Homeಮುಖಪುಟಫೇಸ್‌ಬುಕ್ ಎಲ್ಲರಿಗೂ ಗೊತ್ತಿರುವ ಕಳ್ಳ

ಫೇಸ್‌ಬುಕ್ ಎಲ್ಲರಿಗೂ ಗೊತ್ತಿರುವ ಕಳ್ಳ

- Advertisement -
- Advertisement -

ನಾನು ಈ ಲೇಖನ ಬರೆಯಲು ಆರಂಭಿಸುವ ಹೊತ್ತಿಗೆ ಅಮೆರಿಕದ ಹದಿನೇಳು ಪತ್ರಿಕೆಗಳು ಫೇಸ್‌ಬುಕ್ ವಿರುದ್ಧ ರಣಕಹಳೆ ಊದಿವೆ. ಇತ್ತೀಚೆಗೆ ಫೇಸ್‌ಬುಕ್ ಮಾಜಿ ಉದ್ಯೋಗಿ ಫ್ರಾನ್ಸೆಸ್ ಹಾಗೆನ್ ಫೇಸ್‌ಬುಕ್ ಸುಳ್ಳು ಮತ್ತು ದ್ವೇಷ ಹರಡುವ ನಿಲುವನ್ನು ಬಹಿರಂಗಗೊಳಿಸಿ ಅದನ್ನು ಬೆತ್ತಲುಮಾಡಿಬಿಟ್ಟರು. ಈ ಮಾಹಿತಿಯನ್ನು ಆಧರಿಸಿರುವ ಅಮೆರಿಕದ 17 ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳು ’ದಿ ಫೇಸ್‌ಬುಕ್ ಪೇಪರ್ಸ್ ಪ್ರಾಜೆಕ್ಟ್’ ಹೆಸರಿನ ಸುದ್ದಿ ಸರಣಿಯನ್ನು ಪ್ರಕಟಿಸಲಾರಂಭಿಸಿವೆ.

ಫೇಸ್‌ಬುಕ್ ಕಳೆದ ಏಳು ವರ್ಷಗಳಲ್ಲಿ ಪದೇಪದೇ ಎಡವಿಬೀಳುತ್ತಲೇ ಇದೆ. ಅದು ಸಿಕ್ಕಬಿದ್ದ ಕಳ್ಳನಂತಾಗಿದೆ. ತನ್ನ ಬಳಕೆದಾರರ ಮಾಹಿತಿಯನ್ನು ಹಲವು ಉದ್ದೇಶಗಳಿಗೆ ಬಳಸಿ, ಬಳಕೆದಾರನ ವಿಶ್ವಾಸವನ್ನು ಕಳೆದುಕೊಂಡಿರುವುದು ಒಂದೆಡೆಯಾದರೆ ಅದಕ್ಕಿಂತ ಅತ್ಯಂತ ಘೋರ ಉದ್ದೇಶಗಳಿಗೆ ಫೇಸ್‌ಬುಕ್ ಅಸ್ತ್ರದಂತೆ ಬಳಕೆಯಾಗಿಗಿರುವುದರಿಂದ ಇಂದು ಇಡೀ ಜಗತ್ತೇ ಅದರ ದುಷ್ಪರಿಣಾಮಗಳನ್ನು ಎದುರಿಸುತ್ತಿದೆ.

ಫೇಸ್‌ಬುಕ್ ಹುಟ್ಟಕೊಂಡಿದ್ದೇ ಸಮಾನ ಆಸಕ್ತರನ್ನು, ದೂರದೂರದ ಸ್ನೇಹಿತರನ್ನು ಬೆಸೆಯುವ ಉದ್ದೇಶದಿಂದ. ಆದರೆ ಅದಕ್ಕೊಂದು ನೈತಿಕತೆ ಎಚ್ಚರ ಆರಂಭದಿಂದಲೂ ಇರಲಿಲ್ಲ. ಇನ್ನೊಬ್ಬರ ಶ್ರಮ, ಆಲೋಚನೆಯನ್ನು ಕದ್ದು ರೂಪಿಸಿದ್ದು ಎಂಬ ಆರೋಪ ಅದಕ್ಕಿದೆ. ಹೀಗೆ ಹುಟ್ಟಿದ ಫೇಸ್‌ಬುಕ್ ಇಂದು ಜನಾಂಗೀಯ ದ್ವೇಷ ಹರಡುವ, ಕೋಮು ಧ್ರುವೀಕರಣ ಪೋಷಿಸುವ ಉದ್ದೇಶಗಳಿಗೆ ಮುಕ್ತವಾಗಿ ಬಳಕೆಯಾಗಿದ್ದು, ಬೆಸೆಯುವ ಬದಲು ಒಡೆಯುವ ಕೆಲಸವನ್ನು ಮಾಡುತ್ತಿದೆ.

ಹದಿನೇಳು ವರ್ಷಗಳಲ್ಲಿ ಪರ್ಯಾಯ ಜಗತ್ತನ್ನೇ ಸೃಷ್ಟಿಸಿಬಲ್ಲಷ್ಟು ಬಳಕೆದಾರರನ್ನು ಹೊಂದಿ, ದಾಖಲೆ ನಿರ್ಮಿಸಿದ ಈ ತಾಣ ಕಳೆದ ಒಂದು ದಶಕದಲ್ಲಿ ಖಾಸಗಿತನ ಉಲ್ಲಂಘನೆ, ರಾಜಕೀಯ ಉದ್ದೇಶಗಳಲ್ಲಿ ಪಾಲುದಾರನಾಗುವ ಮೂಲಕ ಶಾಂತಿ, ಸಹಬಾಳ್ವೆ, ಸಾಂವಿಧಾನಿಕ ಮೌಲ್ಯಗಳನ್ನು ಗಾಳಿಗೆ ತೂರಿದ್ದನ್ನು ನೋಡಿದ್ದೇವೆ.

ಮಾರಿಯಾ ರೆಸ್ಸಾ

ಕ್ಯಾಂಬ್ರಿಡ್ಜ್ ಅನಾಲಿಟಿಕಾ ಬಹುಶಃ ಫೇಸ್‌ಬುಕ್ ವರ್ಚಸ್ಸಿಗೆ, ವಿಶ್ವಾಸಾರ್ಹತೆಗೆ ಬಿದ್ದ ಮೊದಲ ಬಲವಾದ ಪೆಟ್ಟು. ಡೊನಾಲ್ಡ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಜನಾಭಿಪ್ರಾಯ ರೂಪಿಸಲು ಫೇಸ್‌ಬುಕ್ ಅನುಸರಿಸಿದ ಎಲ್ಲ ಕಳ್ಳಾಟಗಳು ಬಯಲಾದವು. ಈ ಪ್ರಕರಣಗಳು ಫೇಸ್‌ಬುಕ್‌ನ ದುರುದ್ದೇಶಗಳನ್ನು ಮೊದಲಿಗೆ ಬಯಲು ಮಾಡಿದವು.

ಅಮೆರಿಕದ ಸರ್ವಿಲೆನ್ಸ್ ಬಗ್ಗೆ ಎಚ್ಚರಿಸಿದ ಎಡ್ವರ್ಡ್ ಸ್ನೋಡೆನ್‌ನಿಂದ ಹಿಡಿದು, ಫೇಸ್‌ಬುಕ್ ತಮ್ಮ ತಾತ್ವಿಕ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣಕ್ಕೆ ಹೊರಬಿದ್ದ ಮಾಜಿ ಉದ್ಯೋಗಿಗಳವರೆಗೆ ಹಲವರು ಫೇಸ್‌ಬುಕ್‌ನ ದುರುದ್ದೇಶಗಳನ್ನು ಬಹಿರಂಗಪಡಿಸಲು ಪ್ರಾರಂಭಿಸಿದರು. ಸ್ಯಾಂಡಿ ಪ್ಯಾರಾಕಿಲಾಸ್, ಶಾನ್ ಪಾರ್ಕರ್, ಚಮಾತ್ ಪಾಲಿಹಪಿತಿಯಾ, ಜಸ್ಟಿನ್ ರೋಸೆನ್‌ಸ್ಟೀನ್, ಟಿಮ್ ಕೆಂಡಾಲ್ ಅಂತಹ ಕೆಲವರು.

ಬಳಕೆದಾರರ ದೈನಂದಿನ ಪ್ರತಿ ಚಟುವಟಿಕೆಯನ್ನು ಕದ್ದಾಲಿಸುವುದು, ದಾಖಲಿಸುವುದು ಬಳಕೆಗೆ ತಕ್ಕಂತೆ ಜಾಹೀರಾತುಗಳನ್ನು ಪ್ರದರ್ಶಿಸಿ ವಾಣಿಜ್ಯ ಉದ್ದೇಶಗಳನ್ನು ಈಡೇರಿಸಿಕೊಳ್ಳುವುದು; ಈ ಕದ್ದಾಲಿಕೆಯನ್ನು ಜನರ ರಾಜಕೀಯ ನಿಲುವು, ಧಾರ್ಮಿಕ ನಿಲುವುಗಳನ್ನು ಅರಿತು, ಆಳುವ ವರ್ಗದ ಮಹತ್ವಾಕಾಂಕ್ಷೆಗಳನ್ನು ಪೂರೈಸಲು ನೆರವಾಗಿದ್ದು ಮನುಕುಲ ವಿರೋಧಿ ನಡೆಯೆಂದು ಈಗ ದೊಡ್ಡಮಟ್ಟದಲ್ಲಿ ಚರ್ಚೆ ಎದ್ದಿದೆ.

ಸುಳ್ಳುಸುದ್ದಿಗಳನ್ನು, ತಪ್ಪು ಮಾಹಿತಿಗಳನ್ನು ಹರಡುವುದನ್ನು ತಡೆಯುವಲ್ಲಿ ಯಾವುದೇ ನಿಯಂತ್ರಣ ಕ್ರಮವನ್ನು ಅನುಸರಿಸಿದೆ, ತಂತ್ರಜ್ಞಾನದಿಂದ ಇದು ಸಾಧ್ಯವಿಲ್ಲ ಎಂದು ಅಸಹಾಯಕತೆ ತೋರುವ ನಾಟಕವಾಡಿತು. ಈ ದುರ್ನಡೆಯಿಂದ ಆದ ಅನಾಹುತ ಅಸಂಖ್ಯಾತ ಜೀವಗಳ ನಾಶ. ಮಾನವ ಹಕ್ಕುಗಳ ಉಲ್ಲಂಘನೆ. ರಷ್ಯಾ, ಸಿಂಗಾಪುರ್, ಫಿಲಿಫೈನ್ಸ್, ಮ್ಯಾನ್ಮಾರ್, ಭಾರತ ಹೀಗೆ ಹಲವು ದೇಶಗಳಲ್ಲಿ ಸರ್ಕಾರ ರೂಪಿಸಿದ ಪ್ರೊಪಾಗಂಡಾವನ್ನು ಕಾರ್ಯರೂಪಕ್ಕೆ ತರುವ ಮಟ್ಟಿಗೆ ಆ ಸರ್ಕಾರಗಳ ಜೊತೆಎ ಫೇಸ್‌ಬುಕ್ ವ್ಯಾಪಾರಕ್ಕೆ ಇಳಿಯಿತು ಎಂಬುದನ್ನು ಕಳೆದ ಎರಡು ವರ್ಷಗಳಲ್ಲಿ ಯುರೋಪಿಯನ್ ಒಕ್ಕೂಟ ಮತ್ತು ಅಮೆರಿಕದ ಸಂಸತ್ತು ನಡೆಸಿದ ವಿಚಾರಣೆಯ ಸಂದರ್ಭದಲ್ಲಿ ಹೊರಬಿದ್ದಿದೆ.

ಬರ್ಮಾದಲ್ಲಿ ಮುಸ್ಲಿಮರ ವಿರುದ್ಧದ ಪ್ರೊಪಾಗಂಡ, ಭಾರತದಲ್ಲಿ ಮುಸ್ಲಿಮ್ ವಿರೋಧಿ ಹಾಗೂ ಹಿಂದೂ ರಾಷ್ಟ್ರೀಯವಾದದ ಪ್ರೊಪಾಗಂಡಕ್ಕೆ ನೆರವಾದ ಫೇಸ್‌ಬುಕ್ ದಿನದಿನಕ್ಕೂ ಮನುಷ್ಯ ವಿರೋಧಿಯಾಗಿ ಬೆಳೆದು ಬಂದಿದೆ. ಒಂದು ಕಾಲದಲ್ಲಿ ಗೂಗಲ್ ಸಂಸ್ಥೆ ತನ್ನ ಆತ್ಮಸಾಕ್ಷಿಯಾಗಿ, ’ಡೋಂಟ್ ಬಿ ಈವಿಲ್’ ಎಂದು ಅನಧಿಕೃತ ಘೋಷವಾಕ್ಯವನ್ನು ಹೇಳಿಕೊಂಡು ಬಂದಿತ್ತು. ಗೂಗಲ್ ಹಲವು ವಾಣಿಜ್ಯೋದ್ದೇಶದ ಚಟುವಟಿಕೆಗಳಲ್ಲಿ ಸಕ್ರಿಯವಾದ ಮೇಲೆ ಘೋಷವಾಕ್ಯವನ್ನು ಕೈಬಿಟ್ಟಿತು. ಆದರೆ ಅದರ ದುಷ್ಟತನ ಫೇಸ್ಬುಕ್‌ನಷ್ಟು ಪ್ರತಿ ಸಾಮಾನ್ಯನನ್ನು ಗುರಿಯಾಗಿಸುವಷ್ಟು ಪಾತಾಳಕ್ಕೆ ಇಳಿದಿಲ್ಲವೇನೊ. ಆದರೆ ಫೇಸ್‌ಬುಕ್‌ನ ಎಲ್ಲ ಘೋರ ಪಾತಕ ಕಣ್ಣಿಗೆ ರಾಚುವಷ್ಟು ಹೊರಬಿದ್ದಿದೆ.

ಇತ್ತೀಚೆಗೆ ನೊಬೆಲ್ ಶಾಂತಿ ಪುರಸ್ಕಾರ ಪಡೆದ ತನಿಖಾ ವರದಿಗಾರ್ತಿ, ಪಿಲಿಪೈನ್ಸ್‌ನ ಮಾರಿಯಾ ರೆಸ್ಸಾ ಫೇಸ್‌ಬುಕ್‌ನ ಎಲ್ಲ ದುಷ್ಟ ವ್ಯವಹಾರಗಳನ್ನು ಬಯಲಿಗೆ ಎಳೆದವರು. ಸಂದರ್ಶನವೊಂದರಲ್ಲಿ ಅವರು ಹೇಳಿದ ಮಾತುಗಳು ಹೀಗಿವೆ: “ನಾವು ಫೇಸ್‌ಬುಕ್ ಪುಟಗಳ ಮಾಹಿತಿಯನ್ನು ಕಲೆ ಹಾಕಲು ಆರಂಭಿಸಿದೆವು. ನಕಲಿ ಖಾತೆಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂತು. ಇವುಗಳ ಕಾರ್ಯವಿಧಾನವನ್ನು ಸೂಕ್ಷ್ಮವಾಗಿ ಗ್ರಹಿಸಿದೆವು. ಎಲ್ಲ ಸುದ್ದಿ ಗುಂಪುಗಳನ್ನು ಟ್ರಾಲ್ ಮಾಡುತ್ತಿದ್ದ ಫೇಸ್‌ಬುಕ್ ಖಾತೆಯೊಂದನ್ನು ಪತ್ತೆ ಹಚ್ಚಿದೆವು. ಅದೇ ಆರಂಭ. ನಂತರ ಮೂರು ತಿಂಗಳ ಕಾಲ, ಫೇಸ್‌ಬುಕ್ ಬಳಕೆದಾರರ ಮೇಲೆ ಪ್ರಭಾವ ಬೀರುವ ಕೆಲಸ ಮಾಡುತ್ತಿದ್ದ ಖಾತೆಗಳನ್ನು ಎಣಿಸಿದೆವು. ಇಂಥ 26 ನಕಲಿ ಖಾತೆಗಳು ಪತ್ತೆಯಾದವು. ಇವು 30 ಲಕ್ಷ ಜನರನ್ನು ಪ್ರಭಾವಿಸಬಲ್ಲವಾಗಿದ್ದವು.

“ಆಗಲೇ ನನಗೆ ಕಾದಂಬರಿಕಾರ ಜೊಸೆಫ್ ಕಾನ್ರಾಡ್ ಉದ್ಗರಿಸುವ ’ದಿ ಹಾರರ್’ನ ಅನುಭವವಾಗಿದ್ದು. ಆಗಸ್ಟ್ 2016ರಲ್ಲಿ ನಾನು ಕಲೆ ಹಾಕಿದ ಮಾಹಿತಿಯೊಂದಿಗೆ ಫೇಸ್‌ಬುಕ್ ಕಚೇರಿಗೆ ಭೇಟಿ ನೀಡಿ, ’ಇದು ಅಪಾಯಕಾರಿ’ ಎಂದು ತಿಳಿಸಿ ನಾನು ಸಂಗ್ರಹಿಸಿದ ಅಂಕಿ-ಅಂಶಗಳನ್ನು ಅವರ ಮುಂದಿಟ್ಟೆ. ನಾನು ಭೇಟಿಯಾದ ವ್ಯಕ್ತಿಗಳು ಆಘಾತಗೊಂಡರು, ಅವರಿಗೆ ಏನು ಮಾಡಬೇಕು ತಿಳಿಯಲಿಲ್ಲ. ಕೊನೆಗೆ, ’ನೀವೇನಾದರೂ ಮಾಡಲೇಬೇಕು. ಇಲ್ಲವಾದರೆ ಟ್ರಂಪ್ ಗೆಲ್ಲುತ್ತಾರೆ’ ಎಂದೆ. ಅದು ಆಗುವುದಿಲ್ಲ ಎಂದು ಎಲ್ಲರೂ ನಕ್ಕರು. ಆದರೆ ನವೆಂಬರ್ ಬಂತು. ಆತ ಗೆದ್ದ.

“ಇನ್‌ಸ್ಟಂಟ್ ಆರ್ಟಿಕಲ್‌ಗಳ ಮೂಲಕ ಫೇಸ್‌ಬುಕ್ ಜಾಗತಿಕವಾಗಿ ಅತಿದೊಡ್ಡ ಸುದ್ದಿವಿತರಕನಾಗಿ ಬೆಳೆಯಿತು. ಆದರೆ ನಿಯಂತ್ರಕನ ಜವಾಬ್ದಾರಿಯನ್ನೇ ಮರೆತುಬಿಟ್ಟಿತು. ಇದು ಬಹಳ ಮುಖ್ಯವಾದ ಕೆಲಸ. ಪತ್ರಕರ್ತರಾದ ನಾವು ಮಾಡುವುದೇ ಅದನ್ನು, ಅಂದರೆ ವಾಸ್ತವಾಂಶ ಮತ್ತು ಕಲ್ಪನೆಗಳನ್ನು ಪರಾಮರ್ಶಿಸಿ ದೃಢಪಡಿಸುವುದು. ಆದರೆ ಫೇಸ್‌ಬುಕ್ ಸುದ್ದಿ ವಿತರಣೆಗೆ, ಮನುಷ್ಯನಿಗೆ ಅತ್ಯಂತ ನಿಕೃಷ್ಟವಾದಂತಹ ವಿಚಾರಗಳನ್ನು ವಿನ್ಯಾಸ ಮಾಡಲು ಬಳಸಿದ ಆಲ್ಗರಿದಮ್‌ಗಳನ್ನೇ ಬಳಸಿತು. ಈ ಆಲ್ಗರಿದಮ್‌ಗಳು ನಿಮ್ಮನ್ನು ಸೈಟ್‌ಗೆ ಹೆಚ್ಚು ಕಾಲ ಕಣ್ಣು ನೆಟ್ಟಿರುವಂತೆ ಮಾಡಬಲ್ಲವಾಗಿದ್ದವು. ಫೇಸ್‌ಬುಕ್‌ನಲ್ಲಿ ದ್ವೇಷ ಕೋಪಗಳೊಂದಿಗೆ ಬೆರೆತ ಸುಳ್ಳುಗಳು ವಾಸ್ತವಾಂಶಗಳಿಗಿಂತ ವೇಗವಾಗಿ ಹರಡಿದವು”.

ಕಳೆದ ವರ್ಷ ಜೊಸೆಫ್ ಒರ್ಲೋಸ್ಕಿ ನಿರ್ದೇಶಿಸಿದ ಸಾಕ್ಷ್ಯಚಿತ್ರ ’ದಿ ಸೋಷಿಯಲ್ ಡಿಲೆಮಾ’. ಖಾಸಗಿತನ, ಫೇಸ್‌ಬುಕ್‌ನಿಂದಾಗುತ್ತಿದ್ದ ಮಾನಸಿಕ ಆರೋಗ್ಯದ ಮೇಲಿನ ಪ್ರಭಾವ, ಆಲ್ಗರಿದಮ್‌ಗಳ ಕಳ್ಳಾಟಗಳನ್ನು ಸಿನಿಮೀಯ ರೀತಿಯಲ್ಲಿ ಅದು ಬಿಚ್ಚಿಟ್ಟಿತು. ನಮ್ಮದೇ ವರ್ಚ್ಯುಯಲ್ ಪ್ರತಿರೂಪಗಳನ್ನು ಸಿದ್ಧ ಮಾಡುವಷ್ಟರಮಟ್ಟಿಗೆ ನಮ್ಮ ಬುದ್ಧಿ-ಭಾವಗಳ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಂಡಿದೆ ಎಂಬುದು ಬೆರಗಿನಿಂದ ನೋಡಬೇಕಾದ ವಿಷಯವಲ್ಲ, ಬೆಚ್ಚಿ ಬೀಳಬೇಕಾದ ಸಂಗತಿಯಾಗಿದೆ.

ಕಳೆದ ಜುಲೈ ತಿಂಗಳಲ್ಲಿ ಬಿಡುಗಡೆಯಾದ ’ದಿ ಅಗ್ಲಿ ಟ್ರೂತ್; ಇನ್‌ಸೈಡ್ ಫೇಸ್‌ಬುಕ್ಸ್ ಬ್ಯಾಟಲ್ ಫಾರ್ ಡಾಮಿನೇಷನ್ ಪುಸ್ತಕ ಫೇಸ್‌ಬುಕ್ ಕುರಿತು ನಡೆಯುತ್ತಿರುವ ಚರ್ಚೆಗೆ ಇಂಬು ನೀಡುವಂತಹ, ಅಂದರೆ ಫೇಸ್‌ಬುಕ್ ಜನವಿರೋಧಿ ಚಟುವಟಿಕೆಗಳನ್ನು ಬಯಲು ಮಾಡುವಂತಹ ಕೆಲಸ ಮಾಡಿತು. ನ್ಯೂಯಾರ್ಕಿನ ಹಿರಿಯ ಪತ್ರಕರ್ತೆಯರಾದ ಶೀರಾ ಫ್ರೆಂಕೆಲ್ ಮತ್ತು ಸಿಸಿಲಿಯಾ ಕಾಂಗ್ 400ಕ್ಕೂ ಹೆಚ್ಚು ಜನರನ್ನು 1000 ಗಂಟೆಗಳಿಗೂ ಹೆಚ್ಚು ಕಾಲ ಸಂದರ್ಶನ ನಡೆಸಿ ಬರೆದ ಪುಸ್ತಕವಿದು.

ಇನ್ನೇನು ಟ್ರಂಪ್ ಅಧಿಕಾರ ಮುಗಿಯುವ ಮುನ್ನ ಅಮೆರಿಕದ ಕ್ಯಾಪಿಟಲ್ ಕಟ್ಟಡ ಮೇಲೆ ಆತನ ಬೆಂಬಲಿಗರು ಎಂದು ಹೇಳಲಾದ ಗುಂಪು ನಡೆಸಿದ ದಾಳಿಯಲ್ಲಿ ಫೇಸ್‌ಬುಕ್ ಎಂತಹ ಪಾತ್ರವಹಿಸಿದೆ ಎಂಬುದನ್ನು ಉಲ್ಲೇಖಿಸುವ ಈ ಪುಸ್ತಕ ಪ್ರಜಾತಂತ್ರಕ್ಕೆ ಹೇಗೆ ಮಾರಕ ಎಂಬುದನ್ನು ವಿಶ್ಲೇಷಿಸುತ್ತದೆ. ’ಅಗ್ಲಿ ಟ್ರೂತ್’ ಪುಸ್ತಕ ಫೇಸ್‌ಬುಕ್ ಅತ್ಯಂತ ಪ್ರಭಾವಿ ಮತ್ತು ಬಲಿಷ್ಠ ಕಾರ್ಪೋರೇಟ್ ಸಂಸ್ಥೆಯಾಗಿ ಬೆಳೆದು ನಿಂತಿರುವುದನ್ನು ಹೇಳುತ್ತಲೇ ಅಪಾಯಕಾರಿ ಉದ್ಯಮ ಮಾದರಿಯನ್ನು ಅದು ಬೆಳೆಸಿದೆ ಎನ್ನುತ್ತದೆ. ಝುಕರ್‌ಬರ್ಗ್ ಒಬ್ಬ ಸರ್ವಾಧಿಕಾರಿ ಮನಸ್ಥಿತಿಯ ಮಾಲಿಕ. ಸಂಸ್ಥೆಯೊಳಗೇ ಇರುವ ಟೀಕೆ, ತಕರಾರು, ನೈತಿಕ ಪ್ರಶ್ನೆಗಳನ್ನು ತುಳಿದು ತನ್ನ ಮಹತ್ವಾಕಾಂಕ್ಷೆಯನ್ನು ಮಾತ್ರ ಆದ್ಯತೆಯಾಗಿಸಿಕೊಂಡಿದ್ದಾನೆ ಎಂಬುದನ್ನು ಹೇಳುತ್ತದೆ.

ತಾನು ಸಂಗ್ರಹಿಸುತ್ತಿರುವ ಪ್ರತಿ ಮಾಹಿತಿಯ ದುರ್ಬಳಕೆಯನ್ನು ಮಾಡುತ್ತಿರುವುದರಿಂದ ಸೃಷ್ಟಿಯಾಗಿರುವ ಸಮಸ್ಯೆಗಳನ್ನು ಸ್ವತಃ ಫೇಸ್‌ಬುಕ್ ಪರಿಹರಿಸಿಕೊಳ್ಳಲಾಗದ ಸ್ಥಿತಿ ತಲುಪಿದೆ. ಬಹುಶಃ ಪರಿಹರಿಸಿಕೊಳ್ಳುವುದು ಅದರ ಉದ್ದೇಶವಾಗದೆಯೂ ಇರಬಹುದು. ಆದರೆ ಈಗಾಗಲೇ ವಿಚಾರಣೆಗಳನ್ನು ಎದುರಿಸಿರುವ ಝುಕರ್‌ಬರ್ಗ್ ಯಾವುದೇ ರೀತಿಯ ಮುಖಭಂಗ ಅನುಭವಿಸಿದಂತೆ, ಮುಜುಗರಕ್ಕೆ ಒಳಗಾದಂತೆ ಕಂಡಿಲ್ಲ. ಫೇಸ್‌ಬುಕ್ ಅಡಿಯಲ್ಲಿರುವ ವಾಟ್ಸ್‌ಆಪ್, ಇನ್‌ಸ್ಟಾಗ್ರಾಮ್ ಒಂದಲ್ಲ ಒಂದು ತಪ್ಪು ಕಾರಣಕ್ಕೆ ಸುದ್ದಿಯಾಗುತ್ತಿದ್ದು, ಪದೇಪದೇ ತನ್ನ ಸಂಸ್ಥೆ ಮತ್ತು ಸೇವೆಗಳ ವಿಶ್ವಾಸಾರ್ಹತೆಯ ಪ್ರಶ್ನೆಯನ್ನು ಎದುರಿಸುತ್ತಿವೆ. ಕಳೆದ ವಾರ ಫೇಸ್‌ಬುಕ್ ರೀಬ್ರ್ಯಾಂಡ್ ಆಗಲಿದೆ ಎಂಬ ಸುದ್ದಿಯೂ ಹೊರಬಿತ್ತು. ಜನರಲ್ಲಿ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಲು, ಮುಜುಗರವನ್ನು ಮರೆಮಾಚಲು ಇಂತಹ ಪ್ರಯತ್ನ ಎಂದು ಅನೇಕರು ವಿಶ್ಲೇಷಿಸಿದರು. ಆದರೆ ಝುಕರ್‌ಬರ್ಗ್ ತಾನು ಕೇವಲ ಸೋಷಿಯಲ್ ಮೀಡಿಯಾ ಸಂಸ್ಥೆಯಲ್ಲ ಎಂಬ ಸಂದೇಶವನ್ನು ಹೇಳಲಿದ್ದಾನೆ ಎಂಬ ಅನುಮಾನವೂ ಇದೆ. 2015ರಲ್ಲಿ ಕೇವಲ ಸರ್ಚ್ ಎಂಜಿನ್ ಸಂಸ್ಥೆಯಾಗಿದ್ದ ಗೂಗಲ್, ’ಆಲ್ಫಾಬೆಟ್’ ಹೆಸರಿನ ಸಮೂಹ ಸಂಸ್ಥೆಯಾಗಿ ರೂಪಾಂತರಗೊಂಡಿತು. ಫೇಸ್‌ಬುಕ್‌ಅನ್ನು ಅದೇ ರೀತಿಯಲ್ಲಿ ಸಮೂಹ ಸಂಸ್ಥೆಯಾಗಿಸುವ ಉದ್ದೇಶ ಝುಕರ್‌ಬರ್ಗ್‌ಗೆ ಇದ್ದಂತಿದೆ. ’ಮೆಟಾವರ್ಸ್’ ಎಂಬ ವರ್ಚ್ಯುಲ್ ಜಗತ್ತನ್ನು -ಪರ್ಯಾಯ ಜಗತ್ತನ್ನು- ಸೃಷ್ಟಿಸುವ ಮಹತ್ವಾಕಾಂಕ್ಷೆ ಹೊಂದಿರುವ ಝುಕರ್‌ಬರ್ಗ್ ಕೇವಲ ಹೆಸರು ಬದಲಿಸುವ ಕ್ಷುಲ್ಲಕ ಕೆಲಸಕ್ಕೆ ಮುಂದಾಗಿಲ್ಲ ಎನ್ನಿಸುತ್ತದೆ.

ಹಲವು ಸೋಗಿನಲ್ಲಿ ಎಲ್ಲ ಮೂರನೆ ಜಗತ್ತಿನ ದೇಶಗಳಲ್ಲಿ ಬಂಡವಾಳಶಾಹಿಗಳ ಜೊತೆ ಕೈ ಜೋಡಿಸಿ, ಅಲ್ಲಿನ ಸರ್ಕಾರಿ ಸೇವೆಗಳಲ್ಲಿ ಮೂಗು ತೂರಿಸಲು ಯತ್ನಿಸಿದ ಫೇಸ್‌ಬುಕ್ ಕೆಲವೆಡೆ ಯಶಸ್ವಿಯೂ ಆಗಿದೆ.

ಒಂದೆಡೆ ಚಿವುಟಿ, ಅಶಾಂತಿ ಉಂಟು ಮಾಡುವುದು, ಇನ್ನೊಂದೆಡೆ ಲೋಕೋದ್ಧಾರಕನಂತೆ ಜನಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತೊಟ್ಟಿಲು ತೂಗಿಸುವುದು ಎರಡನ್ನೂ ಮಾಡುತ್ತಿದೆ. ಹಣ ಮತ್ತು ರಾಜಕೀಯ ಬಲಗಳ ಮದದಲ್ಲಿರುವ ಫೇಸ್‌ಬುಕ್ ಅಪಾಯಕಾರಿ ರಕ್ಕಸನಂತೆ ಬೆಳೆದಿದೆ. ನಾನು ಇದರಿಂದ ಆಚೆ ಹೋಗುತ್ತೇನೆ ಎಂದರೂ, ನಿಮ್ಮ ಪ್ರತಿರೂಪವನ್ನು ಬಳಸಿ ನೀವು ಸಕ್ರಿಯರಾಗಿಯೇ ಇರುವಂತೆ ಭ್ರಮೆ ಸೃಷ್ಟಿಸಬಲ್ಲ ತಾಕತ್ತು ಈಗ ಫೇಸ್‌ಬುಕ್‌ಗೆ ಇದೆ! ಈ ಏಕಾಧಿಪತ್ಯವನ್ನು ಮುರಿಯುವುದಕ್ಕೆ ಟ್ರಂಪ್ ಹೊಸದೊಂದು ಸಾಮಾಜಿಕ ಮಾಧ್ಯಮ ಆರಂಭಿಸುತ್ತಿರುವುದಾಗಿ ಘೋಷಿಸಿದ್ದಾರೆ. ಆದರೆ
ಅದು ಅಹಂ ತಣಿಸುವ ನಡೆಯಷ್ಟೇ ಆಗಿದ್ದಲ್ಲಿ, ಮತ್ತೆ ಫೇಸ್‌ಬುಕ್ ಗೆಲ್ಲುತ್ತದೆ. ತನ್ನ ಮತ್ತು ತನ್ನನ್ನು ನಂಬಿರುವ ಪ್ರಭಾವಿಗಳ ಪರವಾಗಿ ಯಾವುದೇ ರೀತಿಯ ತಕರಾರನ್ನು ಗೆಲ್ಲುವ ನರೇಟಿವ್ ಕಟ್ಟುವ ಶಕ್ತಿ ಫೇಸ್‌ಬುಕ್‌ಗೆ ಇದೆ. ವಾಸ್ತವಕ್ಕಿಂತ ಕಲ್ಪಿತ ವಾಸ್ತವವನ್ನು ಕಟ್ಟಿಕೊಡುವ ನರೇಟಿವ್‌ಗಳು ಗೆಲ್ಲುತ್ತಿರುವುದರಿಂದ ಫೇಸ್‌ಬುಕ್ ದುರ್ಬಲವಾಗುವ ಲಕ್ಷಣವೂ ಕಾಣುತ್ತಿಲ್ಲ.

ಪರ-ವಿರೋಧ, ಅದು-ಇದು, ಅವನು-ಇವನು, ಹೀಗೆ ಎರಡರ ನಡುವೆ ಗೆರೆ ಎಳೆದು ಒಡಕು ಸೃಷ್ಟಿಸುವ ಅಥವಾ ಧ್ರುವೀಕರಣವನ್ನು ಸೃಷ್ಟಿಸುತ್ತಿರುವ ಫೇಸ್‌ಬುಕ್ ಬೈನರಿ ಜಗತ್ತನ್ನು ಪೋಷಿಸುವ ದುಷ್ಟತನಕ್ಕೆ ತೋಳೆತ್ತಿದೆ. ಆದರೆ ಸಾವಿರಾರು ವರ್ಷಗಳ ಇತಿಹಾಸದ ಪಯಣದಲ್ಲಿ ಈ ಜಗತ್ತನ್ನು ಮುನ್ನಡೆಸಿದ್ದು, ಬೆಳೆಸಿದ್ದು, ಎಲ್ಲ ಅರ್ಥದಲ್ಲೂ ಶ್ರೀಮಂತಗೊಳಿಸಿದ್ದು, ಮಾನವೀಯವಾಗಿಸಿದ್ದು ಬಹುತ್ವದ ನಂಬಿಕೆ. ಅದನ್ನು ಎಲ್ಲ ವಿಧದಲ್ಲೂ ಒಡೆಯುತ್ತಿರುವ ಫೇಸ್‌ಬುಕ್‌ಅನ್ನು ನಿಯಂತ್ರಿಸಬೇಕಾದ ತುರ್ತು ನಮ್ಮೆದುರಿಗಿದೆ.


ಇದನ್ನೂ ಓದಿ: 2019ರ ಲೋಕಸಭೆ ಚುನಾವಣೆಯಲ್ಲಿ ಸುಳ್ಳುಸುದ್ದಿಗಳು ಹೆಚ್ಚಾಗಿದ್ದವು: ಫೇಸ್‌ಬುಕ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...