Homeಅಂಕಣಗಳುಕಾಫಿ ಭಾರತಕ್ಕೆ ಬಂದ ಕತೆ: ಕಳೆದು ಹೋದ ದಿನಗಳು ಭಾಗ -2, ಅಧ್ಯಾಯ -18

ಕಾಫಿ ಭಾರತಕ್ಕೆ ಬಂದ ಕತೆ: ಕಳೆದು ಹೋದ ದಿನಗಳು ಭಾಗ -2, ಅಧ್ಯಾಯ -18

ಭಾರತದ ಕಾಫಿ ಉತ್ಪಾದನೆಯ ಶೇ 65 ರಷ್ಟು ಪಾಲು ಕರ್ನಾಟಕದ್ದು. ಉಳಿದ ಶೇ 35 ರಲ್ಲಿ ತಮಿಳುನಾಡು ಎರಡನೇ ಸ್ಥಾನದಲ್ಲಿದೆ. ಕೇರಳಕ್ಕೆ ಮೂರನೆಯ ಸ್ಥಾನ.

- Advertisement -
- Advertisement -

ಕಾಫಿ ಮೂರು ರಾಜ್ಯಗಳ ಬೆಳೆ, ಕರ್ನಾಟಕ ಕೇರಳ ಮತ್ತು ತಮಿಳುನಾಡು ಈ ಮೂರು ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ಒರಿಸ್ಸಾ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬೆಳೆಯುವ ಪ್ರಯತ್ನ ನಡೆಯಿತಾದರೂ ಅದು ನಗಣ್ಯ.

ಈ ಮೂರು ರಾಜ್ಯಗಳಲ್ಲಿಯೂ ಕರ್ನಾಟಕದ ಪಾಲು ದೊಡ್ಡದು, ಭಾರತದ ಕಾಫಿ ಉತ್ಪಾದನೆಯ ಶೇ 65 ರಷ್ಟು ಪಾಲು ಕರ್ನಾಟಕದ್ದು ಉಳಿದ ಶೇ 35 ರಲ್ಲಿ ತಮಿಳುನಾಡು ಎರಡನೇ ಸ್ಥಾನದಲ್ಲಿದೆ. ಕೇರಳಕ್ಕೆ ಮೂರನೆಯ ಸ್ಥಾನ.

ಇದಕ್ಕೆ ಕಾರಣ ಕರ್ನಾಟಕ ಎರಡು ಜಿಲ್ಲೆಗಳು. ಇವು ಕೊಡಗು ಮತ್ತು ಚಿಕ್ಕಮಗಳೂರು. ಇಲ್ಲಿನ ವಾತಾವರಣದಲ್ಲಿ ಕೆಲವು ಭಾಗಗಳಲ್ಲಿ ಉತ್ಕೃಷ್ಟವಾದ ಅರೆಬಿಕಾ ಕಾಫಿಯೂ, ಉಳಿದ ಕೆಲವು ಭಾಗಗಳಲ್ಲಿ ಅಷ್ಟೇ ಉತ್ತಮ ದರ್ಜೆಯ ರೊಬಸ್ಟ ಕಾಫಿಯೂ ಬೆಳೆಯುತ್ತದೆ. ಇವರೆಡು ಜಿಲ್ಲೆಗಳನ್ನು ಒಂದುಗೂಡಿಸುವ ಕೊಂಡಿಯೇ ಮಂಜ್ರಾಬಾದ್ ಪ್ರದೇಶ, ಅಂದರೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಮತ್ತು ಬೇಲೂರು ಮತ್ತು ಆಲೂರು ತಾಲ್ಲೂಕಿನ ಕೆಲವು ಭಾಗಗಳು.

ಬಾಬಾ ಬುಡನ್ ಗಿರಿ ಬೆಟ್ಟ ಸಾಲು

ಕಾಫಿ ಭಾರತಕ್ಕೆ ಬಂದ ಕತೆ ಸುಮಾರು ಏಳುನೂರು ವರ್ಷ ಹಿಂದಕ್ಕೆ ಹೋಗುತ್ತದೆ. ಬಾಬಾಬುಡನ್ ಅರೇಬಿಯಾದಿಂದ ಏಳು ಕಾಫಿ ಬೀಜಗಳನ್ನು ತಂದು ನೆಟ್ಟ ಕತೆ ಬಹಳ ಪ್ರಚಲಿತ. ಏನಿದ್ದರೂ ಆಫ್ರಿಕಾ ಮೂಲದ ಕಾಫಿ ಗಿಡ ಭಾರತವನ್ನು ತಲುಪಿದ್ದು ಅರಬರ ಮೂಲಕವೇ.

ಬ್ರಿಟಿಷರು ಬಂದ ನಂತರ ಕಾಫಿ ಬೆಳೆಗೊಂದು ಸಾಂಸ್ಥಿಕ ರೂಪವೂ ಜೊತೆಗೆ ಜಾಗತಿಕ ಮನ್ನಣೆಯೂ ದೊರೆಯಿತು. ಹೇಗೂ ವ್ಯಾಪಾರಕ್ಕೆಂದೇ ಬಂದ ಬ್ರಿಟಿಷರು, ಇದರ ಮೂಲಕ ಇನ್ನೊಂದು ಆದಾಯದ ಮೂಲವನ್ನು ಕಂಡುಕೊಂಡರು.

ಬ್ರಿಟಿಷರು ಬರುವ ಮೊದಲು ಇಲ್ಲಿನ ಬೆಳೆಗಳು ಯಾವುವು ?

ಮುಖ್ಯವಾಗಿ ಭತ್ತ, ಒಂದಷ್ಟು ಬಾಳೆ, ನಂತರ ಕಾಡು ಗುಡ್ಡೆಗಳಲ್ಲಿ ಮೆಣಸು ಮತ್ತು ಯಾಲಕ್ಕಿ. ಜೊತೆಗೆ ಇನ್ನು ಕೆಲವು ಸಹಜ ಕಾಡು ಉತ್ಪನ್ನಗಳು.

ನಿಜವಾದ ಅರ್ಥದಲ್ಲಿ ಇಲ್ಲಿನ ಕೃಷಿಯೆಂದರೆ ಭತ್ತ ಮತ್ತು ಬಾಳೆ, ಯಾಲಕ್ಕಿ ಮತ್ತು ಮೆಣಸು ಕೂಡಾ ಒಂದು ರೀತಿಯಲ್ಲಿ ಕಾಡು ಉತ್ಪನ್ನಗಳೇ ಆಗಿದ್ದವು.

ಮೆಣಸಿನಲ್ಲಿ ಕೆಲವು ನಾಟಿ ತಳಿಗಳಿದ್ದವು, ಮುಖ್ಯವಾಗಿ ಕರಿಮುಂಡ, ಉದರಂಕೊಟ್ಟ, ಮತ್ತು ಕಾಡು ಮೆಣಸು, ಇವೆಲ್ಲವೂ ಹೆಚ್ಚಿ ರೋಗ ನಿರೋಧಕ ಶಕ್ತಿ ಮತ್ತು ಧೀರ್ಘಬಾಳಿಕೆಯ ಗುಣಹೊಂದಿದ್ದವು.

ಯಾಲಕ್ಕಿ ಮಲೆಗಳು

ಯಾಲಕ್ಕಿಯಲ್ಲಿಯೂ ಅಷ್ಟೇ ಕೊಡಗಿನ ಮಲೆ ಯಾಲಕ್ಕಿ ಹಾಗೂ ಮಂಜ್ರಾಬಾದ್ ಪ್ರದೇಶದ ಮಂಜ್ರಾಬಾದ್ ಯಾಲಕ್ಕಿ ,ಇದಕ್ಕೂ ಉತ್ತರ ಮಲೆ ಎಂದೇ ಹೆಸರಿತ್ತಂತೆ, ಸಕಲೇಶಪುರ, ಮೂಡಿಗೆರೆಯಲ್ಲಿ ಇದ್ದುದೆಲ್ಲ ಇದೇ ತಳಿ.

ಇವೆರಡೂ ನಾಟಿ ತಳಿಗಳೇ. ಇದನ್ನು ನೆಡುವ ಪರಿಪಾಠ ಕಡಿಮೆ. ತಾನಾಗಿಯೇ ಬೀಜ ಪ್ರಸಾರವಾಗಿ ಹುಟ್ಟುವುದು.

ಮೆಣಸಿನ ಬಳ್ಳಿ ಮತ್ತು ಯಾಲಕ್ಕಿ ಗಿಡಗಳಿಗೆ ಬೆಳಕು ಬರುವಂತೆ ಮಧ್ಯೆ ಕೆಲವು ಮರಗಳನ್ನು ಕಡಿದು ಹಾಕುತ್ತಿದ್ದರಂತೆ. ಸಾಮಾನ್ಯವಾಗಿ ಒಬ್ಬೊಬ್ಬ ಜಮೀನುದಾರರರಿಗೆ ನೂರಾರು ಎಕರೆ ಯಾಲಕ್ಕಿ ಮಲೆಗಳಿರುತ್ತಿದ್ದವು. ಹಾಗೇ ಮಧ್ಯಮ ಹಿಡುವಳಿದಾರರೂ ಇದ್ದರು.

ಮಳೆಗಾಲ ಕಡಿಮೆಯಾಗುವ ವೇಳೆಗೆ ಈ ಜಮೀನುದಾರರು ಹತ್ತಾರು ಜನರ ತಂಡ ಕಟ್ಟಿಕೊಂಡಿ ಮಲೆಗಳಲ್ಲಿ ಬಂದು ಬಿಡಾರ ಹೂಡಿ ಒಂದೆರೆಡು ತಿಂಗಳು ನಿಂತು ಅಲ್ಲಿನ ಯಾಲಕ್ಕಿ, ಮೆಣಸು ಇತ್ಯಾದಿಗಳನ್ನು ಕೊಯ್ಲಮಾಡಿಕೊಂಡು ವಾಪಸ್ ಹೋಗುವುದೇ ಪದ್ಧತಿ. ಆ ಸಮಯದಲ್ಲಿ ಮಳೆಗಾಲವಿರುತ್ತಿದ್ದುದರಿಂದ ಬರುವಾಗಲೇ ಬೆಲ್ಲವನ್ನೂ ಸಾಗಿಸಿ ತಂದು ಅಲ್ಲೇ ಭಟ್ಟಿಯನ್ನು ಕಾಯಿಸಿಕೊಳ್ಳುತ್ತಿದ್ದರು. ಜೊತೆಗೆ ಶಿಕಾರಿಗೆ ಸಾಕಷ್ಟು ಪ್ರಾಣಿಗಳೂ ಇದ್ದವು. ಬೇಸಗೆಯಲ್ಲಿ ಬೈನೆ ಸೇಂದಿಯಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಜಮೀನ್ದಾರರಿಗೆ ಕೊಡಗಿನ ಸೋಮವಾರಪೇಟೆ ಮತ್ತು ಮಡಿಕೇರಿ ತಾಲ್ಲೂಕಿನಲ್ಲಿ ಮತ್ತು ಸಕಲೇಶಪುರ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಈ ರೀತಿ ಯಾಲಕ್ಕಿ ಮಲೆಗಳ ಒಡೆತನವಿತ್ತು.

ದಕ್ಷಿಣ ಭಾರತ ಪ್ಲಾಂಟರ್ಸ್ ಒಕ್ಕೂಟದ ಕಛೇರಿ (ಉಪಾಸಿ) ಕೂನೂರ್

ಬ್ರಿಟಿಷರು ಬರುವ ತನಕವೂ ಇದು ಹೀಗೆಯೇ ನಡೆದು ಬಂದಿತ್ತು. ಬ್ರಿಟಿಷರು ಕೂಡಾ ಇಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದಾರೆ. ರಬ್ಬರ್, ಯಾಲಕ್ಕಿ, ಕೊಕೋ ಗಳನ್ನು ಕೂಡಾ ಆಕಾಲದಲ್ಲಿಯೇ ಬೆಳೆದು ನೋಡಿದ್ದಾರೆ. ನಂತರ ಅವರು ಆಯ್ಕೆ ಮಾಡಿಕೊಂಡದ್ದು ಕಾಫಿಯನ್ನು.

ಈ ಭಾಗಗಳಲ್ಲಿ ಜನ ಸಂಖ್ಯೆಯೂ ವಿರಳವಾಗಿತ್ತು. ಕರ್ನಾಟಕದ ಇತರ ಭಾಗಗಳಿಗೆ ಹೋಲಿಸಿದರೆ ಈಗಲೂ ಜನವಸತಿ ಕಡಿಮೆಯೇ, ಬೇರೆ ಕಡೆಗಳಲ್ಲಿ ಒಂದು ಅಥವಾ ಎರಡು ಗ್ರಾಮಗಳಿಗೆ ಒಂದು ಗ್ರಾಮ ಪಂಚಾಯತ್ ಇದ್ದರೆ ನಮ್ಮಲ್ಲಿ ಸಾಮಾನ್ಯವಾಗಿ ಆರರಿಂದ ಎಂಟು ಗ್ರಾಮಗಳಿಗೆ ಒಂದು ಗ್ರಾಮ ಪಂಚಾಯತಿ ಇದೆ. ಹಾಗೂ ಕೆಲವು ಪಂಚಾಯತ್‌ಗಳು ಒಂದು ಹೋಬಳಿಯಷ್ಟೇ ವಿಸ್ತೀರ್ಣವನ್ನು ಹೊಂದಿವೆ.

ಆ ಕಾರಣಕ್ಕಾಗಿಯೇ ಬ್ರಿಟಿಷರು ತಮಿಳುನಾಡು, ಕೇರಳಗಳಿಂದ ಕೆಲಸಗಾರರನ್ನು ಕರೆತಂದರು, ದಕ್ಷಿಣಕನ್ನಡ  ಜಿಲ್ಲೆಯಿಂದಲೂ ದೊಡ್ಡ ಪ್ರಮಾಣದಲ್ಲೇ ಕಾರ್ಮಿಕರ ವಲಸೆ ನಡೆಯಿತು.

ಹಾಗೆ ಬಂದವರು ಸ್ವಲ್ಪ ಮಟ್ಟಿಗೆ ಅವರ ಜಾನಪದ ಕಲೆಗಳಾದ, ಪಾಡ್ದನ, ಭೂತಾರಾಧನೆ, ಯಕ್ಷಗಾನಗಳನ್ನು ತಂದರಾದರೂ ಇಲ್ಲಿನ ಸಂಸ್ಕೃತಿಯನ್ನು ಬದಲಾಯಿಸುವಷ್ಟು ಅಥವಾ ಅವುಗಳನ್ನು ಶಕ್ತವಾಗಿ ಮುಂದುವರೆಸುವಷ್ಟು ಶಕ್ತರಾಗಲಿಲ್ಲ. ಕಾರಣ ಅವರೆಲ್ಲರೂ ಎಸ್ಟೇಟುಗಳ ಒಳಗೆ ಗುಮ್ಮಿಗಳೆಂದು ಕರೆಯುತ್ತಿದ್ದ ಲೈನ್ ಮನೆಗಳಲ್ಲಿ ಇರುವ ವ್ಯವಸ್ಥೆ ಇದ್ದುದು. ಅಲ್ಲದೆ ಇಲ್ಲಿನ ಸ್ಥಳಿಯರು ಅವುಗಳನ್ನು ತಮ್ಮದಾಗಿಸಿಕೊಳ್ಳುವ ಬದಲಿಗೆ ಹೆಚ್ಚು ಹೆಚ್ಚಾಗಿ ಬ್ರಿಟಿಷರ ಆಚಾರ ವಿಚಾರಗಳ ಅನುಕರಣೆಯಲ್ಲಿ ಮೇಲರಿಮೆಯನ್ನು ಕಂಡುಕೊಂಡದ್ದು.

ಇವೆಲ್ಲ ಕಾರಣಗಳಿಂದ ಕರ್ನಾಟಕದ ಕಾಫಿ ವಲಯದಲ್ಲಿ ಕಾಫಿ ಸಂಸ್ಕೃತಿಯೆಂಬ ಹೆಸರಿನ ಜೀವನ ಶೈಲಿ ಹಾಗೆಯೇ ಉಳಿದುಕೊಂಡಿತು.

ವಲಸೆ ಬಂದವರು ಇಲ್ಲೇ ಉಳಿದರು. ಬದುಕು ಕಟ್ಟಿಕೊಂಡರು. ಕೆಲವರು ಬ್ರಿಟಿಷರ ನಂತರ ತಾವೇ ಪ್ಲಾಂಟರುಗಳಾದರು. ಅವರ ನಂತರದ ಪೀಳಿಗೆ ವಿದ್ಯಾವಂತವಾಯಿತು. ಅನೇಕ ರೀತಿಯ ಉದ್ಯೋಗಗಳನ್ನು ಅರಸಿ ಬೇರೆ ಬೇರೆ ಕಡೆಗೆ ಹೋದರು. ಹೀಗೆ ಹೋದವರ ಬದಲಿಗೆ ಮತ್ತೆ ತಾತ್ಕಾಲಿಕ ಕಾರ್ಮಿಕರು ಹೊರಗಿನಿಂದ ಬರುವ ಪದ್ಧತಿ ಪ್ರಾರಂಭವಾಯಿತು. ಮೊದಲಿಗೆ ಬಯಲು ಸೀಮೆಯಿಂದ, ನಂತರ ಉತ್ತರ ಕರ್ನಾಟಕದಿಂದ. ಇತ್ತೀಚಿನ ದಿನಗಳಲ್ಲಿ ಉತ್ತರ ಮತ್ತು ಈಶಾನ್ಯ ರಾಜ್ಯಗಳಿಂದ ಬರುತ್ತಿದ್ದಾರೆ.

ಹೀಗೆ ವಲಸೆ ಬಂದವರಲ್ಲಿ ಇಲ್ಲಿನ ಕಾಫಿ ಬೆಳೆ ಮಾತ್ರವಲ್ಲ ಹಲವು ಬೇರೆ ಬೇರೆ ಉದ್ಯೋಗಗಳೂ ನಿರ್ಮಾಣವಾದವು. ದಕ್ಷಿಣ ಕನ್ನಡದವರು ಮುಖ್ಯವಾಗಿ ಹೋಟೆಲ್ ಉದ್ಯಮ ಬೆಳೆಸಿದರು. ಕಾಫಿ ವಲಯದ ಹೆಚ್ಚಿನ ಹೋಟಲ್‌ಗಳೆಲ್ಲ ಇಂದೂ ಕೂಡಾ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದವರದೇ ಆಗಿದೆ.

ತಮಿಳುನಾಡಿನಿಂದ ಬಂದವರು ಹಲವು ರೀತಿಯ ಕೆಲಸಗಳಲ್ಲಿ ತೊಡಗಿದರು. ಕಟ್ಟಡ, ರಸ್ತೆ ನಿರ್ಮಾಣದಲ್ಲಿ ಕೂಡಾ ಇವರ ಕೊಡುಗೆ ದೊಡ್ಡದು. ಇನ್ನೊಂದು ಕೊಡುಗೆಯೆಂದರೆ. ಕೃಷಿ ಯಂತ್ರ ಮತ್ತ ಉಪಕರಣಗಳ ತಯಾರಿಕೆಯಲ್ಲಿ.

ಮಂಜ್ರಾಬಾದ್ ನೆನಪು

1926 ರಲ್ಲಿ ಮನಿಸ್ವಾಮಿ ಮೊದಲಿಯಾರ್ ಎಂಬವರು ಬಿ.ಎಂ ಇಂಜಿನಿಯರಿಂಗ್ ವರ್ಕ್ಸ ಅನ್ನು ಚಿಕ್ಕಮಗಳೂರಿನಲ್ಲಿ ಪ್ರಾರಂಭಿಸಿದರು. ಅದುವರೆಗೆ ಕಾಫಿ ತೋಟಗಳಿಗೆ ಸಂಬಂಧಿಸಿದ ಎಲ್ಲ ಕೃಷಿ ಯಂತ್ರೋಪಕರಣಗಳು ಇಂಗ್ಲೆಂಡಿನಿಂದಲೇ ಬರುತ್ತಿದ್ದವು. ಮುನಿಸ್ವಾಮಿಯವರು ಸ್ಥಳೀಯ ತಾಂತ್ರಿಕತೆಯನ್ನು ಬಳಸಿ ಇಲ್ಲೇ ಅವುಗಳನ್ನು ತಯಾರಿಸಲು ತೊಡಗಿದರು. ಕಾಫಿ ಪಲ್ಪಿಂಗ್ ಯಂತ್ರಗಳು ಇಲ್ಲೇ ತಯಾರಾಗ ತೊಡಗಿದವು. ನಂತರ ಇವರ ಮೊಮ್ಮಕ್ಕಳಾದ ಬಾಲಕೃಷ್ಣ ಮತ್ತು ಶಾಮಣ್ಣನವರು ಸಕಲೇಶಪುರದಲ್ಲಿ 1953 ರಲ್ಲಿ ಶಿವಶಂಕರ್ ಇಂಜಿನಿಯರಿಂಗ್ ವರ್ಕ್ಸ್ ಅನ್ನು ಸ್ಥಾಪಿಸಿದರು. ಅದೇ ಸುಮಾರಿಗೆ ಮಡಿಕೇರಿಯಲ್ಲಿ ಸಿ.ವಿ.ಎಸ್ ಬ್ರದರ್ಸ್ ಅವರು ಕೂಡಾ ಇದೇರೀತಿಯ ಇಂಜಿನಿಯರಿಂಗ್ ವರ್ಕ್ಸ್ ಉದ್ಯಮ ಆರಂಭಿಸಿದ್ದರು. ಇವರೆಲ್ಲರೂ ತಮ್ಮ ಉದ್ಯಮಗಳಲ್ಲಿ ಕೈಗಾರಿಕಾ ತರಬೇತಿಗಾಗಿ ಯುವಕರನ್ನು ನೇಮಿಸಿಕೊಳ್ಳತೊಡಗಿದರು. ಮುಂದೆ ಮಡಿಕೇರಿಯಲ್ಲಿ ಸರ್ಕಾರದಿಂದ ಕೈಗಾರಿಕಾ ತರಬೇತಿ ಕೇಂದ್ರ ಪ್ರಾರಂಭವಾದರೂ ಇವರಲ್ಲಿಗೆ ತರಬೇತಿ ಪಡೆಯುವುದು ಮುಂದುವರೆದಿತ್ತು. ಇಂದು ಕಾಫಿ ವಲಯದಲ್ಲಿರುವ ಹೆಚ್ಚಿನ ಯಂತ್ರೋಪಕರಣ ಉದ್ಯಮಿಗಳು ಈ ಸಂಸ್ಥೆಗಳಿಂದ ಕಲಿತು ಬಂದವರೇ.

ಇಂದಿನ ಪರಿಸ್ಥಿತಿ ಹೇಗಿದೆಯೆಂದರೆ ಹೊರಗಿನಿಂದ ಕಾರ್ಮಿಕರು ಬಾರದಿದ್ದರೆ ಕಾಫಿ ಕೃಷಿ ಸಂಪೂರ್ಣ ಕುಸಿದುಹೋಗಲಿದೆ.

ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾಫಿ ಬೆಳೆಯಿಂದ ಬದುಕುತ್ತಿರುವವರ ಸಂಖ್ಯೆ ಸುಮಾರು ಹನ್ನೆರಡು ಲಕ್ಷಗಳಷ್ಟು.

ಕಾಫಿ ಆದಾಯ ಕಡಿಮೆಯಾಯಿತೆಂದರೆ ಇವರೆಲ್ಲರ ಬದುಕಿನ ಮೇಲೆ ಪರಿಣಾಮವಾಗುತ್ತದೆ.

ಎರಡು ದಶಕಗಳಿಂದ ನಾನಾ ಕಾರಣಗಳಿಂದ ಕರ್ನಾಟಕದ ಕಾಫಿ ವಲಯ ಸಂಕಷ್ಟದಲ್ಲಿದೆ.

ವಾತಾವರಣದಲ್ಲಿ ಆದ ಬದಲಾವಣೆ ಮತ್ತು ಅರಣ್ಯ ನಾಶಗಳಿಂದ ಯಾಲಕ್ಕಿ ಮತ್ತು ಅರೆಬಿಕಾ ಕಾಫಿ ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕಾಫಿ ಬೋರ್ಡಿನ ಸಂಶೋಧನೆಗಳು ಸಾಕಾಗುತ್ತಿಲ್ಲ. ಕಾಫಿ ಬೆಳೆಯನ್ನು ತೋಟಗಾರಿಕಾ ವಿಭಾಗಕ್ಕೆ ವರ್ಗಾಯಿಸಿ ಅಲ್ಲಿನ ಸಂಶೋಧನಾ ವಿಭಾಗಗಳ ಸಹಾಯ ಪಡೆದು ಬದಲಾದ ವಾತಾವರಣಕ್ಕೆ ಹೊಂದಿಕೊಳ್ಳಬಲ್ಲ ಹಾಗೂ ಹೆಚ್ಚಿನ ರೋಗ ನಿರೋಧಕ ಶಕ್ತಿ ಇರುವ ಹೊಸ ತಳಿಗಳನ್ನು ಸೃಷ್ಟಿಸಿಕೊಳ್ಳಬೇಕೆಂಬ ಯೋಜನೆ ಹಾಗೆಯೇ ಇದೆ.

ದಕ್ಷಿಣ ಭಾರತ ಬೆಳೆಗಾರರ ಒಕ್ಕೂಟ ಇದೆ. ಅಲ್ಲಿ ತಮಿಳು ನಾಡು ಮತ್ತು ಕೇರಳದವರೇ ಪ್ರಬಲರು, ರಬ್ಬರ್ ಮತ್ತು ಟೀ ಬೆಳೆಗಾರರದ್ದೇ ಅಲ್ಲಿ ಸಾರಥ್ಯ. ಹೀಗಾಗಿ ಕೇಂದ್ರ ಸರ್ಕಾರದ ಮಟ್ಟದಲ್ಲೂ ಅವರ ಮಾತಿಗೇ ಮನ್ನಣೆ ಹೆಚ್ಚು ಇದು ನಿರಂತರವಾಗಿ ನಡೆದುಬಂದ ವಿದ್ಯಮಾನ.

ಕರ್ನಾಟಕದ ವಿಚಾರ ಬಂದಾಗ ಇಲ್ಲಿನ ಬೆಳೆಗಾರರ ಒಕ್ಕೂಟವೂ ಅಷ್ಟು ಪ್ರಬಲವಲ್ಲ. ನಮ್ಮ ರಾಜಕಾರಣಿಗಳೂ ಕೂಡಾ ಒಟ್ಟಾಗಿ ನಿಂತು ಹಕ್ಕನ್ನು ಮಂಡಿಸಿ, ಅನುಕೂಲ ಪಡೆದದ್ದೂ ಇಲ್ಲ. ಇದು ಇಲ್ಲಿನ ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಮತ್ತಷ್ಟು ಕಾರಣವಾಗಿದೆ.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)

ಕಳೆದುಹೋದ ದಿನಗಳು ಹಿಂದಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.


ಇದನ್ನೂ ಓದಿ: ಕಾಫಿ ವಲಯದಲ್ಲಿನ ಕಾರ್ಮಿಕರ ಸ್ಥಿತಿ-ಗತಿ: ಪ್ರಸಾದ್ ರಕ್ಷಿದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...