31 ವರ್ಷದ ಶಿಕ್ಷಕ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಜಸ್ತಾನ ರಾಜ್ಯದಲ್ಲಿ ನಡೆದಿದೆ. 7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ್ದ ಜುಂಜುನು ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕ ಕೇಶವ್ ಯಾದವ್‌ನನ್ನು ಬಂಧಿಸಲಾಗಿದೆ.
ಪಠ್ಯಪುಸ್ತಕದಲ್ಲಿದ್ದ ಸಹಾಯವಾಣಿಗೆ ಬಾಲಕಿ ಕರೆ ಮಾಡಿದಾಗ ಪೊಲೀಸರಿಗೆ ವಿಷಯ ತಿಳಿದಿದ್ದು, ಶಿಕ್ಷಕನನ್ನು ಬಂಧಿಸಲಾಗಿದೆ. ಶಾಲಾ ಅವಧಿಯ ನಂತರ ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅಕ್ಟೋಬರ್ 5ರಂದು ಅತ್ಯಾಚಾರ ಎಸಗಿದ್ದಾನೆ. ಬೇರೆ ಯಾರಿಗಾದರೂ ಹೇಳಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಶಿಕ್ಷಕ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ. ಆದರೆ, ಮರ್ಯಾದೆಗೆ ಅಂಜಿದ ಕುಟುಂಬವು ದೌರ್ಜನ್ಯವನ್ನು ರಹಸ್ಯವಾಗಿರಿಸಿತ್ತು ಎಂದು ಸಿಂಗನಾ ಪೊಲೀಸ್ ಠಾಣೆ ಎಸ್‌ಎಚ್‌ಒ ಭಜನಾ ರಾಮ್ ತಿಳಿಸಿದ್ದಾರೆ.
7ನೇ ತರಗತಿಯ ವಿದ್ಯಾರ್ಥಿಯು ತನ್ನ ಸರ್ಕಾರಿ ಶಾಲೆಯ ಪಠ್ಯಪುಸ್ತಕದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆಗಳನ್ನು ಪಡೆದುಕೊಂಡು ಗುರುವಾರ ಸಹಾಯವಾಣಿಗೆ ಕರೆ ಮಾಡಿ, ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಹೇಳಿಕೊಂಡಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಆಕೆಯನ್ನು ಸಂಪರ್ಕಿಸಿ ವಿಚಾರಿಸಿದರು. ನಂತರ, ಪೊಲೀಸ್ ಸೂಪರಿಂಟೆಂಡೆಂಟ್ ಅವರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು ಎಂದು ಪೊಲೀಸರು ಹೇಳಿದ್ದಾರೆ.
ಅಲ್ವಾರ್ ಜಿಲ್ಲೆಯ ನಿವಾಸಿಯಾದ ಆರೋಪಿ ಶಿಕ್ಷಕ ಕೇಶವ್ ಯಾದವ್ ಅವರನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ. ಆತನ ವಿರುದ್ದ ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ)ಯಡಿ ಪ್ರಕರಣ ದಾಖಲಿಸಲಾಗಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಆರೋಪಿಯು ಶಿಕ್ಷಕಿಯೊಬ್ಬರನ್ನು ವಿವಾಹವಾಗಿದ್ದನು. ಆತನ ತಂದೆಯೂ ನಿವೃತ್ತ ಶಿಕ್ಷಕರಾಗಿದ್ದಾರೆ. ಆತನ ಸಹೋದರಿ ಮತ್ತು ಸಹೋದರಿಯ ಪತಿ ಉಪನ್ಯಾಸಕರಾಗಿದ್ದಾರೆ ಎಂದು ತಿಳಿದು ಬಂದಿದೆ.
ಯುಪಿ: ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ
ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ 17 ವರ್ಷದ ಬಾಲಕಿಯನ್ನು ಮೂವರು ಯುವಕರು, ಬಂದೂಕು ತೋರಿಸಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಾಲಕಿಯ ತಂದೆ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹುಡುಗಿಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ, “16 ಮತ್ತು 17 ವರ್ಷ ವಯಸ್ಸಿನ ಇಬ್ಬರು ಸಹೋದರರೊಂದಿಗೆ ಮತ್ತೊಬ್ಬ ಸೇರಿ ನನ್ನ ಮಗಳನ್ನು ಅಪಹರಿಸಿದ್ದರು. ಕಸವನ್ನು ಎಸೆಯಲು ಹೋದಾಗ ಬಂದೂಕು ತೋರಿಸಿ ಆಕೆಯನ್ನು ಕಾಡಿಗೆ ಎಳೆದೊಯ್ಯಲಾಗಿತ್ತು. ಅತ್ಯಾಚಾರವೆಸಗಿ ಅಲ್ಲಿಂದ ಈ ಮೂವರು ಪರಾರಿಯಾಗಿದ್ದಾರೆ” ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿರಿ: ಮಹಾರಾಷ್ಟ್ರ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಬಂಧನ


