ಲಕ್ಷದ್ವೀಪದಲ್ಲಿ ಅಳವಡಿಸಲಾಗಿದ್ದ ಸಮುದ್ರ ಹವಾಮಾನದ ಮುನ್ಸೂಚನೆ ಕೊಡುವ ಅತ್ಯಾಧುನಿಕ ರಕ್ಷಣಾ ಸಂಶೋಧನಾ ಯಂತ್ರ (ಬೋಯ್) ಕಳೆದ ಅಕ್ಟೋಬರ್ 2ರಂದು ಕಾಣೆಯಾಗಿ ಆತಂಕ ಸೃಷ್ಟಿಯಾಗಿತ್ತು. ನಂತರ ಅದು ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರದ ಕಡಲಲ್ಲಿ ಕಾಣಿಸಿಕೊಂಡಿತ್ತಾದರು ಅದನ್ನು ದಡಕ್ಕೆ ತರಲು ನೌಕಾ ದಳ, ಕೋಸ್ಟ್ ಗಾರ್ಡ್ ಮತ್ತು ಕೇರಳ, ದಕ್ಷಿಣ ಕನ್ನಡದ ಮೀನುಗಾರರಿಂದಲೂ ಸಾಧ್ಯವಾಗಿರಲಿಲ್ಲ. ಆದರೆ ಮಹಾರಾಷ್ಟ್ರದ ಮಾಲ್ವನ್ ಕಡಲಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಉತ್ತರ ಕನ್ನಡದ ಕುಮಟಾದ ನಾಲ್ವರು ಬೆಸ್ತರು ಬೋಯ್ ಅನ್ನು ಸುರಕ್ಷಿತವಾಗಿ ತಮ್ಮ ಬೋಟ್‌ನಲ್ಲಿ ಹಾಕಿಕೊಂಡು ಕಾರವಾರದ ಸಾಗರ ವಿಜ್ಞಾನ ಕೇಂದ್ರದ ಅಧಿಕಾರಿಗಳಿಗೆ ಕೊಟ್ಟಿದ್ದಾರೆ! ಅಲ್ಲಿಗೆ ರಾಷ್ರೀಯ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಲಕ್ಷದ್ವೀಪ ನಡುಗಡ್ಡೆಯ 15\69 ಅಕ್ಷಾಂಶ-ರೇಖಾಂಶದಲ್ಲಿ ಚೆನ್ನೈನ ರಾಷ್ಟ್ರೀಯ ಸಾಗರ ವಿಜ್ಞಾನ ಕೇಂದ್ರ ಬೋಯ್ ಸ್ಥಾಪಿಸಿತ್ತು. ಈ ಅತ್ಯಾಧುನಿಕ ಯಂತ್ರ ಸಾಗರದಲ್ಲಿನ ಗಾಳಿಯ ದಿಕ್ಕು, ವೇಗ, ಉಷ್ಣತೆ ಮತ್ತು ತೇವಾಂಶ ತಿಳಿಸುತ್ತದೆ; ಸಮುದ್ರ ಮಟ್ಟದ ಒತ್ತಡ ಮತ್ತು ನೀರಿನ ಡೌನ್ ವೆಲ್ಲಿಂಗ್ ಹೇಳುತ್ತದೆ. ನೀರಿನ ಮೇಲ್ಪದರದಿಂದ 500 ಮೀಟರ್ ಆಳದ ವರೆಗಿನ ನೀರಿನ ಉಷ್ಣತೆ ಮತ್ತು ಉಪ್ಪಿನಾಂಶವನ್ನು ಅಳೆಯುತ್ತದೆ. ನೀರಿನ ಒಳಹರಿವಿನ ದಿಕ್ಕನ್ನು 240 ಮೀಟರ್ ವರೆಗೆ ಅಳತೆ ಮಾಡಬಲ್ಲದು. ಈ ಮಾಹಿತಿಯನ್ನೆಲ್ಲ ಬೋಯ್ ತಾಸಿಗೊಮ್ಮೆ ಉಪಗ್ರಹದ ಮೂಲಕ ಚೆನ್ನೈನ ರಾಷ್ಟ್ರೀಯ ಸಾಗರ ವಿಜ್ಞಾನ ಕೇಂದ್ರಕ್ಕೆ ರವಾನಿಸುತ್ತದೆ. ಇಂಥ 12 ಯಂತ್ರಗಳನ್ನು ದೇಶದ ವಿವಿಧ ಸಮುದ್ರ ಪ್ರದೇಶದಲ್ಲಿ ಅಳವಡಿಸಲಾಗಿದ್ದು, ಸದ್ರಿ ನೆಟ್‌ವರ್ಕ್ ದೇಶದ ಮಹತ್ವದ ಸಾಗರ ಸ್ಥಿತಿ-ಗತಿ ಒದಗಿಸುತ್ತದೆ. ಬೋಯ್ ಸಿಗದಿದ್ದರೆ ದುರುಪಯೋಗವಾಗುವ ಭಯವಿತ್ತು. ಉತ್ತರ ಕನ್ನಡದ ಮೀನುಗಾರರ ಸಾಹಸದಿಂದ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಆವರಿಸಿದ್ದ ಆತಂಕ ದೂರಾದಂತಾಗಿದೆ.

ಅಕ್ಟೋಬರ್ 2ರಂದು ಬೋಯ್ ಇದ್ದಕ್ಕಿದ್ದಂತೆ ಲಕ್ಷದ್ವೀಪದಿಂದ ಕಳಚಿಕೊಂಡು ಸಮುದ್ರ ಪಾಲಾಗಿತ್ತು. ಅ.5ರಂದು ಕೇರಳದ ಅರಬ್ಭೀ ಸಮುದ್ರದಲ್ಲಿ ತೇಲುತ್ತಿದ್ದ ಈ ಯಂತ್ರ ಅ.13ರಂದು ಕುಮಟಾದ ಧಾರೇಶ್ವರ ಕಡಲಲ್ಲಿ ಕಾಣಿಸಿಕೊಂಡಿತ್ತು. ಕೋಸ್ಟ್‌ಗಾರ್ಡ್ ಸಿಬ್ಬಂದಿ ದೂರದಿಂದಲೆ ನೋಡಿ ಇದನ್ನು ದಡಕ್ಕೆ ತರುವುದು ಕಷ್ಟವೆಂದು ವಾಪಸ್ಸಾಗಿತ್ತು. ದಕ್ಷಿಣ ಕನ್ನಡದ ಮೀನುಗಾರರ ಕಣ್ಣಿಗೂ ಬಿದ್ದಿದ್ದ ಬೋಯ್ ತರಲಾಗಿರಲಿಲ್ಲ. ಅ.14ರಂದು ಕಾರವಾರದ ಸೀ ಬರ್ಡ್ ನೌಕಾನೆಲೆಯ ಆಳ ಸಮುದ್ರ ಪ್ರದೇಶದಲ್ಲಿತ್ತು. ಆದರೆ ನೌಕಾ ಪಡೆಯವರಿಂದಲೂ ಈ ಅಮೂಲ್ಯ ಯಂತ್ರ ಹಿಡಿಯಲಾಗಿರಲಿಲ್ಲ! ಅ.16ರಂದು ಮಹಾರಾಷ್ಟ್ರದ ಮಾಲ್ವನ್ ಸಾಗರದಲ್ಲಿ ಬೋಯ್ ಇರುವುದು ಚೆನ್ನೈ ರಾಷ್ಟ್ರೀಯ ಸಾಗರ ವಿಜ್ಞಾನ ಸಂಸ್ಥೆಗೆ ತಿಳಿದಿತ್ತು.
ಬೋಯ್ ಕಡಲಲ್ಲಿ ಕಣ್ಣು ತಪ್ಪಿಸಿ ಓಡಾಡಿಕೊಂಡಿರವುದನ್ನು ಚೆನ್ನೈ ಎನ್‌ಐಓಟಿ ಅರಬ್ಬೀ ಸಮುದ್ರದಂಚಿನಲ್ಲಿರುವ ಸಾಗರ ವಿಜ್ಞಾನ ಕೇಂದ್ರಗಳಿಗೆ ತಿಳಿಸಿ, ಅದನ್ನು ದಂಡೆಗೆ ತರುವ ಪ್ರಯತ್ನ ಮಾಡುವಂತೆ ಹೇಳಿತ್ತು. ಕಾರವಾದ ಸಾಗರ ವಿಜ್ಞಾನ ಸಂಸ್ಥೆ ಮುಖ್ಯಸ್ಥ ಜಗನ್ನಾಥ ರಾಠೋಡ್ ಈ ಮಾಹಿತಿಯನ್ನು ಮೀನುಗಾರಿಕಾ ಇಲಾಖೆ ಮತ್ತು ಮೀನುಗಾರರ ವಾಟ್ಸ್‌ಪ್ ಗ್ರೂಪ್‌ಗಳಿಗೆ ಹಂಚಿಕೊಂಡಿದ್ದರು. ಮಾಲ್ವನ್ ಕಡಲಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಕಾರವಾರದ ಮೂಲದ ಬೋಟ್‌ನಲ್ಲಿದ್ದ ಕುಮಟಾದ ರಾಜು ಅಂಬಿಗ, ಚಂದ್ರು ಅಂಬಿಗ, ಗೋಪಾಲ್ ಅಂಬಿಗ ಮತ್ತು ಗಿರೀಶ್ ಅಂಬಿಗ ದೊಡ್ಡ ಗಾತ್ರದ ಬೋಯ್ ತಮ್ಮೆದುರು ತೇಲುತ್ತಿರುವುದನ್ನು 18ರಂದು ಕಾರವಾರ ಸಾಗರ ವಿಜ್ಞಾನ ಕೇಂದ್ರದ ಮುಖ್ಯಸ್ಥ ರಾಠೋಡ್‌ರಿಗೆ ಪೋನ್ ಮಾಡಿ ಹೇಳಿದ್ದಾರೆ. ಅದರ ಮಹತ್ವ ತಿಳಿಸಿದ ರಾಠೋಡ್ ಹೇಗಾದರೂ ಮಾಡಿ ದಂಡೆಗೆ ತನ್ನಿರಿ ಎಂದಿದ್ದಾರೆ.
ಆ ನಾಲ್ಕು ಬೆಸ್ತರು ಮೀನುಗಾರಿಕೆ ನಿಲ್ಲಿಸಿ ದೇಶದ ಮಹತ್ವದ ಬೋಯ್ ಹಿಡಿಯಲು ಪ್ರಯತ್ನಿಸಿದ್ದಾರೆ. ಮಹಾರಾಷ್ಟ್ರದ ಮೀನುಗಾರರ ನೆರವಿಂದ ಬೃಹತ್ ಬೋಯ್ ಬೋಟಿಗೆ ಹಾಕಿಕೊಂಡಿದ್ದಾರೆ. ರಾತ್ರಿ ವೇಳೆಗೆ ಕಾರವಾರದ ಸಾಗರ ವಿಜ್ಞಾನ ಸಂಸ್ಥೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಉತ್ತರ ಕನ್ನಡದ ಮೀನುಗಾರರ ಈ ಸಾಹಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ!
ಇದನ್ನೂ ಓದಿ: ಕಾರವಾರದಲ್ಲಿ ಹವಳ ದ್ವೀಪದ ಗಿಡುಗ ಕಡಲಾಮೆ ಕಳೇಬರ ಪತ್ತೆ!


