Homeಅಂಕಣಗಳುಕಳೆದುಹೋದ ದಿನಗಳುಕಾಫಿ ವಲಯದಲ್ಲಿನ ಕಾರ್ಮಿಕರ ಸ್ಥಿತಿ-ಗತಿ: ಪ್ರಸಾದ್ ರಕ್ಷಿದಿ

ಕಾಫಿ ವಲಯದಲ್ಲಿನ ಕಾರ್ಮಿಕರ ಸ್ಥಿತಿ-ಗತಿ: ಪ್ರಸಾದ್ ರಕ್ಷಿದಿ

ಕಳೆದು ಹೋದ ದಿನಗಳು….. ಭಾಗ -2, ಅಧ್ಯಾಯ -15

- Advertisement -
- Advertisement -

ಗಣಪಯ್ಯನವರ ತೀರಿಕೊಂಡ ನಂತರ ಹಲವು ತೋಟಗಳ ಉಸ್ತುವಾರಿ ಕೆಲಸವನ್ನು ರವೀಂದ್ರನಾಥರು ಬಿಟ್ಟುಕೊಟ್ಟಿದ್ದರು. ಅದರಲ್ಲಿ ಗ್ರೆಗೊರಿ ಮಥಾಯಿಸ್ ಅವರ ಶ್ರೀನಿವಾಸ ಎಸ್ಟೇಟ್ ಕೂಡಾ ಒಂದು. ಗ್ರೆಗೊರಿ ಮಥಾಯಿಸ್ ಅವರು ತೀರಿಕೊಂಡಿದ್ದರು. ನಂತರ ಅವರ ಮಗ ಜೆರೋಮ್ ಮಾಥಾಯಿಸ್ ಅವರು ಬೇರೆ ಯಾರಿಗೋ ತೋಟದ ಉಸ್ತುವಾರಿಯನ್ನು ವಹಿಸಿದ್ದರು. ಜೆರೋಮ್ ಮಾಥಾಯಿಸ್ ಅವರು ಅಮೆರಿಕಾದಲ್ಲಿ ಹೃದ್ರೋಗ ತಜ್ಞರಾಗಿದ್ದಾರೆ.  ಅವರಿಗೆ ತೋಟದ ಮ್ಯಾನೇಜ್ ಮೆಂಟಿನಲ್ಲಿ ಏನೋ ಸಮಸ್ಯೆಯಾಗಿ ಮತ್ತೆ ರವೀಂದ್ರನಾಥರನ್ನು ಒಪ್ಪಿಸಿ 1998 ರಲ್ಲಿ ಮತ್ತೆ ಹಾರ್ಲೆ ಮ್ಯಾನೇಜ್ಮೆಂಟಿಗೆ ಕೊಟ್ಟಿದ್ದರು. ಅದರ ಉಸ್ತುವಾರಿಯೂ  ನನ್ನ ಪಾಲಿಗೆ ಬಂದಿದ್ದು ಅದು ಇಂದಿನವರೆಗೂ ಮುಂದುವರೆದಿದೆ. ಶ್ರೀನಿವಾಸ ಎಸ್ಟೇಟಿನ ಹೆಸರಿನ ಬಗ್ಗೆಯೇ ಒಂದು ಸುಂದರವಾದ ಸಂಗತಿಯಿದೆ.

ಗ್ರೆಗೊರಿ ಮಥಾಯಿಸ್

ಗ್ರೆಗೊರಿ ಮಾಥಾಯಿಸ್ ಅವರು ರಾಜ್ಯ ಮತ್ತು ದೆಹಲಿ ಸರ್ಕಾರಗಳಲ್ಲಿ ಉನ್ನತ ಅಧಿಕಾರಿಯಾಗಿದ್ದವರು. ಅಂದಿನ ದಕ್ಷಿಣ ಕನ್ನಡದ ಸಂಸದ ಶ್ರೀನಿವಾಸ ಮಲ್ಯ ಅವರಿಗೂ ಬಹಳ ಆತ್ಮೀಯರು. ಒಂದು ದಿನ ಮಲ್ಯರು ಮಥಾಯಿಸ್ ಅವರಲ್ಲಿ “ನೀವು ಒಂದು ದಿನ ನಿವೃತ್ತರಾಗುತ್ತೀರಿ, ಆ ನಂತರ ನಿಮ್ಮದೇ ಒಂದು ನೆಲೆ ಬೇಕು ನೀವೇಕೆ ಒಂದು ತೋಟ ಮಾಡಬಾರದು” ಎಂದು ಹೇಳಿದರಲ್ಲದೆ ಮಥಾಯಿಸ್ ಅವರಿಗೆ ಸಕಲೇಶಪುರದಲ್ಲಿ ತೋಟವನ್ನು ಕೊಂಡಿಕೊಳ್ಳಲು ಕೆನರಾ ಬ್ಯಾಂಕಿನಿಂದ ಸಾಲ ಕೊಡಿಸಿದರಂತೆ!

ಹಾಗೆ ಮಲ್ಯರ ಸಲಹೆ ಮತ್ತು ಸಹಾಯಗಳಿಂದ ತೋಟವನ್ನು ಖರೀದಿಸಿದ ಗ್ರೆಗೊರಿ ಮಾಥಾಯಿಸ್ ಅವರು ಗೆಳೆಯ ಶ್ರೀನಿವಾಸ ಮಲ್ಯರ ನೆನಪಿಗಾಗಿ ತೋಟಕ್ಕೆ “ಶ್ರೀನಿವಾಸ ಎಸ್ಟೇಟ್” ಎಂದು ಹೆಸರಿಟ್ಟರು!

ಮಥಾಯಿಸ್ ಅವರ ಶ್ರೀನಿವಾಸ ಎಸ್ಟೇಟ್ ಬಂಗಲೆ

ಗ್ರೆಗೊರಿ ಮಥಾಯಿಸ್ ಅವರು ಅಧಿಕಾರಿ. ತೋಟವನ್ನು ನೋಡಿಕೊಳ್ಳುವವವರು ಯಾರು?

ಆಗ ಗ್ರೆಗೊರಿ ಮಾಥಾಯಿಸ್ ಅವರು ರಾಜ್ಯದಲ್ಲಿ ಹಣಕಾಸು ಇಲಾಖೆ ಕಾರ್ಯದರ್ಶಿ, ಸಿ.ಎಂ. ಪೂಣಚ್ಚನವರು ರಾಜ್ಯದ ಗೃಹ ಮಂತ್ರಿಗಳು. ಮಾಥಾಯಿಸ್ ಅವರನ್ನು ಚೆನ್ನಾಗಿ ಗೊತ್ತಿದ್ದ ಪೂಣಚ್ಚ “ಸಕಲೇಶಪುರದಲ್ಲಿ ನನ್ನ ಗುರುಗಳು ಗಣಪಯ್ಯ ಇದ್ದಾರೆ, ನನ್ನ ತೋಟವನ್ನೂ ಅವರೇ ನೋಡಿಕೊಳ್ಳುತ್ತಿದ್ದಾರೆ, ನೀವು ಅವರಲ್ಲಿ ಕೇಳಿಕೊಳ್ಳಿ ನಿಮ್ಮ ತೋಟವನ್ನೂ ಅವರು ನೋಡಿಕೊಂಡಾರು” ಎಂದರಂತೆ.

ಹಾಗೆ ಗ್ರೆಗೊರಿ ಮಥಾಯಿಸ್ ಅವರ ಶ್ರೀನಿವಾಸ ಎಸ್ಟೇಟ್ ಹಾರ್ಲೆ ಮ್ಯಾನೇಜ್ ಮೆಂಟಿಗೆ ಬಂದಿತ್ತು.

ಮಥಾಯಿಸ್ ಅವರ ಶ್ರೀನಿವಾಸ ಎಸ್ಟೇಟ್, ಮತ್ತು ಈಗ ಅಲ್ಲಿ ಉದ್ಯೋಗಿಗಳಾಗಿರುವ ಜಯರಾಮ ಶೆಟ್ಟರು ಮತ್ತು ವೇಲಾಯುಧನ್

1992 ರಿಂದ 2000 ಇಸವಿಯವರೆಗಿನ ಹಲವಾರು ವಿದ್ಯಮಾನಗಳಿಂದ ಕಾಫಿ ವಲಯದಲ್ಲಿ ಸಾಮಾಜಿಕವಾಗಿ ದೊಡ್ಡ ಮಟ್ಟದ ಬದಲಾವಣೆ ಪ್ರಾರಂಭವಾಯಿತು. ಕಾಫಿ ಬೆಳೆ ನಮ್ಮನ್ನು ನಿರಂತರ ಕಾಯುವ ಪರಿಸ್ಥಿತಿ ಇನ್ನು ಮುಂದೆ ಇರಲಾರದೆಂದು ಕಾಫಿವಲಯದ ಎಲ್ಲರಲ್ಲಿ ಭಾವನೆ ಮೂಡಿತ್ತು. ಇದು ಎಲ್ಲ ವರ್ಗದ ಜನರನ್ನು ಕಾಫಿ ನಾಡಿನಿಂದ ಹೊರಕ್ಕೆ ಹೋಗುವಂತೆ ಒಂದು ಆಂತರಿಕ ಶಕ್ತಿಯಾಗಿ ಕೆಲಸಮಾಡಿತು. ದೊಡ್ಡ ಕಾಫಿ ಬೆಳೆಗಾರರ ಮಕ್ಕಳು ಹೇಗೂ ವಿದ್ಯಾವಂತರೂ ಹಣವಂತರೂ ಆಗಿದ್ದು ಮೊದಲೇ ಬೇರೆ ಹಲವು ಉದ್ಯಮಗಳಲ್ಲಿ ತೊಡಗಿಕೊಂಡವರೇ.

ಆದರೆ  ನಂತರದ ದಿನಗಳಲ್ಲಿ ಸಣ್ಣ ಬೆಳೆಗಾರರು, ಕೂಲಿ ಕಾರ್ಮಿಕರೂ, ಇತರ ವೃತ್ತಿಯವರೂ ಎಲ್ಲರೂ ತಮ್ಮ ಮಕ್ಕಳನ್ನು ಸಾಧ್ಯವಾದಷ್ಟು ವಿದ್ಯೆ ಕಲಿಸಿ ಹೊರಗೆ ಕಳುಹಿಸುವ ಪ್ರಯತ್ನದಲ್ಲಿ ತೊಡಗಿದರು. ಕೊಡಗಿನಲ್ಲಿ ಆಗಲೇ ಹೋಮ್ ಸ್ಟೇ ಗಳು ಸಣ್ಣ ಮಟ್ಟದಲ್ಲಿ ಪ್ರಾರಂಭವಾದವು. ನಂತರ ಇದು ಎಲ್ಲ ಕಡೆ ಹಬ್ಬತೊಡಗಿತು.

ಕಾಫಿ ವಲಯವನ್ನು ಹಣಕಾಸಿನ ಮಗ್ಗಟ್ಟು ಯಾವ ರೀತಿಯಲ್ಲಿ ಕಾಡಿತ್ತೆಂದರೆ, ರೈತರ ಆತ್ಮಹತ್ಯೆಯ ಪ್ರಕರಣಗಳು ಕಾಫಿವಲಯಕ್ಕೂ ಪ್ರವೇಶ ಮಾಡಿತ್ತು. ಕೆಲವರು ಶುಂಠಿ ಬೆಳೆಯ ಹಿಂದೆ ಬಿದ್ದಿದ್ದರು. ಎಲ್ಲೆಲ್ಲಿಂದಲೋ ಸಾಲ ತಂದು ಶುಂಠಿ ಬೆಳೆದಿದ್ದವರು ಆ ವರ್ಷ ಏಕಾಏಕಿ ಸುರಿದ ಹುಚ್ಚು ಮಳೆಯಿಂದಾಗಿ ಶುಂಠಿಯೆಲ್ಲ ನಾಶವಾಯಿತು. ಸಾಲಕ್ಕೆ ಹೆದರಿ ಶುಂಠಿ ಗದ್ದೆಯಲ್ಲೇ ವಿಷ ಕುಡಿದು ಮಲಗಿದವರು ಕೆಲವರು.

ಇದೇ ಸಂದರ್ಭದಲ್ಲಿ ನಮ್ಮ ರಂಗ ತಂಡದ ಆಧಾರ ಸ್ತಂಭವಾಗಿದ್ದ ಗೆಳೆಯ ನಾಗರಾಜ್ ನಮಗೆ ಯಾರಿಗೂ ಸುಳಿವನ್ನೇ ಕೊಡದೆ ಜೀವ ಳೆದುಕೊಂಡರು. ಇದು ನಮ್ಮನ್ನೆಲ್ಲಾ ತತ್ತರಿಸುವಂತೆ ಮಾಡಿತ್ತು.

ಧನ್ವಂತರಿಯ ಚಿಕಿತ್ಸೆ

ನಮ್ಮ ರಂಗ ಚಟುವಟಿಕೆಗಳನ್ನು ನಿಲ್ಲಿಸಿ ಸುಮ್ಮನೆ ಕುಳಿತು ಬಿಟ್ಟೆವು.

ಆ ಸಂದರ್ಭದಲ್ಲಿ ಹಾಸನ ಜಿಲ್ಲಾಡಳಿತ ಕುವೆಂಪು ಶತಮಾನೋತ್ಸವಕ್ಕೆಂದು ಒಂದು ಕಾರ್ಯಕ್ರಮ ಮಾಡಿಕೊಡುವಂತೆ ಕೇಳಿಕೊಂಡಿತು.

ಅವರ ಯೋಜನೆ ಮತ್ತು ಯೋಚನೆಗಳಿಗೂ ನಮಗೂ ಹೊಂದಿಕೆಯಾಗದೆ ನಾವು ಆದನ್ನು ಕೈಬಿಟ್ಟೆವು. ಆದರೆ ಕುವೆಂಪು ಶತಮಾನೋತ್ಸವಕ್ಕೆ ನಾವೇ ಏನಾದರೂ ಮಾಡೋಣವೆಂದು ತೀರ್ಮಾನಿಸಿ ರೈತರ ಸಮಸ್ಯೆಯ ಬಗ್ಗೆಯೇ ಇರುವ ಕುವೆಂಪುರವರ ಸಣ್ಣ ಕತೆ  “ಧನ್ವಂತರಿಯ ಚಿಕಿತ್ಸೆ” ಯನ್ನಾಧರಿಸಿ, ನಾಟಕವನ್ನು ರೂಪಿಸಿಕೊಂಡೆವು. ಅದರಲ್ಲಿ ಮೂಲ ಕತೆಯ ಜೊತೆ ತೇಜಸ್ವಿಯವರ ಅಣ್ಣನ ನೆನಪು ಪುಸ್ತಕದಿಂದಲೂ ಕೆಲವು ಸಂಗತಿಗಳನ್ನು ಬಳಸಿಕೊಂಡಿದ್ದೆ. ಜೊತೆಗೆ ಕುವೆಂಪು ಅವರದ್ದೇ ಒಂದು ಪಾತ್ರವನ್ನು ರಚಿಸಿದ್ದೆ.

ಈ ನಾಟಕವನ್ನು ಅಲ್ಲಲ್ಲಿ ಪ್ರದರ್ಶನ ಮಾಡಿದೆವು. ಮೂಡಿಗೆರೆಯಲ್ಲಿಯೂ ಪ್ರದರ್ಶನವಿತ್ತು. ತೇಜಸ್ವಿಯವರೂ ಬಂದು ನಾಟಕ ನೋಡಿದರು.

ಕುವೆಂಪು ಶತಮಾನೋತ್ಸವಕ್ಕೆ ಕಾರ್ಯಕ್ರಮ ಮಾಡುತ್ತೀರಾ ಎಂದು ಕೇಳಿದ ಜಿಲ್ಲಾಡಳಿತಕ್ಕೆ ಕನಿಷ್ಟ ನಾವು ನಮ್ಮದೇ ಶ್ರಮ ಮತ್ತು ಖರ್ಚಿನಿಂದ ಮಾಡಿದ ನಾಟಕವನ್ನು ಹಾಸನದಲ್ಲಿ ಒಂದು ಪ್ರದರ್ಶನ ಮಾಡಿಸಬೇಕೆಂಬ ಯೋಚನೆಯೂ ಬರಲಿಲ್ಲ. ನಾವು ನಮ್ಮ ಗೆಳೆಯರ ಮೂಲಕ ಹಾಸನದ ಕಲಾಮಂದಿರದಲ್ಲಿ “ಧನ್ವಂತರಿಯ ಚಿಕಿತ್ಸೆ” ನಾಟಕದ ಒಂದು ಪ್ರದರ್ಶನವನ್ನು ಆಯೋಜಿಸಿಕೊಂಡಿದ್ದವು. ಆದರೆ ಆಗ ಮಾಜಿ ಪ್ರಧಾನಿಗಳಾಗಿದ್ದ ಪಿ.ವಿ.ನರಸಿಂಹರಾಯರು ಮೃತಪಟ್ಟು ಶೋಕಾಚರಣೆಯೆಂದು ನಮ್ಮ ನಾಟಕ ಪ್ರದರ್ಶನವನ್ನು ಜಿಲ್ಲಾಡಳಿತ ರದ್ದು ಗೊಳಿಸಿತು!

ಕರ್ನಾಟಕದ ಬೇರೆ ಜಿಲ್ಲೆಗಳ ಜಿಲ್ಲಾ ರಂಗಮಂದಿರಗಳಲ್ಲಿ ಮತ್ತು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿಯೂ ಅದೇ ದಿನ ಕಾರ್ಯಕ್ರಮಗಳು ನಡೆದಿದ್ದವು.

ನಾಟಕ ಧನ್ವಂತರಿಯ ಚಿಕಿತ್ಸೆ

ಕಾಫಿ ಬೆಳೆಗಾರರ ಮತ್ತು ಉದ್ಯಮಿಗಳ, ಹಾಗೂ ಕೊಮಾರ್ಕ್ ಸದಸ್ಯರ ನಿಯೋಗಗಳು ಪದೇ ಪದೇ ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಸಚಿವರನ್ನು ಭೇಟಿಯಾದರು. ಸಮಸ್ಯೆಗಳನ್ನು ವಿವರಿಸಿದರು.

ಇವರೆಲ್ಲರ ಒಟ್ಟು ಪ್ರಯತ್ನದಿಂದ ನಂತರದ ದಿನಗಳಲ್ಲಿ ಆಗಿನ ಸರ್ಕಾರ ಬೆಳೆಗಾರರರಿಗೆ ಅನುಕೂಲವಾಗುವಂತೆ ಒಂದು ಸಮಗ್ರ ಯೋಜನೆಯನ್ನು ರೂಪಿಸಿತು. ಬ್ಯಾಂಕ್ ಸಾಲಗಳ ಮರು ಹೊಂದಾಣಿಕೆ, ಅವಧಿ ವಿಸ್ತರಣೆ, ಬಡ್ಡಿ ರಿಯಾಯಿತಿ ಮತ್ತು ಹೊಸ ಸಾಲಗಳ ನೀಡಿಕೆ ಎಲ್ಲವೂ ಸೇರಿದ್ದ ಈ ಯೋಜನೆಗೆ ವಿದರ್ಭ ಯೋಜನೆ ಎಂದು ಹೆಸರಿಸಲಾಗಿತ್ತು. ಇದರಿಂದಾಗಿ ಕಾಫಿ ವಲಯಕ್ಕೆ ಒಂದಷ್ಟು ಅನುಕೂಲವಾಯಿತು.

ಎಲ್ಲ ಕೃಷಿಯಲ್ಲಿಯೂ ಬೆಲೆ  ಇಳಿದರೆ ಅದರ ನೇರ ಪರಿಣಾಮ ಆಗುವುದು ಮೊದಲಿಗೆ ಕೃಷಿಕನಿಗೆ ಮತ್ತು ಕೃಷಿ ಕಾರ್ಮಿಕರ ಮೇಲೆ. ಹಾಗೆಂದು ಕಾಫಿ ಬೆಳೆಗಾರರರೆಲ್ಲ ಧರ್ಮರಾಯರು, ತಮಗೆ ಒಳ್ಳೆಯ ಬೆಲೆ ಬಂದಾಗಲೆಲ್ಲ ಕಾರ್ಮಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದುಕೊಳ್ಳುವುದು ಬೇಡ. ಕಾಫಿಪ್ಲಾಂಟರುಗಳು ಅತ್ಯುತ್ತಮ ಎನ್ನಬಹುದಾದ ಸ್ಥಿತಿಯಲ್ಲಿದ್ದಾಗ ಕಾರ್ಮಿಕರ ಸ್ಥಿತಿ ನಿಕೃಷ್ಟವಾಗಿತ್ತು. ಈಗ ಕಾರ್ಮಿಕರ ಕೊರತೆ, ಅವರಲ್ಲಿಯೂ ಹೆಚ್ಚಿದ ವಿದ್ಯಾಬ್ಯಾಸ, ಸಂಘಟನೆ ಇವುಗಳಿಂದ ಅವರಲ್ಲಿ ಎಚ್ಚರ ಮತ್ತು ಚೌಕಾಸಿ ಮಾಡುವ ಶಕ್ತಿ ಹೆಚ್ಚಿರುವುದರಿಂದ ಒಳ್ಳೆಯ ಕೂಲಿ ದೊರೆಯುತ್ತಿದೆ. ಕೃಷಿ ಉತ್ಪನ್ನಗಳ ಬೆಲೆ ಕುಸಿದಂತೆ, ಜೊತೆಯಲ್ಲಿಯೇ ಕಾರ್ಮಿಕರಿಗೆ ಸಿಗುವ ಕೆಲಸದ ದಿನಗಳು ಕಡಿಮೆಯಾಗುತ್ತವೆ. ಕಾರ್ಮಿಕರ ಕೊಳ್ಳುವ ಶಕ್ತಿ ಕುಸಿಯುತ್ತದೆ. ಕೃಷಿ ವಲಯದ ಕೊಳ್ಳುವ ಶಕ್ತಿಯನ್ನು ಹೆಚ್ಚಿಸದೆ ದೇಶದ ಆರ್ಥಿಕ ಶಕ್ತಿಯನ್ನು ಹೆಚ್ಚಿಸುತ್ತೇನೆ ಎನ್ನುವುದು ಕನಸಿನ ಮಾತು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)

ಕಳೆದುಹೋದ ದಿನಗಳು ಹಿಂದಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: ಕಾಫಿ ಬೆಲೆಯಲ್ಲಿ ಏರಿಕೆ: ನಿರೀಕ್ಷೆಗೂ ಮೀರಿ ಹೆಚ್ಚಿನ ಲಾಭ ಗಳಿಸಿದ್ದ ಕೊಮಾರ್ಕ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...