬಿಜೆಪಿ ಹಿಂಸಾಚಾರವನ್ನು ಸೃಷ್ಟಿಸಿ ರೈತರ ಹೋರಾಟವನ್ನು ಮುಗಿಸಲು ಯತ್ನಿಸುತ್ತಿದೆ. ಕೋಮು ಗಲಭೆಯನ್ನು ಸೃಷ್ಟಿಸಲು ಯತ್ನಿಸುತ್ತಿದೆ. ಬಿಜೆಪಿಯವರು ಸಿಖ್ ರೈತರು ಹಾಗೂ ಹಿಂದೂಗಳು ಎಂದು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ” ಎಂದು ತಿಳಿಸಿದರು.
ಇದನ್ನೂ ಓದಿರಿ: ಲಖಿಂಪುರ್ ಹತ್ಯಾಕಾಂಡ: ಹುತಾತ್ಮ ರೈತರಿಗಾಗಿ ರೈತರಿಂದ ಅಂತಿಮ ನಮನ
“ಬಿಜೆಪಿಯವರ ಈ ರೀತಿಯ ಒಡೆದು ಆಳುವ ನೀತಿ, ಅವರಿಗೆ ಗೆಲುವು ತಂದುಕೊಡುವುದಿಲ್ಲ ಎಂದು ಸಂಯುಕ್ತಾ ಕಿಸಾನ್ ಮೋರ್ಚಾ ಎಚ್ಚರಿಸಿದೆ. ರೈತರ ಹೋರಾಟವನ್ನು ಬಿಜೆಪಿ ಹೇಗೆ ನೋಡುತ್ತಿದೆ ಎಂಬುದರ ಕುರಿತು ರೈತರು ಜಾಗೃತರಾಗಿದ್ದೇವೆ. ಲಖಿಂಪುರ್ ಖೇರಿಯಲ್ಲಿ ಹತ್ಯೆಯಾದ ರೈತರಿಗೆ ನ್ಯಾಯ ದೊರಕಬೇಕಿದೆ. ಅದಕ್ಕಾಗಿ ನಾವು ಧ್ವನಿ ಎತ್ತಿದ್ದೇವೆ. ಸಚಿವ ಅಜಯ್ ಮಿಶ್ರಾ ಅವರ ರಾಜೀನಾಮೆಯನ್ನು ಕೇಂದ್ರ ಸರ್ಕಾರ ಪಡೆಯಬೇಕು. ಕ್ರಿಮಿನಲ್ ಆರೋಪ ಹೊತ್ತಿರುವ ಅಜಯ್ ಮಿಶ್ರಾ ಅವರು ಇನ್ನೂ ಸಚಿವರಾಗಿರುವುದು ನಾಚಿಗೆಗೇಡಿನ ಸಂಗತಿ” ಎಂದು ಬೇಸರ ವ್ಯಕ್ತಪಡಿಸಿದರು.
ರೈತ ಹುತಾತ್ಮ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ ದೀಪ ಬೆಳಗಿಸಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರೈತ ನಾಯಕಿ ಕವಿತ ಕುರುಗಂಟಿ ಮಾತನಾಡಿದರು.@kkuruganti #LakhimpurKheriMassacre #Lakhimpur #Farmers pic.twitter.com/iT3tAIe1ty
— Naanu Gauri (@naanugauri) October 12, 2021
“ಅಜಯ್ ಮಿಶ್ರಾ ಅವರ ಮಗ ಆಶೀಶ್ ಮಿಶ್ರಾ ಅವರನ್ನು ಇತರ ಆರೋಪಿಗಳ ರೀತಿಯಲ್ಲೇ ನೋಡಬೇಕು. ಆತನಿಗೆ ವಿಐಪಿ ಸ್ಥಾನಮಾನ ನೀಡಬಾರದು. ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ಪ್ರಕರಣದ ತನಿಖೆಯಾಗಬೇಕು. ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು” ಎಂದು ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, “ಇದೊಂದು ಪೂರ್ವ ನಿಯೋಜಿತ ಸಂಚು. ಈ ಹಿಂದೆಯೇ ರೈತರಿಗೆ ಸಚಿವರು ಧಮ್ಕಿಯನ್ನು ಹಾಕಿದ್ದರು. ಆ ಬೆದರಿಕೆ ಪ್ರಕಾರ ರೈತರನ್ನು ಅವರು ಹತ್ಯೆ ಮಾಡಿದ್ದಾರೆ. ಅವರೇ ನಿಜವಾದ ಆರೋಪಿಯಾಗಿದ್ದು, ಅವರನ್ನು ಬಂಧಿಸಬೇಕು. ಅವರು ಸಚಿವ ಸ್ಥಾನದಲ್ಲಿ ಕ್ಷಣ ಕಾಲ ಇರಬಾರದು” ಎಂದು ಅಭಿಪ್ರಾಯಪಟ್ಟರು.
ವಿರೋಧ ಪಕ್ಷಗಳು ಮೌನವಹಿಸಿವೆ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, “ವಿರೋಧ ಪಕ್ಷಗಳು ಕಾರ್ಪೋರೇಟ್‌ಗಳ ಗುಲಾಮರಾಗಿವೆಯೋ ಇಲ್ಲವೋ ಎಂಬ ಸ್ಪಷ್ಟತೆಯನ್ನು ನೀಡಬೇಕು. ನರೇಂದ್ರ ಮೋದಿ ಜಾರಿಗೆ ತಂದ ನೋಟು ರದ್ಧತಿ, ಜಿಎಸ್‌ಟಿ, ಈಗಿನ ಖಾಸಗೀಕರಣವೆಲ್ಲ ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಹಳೆಯ ಅಜೆಂಡಾವಾಗಳಾಗಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇವುಗಳನ್ನು ರದ್ದು ಮಾಡುತ್ತದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಬೇಕ. ಸತ್ತಿರುವ ರೈತರನ್ನು ಕಂಡರೆ ನಮಗೆ ಕಣ್ಣೀರು ಬರುತ್ತದೆ, ದುಃಖವಾಗುತ್ತದೆ ಎಂದು ಕಾಂಗ್ರೆಸ್ ಹೇಳಿದರೆ ಸಾಲಲ್ಲ. ಹೀಗಾಗಿ ಕಾಂಗ್ರೆಸ್‌ನ ಸ್ಪಷ್ಟ ಸಂದೇಶ ಬೇಕು. ವಿರೋಧ ಪಕ್ಷಗಳು ಈ ಬಗ್ಗೆ ಸ್ಪಷ್ಟತೆಯನ್ನು ನೀಡಬೇಕು” ಎಂದರು.
ಇಷ್ಟೆಲ್ಲ ಆಗುತ್ತಿದ್ದರೂ ಬಿಜೆಪಿಯೇ ಗೆದ್ದು ಬರುತ್ತಿದೆಯಲ್ಲ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, “ಮುಂದಿನ ಚುನಾವಣೆಗಳನ್ನು ದೇಶದಲ್ಲಿ ನೋಡಬೇಕಾಗುತ್ತದೆ. ಇವರಿಗೆ (ಬಿಜೆಪಿಯವರಿಗೆ) ದುರಂಕಾರವಿದೆ. ಹಣ, ಜಾತಿ, ಧರ್ಮದ ಆಧಾರದಲ್ಲಿ ಅಧಿಕಾರ ಹಿಡಿಯುತ್ತಿದ್ದ ಇವರ ಕುರಿತು ರೈತರಲ್ಲಿ ಚರ್ಚೆ ನಡೆಯತ್ತಿದೆ. ರೈತರು ಎಚ್ಚೆತ್ತುಕೊಂಡಿದ್ದಾರೆ” ಎಂದು ಹೇಳಿದರು.
ಚಿಂತಕ ಜಿ.ಎನ್.ನಾಗರಾಜ್ ಮಾತನಾಡಿ, “ಈ ಘಟನೆಯನ್ನು ಸಿಖ್ ರೈತರು ಹಾಗೂ ಹಿಂದೂಗಳ ನಡುವಿನ ಗಲಭೆಯಂತೆ ಬಿಂಬಿಸಲು ಬಿಜೆಪಿಯವರು ಯತ್ನಿಸಿದರು. ಕೂಡಲೇ ಎಚ್ಚೆತ್ತಕೊಂಡ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು, ರೈತರು ವರ್ಸಸ್ ಉತ್ತರ ಪ್ರದೇಶ ಸರ್ಕಾರ ಎಂಬ ವಿಚಾರ ಮುಖ್ಯಭೂಮಿಕೆಯಲ್ಲಿ ಜೀವಂತವಾಗಿ ಇರುವಂತೆ ನೋಡಿಕೊಂಡಿದ್ದಾರೆ” ಎಂದರು.
ನೂರಾರು ಅನ್ನದಾತರ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿರಿ: ಲಖಿಂಪುರ್ ಹತ್ಯಾಕಾಂಡದ ಹುತಾತ್ಮ ರೈತರಿಗೆ ಅಂತಿಮ ನಮನ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಭಾಗಿ


