ತಮಿಳಿನ ಖ್ಯಾತ ನಟ ಸೂರಿಯಾ ಅಭಿನಯದ ಹಾಗೂ ಅವರ ನಿರ್ಮಾಣ ಸಂಸ್ಥೆಯಿಂದಲೇ ಚಿತ್ರೀಕರಿಸಿಲಾಗಿರುವ ಬಹುನಿರೀಕ್ಷಿತ ‘ಜೈ ಭೀಮ್‌’ ಸಿನಿಮಾ ನವೆಂಬರ್ 02 ರಂದು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ಜೈಭೀಮ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸಾಕಷ್ಟು ಕೂತುಹಲ ಹುಟ್ಟಿಸಿದೆ.

ಸಾರ್ ಅವರ ಜಾತಿಯಲ್ಲಿ ಕಳ್ಳರು ಸಹಜ ಸಾರ್…!
ಕಳ್ಳತನನಕ್ಕೂ ಜಾತಿ ಇದೆಯಾ…? ಹಾಗೆ ಇದ್ದರೆ ಇಂದು ಅತಿದೊಡ್ಡ ಕಳ್ಳರೆಲ್ಲಾ ನಮ್ಮ ಜಾತಿಗಳಲ್ಲೆ ಇದ್ದಾರಲ್ವಾ…!”
ಒಬ್ಬ ಆದಿವಾಸಿ ಮಹಿಳೆಯನ್ನು ಹೈಕೋರ್ಟ್ ತನಕ ಬರಲು ಬಿಟ್ಟಿದ್ದಿಯಾ, ನಾಚಿಕೆ ಆಗೋಲ್ವಾ ನಿನಗೆ, ನಿನಗ್ಯಾಕಯ್ಯ ಪೋಲಿಸ್ ಉದ್ಯೋಗ…!
“ನಾವು ಮೂವರು ಪೋಲಿಸರ ವಿರುದ್ಧ ಪ್ರಕರಣ ದಾಖಲಿಸುತ್ತಿಲ್ಲ, ಪ್ರಭುತ್ವದ ವಿರುದ್ಧ ಹೋರಾಟಕ್ಕೆ ಇಳಿಯುತ್ತಿದ್ದೇವೆ…!” ಈ ರೀತಿಯ ಸಂಭಾಷಣೆಗಳಿರುವ ಟೀಸರ್ ಸಾಕಷ್ಟು ಗಮನ ಸೆಳೆದಿದೆ.

 

ಕೋರ್ಟ್ ರೂಮ್‌ ಡ್ರಾಮಾ ಎಂದೇ ಗುರುತಿಸಲಾಗಿರುವ ‘ಜೈ ಭೀಮ್‌’ ಬಿಡುಗಡೆಗೂ ಮುನ್ನವೇ ಸಾಕಷ್ಟು ಗಮನ ಸೆಳೆದಿದೆ. ಆದಿವಾಸಿ ಮಹಿಳೆಯೊಬ್ಬಳ ನ್ಯಾಯಕ್ಕಾಗಿನ ಹೋರಾಟವು ಟ್ರೇಲರ್‌ನಲ್ಲಿ ಕಂಡುಬಂದಿದೆ.

ಗರ್ಭಿಣಿ ಮಹಿಳೆಯೊಂದಿಗೆ ಮಗು ಹಾಗೂ ವಕೀಲರಾಗಿ ಸೂರ್ಯ ಕಾಣಿಸಿಕೊಂಡಿರುವ ಪೋಸ್ಟರ್‌ಅನ್ನು ಹಂಚಿಕೊಳ್ಳಲಾಗಿದೆ. ಜೈ ಭೀಮ್‌ ಸಿನಿಮಾವನ್ನು ಜ್ಞಾನವೇಲ್‌ ನಿರ್ದೇಶಿಸಿದ್ದು, 2ಡಿ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ ಅಡಿಯಲ್ಲಿ ಸೂರಿಯಾ ಹಾಗೂ ಜ್ಯೋತಿಕ ನಿರ್ಮಾಣ ಮಾಡಿದ್ದಾರೆ. ಬುಡಕಟ್ಟು ಸಮುದಾಯಗಳ ಪರವಾಗಿ ಹೋರಾಟ ಮಾಡುವ ವಕೀಲನಾಗಿ ಸೂರಿಯಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

‘ನ್ಯಾಯದ ಅನ್ವೇಷಣೆಯಲ್ಲಿನ ಧೈರ್ಯ ಮತ್ತು ನಂಬಿಕೆಯ ಈ ಕಥೆಯನ್ನು ತೆರೆಗೆ ತರಲು ಹೆಮ್ಮೆಯಾಗುತ್ತಿದೆ’ ಎಂದು ಸೂರಿಯಾ ತಮ್ಮ ಟ್ವೀಟರ್‌ ಖಾತೆಯಲ್ಲಿ ಈ ಹಿಂದೆ ಬರೆದುಕೊಂಡಿದ್ದರು. ‘ಸೂರರೈ ಪೋಟ್ರು’ ಯಶಸ್ಸಿನ ಬಳಿಕ ಬಿಡುಗಡೆಯಾಗುತ್ತಿರುವ ಸೂರಿಯಾ ಅಭಿನಯದ ಸಿನಿಮಾ ಇದಾಗಿದೆ.

‘ಕರ್ಣನ್‌’ ಖ್ಯಾತಿಯ ರಜಿಶಾ ವಿಜಯನ್‌ ಪ್ರಧಾನ ಮಹಿಳಾ ಪಾತ್ರದಲ್ಲಿ ಅಭಿನಯಿಸಿದ್ದು, ಪ್ರಕಾಶ್‌ ರಾಜ್‌, ರಾವ್‌ ರಮೇಶ್‌ ಮತ್ತು ಲಿಜೋ ಮೋಲ್‌ ಜೋಸ್‌ ಥರದ ಪ್ರಮುಖ ಕಲಾವಿದರು ಈ ಚಿತ್ರದಲ್ಲಿದ್ದಾರೆ. ‘ಜೈ ಭೀಮ್‌’ ಸಿನಿಮಾ ತಮಿಳು ಮತ್ತು ತೆಲಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಸೀನ್‌ ರೋಲ್ಡನ್‌ ಅವರ ಸಂಗೀತ, ಎಸ್‌.ಆರ್‌.ಖದೀರ್‌ ಅವರ ಸಿನಿಮಾಟೋಗ್ರಫಿ, ಪಿಲೋಮಿನ್‌ ರಾಜ್‌ ಅವರ ಸಂಕಲನ ಈ ಸಿನಿಮಾಕ್ಕಿದೆ.


ಇದನ್ನೂ ಓದಿ: ಕನ್ನಡದಲ್ಲೂ ’ಜೈ ಭೀಮ್’ ಎಂದ ತಮಿಳು ನಟ ಸೂರ್ಯ: ಹೊಸ ಚಿತ್ರಕ್ಕೆ ಕನ್ನಡಿಗರ ಸ್ವಾಗತ

LEAVE A REPLY

Please enter your comment!
Please enter your name here