Homeಕರ್ನಾಟಕಪರಂಪರೆಗೆ ಕಣ್ಕಟ್ಟುವ ಹುನ್ನಾರ; ಟಿಪ್ಪು ಪ್ರಾಮುಖ್ಯತೆಯ ಹಲವು ಆಯಾಮಗಳು

ಪರಂಪರೆಗೆ ಕಣ್ಕಟ್ಟುವ ಹುನ್ನಾರ; ಟಿಪ್ಪು ಪ್ರಾಮುಖ್ಯತೆಯ ಹಲವು ಆಯಾಮಗಳು

- Advertisement -
- Advertisement -

(ರಾಜ್ಯ ಬಿ.ಜೆ.ಪಿ ಸರ್ಕಾರವು ಬೆಂಗಳೂರು ಮೈಸೂರು ನಡುವೆ ಸಂಚರಿಸುತ್ತಿದ್ದ ’ಟಿಪ್ಪು ಎಕ್ಸ್‌ಪ್ರೆಸ್’ ರೈಲನ್ನು ’ಒಡೆಯರ್ ಎಕ್ಸ್‌ಪ್ರೆಸ್’ ಎಂದು ಮರುನಾಮಕರಣ ಮಾಡುವ ಮೂಲಕ ಟಿಪ್ಪುವಿನ ಲೆಗಸಿಯನ್ನು ನಿರಾಕರಿಸುವ ಕಡೆಗೆ ಮತ್ತೊಂದು ಹೆಜ್ಜೆಯನ್ನಿಟ್ಟಿದೆ. ಈ ಹಿನ್ನೆಲೆಯಲ್ಲಿ 2015 ರಲ್ಲಿ “ಟಿಪ್ಪು ಜಯಂತಿ” ಸುತ್ತ ಕರ್ನಾಟಕದಲ್ಲಿ ಭುಗಿಲೆಬ್ಬಿಸಲಾಗಿದ್ದ ವಿವಾದದ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ವಿಖಾರ್ ಅಹ್ಮದ್ ಸಯೀದ್ ಅವರು ಫ್ರಂಟ್‌ಲೈನ್ ಪತ್ರಿಕೆಗಾಗಿ ಟಿಪ್ಪು ಬಗ್ಗೆ ಬರೆದಿದ್ದ ಲೇಖನವನ್ನು ಶಶಾಂಕ್ ಎಸ್.ಆರ್ ಅನುವಾದಿಸಿದ್ದಾರೆ. ಇದು ಟಿಪ್ಪುವನ್ನು, ಅವನ ಜೀವಿತಾವಧಿಯನ್ನು ನೆನೆಯುವ ಪ್ರಯತ್ನ)

ಟಿಪ್ಪು ಸುಲ್ತಾನನ ಕೊಡುಗೆಗಳನ್ನು ಆಧುನಿಕತೆಯ ದೃಷ್ಟಿಕೋನದಿಂದ ಅರ್ಥೈಸಲು ಸಾಧ್ಯವಿಲ್ಲ. ಟಿಪ್ಪುವಿನ ಜೀವನವನ್ನು ಮತ್ತವನ ಕೊಡುಗೆಗಳನ್ನು ಅವನು ಜೀವಿಸಿದ ಕಾಲದ ಹಿನ್ನೆಲೆಯಲ್ಲಿಟ್ಟು ನೋಡಿದಾಗ ’ಟಿಪ್ಪು ಜಯಂತಿ’ ಸುತ್ತ ಕರ್ನಾಟಕದಲ್ಲಿ ಭುಗಿಲೆದ್ದಿರುವ ವಿವಾದವು ಅರ್ಥಹೀನವಾಗುತ್ತದೆ.

ನವೆಂಬರ್ 10ರಂದು ರಾಜ್ಯ ಸರ್ಕಾರವು ಆಯೋಜಿಸಿದ್ದ ಟಿಪ್ಪು ಸುಲ್ತಾನನ ಜನ್ಮದಿನದ ಸ್ಮರಣೆಯು ಗೊಂದಲದ ಗೂಡಾಗಿತ್ತಾದರೂ, ಬೆಂಗಳೂರಿನಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ದೇವನಹಳ್ಳಿಯಲ್ಲಿರುವ ಟಿಪ್ಪುವಿನ ಜನ್ಮಸ್ಥಳವು ತನ್ನದೇ ಆದ ಪ್ರಶಾಂತತೆಯನ್ನು ಹೊಂದಿತ್ತು. ಅವನ ಜನ್ಮಸ್ಥಳವು ಅವನನ್ನು ನೆನೆದಿತ್ತು ಎಂಬುದಕ್ಕೆ ಇದ್ದ ಒಂದೇ ಒಂದು ಸಾಕ್ಷ್ಯವೆಂದರೆ, ಚೆಂಡುಹೂವನ್ನು ಹೊತ್ತಿದ್ದ ಫಲಕದಲ್ಲಿ “Birth Place of Tipu Sultan: 1751 A.D” (ಟಿಪ್ಪು ಸುಲ್ತಾನ: ಕ್ರಿ.ಶ. 1751 ಹುಟ್ಟಿದ ಸ್ಥಳ) ಎಂದು ಇಂಗ್ಲಿಷ್, ಉರ್ದು ಮತ್ತು ಕನ್ನಡದಲ್ಲಿ ಬರೆಯಲಾಗಿತ್ತು ಎಂಬುದು. ದೇವನಹಳ್ಳಿ ಕೋಟೆಯ ಪ್ರವೇಶದ್ವಾರದಿಂದ ನೂರು ಮೀಟರ್ ದೂರದಲ್ಲಿರುವ ಫಲಕದ ಹತ್ತಿರದಲ್ಲೇ ನಿರ್ಮಿಸಲಾದ ಸ್ಮಾರಕವೂ ಹೂವಿನ ಹಾರಗಳಿಂದ ಅಲಂಕೃತಗೊಂಡಿತ್ತು. ಏಕಾಂತದಿಂದ ಬೇಸರಗೊಂಡಿದ್ದ ಅಲ್ಲಿದ್ದ ಒಂಟಿ ಪೊಲೀಸ್ ಪೇದೆಯೊಬ್ಬರು ಮೌನವನ್ನು ಮುರಿಯುತ್ತಾ: “ನಿನ್ನೆ ಮುಸಲ್ಮಾನರಿಂದ ಪಟ್ಟಣದ ಸುತ್ತಲೂ ಮೆರವಣಿಗೆ ನಡೆಸಲಾಯಿತು. ಅಷ್ಟೇ. ಬೇರೇನೂ ಆಗಲಿಲ್ಲ” ಎಂದು ತಿಳಿಸಿದರು.

ಟಿಪ್ಪು ಆ ನಿರ್ದಿಷ್ಟ ಸ್ಥಳದಲ್ಲಿಯೇ ಜನಿಸಿದರೆ ಎಂಬುದು ನಮಗೆ ಎಂದಿಗೂ ತಿಳಿಯದಿರಬಹುದಾದರೂ, ಅವರು ದೇವನಹಳ್ಳಿ ಪಟ್ಟಣದಲ್ಲಿ 1750ರಲ್ಲಿ (ಫಲಕವು ಟಿಪ್ಪು 1751ರಲ್ಲಿ ಜನಿಸಿದ ಎಂದು ತಿಳಿಸಿದರೂ, ಅದು ಸರಿಯಾದ ಮಾಹಿತಿಯಲ್ಲ) ಜನಿಸಿದ್ದೆರೆಂಬುದನ್ನು ವಿವಿಧ ದಾಖಲೆಗಳು ದೃಢಪಡಿಸುತ್ತವೆ. ಪ್ರಸ್ತುತ, ಕೆಲವು ಭಾಗಗಳು ಶಿಥಿಲಗೊಂಡಿವೆಯಾದರೂ, ಇಂದು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಈ ಪಟ್ಟಣದ ಸುತ್ತಲೂ ಕೋಟೆಯ ಎತ್ತರದ ಗೋಡೆಗಳು ಕಂಡುಬರುತ್ತದೆ. ಗೋಡೆಯಲ್ಲಿನ ಸಂದಿಗೊಂದಿಗಳೆಲ್ಲಾ ಗೀಚುಬರಹಗಳಿಂದಲೇ ತುಂಬಿವೆ. ಸಂರಕ್ಷಿತ ಸ್ಮಾರಕಗಳ ಬಳಿ ನಿರ್ಮಾಣಕ್ಕೆ ಸಂಬಂಧಿಸಿದ ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ASI) ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಪಟ್ಟಣದಲ್ಲಿ ಕಂಡುಬರುವ ಹಲವಾರು ಕಟ್ಟಡಗಳನ್ನು ನವೀಕರಿಸಲಾಗುತ್ತಿದೆ.

1749ರಲ್ಲಿ ಮೈಸೂರಿನ ಪಡೆಗಳು ಈ ಕೋಟೆಗೆ ಮುತ್ತಿಗೆ ಹಾಕಿದವು. ಈ ಸಣ್ಣ ಯುದ್ಧದಲ್ಲಿಯೇ ಹೈದರ್ ಅಲಿಯ ಶೌರ್ಯವನ್ನು ಮೈಸೂರಿನ ಅರಸರು ಗಮನಿಸಿದರು. ಮುಂದಿನ ವರ್ಷ, ಹೈದರ್ ಮತ್ತೊಂದು ಯುದ್ಧದಲ್ಲಿ ಹೋರಾಡುತ್ತಿರುವಾಗ, ಅವರ ಮೊದಲ ಮಗ ಟಿಪ್ಪು ಸುಲ್ತಾನ್ (ಫತೇಹ್ ಅಲಿ) ಇಲ್ಲಿ ಜನಿಸಿದ. ನಾಯಕತ್ವದ ಗುಣಗಳಿಂದಾಗಿ ಹೈದರನ ಪ್ರಾಮುಖ್ಯತೆಯು ಮೈಸೂರು ರಾಜ್ಯದಲ್ಲಿ ಹೆಚ್ಚುತ್ತಿದ್ದ ಕಾಲಘಟ್ಟದಲ್ಲಿ, ಅದರಲ್ಲಿಯೂ ವಿಶೇಷವಾಗಿ ತನ್ನ ಯುದ್ಧ ಸಾಮರ್ಥ್ಯದ ಸಲುವಾಗಿ ಸೈನಿಕರ ನಡುವೆ ಖ್ಯಾತಿಗಳಿಸುತ್ತಿದ್ದ ಸಂದರ್ಭದಲ್ಲಿ ಟಿಪ್ಪು ಜನ್ಮತಾಳಿದನು. ದಿಂಡುಗಲ್‌ನ ಫೌಜ್‌ದಾರನಾಗಿದ್ದ (ಮಿಲಿಟರಿ ಕಮಾಂಡರ್) ಅಲ್ಪಾವಧಿಯಲ್ಲಿ, ಹೈದರ್ ಅಲಿ ಹೆಸರಿನ ಈ ಅನಕ್ಷರಸ್ಥ ಸೈನಿಕನು ತನ್ನ ಆಡಳಿತ ಕೌಶಲ್ಯವನ್ನು ವೃದ್ಧಿಸಿಕೊಂಡನು. ನಂತರ, ವಿವಿಧ ಸಂಗತಿಗಳು ಹೈದರ್‌ಗೆ ಮೈಸೂರು ಪಡೆಗಳ ಅಧಿಕಾರವನ್ನು ವಹಿಸಿಕೊಳ್ಳುವ ಅವಕಾಶವನ್ನು ನೀಡಿತು ಮತ್ತು 1761ರ ವೇಳೆಗೆ ಮೈಸೂರು ಸಾಮ್ರಾಜ್ಯದ ವಾಸ್ತವದ ಆಡಳಿತಗಾರ ಎನಿಸಿದನು.

ಏತನ್ಮಧ್ಯೆ, ದೆಹಲಿಯಲ್ಲಿ ಮೊಘಲ್ ಅಧಿಕಾರವು ವೇಗವಾಗಿ ಕುಸಿಯುತ್ತಿತ್ತು. ಉಪಖಂಡದ ವಿಶಾಲ ಪ್ರದೇಶಗಳಲ್ಲಿ ತಮ್ಮ ಹಿಡಿತವನ್ನು ಸ್ಥಾಪಿಸಿದ ಮರಾಠರು ಮೂರನೇ ಪಾಣಿಪತ್ ಕದನದಲ್ಲಿ ಆಫ್ಘನ್ ಅಹ್ಮದ್ ಷಾ ಅಬ್ದಾಲಿಯ ಪಡೆಗಳ ವಿರುದ್ಧ ಸೆಣೆಸುತ್ತಿದ್ದರು. ಇಂತಹ ಸಂದರ್ಭದಲ್ಲಿ, ಇಂದಿನ ಕರ್ನಾಟಕದ ಭೂಭಾಗಗಳಲ್ಲಿ ವಿವಿಧ ರಾಜರುಗಳು ತಮ್ಮ ಪ್ರದೇಶಗಳ ವಿಸ್ತರಣೆಗಾಗಿ ಹೋರಾಡುತ್ತಿದ್ದರು. ಮೈಸೂರಿಗೆ ಅನೇಕ ಬೆದರಿಕೆಗಳಿದ್ದವು; ತನ್ನ ಅಧಿಕಾರವನ್ನು ಬಲಪಡಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ, ಮರಾಠರು, ಹೈದರಾಬಾದಿನ ನಿಜಾಮ, ಕರ್ನಾಟಿಕ್‌ನ ನವಾಬ ಮತ್ತು ಈಸ್ಟ್ ಇಂಡಿಯಾ ಕಂಪನಿಯ ಆಶ್ರಯದಲ್ಲಿ ಆ ವೇಳೆಗಾಗಲೆ ಉಪಖಂಡದಲ್ಲಿ ಪ್ರಾಬಲ್ಯತೆ ಸಾಧಿಸಿದ್ದ ಇಂಗ್ಲಿಷರಿಂದ ಹೈದರ್ ಬೆದರಿಕೆಗೆ ಒಳಗಾದ. ಫ್ರೆಂಚರು ಸಹ ಆ ವೇಳೆಗೆ ಪ್ರಮುಖ ಶಕ್ತಿಯಾಗಿದ್ದರು ಎಂಬುದನ್ನು ಕೂಡ ನಿರ್ಲಕ್ಷಿಸಲಾಗುವುದಿಲ್ಲ. ಯುರೋಪಿನ ಸ್ಥಿತಿಗತಿಗಳು ಮತ್ತು ಘಟನಾವಳಿಗಳು ಭಾರತದಲ್ಲಿನ ಫ್ರೆಂಚರ ಕಾರ್ಯಗಳನ್ನು ನಿರ್ದೇಶಿಸುತ್ತಿದ್ದ ಕಾರಣ, ಅವರು ವಿವಿಧ ಸಂದರ್ಭಗಳಲ್ಲಿ ಹೈದರ್ ಮತ್ತು ಟಿಪ್ಪುವಿನ ಮೈತ್ರಿ ಸಾಧಿಸಿದರೂ ಸಹ ಅವರ ವಿಶ್ವಾಸಾರ್ಹ ಮಿತ್ರರೆನಿಸಲಿಲ್ಲ. ದಕ್ಷಿಣ ಮತ್ತು ದಖ್ಖನ ಭಾರತದಲ್ಲಿ ವಿವಿಧ ಸಾಮ್ರಾಜ್ಯಗಳ ನಡುವೆ ಮೈತ್ರಿಗಳು ಸೃಷ್ಟಿ ಮತ್ತು ಪುನರ್ ಸೃಷ್ಟಿಯಾಗುತ್ತಿದ್ದಂತೆ, ಇಲ್ಲಿ ಯಾರು ಮೇಲುಗೈ ಪಡೆದರೆಂಬುದು ಸತತವಾಗಿ ಬದಲಾಗುತ್ತಲೇ ಸಾಗಿತು.

ಈ ಸತತ ಬದಲಾವಣೆಗಳ ನಡುವೆ, ಹೈದರ್ ಮತ್ತು ಟಿಪ್ಪು ಅವರ ರಾಜಕೀಯ ನೀತಿಯಲ್ಲಿ ಆಂಗ್ಲರ ವಿರೋಧವು ಸ್ಥಿರ ಸ್ಥಾನವನ್ನು ಪಡೆದಿತ್ತು. 1767 ಮತ್ತು 1799ರ ನಡುವೆ ಅವರು ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಆಂಗ್ಲೋ-ಮೈಸೂರು ಯುದ್ಧಗಳು ಎಂದು ಕರೆಯಲ್ಪಡುವ ನಾಲ್ಕು ಯುದ್ಧಗಳಲ್ಲಿ ಅವರು ಸೆಣೆಸಿದರು. 1767 1769ರ ನಡುವೆ ನಡೆದ ಮೊದಲ ಆಂಗ್ಲೋ-ಮೈಸೂರು ಯುದ್ಧದಿಂದ ಮರಾಠರು ದೂರವೇ ಉಳಿದರು ಮತ್ತು ಬದಲಾಗುತ್ತಲೇ ಸಾಗಿದ ನಿಜಾಮನ ನಿಷ್ಠೆಯು ಹೈದರನ ಪರವಾಗಿ ಕೆಲಸ ಮಾಡಿತು. ಆದಕಾರಣ, ನಿಜಾಮನ ಸಹಾಯದೊಂದಿಗೆ ಇಂಗ್ಲಿಷರನ್ನು ಹೈದರ್ ಹೀನಾಯವಾಗಿ ಸೋಲಿಸಿದ ಮಾತ್ರವಲ್ಲದೇ ಒಪ್ಪಂದವೊಂದು ಏರ್ಪಡುವುದಕ್ಕೂ ಮುನ್ನ ಮದ್ರಾಸ್‌ನಲ್ಲಿದ್ದ ಅವರ ದಕ್ಷಿಣ ಪ್ರಧಾನ ಕಚೇರಿಗೆ ಬೆದರಿಕೆ ಹಾಕಿದ್ದ. ಉಪಖಂಡದ ವ್ಯವಹಾರಗಳಲ್ಲಿ ಈಸ್ಟ್ ಇಂಡಿಯಾ ಕಂಪನಿಯು ತಲೆ ಹಾಕಲು ಪ್ರಾರಂಭಿಸಿದ ನಂತರದಲ್ಲಿ ಅವರ ರಾಜಕೀಯ ಮತ್ತು ಮಿಲಿಟರಿ ಏರುಗತಿಯನ್ನು ಮೊಟ್ಟಮೊದಲಬಾರಿಗೆ ತಡೆದದ್ದು ಇದೇ ಯುದ್ದದಲ್ಲಿ.

ಮರಾಠರೊಂದಿಗಿನ ಒಕ್ಕೂಟದ ಭಾಗವಾಗಿ ಕರ್ನಾಟಿಕವನ್ನು ಆಕ್ರಮಿಸಿದ ನಂತರ ಪ್ರಾರಂಭವಾದ ಎರಡನೇ ಆಂಗ್ಲೋ-ಮೈಸೂರು ಯುದ್ಧದ (1780-84) ನಡುವೆ ಹೈದರ್ 1782ರಲ್ಲಿ ನಿಧನರಾಗುತ್ತಾನೆ. ಹೈದರನ ಸಾವಿನೊಂದಿಗೆ, ಟಿಪ್ಪು ಅನಾಯಾಸವಾಗಿ ಮೈಸೂರಿನ ಮುಖ್ಯಸ್ಥನ ಸ್ಥಾನಕ್ಕೆ ಏರುತ್ತಾನೆ. ಹೈದರ್ ಅನಕ್ಷರಸ್ಥನಾಗಿದ್ದರೆ, ಟಿಪ್ಪು ಅಲ್ಪ ಮಟ್ಟದ ಖ್ಯಾತಿ ಹೊಂದಿದ್ದ ವಿದ್ವಾಂಸನಾಗಿದ್ದ ಮಾತ್ರವಲ್ಲದೇ ಬಹುಭಾಷೆಗಳನ್ನು ಬಲ್ಲವನೂ ಮತ್ತು ಯುದ್ಧಭೂಮಿಯಲ್ಲಿ ನುರಿತ ನಾಯಕನೂ ಆಗಿದ್ದನೆಂದು ಪುರಾವೆಗಳು ಹೇಳುತ್ತಿವೆ. ಆಂಧ್ರಪ್ರದೇಶ, ತಮಿಳುನಾಡು ಮತ್ತು ಉತ್ತರ ಕೇರಳದ ಭಾಗಗಳೊಂದಿಗೆ ಇಂದಿನ ಆಧುನಿಕ ಕರ್ನಾಟಕವನ್ನು ಒಳಗೊಂಡಿರುವ ವಿಶಾಲ ಮತ್ತು ಶ್ರೀಮಂತ ಸಾಮ್ರಾಜ್ಯವನ್ನು ಟಿಪ್ಪು ಆನುವಂಶಿಕವಾಗಿ ಪಡೆದನು. ಮಗನಿಗೆ ತಂದೆಯ ಸಾಮ್ರಾಜ್ಯವು ಯಾವುದೇ ಅಡೆ-ತಡೆಗಳಿಲ್ಲದೆ ವರ್ಗಗೊಂಡರೂ, ತಕ್ಷಣವೇ ರಾಜ್ಯವು ಇಂಗ್ಲಿಷರ ಬೆದರಿಕೆಗೆ ಒಳಗಾಯಿತು. ಟಿಪ್ಪು ತನ್ನ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದನು ಮತ್ತು 1784ರ ಮಂಗಳೂರು ಒಪ್ಪಂದದಲ್ಲಿ ಯಾರೂ ಕೂಡ ರಾಜಿಮಾಡಿಕೊಳ್ಳದೆಯೇ ಎರಡನೇ ಯುದ್ಧವು ಕೊನೆಗೊಂಡಿತು.

ಹೈದರ್ ಅಲಿ

1789-92ರ ನಡುವೆ ನಡೆದ ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ತಿರುವಾಂಕೂರು ರಾಜ್ಯದ ಮೇಲೆ ದಾಳಿ ನಡೆಸಿದ. ತಿರುವಾಂಕೂರು ರಾಜ್ಯವು ಬ್ರಿಟಿಷರ ಮಿತ್ರನಾಗಿದ್ದರಿಂದ ಈಸ್ಟ್ ಇಂಡಿಯಾ ಕಂಪನಿಗೆ ಯುದ್ಧ ಪ್ರವೇಶಿಸಲು ಇದು ಅವಕಾಶವನ್ನು ಒದಗಿಸಿತು. ಮರಾಠರು ಮತ್ತು ಹೈದರಾಬಾದಿನ ನಿಜಾಮರು ಕೂಡ ಆಂಗ್ಲರ ಪಡೆಗಳನ್ನು ಬೆಂಬಲಿಸಿದರು. ಈ ಯುದ್ಧದಲ್ಲಿ, ಆಗಷ್ಟೇ ಅಮೆರಿಕದಲ್ಲಿ ಆಂಗ್ಲರ ಪಡೆಗಳ ಸೋಲಿನ ನಂತರ ಭಾರತಕ್ಕೆ ಆಗಮಿಸಿದ್ದ ಅರ್ಲ್ ಆಫ್ ಕಾರ್ನ್‌ವಾಲಿಸ್‌ನ ಎದುರು ಟಿಪ್ಪು ಸೋತ. ಅವನು ತನ್ನ ಅರ್ಧ ರಾಜ್ಯವನ್ನು ಬಿಟ್ಟುಕೊಡಬೇಕಾಯಿತು ಮಾತ್ರವಲ್ಲದೆ ತನ್ನ ಇಬ್ಬರು ಪುತ್ರರನ್ನು ಒತ್ತೆಯಾಳುಗಳನ್ನಾಗಿ ಇರಿಸಬೇಕಾಯಿತು. ಆದಾಗ್ಯೂ, ಅವನು ಈಸ್ಟ್ ಇಂಡಿಯಾ ಕಂಪನಿಯ ವಿಸ್ತರಣಾ ನೀತಿಗೆ ಪ್ರಬಲ ತಡೆಗೋಡೆಯಾಗುಳಿದನು ಮತ್ತು ತನಗೆ ಸಹಾಯ ಮಾಡಬೇಕಾಗಿ ಫ್ರೆಂಚರಲ್ಲಿ ಬೇಡಿಕೆಯಿಡುವುದನ್ನು ಮುಂದುವರೆಸಿದನು. ಮಾರಿಷಸ್‌ನಲ್ಲಿದ್ದ ಫ್ರೆಂಚ್ ಕಮಾಂಡರ್ ಕಾಮ್ಟೆ ಡಿ ಮಲಾರ್ಟಿಕ್ ಅವರೊಂದಿಗೆ ಟಿಪ್ಪು ನಡೆಸಿದ್ದ ಪತ್ರವ್ಯವಹಾರವು ಕೊನೆಯ ಆಂಗ್ಲೋ-ಮೈಸೂರು ಯುದ್ಧದ ಅಂತಿಮ ಹಣಾಹಣಿಗೆ ಕಾರಣವಾಯಿತು. ಎಲ್ಲ ಕಡೆಗಳಿಂದಲೂ ಸುತ್ತುವರೆಯಲ್ಪಟ್ಟಿದ್ದ 48ರ ಹರೆಯದ ಟಿಪ್ಪು ತನಗಿಂತಲೂ ಶಕ್ತವಾಗಿದ್ದ ಇಂಗ್ಲಿಷ್ ಪಡೆಗಳೊಂದಿಗೆ ಹೋರಾಡುತ್ತಾ ಮೇ 4, 1799ರಂದು ಯುದ್ಧಭೂಮಿಯಲ್ಲಿ ಮರಣ ಹೊಂದಿದನು. ಅವನದ್ದೇ ಕೆಲವು ಮಂತ್ರಿಗಳು ಅವನಿಗೆ ದ್ರೋಹ ಬಗೆದಿದ್ದರು.

ಶ್ರೀರಂಗಪಟ್ಟಣದಲ್ಲಿ ಹೈದರ್ ಸಾವಿನ ನಂತರ ಟಿಪ್ಪು ಕಟ್ಟಿಸಿದ್ದ ಸಮಾಧಿಯಲ್ಲಿಯೇ ಅವನ ಸಮಾಧಿಯನ್ನೂ ನಾವು ಕಾಣಬಹುದು. ಇದು ದರ್ಯಾ ದೌಲತ್ ಬಾಗ್ ಎಂದು ಕರೆಯಲ್ಪಡುವ ಟಿಪ್ಪುವಿನ ಅರಮನೆಯಿಂದ ಒಂದೆರಡು ಕಿಲೋಮೀಟರ್ ದೂರದಲ್ಲಿರುವ ಉದ್ಯಾನದಲ್ಲಿದೆ. ಕೃತಕವಾದ ಹುಲಿಯ ಚರ್ಮವನ್ನು ಅವನ ಸಮಾಧಿಯ ಮೇಲೆ ಹೊದಿಸಲಾಗಿದೆ ಮತ್ತು ಸಮಾಧಿಯ ಒಳಭಾಗವನ್ನು ಟಿಪ್ಪು ಆಳ್ವಿಕೆಯ ಸಮಯದಲ್ಲಿ ಸಾಮ್ರಾಜ್ಯದ ಮ್ಯಾಸ್ಕಾಟ್ ಆಗಿದ್ದ ಹುಲಿಯ ಬಣ್ಣಗಳಲ್ಲಿ ಚಿತ್ರಿಸಲಾಗಿದೆ. ಕುತೂಹಲಕಾರಿಯಾದ ವಿಷಯವೆಂದರೆ, ಪ್ರತಿವರ್ಷ ನಡೆಯುವ ಅವನ ಉರುಸ್‌ಅನ್ನು (ಮರಣ ವಾರ್ಷಿಕೋತ್ಸವ) ಸೂಫಿ ಸಂತರಿಗೆ ಸಂಬಂಧಿಸಿದ ಆಚರಣೆಗಳ ಮೂಲಕ ಗುರುತಿಸಲಾಗುತ್ತದೆ. ಇಸ್ಲಾಂ ಧರ್ಮಕ್ಕಾಗಿ ಟಿಪ್ಪು ತನ್ನ ಪ್ರಾಣತ್ಯಾಗ ಮಾಡಿ ಹುತಾತ್ಮನಾದ ಎಂದು ಟಿಪ್ಪುವಿನ ದಂತಕತೆಯನ್ನು ಮುಸ್ಲಿಮರು ಹೇಗೆ ಬಳಸಿಕೊಂಡಿದ್ದಾರೆ ಎಂಬುದನ್ನು ಇದು ನಮಗೆ ತೋರಿಸಿಕೊಡುತ್ತದೆ. ಸಮಾಧಿಯ ಮಾರ್ಗದರ್ಶಕರಾದ ಶಬೀರ್ ಖಾನರು, ಧರ್ಮ ಮತ್ತು ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಪ್ರತಿದಿನ ಸಾವಿರಾರು ಜನರು ಅಲ್ಲಿಗೆ ಭೇಟಿ ನೀಡುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಮತ್ತೆ ಮತ್ತೆ ನೆನೆಯಬೇಕಾದ ‘ಟಿಪ್ಪುವಿನ ಸರ್ವಧರ್ಮ ಸಹಿಷ್ಣುತೆ’

ಟಿಪ್ಪು ಸುಲ್ತಾನನ ಕೊಡುಗೆ ಮತ್ತು ತಂದೆ-ಮಗನ ಅಲ್ಪಾವಧಿಯ ರಾಜವಂಶವನ್ನು ಮೌಲ್ಯಮಾಪನಕ್ಕೆ ಒಳಪಡಿಸುವುದು ಹೇಗೆ? ಇವರಿಬ್ಬರು ಕೂಡಿ ಮೈಸೂರನ್ನು 40 ವರ್ಷಗಳಿಗಿಂತಲೂ ಅಲ್ಪ ಕಾಲ ಆಳಿದರು ಮತ್ತು ಅದರ ಶ್ರೀಮಂತ ಮತ್ತು ಫಲವತ್ತಾದ ಪ್ರದೇಶವನ್ನು ಅಪೇಕ್ಷಿಸುವ ವಿವಿಧ ವೈರಿಗಳೊಂದಿಗೆ ನಿರಂತರವಾಗಿ ಹೋರಾಡಿದರು. ಟಿಪ್ಪು ತನ್ನ ಆಡಳಿತಾವಧಿಯ 17 ವರ್ಷಗಳ ಆಳ್ವಿಕೆಯಲ್ಲಿ ನೆರೆಯ ರಾಜ್ಯಗಳೊಂದಿಗೆ ಶಾಂತಿಯುತ ಸಂಬಂಧವನ್ನು ಹೊಂದಿರಲಿಲ್ಲ. ಮೈಸೂರು ಪ್ರದೇಶದ ರಾಜಕೀಯ ಆರ್ಥಿಕತೆಯ (political economy) ಮೇಲೆ ಅವರ ಪ್ರಭಾವವು ದೂರಗಾಮಿ ಪರಿಣಾಮಗಳನ್ನು ಉಂಟುಮಾಡಿದ್ದರೂ ಟಿಪ್ಪುವಿನ ಧಾರ್ಮಿಕ ನೀತಿಗಳ ಬಗ್ಗೆ ನಡೆಯುವ ತೀವ್ರತರವಾದ ವಾದಗಳ ನಡುವೆ ಇವುಗಳನ್ನು ನಿರ್ಲಕ್ಷಿಸಲಾಗಿದೆ.

ಟಿಪ್ಪುವಿನ ಜೀವನ ಮತ್ತು ಆತನ ಆಡಳಿತಾವಧಿಯ ಬಗ್ಗೆ ಮಾಹಿತಿ ನೀಡುವಂತಹ ಪ್ರಾಥಮಿಕ ಆಧಾರಗಳಲ್ಲಿ ಎರಡು ವಿಧವನ್ನು ನಾವು ಗುರುತಿಸಬಹುದಾಗಿದೆ – ಹುಸೇನ್ ಅಲಿ ಖಾನ್ ಕಿರ್ಮಾನಿ ಅವರಂತಹವರು ಆಸ್ಥಾನದ ಇತಿಹಾಸವನ್ನು ದಾಖಲಿಸಿರುವಂತಹದ್ದು ಮೊದಲನೆಯ ರೀತಿಯ ದಾಖಲೆಗಳಾಗಿದ್ದರೆ, ಈಸ್ಟ್ ಇಂಡಿಯಾ ಕಂಪನಿಗೆ ಸೇವೆ ಸಲ್ಲಿಸುತ್ತಿದ್ದ ಸೈನಿಕರು ಮತ್ತು ನಾಗರಿಕರು ಬಿಟ್ಟುಹೋದ ದಾಖಲಾತಿಗಳು ಎರಡನೆಯ ವಿಧವಾಗಿವೆ. ವೃತ್ತಿಪರರಲ್ಲದ ಇತಿಹಾಸಕಾರರು ಮಾಡುವಂತೆ ಈ ಎರಡರಲ್ಲಿ ಯಾವುದೇ ಒಂದು ರೀತಿಯ ಮೂಲಗಳನ್ನು ಪ್ರತ್ಯೇಕವಾಗಿ ಓದಿದರೆ ಸಮಸ್ಯೆಯಾಗುತ್ತದೆ.

ಆಸ್ಥಾನದ ಚರಿತ್ರಕಾರರು ವಾಡಿಕೆಯಂತೆ ತಮ್ಮ ಯಜಮಾನರ ಕಾರ್ಯಗಳನ್ನು ಬಹಳ ಉತ್ಪ್ರೇಕ್ಷಿಸುತ್ತಾರೆ. ಉದಾಹರಣೆಗೆ ಕಿರ್ಮಾನಿ ಬರೆದ Nishan-I-Haidariಯ (ನಿಶಾನ್-ಇ-ಹೈದರಿ) ಎರಡು ಸಂಪುಟಗಳನ್ನು ತೆಗೆದುಕೊಳ್ಳಬಹುದು. ಇವುಗಳನ್ನು ಕ್ರಮವಾಗಿ 1842 ಮತ್ತು 1844ರಲ್ಲಿ ಇಂಗ್ಲಿಷ್‌ಗೆ ಅನುವಾದಿಸಲಾಯಿತು ಮತ್ತು ಈ ಅನುವಾದಗಳು ವಿಶ್ವಾಸಾರ್ಹವಾಗಿಲ್ಲ. ಕಿರ್ಮಾನಿ ಅವರು ಮೂಲ ಸಂಪುಟಗಳನ್ನು ಬರೆದಾಗ ನಿವೃತ್ತಿ ಹೊಂದಿ ಕಲ್ಕತ್ತಾದಲ್ಲಿ ಬ್ರಿಟಿಷರಿಂದ ಪಿಂಚಣಿ ಪಡೆಯುತ್ತಿದ್ದರು. ಕೂರ್ಗಿನಲ್ಲಿ (ಕೊಡಗಿನಲ್ಲಿ) 80,000 ಜನರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದೆ ಎಂಬ ಅವರ ಹೇಳಿಕೆಯನ್ನು ಆಗಾಗ್ಗೆ ಉಲ್ಲೇಖಿಸಲಾಗುತ್ತದೆ. ಆದರೆ, ಈ ಸಂಖ್ಯೆಯು 1849-50ರಲ್ಲಿ ಕೂರ್ಗಿನ ಸಂಪೂರ್ಣ ಜನಸಂಖ್ಯೆಯ ಗಾತ್ರವಾಗಿತ್ತು ಎಂಬುದು ಕಿರ್ಮಾನಿಯವರ ಉತ್ಪ್ರೇಕ್ಷಿತ ಮಾತನ್ನು ಸೂಚಿಸುತ್ತದೆ. ಬ್ರಿಟಿಷ್ ಭಾರತದಲ್ಲಿ ಮೊದಲನೆಯ ಜನಗಣತಿಯಾದ 1871ರ ಜನಗಣತಿಯು, ಕೂರ್ಗ್‌ನಲ್ಲಿ 11,304 ಮುಸ್ಲಿಮರು ಮತ್ತು 154476 ಹಿಂದೂಗಳಿದ್ದರು ಎಂಬುದನ್ನು ದಾಖಲಿಸುತ್ತದೆ. ಅಲ್ಲಿ ಮತಾಂತರವು ನಡೆದಿರಬಹುದಾದರೂ ಸಂಖ್ಯೆಯನ್ನು ಗಣನೀಯವಾಗಿ ಉತ್ಪ್ರೇಕ್ಷಿಸಲಾಗಿದೆ ಎಂಬಂತೆ ತೋರುತ್ತದೆ.

ಟಿಪ್ಪುವಿನ ಸೈನ್ಯವು ಮಲಬಾರ್‌ನಲ್ಲಿ ಸಾವಿರಾರು ನಾಯರ್‌ಗಳನ್ನು ಬೆದರಿಸುವ ಮೂಲಕ ಮತಾಂತರಸಿದೆ ಎಂಬ ಆರೋಪಗಳಿವೆ. ಟಿಪ್ಪುವು ಬಹುಸಂಖ್ಯೆಯ ಬಹುಪತಿತ್ವವನ್ನು ನಿಷೇಧಿಸುವ ಘೋಷಣೆಯನ್ನು ಹೊರಡಿಸಿದ್ದ ಮತ್ತು ಅದನ್ನು ಉಲ್ಲಂಘಿಸಿದರೆ ಅವರನ್ನು ಮತಾಂತರಿಸಲಾಗುವುದು ಎಂದು ಎಚ್ಚರಿಸಿದ್ದನೆಂಬ ವಾದವಿದೆ. ಇದನ್ನು ನಾವು ಆ ಕಾಲದ ಹಿನ್ನೆಲೆಯಲ್ಲಿಟ್ಟು ಅರ್ಥೈಸಬೇಕಿದೆ. ಕೆ.ಎಂ. ಪಣಿಕ್ಕರ್ ಅವರು ತಮ್ಮ History of Kerala: 1498-1801 ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ; “ಟಿಪ್ಪು ಈ ಅದ್ಭುತ ಆದೇಶವನ್ನು ಹೊರಡಿಸಲು ಕಾರಣ ಧಾರ್ಮಿಕ ಮತಾಂಧತೆಯಲ್ಲ. ಅವನ ದೃಷ್ಟಿಯಲ್ಲಿ ಅಶ್ಲೀಲ ಎನಿಸಿದ್ದ ಅಭ್ಯಾಸಗಳನ್ನು, ನಾಯರ್‌ಗಳು ತ್ಯಜಿಸುವಂತೆ ಆದೇಶಿಸುವುದರಲ್ಲಿ, ಅವನು ನಾಗರಿಕತೆಯ ಧ್ಯೇಯವನ್ನು ಕೈಗೊಳ್ಳುತ್ತಿದ್ದೇನೆ ಎಂದು ದೃಢವಾಗಿ ಮನಗಂಡಿದ್ದ. ಅವನ ಆದೇಶದಲ್ಲಿ ಕಂಡುಬರುವುದು ಜನರ ನೈತಿಕ ಮತ್ತು ಭೌತಿಕ ಕಲ್ಯಾಣಕ್ಕಾಗಿ ಹವಣಿಸುತ್ತಿದ್ದ ಸಂಕುಚಿತ ಸುಧಾರಕ ಮನಸ್ಸೇ ಹೊರತು ಕಾಫಿರನನ್ನು ಮತಾಂತರಿಸುವ ಅಪೇಕ್ಷೆಯ ಮತಾಂಧತೆಯಲ್ಲ”.

ಟಿಪ್ಪುವಿನ ಆಸ್ಥಾನದ ಇತಿಹಾಸಕಾರರ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸುವ ಮೊದಲೇ, ಬ್ರಿಟಿಷ್ ಬರಹಗಾರರಾದ ಕರ್ನಲ್ ಮಾರ್ಕ್ ವಿಲ್ಕ್ (1810ರಲ್ಲಿ) ಮತ್ತು ಲೆಫ್ಟಿನೆಂಟ್-ಕರ್ನಲ್ ವಿಲಿಯಂ ಕಿರ್ಕ್‌ಪ್ಯಾಟ್ರಿಕ್ (1811ರಲ್ಲಿ) ಟಿಪ್ಪುವನ್ನು ಮತಾಂಧ ಮತ್ತು ಅಸಹಿಷ್ಣು ಧರ್ಮಾಂಧ ಎಂದು ಘೋಷಿಸಿದ್ದರು. ಅವರ ಕೃತಿಗಳನ್ನು, ಈಸ್ಟ್ ಇಂಡಿಯಾ ಕಂಪನಿಯ ಭಾರತವನ್ನು ಸುಲಿಗೆ ಮಾಡುವ ಹಂಬಲ ಮತ್ತು ಟಿಪ್ಪುವನ್ನು ಓರಿಯೆಂಟಲ್ (ಪೂರ್ವದೇಶಗಳ, ಅದರಲ್ಲೂ ಮುಖ್ಯವಾಗಿ ಏಷ್ಯಾದ) ನಿರಂಕುಶಾಧಿಕಾರಿ ಎಂದು ಬಣ್ಣಿಸಿ, ಅದರ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುವ ಯತ್ನವನ್ನು ನ್ಯಾಯಸಮ್ಮತಗೊಳಿಸಿಕೊಳ್ಳಲು ನಡೆಸಿದ ಪ್ರಯತ್ನಗಳ ಹಿನ್ನೆಲೆಯಲ್ಲಿ ಓದಿಕೊಳ್ಳಬೇಕು.

ಮೈಕೆಲ್ ಸೊರಾಕೊ ಅವರು 2013ರಲ್ಲಿ ಮೇರಿಲ್ಯಾಂಡ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆಯಲು ಸಲ್ಲಿಸಿದ ಮಹಾಪ್ರಬಂಧದಲ್ಲಿ, ಹಳೆಯ ದಾಖಲೆಗಳು, ಅಂದಿನ ವೃತ್ತಿಪತ್ರಿಕೆಗಳನ್ನು ಪುರಾವೆಗಳಾಗಿ ಆಧರಿಸಿ, ಅದರೊಟ್ಟಿಗೆ ಜನಪ್ರಿಯ ಕಲೆ ಮತ್ತು ರಂಗಭೂಮಿ ಮೂಲಗಳನ್ನೂ ಸಂಶೋಧಿಸಿ “ಟಿಪ್ಪುವನ್ನು ಖಳನಾಯಕನನ್ನಾಗಿಸುವುದು ಸಾಮ್ರಾಜ್ಯಶಾಹಿ ಸಂಸ್ಕೃತಿಯ ಬೆಳವಣಿಗೆಗೆ ಸಂಬಂಧಿಸಿದೆ. ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಲು ಗವರ್ನರ್ ಜನರಲ್‌ಗಳು ಪ್ರಜ್ಞಾಪೂರ್ವಕವಾಗಿ ಟಿಪ್ಪುವಿನ್ನು ಕಳಂಕಿತನನ್ನಾಗಿ ಬಿಂಬಿಸಿ, ತಮ್ಮ ಸ್ವಂತ ಆಕ್ರಮಣಕಾರಿ ಕ್ರಮಗಳನ್ನು ತಮ್ಮ ದೇಶದಲ್ಲಿದ್ದ ಬ್ರಿಟಿಷರಿಗೆ ಹೆಚ್ಚು ಒಪ್ಪಿತವಾಗುವಂತೆ ನೋಡಿಕೊಂಡರು. ಸಂದರ್ಭವನ್ನು ತದ್ವಿರುದ್ಧವಾಗಿ ಕಟ್ಟಿಕೊಡುವ ಪ್ರಕ್ರಿಯೆಯ ಮೂಲಕ, ಮೈಸೂರಿನ ಸ್ಥಳೀಯ ನಿವಾಸಿಗಳನ್ನು ವರ್ಣಿಸಲಾಗದಂತಹ ನಿರಂಕುಶಾಧಿಕಾರಿಯ ದಂಗೆಯಿಂದ ರಕ್ಷಿಸುತ್ತದೆಯಾದ್ದರಿಂದ ಯುದ್ಧವು ರಕ್ಷಣೆಗಾಗಿ ನಡೆಯುತ್ತಿರುವುದೆಂದು ಸಮರ್ಥಿಸಲ್ಪಟ್ಟಿತು. ಟಿಪ್ಪುವನ್ನು ಖಳನಾಯಕನಂತೆ ದೂಷಿಸುವುದು ಮತ್ತವನ ಬಗ್ಗೆ ಕಟ್ಟಲಾಗುತ್ತಿದ್ದ ತಪ್ಪು ಚಿತ್ರಣಗಳು ಹಚ್ಚಾದಂತೆ ಈಸ್ಟ್ ಇಂಡಿಯಾ ಕಂಪನಿಯು ತಾನು ದಕ್ಷಿಣ ಭಾರತವನ್ನು ಅನಾಗರಿಕ ಆಡಳಿತಗಾರನ ದುರಾಚಾರದಿಂದ ಮುಕ್ತಗೊಳಿಸಲು ನೈತಿಕ ಹೋರಾಟದಲ್ಲಿ ತೊಡಗಿದೆ ಎಂದು ಸ್ವಯಂಚಿತ್ರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಬ್ರಿಟಿಷರ ಜನಪ್ರಿಯ ಕಲ್ಪನೆಯಲ್ಲಿ ಕಂಪನಿಯ ಸೇವಕರು ನಿರ್ಲಜ್ಜ ಧನದಾಹಿಗಳಿಂದ ಸದ್ಗುಣಶೀಲ ಬ್ರಿಟಿಷ್ ರಾಷ್ಟ್ರದ ಅತ್ಯುತ್ತಮ ಗುಣಗಳನ್ನು ಮೈಗೂಡಿಸಿಕೊಂಡಿದ್ದ ಸೈನಿಕ-ವೀರರಾಗಿ ಬದಲುಗೊಂಡರು. ’ಟಿಪ್ಪೂ ದಿ ಟೈರಂಟ್’ನ ಮತಧರ್ಮದ್ರೋಹಿ ಮತ್ತು ಹಿಂಸಾತ್ಮಕ ಪಾತ್ರದ ಅಧ್ಯಯನವು ಅಂತಿಮವಾಗಿ ದೇಶ ಮತ್ತು ವಿದೇಶಗಳಲ್ಲಿ ಸಾಮ್ರಾಜ್ಯವನ್ನು ಹೇಗೆ ಕಟ್ಟಿಕೊಡಲಾಗಿದೆ ಎಂಬುದರ ಕುರಿತು ಬಹಳಷ್ಟು ಬೆಳಕು ಚೆಲ್ಲುತ್ತದೆ” ಎಂದು ವಾದಿಸಿದರು.

ಹದಿನೆಂಟನೇ ಶತಮಾನದ ಅಂತ್ಯದ ಗೊಂದಲಮಯ ಕಾಲಘಟ್ಟದ ಪ್ರಬಲ ಮತ್ತು ಮಹತ್ವಾಕಾಂಕ್ಷೆಯ ಆಡಳಿತಗಾರನಾಗಿದ್ದ ಟಿಪ್ಪು, ತನ್ನ ಕಾಲದಲ್ಲಿನ ಪ್ರಮುಖ ವ್ಯಕ್ತಿಗಳಲ್ಲೊಬ್ಬನಾಗಿದ್ದನು. ಸ್ವತಂತ್ರ ಸಾರ್ವಭೌಮನಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳದಿದ್ದರೆ ಮೈಸೂರಿನ de facto ಆಡಳಿತಗಾರನಾಗಿ ಮಾತ್ರ ಉಳಿಯುತ್ತೇನೆ ಎಂದು ಅರಿತ ಅವನು ತನ್ನನ್ನು ಸಮರ್ಥಿಸಿಕೊಳ್ಳಲು ಮಾರ್ಗಗಳನ್ನು ಹುಡುಕಿದನು. ಅವನ ತಂದೆಯ ಬೇರುಗಳು ಅಸ್ಪಷ್ಟವಾಗಿದ್ದವು ಮಾತ್ರವಲ್ಲ, ಬಹಳಷ್ಟು ಚಿತ್ರಣಗಳಲ್ಲಿ ಹೈದರನು ಹೆಚ್ಚೆಂದರೆ ಅದೃಷ್ಟ ಹೊಂದಿದ್ದ ಧೈರ್ಯಶಾಲಿ ಸೈನಿಕ ಮಾತ್ರನಾಗಿದ್ದನು. ಟಿಪ್ಪುವಿನಂತೆ ದಢೀರಾಗಿ ಅಧಿಕಾರ ಪಡೆದಿದ್ದವನಿಗೆ ಎಲ್ಲರೂ ಒಪ್ಪುವಂತಹ ಚಕ್ರವರ್ತಿಯಂತೆ ಕಾಣುವುದು ಮುಖ್ಯವಾಗಿತ್ತು. ಮೊಘಲರು ಅಥವಾ ತನ್ನ ನೆರೆಹೊರೆಯವರಿಂದ ಈ ಸಮ್ಮತಿಯನ್ನು ಪಡೆದುಕೊಳ್ಳಲು ವಿಫಲವಾದ ಕಾರಣ (ಟಿಪ್ಪುವು ಸಾಮಾಜಿಕವಾಗಿ ತಮಗಿಂತ ಕೀಳಾಗಿದ್ದ ಕಾರಣಕ್ಕೆ ಹೈದರಾಬಾದಿನ ನಿಜಾಮನು ತನ್ನ ಮಗಳನ್ನು ಟಿಪ್ಪುವಿನ ಮಗನಿಗೆ ಮದುವೆಮಾಡಿಕೊಡಲು ನಿರಾಕರಿಸಿದನು), ಟಿಪ್ಪು ಆಗಲೂ ಇಸ್ಲಾಮಿನ ಖಲೀಫ್ (ಮುಹಮ್ಮದ್ದರ ಮರಣಾನಂತರದ ಕಾಲಘಟ್ಟದಲ್ಲಿ ಇಸ್ಲಾಂಮಿನ ರಾಜಕೀಯ ಮತ್ತು ಧಾರ್ಮಿಕ ಮುಖಂಡರು) ಆಗಿದ್ದಂಥಹ ಒಟ್ಟೋಮನ್ ಸುಲ್ತಾನನಂತಹ ರಾಜರನ್ನು ಸಂಪರ್ಕಿಸಿದ. ಟರ್ಕಿಯೊಂದಿಗಿನ ಸಂಪರ್ಕಗಳೊಂದಿಗೆ ಅವನು ಮೊಘಲರಿಗಿಂತಲೂ ಉನ್ನತ ಅಧಿಕಾರ ಹೊಂದಿದ್ದವರನ್ನು ಸಂಪರ್ಕಿಸಿದ್ದ.

ತನ್ನನ್ನು ಸ್ವತಂತ್ರ ಆಡಳಿತಗಾರನನ್ನಾಗಿ ಸ್ಥಾಪಿಸಿಕೊಳ್ಳಲು ಮತ್ತು ಸಹಾಯ ಪಡೆಯಲು ಟಿಪ್ಪು ತನ್ನ ರಾಜತಾಂತ್ರಿಕ ನಿಯೋಗಗಳನ್ನು ಫ್ರಾನ್ಸ್, ಇರಾನ್ ಮತ್ತು ಅಫ್ಘಾನಿಸ್ತಾನಕ್ಕೆ ಕೂಡ ಕಳುಹಿಸಿದ್ದನು.

ಟಿಪ್ಪು ಸುಲ್ತಾನನ ಕಾರ್ಯಗಳನ್ನು ಮೌಲ್ಯಮಾಪನ ಮಾಡಲು ರಾಷ್ಟ್ರೀಯತೆ ಅಥವಾ ಜಾತ್ಯತೀತತೆಗಳೆಂಬ ಮಾನದಂಡವನ್ನು ಬಳಸುವುದು ನಿಷ್ಪ್ರಯೋಜಕವಾಗಿದೆ. ರಾಷ್ಟ್ರೀಯತೆಯು ಇಂಗ್ಲಿಷರನ್ನು ವಿರೋಧಿಸುವುದು ಎನ್ನುವಷ್ಟು ಸರಳವಾಗಿದ್ದರೆ, ಟಿಪ್ಪುವನ್ನು ನಿರಾಯಾಸವಾಗಿ ಸ್ವಾತಂತ್ರ್ಯ ಹೋರಾಟಗಾರನೆಂದು ವರ್ಗೀಕರಿಸಬಹುದು. ಆದರೆ ಆಂಗ್ಲರು ಮುಂದೆ ಒಡ್ಡಲಿದ್ದ ತೊಂದರೆಯನ್ನು ಅವನು ಗುರುತಿಸಿದ್ದನೇ? ಎಂಬ ಪ್ರಶ್ನೆಗೆ ಉತ್ತರವು ಈ ಪ್ರಬಂಧದ ವ್ಯಾಪ್ತಿಯನ್ನು ಮೀರಿದೆ.

ರಾಷ್ಟ್ರ ಪ್ರಭುತ್ವಗಳ (Nation State) ಭವ್ಯ ಇತಿಹಾಸಗಳಿಗೆ ಐಕಾನ್‌ಗಳ ಅಗತ್ಯವಿದೆ. ಹದಿನೆಂಟನೇ ಶತಮಾನದ ಉತ್ತರಾರ್ಧದ ಪ್ರಕ್ಷುಬ್ಧ ವರ್ಷಗಳಲ್ಲಿ, ಭಾರತದಲ್ಲಿನ ಆಡಳಿತಗಾರರು ಸ್ವಾರ್ಥಿಗಳಾಗಿ ಕೇವಲ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವಲ್ಲಿ ನಿರತರಾಗಿದ್ದಾಗ, ಟಿಪ್ಪು ಈಸ್ಟ್ ಇಂಡಿಯಾ ಕಂಪನಿಯ ಆಕ್ರಮಣಕಾರಿ ನೀತಿಗಳ ವಿರುದ್ಧ ಭದ್ರವಾದ ಕೋಟೆಯಂತೆ ನಿಂತು ಸೆಣೆಸಿದ ಎಂಬುದು ನಿರ್ವಿವಾದ. ಆದಕಾರಣ, ಆಧುನಿಕ ಭಾರತದಲ್ಲಿ ಜಾತ್ಯತೀತ ರಾಷ್ಟ್ರೀಯತೆಯ ಕಾಳಜಿಗಳನ್ನು ಬಲಪಡಿಸಲು ಟಿಪ್ಪುವಿಗೆ ನೀಡಲಾಗಿರುವ ಸ್ಥಾನಮಾನವು ಸರಿಯೂ, ಸಮರ್ಥಿನೀಯವೂ ಆಗಿದೆ.

ಇದನ್ನೂ ಓದಿ: ಟಿಪ್ಪು ಮತ್ತು ಮೈಸೂರು ಚರಿತ್ರೆ ಕುರಿತ ಎರಡು ಅಮೂಲ್ಯ ಬರಹಗಳು

ಟಿಪ್ಪು ಜಾತ್ಯತೀತನಾಗಿದ್ದನೇ? ಶ್ರೀರಂಗಪಟ್ಟಣಕ್ಕೆ ಭೇಟಿ ನೀಡುವವರು ಟಿಪ್ಪುವಿನ ಅರಮನೆಯಿಂದ ಕೆಲ ನೂರು ಮೈಲಿಗಳ ದೂರದಲ್ಲಿಯೇ ಇರುವ ಪುರಾತನವಾದ, ಬೃಹತ್ ಶ್ರೀ ರಂಗನಾಥಸ್ವಾಮಿ ದೇವಾಲಯವನ್ನೂ ಗಮನಿಸಿಯೇ ಇರುತ್ತಾರೆ. ಈಗ ಅವನನ್ನು ಚಿತ್ರಿಸಲಾಗುತ್ತಿರುವಂತೆ ಅವನೇನಾದರು ಧಾರ್ಮಿಕ ಮತಾಂಧನಾಗಿದ್ದರೆ, ಅಂತಹ ದೇವಾಲಯವನ್ನು ತನ್ನ ಅಧಿಕಾರದ ಗದ್ದುಗೆಯ ಸಮೀಪದಲ್ಲಿಯೇ ಉಳಿಯಲು ಅವಕಾಶ ಕೊಡುತ್ತಿದ್ದನೆ?

ಅಲ್ಲಿಯೇ, ಸಮೀಪದಲ್ಲಿ ಇನ್ನೂ ಎರಡು ಪ್ರಮುಖ ದೇವಾಲಯಗಳಿವೆ. ಪ್ರಮುಖ ದೇವಾಲಯಗಳಿಗೆ ಟಿಪ್ಪು ಉದಾರವಾಗಿಯೇ ದಾನ-ದತ್ತಿ ನೀಡಿದ ಹಲವಾರು ಉದಾಹರಣೆಗಳಿವೆ ಮತ್ತು ಈ ದೇವಾಲಯಗಳಿಗೆ ಟಿಪ್ಪು ಕನ್ನಡದಲ್ಲಿ ಬರೆದಿದ್ದ ಪತ್ರಗಳು ಈಗಲೂ ಸಿಗುತ್ತವೆ. ಅವನ ಆಪ್ತ ಸಲಹೆಗಾರರು ಹಿಂದೂ ಬ್ರಾಹ್ಮಣರಾಗಿದ್ದರು. ಕನ್ನಡ ಜಾನಪದದಲ್ಲಿ ಟಿಪ್ಪುವನ್ನು ಎತ್ತರವಾದ ಸ್ಥಾನವಿದೆ.

ಹೀಗಿರುವಾಗ, ಟಿಪ್ಪುವನ್ನು ಇಂದು ಏಕೆ ತೀವ್ರವಾಗಿ ನಿಂದಿಸಲಾಗುತ್ತದೆ?

ಇದಕ್ಕೆ ಉತ್ತರವೊಂದನ್ನು ಪ್ರಖ್ಯಾತ ಇತಿಹಾಸಕಾರರಾದ ರೋಮಿಲಾ ಥಾಪರ್ ಅವರು ಬೇರೆಬೇರೆ ಸಂದರ್ಭಗಳಲ್ಲಿ ನೀಡಿರುವ, ವಸಾಹತುಶಾಹಿ ಮತ್ತು ಕೋಮುವಾದಿ ಇತಿಹಾಸಶಾಸ್ತ್ರದ ನಡುವೆ ಬಲವಾದ ಸಂಬಂಧವಿದೆ ಎಂಬ ಹೇಳಿಕೆಯಲ್ಲಿ ಕಂಡುಕೊಳ್ಳಬಹುದಾಗಿದೆ. ಟಿಪ್ಪುವಿನ ವಿಚಾರದಲ್ಲಿ, ವಸಾಹತುಶಾಹಿ ಮತ್ತು ಕೋಮುವಾದಿ ಇತಿಹಾಸಶಾಸ್ತ್ರವು ಅತ್ಯಂತ ಸಲೀಸಾಗಿ ಬೆಸೆದುಕೊಂಡಿರುವದನ್ನು ನಾವು ಕಾಣುತ್ತೇವೆ.

ಹುಲಿಯ ಗುರುತನ್ನು ಅವನು ಅಳವಡಿಸಿಕೊಳ್ಳುವುದು ಸಹ ಲೆಕ್ಕಾಚಾರ ಮಾಡಿ ತೆಗೆದುಕೊಂಡ ಕ್ರಮವೆಂದು ತೋರುತ್ತದೆ. ಹುಲಿಯು ಬಹಳ ಹಿಂದಿನಿಂದಲೂ ಪ್ರಮುಖ ಹಿಂದೂ ರಾಜವಂಶಗಳು ಬಳಸುತ್ತಿದ್ದ ಲಾಂಛನವಾಗಿತ್ತು. ಹಿಂದೂಗಳೇ ಹೆಚ್ಚಾಗಿ ವಾಸಿಸುವ ಪ್ರದೇಶದ ಮೇಲೆ ಟಿಪ್ಪು ಬಹುಶಃ ಇಂತಹ ಕ್ರಮಗಳ ಮೂಲಕವೇ ಮೇಲೆ ತನ್ನ ಆಳ್ವಿಕೆಯನ್ನು ಸಮರ್ಥಿಸಿಕೊಂಡಿರಬಹುದು. ಟಿಪ್ಪು ನ್ಯಾಯಸಮ್ಮತತೆಯನ್ನು ಹೇಗೆ ಹುಡುಕಿದರು ಎಂಬುದರ ಕುರಿತು ಉಪಯುಕ್ತ ಚರ್ಚೆಗಳನ್ನು ಕೇಟ್ ಬ್ರಿಟಲ್‌ಬ್ಯಾಂಕ್‌ರ ಕೃತಿ Tipu Sultanʼs Search for Legitimacy: Islam and Kingship in a Hindu Domain (1997)ಯಲ್ಲಿ ಕಾಣಬಹುದು.

ಹದಿನೆಂಟನೇ ಶತಮಾನದ ಭಾರತೀಯ ಇತಿಹಾಸದ ಅತ್ಯಂತ ಪ್ರಸಿದ್ಧ ವ್ಯಕ್ತಿಗಳಲ್ಲಿ ಟಿಪ್ಪು ಒಬ್ಬನಾಗಿದ್ದರೂ ಸಹ ಅವನನ್ನು ನಾವು ಅತ್ಯಂತ ಕಡಿಮೆ ಅರ್ಥಮಾಡಿಕೊಂಡಿದ್ದೇವೆ. ಟಿಪ್ಪುವಿನ ನಡವಳಿಕೆ ಮತ್ತು ಕೊಡುಗೆಯು ವಿವಾದಾತ್ಮಕವಾಗಿಯೇ ಉಳಿದಿದೆ. ನಾವು ಆಧುನಿಕತೆಯ ಚೌಕಟ್ಟಿನಲ್ಲಿ ಟಿಪ್ಪುವನ್ನು ಮೌಲ್ಯಮಾಪನ ಮಾಡಲು ಪ್ರಯತ್ನಿಸಿದರೆ, ಅವನ ಆಳ್ವಿಕೆಯ ಶ್ರೀಮಂತಿಕೆಯನ್ನು ಪ್ರಶಂಸಿಸಲು ವಿಫಲರಾಗಬಹುದು. ಟಿಪ್ಪುವಿನದು ಅವನ ಕಾಲದ ಹಿನ್ನೆಲೆಯಲ್ಲಿಟ್ಟು ನೋಡಬೇಕಾದ ವ್ಯಕ್ತಿತ್ವ. ರಾಜಕೀಯವಾಗಿ ಚಾಣಾಕ್ಷನಾಗಿದ್ದ ತನ್ನ ತಂದೆಗಿಂತ ಹೆಚ್ಚು ಆದರ್ಶವಾದಿಯಾಗಿದ್ದರೂ ಟಿಪ್ಪು ನೈಜ ರಾಜಕಾರಾಣದ ಅಭ್ಯಾಸಿಯಾಗಿದ್ದನು.

ಭಾರತೀಯ ಇತಿಹಾಸದಲ್ಲಿನ ಮುಸ್ಲಿಂ ದೊರೆಗಳನ್ನು ಖಳನಾಯಕರನ್ನಾಗಿಸುವ ಪ್ರವೃತ್ತಿ ಕಳೆದ ಕೆಲವು ದಶಕಗಳಿಂದ ಚಾಲ್ತಿಯಲ್ಲಿದೆ ಮತ್ತು ಅದಕ್ಕೆ ಬಲಿಯಾದವರಲ್ಲಿ ಟಿಪ್ಪು ಕೂಡ ಸೇರಿದ್ದಾನೆ. ಇದು ಅಪಾಯಕಾರಿ ಪ್ರವೃತ್ತಿಯಾಗಿದ್ದು ಇದನ್ನು ನಾವು ತಡೆಯಬೇಕಿದೆ. ಟಿಪ್ಪುವಿನ ಅಲ್ಪಾವಧಿಯ ಆಳ್ವಿಕೆಯು ಭಾರತದ ಇತಿಹಾಸದಲ್ಲಿ ತದನಂತರ ನಡೆದ ಘಟನಾವಳಿಗಳನ್ನು ಬಹಳವಾಗಿ ಪ್ರಭಾವಿಸಿತು. ಟಿಪ್ಪುವನ್ನು ನೆನೆಯಲು ಇದೊಂದು ಕಾರಣವೇ ಸಾಕು.

ವಿಖಾರ್ ಅಹ್ಮದ್ ಸಯೀದ್
(ಕೃಪೆ: ಫ್ರಂಟ್‌ಲೈನ್)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...