Homeಚಳವಳಿಕನ್ನಡ ರಾಷ್ಟ್ರೀಯತೆಯ ಕನಸುಗಾರ ಟಿಪ್ಪು ಸುಲ್ತಾನ್‌...

ಕನ್ನಡ ರಾಷ್ಟ್ರೀಯತೆಯ ಕನಸುಗಾರ ಟಿಪ್ಪು ಸುಲ್ತಾನ್‌…

ಕುರಿಯಾಗಿ ನೂರುವರ್ಷ ಬಾಳುವುದಕ್ಕಿಂತ ಹುಲಿಯಾಗಿ ಒಂದು ದಿನ ಬಾಳುವುದೇ ಶ್ರೇಷ್ಠ’ ಎಂದ ಕಲಿ ಟಿಪ್ಪು. ಈಗ ಅವನ ಹೆಸರನ್ನು ನಮ್ಮ ಚರಿತ್ರೆಯಿಂದ ಅಳಿಸಿ ಹಾಕಿದರೆ ನಷ್ಟ ಆಗುವುದು ಯಾರಿಗೆ?

- Advertisement -
- Advertisement -

1799 ಮೇ4 ರಂದು ಸಾಮ್ರಾಜ್ಯಶಾಹಿ ಬ್ರಿಟಿಷರೊಡನೆ ಹೋರಾಡುತ್ತ ಟಿಪ್ಪು ಶ್ರೀರಂಗಪಟ್ಟಣದ ಕೋಟೆ ಕಾಳಗದಲ್ಲಿ ಅಸುನೀಗಿದ. ನಾಲ್ಕನೇ ಮೈಸೂರು ಯುದ್ಧ ಕೊನೆಗೊಂಡಿತು. ಅಲ್ಲಿಗೆ ನಾಲ್ಕು ದಶಕಗಳಕಾಲ ಹೈದರ್ ಮತ್ತು ಟಿಪ್ಪು ಈ ತಂದೆ ಮಕ್ಕಳು ಕಟ್ಟಿ ಬೆಳೆಸಿದ್ದ ವಿಶಾಲ ಕನ್ನಡ ರಾಷ್ಟ್ರೀಯತೆ ಬ್ರಿಟಿಷರ ಪದತಲದಲ್ಲಿ ಬಿದ್ದು ಮಣ್ಣು ಪಾಲಾಯಿತು. ಅತ್ತ ಈ ಸುದ್ದಿಯನ್ನು ತಿಳಿದ ಇಂಗ್ಲೆಂಡಿನ ದೊರೆಗಳು ಇನ್ನು ಮುಂದೆ ’ಇಂಡಿಯಾ ನಮ್ಮದಾಯಿತು’ ಎಂದು ಹಿರಿ ಹಿರಿ ಹಿಗ್ಗಿ ಸ್ವಸ್ತಿ ಪಾನಮಾಡಿದರು.

ಪ್ರಪಂಚದ ಚರಿತ್ರೆಯಲ್ಲಿ ತನ್ನ ನಾಡಿನ ರಕ್ಷಣೆಗಾಗಿ ಇಬ್ಬರು ಮಕ್ಕಳನ್ನು ಶತ್ರುವಿಗೆ ಒತ್ತೆ ಇಟ್ಟಿದ್ದು ಮಾತ್ರವಲ್ಲದೆ, ರಣಾಂಗಣದಲ್ಲಿ ಬ್ರಿಟಿಷರ ವಿರುದ್ಧ ಯುದ್ಧ ಮಾಡುತ್ತಲೇ ಮಡಿದ ಏಕೈಕ ದೊರೆ ಟಿಪ್ಪು ಮಾತ್ರ ಎಂದು ಫ್ರೆಂಚ್ ಸಂಶೋಧಕರೊಬ್ಬರು ಹೇಳುತ್ತಾರೆ. ಟಿಪ್ಪು ಪತನದ ವೇಳೆಗೆ ಅವನ ರಾಜ್ಯ ದಖ್ಖನ್ ಪ್ರಸ್ಥಭೂಮಿಯ ಸುಮಾರು ಮೂಕ್ಕಾಲು ಭಾಗದಲ್ಲಿ ಹರಡಿಕೊಂಡಿತ್ತು. ಅವನ ಸ್ವದೇಶಾಭಿಮಾನ ಹಾಗೂ ಸ್ವಾಭಿಮಾನವನ್ನು ಅವನ ಪರಮ ಶತ್ರುಗಳು ಸಹ ಮೆಚ್ಚಿಕೊಳ್ಳಲೇ ಬೇಕು. ಶ್ರೀರಂಗಪಟ್ಟಣದ ಸಂಗ್ರಾಮ ರಂಗದಲ್ಲಿ ಆದ ಅವನ ಸಾವೇ ಅದನ್ನು ಸಾದರಪಡಿಸುತ್ತದೆಯಷ್ಟೆ.

ಟಿಪ್ಪುವಿನ ಸಾವಿನ ನಂತರ ವಿಶಾಲ ಕನ್ನಡ ರಾಷ್ಟ್ರೀಯತೆಯ ಪತನಪರ್ವ ಪ್ರಾರಂಭವಾಯಿತು. ಅವನ ಅಖಂಡ ರಾಜ್ಯವನ್ನು ಬ್ರಿಟಿಷರು, ಒಡೆಯರು, ನಿಜಾಮ ಹಾಗೂ ಮರಾಠರು ನಾಲ್ಕು ಹೋಳಾಗಿ ಸೀಳಿ ಹಂಚಿಕೊಂಡರು. ಹೈದರ್-ಟಿಪ್ಪು ಆಡಳಿತಾವಧಿಯಲ್ಲಿ ಲಕ್ಷಾಂತರ ಜನ ಕನ್ನಡಿಗರು ಕನಸುಕಂಡಿದ್ದ ಸಾಧ್ಯತೆಗಳೆಲ್ಲ ಕಮರಿಹೋದವು. ರೈತರು, ಕೂಲಿಗಳು, ಕುಶಲಕರ್ಮಿಗಳು, ವ್ಯಾಪಾರೋದ್ಯಮಿಗಳು ಪಡೆದುಕೊಂಡಿದ್ದ ಸ್ವಾತಂತ್ರ್ಯ ಸ್ವಾವಲಂಬನೆಯೆಲ್ಲ ಪುನಃ ಪರಾವಲಂಬಿ ಪಾಳೆಗಾರರ ಹಾಗೂ ಬ್ರಿಟಿಷ್ ಆಡಳಿತಗಾರರ ಕೈವಶವಾಗಿ ಹೋಯಿತು.

ಈ ದೊರೆಗಳು ಪ್ರಗತಿ ಪಂಥಕ್ಕೆ ಮುಳ್ಳಾಗಿದ್ದ ಮಠಮಾನ್ಯಗಳ ಪಾಳೆಗಾರರ ಧರ್ಮಾಧಿಕಾರ ಹಾಗೂ ಸರ್ವಾಧಿಕಾರವನ್ನು ಮೊಟಕುಗೊಳಿಸಿದ್ದರು. ಟಿಪ್ಪುವಿನ ಅವಧಿಯಲ್ಲಿ ಕೃಷಿ, ಕೈಗಾರಿಕೆ, ವಾಣಿಜ್ಯೋದ್ಯಮಗಳಿಗೆ ವಿಶೇಷ ಪ್ರೋತ್ಸಾಹ ದೊರೆಯಿತು. ದೇಶದ ಸಂಪತ್ತಿನಲ್ಲಿ ಶ್ರಮಿಕರಿಗೂ ಪಾಲುಗಾರಿಕೆ ಉಂಟು ಎಂಬ ಜನತಾಂತ್ರಿಕ ದೃಷ್ಟಿ ಅವನಿಗಿತ್ತು. ಇಂಡಿಯಾದ ಇತರ ಪ್ರಾಂತ್ಯಗಳಿಗಿಂತ ಇವನ ರಾಜ್ಯದಲ್ಲಿ ಜನರಿಗೆ ನೆಮ್ಮದಿ ಎಂಬುದಿತ್ತು. ಟಿಪ್ಪುವಿನ ರಾಜ್ಯದಲ್ಲಿ ನೀರಾವರಿ ಬೆಳೆಗಳು ಕಂಗೋಳಿಸುತ್ತಿದ್ದರೆ ಅದೇ ಕಾಲಕ್ಕೆ ಬೇರೆ ಬೇರೆ ದೊರೆಗಳು ಆಳುತ್ತಿದ್ದ ಭೂಭಾಗಗಳು ಮರುಭೂಮಿಯಂತೆ ಪಾಳು ಬಿದ್ದಿದ್ದವು ಎಂದು ಜೇಮ್ಸ್ ಮಿಲ್ ಎಂಬ ಆಂಗ್ಲ ಇತಿಹಾಸಕಾರ ಗುರ್ತಿಸುತ್ತಾನೆ. ಇದೆಲ್ಲಾ ಕಟ್ಟು ಕಥೆಯೇನಲ್ಲ. ಕನ್ನಡ ವಿಶ್ವವಿದ್ಯಾನಿಲಯ ಪ್ರಕಟಿಸಿರುವ ಕರ್ನಾಟಕದ ಚರಿತ್ರೆ ಸಂಪುಟ-5ರಲ್ಲಿ ದಾಖಲೆ ಇದೆ.

ಹಾಗಾದರೆ ಟಿಪ್ಪುವಿನ ಹೆಚ್ಚುಗಾರಿಕೆ ಏನು? ಅವನ ಪ್ರಗತಿಪರ ಕಾರ್ಯಕ್ರಮಗಳು ಯಾವುವು? ಅವು ಹೇಗಿದ್ದವು? ಅವುಗಳನ್ನು ಹೇಗೆ ಜಾರಿಗೊಳಿಸುತ್ತಿದ್ದ? ಕೊನೆಗೆ ಅವುಗಳ ಪರಿಣಾಮ ಎನಾಯಿತು? ಇತ್ಯಾದಿಯಾಗಿ ನಮಗೆ ಕುತೂಹಲ ಹುಟ್ಟುವುದು ಸ್ವಾಭಾವಿಕ. ಈ ಬಗ್ಗೆ ಕೊಂಚ ವಿಶ್ಲೇಷಿಸುವುದು ಸೂಕ್ತ.

ಒಂದನೆಯದು, ಪಾಳೆ ಪಟ್ಟುಗಳ ದಮನ : ಈ ದೊರೆಗಳು ತಮ್ಮ ಆಳ್ವಿಕೆಯಲ್ಲಿ ಮೊಟ್ಟ ಮೊದಲು ಮಾಡಿದ ಕಾರ್ಯಾಚರಣೆ ಎಂದರೆ ರೈತಾಪಿ ವರ್ಗಕ್ಕೆ ಜಿಗಣೆಗಳಂತಿದ್ದ ಪರಾವಲಂಬಿ ಪಾಳೇಗಾರರ ದಮನ. ಇದರಿಂದಾಗಿ ಮೈಸೂರು ಪ್ರಾಂತ್ಯದಲ್ಲಿ ಊಳಿಗಮಾನ್ಯ ವ್ಯವಸ್ಥೆ ನೆಲಕಚ್ಚಿತು ಎಂದು ಬುಕಾನನ್ ಎಂಬ ಆಂಗ್ಲ ಇತಿಹಾಸಕಾರ ಹೇಳುತ್ತಾನೆ. ಆ ಕಾಲಕ್ಕೆ 400 ರಿಂದ 500 ಸಂಖ್ಯೆಯ ಪಾಳೆ ಪಟ್ಟುಗಳ ವಶದಲ್ಲಿದ್ದ ಜಮೀನುಗಳನ್ನು ವಶಪಡಿಸಿಕೊಂಡ ಟಿಪ್ಪು ಅವುಗಳಲ್ಲಿ ಜೀತ-ಚಾಕರಿ ಮಾಡುತ್ತಿದ್ದವರಿಗೇ ಅವುಗಳನ್ನು ಹಂಚುತ್ತಿದ್ದ. ಇಲ್ಲವೆ ನೇರವಾಗಿ ತನ್ನ ಆಡಳಿತಕ್ಕೆ ತೆಗೆದುಕೊಳ್ಳುತ್ತಿದ್ದ. ಈ ಕಾರ್ಯಾಚರಣೆಯ ಪರಿಣಾಮವಾಗಿ ಪಾಳೆಗಾರರು ಕಣ್ಮರೆಯಾಗಿ ರೈತಾಪಿ ವರ್ಗ ತಲೆ ಎತ್ತಿತ್ತು.

ಎರಡನೆಯದು, ಭೂ ಸುಧಾರಣೆ : ರೈತಾಪಿ ವರ್ಗಕ್ಕೆ ಸ್ಪಂದಿಸಿದ ಟಿಪ್ಪು ಭೂ ಕಂದಾಯಗಳನ್ನು ಗೊತ್ತು ಪಡಿಸಿ ವ್ಯಕ್ತಿಯ ಜಾತಿ, ಪಂಥ, ಮತ, ಏನೇ ಇದ್ದಿರಲಿ ಉಳುವವನಿಗೇ ಭೂಮಿ ಎಂಬ ಪ್ರಗತಿಪರ ಶಾಸನವನ್ನು ಜಾರಿಗೆ ತಂದ. ಜೀವನಾಂಶಕ್ಕೆ ಅಗತ್ಯವಾದಷ್ಟು ವರಮಾನವನ್ನು ನಿಗದಿಗೊಳಿಸಿ ಹೆಚ್ಚುವರಿ ಭೂಮಿಯನ್ನು ಜಹಗೀರುದಾರ ಹಾಗೂ ದೇಶ ಮುಖರಿಂದ ಹಿಂದೆ ಪಡೆದ.

ಮೂರನೆಯದಾಗಿ, ಮಠ ಮಾನ್ಯಗಳ ಆಸ್ತಿಪಾಸ್ತಿಗೆ ಕತ್ತರಿ : ಬ್ರಾಹ್ಮಣ ಜಹಗೀರುದಾರರಿಂದ ಪಡೆದುಕೊಂಡ ದೇವಸ್ಥಾನದ ಭೂಮಿಯನ್ನು ಶೂದ್ರ ವರ್ಗಕ್ಕೆ ಹಂಚಿದ. ಉದಾ:ಗೆ ನಂಜನಗೂಡಿನಲ್ಲಿದ್ದ 500 ಬ್ರಾಹ್ಮಣ ಕುಟುಂಬಗಳಿಗೆ 700 ಶೂದ್ರ ಕುಟುಂಬಗಳು ಬಿಟ್ಟಿ ಚಾಕರಿ ಮಾಡುತ್ತಿದ್ದವು. ಊರ ಹೊರಗಿದ್ದ ಈ ಅಸ್ಪೃಶ್ಯರು ಟಿಪ್ಪುವಿನ ಕಾಲದಲ್ಲಿ ಹಿಡುವಳಿದಾರರಾದದ್ದು ಚರಿತ್ರಾರ್ಹ ಘಟನೆ. ಆದರೂ ಪರಾವಲಂಬಿ ವೈದಿಕರನ್ನು ಹೊರತುಪಡಿಸಿ ದುಡಿಯುವ ಲೌಕಿಕ ಬ್ರಾಹ್ಮಣರಿಗೆ ಕೆಲಸ ಕಾರ್ಯಗಳನ್ನು ನೀಡಿ ಉಪಕರಿಸಿದ. ಇದರಿಂದಾಗಿ ಈತ ಬ್ರಾಹ್ಮಣ ವಿರೋಧಿ, ಮತಾಂಧ ಮುಂತಾದ ಆರೋಪಕ್ಕೆ ಗುರಿಯಾದ. ಈತ ಮುಸ್ಲಿಮ್ ಆಗಿದ್ದುದರಿಂದ ಈ ಮಾತು ಇನ್ನಷ್ಟು ಪ್ರಚಾರಕ್ಕೆ ಬಂದದ್ದು ಸಹಜ.

ನಾಲ್ಕನೆಯದಾಗಿ, ಗೌಡರ ದರ್ಪ ಭಂಗ : ಹಳ್ಳಿಗರನ್ನು ಸುಲಿಯುತ್ತಿದ್ದ ಪಾಳೆಗಾರರ ಕೊನೆಯ ಕೊಂಡಿಯಂತಿದ್ದ ಗೌಡರ ದರ್ಪವನ್ನು ಭಂಗಗೊಳಿಸಿದ ಟಿಪ್ಪು, ರೈತರಲ್ಲಿ ಯಾರು ದಕ್ಷನೋ ಅವನೇ ಗೌಡ ಎಂದು ಸಾರಿ ಬಿಟ್ಟ. ಉಂಬಳಿಯ ಶ್ಯಾನುಭೋಗರನ್ನು ಕಿತ್ತು ಹಾಕಿ ವೇತನದ ಮೇಲೆ ಕುಲಕರ್ಣಿಗಳನ್ನು ನೇಮಿಸಿದ. ಯಾರೇ ಗೌಡ ಶ್ಯಾನುಭೋಗರಿರಲಿ ಅವರಿಗೆ ಶೂದ್ರರು ಬಿಟ್ಟಿ ಚಾಕರಿ ಮಾಡಬಾರದೆಂದು ಕಟ್ಟಪ್ಪಣೆ ಮಾಡಿದ.

ಐದನೆಯದಾಗಿ, ಸೈನಿಕರಿಗೆ ಭೂಮಿ : ಸೈನ್ಯಕ್ಕೆ ಲಾಗಾಯ್ತಿನಿಂದ ಬರುತ್ತಿದ್ದವರು ಕೆಳಜಾತಿಯ ಬಡವರೇ ಆಗಿದ್ದರು. ಹಾಗೇ ಬಂದಿದ್ದ ಬೇಡ, ಕುರುಬ, ಈಡಿಗ, ಒಕ್ಕಲಿಗ, ಲಿಂಗಾಯಿತ, ಪಂಚಮ ಈ ಕೆಳವರ್ಗದ ಸುಮಾರು 3 ಲಕ್ಷ ಸೈನಿಕರಿಗೆ ಟಿಪ್ಪು ತುಂಡು ಭೂಮಿಯನ್ನು ನೀಡಿ ಅವರ ಅಭಿಮಾನಕ್ಕೆ ಪಾತ್ರನಾದ. ಇದರಿಂದ ಆವರೆಗಿನ ಬಾಡಿಗೆ ಭಂಟರು ದೇಶಾಭಿಮಾನಿಗಳಾಗಿ ಪರಿವರ್ತಿತರಾದರು.

ಆರನೆಯದಾಗಿ, ಪಾಳು ಭೂಮಿ ಹಿಡುವಳಿಗಳಾದವು : ರಾಜ್ಯದ ಎಲ್ಲೆಡೆ ಪಾಳು ಬಿದ್ದಿದ್ದ ಹಿಡುವಳಿಗಳನ್ನು ವಶಪಡಿಸಿಕೊಂಡು ದುಡಿವ ರೈತಾಪಿ ಜನಗರಿಗೆ ಹಂಚಲಾಯಿತು. ಗುಡ್ಡಗಾಡಿನ ಬಂಜರು ಪ್ರದೇಶ, ಬೆದ್ದಲು ಭೂಮಿ ಮುಂತಾಗಿ ಕೃಷಿಗೆ ಒಳಪಟ್ಟಿತು. ಈ ಮೊದಲೇ ಹೈದರಾಲಿಯು ಸು. 60,000 ತಮಿಳು ರೈತ ಕುಟುಂಬಗಳನ್ನು ಕನ್ನಡ ನಾಡಿಗೆ ಕರೆತಂದು ಕೃಷಿಗೆ ಬಿಟ್ಟಿದ್ದ. ಹೀಗೆ ಕೃಷಿ ವಿಸ್ತರಣೆಯಾದುದರಿಂದ ಕೈಗಾರಿಕೆಗಳಿಗೆ ಬೇಕಾದ ಕಚ್ಚಾ ಮಾಲು ಸಹಜವಾಗಿಯೇ ಉತ್ಪನ್ನವಾಗುತ್ತ ಬಂದಿತು. ದೇಶ ಅಭಿವೃದ್ಧಿ ಪಥದತ್ತ ದಾಪುಗಾಲು ಹಾಕುವಲ್ಲಿ ಕೃಷಿಗೆ ಮೊದಲ ಆದ್ಯತೆ ಇರಬೇಕೆಂಬ ದೂರದೃಷ್ಟಿ ಟಿಪ್ಪುವಿನದು.

ಏಳನೆಯದಾಗಿ, ವಾಣಿಜ್ಯ ಬೆಳೆಗಳಿಗೆ ಪ್ರೋತ್ಸಾಹ : ಸಾಂಪ್ರದಾಯಿಕ ಆಹಾರ ಧಾನ್ಯಗಳಲ್ಲದೆ ಕಬ್ಬು, ಅಡಿಕೆ, ರೇಷ್ಮೆ, ತಂಬಾಕು ಮುಂತಾದ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡಿದ. ಈ ಮೂಲಕ ಹಳ್ಳಿಗಳನ್ನು ತ್ವರಿತ ವಾಣಿಜ್ಯೀಕರಣಗೊಳಿಸಲು ತೊಡಗಿದ.

ಒಟ್ಟಾರೆಯಾಗಿ, ಟಿಪ್ಪು ಜಾರಿಗೆ ತಂದ ಭೂ ಸುಧಾರಣೆ, ನೀರಾವರಿ ಯೋಜನೆ, ಸುಧಾರಿಸಿದ ತಳಿಗಳ ಅಭಿವೃದ್ಧಿ, ವಾಣಿಜ್ಯ ಬೆಳೆಗಳು, ಕೃಷಿ ವಿಸ್ತರಣೆಗೆ ತಕಾವಿ ಸಾಲ ಈ ಮುಂತಾದವು ವಿಶೇಷ ಪ್ರಭಾವವನ್ನಂಟು ಮಾಡಿದವು. ಟಿಪ್ಪುವಿನ ಈ ಅನೇಕ ಪ್ರಗತಿಪರ ಶಾಸನಗಳು ಆಧುನಿಕ ಕರ್ನಾಟಕದ ಹರಿಕಾರ ದೇವರಾಜ ಅರಸು ಅವರು ಜಾರಿಗೆ ತಂದ ಹಲವಾರು ಸುಧಾರಣೆಗಳನ್ನು ನೆನಪಿಗೆ ತರುವಂತಿವೆ. ಹೀಗಾಗಿ ಟಿಪ್ಪು ತನ್ನ ಕಾಲಕ್ಕಿಂತ ಸುಮಾರು ಎರಡು ಶತಮಾನದಷ್ಟು ಮುಂದಿದ್ದ ಎನ್ನಬಹುದು.

ಟಿಪ್ಪುವಿನ ರಾಷ್ಟ್ರೀಯತೆಯ ಮತ್ತೊಂದು ಮುಖ ಎಂದರೆ, ಆತ ವಾಣಿಜ್ಯೋದ್ಯಮಕ್ಕೆ ಕೊಟ್ಟ ವಿಶೇಷ ಪ್ರಾಮುಖ್ಯತೆ. ಹೈದರ್-ಟಿಪ್ಪುಸುಲ್ತಾನರು ಏಕಕಾಲಕ್ಕೆ ಬ್ರಿಟಿಷ್ ವಾಣಿಜ್ಯ ವಹಿವಾಟಿಗೆ ಬಹಿಷ್ಕಾರ ಹಾಕಿದ್ದಲ್ಲದೆ ದೇಶೀ ಮಾರುಕಟ್ಟೆ ರಕ್ಷಣೆಯನ್ನು ಬಹಳ ಜತನದಿಂದ ಕಾಪಾಡಿಕೊಂಡರು. ಜವಳಿ ವ್ಯಾಪಾರಕ್ಕೆ ನಿಗಮವೊಂದನ್ನು ಸ್ಥಾಪಿಸಿದ್ದ ಟಿಪ್ಪು ಇದು ಅವನ ದೂರದರ್ಶಿತ್ವಕ್ಕೆ ಸಾಕ್ಷಿ. ಪ್ರಸ್ತುತ ಸಾರ್ವಜನಿಕ ಕ್ಷೇತ್ರಗಳನೆಲ್ಲವನ್ನೂ ಖಾಸಗೀಕರಣಕ್ಕೆ ಒಳಪಡಿಸುವ ನಮ್ಮ ಇಂದಿನ ಸಂದರ್ಭಕ್ಕೆ ಇದು ಗಮನಾರ್ಹ ಸಂಗತಿ.

ವ್ಯಾಪಾರೋದ್ಯಮಕ್ಕೆ ಅಗತ್ಯವಾದ ಪ್ರಮಾಣದಲ್ಲಿ ನಾಣ್ಯಗಳನ್ನು ಠಂಕಿಸಿ ಚಲಾವಣೆಗೆ ಬಿಡಲಾಯಿತು. ಬೆಂಗಳೂರು-ಮಂಗಳೂರು-ಶಿವಮೊಗ್ಗ-ಚಿತ್ರದುರ್ಗ ಮುಂತಾಗಿ ರಾಜ್ಯ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಯಿತು. ಟಿಪ್ಪುವಿನ ಕೈಗಾರಿಕಾಭೀವೃದ್ದಿ ಯುರೋಪಿನ ಕೈಗಾರಿಕಾ ಕ್ರಾಂತಿಗೆ ಪೈಪೋಟಿ ನೀಡುವಂತಿತ್ತು. ಜವಳಿ ಕಂಬಳಿ ಸಕ್ಕರೆ ಬೆಲ್ಲ ಹಾಗೂ ಎಣ್ಣೆ ಉತ್ಪಾದನೆಯಲ್ಲಿ ಕರ್ನಾಟಕ ಮುಂದಿತ್ತು.

ಅನೇಕ ಮಹಾರಾಜರುಗಳು ವೈಭವಪೂರ್ಣ ಅರಮನೆಗಳನ್ನು ಕಟ್ಟಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದರೆ, ಟಿಪ್ಪು ಮಾತ್ರ ಅದಕ್ಕೆ ಅಪವಾದವಾಗಿ ಕಂಡು ಬರುತ್ತಾನೆ. ಅವನ ಸಾಧಾರಣ ಗಾರೆ ಗಚ್ಚಿನ ಅರಮನೆಗಳು ಇಂದಿಗೂ ಇವೆ.

ಪುಸ್ತಕ ಭಂಢಾರ, ಪ್ರಯೋಗಾಲಯ, ವಸ್ತು ಸಂಗ್ರಹಾಲಯ ಈ ಎಲ್ಲವೂ ಅವನ ಅರಮನೆಯ ಭಾಗವೇ ಆಗಿದ್ದವು. ಪುಸ್ತಕ ಪ್ರೇಮಿಯಾಗಿದ್ದ ಟಿಪ್ಪು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಉತ್ತಮ ಗ್ರಂಥಗಳನ್ನು ಸಂಗ್ರಹಿಸಿದ್ದ. ಇದು ಅವನ ಅಧ್ಯಯನ ಪ್ರೀತಿಗೆ ಸಾಕ್ಷಿ.

ಟಿಪ್ಪುವಿನ ವಿದೇಶಾಂಗ ನೀತಿ ಅವನ ರಾಷ್ಟ್ರೀಯ ಪ್ರಜ್ಞೆಯನ್ನು ನಿಚ್ಛಳವಾಗಿ ಬಿಂಬಿಸುತ್ತದೆ. ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರೋಧಿಯಾಗಿದ್ದ ಟಿಪ್ಪು, ಅಮೆರಿಕಾವು ಬ್ರಿಟಿಷ್ ವಸಾಹತು ಆಳ್ವಿಕೆಯಿಂದ ವಿಮೋಚನೆಗೊಂಡ ಸಂದರ್ಭದಲ್ಲಿ (1776) ಆ ದೇಶವನ್ನು ಅಭಿನಂದಿಸಿ ಪತ್ರವೊಂದನ್ನು ಬರೆಯುತ್ತಾನೆ. ಫ್ರೆಂಚರು ಮಾರಾಠರು ಹಾಗೂ ನಿಜಾಮನೊಂದಿಗೆ ಮೈತ್ರಿ ಕೂಟವನ್ನು ರಚಿಸಿಕೊಂಡು ಬ್ರಿಟಿಷರನ್ನು ಹಿಮ್ಮೆಟ್ಟಿಸಲು ಸತತ ಪ್ರಯತ್ನವನ್ನೇ ಮಾಡಿದ. ಆದರೆ ಸೂಕ್ತ ಸಮಯದಲ್ಲಿ ಮಾರಾಠರು ಹಾಗೂ ನಿಜಾಮ ಆಂಗ್ಲರೊಂದಿಗೆ ರಾಜಿ-ಒಪ್ಪಂದವನ್ನು ಮಾಡಿಕೊಂಡು ನಾಲ್ಕನೇ ಮೈಸೂರು ಯುದ್ಧದಲ್ಲಿ ಸಹಾಯಕ್ಕೆ ಬಾರದೆ ಹೋದರು.

ಶೃಂಗೇರಿ ಶ್ರೀರಂಗಪಟ್ಟಣ ಹಾಗೂ ಮೇಲುಕೋಟೆಯ ದೇವಾಲಾಯಗಳಿಗೆ ಟಿಪ್ಪು ಗೌರವಪೂರ್ವಕ ಕೊಡುಗೆಗಳನ್ನು ಕೊಟ್ಟಿರುವುದನ್ನು ಸಹ ಈ ಸಂದರ್ಭದಲ್ಲಿ ಸ್ಮರಿಸಬಹುದು. ಟಿಪ್ಪು ಕೆಲವರನ್ನು ಉಗ್ರವಾಗಿ ದಂಡಿಸಿರುವುದು ನಿಜ. ಮಲಬಾರಿನ ನಾಯರ್‌ಗಳು, ಕೊಡಗಿನ ರಾಜರು, ಮಂಗಳೂರಿನ ಕ್ರಿಶ್ಚಿಯನ್ನರು, ಮಾಪಿಳ್ಳೆಗಳು ಇತ್ಯಾದಿ ಬ್ರಿಟಿಷರಿಗೆ ಸರೀಕಾಗಿ ಟಿಪ್ಪುವಿಗೆ ಪದೇ ಪದೇ ಕಿರುಕುಳ ಕೊಡುತ್ತಿದ್ದರು. ಆದ್ದರಿಂದ ಅವರ ವಿರುದ್ಧ ರಾಜಕೀಯ ಕಾರಣಗಳಿಗಾಗಿ ಉಗ್ರಕ್ರಮ ಕೈಗೊಂಡಿರುತ್ತಾನೆ. ಮಿಕ್ಕಂತೆ ಬಹುಸಂಖ್ಯಾತ ಹಿಂದೂಗಳು ತನ್ನ ಪ್ರಜೆಗಳೆಂಬ ಪರಿಜ್ಞಾನ ಹಾಗೂ ಸಹಿಷ್ಣುತೆ ಅವನಲ್ಲಿ ಮನೆಮಾಡಿತ್ತು.

ಟಿಪ್ಪು ಸುಲ್ತಾನ್ ಬಯಸಿದ್ದು, ಕನಸು ಕಂಡಿದ್ದು, ತನ್ನ ದೇಶದ ಸ್ವಾತಂತ್ರ್ಯ ಸಮೃದ್ಧತೆ, ಸಮಾನತೆ ಹಾಗೂ ಕನ್ನಡ ರಾಷ್ಟ್ರೀಯತೆಯನ್ನು ಮಾತ್ರ. ದುರದೃಷ್ಟವಶಾತ್ ಅದು ಗರಿಗಟ್ಟಿಕೊಳ್ಳುವಷ್ಟರಲ್ಲಿಯೇ ಆತ ಕಾಣ್ಮರೆಯಾದ. ಹಾಗೇ ನೋಡಿದರೆ ಟಿಪ್ಪುಸುಲ್ತಾನ್ ನಮ್ಮ ನಾಡಿನ ಪ್ರಥಮ ಸ್ವಾಂತಂತ್ರ್ಯ ಹೋರಾಟಗಾರ ಹಾಗೂ ರಾಷ್ಟ್ರೀಯತೆಯ ಹರಿಕಾರ. ’ಕುರಿಯಾಗಿ ನೂರುವರ್ಷ ಬಾಳುವುದಕ್ಕಿಂತ ಹುಲಿಯಾಗಿ ಒಂದು ದಿನ ಬಾಳುವುದೇ ಶ್ರೇಷ್ಠ’ ಎಂದ ಕಲಿ ಟಿಪ್ಪು. ಈಗ ಅವನ ಹೆಸರನ್ನು ನಮ್ಮ ಚರಿತ್ರೆಯಿಂದ ಅಳಿಸಿ ಹಾಕಿದರೆ ನಷ್ಟ ಆಗುವುದು ಯಾರಿಗೆ?

  • ಪ್ರೊ.ಶಿವರಾಮಯ್ಯ
ಪ್ರೊ. ಶಿವರಾಮಯ್ಯ

ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು

ಇದನ್ನೂ ಓದಿ: ಪರಂಪರೆಗೆ ಕಣ್ಕಟ್ಟುವ ಹುನ್ನಾರ; ಟಿಪ್ಪು ಪ್ರಾಮುಖ್ಯತೆಯ ಹಲವು ಆಯಾಮಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

13 COMMENTS

  1. H Tippusultan is lion of kingdom
    H Tippu is great king of hindustan
    H Tippusultan is tiger
    HTippusultan lion of mysore
    H tippusultan son of lion hyderali
    Jai hind
    Jai karnataka
    Jai hyderali
    Jai hazrath tippusultan

  2. May be truth, but all kings and sultans did the same thing, moghul exploited rajaputan Princess and women folk, survival is fittest- was the policy, tippu wanted to ptotevt his kingdom of Mysore but he wanted remove Britishers from India by forming federatory army with marathas, nizaam and other southern nawabs and pollygars, but it could not fructify, the long and short, Tippu had both characteristics of good n bad administrator which was common characteristics of feudatory medieval India of 17-18th century

  3. ಹಳೆಯ ಲೇಖನವನ್ನೇ ಮತ್ತೆ ಪ್ರಕಟಿಸುವ ಔಚಿತ್ಯವೇನಿತ್ತು? ಟಿಪ್ಪು ಮೇಲುಕೋಟೆಯಲ್ಲಿ ಕೊಂದಹಿಂದೂಗಳ ಸಂಖ್ಯೆ ಎಷ್ಟು ಗೊತ್ತಾ? ಅದಕ್ಕೆ ಕಾಲಣವೇನು ಗೊತ್ತಾ? ಕನ್ನಡದ ಸ್ಥಳಗಳನ್ನೆಲ್ಲಾ ‘ಬಾದ್’ ಮಾಡಿದ ಕನ್ನಡ ದ್ರೋಹಿ ಅವನು‌.

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...