ತುರ್ತುಪರಿಸ್ಥಿತಿ ಮುಗಿದ ಸಂದರ್ಭ 1977ರ ಇಸವಿ, ನಾನಾಗ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿ. ನನ್ನ ಸ್ನೇಹಿತನೊಬ್ಬ ’ಬಾ ಹೋಗೋಣ’ ಎಂದು ಕರೆದುಕೊಂಡು ಹೋಗಿ ಆರೆಸ್ಸೆಸ್ಸಿಗೆ ಸೇರಿಸಿದ. ಆತ ತುಂಬಾ ಒಳ್ಳೆಯ ಗೆಳೆಯ. ನನ್ನ ಕಷ್ಟಸುಖಗಳಲ್ಲಿ ನೆರವಾಗುತ್ತಿದ್ದ. ಆತನ ತಂದೆ, ತಾಯಿ ಹಾಗೂ ಅಣ್ಣಂದಿರಿಗೆ ನನ್ನ ಮೇಲೆ ವಿಶೇಷ ಕಾಳಜಿಯಿತ್ತು. ’ನಮ್ಮ ಮುಕುಂದ’ ಎಂದು ತಮ್ಮ ಮನೆಯ ಹುಡುಗನಂತೆ ಅವರೆಲ್ಲರೂ ನನ್ನನ್ನು ಪ್ರೀತಿಸುತ್ತಿದ್ದರು. ಆತನ ಹೆಸರು ನಟರಾಜ್ ಪಂಡಿತ್. ಅಲ್ಲಿ ಕಬಡ್ಡಿ ತರಹದ ನಾನಾ ಬಗೆಯ ಆಟಗಳನ್ನು ಆಡಿಸುತ್ತಿದ್ದರು. ಕತೆ, ಹಾಡು, ಹರಟೆಗಳ ಮೂಲಕ ದೇಶಪ್ರೇಮ ಕಲಿಸುತ್ತಿದ್ದರು. ದಕ್ಷಿಣ ಕನ್ನಡದಿಂದ ಶ್ರೀನಿವಾಸ್‌ರಾವ್ ಎಂಬ ಪ್ರಚಾರಕರು ಬಂದಿದ್ದರು. ಈಗಲೂ ನನ್ನ ಆತ್ಮೀಯನಾಗಿರುವ ಮುಜೀಬುಲ್ಲಾ ಖಾನ್ ಎಂಬ ಮುಸ್ಲಿಂ ಗೆಳೆಯನೂ ಸಂಘದ ಶಾಖೆಗೆ ಬರುತ್ತಿದ್ದ. ಇದೆಲ್ಲಾ ನಮಗೆ ಬಹಳ ಖುಷಿ ಕೊಡುವ ವಿಚಾರಗಳಾಗಿದ್ದವು.
ಆಗ ನನ್ನದು ಚಿಕ್ಕ ವಯಸ್ಸು. ಅಲ್ಲಿಂದಾಚೆಗೆ, ನನ್ನನ್ನು ಕರೆದುಕೊಂಡು ಹೋದವರೆಲ್ಲಾ ಆರ್‌ಎಸ್‌ಎಸ್ ಬಿಟ್ಟುಬಿಟ್ಟರು. ನಟರಾಜನೇ ಎಷ್ಟೋ ದಿನ ಚಕ್ಕರ್ ಹೊಡೆದುಬಿಡುತ್ತಿದ್ದ. ಆದರೆ ನಾನು ಬಿಡುತ್ತಿರಲಿಲ್ಲ. ನಾನು ಬಹಳ ಆಸಕ್ತಿಯಿಂದ ಕೆಲಸ ಮಾಡುತ್ತಾ ಹೋದೆ. ತುಂಬಾ ವರ್ಷಗಳ ಕಾಲ ತೊಡಗಿಸಿಕೊಂಡೆ. ಬಿಟ್ಟಿದ್ದು ಯಾಕೆ ಎಂದು ಕೆಲವರಿಗೆ ಅನುಮಾನ ಇರಬಹುದು. ಅದರಲ್ಲಿ ಅಂತಹ ದೊಡ್ಡ ವಿಚಾರವೇನೂ ಇಲ್ಲ. ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ನನಗೆ ಸಾಹಿತ್ಯದ ಓದು ಹೊಸಬಗೆಯ ಚಿಂತನೆಗಳ ಅರಿವು ಮೂಡಿಸಿದ್ದು ಇದಕ್ಕೆ ಕಾರಣವಿರಬಹುದು. ತುಮಕೂರಿನ ಸಂಜೆ ಕಾಲೇಜಿ ವಿದ್ಯಾರ್ಥಿಯಾಗಿದ್ದ ನಾನು ಬಿಎ ಪಾಸು ಮಾಡಿದನಂತರ ಸ್ನಾತಕೋತ್ತರ ಪದವಿ ಪಡೆಯಲು ಸೇರಿಕೊಂಡಿದ್ದೇ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರಕ್ಕೆ. ಜಿ.ಎಸ್.ಶಿವರುದ್ರಪ್ಪ, ಚಿದಾನಂದಮೂರ್ತಿ, ಚಂದ್ರಶೇಖರ ಕಂಬಾರ, ಲಕ್ಷ್ಮೀನಾರಾಯಣ ಭಟ್, ಸಿ.ವೀರಣ್ಣ, ಹೆಚ್.ಕೆ. ಜಯದೇವ್, ಕಿ.ರಂ. ನಾಗರಾಜ, ಡಿ.ಆರ್.ನಾಗರಾಜು, ಕೆ.ವಿ.ನಾರಾಯಣ್, ಸುಮತೀಂದ್ರ ನಾಡಿಗ್, ಕೆ.ಪಿ. ಭಟ್, ಸಿದ್ದಲಿಂಗಯ್ಯ, ಕಾಳೇಗೌಡ ನಾಗವಾರ, ಬರಗೂರು ರಾಮಚಂದ್ರಪ್ಪ ಇವರೆಲ್ಲಾ ಅಲ್ಲಿ ನನಗೆ ಮೇಷ್ಟ್ರುಗಳಾಗಿದ್ದರು. ಅವರೆಲ್ಲರೂ ಆ ಕಾಲಕ್ಕೇ ಕನ್ನಡ ಸಾಹಿತ್ಯ ವಲಯದಲ್ಲಿ ಪ್ರಸಿದ್ಧರಾಗಿದ್ದ ಅದ್ಭುತವಾದಂತಹ ಮೇಷ್ಟ್ರುಗಳು. ಕನ್ನಡ ಸಾಹಿತ್ಯ, ತೌಲನಿಕವಾಗಿ ಜಗತ್ತಿನ ಸಾಹಿತ್ಯ, ಭಾಷಾ ವಿಜ್ಞಾನ, ಕಾವ್ಯ ಮೀಮಾಂಸೆ ಇತ್ಯಾದಿ ಸಿಲಬಸ್‌ನಲ್ಲಿದ್ದ ಪಾಠಗಳನ್ನೇ ಎಲ್ಲರಿಗೂ ಹೇಳಿಕೊಡುವಂತೆ ನನಗೂ ಹೇಳಿಕೊಡುತ್ತಿದ್ದರು. ಪ್ರತ್ಯೇಕ ಪಠ್ಯಗಳನ್ನು ನನಗೊಬ್ಬನಿಗೇ ಹೇಳಿಕೊಟ್ಟವರಲ್ಲ.

ಕಿರಂ ನಾಗರಾಜ್ ಮಾತ್ರ ನನಗೊಬ್ಬನಿಗೇ ಪ್ರತ್ಯೇಕವಾಗಿ ಹೇಳುತ್ತಿದ್ದರು. ಕನ್ನಡ ಎಂ.ಎ ಓದಬೇಕಾದರೆ ಸಿಲಬಸ್‌ನಲ್ಲಿ ಏನು ಇರುತ್ತೋ ಪಂಪ, ಕುಮಾರವ್ಯಾಸ, ಹರಿಹರ, ರಾಘವಾಂಕ, ಬಸವಣ್ಣ, ಅಲ್ಲಮಪ್ರಭು, ಸರ್ವಜ್ಞ, ಶಿಶುನಾಳ ಷರೀಫ, ಕುವೆಂಪು, ಬೇಂದ್ರೆ, ಅಡಿಗ, ಲಂಕೇಶ್, ತೇಜಸ್ವಿಯವರನ್ನು ಎಲ್ಲಾ ವಿದ್ಯಾರ್ಥಿಗಳು ಓದುವ ಹಾಗೆ, ಒಬ್ಬ ಎಂಎ ವಿದ್ಯಾರ್ಥಿ ಏನನ್ನು ಓದಬೇಕಿತ್ತೋ ಅದನ್ನೆಲ್ಲ ಗಂಭೀರವಾಗಿ ಓದುತ್ತಿದ್ದ ಹಾಗೆ ನಾನು ಏನೋ ತಪ್ಪು ಮಾಡುತ್ತಾ ಇದೀನಿ ಅಂತ ಅನ್ನಿಸೋದಕ್ಕೆ ಶುರುವಾಯಿತು. ಅಲ್ಲಿ ಸಂಘದಲ್ಲಿ ಹೇಳುತ್ತಿರುವುದು ಒಂದು. ಅವರೇನೋ ದೇಶಪ್ರೇಮ, ಹಿಂದೂ ಧರ್ಮ ಎಂದು ಏನೇನೋ ಹೇಳುತ್ತಿದ್ದಾರೆ. ಆದರೆ ನಾನು ಓದುತ್ತಿರುವ ರಾಮಾಯಣದಲ್ಲಿ ಹಿಂದು ಧರ್ಮಕ್ಕಿಂತ ಭಿನ್ನವಾದ ವಿಚಾರವಿದೆ. ಕುಮಾರವ್ಯಾಸನ ಮಹಾಭಾರತ (ಕರ್ನಾಟ ಭಾರತ ಕಥಾಮಂಜರಿ), ಪಂಪನ ವಿಕ್ರಮಾರ್ಜುನ ವಿಜಯ, ರನ್ನನ ಗದಾಯುದ್ಧ. ಇವೆಲ್ಲವೂ ಮಹಾಭಾರತವನ್ನು ಕೇಂದ್ರವಾಗಿಟ್ಟುಕೊಂಡು ಬರೆದಿರುವ ಮಹಾಕಾವ್ಯಗಳು. ಇದರಲ್ಲಿ ಸಂಘ ಹೇಳುವುದಕ್ಕಿಂತಲೂ ಬೇರೆ ಏನೋ ಇನ್ನೊಂದು ತರಹ ಇದೆಯಲ್ಲ! ಎಂಬ ಶಂಕೆ ಉಂಟಾಯಿತು. ಇವರೆಲ್ಲರೂ ಮಹಾಕವಿಗಳು. ಬಹಳ ಹಿಂದೆ ಅಂದರೆ ನೂರಾರು ವರ್ಷಗಳ ಹಿಂದೆ ಮಹಾಕಾವ್ಯಗಳನ್ನು ಬರೆದವರು. ಈಗಿನ ಸಮಕಾಲೀನ ಸಂದರ್ಭದಲ್ಲಿ ನಿಂತು ಹೇಳುತ್ತಿರುವವರಂತ ಹೇಳುತ್ತಿದ್ದರು.
ಕನ್ನಡ ಸಾಹಿತ್ಯಕ್ಕೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಪಂಪ ಕನ್ನಡದ ಮೊದಲ ಕವಿ. ಅವನು ಹೇಳಿದ್ದಕ್ಕಿಂತ ಭಿನ್ನವಾಗಿ ಸಂಘದ ಶಾಖೆಗಳಲ್ಲಿ ಬೇರೆ ಏನೋ ಹೇಳುತ್ತಿದ್ದಾರಲ್ಲ, ಎಂಬ ವಿಚಾರ ನನ್ನ ಮನಸ್ಸಿಗೆ ನಾಟುತ್ತಾ ಹೋಯಿತು. ಆದರೆ, ಅಷ್ಟು ಸರಳವಾಗಿ ಆರ್‌ಎಸ್‌ಎಸ್ ಬಿಡಲು ಸಾಧ್ಯವಾಗುತ್ತಿರಲಿಲ್ಲ. ಒಂದು ಸಲ ಅಲ್ಲಿಗೆ ಹೋದರೆ ವಾಪಸ್ ಬರುವುದು ಬಹಳ ಕಷ್ಟ. ನಾನು ಆ ಸಂದರ್ಭದಲ್ಲಿ ಎಬಿವಿಪಿಯಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದೆ. ರಾಜ್ಯಮಟ್ಟದಲ್ಲಿ ಕೆಲಸ ಮಾಡುತ್ತಿದ್ದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಸಂಘಟಿಸುತ್ತಿದ್ದೆ. ಅಂದು ನನ್ನ ಜೊತೆಯಲ್ಲಿದ್ದ ಅನೇಕ ಕಾರ್ಯಕರ್ತರು ಇಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಲ್ಲಿ ಮಂತ್ರಿಗಳಾಗಿ, ಶಾಸಕರಾಗಿ, ಸಂಸದರಾಗಿ ಕೀರ್ತಿಶಾಲಿಗಳಾಗಿದ್ದಾರೆ. ವಿವಿಧ ಅಧಿಕಾರದ ಕೇಂದ್ರಗಳಲ್ಲಿ ವಿರಾಜಮಾನರಾಗಿದ್ದಾರೆ. ಬೆಂಗಳೂರು ಯುನಿವರ್ಸಿಟಿಯಲ್ಲಿ ಡಿ.ಆರ್.ನಾಗರಾಜ್, ಬರಗೂರು ಮತ್ತಿತರ ಮೇಷ್ಟ್ರುಗಳು ನನಗೆ ಬುದ್ಧಿ ಹೇಳಲು ಅನೇಕ ಸಲ ವಿಫಲ ಪ್ರಯತ್ನ ಮಾಡುತ್ತಿದ್ದರು. ನಾನು ಅವರೊಂದಿಗೆ ವಾಗ್ವಾದಕ್ಕೆ ಇಳಿಯುತ್ತಿದ್ದೆ. ಅವರಿಗೂ ಬೇಸರವಾಗಿ ಇವನ ಹಣೆ ಬರಹವೇ ಇಷ್ಟೆಂದು ಸುಮ್ಮನಾಗುತ್ತಿದ್ದರು.
ಗುರುಗಳಾದ ಕವಿ ಸಿದ್ಧಲಿಂಗಯ್ಯ ಒಮ್ಮೆ ನನ್ನನ್ನು ತಮ್ಮ ಕೊಠಡಿಯಲ್ಲಿ ಕೂರಿಸಿಕೊಂಡು ಕೆಲವು ಪ್ರಶ್ನೆಗಳನ್ನು ಕೇಳಿದರು. ಅವೆಲ್ಲ ಈಗ ತಮಾಷೆಯಂತೆ ಕಾಣುತ್ತವೆ.
ಸಿದ್ಧಲಿಂಗಯ್ಯ: ಮುಕುಂದರಾಜ್, ನೀವು ಮಹಾರಾಷ್ಟ್ರದವರಾ…
ನಾನು: ಇಲ್ಲ ಸರ್, ನಾನು ತುಮಕೂರು ಬಳಿಯ ಲಕ್ಕೇನಹಳ್ಳಿಯವನು
ಸಿದ್ಧಲಿಂಗಯ್ಯ: ನೀವು ಬಾಳಾ ಸಾಹೇಬ್ ದೇವರಸ್ ಸಂಬಂಧಿಕರಂತೆ, ನಿಜವಾ?
ನಾನು: ಇಲ್ಲ ಸಾರ್, ನಮ್ಮಪ್ಪ ನರಸೇಗೌಡ, ನಮ್ಮವ್ವ ಲಕ್ಷ್ಮಮ್ಮ.
ಸಿದ್ಧಲಿಂಗಯ್ಯ: ನೀವು ಇಷ್ಟು ಚೆನ್ನಾಗಿ ಕನ್ನಡವನ್ನು ಸಂಸ್ಕೃತದಂತೆ ಮಾತನಾಡ್ತೀರಲ್ಲ, ಅದಕ್ಕೆ ಕೇಳಿದೆ… ಎಂದರು. ಸಿದ್ಧಲಿಂಗಯ್ಯನವರ ಎಲ್ಲಾ ಮಾತುಗಳಿಗೂ, ಪ್ರತಿಮಾತು ಕೊಟ್ಟು ನನ್ನ ಸಂಘ ನಿಷ್ಠೆಯನ್ನು ತೋರಿಸಿ ಹೊರಬಂದಿದ್ದೆ.
ಕಾಳೇಗೌಡ ನಾಗವಾರರು ನನ್ನನ್ನು ’ಅರೆಬೆಂದ ಎಬಿವಿಪಿ’ ಎಂದು ಹಂಗಿಸುತ್ತಿದ್ದರು. “ನಮ್ಮ ಸಂಕುಲದ ಕೂಸೊಂದು ಹೀಗೆ ಬ್ರಾಹ್ಮಣ ರೋಗಕ್ಕೆ ಬಲಿಯಾಗಿದೆಯಲ್ಲ ಎಂಬ ದುಗುಡ ಅವರಲ್ಲಿತ್ತು. ಕಿ.ರಂ.ನಾಗರಾಜ್ ಮಾತ್ರ ಸುಮ್ಮನೆ ಬಿಡಲಿಲ್ಲ. ’ಅದೇನ್ರಿ ನಿಮ್ಮದು ಎಬಿವಿಪಿ..?’ ಅಂತ ಆಗಾಗ ಕೇಳುತ್ತಿದ್ದರು. ’ಸಾರ್ ಹೀಗೆ ಇರುತ್ತದೆ ಬನ್ನಿ’ ಅಂತ ನಾನು ಹೇಳುತ್ತಿದ್ದೆ. “ಸರಿ ನಡೀರಿ ನಿಮ್ಮ ಎಬಿವಿಪಿಗೆ ನಾನು ಬರುತ್ತೇನೆ” ಎನ್ನುತ್ತಿದ್ದರು. ಒಬ್ಬ ವಿಶ್ವವಿದ್ಯಾಲಯದ ಪ್ರಾಧ್ಯಾಪಕನನ್ನು ಎಬಿವಿಪಿಗೆ ಸೇರಿಸುತ್ತಿದ್ದೇನಲ್ಲಾ ಎಂಬ ಹೆಮ್ಮೆಯ ಭಾವನೆ ನನ್ನಲ್ಲಿ ಉಂಟಾಗುತ್ತಿತ್ತು. ಕಿ.ರಂ. ನನ್ನ ಜೊತೆಯಲ್ಲಿ ಬರುತ್ತಿದ್ದರು. ನಾವು ಬೈಠಕ್, ಸಭೆ, ಸಮಾರಂಭಗಳನ್ನು ಮಾಡುವಾಗ ಒಂದು ಮೂಲೆಯಲ್ಲಿ ಕುಳಿತಿರುತ್ತಿದ್ದರು. ಕೊನೆಗೆ ಎಲ್ಲಾ ಮುಗಿದ ಮೇಲೆ ’ಮುಗಿಯಿತಾ ನಿಮ್ಮ ಎ.ಬಿ.ವಿ.ಪಿ..?’ ಎಂದು ಕೇಳುತ್ತಿದ್ದರು. ’ಹೂ ಸರ್’ ಎನ್ನುತ್ತಿದ್ದೆ. “ನಡೀರಿ, ನನ್ನ ಜೊತೆ” ಎಂದು ಸರಿರಾತ್ರಿಯ ಹೊತ್ತಲ್ಲಿ ಗಡಂಗುಗಳಿಗೆ ಕರೆದುಕೊಂಡು ಹೋಗುತ್ತಿದ್ದರು. “ನೀವು ಪಂಪನ ಕಾವ್ಯದ ಈ ಭಾಗವನ್ನು ಓದಿದ್ದೀರಾ. ಅಲ್ಲಮಪ್ರಭು, ಬಸವಣ್ಣನನ್ನು ಓದಿದ್ದೀರಾ…? ಇದನ್ನು ಓದಿ, ಇದನ್ನು ಓದಿ” ಎಂದು ತಮ್ಮ ಹತ್ತಿರವಿದ್ದ ಅನೇಕ ಪುಸ್ತಕಗಳನ್ನು ಕೊಡುತ್ತಿದ್ದರು.

ಕನ್ನಡ ಸಾಹಿತ್ಯ ಕೃತಿಗಳ ಯಾವ ಭಾಗವನ್ನು ಅವರು ನನಗೆ ಓದಲು ಹೇಳುತ್ತಿದ್ದರೆಂದರೆ, ಮನುಷ್ಯ ವಿರೋಧಿಯಾದಂತಹ ಧಾರ್ಮಿಕ ನಿಲುವುಗಳನ್ನು ಎಲ್ಲಿ ನಮ್ಮ ಕವಿಗಳು ನೇರವಾಗಿ ಖಂಡಿಸಿದ್ದಾರೋ ಅಂತಹ ಭಾಗಗಳನ್ನು ನನಗೆ ಕೊಡುತ್ತಿದ್ದರು. ಅದನ್ನು ಓದಿದಾಗ ನನಗನ್ನಿಸಿತು ನಾನು ನಿಜವಾಗಲೂ ತಪ್ಪು ಮಾಡುತ್ತಿದ್ದೀನಿ ಎಂದು. ಯಾರೂ ನನ್ನನ್ನು ಎಬಿವಿಪಿ ಬಿಡು, ಆರ್‌ಎಸ್‌ಎಸ್ ಬಿಡು ಎಂದು ಹೇಳುತ್ತಿರಲಿಲ್ಲ. ಅವರೇನಾದರು ಬಿಡು ಎಂದು ಹೇಳುತ್ತಿದ್ದರೆ, ನಾನು ವಾದಕ್ಕೆ, ಜಗಳಕ್ಕೆ ಬಿದ್ದುಬಿಡುತ್ತಿದ್ದೆ. ಎಷ್ಟು ವಾದ ಅಂದರೆ ನೀವು ಆರ್‌ಎಸ್‌ಎಸ್ ಹುಡುಗರ ಜೊತೆಯಲ್ಲಿ ಮಾತಿನಲ್ಲಿ ಗೆಲ್ಲುವುದಕ್ಕೆ ಸಾಧ್ಯವೇ ಆಗೋಲ್ಲ. ಅವರದ್ದು ಹಿಡಿದಿದ್ದೇ ಹಠ. ನಾವೇ ಶ್ರೇಷ್ಠ, ನಾವು ಹೇಳಿದ್ದೇ ಸರಿ, ನಮ್ಮ ಹಿಂದೂ ಧರ್ಮವೇ ಶ್ರೇಷ್ಟ. ಈ ರೀತಿಯ ವಾದಗಳನ್ನು ಸುಮ್ಮನೆ ಬಡಬಡಾಯಿಸುವುದು. ಅವರ ಯಾವ ವಾದಕ್ಕೂ ತಳಹದಿ ಇರುವುದಿಲ್ಲ. ಯಾವುದೂ ಕೂಡಾ ಸ್ವತಃ ಅನುಭವದಿಂದ, ಅಧ್ಯಯನದಿಂದ ಬಂದ ವಾದಗಳಲ್ಲ. ಯಾರೋ ನಮ್ಮ ತಲೆಯಲ್ಲಿ ತುಂಬಿದ ಮಾತುಗಳು, ಯಾರೋ ನಮಗೆ ಹೇಳಿಕೊಟ್ಟ ಮಾತುಗಳನ್ನು ಇಲ್ಲಿ ತಂದು ಸುರಿಯುವುದು. ನಾನೂ ಹೀಗೆಯೇ ವಾದ ಮಾಡುತ್ತಿದ್ದೆ. ಯಾವಾಗ ಕಿರಂ ನನ್ನನ್ನು ಗಂಭೀರ ಓದಿಗೆ ತೊಡಗಿಸಿದರೋ; ಆಗ ನಾನು ಏನೋ ತಪ್ಪು ಮಾಡುತ್ತಿದ್ದೀನಿ ಎಂಬುದು ನನಗೆ ಗೊತ್ತಾಯಿತು.
ಶ್ರಮಪಟ್ಟು ಗಳಿಸಿದ ಸ್ವಾತಂತ್ರ್ಯ ನಮ್ಮದು. ಈ ಸ್ವಾತಂತ್ರ್ಯದಿಂದ ಕಳೆದ 70ಕ್ಕೂ ಹೆಚ್ಚಿನ ವರ್ಷಗಳಲ್ಲಿ ನಾವು ಅನುಭವಿಸಿದ ಸುಖ ಏನು, ದುಃಖ ಏನು ಎಂಬುದನ್ನು ನಾವು ಯೋಚನೆ ಮಾಡಬೇಕಾಗಿದೆ. ಈ ವರ್ಷಗಳಲ್ಲಿ, ಪ್ರಜಾಪ್ರಭುತ್ವದ ಕಾರಣಕ್ಕಾಗಿ ಸ್ವಾತಂತ್ರ್ಯದ ಕಾರಣಕ್ಕಾಗಿ ಮತ್ತು ಸಂವಿಧಾನದ ಕಾರಣಕ್ಕಾಗಿ ನಾವು ಸ್ವಲ್ಪ ಉಸಿರಾಡುವಂತಾಯಿತು. ಸಾವಿರಾರು ವರ್ಷಗಳಿಂದ ನಮಗೆ ವಿದ್ಯೆಯೇ ಇರಲಿಲ್ಲ. ನಮ್ಮಪ್ಪ ನಮ್ಮವ್ವ ಇದ್ದಂತೆ, ನಮ್ಮ ತಾತ ನಮ್ಮ ಮುತ್ತಾತ ಇದ್ದಂತೆ, ಗೊಬ್ಬರ ಹೊತ್ಕೊಂಡು, ದನ ಕಾಯ್ಕೊಂಡು, ಹೊಲ ಉತ್ಕೊಂಡು ಇರಬೇಕಾಗಿತ್ತು. ಒಂದು ಜಾತಿಯಲ್ಲಿ ಹುಟ್ಟಿದವನು ತನ್ನ ಜಾತಿಗೆ ನಿಗದಿಪಡಿಸಿದ ಕೆಲಸ ಮಾಡಿಕೊಂಡು ಇರಬೇಕಿತ್ತು. ಕ್ಷೌರ ಮಾಡಿಕೊಂಡು, ಬಟ್ಟೆ ಒಗೆದುಕೊಂಡು, ಮೆಟ್ಟು ಹೊಲಿದುಕೊಂಡು, ಬೀದಿ ಕಸ ಗುಡಿಸಿಕೊಂಡು, ಹೆಂಡ ಇಳಿಸಿಕೊಂಡು, ಮೀನು ಹಿಡ್ಕೊಂಡು, ದನ ಕಾಯ್ಕೊಂಡು, ಕುರಿ ಕಾಯ್ಕೊಂಡು ಒಂದೊಂದು ಕೆಲಸಕ್ಕೂ ಒಂದೊಂದು ಜಾತಿ ಅಂತ ಇದ್ದವಲ್ಲ, ಹಾಗೆ ನಮ್ಮಪ್ಪ ಅವ್ವಂದಿರು, ತಾತ ಮುತ್ತಾತಂದಿರು ಇರುವಂತೆ ಇರಬೇಕಾಗಿದ್ದ ನಾನು, ಇವತ್ತು ಪದ್ಯ ಬರೆದುಕೊಂಡು, ಕಥೆ ಬರೆದುಕೊಂಡು, ನಾಟಕ ಮಾಡ್ಕೊಂಡು, ಸಿನೆಮಾ ತೆಗೆದುಕೊಂಡು, ಸರ್ಕಾರಿ ಕಾಲೇಜಿನಲ್ಲಿ ಲೆಕ್ಚರ್ ಆಗಿ, ಸರ್ಕಾರಿ ಸಂಬಳ ತೆಗೆದುಕೊಂಡು, ಪ್ರಿನ್ಸಿಪಾಲ್ ಆಗಿ, ಈ ರೀತಿ ಮುಕ್ತವಾಗಿ ಭಾಷಣ ಮಾಡಿಕೊಂಡು ಬದುಕುತ್ತಿದ್ದೀನಲ್ಲಾ.. ಇದು ನನಗೆ ಹೇಗೆ ಬಂತು..? ಈ ತರಹ ಬಿಳಿ ಬಟ್ಟೆ ಹಾಕಿಕೊಂಡು ಓಡಾಡುವ ಅವಕಾಶ, ನಮ್ಮಪ್ಪ ನಮ್ಮವ್ವನಿಗೆ ನಮ್ಮ ತಾತನಿಗೆ, ಕಚ್ಚರಿವೆಗೂ ಬಟ್ಟೆ ಇರಲಿಲ್ಲ, ಊಟಕ್ಕೆ ಗತಿ ಇರಲಿಲ್ಲ. ಇದನ್ನೆಲ್ಲವನ್ನೂ ಮರೆತೇ ಬಿಟ್ಟಿದ್ದೇವೆ ನಾವು. ಅವರ ಮುಂದಿನ ಪೀಳಿಗೆಯವರಾದ ನಾವು ಇಷ್ಟು ಸಂತೋಷವಾಗಿ ಬದುಕುತ್ತಿರುವುದಕ್ಕೆ ಕಾರಣ, ವಿದ್ಯೆ ನಮ್ಮಪ್ಪನಿಗೆ ತಾತನಿಗಿಲ್ಲದ, ಮುತ್ತಜ್ಜ ಮುತ್ತಜ್ಜಿಗಿಲ್ಲದಿದ ವಿದ್ಯೆ ಇಂದು ನಮಗೆ ಸಿಕ್ಕಿದೆ. ಆ ವಿದ್ಯೆಯ ಕಾರಣದಿಂದ ನಾವು ಇಷ್ಟೆಲ್ಲಾ ಶಕ್ತಿ ಗೌರವ ಸಂಪಾದನೆ ಮಾಡಿಕೊಂಡಿದ್ದೇವೆ.
ವಿದ್ಯಾಭ್ಯಾಸದ ಕಾರಣದಿಂದಾಗಿ ನಮಗೆ ಸಿಕ್ಕಿರುವ ಉದ್ಯೋಗ, ಉದ್ಯೋಗದಿಂದ ಬಂದಿರುವ ಅಲಂಕಾರ ಈ ಎಲ್ಲದರಿಂದ ನಾವು ಪಡೆಯುತ್ತಿರುವ ಆನಂದವನ್ನು ಯಾರಿಗೋ ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ಶೂದ್ರರು ಸಾವಿರಾರು ವರ್ಷಗಳಿಂದ, ನಮ್ಮ ಎದುರು ಕೈ ಕಟ್ಟಿಕೊಂಡು ನಿಂತುಕೊಳ್ಳುತಿದ್ದರು, ನಮ್ಮ ಚಪ್ಪಲಿ ಹೊಲಿಯುವವರು, ನಮ್ಮ ಕೊಳೆ ಬಟ್ಟೆಗಳನ್ನು ತೊಳೆಯುತ್ತಿದ್ದವರು, ನಮಗೆ ಬೇಕಾದ ಸೇವೆ ಮಾಡಿಕೊಂಡು ಇದ್ದವರು. ನಮಗೆ ಅಕ್ಕಿ, ರಾಗಿ ಬೆಳೆದುಕೊಡುತ್ತಿದ್ದವರು. ನಮ್ಮ ಕಾಲಿಗೆ ಬೀಳುತ್ತಿದ್ದವರು. ಈಗ ಇವರೆಲ್ಲಾ ಹೀಗೆ ಸ್ವತಂತ್ರವಾಗಿಬಿಟ್ಟರೆ, ಇವರು ಸಂತೋಷವಾಗಿ ಬದುಕಿಬಿಟ್ಟರೆ, ನಮಗೆ ಕಷ್ಟ ಆಗುತ್ತೆ ಎಂದು ಯಾರೋ ಯೋಚನೆ ಮಾಡಿದಾರೆ.
ಹಾಗೆ ಯೋಚನೆ ಮಾಡುತ್ತಾ, ಇವರಿಗೆ ಸಿಕ್ಕ ಸ್ವಾತಂತ್ರ್ಯವನ್ನು ಹೇಗೆ ವಾಪಸ್ ಕಿತ್ತುಕೊಳ್ಳಬೇಕು ಎಂಬುದಕ್ಕೆ, ಅವರಿಗೆ ಸಿಕ್ಕ ಸುಲಭ ಮಾರ್ಗಗಳು ಯಾವುದು ಎಂದರೆ ದೇವರು, ಧರ್ಮ, ಹುಸಿ ದೇಶಪ್ರೇಮ. ಇವುಗಳನ್ನು ನಮ್ಮ ಜನರ ತಲೆಯಲ್ಲಿ ಬಿತ್ತುತ್ತಾ ಹೋದರು. ಜನರಿಗೆ ಇವುಗಳ ಬಗೆಗಿದ್ದ ಕುತೂಹಲ, ಆಸಕ್ತಿ, ನಂಬಿಕೆ ಅವರ ಬಂಡವಾಳವಾಯಿತು. ಜಾತಿ ಮತ ಧರ್ಮಗಳ ನಿಂದನೆಯಿಂದ ನನ್ನನ್ನು ಯಾರಾದರು ಕೆರಳಿಸಿದರೆ, ಅದರಿಂದ ನನಗೆ ಬರುವ ಕೋಪ; ಅಥವಾ ನನ್ನ ಜಾತಿ ಮತ ಧರ್ಮ ದೇವರನ್ನು ಹೊಗಳುವುದರಿಂದ ನನಗಾಗುವ ಆನಂದ ಇದೆಯಲ್ವಾ, ಇದಕ್ಕಿಂತಲೂ ಹೆಚ್ಚಿನ ಆನಂದವಿಲ್ಲವೇನೋ ಎಂಬ ಪರಿಸ್ಥಿತಿಯಲ್ಲಿರುವ ಜನರನ್ನು ನೋಡಿ ಅವರಿಗೆ ಗೊತ್ತಾಯಿತು. ಇದನ್ನು ಬಳಸಿದರೆ ನಾವು ಮತ್ತೆ ಸುಲಭವಾಗಿ ಶೂದ್ರರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಬಹುದು. ನಮ್ಮ ಸಾವಿರಾರು ವರ್ಷಗಳ ಅಧಿಕಾರವನ್ನು ನಿರಂತರವಾಗಿ ಪಾಲಿಸೋದಕ್ಕೆ ಸಾಧ್ಯವಾಗುತ್ತದೆ ಎಂಬ ಉಪಾಯದ ಕಾರಣದಿಂದ ಹಿಂದುತ್ವವನ್ನು ಮುಂದುಮಾಡಿದರು. ಈ ಉಪಾಯದಲ್ಲಿ ಅವರು ಯಶಸ್ವಿಯಾಗಿದ್ದಾರೆ. ನಮ್ಮ ಜನರೇ ಅವರಿಗೆ ಓಟು ಹಾಕಿ ಅಧಿಕಾರವನ್ನು ಕೊಟ್ಟಿದ್ದಾರೆ.
ನಾನು ಸಂಘದಲ್ಲಿದ್ದಾಗ ಪ್ರಚಾರಕರನ್ನು ನೋಡಿದ್ರೆ ಗಾಬರಿಯಾಗಿಬಿಡುತ್ತಿದ್ದೆ. ಅವರುಗಳು ಮಾಂಸ ತಿನ್ನುತ್ತಿರಲಿಲ್ಲ ತರಕಾರಿಯನ್ನು ಮಾತ್ರ ತಿನ್ನುತ್ತಿದ್ದರು. ನನ್ನಂತವರಿಗೆ ಒಂದು ವಾರ ಮಾಂಸ ತಿನ್ನದೇ ಇದ್ದರೆ ನಾಲಿಗೆ ಕೆಟ್ಟು ಹೋಗಿಬಿಡುವುದು. ಶೇಷು ಎಂಬ ಒಬ್ಬರು ನಮ್ಮ ವಿಭಾಗ ಪ್ರಚಾರಕರಿದ್ದರು. ಅವರು ’ಏನಯ್ಯ ನಿನ್ನ ನಾಲಿಗೆಗೇನೂ ಸೋಕದೇ ಇದ್ದರೆ ನೀನು ಬದುಕೋದಕ್ಕೆ ಸಾಧ್ಯವೇ ಇಲ್ಲವಾ..?’ ಎಂಬ ಪ್ರಶ್ನೆ ಕೇಳಿದ್ದರು. ಅವರು ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಕೂಡಾ ಆಗಿದ್ದರು.
ಮಾಂಸ ತಿನ್ನುವುದರಲ್ಲಿ ಎಂತಹ ಸಂತೋಷವಿರುತ್ತೆ. ಪಾಪ ಈ ಪ್ರಚಾರಕರು ಏನೂ ತಿನ್ನುವುದಿಲ್ಲವಲ್ವಾ..! ಮದುವೆನೂ ಮಾಡಿಕೊಳ್ಳೋದಿಲ್ಲವಲ್ವಾ..! ಯಾರಿಗಾಗಿ ಇವರು ತಮ್ಮ ಜೀವನವನ್ನು ತ್ಯಾಗ ಮಾಡುತ್ತಿದ್ದಾರೆ? ಹೆಂಡತಿ ಇಲ್ಲ, ಮಕ್ಕಳಿಲ್ಲ. ಮನೆ ಬಿಟ್ಟು ಬಂದವರೆ! ಇಂಜಿನಿಯರಿಂಗ್, ಮೆಡಿಕಲ್ ಹೀಗೆ ತುಂಬಾ ಓದಿಕೊಂಡಿದ್ದಾರೆ. ಇಷ್ಟೆಲ್ಲಾ ಓದಿದವರು ಸಂಘದ ಪ್ರಚಾರಾಗಿಬಿಟ್ಟಿದ್ದಾರೆ. ಇವರೆದುರು ನಾನು ಎಷ್ಟು ಕ್ಷುಲ್ಲಕ ಮನುಷ್ಯ. ಇವರ ತ್ಯಾಗದ ಎದುರು ನಾನು ಏನೂ ಅಲ್ಲವಲ್ಲ; ಎಂಬ ಕೀಳರಿಮೆ ನನ್ನನ್ನು ಕಾಡುತ್ತಿತ್ತು. ಅವರ ಮೇಲೆ ಅಭಿಮಾನ ಉಕ್ಕುತ್ತಿತ್ತು. ಹೀಗೆ ಒಂದು ದಿನ ಕುಳಿತು ಯೋಚನೆ ಮಾಡಿದೆ. ಒಂದು ಸತ್ಯ ಹೊಳೆಯಿತು. ಹೇಳಿದ್ರೆ ನಂಬುತ್ತೀರೋ ಇಲ್ವೋ ಗೊತ್ತಿಲ್ಲ.
ನಾವೆಲ್ಲಾ ಹೇಗೆ ಯೋಚನೆ ಮಾಡುತ್ತೀವಿ ಎಂದರೆ, ನಮ್ಮ ಕಾಲದ ಯಾವುದೇ ರಾಜಕಾರಣಿಯನ್ನು ತೆಗೆದುಕೊಳ್ಳಿ, ದೇವೇಗೌಡರನ್ನೋ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೀಗೆ ಯಾರನ್ನೇ ತೆಗೆದುಕೊಳ್ಳಿ.. ಅವರನ್ನೆಲ್ಲಾ ಭ್ರಷ್ಟರು ಅಂತಾನೇ ಬೇಕಾದ್ರೆ ಅಂದುಕೊಳ್ಳಿ. ಅವರೆಲ್ಲಾ ಹಣ ಸಂಪಾದನೆ ಮಾಡುತ್ತಿದ್ದಾರೆ ಅಂದುಕೊಳ್ಳಿ. ದುಡ್ಡು ಸಂಪಾದನೆ ಮಾಡುವ ಅವರನ್ನು ’ಯಾಕ್ರೀ ಇಷ್ಟೊಂದು ಹಣ ಗಳೀಸುತ್ತಿದ್ದೀರಿ’ ಎಂದು ಕೇಳಿದ್ರೆ, ’ನಮ್ಮ ಮಕ್ಕಳಿಗೆ ಬೇಕು ಅದಕ್ಕಾಗಿ ಗಳಿಸುತ್ತೇವೆ’ ಎನ್ನುತ್ತಾರೆ. ಮತ್ತೆ ಕೆಲವರು ’ನಮ್ಮ ಮೊಮ್ಮಕ್ಕಳಿಗೆ ಬೇಕು’ ಎನ್ನಬಹುದು. ಎರಡು ತಲೆಮಾರಿಗಷ್ಟೇ ದುಡ್ಡು ಸಂಪಾದನೆ ಮಾಡುವುದು ಅವರ ಉದ್ದೇಶ. ಮೂರನೇ ತಲೆಮಾರಿನ ಮರಿಮೊಮ್ಮಗನ ಬಗ್ಗೆ ಯೋಚನೆ ಮಾಡುವುದಿಲ್ಲ. ದೇಶಕ್ಕಾಗಿ ಜೀವನವನ್ನೇ ತ್ಯಾಗ ಮಾಡುತ್ತೇವೆಂದು ಹೇಳುವ ಮಂದಿಯ ಯೋಚನೆ ಹೇಗಿದೆ ಎಂದರೆ; 500 ವರ್ಷಗಳ ನಂತರ ಹುಟ್ಟುವ ತನ್ನ ಜಾತಿಯ ಒಬ್ಬ ಹುಡುಗನನ್ನು ಸುಖವಾಗಿ ಇಡುವುದಕ್ಕೆ ಈ ಹೊತ್ತು ನಾವು ಯಾವ ತ್ಯಾಗವನ್ನು ಮಾಡಬೇಕು ಎಂಬ ಕಲ್ಪನೆ ಅವರಿಗಿದೆ. ಅದಕ್ಕಾಗಿಯೇ ಅವರು ಈಗ ಮದುವೆ ಆಗುತ್ತಿಲ್ಲ. ಅದಕ್ಕಾಗಿಯೇ ಅವರು ಪಂಚೆ ಕಟ್ಟಿಕೊಂಡು, ತಿಳಿಸಾರು ಅನ್ನ ತಿನ್ನುತ್ತಾ, ಪೇಪರ್ ಹಾಸಿಕೊಂಡು ಮಲಗಿಕೊಳ್ಳೋದು..!
ಒಂದು ಸಾವಿರ ವರ್ಷಗಳ ಕನ್ನಡ ಸಾಹಿತ್ಯ ಕೃತಿಗಳಲ್ಲಿ ಭಾರತೀಯ ಶೂದ್ರ ಸಮುದಾಯಗಳ ಮೇಲೆ ನಡೆದ ಇಂತಹ ಪರಮ ಅನ್ಯಾಯಗಳ ಬಗೆಗಿನ ಚಾರಿತ್ರಿಕ ದಾಖಲೆಗಳು ಸೂಕ್ಷ್ಮವಾಗಿ ದೊರೆಯುತ್ತವೆ. ಕುವೆಂಪು ಅವರ ನೇಗಿಲಯೋಗಿ ಪದ್ಯದಲ್ಲಿನ “ರಾಜ್ಯಗಳುರುಳಲಿ ರಾಜ್ಯಗಳಳಿಯಲಿ ಹಾರಲಿ ಗದ್ದುಗೆ ಮುಕುಟಗಳು ತನ್ನೀ ಕಾಯಕ ಬಿಡನೆಂದೂ” ಎನ್ನುವ ಸಾಲಿನ ಅರ್ಥವನ್ನು ಹೀಗೆಯೇ ಗ್ರಹಿಸಬೇಕು. ನಮ್ಮ ಕನ್ನಡ ಸಾಹಿತ್ಯವನ್ನು ಓದಿದ ಮೇಲೂ ನಾನು ಎಬಿವಿಪಿಯೊಳಗಿರಬೇಕಾ, ಆರ್‌ಎಸ್‌ಎಸ್‌ನಲ್ಲಿರಬೇಕಾ..? ಯಾವುದೋ ಪ್ರಾಧಿಕಾರಕ್ಕೋ, ಅಕಾಡೆಮಿಗೋ ಅಧ್ಯಕ್ಷನನ್ನಾಗಿ ಮಾಡುತ್ತಾರೆ, ಎಂಎಲ್‌ಸಿ ಮಾಡುತ್ತಾರೆ ಎನ್ನುವ ನನ್ನ ವೈಯಕ್ತಿಕ ಸ್ವಾರ್ಥಕ್ಕಾಗಿ ದೇಶದ ತಳ ಸಮುದಾಯಗಳ ಭವಿಷ್ಯವನ್ನು ವೈದಿಕರಿಗೆ ಒತ್ತೆಯಿಡುವುದು ಸರಿಯಲ್ಲವೆಂಬ ಭಾವನೆ ನನಗೆ ಬಂತು. ಹಾಗಾಗಿ ನಿಧನಿಧಾನವಾಗಿ ಸಂಘ ಪರಿವಾರದ ಸಖ್ಯದಿಂದ ಹೊರಬಂದೆ. ಈಗಲೂ ನನಗೆ ಅಲ್ಲಿ ಒಳ್ಳೆಯ ಸ್ನೇಹಿತರಿದ್ದಾರೆ. ಅವರು ನನಗೆ ಬೇಕಾದ ನೆರವನ್ನು ನೀಡಬಲ್ಲವರಾಗಿದ್ದಾರೆ. ಅವರಿಂದ ಹಣ, ಅಧಿಕಾರ, ಸ್ಥಾನಮಾನಗಳನ್ನು ಪಡೆಯಬಹುದು ಎಂಬ ಆಸೆಯಿಂದ ಅಲ್ಲಿಗೆ ಹೋಗಬೇಕಾ..? ಅಥವಾ ಪಂಪ, ರಾಘವಾಂಕ, ಬಸವಣ್ಣ, ಅಲ್ಲಮ ಪ್ರಭು, ಅಕ್ಕ ಮಹಾದೇವಿ, ಕುಮಾರವ್ಯಾಸ, ಕನಕ, ಪುರಂದರ, ಸರ್ವಜ್ಞ, ಕುವೆಂಪು, ಬೇಂದ್ರೆ ಮುಂತಾದವರ ಮಾತುಗಳನ್ನು ಕೇಳಬೇಕಾ?
ದೇಶಭಕ್ತಿ, ಪ್ರಾಮಾಣಿಕತೆಗಳನ್ನು ಸಂಘದ ಹಿರಿಯರಿಂದ ನಾನು ಕಲಿತಿದ್ದೆ. ಅದನ್ನು ಈಗಲೂ ಮರೆತಿಲ್ಲ. ನಾನು ಬರೆಯುತ್ತಿರುವ ಕಾವ್ಯ, ನಾಟಕಗಳಲ್ಲಿ ದೇಶಭಕ್ತಿ ದಟ್ಟವಾಗಿ ಮೂಡುತ್ತಲೇ ಇದೆ. ವಿಶಾದವೆಂದರೆ, ನನ್ನಂತಹ ಶೂದ್ರನಿಗೆ ದೇಶಭಕ್ತಿಯ ಪಾಠ ಹೇಳಿಕೊಟ್ಟವರೇ ಈಗ ಅದನ್ನೆಲ್ಲಾ ಮರೆತು ಸ್ವಾರ್ಥಿಗಳಾಗರುವುದನ್ನು ಕಾಣಬಹುದು. ತಮ್ಮ ವೈಯಕ್ತಿಕ ಹಾಗು ಸ್ವಜಾತಿಯ ಸ್ವಾರ್ಥಕ್ಕಾಗಿ ಅವರು ಯಾವ ಮಟ್ಟಕ್ಕೆ ಬೇಕಾದರು ಇಳಿಯಬಲ್ಲರೆಂಬ ಸತ್ಯ ಎದ್ದು ಕಾಣುತ್ತಿದೆ. ಹೀಗೆ ಮುಂದುವರೆದರೆ, ನಮ್ಮ ದೇಶದ ಅಸ್ತಿತ್ವಕ್ಕೇ ಸಂಚಕಾರ ಬರಬಹುದೆಂಬ ಭಯ ನನ್ನನ್ನು ಆವರಿಸಿದೆ. ಈಗ ನನಗೆ ಸಿಕ್ಕಿರುವ ಈ ಸ್ವಾತಂತ್ರ್ಯ, ವಿದ್ಯೆ, ಉದ್ಯೋಗ ಇತ್ಯಾದಿಗಳು ನಮ್ಮ ಮುಂದಿನ ಪೀಳಿಗೆಗೂ ಸಿಗಬೇಕು. ನಮ್ಮ ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಯಾವುದೇ ತೊಂದರೆ ಉಂಟಾಗಬಾರದು. ಮತ್ತೆ ನನ್ನ ಭಾರತವೆಂಬ ಈ ಪುಣ್ಯಭೂಮಿ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬಾರದು, ಎಂಬ ಮಹತ್ವದ ಆಶಯದಿಂದ ಸಂಘ ಪರಿವಾರದಿಂದ ನಾನು ದೂರವಿದ್ದೇನೆ.
(ಎರಡು ವರ್ಷಗಳ ಹಿಂದೆ ಮಹೇಂದ್ರಕುಮಾರ್ ಅವರ ’ನಮ್ಮ ಧ್ವನಿ’ ಸಂಘಟನೆ ಏರ್ಪಡಿಸಿದ್ದ ಶಿಬಿರದಲ್ಲಿನ ಭಾಷಣದಿಂದ ಆಯ್ದ ಭಾಗ)

ಎಲ್.ಎನ್. ಮುಕುಂದರಾಜ್
ಸಾಹಿತಿ ಮುಕುಂದರಾಜ್ ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ‘ದೇಶ ಕೋಶ ದಾಸವಾಳ’, ‘ವೈಶಂಪಾಯನ ತೀರ’, ‘ಇಗೋ ಪಂಜರ ಅಗೋ ಮುಗಿಲು’ ಕೆಲವು ಪ್ರಕಟಿತ ಪುಸ್ತಕಗಳು. ಸಂಘಟಕರಾಗಿ ಗುರುತಿಸಿಕೊಂಡಿರುವ ಮುಕುಂದರಾಜ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ: ಆರ್.ಎಸ್.ಎಸ್ ಸಖ್ಯಕ್ಕೆ ಬಂದದ್ದು ಮತ್ತು ಪ್ರಶ್ನಿಸಿ ಹೊರಬಂದದ್ದು..
ಇದನ್ನೂ ಓದಿ: ‘ಸತಿ’ ಹೋದ ರೂಪ್ ಕನ್ವರ್ ದೇಗುಲಕ್ಕೆ ಆರೆಸ್ಸೆಸ್ ಬೆಂಬಲ ಮತ್ತು ನಾನು ಆರೆಸ್ಸೆಸ್ ತೊರೆದದ್ದು..
ಇದನ್ನೂ ಓದಿ: ಗಾಂಧಿ ಸಲಹೆ ಮೇರೆಗೆ ಸಾವರ್ಕರ್ ಕ್ಷಮಾಪತ್ರ ಬರೆದದ್ದು ಎಂಬ ರಕ್ಷಣಾ ಸಚಿವರ ಹೇಳಿಕೆಯ ಸತ್ಯಾಸತ್ಯತೆ


