Homeಮುಖಪುಟಗಾಂಧಿ ಸಲಹೆ ಮೇರೆಗೆ ಸಾವರ್ಕರ್ ಕ್ಷಮಾಪತ್ರ ಬರೆದದ್ದು ಎಂಬ ರಕ್ಷಣಾ ಸಚಿವರ ಹೇಳಿಕೆಯ ಸತ್ಯಾಸತ್ಯತೆ

ಗಾಂಧಿ ಸಲಹೆ ಮೇರೆಗೆ ಸಾವರ್ಕರ್ ಕ್ಷಮಾಪತ್ರ ಬರೆದದ್ದು ಎಂಬ ರಕ್ಷಣಾ ಸಚಿವರ ಹೇಳಿಕೆಯ ಸತ್ಯಾಸತ್ಯತೆ

- Advertisement -
- Advertisement -

ಯುರೇಕಾ ಎಂಬ ಪದವನ್ನು ಆರ್ಕಿಮಿಡೀಸ್‌ನ ದಂತಕಥೆಗೆ ತಪ್ಪಾಗಿ ತಳುಕು ಹಾಕಲಾಗಿದೆ. ಆ ಪದ ಬಂದಿದ್ದು ಹ್ಯುರಿಸ್ಕೊ ಎಂಬ ಗ್ರೀಕ್ ಪದದಿಂದ. ಹ್ಯುರಿಸ್ಕೊ ಎಂಬುದು ಯಾವುದೋ ಒಂದು ಸಮಸ್ಯೆಯನ್ನು ಬಗೆಹರಿಸುವ ದಾರಿಯನ್ನು ಕಂಡುಹಿಡಿದಾಗ ಕಂಡುಬರುವ ಉನ್ಮಾದ. ಆರ್ಕಿಮಿಡೀಸ್ ತನ್ನ ಸ್ನಾನದ ತೊಟ್ಟಿಯಲ್ಲಿ ಇಳಿದಕೂಡಲೇ ಸೈರಾಕ್ಯೂಸ್‌ನ ಹೀರೋಗೆ ಸೇರಿದ ಬಂಗಾರದ ಕಿರೀಟದ ಶುದ್ಧತೆಯನ್ನು ನಿಖರವಾಗಿ ಅಳೆಯುವುದು ಹೇಗೆ ಎಂಬುದನ್ನು ಕಂಡುಕೊಂಡ. ದಂತಕಥೆಗಳು ಹೇಳುವುದೇನೆಂದರೆ, ಆರ್ಕಿಮಿಡೀಸ್ ರಾಜನ ಬಳಿ ಇದನ್ನು ಹೇಳಲು ಬಟ್ಟೆಯನ್ನೇ ಧರಿಸುವುದನ್ನು ಮರೆತು ಓಡುತ್ತಿರುವಾಗ ’ಯುರೇಕಾ’ ಎಂದು ಕೂಗುತ್ತಿದ್ದನಂತೆ. ಇತ್ತೀಚಿಗೆ ರಾಜನಾಥ್ ಸಿಂಗ್ ಕೂಡ ತಮ್ಮದೇ ಆದ ಯುರೇಕಾ ಘಳಿಗೆಯನ್ನು ಅನುಭವಿಸಿದರು; ಗಾಂಧಿಯೇ ಸಾವರ್ಕರ್‌ಗೆ ಕ್ಷಮಾದಾನ ಅರ್ಜಿ ಬರೆಯುವಂತೆ ಮನವೊಲಿಸಿದ್ದರು ಎಂದು ಹೇಳಿದರು, ಅದನ್ನು ಕೇಳಿ ಇತಿಹಾಸಕಾರರು ತಮ್ಮ ಗೋರಿಯಲ್ಲಿಯೇ ಒದ್ದಾಡಿರಬಹುದು. ಈ ಒಂದು ಹೊಸ ಆವಿಷ್ಕಾರ ತನ್ನ ತಲೆಗೆ ಹೊಳೆದಾಗ ಸಚಿವರು ಮರೆತ ಸಂಗತಿಗಳ ಸರಳ ಪಟ್ಟಿ ಇಲ್ಲಿದೆ.

ಒಂದು: 1911ರಲ್ಲಿ ಸಾವರ್ಕರ್ ತನ್ನ ಮೊದಲ ಕ್ಷಮಾದಾನ ಅರ್ಜಿ ಬರೆದಾಗ, ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ಜನರಲ್ ಸ್ಮಟ್ಸ್‌ರೊಂದಿಗೆ ಕಾಳಗಕ್ಕಿಳಿದಿದ್ದರು. ಸಾವರ್ಕರ್ ಮತ್ತೆ 1913ರಲ್ಲಿ ಮತ್ತೊಮ್ಮೆ ಕ್ಷಮಾದಾನ ಅರ್ಜಿ ಸಲ್ಲಿಸಿದರು. ಆ ವರ್ಷದ ಅದೇ ತಿಂಗಳಲ್ಲಿ ದಕ್ಷಿಣ ಆಫ್ರಿಕದಲ್ಲಿ ಗಾಂಧಿ ಮಾಡಿದ ಸತ್ಯಾಗ್ರಹಕ್ಕಾಗಿ ಅವರನ್ನು ಜೈಲಿಗಟ್ಟಲಾಗಿತ್ತು. ಈ ವರ್ಷಗಳಲ್ಲಿ ಸಾವರ್ಕರ್ ಅವರ ಕ್ಷಮಾದಾನ ಅರ್ಜಿಗಳ ಬಗ್ಗೆ ನಿರ್ಣಯಿಸಲು ಇಬ್ಬರು ಬ್ಯಾರಿಸ್ಟರುಗಳು ಯಾವುದೇ ಪತ್ರ ವ್ಯವಹಾರ ನಡೆಸಿದ್ದಿಲ್ಲ.

ಎರಡು: ಗವರ್ನ್‌ಮೆಂಟ್ ಆಫ್ ಇಂಡಿಯಾ ಆಕ್ಟ್ 1919ಕ್ಕೆ ಕಾರಣವಾದ ಮೊಂಟಗು-ಚೆಲ್ಮ್ಸ್‌ಫೊರ್ಡ್ ಸುಧಾರಣೆಗಳಲ್ಲಿ ಎಲ್ಲಾ ರಾಜಕೀಯ ಕೈದಿಗಳಿಗೆ ಕ್ಷಮಾದಾನ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು.
ಸಾವರ್ಕರ್ ಸಹೋದರರ ಉಲ್ಲೇಖ ಕಂಡ 1920ರ ಮೇ 26ರಂದು ಪ್ರಕಟವಾಗಿರುವ ಯಂಗ್ ಇಂಡಿಯ ಸಂಚಿಕೆಯಲ್ಲಿ ಅಚ್ಚಾಗಿದ್ದ ಗಾಂಧಿಯ ಬರಹದಲ್ಲಿ ಎಲ್ಲಾ ರಾಜಕೀಯ ಕೈದಿಗಳ ಬಗ್ಗೆ ಬರೆಯಲಾಗಿತ್ತು. ಅದರಲ್ಲಿ ಯಾರನ್ನೂ ಹೊರತುಪಡಿಸದೇ ಕ್ಷಮಾ ದಾನವನ್ನು ಅನ್ವಯಿಸುವಲ್ಲಿ ಆಡಳಿತದ ವೈಫಲ್ಯದ ಬಗ್ಗೆ ಗಾಂಧೀಜಿ ಬರೆದಿದ್ದರು. ಗಾಂಧಿ ಹೀಗೆ ಬರೆದಿದ್ದಾರೆ: “ಈ ಇಬ್ಬರೂ ಸಹೋದರರು ತಮ್ಮ ರಾಜಕೀಯ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾರೆ ಹಾಗೂ ಯಾವುದೇ ಕ್ರಾಂತಿಕಾರಿ ಪರಿಕಲ್ಪನೆಗಳ ಬಗ್ಗೆ ಯೋಚಿಸುವುದಿಲ್ಲ ಎಂತಲೂ ಸ್ಪಷ್ಟಪಡಿಸಿದ್ದು ಹಾಗೂ ಅವರನ್ನು ಬಿಡುಗಡೆಗೊಳಿಸಿದ್ದಲ್ಲಿ ರಿಫಾರ್ಮ್ಸ್ ಕಾಯಿದೆಯ ಅಡಿಯಲ್ಲಿಯೇ ಕೆಲಸ ಮಾಡುವುದಾಗಿ ಇಚ್ಛೆ ವ್ಯಕ್ತಪಡಿಸಿದ್ದಾರೆ..” ಎಂದು. ಅದೇ ಬರಹದಲ್ಲಿ ಗಾಂಧೀಜಿಯವರು ಸಾವರ್ಕರ್ ಸಹೋದರರ ಬಗ್ಗೆ ಹೇಳುತ್ತ, “ಅವರು ಬ್ರಿಟಿಷರಿಂದ ಸ್ವಾತಂತ್ರ ಪಡೆಯುವುದನ್ನು ಬಯಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅದರ ಬದಲಿಗೆ ಭಾರತದ ಅದೃಷ್ಟವು ಬ್ರಿಟಿಷರ ಸಹಯೋಗದಿಂದಲೇ ಅತ್ಯುತ್ತಮವಾಗಿ ಕಾರ್ಯಗತಗೊಳಿಸಬಹುದು ಎಂದು ಭಾವಿಸುತ್ತಾರೆ” ಎಂದಿದ್ದರು.

ಮೂರು: ಸಾವರ್ಕರ್ ಸಲ್ಲಿಸಿದ ಇನ್ನೊಂದು ಕ್ಷಮಾದಾನ ಅರ್ಜಿಯಲ್ಲಿ ಹೀಗೆ ಹೇಳಿದ್ದಾರೆ: “ನಾನು ಮತ್ತು ನನ್ನ ಸಹೋದರ ಇಬ್ಬರೂ ಸರಕಾರವು ನಿಗದಿಪಡಿಸುವ ನಿರ್ದಿಷ್ಟವಾದ ಹಾಗೂ ಯೋಗ್ಯವಾದ ಅವಧಿಯವರೆಗೆ ರಾಜಕೀಯದಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಲು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ” ಎಂದು. ಇದೇ ನಿರ್ದಿಷ್ಟವಾದ ಸಮಯದಲ್ಲಿ ಗಾಂಧೀಜಿಯು ಜೈಲನ್ನೇ ತಮ್ಮ ಮನೆಯನ್ನಾಗಿಸಬೇಕು ಎಂದು ಭಾರತದ ಜನತೆಯನ್ನು ಹುರಿದುಂಬಿಸುತ್ತಿದ್ದರು. ತಮ್ಮ ಸಮಗ್ರ ಕೃತಿಯ 20ನೇ ವಾಲ್ಯೂಮ್‌ನಲ್ಲಿ (ಪುಟ 316) ಸಾವರ್ಕರ್ ಸಹೋದರರನ್ನು ಆಡಳಿತ ವ್ಯವಸ್ಥೆ ಏಕೆ ಬಿಡುಗಡೆ ಮಾಡಬೇಕೆಂದು ಎಂಬ ಚರ್ಚೆಯ ತಕ್ಷಣವೇ ಗಾಂಧಿ ಲಕ್ಷಗಟ್ಟಲೆ ಜನರು ನಿರ್ಭೀತರಾಗುವವರೆಗೆ ಹಾಗೂ ಮುಗ್ಧತೆಯಿಂದಲೇ ತಾವು ಸೆರೆಮನೆವಾಸಕ್ಕೆ ಸಿದ್ಧರಾಗುವವರೆಗೆ ಭಾರತ ಸ್ವಾತಂತ್ರ್ಯ ಪಡೆಯಲು ಸಾಧ್ಯವಿಲ್ಲ. ಹಾಗೂ ಲಕ್ಷಾಂತರ ಜನ ಸಿದ್ಧರಾಗದೇ ಇದ್ದಲ್ಲಿ, ಭಾರತ ಸ್ವಾತಂತ್ರ ಪಡೆಯುವ ಮುಂಚೆ ಸಾವಿರಾರು ಜನರು ನಿಜಕ್ಕೂ ಜೈಲಿಗೆ ಹೋಗಲೇ ಬೇಕಾಗುತ್ತದೆ. ಅಸಹಕಾರ ಚಳವಳಿಯು ದೇಶದ ನಿಜವಾದ ಶೌರ್ಯವನ್ನು ಪ್ರೇರೇಪಿಸುವ ಉದ್ದೇಶವನ್ನು ಹೊಂದಿದೆ. ನಾವು ಸ್ವತಂತ್ರರಾಗಲು ಸಾವಿಗೂ ಹೆದರದಂತೆ ಸಂಕಷ್ಟಗಳನ್ನು ಎದುರಿಸಲು ಸಿದ್ಧರಾಗಬೇಕು. ಯಾರು ತನ್ನನ್ನು ತಾನು ಬಚಾವುಮಾಡಿ ಕೊಳ್ಳುತ್ತಾನೋ, ಅವಳು/ನು ನಾಶವಾಗುತ್ತಾಳೆ/ನೆ” ಎಂದು ಬರೆದಿದ್ದರು.

ನಾಲ್ಕು: ಸಾವರ್ಕರ್ ಅವರ ಕ್ಷಮಾದಾನ ಅರ್ಜಿಗಳನ್ನು ಉಲ್ಲೇಖಿಸುವುದನ್ನು ಮರೆಯುವುದು ಸಾವರ್ಕರ್ ಭಕ್ತರಿಗೆ ಅಂಟಿಕೊಂಡಿರುವ ರೂಢಿಯಾಗಿದೆ. ಆ ಅರ್ಜಿಗಳನ್ನು ಬರೆದಿದ್ದರು ಎಂದು ಈಗ ರಾಜನಾಥ್ ಸಿಂಗ್ ಅವರು ಒಪ್ಪಿಕೊಂಡ ಮೇಲೆ, ಈ ಅಂಶವನ್ನು ಸೇರಿಸುವುದು ಅಗತ್ಯವಾಗಿದೆ; 1857ರಿಂದ ನೂರಾರು ’ರೆಬೆಲ್’ಗಳನ್ನು ಅಂಡಮಾನ್‌ನ ದ್ವೀಪಗಳಿಗೆ ಕಳುಹಿಸಲಾಗಿತ್ತು. ದಿ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಎಂಬ ಸಂಸ್ಥೆಯು ಹುತಾತ್ಮರಾಗುವ ಆಯ್ಕೆಯನ್ನು ಒಪ್ಪಿಕೊಂಡ ಹಾಗೂ ಅಂಡಮಾನ್‌ಗೆ ಕಳುಹಿಸಿದ ಸಮಗ್ರವಾದ ಪಟ್ಟಿಯನ್ನು ರಚಿಸಿದೆ. ಹಳೆಯ ಬಾಂಬೆ ಪ್ರೆಸಿಡೆನ್ಸಿಯಿಂದಲೇ 400ಕ್ಕೂ ಹೆಚ್ಚು ತರುಣರನ್ನು ಅಂಡಮಾನ್‌ಗೆ ವರ್ಗಾಯಿಸಲಾಗಿತ್ತು, ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು ಅಥವಾ ನೇಣಿಗೇರಿಸಲಾಗಿತ್ತು. ಅವರು ಅನೇಕ ಜಾತಿ ಸಮುದಾಯಗಳಿಂದ ಬಂದವರಾಗಿದ್ದರು. ಅದರಲ್ಲಿ ಹಿಂದೂಗಳಿದ್ದಂತೆಯೆ, ಅನೇಕ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರೂ ಇದ್ದರು. ಅವರೆಲ್ಲರೂ ನಿಜ ಅರ್ಥದಲ್ಲಿ ವೀರರಾಗಿದ್ದರೂ ಅವರನ್ನು ’ವೀರ್’ ಎಂದು ಕರೆದದ್ದು ತುಂಬಾ ವಿರಳ.

ಐದು: ಇನ್ನೊಂದು ಹೋಲಿಕೆಯನ್ನು ನೋಡುವ. ನೇಣುಗಂಬವನ್ನು ಎದುರಿಸುವಾಗ ಭಗತ್ ಸಿಂಗ್ ತೋರಿಸಿದ ಗಟ್ಟಿಯಾದ ಪ್ರತಿರೋಧದ ಜತೆಗೆ, ಸಾವರ್ಕರ್ ಪದೇ ಪದೇ ಸಲ್ಲಿಸಿದ ಕ್ಷಮಾದಾನ ಅರ್ಜಿಗಳನ್ನು ನೋಡಿದಾಗ, ಆರ್‌ಎಸ್‌ಎಸ್ ಬಿಂಬಿಸಲು ಯತ್ನಿಸುವ ಸಾವರ್ಕರ್‌ನ ವ್ಯಕ್ತಿತ್ವದ ಮೇಲೆ ಸಂಶಯ ಹುಟ್ಟಿಸುತ್ತವೆ. ಭಗತ್ ಸಿಂಗ್ ’ನಮ್ಮನ್ನು ಗಲ್ಲಿಗೇರಿಸುವ ಬದಲಿಗೆ ಗುಂಡಿಕ್ಕಿ ಕೊಲ್ಲಿ’ ಎಂಬ ಬೇಡಿಕೆ ಇಟ್ಟಿದ್ದ, ಅದಕ್ಕೆ ತದ್ವಿರುದ್ಧವಾಗಿ ಸಾವರ್ಕರ್ ಒಂದು ವೇಳೆ ಸರಕಾರ ತನ್ನ ಒಳ್ಳೆಯತನದಲ್ಲಿ ಹಾಗೂ ಕರುಣೆಯಲ್ಲಿ ನನ್ನನ್ನು ಬಿಡುಗಡೆ ಮಾಡಿದ್ದಲ್ಲಿ, ನಾನು ಸಾಂವಿಧಾನಿಕ ಪ್ರಗತಿಯ ಅತ್ಯಂತ ನಿಷ್ಠಾವಂತ ಪ್ರತಿಪಾದಕನಾಗಿರದೇ ಇರಲು ಸಾಧ್ಯವಿಲ್ಲ ಹಾಗೂ ಆ ಪ್ರಗತಿಯ ಮುಖ್ಯ ಷರತ್ತಾದ ಇಂಗ್ಲಿಷ್ ಸರಕಾರಕ್ಕೆ ನನ್ನ ನಿಯತ್ತನ್ನು ಸಲ್ಲಿಸುತ್ತೇನೆ.., ಇದಲ್ಲದೇ ಸಾಂವಿಧಾನಿಕ ನಿಲುವಿಗೆ ನನ್ನ ಬದಲಾವಣೆಯು ಭಾರತದಲ್ಲಿಯ ಮತ್ತು ವಿದೇಶದಲ್ಲಿರುವ ದಾರಿತಪ್ಪಿದ ಯುವಕರನ್ನು ಸರಿದಾರಿಗೆ ಮರಳಿ ಬರುವಂತೆ ಮಾಡುತ್ತದೆ, ಆ ಯುವಕರು ಒಂದು ಸಮಯದಲ್ಲಿ ನನ್ನನ್ನು ತಮ್ಮ ಮಾರ್ಗದರ್ಶಕನಿಂದಾಗಿ ನೋಡುತ್ತಿದ್ದರು. ನಾನು ಸರಕಾರಕ್ಕೆ ಅವರು ಇಚ್ಛಿಸಿದಂತೆ ಯಾವುದೇ ಸಾಮರ್ಥ್ಯದಲ್ಲಿ ಸೇವೆ ಸಲ್ಲಿಸಲು ಸಿದ್ಧನಾಗಿದ್ದೇನೆ, ನನ್ನ ಬದಲಾವಣೆಯು ಆತ್ಮಸಾಕ್ಷಿಯುಳ್ಳ ಬದಲಾವಣೆಯಾಗಿದ್ದು ಹಾಗಾಗಿ ನನ್ನ ಭವಿಷ್ಯದ ವರ್ತನೆಯೂ ಹಾಗೆಯೇ ಇರುತ್ತದೆ ಎಂದು ಭರವಸೆ ನೀಡುತ್ತೇನೆ. ಎಂದು ಬರೆದಿದ್ದರು. ವಸಾಹತುಶಾಹಿ ಆಡಳಿತದ ಕ್ರಿಶ್ಚಿಯನ್ ಧರ್ಮಶ್ರದ್ಧೆಗೆ ತಟ್ಟಲು, ಸಾವರ್ಕರ್ ಬೈಬಲ್‌ನಲ್ಲಿಯ ಉಡಾಳ ಮಗನ ಕಥೆಯನ್ನು ಉಲ್ಲೇಖಿಸುತ್ತಾರೆ, “ಒಬ್ಬ ಪರಾಕ್ರಮಿಗೆ ಮಾತ್ರ ಕರುಣಾಮಯಿ ಆಗಲು ಸಾಧ್ಯ ಹಾಗೂ ಆ ಒಬ್ಬ ಉಡಾಳ ಮಗನಿಗೆ ತಂದೆತಾಯಿಯ ಸ್ಥಾನದಲ್ಲಿರುವ ಸರಕಾರದ ಬಾಗಿಲುಗಳನ್ನು ಬಿಟ್ಟು ಬೇರೆ ಯಾವ ಕಡೆ ಮರಳಲು ಸಾಧ್ಯ?”

ಆರು: ಸಾವರ್ಕರ್‌ಅನ್ನು 1921ರಲ್ಲಿ ಅಂಡಮಾನ್ ದ್ವೀಪದಿಂದ ಹಿಂತಿರುಗಿ ಕರೆತರಲಾಯಿತು, ಅದೇ ವರ್ಷ ಕಾಂಗ್ರೆಸ್ಸಿನ ಸಂಪೂರ್ಣ ಹಿಡಿತವನ್ನು ಗಾಂಧಿಗೆ ನೀಡಲಾಯಿತು. ಅದಕ್ಕೆ ಒಂದು ವರ್ಷ ಮುನ್ನವೇ ಬಿ ಆರ್ ಅಂಬೇಡ್ಕರ್ ಅವರು ತಮ್ಮ ಪತ್ರಿಕೆ ಮೂಕನಾಯಕ್ ಶುರುಮಾಡಿದ್ದರು. ಮುಂದಿನ ಮೂರು ದಶಕಗಳಲ್ಲಿ ಈ ಮೂರೂ ಬ್ಯಾರಿಸ್ಟರ್‌ಗಳು ಭಾರತಕ್ಕೆ ಮೂರು ವಿಶಿಷ್ಟ ಕಥನಗಳನ್ನು ಸೃಷ್ಟಿಸಿದರು. ಗಾಂಧಿಯು ಗ್ರಾಮಸ್ವರಾಜ್, ಕೋಮು ಸೌಹಾರ್ದ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದರೆ, ಅಂಬೇಡ್ಕರ್ ಅವರು ಸಮಾನತೆ ಮತ್ತು ನ್ಯಾಯಗಳು ಆಧುನಿಕ ಸಮಾಜ ಬೆನ್ನೆಲುಬಾಗಿ ಇರಬೇಕೆಂದು ಪ್ರತಿಪಾದಿಸಿ, ಅವುಗಳನ್ನು ಸಂವಿಧಾನದ ಹೃದಯದಲ್ಲಿರಿಸಿದರು. ಸಾವರ್ಕರ್ ಹಿಂದೂ ರಾಷ್ಟ್ರೀಯತೆಯ ಪರಿಕಲ್ಪನೆಗಳನ್ನು ಮುನ್ನೆಲೆಗೆ ತಂದರು. ಈ ಮೂರೂ ಸಂಕಥನಗಳು ಭಾರತದ ರಾಜಕೀಯ ಸಂವಾದವನ್ನು ಆಗಿನಿಂದ ಆವರಿಸಿಕೊಂಡು ಬಂದಿವೆ. ಭಾರತದ ಇತಿಹಾಸದ ಕಳೆದ ಅರ್ಧ ಶತಮಾನದ ಸಂತೋಷದ ಮತ್ತು ದುರಂತದ ಘಟನೆಗಳು ಇವುಗಳಿಂದಲೇ ಹುಟ್ಟಿಕೊಂಡಿವೆ. ಹಿಂದು ರಾಷ್ಟ್ರದ ಪ್ರತಿಪಾದಕರಿಗೆ ಅಂಬೇಡ್ಕರ್ ಮತ್ತು ಗಾಂಧಿಯ ಆದರ್ಶಗಳಿಗೆ ಯಾವುದೇ ಗೌರವ ಇಲ್ಲ. ಅದರ ಬದಲಿಗೆ ಹಿಂದು ರಾಷ್ಟ್ರದ ಈಗಿನ ಸೈದ್ಧಾಂತಿಕ ಬ್ರ್ಯಾಂಡ್‌ಗೆ ಗಾಂಧಿ ಮತ್ತು ಅಂಬೇಡ್ಕರ್ ಅವರುಗಳ ಪರಿಕಲ್ಪನೆಗಳ ನಿರಾಕರಣೆಯೇ ಸರಕು ಒದಗಿಸುತ್ತವೆ. ಇತಿಹಾಸವನ್ನು ತಿರುಚುವುದು ಅವರಿಗೆ ಅನಿವಾರ್ಯ.

ಇತಿಹಾಸದಲ್ಲಿ ಒಂದು ಹೊಸ ತಿರುವನ್ನು ಈ ಸಚಿವರು ಈಗ ಪಡೆದುಕೊಂಡಿದ್ದರೆ, ಅದು ಸದ್ಯದ ಕಿರೀಟದ ಶುದ್ಧತೆಯ ನಷ್ಟವನ್ನು ನಿಖರವಾಗಿ ಅಳೆಯಲು ಮಾಡಿದ್ದೇ? ಹಾಗೂ ಹಾಗೆ ಮಾಡಿ ಒಂದು ಹೊಸ ಹೊಳಪನ್ನು ನೀಡುವ ಪ್ರಯತ್ನವೇ? ಒಂದು ಶತಮಾನದ ಪುರಾತತ್ವಶಾಸ್ತ್ರ ಮತ್ತು ಇತಿಹಾಸದ ತಿರುಚುವಿಕೆಯು ಎಲ್ಲರ ಮುಖಕ್ಕೂ ರಾಚುತ್ತಿದೆ ಹಾಗೂ ಅದನ್ನು ಒಬ್ಬ ರಕ್ಷಣಾ ಸಚಿವನಿಂದಲೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ.

(ಕನ್ನಡಕ್ಕೆ): ರಾಜಶೇಖರ್ ಅಕ್ಕಿ

ಪ್ರೊ. ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.


ಇದನ್ನೂ ಓದಿ: ಲಖೀಂಪುರ್ ರೈತ ಹತ್ಯೆ; ಅಧಿಕಾರದ ಪರವಾಗಿ ನಿಂತ ಮಾಧ್ಯಮಗಳ ದುರುಳತನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...