Homeಅಂಕಣಗಳುಕಾಫಿ ಬೆಲೆಯಲ್ಲಿ ಏರಿಕೆ: ನಿರೀಕ್ಷೆಗೂ ಮೀರಿ ಹೆಚ್ಚಿನ ಲಾಭ ಗಳಿಸಿದ್ದ ಕೊಮಾರ್ಕ್

ಕಾಫಿ ಬೆಲೆಯಲ್ಲಿ ಏರಿಕೆ: ನಿರೀಕ್ಷೆಗೂ ಮೀರಿ ಹೆಚ್ಚಿನ ಲಾಭ ಗಳಿಸಿದ್ದ ಕೊಮಾರ್ಕ್

- Advertisement -
- Advertisement -

ಕಳೆದು ಹೋದ ದಿನಗಳು ಭಾಗ 2, ಅಧ್ಯಾಯ -10

1994ರ ವೇಳೆಗೆ ಕೇಂದ್ರ ಸರ್ಕಾರ ಕಾಫಿ ಕಾಯಿದೆಗೆ ತಿದ್ದುಪಡಿಯನ್ನು ತಂದು ಕಾಫಿ ಮಾರುಕಟ್ಟೆಯನ್ನು ಕಾಫಿ ಬೋರ್ಡಿನಿಂದ ಮುಕ್ತಗೊಳಿಸಿತು. ನಂತರ ಕಾಫಿ ಬೋರ್ಡ್ ಸಂಶೋಧನೆ, ಹಾಗೂ ಅಭಿವೃದ್ಧಿ ಮುಂತಾದ ಕೆಲಸಗಳಿಗೆ ಸೀಮಿತವಾಯಿತು.

ಆರಂಭಿಕವಾಗಿ ಕೊಮಾರ್ಕ್ ಅದ್ಭುತ ಎನ್ನುವಂತೆ ಕಾರ್ಯನಿರ್ವಹಿಸಿತು. ನಿರಂತರವಾಗಿ ಏರುತ್ತಿದ್ದ ಕಾಫಿ ಬೆಲೆ ಕೋಮಾರ್ಕ್ ಸಂಸ್ಥೆಗೂ ಅದೃಷ್ಟವನ್ನೇ ತಂದಿತ್ತು. ಯಾಕೆಂದರೆ ಹಲವು ಸಲ ಕೊಮಾರ್ಕ್ ಸಂಸ್ಥೆ ಮಾರುಕಟ್ಟೆಯ ಇತರ ವ್ಯಾಪಾರಿ ಸಂಸ್ಥೆಗಳಿಗಿಂತ ಹೆಚ್ಚಿನ ಬೆಲೆಯನ್ನು ನಿಗದಿ ಮಾಡುತ್ತಿತ್ತು. ಅಂಥ ಸಂದರ್ಭದಲ್ಲಿ, ಮತ್ತು ಬೆಲೆ ಸ್ವಲ್ಪ ಏರುಪೇರಾಗುವ ಲಕ್ಷಣಗಳು ಕಂಡರೂ ಖಾಸಗಿ ಸಂಸ್ಥೆಗಳು ಕಾಫಿ ಕೊಳ್ಳುವುದನ್ನು ನಿಲ್ಲಿಸುತ್ತಿದ್ದವು ಇಲ್ಲವೇ ಕಾಫಿ ಖರೀದಿಯನ್ನು ಮುಂದೂಡುತ್ತಿದ್ದವು. ಆದರೆ ಸಹಕಾರಿ ಸಂಸ್ಥೆಯಾದ ಕೊಮಾರ್ಕ ಹಾಗೆ ಮಾಡದೆ ನಿರಂತರವಾಗಿ ಕೊಳ್ಳುತ್ತಿತ್ತು. ಇದು ಬಹಳ ಕಷ್ಟದ ನಡೆಯಾದರೂ ಕಾಫಿಯ ಬೆಲೆ ಮೊದಲ ಎರಡು ಮೂರು ವರ್ಷಗಳಲ್ಲಿ ಏರುಗತಿಯಲ್ಲಿಯೇ ಇದ್ದುದರಿಂದ ಕೋಮಾರ್ಕ್  ನಿರೀಕ್ಷೆಗೂ ಮೀರಿ ಹೆಚ್ಚಿನ ಲಾಭ ಗಳಿಸಿತು.

ಕಾಫಿ ಬೋರ್ಡ್ ಇಂದು

ಕೊಮಾರ್ಕ್ ಸಂಸ್ಥೆಯನ್ನು ಇನ್ನಷ್ಟು ವೃತ್ತಿಪರಗೊಳಿಸುವ ಕಾರ್ಯಗಳು ಪ್ರಾರಂಭವಾದವು. ಆಡಳಿತ ಮತ್ತು ಮಾರುಕಟ್ಟೆ ನಿರ್ವಹಣೆಗಾಗಿ ಒಬ್ಬರು ಮಾರುಕಟ್ಟೆ ತಜ್ಞ ಐ. ಎ. ಎಸ್ ಆಧಿಕಾರಿಗಳನ್ನು ನೇಮಿಸಿಕೊಳ್ಳಲಾಯಿತು. ಇತರ ಹಲವಾರು ಜನ ವೃತ್ತಿಪರರನ್ನೂ ನೇಮಿಸಿಕೊಂಡು ಹಾಸನ ನಗರ ಮಧ್ಯದಲ್ಲಿ ಸುಸಜ್ಜಿತವಾದ ಆಡಳಿತ ಕಛೇರಿ ಪ್ರಾರಂಭವಾಯಿತು.

ಇಷ್ಟೆಲ್ಲ ಕೆಲಸಗಳ ನಡುವೆಯೂ ರವೀಂದ್ರನಾಥ ಮತ್ತು ಕುಟುಂಬದವರ ಜನಪರ ಕಾಳಜಿಯ ಕೆಲಸಗಳು ಇನ್ನಷ್ಟು ಹೆಚ್ಚಾದವೇ ಹೊರತು ಕಡಿಮೆಯಾಗಲಿಲ್ಲ. ಬಾಲನಿಕೇತನದಲ್ಲಿ ಬೆಳೆದು ವಿದ್ಯೆ ಕಲಿತವರು ಹಲವರು ಅಲ್ಲಲ್ಲಿ ಉದ್ಯೋಗಗಳಿಸಿದ್ದರು. ಅನೇಕ ಹೆಣ್ಣು ಮಕ್ಕಳನ್ನು ಇವರೇ ಮದುವೆ ಮಾಡಿ ಕೊಟ್ಟರು. ಹಲವಾರು ನೌಕರರ ಕೂಲಿ ಕಾರ್ಮಿಕರ ಮಕ್ಕಳಿಗೆ ವಿದ್ಯೆಗೆ ಎಲ್ಲ ರೀತಿಯ ಸಹಾಯ ಮಾಡುತ್ತಿದ್ದರು. ಇದರಿಂದಾಗಿ ಹಾರ್ಲೆ ತೋಟದಲ್ಲಿ ನೌಕರರು ಮಾತ್ರವಲ್ಲ ಕೂಲಿ ಕಾರ್ಮಿಕರ ಮಕ್ಕಳು ಕೂಡ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಯಿತು. ಹೀಗೆ ವಿದ್ಯೆ ಕಲಿತರಲ್ಲಿ ಇಂದು ಇಂಜಿನಿಯರ್‌ಗಳು, ಶಿಕ್ಷಕರು, ಎಂ.ಬಿ.ಎ ಕಲಿತು ಬೇರೆ ಬೇರೆ ಉದ್ಯಮ ಸಂಸ್ಥೆಗಳಲ್ಲಿ ಅಧಿಕಾರಿಗಳಾಗಿರುವವರು. ಕಾಫಿ ಎಸ್ಟೇಟುಗಳಲ್ಲಿ ಉದ್ಯೋಗಿಗಳಾಗಿರುವವರು, ಸ್ವಂತ ಉದ್ಯಮಿಗಳಾಗಿರುವವರು ಹೀಗೆ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ತೋಟದ ನೌಕರರು, ಕಾರ್ಮಿಕರು ಮಾತ್ರವಲ್ಲ ಇವರಲ್ಲಿ ಹೊರಗಿನ ಹಲವಾರು ಜನರು ಸಹಾಯ ಯಾಚಿಸಿ ಬರುತ್ತಿದ್ದರು. ಎಷ್ಟೋ ಸಲ ಹಾಗೆ ಸಹಾಯ ಪಡೆದವರು ನಂತರ ಮುಂದೊಂದು ದಿನ ಅದನ್ನು ಕೃತಜ್ಞತೆಯಿಂದ ನೆನಪಿಸಿಕೊಂಡಾಗಲಷ್ಟೇ ಬೇರೆಯವರಿಗೆ ಆ ವಿಚಾರ ತಿಳಿಯುವುದು.

ಕೆಲಸಗಾರರನ್ನು ಆದಷ್ಟು ಪರೋಕ್ಷವಾಗಿ ತಿದ್ದುವುದು ರವೀಂದ್ರನಾಥರ ಕ್ರಮ. ಇದಕ್ಕೆ ಉದಾಹರಣೆಯಾಗಿ ಕೆಲವು ಸಂಗತಿಗಳನ್ನು ಗಮನಿಸಬಹುದು.

ಹಾರ್ಲೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರರಿಗೆ ಸ್ವಲ್ಪ ಶೋಕಿಯ ಸ್ವಭಾವ. ಹೊಸ ಹೊಸ ವಸ್ತುಗಳನ್ನು, ಬಟ್ಟೆ ಬರೆಗಳನ್ನು ವಾಚುಗಳನ್ನು ತರುವರು. ಬೇರೆಯವರಿಗೂ ಕೊಡುವರು. ಒಮ್ಮೆ ರಾಡೋ ವಾಚೊಂದನ್ನು ಕಟ್ಟಿಕೊಂಡು ಬಂದರು. ಅದು ಚಿನ್ನದ ಬಣ್ಣದಲ್ಲಿ ಮಿಂಚುತ್ತಿದ್ದ ವಿದೇಶಿ ವಾಚು. ಆಕಾಲದಲ್ಲಿ ಸುಮಾರು ಆರೇಳು ಸಾವಿರ ಬೆಲೆಯದು. ಅದು ಥಳ ಥಳ ಹೊಳೆಯುತ್ತಿತ್ತು. ಆ ದಿನ ನಾನೂ ಆಫೀಸಿನಲ್ಲೇ ಇದ್ದೆ. ನಾನು ಅದನ್ನು ಕೇಳಿ ಅತ್ತಿತ್ತ ತಿರುಗಿಸಿ ನೋಡುತ್ತಿದ್ದೆ. ಚಿನ್ನದ ಬಣ್ಣದ ವಾಚಿನ ಮಾಲಿಕರು ಸುಮ್ಮನಿರಲಾರದೆ ರವೀಂದ್ರನಾಥರಲ್ಲಿ “ಸರ್ ನೀವು ಇಂತದ್ದೊಂದು ವಾಚ್ ಕಟ್ಟಬೇಕು ರಾಡೋ ಕಂಪೆನಿಯದ್ದೇ ಇನ್ನೂ ಒಳ್ಳೆಯ ವಾಚ್ ಸಿಗುತ್ತದೆ”. ಎಂದರು.

ಕಣಚೂರು ಎಸ್ಟೇಟ್ (ಬ್ರಿಟಿಷ್ ಕಾಲದ ಬಂಗಲೆ

ರವೀಂದ್ರನಾಥರು ನಕ್ಕು ಸುಮ್ಮನಾದರು. ಅವರಲ್ಲಿ ಒಂದು ಹಳೆಯ ಫೇವರ್ ಲ್ಯೂಬಾ ವಾಚಿತ್ತು. ಆಗಲೇ ಅದಕ್ಕೆ ಇಪ್ಪತ್ತೈದು ವರ್ಷ ಕಳೆದಿರಬಹುದು.

ಸ್ವಲ್ಪ ಹೊತ್ತು ಕಳೆಯಿತು.  ರವೀಂದ್ರನಾಥರು ತಮ್ಮ ವಾಚನ್ನು ಕೈಯಿಂದ ಬಿಚ್ಚಿ ಗಂಟೆನೋಡಿ. ವೇಳೆ ಸರಿಪಡಿಸಿಕೊಳ್ಳುವವರಂತೆ ಆ ನೌಕರರಲ್ಲಿ.

“ಈಗ ಗಂಟೆ ಎಷ್ಟಾಯ್ತು” ಎಂದರು.

ಅವರು ಖುಷಿಯಿಂದ “ಹನ್ನೊಂದೂವರೆ” ಎಂದರು. ರವೀಂದ್ರನಾಥರ ವಾಚ್ ನಿಂತುಹೋಗಿರಬಹುದೆಂದು ಅವರ ನಿರೀಕ್ಷೆಯಿದ್ದಿರಬೇಕು.

ಕೂಡಲೇ ರವೀಂದ್ರನಾಥರು. “ಹೋ ಈ ವಾಚೂ ಅಷ್ಟೇ ತೋರಿಸುತ್ತಿದೆ ಆಶ್ಚರ್ಯ!” ಎಂದರು.

ಆ ನೌಕರರು ಪೆಚ್ಚು ಪೆಚ್ಚಾಗಿ ನಕ್ಕರು. ನಂತರ ಅವರು ರವೀಂದ್ರನಾಥರಲ್ಲಿ ಹೊಸ ವಾಚಿನ ಸುದ್ದಿ ತೆಗೆಯಲಿಲ್ಲ.

ಬೇರೆ ಹಲವಾರು ಉತ್ತಮ ತೋಟಗಳಿಗೆ ನೌಕರರು ಮೇಸ್ತ್ರಿಗಳು ಮುಂತಾದವರನ್ನು ಕರೆದೊಯ್ಯುತ್ತಿದ್ದರು. ಇದರಿಂದ ಅವರ ಅನುಭವ ಹೆಚ್ಚುತ್ತಿತ್ತು.

ಹಾಗೆಯೇ ಹಾರ್ಲೆ ಆಡಳಿತದಲ್ಲಿ ಇದ್ದ ಪ್ರತಿಯೊಂದು ತೋಟಗಳಿಗೂ ಉಳಿದ ತೋಟಗಳ ನೌಕರರು ಮೇಸ್ತ್ರಿಗಳು ಮುಂತಾದವರನ್ನು ಪರಸ್ಪರ ಅನುಭವಗಳನ್ನು ಹಂಚಿಕೊಳ್ಳುವ ಸಲುವಾಗಿ ಕರೆದೊಯ್ಯವ ಕ್ರಮವಿತ್ತು. ಇದರಿಂದ ಪ್ರತಿಯೊಂದು ವಿಭಾಗದ ಕೊಂದು ಕೊರತೆಗಳು ಹಾಗೂ ಉತ್ತಮ ಅಂಶಗಳು ಪ್ರತಿಯೊಬ್ಬರಿಗೂ ಪರಿಚಯ ಮತ್ತು ಮನವರಿಕೆಯಾಗಿ ತಮ್ಮ ವಿಭಾಗವನ್ನು ಇನ್ನಷ್ಟು ಉತ್ತಮ ಗೊಳಿಸಿಕೊಳ್ಳಲು ಅನುಕೂಲವಾಗುತ್ತಿತ್ತು.

ನಾನು ನೋಡಿಕೊಳ್ಳುತ್ತಿದ್ದ ಆಶೀರ್ವಾದ್ ಎಸ್ಟೇಟಿಗೆ ಒಮ್ಮೆ ಹೀಗೆ ಬೇರೇ ವಿಭಾಗಗಳವರ ಭೇಟಿಯ ಸಂದರ್ಭ. ಆಶೀರ್ವಾದ್ ಎಸ್ಟೇಟಿನಲ್ಲಿ, ಯಾಲಕ್ಕಿ ಮತ್ತು ಪಚ್ಚಬಾಳೆಯ ಬೆಳೆ ಅದ್ಭುತವಾಗಿ ಬಂದಿತ್ತು. ಅದನ್ನು ನೋಡಲು ಹಲವರು ಬಂದಿದ್ದರು. ಅವರಲ್ಲಿ ಒಬ್ಬ ನೌಕರರರು. “ಇಲ್ಲಿನ ಮಣ್ಣು ತುಂಬ ಚೆನ್ನಾಗಿದೆ” ಎಂದರು. ಬೇರೆ ಕೆಲವರೂ ಹೌದು ಹೌದು ಎಂದರು. ರವೀಂದ್ರನಾಥರು ಸುಮ್ಮನಿದ್ದರು.

ಸ್ವಲ್ಪ ಮುಂದೆ ಹೋದಾಗ ಅಲ್ಲೇ ಪಕ್ಕದಲ್ಲೇ ಬೇರೆಯವರ ತೋಟವಿತ್ತು. ಈ ಎರಡು ತೋಟಗಳ ನಡುವೆ ಬೇಲಿಯ ಬದಲಿಗೆ ಗುರುತಿಗಾಗಿ ಒಂದು ಕಾಲುದಾರಿ ಮಾತ್ರ ಅಡ್ಡವಿತ್ತು. ಹೊಸಬರಿಗೆ ಅದು ಬೇರೆಯವರ ತೋಟವೆಂದು ಪಕ್ಕನೆ ತಿಳಿಯುವಂತಿರಲಿಲ್ಲ. ಅಲ್ಲಿನ ಯಾಲಕ್ಕಿ ಗಿಡಗಳು ಸೊರಗಿ ಬೆಳವಣಿಗೆ ಕುಂಠಿತವಾಗಿದ್ದವು. ಅದನ್ನು ನೋಡಿದ ಆ ನೌಕಕರು “ಹೋ ಇಲ್ಲಿ ಏನೂ ಚೆನ್ನಾಗಿಲ್ಲ” ಎಂದರು.

ಆಗ ನಾನು “ಅದು ನಮ್ಮದಲ್ಲ ಬೇರೆಯವರ ತೋಟ” ಎಂದು ಹೇಳಿದೆ.

ಆಗ ರವೀಂದ್ರನಾಥರು ನಗುತ್ತ ಆ ನೌಕರರರಿಗೆ. “ಆದರೆ ಮಣ್ಣು ಒಂದೇ” ಎಂದರು!

ಆ ಮಾತಿನ ಅರ್ಥ ಆ ನೌಕರರರಿಗೆ ತಟ್ಟಿತ್ತು.

ಹೀಗೆ ಹಲವಾರು ಸಲ ಇಂಥ ರೀತಿಯಿಂದಲೇ ಅವರು ಬೇರೆಯವರನ್ನು ಎಚ್ಚರಿಸುತ್ತಿದ್ದರು.

ದೀಪಕ್ ಅವರ ಯಾಲಕ್ಕಿ ಬೆಳೆ ವೀಕ್ಷಣೆ

ನಾನು ದೇವಾಲದಕೆರೆಯ ಆಶೀರ್ವಾದ್ ಎಸ್ಟೇಟಿನ ಉಸ್ತುವಾರಿ ವಹಿಸಿಕೊಂಡು ಎರಡು ಮೂರು ವರ್ಷಗಳು ಕಳೆದಿದ್ದವು. ತೋಟ ವಿಸ್ತರಣೆಯಾಗಿತ್ತು. ಅದರ ಮಾಲಿಕರು ಕೆ.ಎಸ್.ಸೇತ್ನಾ ಎಂಬವರು. (ಯಲಗುಡಿಗೆ ಎಸ್ಟೇಟ್‌ನ ಸೇತ್ನಾ ಇವರಲ್ಲ ಬೇರೆಯವರು) ಅಲ್ಲೇ ಒಂದಷ್ಟು ಹೊಸ ಜಮೀನು ಕೊಂಡಿದ್ದರು. ಆಶೀರ್ವಾದ್ ಎಸ್ಟೇಟ್, ಜಪಾವತಿ ಹೊಳೆಯ ಪಕ್ಕದ ತೋಟ ಬಹಳ ಸುಂದರವಾದ ಸ್ಥಳ. ಇದು ಸಕಲೇಶಪುರ ಮತ್ತು ಮೂಡಿಗೆರೆ ತಾಲ್ಲೂಕುಗಳ ಗಡಿಯೂ ಹೌದು. ಈ ತೋಟದ ಮಾಲಿಕರು ಆ ತೋಟವನ್ನು ಕೊಳ್ಳುವ ಸಂದರ್ಭದಲ್ಲಿ ಅವರಿಗೆ ಕಾಫಿಯ ಬಗ್ಗೆ ಏನೂ ಅನುಭವ ಇರಲಿಲ್ಲ. ಅವರೊಬ್ಬ ಉದ್ಯಮಿ ಆದ್ದರಿಂದ ಪ್ರಾರಂಭದ ದಿನಗಳಲ್ಲಿ ಅವರು ಬೇರೆ ಯಾರಿಗೂ ಉಸ್ತುವಾರಿ ಕೊಟ್ಟು ಸಾಕಷ್ಟು ನಷ್ಟ ಅನುಭವಿಸಿದ್ದರು.  ತೋಟದ ದಾಖಲೆಗಳಲ್ಲಿಯೂ ಹಲವು ತೊಂದರೆಗಳಿದ್ದವು. ನಂತರ ಅವರ ಗೆಳೆಯರೊಬ್ಬರ ಮೂಲಕ ಅವರಿಗೆ ರವೀಂದ್ರನಾಥರ ಪರಿಚಯವಾಗಿ ಅವರು ತಮ್ಮ ತೋಟದ ನಿರ್ವಹಣೆಯನ್ನು ಹಾರ್ಲೆ ಮ್ಯಾನೇಜ್‌ಮೆಂಟಿಗೆ ವಹಿಸಿದ್ದರು. ಈಗ ಎಲ್ಲವೂ ಒಂದು ಹದಕ್ಕೆ ಬಂದಿತ್ತು. ಅದರ ಮಾಲಿಕರಿಗೂ ಕಾಫಿ ತೋಟದ ರುಚಿ ಹತ್ತಿತ್ತು.

ಅದೇ ಸಂದರ್ಭದಲ್ಲಿ ರವೀಂದ್ರನಾಥರು ದೂರದಲ್ಲಿದ್ದ ತಮ್ಮ ಕೆಲವು ತೋಟಗಳನ್ನು ಮಾರಾಟಮಾಡಿ ಹತ್ತಿರದಲ್ಲಿದ್ದ ಕೆಲವು ತೋಟಗಳನ್ನು ಖರೀದಿಸಿ ತಮ್ಮ ಹಾರ್ಲೆ ತೋಟವನ್ನು ಒಂದೇ ಆವರಣದಲ್ಲಿ ಬರುವಂತೆ ಮಾಡಿಕೊಂಡರು. ಆ ಸಂದರ್ಭದಲ್ಲಿ ಎರಡು ಕಿ.ಮಿ ದೂರದ ವೊಡ್ಗಲ್ ಎಸ್ಟೇಟನ್ನು ದೇವಾಲಕೆರೆಯ ಆಶೀರ್ವಾದ್ ತೋಟದ ಮಾಲಿಕರಾದ ಕೆ.ಎಸ್.ಸೇತ್ನಾರಿಗೆ ಮಾರಾಟ ಮಾಡಿದರು. ಆಗ ವೊಡ್ಗಲ್ ಮತ್ತು ಆಶೀರ್ವಾದ್ ಎಸ್ಟೇಟ್ ಒಂದೇ ಮ್ಯಾನೇಜ್ ಮೆಂಟಿಗೆ ಬಂದಿತಲ್ಲದೆ. ಹಾರ್ಲೆ ಮ್ಯಾನೇಜ್ಮೆಂಟಿನಿಂದ ಕಳಚಿಕೊಂಡಿತ್ತು. ನಾನು ಸದ್ಯಕ್ಕೆ ಅಲ್ಲೇ ಮುಂದುವರೆದಿದ್ದೆ. ಆದರೆ ಹಾರ್ಲೆಯ ಸಂಪರ್ಕವನ್ನು ಉಳಿಸಿಕೊಂಡೇ ಇದ್ದೆ.

ರವೀಂದ್ರನಾಥರು ಕೊಮಾರ್ಕ್‌ನ ಕೆಲಸಗಳಲ್ಲಿ ಮುಳುಗಿಹೋಗಿದ್ದರು. ಪ್ರತಿದಿನ ಬೆಳಗ್ಗೆ ಎಂಟು ಗಂಟೆಗೆ ಮನೆ ಬಿಟ್ಟರೆ ಅವರು ಹಾಸನಕ್ಕೋ ಇನ್ನೆಲ್ಲಿಗೋ ಕೊಮಾರ್ಕ್‌ನ ಕೆಲಸದ ನಿಮಿತ್ತ ಹೋಗುತ್ತಿದ್ದರು. ಬರುವಾಗ ರಾತ್ರಿ ಹತ್ತುಗಂಟೆಯೂ ಆಗುವುದಿತ್ತು. ಹಾರ್ಲೆಯ ತೋಟಗಳ ಆಡಳಿತವನ್ನು ಕಮಲಾ ರವಿಂದ್ರನಾಥರು ನಿಭಾಯಿಸುತ್ತಿದ್ದರು. ಭಾನುವಾರದ ದಿನಗಳಲ್ಲಿಯೂ ರವೀಂದ್ರನಾಥರು ಭೇಟಿಗೆ ಸಿಗುವುದು ಕಷ್ಟವಾಗುತ್ತಿತ್ತು.

ಕೆಲವೇ ಸಮಯದಲ್ಲಿ ನನಗೂ ವೊಡ್ಗಲ್ ಎಸ್ಟೇಟಿನ ಮಾಲಿಕರಿಗೂ ಭಿನ್ನಾಭಿಪ್ರಾಯವುಂಟಾಗಿ ನಾನು ಕೆಲಸಕ್ಕೆ ರಾಜೀನಾಮೆ ನೀಡಿದೆ. ಸ್ವಲ್ಪ ದಿನಗಳ ಕಾಲ ಅಲ್ಲಿ ಇಲ್ಲಿ ಅಲೆಯುತ್ತ ಇದ್ದೆ. ಒಂದು ದಿನ ರವೀಂದ್ರನಾಥರು ಕರೆದು “ನೀನು ಹಾರ್ಲೆಗೇ ಬಾ” ಎಂದು ಹೇಳಿದರು. ಮತ್ತೆ ಹಲವು ಜವಾಬ್ದಾರಿಗಳು ನನಗೆ ದೊರೆತವು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದು ಹೋದ ದಿನಗಳು -32: ಗಣಪಯ್ಯನವರನ್ನು ಪ್ರಭಾವಿಸಿದ್ದ ಅಂಶಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...