Homeಚಳವಳಿಅಲೆಮಾರಿ ಮಹಿಳೆಗೆ ಆಹಾರ ನಿರಾಕರಣೆ: ಅದೇ ದೇವಾಲಯದಲ್ಲಿ ಮಹಿಳೆಯೊಂದಿಗೆ ಊಟ ಮಾಡಿದ ತಮಿಳುನಾಡು ಸಚಿವ

ಅಲೆಮಾರಿ ಮಹಿಳೆಗೆ ಆಹಾರ ನಿರಾಕರಣೆ: ಅದೇ ದೇವಾಲಯದಲ್ಲಿ ಮಹಿಳೆಯೊಂದಿಗೆ ಊಟ ಮಾಡಿದ ತಮಿಳುನಾಡು ಸಚಿವ

ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನ್ನದಾನಂ ಹೆಸರಿನಲ್ಲಿ ಬಡವರಿಗೆ ಉಚಿತ ಊಟ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ.

- Advertisement -
- Advertisement -

ತಮಿಳುನಾಡಿನ ಮಾಮಲ್ಲಪುರಂ ದೇವಸ್ಥಾನದಲ್ಲಿ ನಾರಿಕುರುವ ಅಲೆಮಾರಿ ಮಹಿಳೆಗೆ ಊಟ ನಿರಾಕರಿಸಲಾಗಿತ್ತು. ಸರ್ಕಾರದ ವತಿಯಿಂದ ನಡೆಯುವ ದೇವಸ್ಥಾನದ ಅನ್ನ ಸಂತರ್ಪಣೆಯಲ್ಲಿ ನಮ್ಮ ಸಮುದಾಯಕ್ಕೆ ಪ್ರವೇಶವಿಲ್ಲ ಏಕೆ ಎಂದು ಆ ಮಹಿಳೆ ಪ್ರಶ್ನಿಸುವ ವಿಡಿಯೋವೊಂದು ವೈರಲ್ ಆಗಿತ್ತು. ಇದು ಸರ್ಕಾರದ ಗಮನಕ್ಕೆ ಬಂದ ನಂತರ ತಮಿಳುನಾಡು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಚಿವರು ಯಾವ ದೇವಸ್ಥಾನದಲ್ಲಿ ಆ ಮಹಿಳೆಗೆ ಆಹಾರ ನಿರಾಕರಿಸಲಾಯಿತೋ ಅದೇ ದೇವಸ್ಥಾನದಲ್ಲಿ ಆ ಮಹಿಳೆಯೊಟ್ಟಿಗೆ ಕುಳಿತು ಊಟ ಮಾಡುವ ಮೂಲಕ ಕ್ರಾಂತಿಕಾರಿ ನಡೆ ಅನುಸರಿಸಿದ್ದಾರೆ.

ಅಕ್ಟೋಬರ್ 29 ರಂದು ಸಚಿವ ಪಿ.ಕೆ ಸೇಕರ್ ಬಾಬುರವರೊಂದಿಗೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಮತ್ತು ತಿರುಪೊರುರು ಶಾಸಕರಾದ ಎಸ್.ಎಸ್ ಬಾಲಾಜಿಯವರು ಸಹ ಸ್ಥಳಸಯನ ಪೆರುಮಾಳ್ ದೇವಾಲಯದಲ್ಲಿ ನಡೆದ ಸಾಮೂಹಿಕ ಭೋಜನ ಕಾರ್ಯಕ್ರಮದಲ್ಲಿ ತಾರತಮ್ಯಕ್ಕೊಳಗಾಗಿದ್ದ ಅಶ್ವಿನಿಯವರೊಂದಿಗೆ ಊಟ ಮಾಡಿದರು. ಅಶ್ವಿನಿಯವರ ನಾರಿಕುರುವ ಅಲೆಮಾರಿ ಸಮುದಯಾದ ಹಲವು ಮಂದಿ ಭಾಗವಾಗಿಸಿದ್ದರು. ಆ ಮೂಲಕ ಜಾತಿ ತಾರತಮ್ಯವನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ತಮಿಳುನಾಡು ಸರ್ಕಾರ ಸಾರಿದೆ.

ಒಂದು ಮಧ್ಯಾಹ್ನ ನಾವು ಊಟ ಮಾಡಲು ಸಾಲಿನಲ್ಲಿ ನಿಂತಿದ್ದೆವು. ಮೊದಲ ಪಂಕ್ತಿಗೆ ನಮಗೆ ಜಾಗ ಸಿಗಲಿಲ್ಲ. ಎರಡನೇ ಪಂಕ್ತಿಗೆ ಕುಳಿತಾಗ ದೇವಸ್ಥಾನದ ಒಬ್ಬ ವ್ಯಕ್ತಿ ಬಂದು ಅಲ್ಲಿಂದ ಹೊರಹೋಗುವಂತೆ ಹೇಳಿದರು. ಎಲ್ಲರೂ ಊಟ ಮಾಡಿ ಉಳಿದರೆ ದೇವಸ್ಥಾನದ ಹೊರಗೆ ನಿಮಗೆ ನೀಡುತ್ತೇವೆ, ದೇವಸ್ಥಾನದ ಹೊರಗೆ ಕಾಯಿರಿ ಎಂದು ನನ್ನ ಜೊತೆಗಿದ್ದ ನಮ್ಮ ಸಮುದಾಯದವರೆಲ್ಲರನ್ನು ಹೊರ ಕಳಿಸಿದ್ದರು ಎಂದು ಅಶ್ವಿನಿಯವರು ವಿಡಿಯೋದಲ್ಲಿ ಹೇಳಿದ್ದರು. ಇದು ನಿಮ್ಮ ಮದುವೆಯೆ ಉಳಿದರೆ ಕೊಡುತ್ತೇನೆ ಎಂದು ಹೇಳುವುದಕ್ಕೆ? ಇದು ಬಡವರಿಗೆಂದು ರಾಜ್ಯ ಸರ್ಕಾರ ಸ್ಥಾಪಿಸಿರುವ ದೇವಸ್ಥಾನದ ಊಟದ ಯೋಜನೆ. ನಾವು ಅವಿದ್ಯಾವಂತರಾದ ಕಾರಣಕ್ಕೆ ನಮಗೆ ಊಟ ನಿರಾಕರಿಸಲಾಗಿದೆ. ಒಂದು ದಿನ ನನ್ನ ಮಗ ಬೆಳೆದು ದೊಡ್ಡವನಾಗುತ್ತಾನೆ. ನಾವು ಅವನಿಗೆ ಉತ್ತಮ ಶಿಕ್ಷಣ ಕೊಡಿಸುತ್ತೇವೆ. ಎಷ್ಟು ದಿನ ಅವರು ಬದಲಾಗದೆ ಉಳಿಯುತ್ತಾರೆ ನಾವು ನೋಡುತ್ತೇವೆ ಎಂದು ಅಶ್ವಿನಿ ಹೇಳಿದ್ದರು.

ಅಶ್ವಿನಿ ಪೂಂಚೇರಿ ಗ್ರಾಮದ ನಾರಿಕುರುವ ಅಲೆಮಾರಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆ ಸಮುದಾಯದ ಜನರು ಮಣಿಗಳು ಮತ್ತು ಆಭರಣಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಈ ವಿಡಿಯೋ ಸಿಎಂ ಸ್ಟಾಲಿನ್ ಗಮನಕ್ಕೆ ಬಂದಾಗ ಆ ಮಹಿಳೆಯನ್ನು ಗುರುತಿಸುವಂತೆ ಮತ್ತು ತಾರತಮ್ಯವನ್ನು ಖಂಡಿಸಿ ಜಾಗೃತಿ ಮೂಡಿಸುವಂತೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಆದೇಶಿಸಿದ್ದರು. ಅದರಂತೆ ಆ ಮಹಿಳೆ ಮತ್ತು ಸಮುದಾಯವನ್ನು ಗುರುತಿಸಿ ಅವರೊಂದಿಗೆ ದೇವಸ್ಥಾನದಲ್ಲಿ ಒಟ್ಟಿಗೆ ಊಟ ಮಾಡುವ ಮೂಲಕ ಮುಂದೆ ಇಂತಹ ಘಟನೆಗಳು ನಡೆಯದಂತೆ ತಮಿಳುನಾಡು ಸರ್ಕಾರ ಎಚ್ಚರಿಕೆ ನೀಡಿದೆ.

ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನ್ನದಾನಂ ಹೆಸರಿನಲ್ಲಿ ಬಡವರಿಗೆ ಉಚಿತ ಊಟ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಸದ್ಯ ತಮಿಳುನಾಡಿನ 754 ದೇವಾಲಯಗಳಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ನೇತೃತ್ವದಲ್ಲಿ ಈ ಯೋಜನೆ ಜಾರಿಯಲ್ಲಿದೆ.

ತಾರತಮ್ಯಕ್ಕೊಳಗಾದ ಮಹಿಳೆಗೆ ನ್ಯಾಯ ದೊರಕಿಸಿದ ತಮಿಳನಾಡು ಸರ್ಕಾರದ ಈ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ಹರಿದುಬಂದಿದೆ. ಹಲವರು ಸರ್ಕಾರವನ್ನು ಶ್ಲಾಘಿಸಿದ್ದಾರೆ.

ಪತಿ ಅಥವಾ ಪೋಷಕರಿಂದ ಬೇರ್ಪಟ್ಟ ರಾಜ್ಯದ ಒಂಟಿ ಮಹಿಳೆಯರನ್ನು ‘ಕುಟುಂಬ’ ಎಂದು ಗುರುತಿಸಿ, ನಾಗರಿಕ ಸರಬರಾಜು ಇಲಾಖೆಯಿಂದ ಪಡಿತರ ಚೀಟಿ ನೀಡಲಾಗುವುದು ಎಂದು ತಮಿಳುನಾಡು ಸರ್ಕಾರ ನಿನ್ನೆ ಘೋಷಿಸಿತ್ತು. ಇದಕ್ಕೂ ಹಲವುರ ಮೆಚ್ಚುಗೆ ವ್ಯಕ್ತಪಡಿಸಿದ್ದರು.


ಇದನ್ನೂ ಓದಿ: ಒಂಟಿ ಮಹಿಳೆಯನ್ನು ‘ಕುಟುಂಬ’ ಎಂದು ಗುರುತಿಸಿ ರೇಷನ್ ಕಾರ್ಡ್‌ ನೀಡಲಿರುವ ತಮಿಳುನಾಡು ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...