Homeಚಳವಳಿಮಲಬಾರಿನಲ್ಲಿ ಟಿಪ್ಪು ಸುಲ್ತಾನ

ಮಲಬಾರಿನಲ್ಲಿ ಟಿಪ್ಪು ಸುಲ್ತಾನ

- Advertisement -
- Advertisement -

(ರಾಜ್ಯ ಬಿಜೆಪಿ ಸರ್ಕಾರವು ಇತ್ತೀಚಿಗೆ ಬೆಂಗಳೂರು-ಮೈಸೂರು ನಡುವೆ ಸಂಚರಿಸುತ್ತಿದ್ದ ’ಟಿಪ್ಪು ಎಕ್ಸ್‌ಪ್ರೆಸ್’ ರೈಲನ್ನು ’ಒಡೆಯರ್ ಎಕ್ಸ್‌ಪ್ರೆಸ್’ ಎಂದು ಮರುನಾಮಕರಣ ಮಾಡುವ ಮೂಲಕ ಟಿಪ್ಪುವಿನ ಲೆಗಸಿಯನ್ನು ಮರೆಮಾಚುವ ಕಡೆಗೆ ಮತ್ತೊಂದು ಹೆಜ್ಜೆಯನ್ನಿರಿಸಿದೆ. ಟಿಪ್ಪುವಿನ ಬಗ್ಗೆ ಕಪೋಲಕಲ್ಪಿತ ಸಂಗತಿಗಳನ್ನಿಟ್ಟುಕೊಂಡು ಬರೆದ ನಾಟಕವನ್ನು ಮೈಸೂರಿನ ರಂಗಾಯಣದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ಕೂಡು ಸಂಸ್ಕೃತಿಯ ಕುರುಹಾಗಿರಬಹುದಾದ ಟಿಪ್ಪುವಿನ ಮತ್ತೊಂದು ಲೆಗಸಿ ಎನ್ನಲಾಗುವ ಸಲಾಂ ಮಂಗಳಾರತಿಯ ಹೆಸರನ್ನು ಕರ್ನಾಟಕ ಸರ್ಕಾರದ ದತ್ತಿ ಇಲಾಖೆಯಡಿ ಬರುವ ದೇವಸ್ಥಾನಗಳಲ್ಲಿ ಬದಲಿಸಲಾಗುವುದು ಎಂದು ಇತ್ತೀಚಿಗಷ್ಟೇ ಮುಜರಾಯಿ ಸಚಿವರಾದ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಟಿಪ್ಪುವಿನ ವಿರುದ್ಧ ಬಿಜೆಪಿ ಹಾಗೂ ಸಂಘಪರಿವಾದರ ಈ ದಾಳಿಗಳ ಹಿನ್ನೆಲೆಯಲ್ಲಿ, ಟಿಪ್ಪುವನ್ನು ಮತ್ತು ಅವನ ಜೀವಿತಾವಧಿಯನ್ನು ನೆನೆಯುವ ಪ್ರಯತ್ನವಾಗಿ ಕರ್ನಾಟಕದ ಹಿರಿಯ ಪತ್ರಕರ್ತರಾದ ವಿಖಾರ್ ಅಹ್ಮದ್ ಸಯೀದ್ ಅವರು ಫ್ರಂಟ್‌ಲೈನ್ ಪತ್ರಿಕೆಗಾಗಿ ಬರೆದಿರುವ ಸರಣಿ ಲೇಖನಗಳನ್ನು ಶಶಾಂಕ್ ಎಸ್ ಆರ್ ಅನುವಾದಿಸುತ್ತಿದ್ದಾರೆ. ಇದು ಈ ಸರಣಿಯ ಮೂರನೇ ಲೇಖನ. ಪ್ರಸ್ತುತ ಲೇಖನವು 2018ರ ಜನವರಿ 5ರಂದು ಫ್ರಂಟ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು)

ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ (ಇದು 2018ರಲ್ಲಿ ಬರೆದ ಲೇಖನ) ನೇತೃತ್ವದ ಕಾಂಗ್ರೆಸ್ ಸರ್ಕಾರವು ಟಿಪ್ಪು ಸುಲ್ತಾನ್ ಜನ್ಮದಿನವಾದ ನವೆಂಬರ್ 10 ಅನ್ನು ’ಟಿಪ್ಪು ಜಯಂತಿ’ ಎಂದು ಕಳೆದ ಮೂರು ವರ್ಷಗಳಿಂದ ಆಚರಿಸುತ್ತಿದೆ. ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ಬ್ರಿಟಿಷರನ್ನು ವಿರೋಧಿಸಿ 1799ರಲ್ಲಿ ಯುದ್ಧಭೂಮಿಯಲ್ಲಿ ಮಡಿದ ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಗೌರವಿಸಲಾಗುತ್ತದೆಯಾದರೂ, ಟಿಪ್ಪು ಜಯಂತಿಯ ಆಚರಣೆಯನ್ನು ವಿರೋಧಿಸಿ ತೀವ್ರತರವಾದ ಪ್ರತಿಭಟನೆಗಳು ನಡೆಯುತ್ತಿವೆ. ಕರ್ನಾಟಕದಲ್ಲಿ ಹಿಂದುತ್ವ ಸಿದ್ಧಾಂತವನ್ನು ಮುನ್ನಲೆಗೆ ತಂದಿರುವ ಭಾರತೀಯ ಜನತಾ ಪಕ್ಷದ ರಾಜಕಾರಣಿಗಳ ಬೆಂಬಲವನ್ನು ಪಡೆದುಕೊಳ್ಳುವ ವಿವಿಧ ಸಂಘಟನೆಗಳು ಈ ಪ್ರತಿಭಟನೆಗಳ ನೇತೃತ್ವವನ್ನು ವಹಿಸಿವೆ. ಟಿಪ್ಪು ಒಟ್ಟು ಧಾರ್ಮಿಕ ಮತಾಂಧನಾಗಿದ್ದನೆಂದೂ, ಅವನ ಆಳ್ವಿಕೆಯಲ್ಲಿ ದೇವಾಲಯಗಳನ್ನು ಲೂಟಿ ಹೊಡೆಯಲಾಯಿತು ಮತ್ತು ಹಿಂದೂಗಳನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರಿಸಲಾಯಿತು ಎಂದು ಆರೋಪಿಸಲಾಗುತ್ತದೆ.

ಟಿಪ್ಪು ತನ್ನ ರಾಜ್ಯದ ಮೂರು ಪ್ರದೇಶಗಳ ಮುಸ್ಲಿಮೇತರರನ್ನು ಬಲವಂತವಾಗಿ ಮತಾಂತರಗೊಳಿಸಿದನೆಂಬ ಆರೋಪಗಳಿವೆ: ಮೊದಲನೆಯದಾಗಿ, ಇಂದಿನ ಕರ್ನಾಟಕದ ಭಾಗವಾದ ಕೊಡಗಿನ ಕೊಡವರನ್ನು; ನಂತರದಲ್ಲಿ, ಉತ್ತರ ಕೇರಳದ ಮಲಬಾರಿನಲ್ಲಿ ನೆಲೆಸಿರುವ ನಾಯರ್‌ಗಳನ್ನು; ಹಾಗೂ, ಕರಾವಳಿ ಕರ್ನಾಟಕದ ಮಂಗಳೂರಿನ ಕ್ರಿಶ್ಚಿಯನ್ನರನ್ನು. ಫ್ರಂಟ್‌ಲೈನ್ ಪತ್ರಿಕೆಯಲ್ಲಿ ಈಗಾಗಲೇ ಟಿಪ್ಪು ಸುಲ್ತಾನನ ಆಳ್ವಿಕೆಯನ್ನೂ – ಅವನ ಕೊಡುಗೆಗಳನ್ನೂ, ಡಿಸೆಂಬರ್ 11, 2015ರಂದು ಪ್ರಕಟವಾದ “Contested Legacy” ಎಂಬ ಲೇಖನದಲ್ಲಿ ಹಾಗೂ ಟಿಪ್ಪು ಕೊಡಗಿನಲ್ಲಿ ಧಾರ್ಮಿಕ ಮತಾಂಧತೆಯನ್ನು ಮೆರೆದ ಎಂಬ ಆರೋಪಗಳ ಸತ್ಯಾಸತ್ಯತೆಗಳನ್ನು ಜನವರಿ 6, 2017ರಲ್ಲಿ ಪ್ರಕಟವಾದ “Tipu – Fact & Fiction” ಎಂಬ ಲೇಖನಗಳಲ್ಲಿ ಚರ್ಚಿಸಲಾಗಿದೆ. ಪ್ರಸ್ತುತ ಲೇಖನವು ಮಲಬಾರ್ ಪ್ರದೇಶದಲ್ಲಿ ಎಸಗಲಾಗಿದೆಯೆಂದು ಟಿಪ್ಪು ವಿರುದ್ಧ ಮಾಡಲಾಗುವ ಆರೋಪಗಳನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತದೆ.

ಇನಾಂ ರೆಜಿಸ್ಟರುಗಳು

ಕೋಳಿಕ್ಕೋಡಿನ ಪ್ರಾದೇಶಿಕ ಪತ್ರಾಗಾರದಲ್ಲಿರುವ (Regional Archives) ಲಕ್ಷಗಟ್ಟಲೆ ಅಮೂಲ್ಯ ದಾಖಲೆಗಳ ನಡುವೆ, ಮೂಲೆಯಲ್ಲೆಲ್ಲೋ ಇದ್ದ, 19ನೇ ಶತಮಾನದ ಏಳು ರೆಜಿಸ್ಟರ್‌ಗಳ ಒಂದು ಸೆಟ್ ಲಭ್ಯವಿದ್ದು, ಮಲಬಾರಿನ ಇನಾಂ ಕಮಿಷನರ್ ಆಗಿದ್ದ ಜೆ.ಡಬ್ಲ್ಯೂ.ರಾಬಿನ್ಸನ್ ಇದನ್ನು ಸಂಪಾದಿಸಿದ್ದಾರೆ. ಇವು ಬ್ರಿಟಿಷರ ಕಾಲದ ಏಳು ತಾಲೂಕುಗಳಾದ ಎರನಾಡ್, ಚೌಗೌಟ್, ಓಲ್ಡ್ ಬೆಟಟ್ನಾಡ್, ಕ್ಯಾಲಿಕಟ್, ಕುರುಂಬ್ರನಾಡ್, ವಳ್ಳುವನಾಡ್ ಮತ್ತು ವಯನಾಡ್‌ಗಳಿಗೆ (ಈ ತಾಲೂಕುಗಳನ್ನು ಇಂದಿನ ಕೇರಳದ ವಿವಿಧ ಜಿಲ್ಲೆಗಳೊಂದಿಗೆ ವಿಲೀನಗೊಳಿಸಲಾಗಿದೆ) ಸೇರಿದ ಇನಾಂ ರೆಜಿಸ್ಟರುಗಳಾಗಿವೆ. ’ಇನಾಂ’ ಎಂದರೆ ಉಡುಗೊರೆ. ಯಾವುದೇ ಸಂಸ್ಥೆಗೆ ಅಥವಾ ವ್ಯಕ್ತಿಗೆ ತೆರಿಗೆಯಿಲ್ಲದೆಯೇ ಅನುದಾನವಾಗಿ ನೀಡಲಾಗುವ ಭೂಮಿಯನ್ನು ಇನಾಂ ಭೂಮಿ ಎಂದು ಕರೆಯಲಾಗುತ್ತದೆ. ರದ್ದಾಗದ ಹೊರತು ಇದು ನೀಡಲಾದ ವ್ಯಕ್ತಿ ಅಥವಾ ಸಂಸ್ಥೆಯ ಸ್ವತ್ತಾಗಿ ಎಂದಿಗೂ ಉಳಿದುಕೊಳ್ಳುತ್ತದೆ. ಸ್ವಾತಂತ್ರ್ಯಾ ನಂತರದಲ್ಲಿ ಬಂದ ವಿವಿಧ ಭೂಸುಧಾರಣಾ ಕಾಯ್ದೆಗಳ ಮೂಲಕವೂ ಇದು ಸಾಧ್ಯವಾಗಿತ್ತು. ಈ ರೆಜಿಸ್ಟರುಗಳು ಮುಂದಿನ ಜನಾಂಗಕ್ಕೆ ಸಹಕಾರಿಯೆಂಬಂತೆ, ಈ ಪ್ರದೇಶದಲ್ಲಿನ ಇನಾಂಗಳ ನವೀಕರಣ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ಸೂಕ್ಷ್ಮ ಸಂಗತಿಗಳನ್ನು ಹಿಡಿದಿಟ್ಟಿವೆ.

ಗಾತ್ರದಲ್ಲಿ ಉದ್ದ ಹಾಗೂ ವಿಶಾಲವಾಗಿರುವ ರೆಜಿಸ್ಟರುಗಳಿವು. ಇವನ್ನು ನೋಡಿದಾಕ್ಷಣ, ಕ್ಯಾಲಿಗ್ರಫಿ ಶೈಲಿಯಲ್ಲಿ ಸುರುಳಿಯಾಕಾರದ ಬಾಗಿದ ರೇಖೆಗಳನ್ನು ಬಳಸಿ ಬರೆದ ಬರಹಗಳಿವು ಎಂದಷ್ಟೇ ಗುರುತಿಸಲು ಸಾಧ್ಯವಾಗುತ್ತದೆ

ಒಂಬತ್ತು ದೇವಾಲಯಗಳಿಗೆ ನೀಡಲಾಗಿದ್ದ ಇನಾಮನ್ನು ನವೀಕರಿಸುವ ಪಟ್ಟಿಯೊಂದನ್ನು ನಾವು ಚೌಗೌಟ್ ತಾಲೂಕಿನ (ಇದನ್ನು ಪೊನ್ನಾನಿ ಎಂದೂ ಕರೆಯಲಾಗುತ್ತದೆ) ರೆಜಿಸ್ಟರಿನಲ್ಲಿ ಕಾಣಬಹುದಾಗಿದೆ. ನವೀಕರಿಸಲಾದ ಇನಾಂಗಳ ಪೈಕಿ ಮಧ್ಯ ಕೇರಳದ ಗುರುವಾಯೂರ್ ದೇವಸ್ಥಾನವು ಅತೀ ಹೆಚ್ಚು ಭೂದಾನ (613.2 ಎಕರೆ) ಪಡೆದಿತ್ತು. ಇದರ ಪಠ್ಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಇದರ ಫಲಾನುಭವಿಗಳನ್ನು “ಗುರುವಾಯೂರ್ ಕ್ಷೇತ್ರ”ದ ಉರಾಲೆರುಗಳು ಅಥವಾ ಟ್ರಸ್ಟಿಗಳೆಂದು ನಮೂದಿಸಿರುವುದು ತಿಳಿದುಬರುತ್ತದೆ.

ಈ ಬಗ್ಗೆ ವಿಸ್ತೃತವಾದ ಟಿಪ್ಪಣಿಯು ಹೀಗಿದೆ “1,428-9-2 [ರೂಪಾಯಿ-ಅನ್ನಾ-ಪೈಸಾ] ಮೊತ್ತವನ್ನು ಟಿಪ್ಪು ಸುಲ್ತಾನನು ದೇವಾಲಯಕ್ಕಾಗಿ ನೀಡುತ್ತಿದ್ದನೆಂದೂ, ಮತ್ತಿದಕ್ಕೆ 1841ರಲ್ಲಿ ಅಗತ್ಯ ಪರೀಕ್ಷೆಗಳನ್ನು ನಡೆಸಿ ಅಲ್ಲಿಯವರೆಗೂ ಹಣದ ರೂಪದಲ್ಲಿ ನೀಡಲಾಗುತ್ತಿದ್ದ ಅನುದಾನಕ್ಕೆ ಬದಲಾಗಿ, ಅದಕ್ಕೆ ಸಮನಾದಷ್ಟು ವಾರ್ಷಿಕ ಆದಾಯವನ್ನು ಒದಗಿಸುವ ಜಮೀನನ್ನು ನೀಡುವ ನಿರ್ಧಾರವನ್ನು ಕೈಗೊಳ್ಳುವವರೆಗೆ ಬ್ರಿಟಿಷ್ ಸರ್ಕಾರವು ಕೂಡ ಅನುದಾನವನ್ನು ಮುಂದುವರಿಸಿದಂತೆ ಕಂಡುಬರುತ್ತದೆ. ಈ ಇನಾಂ ಜಮೀನುಗಳನ್ನು ಈಗಲೂ ಇರಿಸಿಕೊಳ್ಳಲಾಗಿದ್ದು, ನವೆಂಬರ್ 20, 1841ರಂದು ಜಾರಿಗೆ ಬಂದ ಇನಾಂನ ಷರತ್ತುಗಳಂತೆ ಅನ್ವಯಿಸುವಂತೆ ಇದು ಹಾಗೆಯೇ ಇರಲಿದೆ.” ಈ ಟಿಪ್ಪಣಿಯನ್ನು ಮಲಬಾರಿನ ಆಗಿನ ಕಲೆಕ್ಟರರಾಗಿದ್ದ, ನಂತರದಲ್ಲಿ ಮಲಬಾರಿನ ಕಮಿಷನರ್ ಆಗಿದ್ದಂತಹ ಜಿ.ಎ. ಬಲ್ಲಾರ್ಡ್ ಸಮರ್ಥಿಸಿದ್ದಾರೆ ಮತ್ತು ನಂತರದಲ್ಲಿ ಮಲಬಾರ್‌ನ ಆಗಿನ ಇನಾಂ ಕಮಿಷನರ್ ಆಗಿದ್ದ ಡಬ್ಲ್ಯೂ.ಜೆ. ಬ್ಲೇರ್ ಅವರು ಜೂನ್ 20, 1866ರಂದು ದೃಢಪಡಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದ ಇತರ ಕಾಲಂಗಳಲ್ಲಿ, ಈ ಇನಾಂ ಅನ್ನು ಮೊದಲು ಟಿಪ್ಪು ಸುಲ್ತಾನನು 1776-77ರಲ್ಲಿ ನೀಡಿದನೆಂದು ಉಲ್ಲೇಖಿಸಲಾಗಿದೆ ಮತ್ತಿದನ್ನು ಮಲಬಾರಿನ ಬ್ರಿಟಿಷ್ ಆಡಳಿತವು ದೃಢೀಕರಿಸಿದೆ. ಮೈಸೂರು ಅರಮನೆಯಲ್ಲಿನ ಬ್ರಾಹ್ಮಣ ಆಡಳಿತ ಗುಮಾಸ್ತರು ಮೋಡಿ ಲಿಪಿಯಲ್ಲಿ (ಇಂದು ಮರಾಠಿಯನ್ನು ಬರೆಯಲು ಬಳಸಲಾಗುವ ದೇವನಾಗರಿ ಲಿಪಿಗೂ ಮುನ್ನ ಬಳಕೆಯಲ್ಲಿದ್ದ ಲಿಪಿಯನ್ನು) ಸಿದ್ಧಪಡಿಸಿದ್ದ ಪ್ರಪ್ರಥಮ “ಪೈಮಾಶ್” (ಸಮೀಕ್ಷೆ) ಭೂ ಕಂದಾಯ ದಾಖಲೆಗಳನ್ನು ಆಧರಿಸಿ ಈ ಸಂಗತಿಯನ್ನು ಬ್ರಿಟಿಷರು ದೃಢೀಕರಿಸಿದ್ದಾರೆ.

ಈ ಪತ್ರಾಗಾರದಲ್ಲಿ (ಆರ್ಕೈವ್) ಸುಮಾರು 500 ಬಂಡಲ್ಲುಗಳಿದ್ದು ಪ್ರತಿಯೊಂದೂ ಸುಮಾರು 100 ಪುಟಗಳನ್ನು ಹೊಂದಿದೆ. ಪುಟಗಳು ಅಲ್ಲಲ್ಲಿ ಹರಿದುಹೋಗಿದ್ದರೂ ಅದರಲ್ಲಿನ ಮಾಹಿತಿಯನ್ನು ಓದಬಹುದಾಗಿದೆ. ಮಲಬಾರಿನಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರು ನಡೆಸಿದ, ಕೇರಳದ ಸಮಾಜದ ಮೇಲೆ ಅಪಾರ ಮತ್ತು ದೀರ್ಘಾವಧಿ ಪರಿಣಾಮ ಬೀರಿದಂತಹ, ಭೂಸುಧಾರಣೆಗಳಲ್ಲಿ ಬಗ್ಗೆ ಆಸಕ್ತಿ ಹೊಂದಿರುವ ಇತಿಹಾಸಕಾರರಿಗೆ ಮೋಡಿ ಲಿಪಿಯಲ್ಲಿರುವ ಈ ದಾಖಲೆಗಳು ಚಿನ್ನದ ಗಣಿಯೇ ಸರಿ.

ಟಿಪ್ಪುವಿನ ಲೆಗಸಿಯು ತೀವ್ರತರವಾದ ಚರ್ಚೆಗೆ ಒಳಗಾಗುತ್ತಿರುವ ಈ ಕಾಲದಲ್ಲಿ, ಹಲವಾರು ದೇವಾಲಯಗಳಿಗೆ ಗಣನೀಯ ಪ್ರಮಾಣದಲ್ಲಿ ಟಿಪ್ಪು ನೀಡಿದ ಭೂದಾನಗಳ ವಿವರಗಳನ್ನು ಹೊಂದಿರುವ ಈ ಇನಾಂ ದಾಖಲೆಗಳು ಇನ್ನಷ್ಟೂ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ. ಟಿಪ್ಪು ಒಬ್ಬ ಧಾರ್ಮಿಕ ಮತಾಂಧನಾಗಿದ್ದನೆಂದೂ, ಆತ ಹಿಂದೂಗಳನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸುವ ಮತ್ತು ಹಿಂದೂಗಳ ದೇವಾಲಯಗಳನ್ನು ಧ್ವಂಸಗೊಳಿಸುವ ಮೂಲಕ ತನ್ನ ರಾಜ್ಯವನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದನೆಂದು ಆರೋಪಿಸುವ ಹಿಂದುತ್ವ ಪ್ರಚಾರದ ಹುಸಿತನವನ್ನು ಬಿಚ್ಚಿಡಲು ಈ ದಾಖಲೆಗಳು ಅತ್ಯಂತ ಅಮೂಲ್ಯವಾದ ಪುರಾವೆಗಳಾಗಿವೆ.

ಇದನ್ನೂ ಓದಿ: ಮೈಸೂರು ರಾಕೆಟ್‌ಗಳ ಉತ್ಖನನ; ಆಸಕ್ತಿ ಕೆರಳಿಸುವ ಇತಿಹಾಸ

ಮುಹಮ್ಮದ್ ಇಸ್ಮಾಯಿಲ್ ಅವರ ಅಂದಾಜಿನ ಪ್ರಕಾರ ಟಿಪ್ಪು ಸುಲ್ತಾನ 6921.03 ಎಕರೆ ಭೂಮಿಯನ್ನು ಇನಾಂ ಆಗಿ ನೀಡಿದ್ದು ಮಾತ್ರವಲ್ಲ, ಇದರಲ್ಲಿ 5434.07 ಎಕರೆ ಭೂಮಿಯನ್ನು ಹಿಂದೂಗಳಿಗೆ ಮತ್ತು ಹಿಂದೂ ಸಂಸ್ಥೆಗಳಿಗೆ ನೀಡಿದ್ದ. 1494.27 ಎಕರೆ ಭೂಮಿಯನ್ನು ಮುಸ್ಲಿಮರು ಮತ್ತು ಮುಸಲ್ಮಾನ ಸಂಸ್ಥೆಗಳಿಗೆ ನೀಡಲಾಗಿತ್ತು. ಇದರ ವಿವರಗಳು ಮುಹಮ್ಮದ್ ಇಸ್ಮಾಯಿಲ್ ಅವರ ಅಪ್ರಕಟಿತ ಪಿ.ಹೆಚ್.ಡಿ ಪ್ರಬಂಧದಲ್ಲಿ ಲಭ್ಯವಿದೆ. (“Religious Policy of Tipu Sultan: Malabar Region”, Unpublished Doctoral Thesis, 2016).

ಈ ಅನುದಾನಗಳನ್ನು ಮೂರು ವಿಧಗಳಲ್ಲಿ ನೀಡಲಾಗಿದೆ: ’48 ದೇವಾಲಯಗಳಿಗೆ ದೇವದಯಂ ಅನುದಾನವನ್ನೂ, 7 “ಸತ್ರಂ”ಗಳಿಗೆ ಧರ್ಮದಯಂ ಅನುದಾನವನ್ನೂ ಹಾಗೂ 3 ವ್ಯಕ್ತಿಗಳಿಗೆ ಅನುದಾನವನ್ನು ನೀಡಲಾಗಿತ್ತು. ಸ್ಥಳೀಯರಾದ ’ಮಾಪಿಳ್ಳ’ ಮುಸ್ಲಿಂಮರೇ ಮಲಬಾರಿನ ಜನಸಂಖ್ಯೆಯ ಕಾಲು ಭಾಗದಷ್ಟಿದ್ದರು ಎಂಬುದನ್ನು ಪರಿಗಣಿಸಿದರೆ, ಟಿಪ್ಪುವನ್ನು “ಧಾರ್ಮಿಕ ಮತಾಂಧ”ನೆಂದು ಜರಿಯುವುದು ಆಶ್ಚರ್ಯಕರವಾಗಿದೆ. ಈ ಭೂದಾನಗಳನ್ನು ಅರ್ಥೈಸಿ ಒಟ್ಟಿನಲ್ಲಿ ಏನನ್ನಾದರೂ ವಾದಿಸಬೇಕಿದ್ದರೆ, ಟಿಪ್ಪು ತನ್ನ ಸಾಮ್ರಾಜ್ಯದ ಇತರ ಪ್ರದೇಶಗಳಂತೆ ಮಲಬಾರಿನಲ್ಲಿಯೂ ಹಿಂದೂಗಳ ಧಾರ್ಮಿಕ ಸಂವೇದನೆಗಳ ಬಗೆಗೆ ಬಹಳ ಸಂವೇದನಾಶೀಲ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದನು ಎಂದೇ ಹೇಳಬೇಕು. ಟಿಪ್ಪು ಮಲಬಾರಿನಲ್ಲಿ ತನ್ನ ಅಸ್ಮಿತೆಯನ್ನು ದೀರ್ಘಕಾಲದವರೆಗೂ ನೆಲೆಯೂರುವಂತೆ ಸ್ಥಾಪಿಸಿಕೊಳ್ಳಲು ಬಯಸಿದ್ದನು. ಈ ಸೂಕ್ಷ್ಮತೆಯು ದೇವಾಲಯಗಳಿಗೆ ಅವನು ಒದಗಿಸುತ್ತಿದ್ದ ಬೆಂಬಲದಲ್ಲಿ ಸ್ಪಷ್ಟವಾಗುತ್ತದೆ.

ಮೈಸೂರಿನ ಮಧ್ಯಪ್ರವೇಶ

18ನೇ ಶತಮಾನದ ಅಂತ್ಯವು ಭಾರತೀಯ ಇತಿಹಾಸದಲ್ಲಿ ಪರಿವರ್ತನೆಯ ಕಾಲವಾಗಿದೆ. ಮೊಘಲರ ಆಡಳಿತವು ಅವನತಿಯ ಹಾದಿ ಹಿಡಿದಿತ್ತು ಮತ್ತು 1757ರ ಪ್ಲಾಸಿ ಕದನದ ನಂತರದಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಭಾರತದ ವ್ಯವಹಾರಗಳಲ್ಲಿ ಪ್ರಮುಖ ಪಾತ್ರವಹಿಸತೊಡಗಿತ್ತು. ಅಷ್ಟರಲ್ಲಾಗಲೇ ಮರಾಠರು ಕೂಡ ತಮ್ಮ ಅಧಿಕಾರವನ್ನು ಸ್ಥಾಪಿಸಿಕೊಂಡಿದ್ದರು. ದಕ್ಷಿಣ ಭಾರತದಲ್ಲಿ, ಹಲವರು ತಮ್ಮ ರಾಜ್ಯಗಳನ್ನು ವಿಸ್ತರಿಸಿಕೊಳ್ಳಲು ಸೆಣೆಸುತ್ತಿದ್ದರು. ಮೈಸೂರು ಸೈನ್ಯದಲ್ಲಿ ಫೌಜ್ದಾರ್ (ಮಿಲಿಟರಿ ಕಮಾಂಡರ್) ಆಗಿದ್ದಂತಹ ಹೈದರ್ ಅಲಿ 1761ರಲ್ಲಿ ಮೈಸೂರಿನ ಆಡಳಿತಗಾರನಾದನು. ಹೈದರ್ ಅಲಿಯ ರಾಜ್ಯಕ್ಕೆ ಮರಾಠರು, ಹೈದರಾಬಾದಿನ ನಿಜಾಮರು, ಕರ್ನಾಟಕದ ನವಾಬರು ಹಾಗೂ ಈಸ್ಟ್ ಇಂಡಿಯಾ ಕಂಪನಿಯ ಆಶ್ರಯದಲ್ಲಿದ್ದ ಆಂಗ್ಲರೆಲ್ಲರೂ ತಲೆನೋವಾಗಿ ಪರಿಣಮಿಸಿದರು. ಫ್ರೆಂಚರು ಸಹ ಆ ಕಾಲದ ಪ್ರಮುಖ ಬಲವಾಗಿದ್ದರು ಎಂಬುದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

ಆ ಸಮಯದಲ್ಲಿ ಕೇರಳದ ಉತ್ತರ ಭಾಗಗಳು ಹಲವಾರು ಸಣ್ಣ ಸಂಸ್ಥಾನಗಳಾಗಿ ವಿಭಜಿಸಲ್ಪಟ್ಟಿತು. ಒಂದು ಅಂದಾಜಿನ ಪ್ರಕಾರ ಕೇರಳದಾದ್ಯಂತ ನಾಲ್ಕು ಪ್ರಮುಖ ರಾಜ್ಯಗಳು ಹಾಗೂ 42 ಸಂಸ್ಥಾನಗಳಿದ್ದವು. ಹೈದರ್ ಅಲಿಯು 1766ರ ಫೆಬ್ರವರಿಯಲ್ಲಿ ಮಂಗಳೂರು ಮತ್ತು ಕನ್ನನೂರ್ (ಈಗ ಕಣ್ಣೂರು) ಮೂಲಕ ಮಲಬಾರಿನ ಮೇಲೆ ದಂಡೆತ್ತಿ ಬಂದನು. ಹೈದರನು ದಿಂಡುಗಲ್‌ನಲ್ಲಿದ್ದ ಕಾಲದಿಂದಲೂ ಮಲಬಾರಿನ ರಾಜಕೀಯದಲ್ಲಿ ಪರೋಕ್ಷವಾಗಿ ತೊಡಗಿಸಿಕೊಂಡಿದ್ದನು. ಲಾಭದಾಯಕವಾಗಿದ್ದ ಮಸಾಲೆಗಳ ವಹಿವಾಟಿನಲ್ಲಿ ಪಾಲು ಹೊಂದಲು ಮತ್ತು ಕರಾವಳಿಯ ಪ್ರದೇಶದ ಮೇಲೆ ತನ್ನ ಹಿಡಿತ ಸಾಧಿಸಲು ಬಯಸುತ್ತಿದ್ದ ಹೈದರನಿಗೆ, ಕ್ಯಾಲಿಕಟ್‌ನ (ಈಗಿನ ಕೋಳಿಕ್ಕೋಡಿನ) ಝಮೋರಿನ್ನೊರೊಂದಿಗೆ ನಿರಂತರ ವೈರತ್ವವನ್ನು ಹೊಂದಿದ್ದ ಪಾಲ್ಘಾಟಿನ (ಈಗಿನ ಪಾಲಕ್ಕಾಡ್) ರಾಜನು ಹೈದರನಲ್ಲಿ ಸಹಾಯಕ್ಕಾಗಿ ಬೇಡಿದಾಗ, ಮಲಬಾರಿನತ್ತ ಧಾವಿಸಲು ಕಾರಣವೊಂದು ಸಿಕ್ಕಂತಾಯಿತು. ಇಂದಿನ ಆಧುನಿಕ ಪಟ್ಟಣವು ಬೆಳೆದಿರುವ ಪಾಲಕ್ಕಾಡ್‌ನಲ್ಲಿರುವ ಅವರ ಕೋಟೆಯೂ ಕೂಡ ಈ ಕಾಲಕ್ಕೆ ಸೇರಿದ್ದಾಗಿದೆ. ಆ ಸಮಯದಲ್ಲಿ ಹದಿಹರೆಯದವನಾಗಿದ್ದ ಹೈದರನ ಹಿರಿಯ ಮಗ ಟಿಪ್ಪು ಸುಲ್ತಾನನು ಕೂಡ ತನ್ನ ತಂದೆಯ ಜೊತೆಗೂಡಿದನು.

ತನ್ನ ಆಕ್ರಮಣದಲ್ಲಿ ಜಯಸಾಧಿಸಿದ ಹೈದರ್ ಅಲಿಯು ಮಲಬಾರಿನ ಸಣ್ಣಸಣ್ಣ ಸಂಸ್ಥಾನಗಳನ್ನು ಶೀಘ್ರವೆ ವಶಪಡಿಸಿಕೊಂಡನು. ಸೋಲುಂಡ ಪರಿಣಾಮವಾಗಿ ಕಪ್ಪ ಕಾಣಿಕೆಗಳನ್ನು ಸಲ್ಲಿಸಬೇಕಿದ್ದ ಕ್ಯಾಲಿಕಟ್‌ನ ಝಮೋರಿನನು ಆತ್ಮಹತ್ಯೆಗೆ ಶರಣಾದ. ಮಲಬಾರಿನ ಆಡಳಿತಗಾರರ ನಡುವಿನ ಐಕ್ಯತೆಯ ಕೊರತೆ ಮತ್ತು ಅಶ್ವಸೈನ್ಯದ ನೇತೃತ್ವದಲ್ಲಿ ಬಹಳ ಶಿಸ್ತಿನಿಂದ ಮುಂದಡಿಯಿಡುತ್ತಿದ್ದ ಮೈಸೂರು ಸೈನ್ಯದ ಕಾರಣಕ್ಕೆ ಹೈದರ ಅನಾಯಾಸ ಗೆಲುವುಗಳನ್ನು ಸಾಧಿಸಿದ. ಕೊಚ್ಚಿನ್ ಮೂಲಕ ದಕ್ಷಿಣದ ಟ್ರಾವಂಕೂರಿನತ್ತ ಸಾಗಲು ಉದ್ದೇಶಿಸಲಾಗಿತ್ತಾದರೂ ಮಳೆಗಾಲವು ಹೈದರನ ಯೋಜನೆಗಳಿಗೆ ತಡೆಯೊಡ್ಡಿತು. ಮಾದಣ್ಣ ಎಂಬ ರಾಜ್ಯಪಾಲಕನನ್ನು ನೇಮಿಸಿ ಸ್ಥಳೀಯ ಮುಖಂಡರುಗಳು ಸಲ್ಲಿಸಬೇಕಾದ ಕಪ್ಪದ ಮೊತ್ತವನ್ನು ನಿಗದಿಪಡಿಸಿದ ನಂತರ ಹೈದರನು ಹಿಂತಿರುಗಿದನು. ಇದಾದ ನಂತರದಲ್ಲಿ, ಮಲಬಾರಿನಲ್ಲಿ ಹೈದರ್ ಅಲಿಯ ಔಟ್‌ಪೋಸ್ಟುಗಳನ್ನು ನಾಯರ್‌ಗಳು ನೇತೃತ್ವ ವಹಿಸಿದ್ದ ಕೇರಳ ರಾಜರ ಸೈನ್ಯದ ದಂಗೆಯು ಕೆಡವಿಹಾಕುವ ಬೆದರಿಕೆಯನ್ನು ಒಡ್ಡಿತು.

ಈ ದಂಗೆಯನ್ನು ಕೆಲವು ಇತಿಹಾಸಕಾರರು ವಿದೇಶಿ ದೊರೆಯೊಬ್ಬನಿಗೆ ಒಡ್ಡಲಾದ ಸ್ಥಳೀಯರ ಪ್ರತಿರೋಧವಾಗಿ ಅರ್ಥೈಸುತ್ತಾರೆ. ಈ ದಂಗೆಯನ್ನು ಶಮನಗೊಳಿಸಲು ಹೈದರ್ ಅಲಿಗೆ ಸಾಧ್ಯವಾಯಿತಾದರೂ, ನಾಯರ್‌ಗಳಿಗೆ ನೀಡುತ್ತಿದ್ದ ಸವಲತ್ತುಗಳನ್ನು ಅವನು ಹಿಂತೆಗೆದುಕೊಳ್ಳುವಂತೆ ಪ್ರೇರೇಪಿಸಿತು. ಹೈದರ್ ಅಲಿಯು ಮಲಬಾರನ್ನು ಆಕ್ರಮಿಸಿದ ಸಂದರ್ಭದಲ್ಲಿ ನಂಬೂದಿರಿಗಳು, ನಾಯರ್‌ಗಳು ಮತ್ತು ಪಾಳೆಗಾರರೂ ಸೇರಿದಂತೆ ಅನೇಕ ಮೇಲ್ಜಾತಿ ಹಿಂದೂಗಳು ತಿರುವಾಂಕೂರಿನಿಂದ ಬೇರೆಡೆಗೆ ಓಡಿ ವಲಸೆ ಹೋದರು.

ಇದನ್ನೂ ಓದಿ: ಪರಂಪರೆಗೆ ಕಣ್ಕಟ್ಟುವ ಹುನ್ನಾರ; ಟಿಪ್ಪು ಪ್ರಾಮುಖ್ಯತೆಯ ಹಲವು ಆಯಾಮಗಳು

ಮುಂದಿನ ಕೆಲವು ವರ್ಷಗಳ ಕಾಲ ಹೈದರ್ ಅಲಿಯು ದಾಳಿಯಿಡುತ್ತಿದ್ದ ಮರಾಠರನ್ನು ನಿಯಂತ್ರಿಸಲು ಮತ್ತು 1767ರಿಂದ 1769ರ ನಡುವೆ ನಡೆದ ಮೊದಲ ಆಂಗ್ಲೋ-ಮೈಸೂರು ಯುದ್ಧವನ್ನು ಸೆಣೆಸುತ್ತಿದ್ದ ಕಾರಣ, ಪುನಃ ಅವನು ಮಲಬಾರಿನತ್ತ ಗಮನ ಹರಿಸಿದ್ದು 1773ರ ಕೊನೆಯಲ್ಲಿ. ಈ ಬಾರಿ, ಸಲ್ಲಿಸಬೇಕಿದ್ದ ಕಪ್ಪವನ್ನು ಸರಿಯಾಗಿ ಪಾವತಿಸದ ಅನೇಕ ಪಾಳೆಗಾರರನ್ನು ತೆಗೆದುಹಾಕಲಾಯಿತು ಮತ್ತು ಮಲಬಾರನ್ನು ನೇರವಾಗಿ ಮೈಸೂರು ಸಾಮ್ರಾಜ್ಯದ ಆಡಳಿತಕ್ಕೆ ಒಳಪಡಿಸಲಾಯಿತು. ತಿರುವಾಂಕೂರಿನ ಮೇಲೆ ದಾಳಿ ನಡೆಸುವ ಹೈದರನ ಯೋಜನೆಯು ಈ ಬಾರಿಯೂ ಕೈಗೂಡಲಿಲ್ಲ. ಅಂದು ನಾಗರಿಕ ವ್ಯವಹಾರಗಳ ಉಸ್ತುವಾರಿ ವಹಿಸಿದ್ದ ರಾಜ್ಯಪಾಲರಾದ ಶ್ರೀನಿವಾಸ್ ರಾವ್ ಅವರು ಸವಿಸ್ಥಾರವಾಗಿ ಭೂ ಸಮೀಕ್ಷೆಯನ್ನು ನಡೆಸಿದರು. ಕೋಳಿಕ್ಕೋಡಿನ ಪ್ರಾದೇಶಿಕ ಪತ್ರಾಗಾರದಲ್ಲಿ ಕಾಣಸಿಗುವ ಭೂ ದಾಖಲೆಗಳು ಈ ಕಾಲದವು.

ಹೈದರ್ ಮಲಬಾರಿಗೆ ಬಂದಾಗ, ಈಸ್ಟ್ ಇಂಡಿಯಾ ಕಂಪನಿಯ ನೇತೃತ್ವದಲ್ಲಿ ಇಂಗ್ಲಿಷ್, ಡಚ್, ಫ್ರೆಂಚ್, ಪೋರ್ಚುಗೀಸ್ ಮತ್ತು ಡೇನ್ಸ್ ಸೇರಿದಂತೆ ಹಲವು ಯುರೋಪಿಯನ್ನರು ಅದಾಗಲೇ ಕರಾವಳಿಯೆಲ್ಲೆಡೆ ವ್ಯಾಪಾರ ಔಟ್‌ಪೋಸ್ಟುಗಳನ್ನು ಹೊಂದಿದ್ದರಿಂದ ಸ್ಥಳೀಯ ವ್ಯವಹಾರಗಳಲ್ಲಿ ಆಳವಾಗಿ ಬೇರೂರಿದ್ದರು. ಅವರಲ್ಲಿ, ಇಂಗ್ಲಿಷ್ ಮತ್ತು ಫ್ರೆಂಚರು ಟೆಲ್ಲಿಚೆರಿ (ಈಗ ಥಲಸೆರಿ) ಮತ್ತು ಮಾಹೆಯಲ್ಲಿನ ತಮ್ಮ ನೆಲೆಗಳಿಂದ ದೊಡ್ಡ ಮೊತ್ತದ ವ್ಯಾಪಾರ ನಡೆಸಲು ಯತ್ನಿಸುತ್ತಿದ್ದರು. ಎರಡನೇ ಆಂಗ್ಲೋ-ಮೈಸೂರು ಯುದ್ಧದ ಸಂದರ್ಭದಲ್ಲಿ (1780-84), ಟಿಪ್ಪು ಮಲಬಾರಿನಲ್ಲಿ ಇಂಗ್ಲಿಷರ ವಿರುದ್ಧ ಸೆಣೆಸುತ್ತಿದ್ದನು. ಹೈದರ್‌ನ ಸಾವಿನ ಸುದ್ದಿಯು ಟಿಪ್ಪುವನ್ನು ತಲುಪುವ ಹೊತ್ತಿಗೆ ಅವನ ಗೆಲುವು ಸನ್ನಿಹಿತವಾಗಿತ್ತು. ತಂದೆಯ ಸಾವಿನ ಸುದ್ದಿಯನ್ನು ಕೇಳಿ ಟಿಪ್ಪು ತಕ್ಷಣವೇ ಸೆರಿಂಗಪಟ್ಟಣಕ್ಕೆ (ಈಗಿನ ಶ್ರೀರಂಗಪಟ್ಟಣ) ಹಿಂದಿರುಗಿದನು. ಆದರೂ 1784ರ ಮಂಗಳೂರು ಒಪ್ಪಂದದ ಅಡಿಯಲ್ಲಿ ಮಲಬಾರಿನ ಪ್ರದೇಶವು ಟಿಪ್ಪುವಿನ ಆಡಳಿತಕ್ಕೆ ಒಳಪಟ್ಟಿತು. 1792ರಲ್ಲಿ ನಡೆದ ಮೂರನೇ ಆಂಗ್ಲೋ-ಮೈಸೂರು ಯುದ್ಧದ ಅಂತ್ಯದವರೆಗೂ ಮಲಬಾರ್ ಟಿಪ್ಪುವಿನ ರಾಜ್ಯದ ಭಾಗವಾಗಿತ್ತಾದರೂ 1790ರ ವೇಳೆಗೆ ಅವನು ಆ ಪ್ರಾಂತ್ಯದ ಮೇಲಿನ ಹಿಡಿತವನ್ನು ಕಳೆದುಕೊಂಡಿದ್ದನು. ಅಂತಿಮವಾಗಿ ಇದು ಮಲಬಾರ್ ಜಿಲ್ಲೆಯಾಗಿ ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಯಿತು.

ಮೈಸೂರಿನ ಆಡಳಿತದ ಪ್ರಭಾವ

“ಮೈಸೂರಿನ ಆಡಳಿತಕ್ಕೆ ಕೇರಳವು 25 ವರ್ಷಗಳಿಗಿಂತಲೂ ಹೆಚ್ಚು ಕಾಲ ಒಳಪಟ್ಟಿತು. ಈ ಕಾಲವೆ ಮಧ್ಯಯುಗದಿಂದ ಆಧುನಿಕತೆಗೆ ತೆರೆದುಕೊಂಡ ಕಾಲವಾಗಿತ್ತು ಎಂಬುದರಲ್ಲಿ ಅದರ ಪ್ರಾಮುಖ್ಯತೆಯಡಗಿದೆ” ಎಂದು ಸಿ.ಕೆ. ಕರೀಂ ಅವರು ತಮ್ಮ ‘Kerala Under Haidar Ali and Tipu Sulan’ (ಹೈದರ್ ಅಲಿ ಮತ್ತು ಟಿಪ್ಪು ಆಳ್ವಿಕೆಯಲ್ಲಿ ಕೇರಳ, 1973) ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಮಲಬಾರ್ ಪ್ರದೇಶವು ಅಧಿಕೃತವಾಗಿ 1766 ಮತ್ತು 1792ರ ನಡುವೆ ಮೈಸೂರಿನ ಭಾಗವಾಗಿದ್ದರೂ, ಹಲವು ವರ್ಷಗಳವರೆಗೆ ಮೈಸೂರಿನ ಅರಸರು ಸೀಮಿತ ನಿಯಂತ್ರಣವನ್ನು ಹೊಂದಿದ್ದರು. ಈ ಪ್ರದೇಶವನ್ನು ಟಿಪ್ಪು ನೇರವಾಗಿ ಆಳಿದ್ದು ಆರು ವರ್ಷಗಳ ಕಾಲ ಮಾತ್ರ. ಅವನು ಈ ಪ್ರದೇಶವನ್ನು ತೀರಾ ಕಡಿಮೆ ಎನ್ನುವಷ್ಟು ಅವಧಿಗೆ ಮಾತ್ರ ಆಳಿದರೂ ಇದು ಮಲಬಾರ್ ಸಮಾಜದ ಮೇಲೆ ದೀರ್ಘಾವಧಿಯ ಪ್ರಭಾವವನ್ನು ಬೀರಿತು. ಮಲಬಾರಿನ ಸಣ್ಣ ಸಂಸ್ಥಾನಗಳನ್ನು ಮೊದಲಬಾರಿಗೆ ಏಕೀಕರಿಸಿದ ಹೈದರ್ ಮತ್ತು ಟಿಪ್ಪು ಊಳಿಗಮಾನ್ಯ ಆಡಳಿತ ವ್ಯವಸ್ಥೆಯನ್ನು ರದ್ದುಗೊಳಿಸಿ ತಿರುವಾಂಕೂರಿನಂತೆಯೇ ಕೇಂದ್ರೀಕೃತ ವ್ಯವಸ್ಥೆಗೆ ಒಳಪಡಿಸಿದರು. ಈ ಪ್ರದೇಶಗಳಲ್ಲಿ ಮೊದಲ ಬಾರಿಗೆ ರಸ್ತೆಗಳನ್ನು ನಿರ್ಮಿಸಲಾಯಿತು ಮತ್ತು ವ್ಯಾಪಾರ-ಉದ್ಯಮವು ಬೆಳೆಯತೊಡಗಿತು. ಟಿಪ್ಪು ಮೆಣಸು ಸೇರಿದಂತೆ ಹಲವಾರು ವಸ್ತುಗಳ ವ್ಯವಹಾರಗಳಲ್ಲಿ ರಾಜ್ಯದ ಏಕಸ್ವಾಮ್ಯವನ್ನು ಹೇರಿದ್ದರಿಂದ ಮಲಬಾರಿನ ಪಾಳೆಗಾರರೊಂದಿಗಿನ ತಮ್ಮ ವ್ಯವಹಾರದಿಂದ ಹೆಚ್ಚು ಲಾಭಗಳಿಸುತ್ತಿದ್ದ ಯುರೋಪಿನ ವ್ಯಾಪಾರಿಗಳು ನಷ್ಟ ಅನುಭವಿಸಬೇಕಾಯಿತು. ಇಲ್ಲಿ ಟಿಪ್ಪು ನೌಕಾಪಡೆಯೊಂದನ್ನು ಸ್ಥಾಪಿಸಿ ಕನ್ನನೂರಿನ ದೊರೆಯನ್ನು ಅದರ ಮುಖ್ಯಸ್ಥನನ್ನಾಗಿ ನೇಮಿಸಿದರು.

ಬಹುಶಃ ಹೈದರ್ ಮತ್ತು ಟಿಪ್ಪು ಅತೀ ಹೆಚ್ಚು ಪ್ರಭಾವ ಬೀರಿದ್ದು ಭೂ ಆಡಳಿತದ (Land Administration) ಕ್ಷೇತ್ರದಲ್ಲಿ. ಈ ಪ್ರದೇಶದಲ್ಲಿ ಪ್ರಬಲ ಜಾತಿಗಳ ಸ್ಥಾನ ಪಲ್ಲಟಗೊಂಡದನ್ನು ಸಹ ನಾವು ಕಾಣಬಹುದಾಗಿದೆ. ಇದರಿಂದಾಗಿ ಟಿಪ್ಪು ಒಬ್ಬ ಧಾರ್ಮಿಕ ಮತಾಂಧನೆಂಬ ಆರೋಪಗಳು ಹಟ್ಟು ಪೆಡೆಯಿತು. ಈ ಪ್ರದೇಶವು ಮೈಸೂರಿನ ಆಡಳಿತಕ್ಕೆ ಒಳಪಡುವ ಮೊದಲು ಭೂಕಂದಾಯ ವ್ಯವಸ್ಥೆಯಿರಲಿಲ್ಲ ಎಂದು ಇತಿಹಾಸಕಾರರು ಉಲ್ಲೇಖಿಸುತ್ತಾರೆ. ಭೂಮಿಯ ಮೇಲಿನ ಸಂಪೂರ್ಣ ಒಡೆತನವನ್ನು ’ಜೆನ್ಮಿಸ್’ (ಭೂಮಿಯ ಒಡೆಯರಾಗಿದ್ದ ಶ್ರೀಮಂತರು ಅಥವಾ Landed Aristocracy)ಗಳು ಹೊಂದಿದ್ದರೆ, ಉಳುವವರು ಯಾವುದೇ ಹಕ್ಕುಗಳನ್ನು ಹೊಂದಿರಲಿಲ್ಲ. ಮೈಸೂರು ಅರಸರು ಭೂ ಕಂದಾಯದ ವಿಚಾರವಾಗಿ ನೇರವಾಗಿ ಉಳುವವರೊಂದಿಗೆ ವ್ಯವಹರಿಸಲು ಪ್ರಾರಂಭಿಸುವ ಮೂಲಕ ಹಳೆಯ ವ್ಯವಸ್ಥೆಯನ್ನು ಬುಡಮೇಲು ಮಾಡಿದರು. ಈ ರೀತಿಯಾಗಿ, ಹೈದರ್ ಮತ್ತು ಟಿಪ್ಪುವನ್ನು ಪ್ರಪ್ರಥಮ ಭೂ ಸುಧಾರಕರನ್ನಾಗಿ ಕಾಣಬಹುದು. ಇವರು ದೇವಾಲಯಗಳು ಹೊಂದದ್ದ ಭೂಮಿಯ ಮೇಲೆ ತೆರಿಗೆಯನ್ನೂ ವಿಧಿಸಲಿಲ್ಲ. ಭೂಮಾಲೀಕರಾಗಿದ್ದ ನಂಬೂದರಿಗಳು, ಪಾಳೆಗಾರರು ಮತ್ತು ನಾಯರ್‌ಗಳು ಮಲಬಾರಿನಿಂದ ತಿರುವಾಂಕೂರಿಗೆ ಓಡಿಹೋಗಿದ್ದ ಕಾರಣ ಭೂಮಿಯ ವಿಚಾರವಾಗಿ ಒಪ್ಪಂದಗಳು ಸುಲಭ ಸಾಧ್ಯವಾದವು. ಉಳುವವರಲ್ಲಿ ಮಾಪ್ಪಿಳರು ಮತ್ತು ಕೆಳಜಾತಿಯ ಹಿಂದೂಗಳೆ ಹೆಚ್ಚಾಗಿದ್ದ ಕಾರಣ, ಅವರೇ ಭೂ ವ್ಯವಸ್ಥೆ ಸುಧಾರಣೆಯಿಂದಾಗಿ ಹೆಚ್ಚು ಲಾಭ ಪಡೆದರು.

ಟಿಪ್ಪು ತನ್ನನ್ನು ತಾನು ಸಮಾಜ ಸುಧಾರಕನೆಂದು ಪರಿಗಣಿಸಿದ್ದ ಮಾತ್ರವಲ್ಲ, ಅವನು ನಾಯರ್ ಸಮುದಾಯದಲ್ಲಿ ಕಾಣಬಹುದಾಗಿದ್ದ ಕೆಲವು ಸಾಂಪ್ರದಾಯಿಕ ಸಂಗತಿಗಳನ್ನು ಬದಲಾಯಿಸಲು ಪ್ರಯತ್ನಿಸಿದ. ಉದಾಹರಣೆಗೆ, ನಾಯರ್ ಮಹಿಳೆಯರು ಹಲವಾರು ಪುರುಷರೊಂದಿಗೆ ಸಂಬಂಧ ಇರಿಸಿದ್ದರು ಎಂದು ತಿಳಿದು ದಿಗಿಲುಗೊಂಡಿದ್ದನು. ಕೆಳಜಾತಿಯ ಹೆಂಗಸರು ತಮ್ಮ ಎದೆಗಳನ್ನೂ ಸಹ ಮುಚ್ಚಿಕೊಳ್ಳುವಂತಿಲ್ಲ ಎಂಬುದು ಅವನಲ್ಲಿ ಅಸಹ್ಯ ಭಾವ ಉಂಟುಮಾಡಿತು. ಟಿಪ್ಪು ಈ ಆಚರಣೆಗಳನ್ನು ನಿಷೇಧಿಸಿದ. ಇದಕ್ಕಾಗಿ ನಾಯರ್‌ಗಳು ಅಸಮಾಧಾನಗೊಂಡರು ಮಾತ್ರವಲ್ಲ, ಇದು ಅವರ ಧಾರ್ಮಿಕ ಮತ್ತು ಸಾಮಾಜಿಕ ಹಕ್ಕುಗಳ ಮೇಲಿನ ದಾಳಿಯೆಂದು ಬಗೆದರು.

ಮಲಬಾರಿನ ಜನಸಂಖ್ಯೆಯಲ್ಲಿ ನಾಯರ್‌ಗಳು ಮತ್ತು ನಂಬೂದರಿಗಳು ಐದನೇ ಒಂದು ಭಾಗದಷ್ಟಿದ್ದರು. ಈ ಎರಡು ಸಮುದಾಯಗಳ ಜಾತಿ ಮತ್ತು ವರ್ಗ ಹಿತಾಸಕ್ತಿಗಳನ್ನು ಪಲ್ಲಟಗೊಳಿಸಿದ ಹೈದರ್ ಮತ್ತು ಟಿಪ್ಪುವಿನ ನಡೆಗಳು ಸಾಮಾಜಿಕ ಕ್ರಾಂತಿಗೆ ಕಾರಣವಾಯಿತು. ಟಿಪ್ಪುವಿನ ಕಾಲದಲ್ಲಿ ಅತೀ ಹೆಚ್ಚು ನಷ್ಟ ಅನುಭವಿಸಿದ್ದು ನಂಬೂದರಿಗಳು ಮತ್ತು ನಾಯರ್‌ಗಳು. ಟಿಪ್ಪು ಕೈಗೊಂಡ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಳಿಂದ ಈ ಎರಡು ಜಾತಿಗಳು ತೀವ್ರವಾಗಿ ಬಾಧಿಸಲ್ಪಟ್ಟವು. “ಆದ್ದರಿಂದ, ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗಳೇ ಟಿಪ್ಪು ಸುಲ್ತಾನನ ವಿರುದ್ಧ ಧಾರ್ಮಿಕ ಮತಾಂಧತೆಯ ಆರೋಪಗಳಿಗೆ ದಾರಿಮಾಡಿಕೊಟ್ಟಿತು” ಎಂದು ಕರೀಂ ಉಲ್ಲೇಖಿಸುತ್ತಾರೆ. ಟಿಪ್ಪುವಿನ ಭೂಸುಧಾರಣೆಯ ಮುಖ್ಯ ಫಲಾನುಭವಿಗಳು ಮಾಪಿಳ್ಳರೇ ಆಗಿದ್ದ ಕಾರಣ, ಟಿಪ್ಪು ಕೈಗೊಂಡಿದ್ದ ಭೂಸುಧಾರಣೆ ಮತ್ತು ಸಾಮಾಜಿಕ ಸುಧಾರಣೆಯನ್ನು ಧರ್ಮದ ದೃಷ್ಟಿಕೋನದಲ್ಲಿ ನೋಡುವುದು ಸುಲಭ ಸಾಧ್ಯವಾಯಿತು. ಕೆಲವು ವಿದ್ವಾಂಸರು 1921ರ ಮಾಪಿಳ್ಳ ದಂಗೆಗೂ, ಮೈಸೂರಿನ ಮಧ್ಯಪ್ರವೇಶದ ಹಿನ್ನೆಲೆಯಲ್ಲಿ ಉಂಟಾದ ಸಾಮಾಜಿಕ ಕ್ರಾಂತಿಗೂ ಇದ್ದ ಸಂಬಂಧವನ್ನೂ ಸಹ ಗುರುತಿಸಿದ್ದಾರೆ.

ಸಮಸ್ಯಾತ್ಮಕ ಮೂಲಗಳು

1799ರಲ್ಲಿ ಶ್ರೀರಂಗಪಟ್ಟಣದ ಮೇಲಿನ ಅಂತಿಮ ದಾಳಿಯಲ್ಲಿ ಭಾಗವಹಿಸಿದ್ದ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಯಾಗಿದ್ದ ಮಾರ್ಕ್ ವಿಲ್ಕ್ಸ್ ತನ್ನ ಕೃತಿಯಲ್ಲಿ ನಾಯರ್‌ಗಳು ಟಿಪ್ಪುವಿನ ಆದೇಶವನ್ನು ಮೀರಿ, ಪ್ರತಿಗಾಮಿ ಜಾತಿ ಪದ್ಧತಿಗಳನ್ನು ಅನುಸರಿಸಿದ್ದೇ ಆದಲ್ಲಿ, ಅವರೆಲ್ಲರನ್ನು ಶ್ರೀರಂಗಪಟ್ಟಣಕ್ಕೆ ಎಳೆತಂದು ಇಸ್ಲಾಂಗೆ ಮತಾಂತರಗೊಳಿಸುವುದಾಗಿ ಎಚ್ಚರಿಸಿದ್ದ ಎಂದು ದಾಖಲಿಸಿದ್ದಾರೆ. ಆದರೆ, ವಿಚಿತ್ರವೇನೆಂದರೆ, ಹೈದರ್ ಮತ್ತು ಟಿಪ್ಪುವಿನ ಆಸ್ಥಾನದಲ್ಲಿ ಇತಿಹಾಸಕಾರರಾಗಿದ್ದ, ಇಸ್ಲಾಂ ಪರವಾಗಿ ಬರೆಯುತ್ತಿದ್ದ ಮತ್ತು ಟಿಪ್ಪುವನ್ನು ಇಸ್ಲಾಂಮಿನ ಚಾಂಪಿಯನ್ ಎಂದೇ ಪ್ರಸ್ತುತಪಡಿಸುತ್ತಿದ್ದ ಮಿರ್ ಹುಸೇನ್ ಅಲಿ ಖಾನ್ ಕಿರ್ಮಾನಿ ಅವರ ಬರಹಗಳಲ್ಲಿ ಇದು ಕಂಡುಬರುವುದಿಲ್ಲ. ಮುಂದೆ, ಮಲಬಾರಿನ ಕಲೆಕ್ಟರ್ ಆಗಿದ್ದುಕೊಂಡು ಮಲಬಾರ್ ಮ್ಯಾನುಯಲ್‌ನ ಎರಡು ಸಂಪುಟಗಳನ್ನು 1887ರಲ್ಲಿ ಬರೆದ ವಿಲಿಯಂ ಲೋಗನ್ ತರಹದವರು ಕೂಡ ವಿಲ್ಕ್ಸ್‌ನಂತಹವರು ರಚಿಸಿದ ಆರಂಭಿಕ ಕೃತಿಗಳನ್ನೇ ಆಧರಿಸಿದರು. ಮಲಬಾರಿನಲ್ಲಿ ಟಿಪ್ಪು ಎಸಗಿದ ಎನ್ನಲಾಗುವ ಧಾರ್ಮಿಕ ಹಿಂಸಾಚಾರದ ಆರೋಪಗಳು ಬಂದಿದ್ದು ಇದೇ ಬರಹಗಾರನಿಂದ.

ಹೀಗಾಗಿ, ಮಲಬಾರಿನಲ್ಲಿ ಟಿಪ್ಪುವನ್ನು ಖಳನಾಯಕನನ್ನಾಗಿ ಚಿತ್ರಿಸುವ ವಿವಿಧ ಮೂಲಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಅವುಗಳು ಸಾಮಾನ್ಯವಾಗಿ ಎರಡು ರೀತಿಯದ್ದಾಗಿರುತ್ತವೆ: ಮೊದಲನೆಯದು, ಟಿಪ್ಪುವಿನಲ್ಲಿ ತಮ್ಮ ಪ್ರಬಲ ವಿರೋಧಿಯನ್ನು ಕಂಡ, ಮತ್ತವನ ಧಾರ್ಮಿಕ ನೀತಿಯನ್ನು ಉತ್ಪ್ರೇಕ್ಷೆಗೊಳಿಸಿದ ಬ್ರಿಟಿಷ್ ಬರಹಗಾರರು ಹಾಗೂ ಎರಡನೆಯದಾಗಿ, ಮೈಸೂರು ಆಳ್ವಿಕೆಯ ಅವಧಿಯಲ್ಲಿ ತಮ್ಮ ಸವಲತ್ತುಗಳನ್ನು ಕಳೆದುಕೊಂಡಿದ್ದ ಸ್ಥಳೀಯ ಮೇಲ್ಜಾತಿ ಬರಹಗಾರರು.

ಇದನ್ನೂ ಓದಿ: ಕನ್ನಡ ರಾಷ್ಟ್ರೀಯತೆಯ ಕನಸುಗಾರ ಟಿಪ್ಪು ಸುಲ್ತಾನ್‌…

ಆದರೆ, ಕ್ಯಾಲಿಕಟ್ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಎಂ.ಪಿ. ಮುಜೀಬು ರೆಹಮಾನ್ ಮತ್ತು ಐಐಟಿ ಮಂಡಿಯ ಸಮಾಜ ವಿಜ್ಞಾನ ಮತ್ತು ಮಾನವಿಕ ವಿಭಾಗದಲ್ಲಿ ಪಿ.ಹೆಚ್.ಡಿ ಸಂಶೋಧನಾರ್ಥಿಯಾಗಿರುವ ಅಭಿಲಾಷ್ ಮಲಾಯಿಲ್ ಅವರಂತಹ ಯುವ ಇತಿಹಾಸಕಾರರು ಮಲಬಾರಿನ ಇತಿಹಾಸದಲ್ಲಿ ಮೈಸೂರಿನ ಮಧ್ಯಂತರ ಪ್ರವೇಶವನ್ನು, ಸಮಕಾಲೀನ ರಾಜಕೀಯದಲ್ಲಿ ಕಂಡುಬರುವ ಕೋಮುವಾದಿ ವಾತಾವರಣದ ಹಿನ್ನೆಲೆಯಲ್ಲಿಟ್ಟು ಗಮನಿಸುವುದರ ಬದಲಿಗೆ ಇತಿಹಾಸದ ಭಾಗವಾಗಿ ವಸ್ತುನಿಷ್ಠವಾಗಿ ಮೌಲ್ಯಮಾಪನಕ್ಕೆ ಒಳಪಡಿಸಿದ್ದಾರೆ..

The Other Side of the Story: Tipu Sultan, Colonialism and Resistance in Malabar (2016) (ಟಿಪ್ಪು ಸುಲ್ತಾನ್, ಮಲಬಾರ್‌ನಲ್ಲಿ ವಸಾಹತುಶಾಹಿ ಮತ್ತು ಪ್ರತಿರೋಧ: ಮತ್ತೊಂದು ಮುಖ) ಎಂಬ ತಮ್ಮ ಪುಸ್ತಕದಲ್ಲಿ ರೆಹಮಾನ್ ಅವರು “ಟಿಪ್ಪು ಸುಲ್ತಾನನ ಬಗ್ಗೆ ಸುಳ್ಳು ಚಿತ್ರಣವನ್ನು ವಸಾಹತುಶಾಹಿ ಬರಹಗಾರರು ತೀವ್ರವಾಗಿ ಜನಪ್ರಿಯಗೊಳಿಸಿದ್ದೇ ವಾಸ್ತವವಾಗಿ ’ಧರ್ಮಾಂಧತೆ’ಯಾಗಿದೆ. ಹಿಂದುಗಳ ನಡುವೆ ಬೇರೆ ಯಾವುದೇ ಸ್ಟೀರಿಯೊಟೈಪುಗಳು ಕೂಡ ಧರ್ಮಾಂಧತೆಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಸತ್ಯವನ್ನವರು ಅರಿತಿದ್ದರು. ಆದರೆ, ವಸಾಹತುಶಾಹಿ ಮತ್ತು ರಾಷ್ಟ್ರೀಯತಾವಾದಿ ಇತಿಹಾಸಕಾರರು ಮೈಸೂರಿನ ಮಧ್ಯಪ್ರವೇಶದ ರಾಜಕೀಯ ಅಥವಾ ಆರ್ಥಿಕ ಸಂಗತಿಗಳನ್ನು ಮರೆಮಾಚಿ ಧಾರ್ಮಿಕ ಅಂಶಗಳನ್ನಷ್ಟೇ ಎತ್ತಿ ಹಿಡಿದರು. ಉದಾಹರಣೆಗೆ, ಟಿಪ್ಪು ಮಲಬಾರಿನ ಮೇಲೆ ಆಕ್ರಮಣ ಮಾಡಿದ ಮತ್ತು ನೂರಾರು ಸಾವಿರ ಸ್ಥಳೀಯ ಮುಸ್ಲಿಮೇತರರನ್ನು ಗಲ್ಲಿಗೇರಿಸಲಾಯಿತು, ಸುನ್ನತಿಗೆ ಒಳಪಡಿಸಲಾಯಿತಯ ಅಥವಾ ಗಡಿಪಾರು ಮಾಡಲಾಯಿತು ಎಂದು ಸಮರ್ಥಿಸಿಕೊಂಡರು. ವಸಾಹತುಶಾಹಿ ಕಥನಗಳನ್ನು ಹೊರತುಪಡಿಸಿ ಯಾವುದೇ ದೃಢ ಪುರಾವೆಗಳಿಲ್ಲದೆಯೇ ಇಂತಹ ಹಲವಾರು ಹೇಳಿಕೆಗಳು ಸಮಕಾಲೀನ ಸಂದರ್ಭಗಳಲ್ಲಿಯೂ ಪ್ರತಿಧ್ವನಿಸಿವೆ” ಎಂದು ಬರೆಯುತ್ತಾರೆ.

ಮುಹಮ್ಮದ್ ಇಸ್ಮಾಯಿಲ್ ಅವರು: “ಟಿಪ್ಪು ಸುಲ್ತಾನ ಮತ್ತು ಮೈಸೂರು ಆಡಳಿತದ ವಿರುದ್ಧ ಸಾರಲಾಗುತ್ತಿರುವ ಎಲ್ಲಾ ವಿಷಯಗಳಲ್ಲಿ, ಕೇವಲ ಅತ್ಯಲ್ಪ ಪುರಾವೆಗಳು ಲಭ್ಯವಿದ್ದರೂ ಸರಿಯೇ, ಐತಿಹಾಸಿಕ ದಾಖಲೆಗಳನ್ನು ಆಧರಿಸಿ, ಮರುಪರಿಶೀಲನೆಗೆ ಒಳಪಡಿಸಬೇಕಾದ ಸಮಯ ಇದಾಗಿದೆ. ಮೈಸೂರಿನ ಮಧ್ಯಪ್ರವೇಶದ ಸಂದರ್ಭದಲ್ಲಿ ಮಲಬಾರಿನ ಹಿಂದೂಗಳನ್ನು ಜೀವಂತ ಸುಡಲಾಯಿತು, ಲೂಟಿ ಮಾಡಲಾಯಿತು ಮತ್ತು ಹಿಂಸೆಗೆ ಒಳಪಡಿಸಲಾಯಿತು ಎಂಬ ವಿವರಣೆಗಳು ಬಹುತೇಕ ಕಲ್ಪನೆಗಳಾಗಿದ್ದು ಅಥವಾ ಬಂಡುಕೋರರ ವಿರುದ್ಧ ಸುಲ್ತಾನರು ತೀರಿಸಿಕೊಂಡ ಪ್ರತೀಕಾರದ ಪರಿಣಾಮವೆಂದು ಸುಲ್ತಾನರ ಇತಿಹಾಸದ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ ಇತ್ತೀಚಿನ ಇತಿಹಾಸಕಾರರಿಂದ ಸಾಬೀತಾಗಿದೆ” ಎಂದು ಬರೆಯುತ್ತಾರೆ.

ತನ್ನ ಪ್ರಜೆಗಳು ಮುಖ್ಯವಾಗಿ ಹಿಂದೂಗಳಾಗಿದ್ದು ತಾನು ಮುಸ್ಲಿಂ ರಾಜನೆಂಬ ಅರಿವು ಟಿಪ್ಪುವಿಗಿತ್ತು ಮತ್ತವನು ತನ್ನ ರಾಜ್ಯಗಳಲ್ಲಿದ್ದ ದೇವಾಲಯಗಳಿಗೆ ಉದಾರವಾಗಿ ಅನುದಾನಗಳನ್ನು ನೀಡುವ ಮೂಲಕ ತನ್ನ ಆಳ್ವಿಕೆಯನ್ನು ಸಮರ್ಥಿಸಿಕೊಂಡನು. ಇನಾಂ ರೆಜಿಸ್ಟರುಗಳು ದೃಢಪಡಿಸುವಂತೆ, ಟಿಪ್ಪು ಮಲಬಾರಿನ ದೇವಾಲಯಗಳಿಗೆ ಉದಾರವಾಗಿ ದಾನ-ದತ್ತಿ ನೀಡಿದನು ಮತ್ತವನ ಯಾವುದೇ ನಡೆಯು ಅವನು ಧಾರ್ಮಿಕ ಮತಾಂಧನಾಗಿದ್ದ ಎಂಬುದನ್ನು ಸೂಚಿಸುವುದಿಲ್ಲ.

ಪಾಲಕ್ಕಾಡ್ ಮೂಲದ ಇತಿಹಾಸಕಾರ ಮತ್ತು Mysore Padayottam – Irunnottiyanpathu Varshangal (Mysore Rule – 250 Years, 2017)ನ ಲೇಖಕರಾದ ಎಸ್.ರಾಜೆಂದು ಹೇಳುತ್ತಾರೆ: “ಹೈದರ್ ಮತ್ತು ಟಿಪ್ಪು ಮಲಬಾರಿನ ದೇವಾಲಯಗಳನ್ನು ಲೂಟಿ ಮಾಡಿದ ಉದಾಹರಣೆಗಳಿವೆಯಾದರೂ, ಅಲ್ಲಿ ಸಂಪತ್ತು ಸಂಗ್ರಹಿಸಲಾಗುತ್ತಿತ್ತು ಎಂಬುದು ಮಾತ್ರವೆ ಅದಕ್ಕೆ ಕಾರಣವಾಗಿತ್ತು. ರಾಷ್ಟ್ರ ಅಥವಾ ಧರ್ಮ ಎಂಬ, ಸುಲ್ತಾನನ ಕಾರ್ಯಗಳನ್ನು ಪ್ರೇರೇಪಿಸಬಲ್ಲ ಯಾವುದೇ ಪರಿಕಲ್ಪನೆಯು ಆ ಸಮಯದಲ್ಲಿ ಇರಲಿಲ್ಲ.”

1788-89ರಲ್ಲಿ ಮಂಜೇರಿಯ ಅಥನ್ ಗುರುಕ್ಕಲ್ ಅವರಂತಹ ಮಾಪ್ಪಿಳ್ಳರು ಕೂಡ ಟಿಪ್ಪುವಿನ ವಿರುದ್ಧ ದಂಗೆ ಎದ್ದರು ಮತ್ತು ಟಿಪ್ಪು ಈ ದಂಗೆಯನ್ನು ಝಮೋರಿನ್ನರ ಕುಟುಂಬಕ್ಕೆ ಸೇರಿದ ರವಿವರ್ಮನ ಸಹಾಯದಿಂದ ಹತ್ತಿಕ್ಕಿದ ಎಂಬ ಸಂಗತಿಯನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ.

ಇದನ್ನೂ ಓದಿ: ಟಿಪ್ಪು ಮತ್ತು ಮೈಸೂರು ಚರಿತ್ರೆ ಕುರಿತ ಎರಡು ಅಮೂಲ್ಯ ಬರಹಗಳು

ಟಿಪ್ಪು ಮಲಬಾರನ್ನು ದೀರ್ಘಕಾಲೀನ ನೆಲೆಯನ್ನಾಗಿಸಿಕೊಳ್ಳಲು ಬಯಸಿದ್ದನು ಮತ್ತು ಕ್ಯಾಲಿಕಟ್‌ನಿಂದ ಸ್ವಲ್ಪ ದೂರದಲ್ಲಿರುವ ಫರೂಕಾಬಾದ್‌ನಲ್ಲಿ (ಈಗ ಫಿರೋಕ್) ಕೋಟೆಯನ್ನು ನಿರ್ಮಿಸಲು ಕೂಡ ಮುಂದಾಗಿದ್ದನು. 1788ರಲ್ಲಿ ಟಿಪ್ಪು ಮಲಬಾರಿಗೆ ಭೇಟಿ ನೀಡಿದಾಗ ಈ ಸ್ಥಳದಲ್ಲಿ ಕೋಟೆಯನ್ನು ನಿರ್ಮಿಸುವ ಕಾರ್ಯ ಪ್ರಾರಂಭವಾಯಿತು. ಆದರದು ಪೂರ್ಣಗೊಳ್ಳುವ ಮೊದಲೇ ಟಿಪ್ಪುವಿನ ಪಡೆಗಳನ್ನು ಹೊರಹಾಕಲಾಯಿತು. ಅಡಿಪಾಯಗಳು ಮತ್ತು ಆರಂಭಿಕ ಹಂತದ ರಚನೆಗಳನ್ನು ಈಗಲೂ ಕಾಣಬಹುದಾಗಿದೆ ಎಂದು ಈ ಸ್ಥಳವನ್ನು ಕಂಡಿರುವ ಸ್ಥಳೀಯರು ಹೇಳುತ್ತಾರೆ. ಕೋಟೆಗೆ ಕೊಂಡೊಯ್ಯುವ ಹಾದಿಯ ಬಗೆಗಿನ ವ್ಯಾಜ್ಯವು ನ್ಯಾಯಾಲಯದ ಮುಂದಿರುವುದರಿಂದ ಅಲ್ಲಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿರುವ ಕಾರಣ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಟಿಪ್ಪು ತನ್ನ ಮಲಬಾರ್ ಪ್ರಾಂತ್ಯಕ್ಕೆ ರಾಜಧಾನಿಯೆಂದು ಯೋಜಿಸಿದ್ದ ಫರೂಕಾಬಾದ್‌ನ ಕೋಟೆಯನ್ನು ನೋಡಲು ಪ್ರಯತ್ನಿಸುವವರನ್ನು ಓಣಿಯ ಗೇಟಿನ ಬಳಿಯಿರುವ ಕೇರಳದ ಪುರಾತತ್ವ ಇಲಾಖೆಯ ಬೋರ್ಡು ಸ್ವಾಗತಿಸುತ್ತದೆ.

ಇದಾಗಿ ಸ್ವಲ್ಪ ಸಮಯದಲ್ಲೇ, ಮಲಬಾರ್ ಪ್ರಾಂತ್ಯದ ಮೇಲಿನ ತನ್ನ ಹಕ್ಕನ್ನು ಟಿಪ್ಪು ಬಿಟ್ಟುಕೊಡುತ್ತಾನೆ ಹಾಗೂ 1799ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿಸ್ತರಣಾ ನೀತಿಯ ವಿರುದ್ಧ ಭದ್ರಕೋಟೆಯಂತೆ ನಿಂತು ಸೆಣೆಸಾಡುತ್ತಿದ್ದ ಟಿಪ್ಪುವನ್ನು ಯುದ್ಧಭೂಮಿಯಲ್ಲಿಯೇ ಕೊಲ್ಲಲಾಗುತ್ತದೆ.

ಕನ್ನಡಕ್ಕೆ: ಶಶಾಂಕ್

ವಿಖಾರ್ ಅಹ್ಮದ್ ಸಯೀದ್

ವಿಖಾರ್ ಅಹ್ಮದ್ ಸಯೀದ್
ಪತ್ರಕರ್ತರು, ಫ್ರಂಟ್‌ಲೈನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...