Homeಕರ್ನಾಟಕಇರುವ ಮನೆಗಳ ಒಡೆದು, ಲೇಔಟ್ ಮಾಡಿ ಇನ್ನೊಬ್ಬರಿಗೆ ಸೈಟ್‌ ಹಂಚುವುದು ಯಾವ ನ್ಯಾಯ?: ಬಿಡಿಎ ವಿರುದ್ದ...

ಇರುವ ಮನೆಗಳ ಒಡೆದು, ಲೇಔಟ್ ಮಾಡಿ ಇನ್ನೊಬ್ಬರಿಗೆ ಸೈಟ್‌ ಹಂಚುವುದು ಯಾವ ನ್ಯಾಯ?: ಬಿಡಿಎ ವಿರುದ್ದ ಆಕ್ರೋಶ

ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಿದ ದಾಸರಹಳ್ಳಿ ಜೆಡಿಎಸ್‌ ಶಾಸಕ ಸೇರಿದಂತೆ ಹೋರಾಟ ಸಮಿತಿಯ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ

- Advertisement -
- Advertisement -

‘ಶಿವರಾಮ ಕಾರಂತ ಬಡಾವಣೆ’ ಅಭಿವೃದ್ದಿಗಾಗಿ ಸೋಮಶೆಟ್ಟಿಹಳ್ಳಿ ಹಾಗೂ ಗಾಣಿಗರಹಳ್ಳಿಯ ಸುಮಾರು 142 ಮನೆ ಮತ್ತು ಕಟ್ಟಡಗಳನ್ನು ಕೆಡವಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಧಸಿದೆ. ಇದಕ್ಕಾಗಿ ಸುಮಾರು ಹತ್ತಕ್ಕೂ ಹೆಚ್ಚು ಹಿಟಾಚಿಯೊಂದಿಗೆ ತೆರಳಿದ್ದ ಅಧಿಕಾರಿಗಳ ವಿರುದ್ದ ದಾಸರಹಳ್ಳಿಯ ಜೆಡಿಎಸ್‌ ಶಾಸಕ ಸೇರಿದಂತೆ ಹೋರಾಟ ಸಮಿತಿಯ ಮುಖಂಡರು ಸೋಮಶೆಟ್ಟಿಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದ್ದು, ಪೊಲೀಸರು ಅವರನ್ನು ಬಂಧಿಸಿ, ಬಿಡುಗಡೆ ಮಾಡಿರುವ ಘಟನೆ ಸೋಮವಾರ ನಡೆದಿದೆ. ಇದಾಗಿಯು ಪ್ರಾಧಿಕಾರವು ಸುಮಾರು ಆರು ಮನೆಗಳನ್ನು ಒಡೆದಿದೆ ಎಂದು ಹೋರಾಟಗಾರರು ಹೇಳಿದ್ದಾರೆ.

ಬೆಂಗಳೂರು ಅಭಿವೃದ್ದಿಯ ಹೆಸರು ಹೇಳಿ, ರಾಮಗೊಂಡನ ಹಳ್ಳಿಯ ಸುತ್ತಲಿನ 17 ಹಳ್ಳಿಗಳಲ್ಲಿ ಬಿಡಿಎ ‘ಶಿವರಾಮ ಕಾರಂತ ಬಡಾವಣೆ’ ಎಂಬ ವಸತಿ ಸೌಕರ್ಯವನ್ನು ನಿರ್ಮಿಸಲು ಹೊರಟಿದೆ. ಇಂದು ಸೋಮಶೆಟ್ಟಿಹಳ್ಳಿ ಹಾಗೂ ಗಾಣಿಗರಹಳ್ಳಿಯ ಒಟ್ಟು 142 ಕಟ್ಟಡಗಳು 2018ರ ಬಳಿಕ ನಿರ್ಮಾಣವಾಗಿವೆ ಎಂದು ಅದನ್ನು ಒಡೆಯಲು ಮುಂದಾಗಿದೆ. ಆದರೆ ಎಲ್ಲಾ ಮನೆ ಹಾಗೂ ಕಟ್ಟಡಗಳನ್ನು ಎನ್‌ಒಸಿ ಪಡೆದೇ ನಿರ್ಮಾಣ ಮಾಡಲಾಗಿದೆ ಎಂದು ಹೋರಾಟಗಾರರು ಹೇಳಿದ್ದಾರೆ.

ಇದನ್ನೂ ಓದಿ: ಶಿವರಾಮ ಕಾರಂತ್ ಬಡಾವಣೆ ಎಂಬ ‘ಅಭಿವೃದ್ಧಿ’ ಯೋಜನೆ; ದಲಿತರು-ಬಡಬಗ್ಗರ ಮೇಲೆ ಪ್ರಹಾರ

ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ದಲಿತ ಸಂಘರ್ಷ ಸಮಿತಿ ಮುಖಂಡ ಎಂ. ರಮೇಶ್‌, “ಬಿಡಿಎ ಅಧಿಕಾರಿಗಳು ಯಾವುದೆ ಮುನ್ಸೂಚನೆ ನೀಡದೆ ಸೋಮಶೆಟ್ಟಿಹಳ್ಳಿಯ ಮನೆಗಳನ್ನು ಒಡೆದಿದ್ದಾರೆ. ಬಿಡಿಎ ಅಧಿಕಾರಿಗಳು ಮಾತೆತ್ತಿದರೆ ಸುಪ್ರೀಂಕೋರ್ಟ್ ಆದೇಶ ಎಂದು ಹೇಳುತ್ತಿದ್ದಾರೆ. ಆದರೆ ಸುಪ್ರೀಂಕೋರ್ಟ್ ಕಟ್ಟಡಗಳನ್ನು ಕೆಡವುವ ಬಗ್ಗೆ ಎಲ್ಲೂ ಹೇಳಿಲ್ಲ. ಇಲ್ಲಿ ಏನು ನಡೀತಿದೆ ಎಂದು ಕೂಡಾ ನಮಗೆ ಅರ್ಥವಾಗುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಇಲ್ಲಿರುವಂತಹ ಮನೆಗಳನ್ನು ಒಡೆದು, ಲೇಔಟ್ ಮಾಡಿ ಇನ್ನೊಬ್ಬರಿಗೆ ಸೈಟ್‌ ಕೊಡುವಂತಹದ್ದು ಯಾವ ನ್ಯಾಯ. ಇದು ನಮ್ಮ ದೇಶದ ನ್ಯಾಯಕ್ಕೆ ವಿರುದ್ದವಾದುದು. ಇದನ್ನು ನಾವು ಖಂಡಿಸುತ್ತೇವೆ. ನಾವು ಪ್ರತಿಭಟನೆ ನಡೆಸಲು ಮುಂದಾದಾಗ ನಮ್ಮನ್ನು ಬಂಧಿಸಲಾಗಿದೆ. ಇಂದು ಎಂಟು ಮನೆಗಳನ್ನು ಒಡೆಯಲಿದ್ದಾರೆ ಎಂಬ ಮಾಹಿತಿಯಿದೆ” ಎಂದು ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ರೋಶ

ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಾ ಆಕ್ರೊಶ ವ್ಯಕ್ತಪಡಿಸಿದ್ದು ತಮ್ಮ ಪಕ್ಷದ ಶಾಸಕನ ಬಂಧನವನ್ನು ಖಂಡಿಸಿದ್ದಾರೆ. “ಈ ಬಡಾವಣೆಯ ಜನರ ಸಂಕಷ್ಟಕ್ಕೆ ಸಂಬಂಧಿಸಿ ಹೋರಾಟಗಾರರು, ಸ್ಥಳೀಯ ನಿವಾಸಿಗಳನ್ನು ಒಳಗೊಂಡಂತೆ ಒಂದು ಸಭೆ ಕರೆಯಿರಿ, ನಾನೂ ಬರುತ್ತೇನೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ. ಆದರೆ, ಸಭೆಗೆ ಕಾಲಾವಕಾಶವವನ್ನೇ ನೀಡದೇ ಈಗ ಏಕಾಎಕಿ ಮನೆಗಳನ್ನು ಒಡೆಸುತ್ತಿರುವುದು ಸರಿಯಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಶಿವರಾಮ ಕಾರಂತ ಬಡಾವಣೆ’ ವಿವಾದ – ಸಮಸ್ಯೆ ಪರಿಹರಿಸುವಂತೆ 17 ಹಳ್ಳಿಗಳಿಂದ ಬೃಹತ್ ಪ್ರತಿಭಟನೆ

“ಜನ ಸಾಲ ಮಾಡಿ ಮನೆಗಳನ್ನು ಕಟ್ಟಿದ್ದಾರೆ. ಈ ಬಡಾವಣೆ ನಿರ್ಮಾಣ ಆದಾಗ ಆರಂಭಿಕ ಹಂತದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಸಿ ನೋಟಿಫಿಕೇಶ್‌ ಮಾಡಿ, ಆಮೇಲೆ ಕೆಲ ಕಡೆ ಡಿನೋಟಿಫಿಕೇಷನ್‌ ಮಾಡಿ ಎನ್‌ಒಸಿಗಳನ್ನೂ ಕೊಟ್ಟು ಬಿಡಿಎ ಆಯುಕ್ತರು, ಅಧಿಕಾರಿಗಳು ಹಣ ಲೂಟಿ ಹೊಡೆಯುವ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಗಳ ನಿರ್ದೇಶನದಂತೆ ಇದೆಲ್ಲವನ್ನೂ ಅಧಿಕಾರಿಗಳು ಮಾಡಿದ್ದಾರೆ” ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

 

“ನ್ಯಾಯಾಲಯದಲ್ಲಿ ಸರಿಯಾಗಿ ವಾದ ಮಂಡನೆ ಮಾಡದೇ, ಸಮರ್ಪಕ ಮಾಹಿತಿಯನ್ನೂ ನೀಡದೇ ಅಧಿಕಾರಿಗಳು ಮತ್ತು ಸರಕಾರ ಅಮಾಯಕರ ಜೀವನದ ಜತೆ ಚೆಲ್ಲಾಟ ಆಡಿದ್ದಾರೆ. ಬಿಡಿಎಯ ಈಗಿನ ಅಧ್ಯಕ್ಷ ಎಸ್.‌ಆರ್.‌ವಿಶ್ವನಾಥ್‌ ಅವರೇ ಈ ಜನರ ಪರ ಹೋರಾಟ ಮಾಡಿದ್ದರು. ಈಗ ನೋಡಿದರೆ ಅವರೇ ಮನೆಗಳನ್ನು ನೆಲಸಮ ಮಾಡಿಸುತ್ತಿದ್ದಾರೆ.

ನಾನು ಹದಿನಾಲ್ಕು ತಿಂಗಳು ಅಧಿಕಾರದಲ್ಲಿದ್ದಾಗ ಈ ಮನೆಗಳನ್ನು ಒಡೆಯಲು ಬಿಟ್ಟಿರಲಿಲ್ಲ, ಈ ಸರಕಾರ ನಿಜಕ್ಕೂ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಇವರೇ ಒಂದು ಕಡೆ ದುಡ್ಡು ಹೊಡೆಯೋದು. ಇನ್ನೊಂದು ಕಡೆ ಇವರೇ ಕಟ್ಟಡ ಒಡೆಸೋದು. ಜನರನ್ನು ಈಗ ಬೀದಿಗೆ ತಂದು ನಿಲ್ಲಿಸಿದ್ದಾರೆ. ಮುಖ್ಯಮಂತ್ರಿಗೆ ಜವಾಬ್ದಾರಿ ಎನ್ನುವುದು ಇದ್ದಿದ್ದರೆ ಕೂತು ಚರ್ಚೆ ಮಾಡಿ ಕಾನೂನು ರೀತಿಯಲ್ಲಿ ಆ ಜನರಿಗೆ ರಕ್ಷಣೆ ನೀಡಬೇಕಾಗಿತ್ತು” ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಬಡಾವಣೆ ನಿರ್ಮಾಣವಾಗಲಿರುವ 17 ಹಳ್ಳಿಗಳ ನಿವಾಸಿಗಳು, ರೈತರು ಬಡಾವಣೆ ನಿರ್ಮಾಣದ ವಿರುದ್ದ ನಿರಂತವಾಗಿ ಪ್ರತಿಭಟನೆ ನಡೆಸುತ್ತಾ ಬರುತ್ತಿದ್ದಾರೆ. ಈ ಹಿಂದೆ ಇವರ ಪರವಾಗಿದ್ದ ಸ್ಥಳೀಯ ಬಿಜೆಪಿ ಶಾಸಕ ವಿಶ್ವನಾಥ್ ಇದೀಗ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಆದರೆ ಈಗ ಅವರು ಜನರ ವಿರುದ್ದವಾಗಿ ನಿಂತಿದ್ದು ‘ಶಿವರಾಮ ಕಾರಂತ ಬಡಾವಣೆ’ ನಿರ್ಮಾಣದ ಪರವಾಗಿದ್ದಾರೆ.

ಇದನ್ನೂ ಓದಿ: ರಾಮಗೊಂಡನಹಳ್ಳಿ: ತಮ್ಮ ನೆಲವನ್ನು ಕಸಿಯುತ್ತಿರುವ ಸರ್ಕಾರದ ವಿರುದ್ಧ ಪ್ರತಿಭಟಿಸಿದ ದನಗಳು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Planned layouts ಮಾಡದಿದ್ದರೆ ಅಡ್ಡಾದಿಡ್ಡಿ ಬೆಳವಣಿಗೆ ಆಗುತ್ರದೆ.
    ಸರಿಯಾಗಿ ದಾರಿ,ಕರೆಂಟ್ ಕಂಬಹಾಕಲು ತೊಡಕು.
    ಇನ್ನು ಎಲ್ಲರಿಗೂ ಬೇಕಾದ ಆಟದಬಯಲು,ಪಾರ್ಕ್ ,ಅಗಲದಾರಿಗಳು ಮುಂದೆ ಅಲ್ಲಿ ಉಂಟಾಗುವ ತಗಾದೆಗಳಿಗೆ ಎಡೆಕೊಡುವುದಿಲ್ಲ
    ೩೦ ವರುಶಗಳ ಹಿಂದೆ ನೆಲದೊಡೆಯರು ಈ ಬಗೆಯ ಬಡಾವಣೆಮಾಡಲು ಎದುರು ಹೇಳುತ್ತಿರಲ್ಲಿಲ್ಲ.
    ಈಗ ಬೆಳೆಬೆಳೆಯಲು ಕೊಟ್ಟಿದ್ದ ಹೊಲಗಳನ್ನು ರಿಯಲ್ ಎಸ್ಟೇಟ್ ಗೆ ಬಳಸಿ ಹೆಚ್ಚು ಹಣಗಳಿಸುವ ಗೀಳಿಗೆ ಬಿದ್ದಿದ್ದಾರೆ.
    Planned growthನಿಂದಾಗುವ ಒಳಿತುಗಳ ಬಗೆಗೆ ಮೀಡಿಯಾಗಳು ಮಂದಿಗೆ ತಿಳಿವಳಿಕೆ ನೀಡಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಮಾರಾಟವಾಗಲು ನಿರಾಕರಿಸಿದ್ದಕ್ಕೆ ಜೈಲಿನಲ್ಲಿ ಹೊಡೆದು, ಚಿತ್ರಹಿಂಸೆ ನೀಡಿದ್ದರು: ಟಿಎಂಸಿ ನಾಯಕ ಸಾಕೇತ್ ಗೋಖಲೆ

0
ಬಿಜೆಪಿಗೆ ಸೇರಲು ಅಥವಾ ಮಾರಾಟವಾಗಲು ನಿರಾಕರಿಸಿದ್ದಕ್ಕಾಗಿ ಜೈಲಿನಲ್ಲಿ ನನಗೆ ಹೊಡೆದು ಚಿತ್ರಹಿಂಸೆ ನೀಡಲಾಗಿತ್ತು ಎಂದು ರಾಜ್ಯಸಭಾ ಸದಸ್ಯ, ಟಿಎಂಸಿ ನಾಯಕ ಸಾಕೇತ್ ಗೋಖಲೆ ಹೇಳಿದ್ದಾರೆ. ದಿ ವೈರ್‌ ಪ್ರಕಟಿಸಿದ ಹಿರಿಯ ವಕೀಲ ಕಪಿಲ್ ಸಿಬಲ್...