Homeಕರ್ನಾಟಕಮೈಸೂರು ರಾಕೆಟ್‌ಗಳ ಉತ್ಖನನ; ಆಸಕ್ತಿ ಕೆರಳಿಸುವ ಇತಿಹಾಸ

ಮೈಸೂರು ರಾಕೆಟ್‌ಗಳ ಉತ್ಖನನ; ಆಸಕ್ತಿ ಕೆರಳಿಸುವ ಇತಿಹಾಸ

- Advertisement -
- Advertisement -

(ರಾಜ್ಯ ಬಿಜೆಪಿ ಸರ್ಕಾರವು ಇತ್ತೀಚಿಗೆ ಬೆಂಗಳೂರು-ಮೈಸೂರು ನಡುವೆ ಸಂಚರಿಸುತ್ತಿದ್ದ ’ಟಿಪ್ಪು ಎಕ್ಸ್‌ಪ್ರೆಸ್’ ರೈಲನ್ನು ’ಒಡೆಯರ್ ಎಕ್ಸ್‌ಪ್ರೆಸ್’ ಎಂದು ಮರುನಾಮಕರಣ ಮಾಡುವ ಮೂಲಕ ಟಿಪ್ಪುವಿನ ಲೆಗಸಿಯನ್ನು ಮರೆಮಾಚುವ ಕಡೆಗೆ ಮತ್ತೊಂದು ಹೆಜ್ಜೆಯನ್ನಿರಿಸಿದೆ. ಮೈಸೂರಿನ ರಂಗಾಯಣದಲ್ಲಿ ಟಿಪ್ಪುವಿನ ಬಗ್ಗೆ ಕಪೋಲಕಲ್ಪಿತ ಸಂಗತಿಗಳನ್ನಿಟ್ಟುಕೊಂಡು ಬರೆದ ನಾಟಕವನ್ನು ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಟಿಪ್ಪುವನ್ನು, ಅವನ ಜೀವಿತಾವಧಿಯನ್ನು ನೆನೆಯುವ ಪ್ರಯತ್ನವಾಗಿ ಕರ್ನಾಟಕದ ಹಿರಿಯ ಪತ್ರಕರ್ತರಾದ ವಿಖಾರ್ ಅಹ್ಮದ್ ಸಯೀದ್ ಅವರು ಫ್ರಂಟ್‌ಲೈನ್ ಪತ್ರಿಕೆಗಾಗಿ ಟಿಪ್ಪುವಿನ ಬಗ್ಗೆ ಬರೆದಿರುವ ಸರಣಿ ಲೇಖನಗಳನ್ನು ಶಶಾಂಕ್ ಎಸ್ ಆರ್ ಅನುವಾದಿಸುತ್ತಿದ್ದಾರೆ. ಇದು ಈ ಸರಣಿಯ ಎರಡನೇ ಲೇಖನ. ಪ್ರಸ್ತುತ ಲೇಖನವು 2018ರ ನವೆಂಬರ್ 23ರಂದು ಫ್ರಂಟ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು)

18ನೇ ಶತಮಾನಕ್ಕೆ ಸೇರಿದ 1,700 ಮೈಸೂರು ರಾಕೆಟ್‌ಗಳ ಉತ್ಖನನವು ಟಿಪ್ಪು ಸುಲ್ತಾನ್ ಆಧುನಿಕ ಶಸ್ತ್ರಾಸ್ತ್ರ ತಂತ್ರಜ್ಞಾನದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಿದ ಪ್ರಗತಿಪರ ರಾಜನಾಗಿದ್ದ ಮತ್ತು ದಕ್ಷಿಣ ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ನಿಂತ ಭದ್ರಕೋಟೆಯಾಗಿದ್ದ ಎಂಬ ವಾದಕ್ಕೆ ಪುಷ್ಟಿ ನೀಡುತ್ತದೆ.

ಕರ್ನಾಟಕದಲ್ಲಿ ಈ ಹಿಂದೆ ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್-ಜನತಾ ದಳ (ಜಾತ್ಯತೀತ) ಸಮ್ಮಿಶ್ರ ಸರ್ಕಾರವು 18ನೇ ಶತಮಾನದ ಮೈಸೂರು ದೊರೆ ಟಿಪ್ಪು ಸುಲ್ತಾನನ ಜನ್ಮದಿನವಾದ ನವೆಂಬರ್ 10ಅನ್ನು ಟಿಪ್ಪು ಜಯಂತಿಯಾಗಿ ಮುಂದುವರಿಸಲು ನಿರ್ಧರಿಸಿದೆ. 2015ರಲ್ಲಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಟಿಪ್ಪು ಜಯಂತಿ ಆಚರಣೆ ಪ್ರಾರಂಭವಾದಾಗಿನಿಂದ ಟಿಪ್ಪು ಸುಲ್ತಾನನನ್ನು ಧಾರ್ಮಿಕ ಮತಾಂಧನೆಂದು ದೂಷಿಸುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಬಲಪಂಥೀಯ ಹಿಂದುತ್ವ ಗುಂಪುಗಳು ಅದನ್ನು ತೀವ್ರವಾಗಿ ವಿರೋಧಿಸಿವೆ.

2018ನೇ ವರ್ಷದ ಕಾರ್ಯಕ್ರಮಕ್ಕೆ ಸಿದ್ಧತೆಗಳು ಪ್ರಾರಂಭವಾಗುತ್ತಿದ್ದಂತೆಯೇ ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಿರುವ ಕಾರಣ, ಟಿಪ್ಪು ಜಯಂತಿ ಆಚರಣೆಗೆ ಮುಂದಾಗಬಾರದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರನ್ನು ಒತ್ತಾಯಿಸಿದ್ದರು.

ಟಿಪ್ಪು ಸುಲ್ತಾನ್ ಧಾರ್ಮಿಕ ಮತಾಂಧನಾಗಿದ್ದನೇ? ಎಂಬ ಆರೋಪಗಳನ್ನು ಫ್ರಂಟ್‌ಲೈನಿನ ಹಿಂದಿನ ಸಂಚಿಕೆಗಳಲ್ಲಿ ವಿವರವಾಗಿ ಪರಿಶೀಲಿಸಲಾಗಿದೆ. “Contested Legacy” (ಡಿಸೆಂಬರ್ 11, 2015) ಶೀರ್ಷಿಕೆಯ ಲೇಖನವು ಟಿಪ್ಪು ಸುಲ್ತಾನನ ಆಳ್ವಿಕೆ ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧದ ಹೋರಾಟದಲ್ಲಿ ಅವನ ಪಾತ್ರವನ್ನು ಅವಲೋಕಿಸಿದೆ. “Tipu-Fact & Fiction” (ಜನವರಿ 6, 2017) ಲೇಖನವು ಟಿಪ್ಪು ಸುಲ್ತಾನ್ ಕೊಡಗಿನ ಕೊಡವರನ್ನು ಬಲವಂತವಾಗಿ ಮತಾಂತರ ಮಾಡಿದ ಆರೋಪವನ್ನು ಚರ್ಚಿಸಿದೆ ಮತ್ತು “Tipu in Malabar” (ಜನವರಿ 5, 2018) ಲೇಖನವು ಇಂದಿನ ಉತ್ತರ ಕೇರಳದ ಪ್ರಾಂತ್ಯವಾದ ಮಲಬಾರಿನಲ್ಲಿ ಮೈಸೂರು ದೊರೆಯು ಧರ್ಮಾಂಧತೆ ಮೆರೆದನೇ ಎಂಬುದನ್ನು ಪರಿಶೀಲಿಸಿದೆ. (ಇದರಲ್ಲಿ ಮೊದಲನೆಯ ಲೇಖನವನ್ನು ಸದರಿ ಲೇಖಕ ಅನುವಾದಿಸಿದ್ದು, ಟಿಪ್ಪು ಪ್ರಾಮುಖ್ಯತೆಯ ಹಲವು ಆಯಾಮಗಳು ಬೆಂಬಿಡದ ಪರಂಪರೆ ಮರೆಸುವಿಕೆಯ ಹುನ್ನಾರ ಎಂಬ ಶೀರ್ಷಿಕೆಯಡಿ ನ್ಯಾಯಪಥದ 19 ಅಕ್ಟೋಬರ್, 2022ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಉಳಿದ ಲೇಖನಗಳನ್ನು ಮುಂದಿನ ವಾರಗಳಲ್ಲಿ ಪ್ರಕಟಿಸಲಾಗುವುದು).

ಟಿಪ್ಪು ಸುಲ್ತಾನ್ ಮತ್ತು ಅದಕ್ಕೂ ಮುನ್ನ ಆತನ ತಂದೆ ಹೈದರ್ ಅಲಿ, ಮೈಸೂರನ್ನು 1761 ಮತ್ತು 1799ರ ನಡುವಿನ ಅಲ್ಪಾವಧಿಗೆ ಆಳಿದರು. ಆಳಿದ್ದು ಅಲ್ಪಾವಧಿಗೇ ಆದರೂ, ಇವರು ಸಮಾಜ ಮತ್ತು ಆಗಿನ ರಾಜಕೀಯದ ಮೇಲೆ ಎಂದೂ ಮರೆಯಲಾಗದಂತಹ ಪ್ರಭಾವವನ್ನು ಬೀರಿದರು. ಇಬ್ಬರೂ ಸತತವಾಗಿ ಬ್ರಿಟಿಷರನ್ನು ವಿರೋಧಿಸಿದರು ಮಾತ್ರವಲ್ಲದೇ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ಹೋರಾಡಿದರು. ಹೈದರ್ ಅಲಿ ದೂರದೃಷ್ಟಿಯ ಮತ್ತು ಮಹತ್ವಾಕಾಂಕ್ಷೆಯ ನಾಯಕನಾಗಿದ್ದರೂ, ಟಿಪ್ಪು ಸುಲ್ತಾನನ ಖ್ಯಾತಿಯು ಅವನ ತಂದೆಯ ಖ್ಯಾತಿಯನ್ನೂ ಮೀರಿದ್ದಾಗಿದೆ. ಮೇ 4, 1799ರಂದು ಬ್ರಿಟಿಷ್ ಸೈನ್ಯದೆದುರಿಗೆ ಹೋರಾಡುತ್ತಾ ಮರಣಹೊಂದಿದ ಟಿಪ್ಪು ಸುಲ್ತಾನ ವಸಾಹತುಶಾಹಿ ವಿರುದ್ಧದ ಭಾರತದ ಹೋರಾಟಗಾರರ ಸಾಲಿನಲ್ಲಿ ಮೊದಲಿಗರ ನಡುವೆ ತನ್ನನ್ನು ತಾನು ಸ್ಥಾಪಿಸಿಕೊಂಡನು. ಈ ಕಾರಣಕ್ಕಾಗಿಯೇ ಅವನನ್ನು ಈಗಲೂ ನೆನೆಯಲಾಗುತ್ತದೆ.

ಟಿಪ್ಪು ಜಯಂತಿಯನ್ನು ಆಚರಿಸಲು ಪ್ರಾರಂಭಿಸಿದಾಗಿನಿಂದಲೂ, ಟಿಪ್ಪು ಸುಲ್ತಾನನ ಧಾರ್ಮಿಕ ನೀತಿಗಳನ್ನು ಗಮನದಲ್ಲಿರಿಸಿಕೊಂಡು ಹಲವಾರು ಲೇಖನಗಳು ಪ್ರಕಟಗೊಂಡಿವೆಯಾದರೂ, ಅವನ ಆಳ್ವಿಕೆಯ ಮತ್ತೊಂದು ಪ್ರಮುಖ ಮಗ್ಗುಲನ್ನು ಪರೀಕ್ಷೆಗೆ ಒಳಪಡಿಸಲಾಗಿಲ್ಲ. ಟಿಪ್ಪು ಸುಲ್ತಾನ ತನ್ನ ಆಲ್ಪಾವಧಿಯ ಆಡಳಿತದಲ್ಲಿ ಕೈಗಾರಿಕಾ ರಾಜ್ಯವನ್ನು ಸ್ಥಾಪಿಸುವ ಮೂಲಕ ಹಲವಾರು ಕ್ಷೇತ್ರಗಳನ್ನು ಆಧುನೀಕರಣಗೊಳಿಸಲು ಪ್ರಯತ್ನಿಸಿದ್ದನು. ಹೈದರ್ ಅಲಿಯ ಕಾಲದಿಂದ ಮುಂದುವರಿದ, ಅಂತಿಮವಾಗಿ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರಿದ ಶಸ್ತ್ರಾಸ್ತ್ರ ತಂತ್ರಜ್ಞಾನದಲ್ಲಿನ ಪ್ರಗತಿಗಳು ಕೂಡ ಈ ರೀತಿಯಲ್ಲಿ ಆಧುನೀಕರಣಗೊಂಡ ಕ್ಷೇತ್ರಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: ಟಿಪ್ಪು ಮತ್ತು ಮೈಸೂರು ಚರಿತ್ರೆ ಕುರಿತ ಎರಡು ಅಮೂಲ್ಯ ಬರಹಗಳು

ಉನ್ನತ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಆಧುನಿಕ ಸೈನ್ಯವೊಂದನ್ನು ಕಟ್ಟಬೇಕೆಂದಿದ್ದ ಟಿಪ್ಪು ಸುಲ್ತಾನ್ ಮತ್ತು ಹೈದರ್ ಅಲಿಯು ಮಾಡಿದ ಎಲ್ಲಾ ಪ್ರಯತ್ನ-ಪ್ರಗತಿಗಳ ನಡುವೆ ಆಂಗ್ಲೋ-ಮೈಸೂರು ಯುದ್ಧಗಳ ಸಮಯದಲ್ಲಿ ಬ್ರಿಟಿಷರ ವಿರುದ್ಧ ಬಳಸಲಾದ ರಾಕೆಟ್‌ಗಳು ಎರಡು ಕಾರಣಗಳಿಗಾಗಿ ಅಳಿಸಲಾಗದಂತಹ ಛಾಪನ್ನು ಮೂಡಿಸಿವೆ. ಮೊದಲನೆಯದಾಗಿ, ಈ ರಾಕೆಟ್ಟುಗಳು ಶತ್ರುಪಾಳೆಯದಲ್ಲಿ ಗಲಭೆ-ಗದ್ದಲಗಳನ್ನು ಉಂಟುಮಾಡಿದವು. ಟಿಪ್ಪು ಸುಲ್ತಾನನ ಯುದ್ಧತಂತ್ರದ ಬಗೆಗಿನ ಈ ಅಂಶವನ್ನು ಇಂಗ್ಲಿಷ್ ಸೈನಿಕರು ದಾಖಲಿಸಿದ್ದಾರೆ. ಉದಾಹರಣೆಗೆ, ಎರಡನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ, ಪೊಲ್ಲಿಲೂರ್ ಕದನದಲ್ಲಿ (1780) ಮೈಸೂರು ಸೇನೆಯು ಜಯ ಸಾಧಿಸಲಿಕ್ಕೆ ಈ ರಾಕೆಟ್‌ಗಳ ಬಳಕೆಯು ಮುಖ್ಯ ಕಾರಣವಾಗಿತ್ತು. ದಾಖಲೆಗಳು ತೋರಿಸುವಂತೆ, ರಾಕೆಟ್‌ಗಳನ್ನು ಇದರ ನಂತರದಲ್ಲಿಯೂ ಬಳಸಲಾಗಿತ್ತು. ಟಿಪ್ಪು ಸುಲ್ತಾನನ ಸೈನ್ಯವು ಈ ರಾಕೆಟ್ಟುಗಳನ್ನು ಸಿಡಿಸಲೆಂದೇ ರಾಕೆಟ್ ಬಾಯ್ಸ್‌ಗಳ ತುಕಡಿಗಳನ್ನು ಸಹ ಹೊಂದಿತ್ತು. ಬ್ರಿಟಿಷ್ ಅಧಿಕಾರಿಯಾದ ಕರ್ನಲ್ ಬೇಲಿ ಅವರು ಏಪ್ರಿಲ್ 5, 1799ರಂದು ಟಿಪ್ಪು ಸುಲ್ತಾನನ ಸೈನ್ಯವನ್ನು ತನ್ನ ಪಡೆಯು ಎದುರಿಸಿದಾಗ ಮೈಸೂರಿನ ಈ ರಾಕೆಟ್‌ಗಳು ಉಂಟುಮಾಡಿದ್ದ ಹಾನಿಯ ಬಗ್ಗೆ ಸ್ಪಷ್ಟವಾಗಿ ಹೀಗೆ ದಾಖಲಿಸುತ್ತಾರೆ:

“ಇಳಿಜಾರು ಪ್ರದೇಶದ ಮೇಲ್ಭಾಗದ ಭೂಪ್ರದೇಶವು ಶಿಬಿರದ ಸ್ಥಳವಾಗಿತ್ತು; ಅದರ ಬುಡದಲ್ಲಿ, ಕಾವೇರಿ ನದಿಯ ಎದುರು ದಂಡೆಯಲ್ಲಿ, ಸೆರಿಂಗಪಟ್ಟಣದ ಹೆಮ್ಮೆಯ ಕೋಟೆಯು ಮೂರು ಮೈಲಿ ದೂರದಲ್ಲಿ ನಿಂತಿದೆ. ಆ ವೇಳೆಗಾಗಲೇ ಅಲ್ಲಿಂದ ಅವರು ಬೃಹತ್ ಗಾತ್ರದ ಬಂದೂಕುಗಳಿಂದ ಗುಂಡು ಹಾರಿಸಲು ಪ್ರಾರಂಭಿಸಿದರು, ಮತ್ತು ನಾವು ರಾಕೆಟ್ ಬಾಯ್ಸ್‌ಗಳಿಂದ ಎಷ್ಟು ತೊಂದರೆಗೀಡಾಗಿದ್ದೆವು ಎಂದರೆ, ಯಾವುದೇ ಅಪಾಯವಿಲ್ಲದೆ ಈ ರಾಕೆಟ್ ಕ್ಷಿಪಣಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. 20,000ಕ್ಕಿಂತ ಹೆಚ್ಚು ಶತ್ರುಗಳ ರಾಕೆಟ್ಟುಗಳ ಮತ್ತು ತುಪಾಕಿಗಳು [ದಾಳಿ] ನಿರಂತರವಾಗಿದ್ದವು. ಯಾವುದೇ ಆಲಿಕಲ್ಲು ಕೂಡ ಇದಕ್ಕಿಂತಲೂ ದಪ್ಪವಾಗಿರಲು ಸಾಧ್ಯವಿರಲಿಲ್ಲ. ನೀಲಿ ದೀಪಗಳ ಪ್ರತಿಬಾರಿ ಮಿನುಗಿದಾಗಲೂ ಅದು ರಾಕೆಟ್‌ಗಳ ಸುರಿಮಳೆಯಿಂದ ಕೂಡಿರುತ್ತಿತ್ತು; ಅವುಗಳಲ್ಲಿ ಕೆಲವು ಕಾಲಂಅನ್ನು ಮುನ್ನಡೆಸುತ್ತಿದ್ದವನನ್ನು ಪ್ರವೇಶಿಸಿ, ಅವನನ್ನು ಹಿಂದಿಕ್ಕಿ ಹಾದುಹೋಗುತ್ತಾ, ಅವುಗಳಿಗೆ ಏಕರೂಪವಾಗಿ ಜೋಡಿಸಲ್ಪಟ್ಟಿರುವ ಇಪ್ಪತ್ತು ಅಥವಾ ಮೂವತ್ತು ಅಡಿ ಉದ್ದದ ಬಿದಿರುಗಳು ಭಯಾನಕ ಸಾವು-ನೋವು, ಗಾಯಗಳನ್ನು ಉಂಟುಮಾಡುತ್ತಿದ್ದವು. ರಾಕೆಟ್ಟೊಂದು ಮನುಷ್ಯನ ದೇಹದ ಮೂಲಕ ಹಾದುಹೋದ ತಕ್ಷಣ, ಅದು ತನ್ನ ಆರಂಭಿಕ ಶಕ್ತಿಯ ಪ್ರಚೋದನೆಯನ್ನು ಮತ್ತೆ ಪಡೆದುಕೊಂಡು, ಸ್ಫೋಟಗೊಂಡು, ಅದರಲ್ಲಿನ ಸ್ಪೋಟಕವು ಖಾಲಿಯಾಗುವವರೆಗೂ ಹತ್ತು ಅಥವಾ ಇಪ್ಪತ್ತು ಜನರನ್ನು ನಾಶಮಾಡುತ್ತಿದ್ದವು. ಈ ಅಸಾಮಾನ್ಯ ಆಯುಧಗಳಿಂದಾಗಿ ನಮ್ಮ ಪುರುಷರ ಆಕ್ರಂದನವು ಮುಗಿಲುಮುಟ್ಟಿದ್ದವು; ಮಾಂಸರಹಿತವಾಗಿ ಉಳಿದಿರುವ ತೊಡೆಗಳು, ಕಾಲುಗಳು ಮತ್ತು ತೋಳುಗಳ ಮೂಳೆಗಳು ದೇಹದ ಪ್ರತಿಯೊಂದು ಭಾಗದಿಂದ ಛಿದ್ರಗೊಂಡ ಸ್ಥಿತಿಯಲ್ಲಿ ಚಾಚಿಕೊಂಡಿದ್ದವು; ಇವು ಈ ಪೈಶಾಚಿಕ ಎಂಜಿನುಗಳ ವಿನಾಶಕಾರಿ ಪರಿಣಾಮಗಳಾಗಿವೆ” (1896 ರಲ್ಲಿ ಪ್ರಕಟಗೊಂಡ ಕರ್ನಲ್ ಬೇಲಿ ಅವರ “Diary of Colonel Bayly: 12th Regiment” ಇಂದ).

ಎರಡನೆಯ ಕಾರಣವೆಂದರೆ, ಟಿಪ್ಪು ಸುಲ್ತಾನನ ರಾಕೆಟ್‌ಗಳೇ ಮುಂದೆ 19ನೇ ಶತಮಾನದಲ್ಲಿ ಬ್ರಿಟಿಷರು ಬಳಸಿದ ಉತ್ಕೃಷ್ಟವಾದ ’ಕಾಂಗ್ರೀವ್’ ರಾಕೆಟ್ಟಿನ ಮೂಲವಾಗಿದೆ. ಶ್ರೀರಂಗಪಟ್ಟಣದ ಪತನದ ನಂತರದಲ್ಲಿ ಮೈಸೂರಿನ ರಾಕೆಟ್ಟುಗಳನ್ನು ಪತ್ತೆ ಮಾಡಿ, ನಂತರ ಇಂಗ್ಲೆಂಡ್‌ಗೆ ಅವನ್ನು ಸಾಗಿಸಿ, ಸೂಕ್ಷ್ಮವಾಗಿ ಅಧ್ಯಯನ ನಡೆಸಲಾಯಿತು.

ಹೈದರ್ ಅಲಿ

ಏರೋಸ್ಪೇಸ್ ವಿಜ್ಞಾನಿಯಾಗಿದ್ದ ರೊದ್ದಂ ನರಸಿಂಹ ಇದರ ಬಗ್ಗೆ ಹೀಗೆ ಬರೆಯುತ್ತಾರೆ. “… ಮೈಸೂರು ರಾಕೆಟ್‌ಗಳು ಬ್ರಿಟಿಷರ ಮೇಲೆ ಅಸಾಧಾರಣ ಪ್ರಭಾವ ಬೀರಿದವು ಮತ್ತು ಇಂದಿನ ದಿನಮಾನದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮ ಎಂದು ಕರೆಯಲ್ಪಡುವ, ರಾಯಲ್ ವೂಲಚ್ ಆರ್ಸೆನಲ್‌ನಲ್ಲಿ ನಡೆದ ಸಂಶೋಧನೆಗಳಿಗೆ ಇದು 1801ರಿಂದಲೇ ದಾರಿ ಮಾಡಿಕೊಟ್ಟಿತು. ಸರ್ ವಿಲಿಯಂ ಕಾಂಗ್ರೀವ್ ಅವರು ಪ್ರೊಪೆಲ್ಲಂಟ್‌ಗಳನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡಿದರು; ನ್ಯೂಟನ್ನಿನ ನಿಯಮಗಳನ್ನು ಅನ್ವಯಿಸಿ ಅವುಗಳ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಿದರು; ವಿವಿಧ ಗಾತ್ರಗಳು ಮತ್ತು ಗುಣಲಕ್ಷಣಗಳ ರಾಕೆಟ್‌ಗಳ ಸರಣಿಯನ್ನು ಅಭಿವೃದ್ಧಿಪಡಿಸಿದರು. ಅವುಗಳ ವೆಚ್ಚಗಳ ವಿಶ್ಲೇಷಣೆಯನ್ನು ನಡೆಸಿ ಈ ವಿಚಾರಗಳ ಬಗ್ಗೆ ಮೂರು ಪುಸ್ತಕಗಳನ್ನು ಪ್ರಕಟಿಸಿದರು. ಇದರ ನಂತರದಲ್ಲಿ ನೆಪೋಲಿಯನಿಕ್ ಯುದ್ಧಗಳ ಸಮಯದಲ್ಲಿ ಮತ್ತು 1812-14ರ ಅವಧಿಯ ಯು.ಎಸ್ ಜೊತೆಗಿನ ಮುಖಾಮುಖಿಯ ಸಮಯದಲ್ಲಿ ಬ್ರಿಟಿಷರು ರಾಕೆಟ್‌ಗಳನ್ನು ವ್ಯವಸ್ಥಿತವಾಗಿ ಬಳಸಿದರು.” (ರೊದ್ದಂ ನರಸಿಂಹ ಅವರು ಬರೆದಿರುವ, 1985ರ ಮೇ ತಿಂಗಳಿನಲ್ಲಿ ಪ್ರಕಟವಾದ Rockets in Mysore and Britain, 1750-1850 A.D. ಲೇಖನ)

ಅತಿಮುಖ್ಯ ಆವಿಷ್ಕಾರ

ಶಸ್ತ್ರಾಸ್ತ್ರಗಳ ಇತಿಹಾಸದಲ್ಲಿ ಗಮನಾರ್ಹವಾದ ಒಂದು ಹಂತದ ಗುರುತೆನಿಸಿದ್ದ ಈ ರಾಕೆಟ್‌ಗಳಲ್ಲಿ ಲಭ್ಯವಿದ್ದದ್ದು ಕೆಲವೇ ಕೆಲವು ಮಾದರಿಗಳು ಎಂಬ ವಿಚಾರವು ಆಚ್ಚರಿ ಮೂಡಿಸುತ್ತವೆ. ಎರಡು ಶತಮಾನಗಳಿಗೂ ಹೆಚ್ಚು ಕಾಲ ಕೇವಲ ಐದು ಕಬ್ಬಿಣ-ಕವಚದ ಮೈಸೂರು ರಾಕೆಟ್‌ಗಳು ಲಭ್ಯವಿದ್ದವು. ಇವುಗಳಲ್ಲಿ ಮೂರನ್ನು ಬೆಂಗಳೂರಿನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದ್ದರೆ, ಎರಡನ್ನು ಇಂಗ್ಲೆಂಡಿನ ವೂಲಚ್ ಆರ್ಸೆನಲ್‌ನ ರಾಯಲ್ ಆರ್ಟಿಲರಿ ಮ್ಯೂಸಿಯಂನಲ್ಲಿ ಇರಿಸಲಾಗಿದೆ. ಬೆಂಗಳೂರಿನಲ್ಲಿ ಇರಿಸಲಾಗಿರುವ ಮೂರು ರಾಕೆಟ್ಟುಗಳು ಕೇವಲ ಕವಚವಾಗಿದ್ದ ಕಾರಣ ಅವು ಅಪೂರ್ಣವಾಗಿದ್ದವು. ಆದ್ದರಿಂದ, 2018ರ ಜುಲೈನಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಕಾಲದ 1,700 ಕಬ್ಬಿಣ-ಕವಚದ ಮೈಸೂರು ರಾಕೆಟ್‌ಗಳ ಸಂಗ್ರಹವು ಪತ್ತೆಯಾದಾಗ, ಅದು ಪ್ರಮುಖ ಆವಿಷ್ಕಾರವೇ ಆಗಿತ್ತು.

“ನಗರ ಗ್ರಾಮದ ನಾಗರಾಜ ರಾವ್ ಎಂಬ ರೈತರ ಒಡೆತನದ ದೊಡ್ಡ ಬಾವಿ ಮತ್ತು ಅದರ ಸುತ್ತಲಿನಲ್ಲಿ ರಾಕೆಟ್‌ಗಳು ಪತ್ತೆಯಾದವು” ಎಂದು ಶಿವಮೊಗ್ಗದ ಸರ್ಕಾರಿ ವಸ್ತುಸಂಗ್ರಹಾಲಯದ (ಶಿವಪ್ಪ ನಾಯಕ ಅರಮನೆ) ಪರಿಪಾಲಕರಾಗಿರುವ (ಕ್ಯುರೇಟರ್) ರುದ್ರಪ್ಪ ಶೇಜೇಶ್ವರರು ತಿಳಿಸಿದ್ದಾರೆ. ನಗರವು ಪಶ್ಚಿಮ ಕರ್ನಾಟಕದ ಶಿವಮೊಗ್ಗ ಪಟ್ಟಣದಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿದೆ ಮತ್ತು 18ನೇ ಶತಮಾನದ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿತ್ತು. ಕೆಲವು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ 160 ರಾಕೆಟ್‌ಗಳು ಪತ್ತೆಯಾಗಿದ್ದರಿಂದ ಉತ್ಖನನಕ್ಕೆ ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅವುಗಳನ್ನು ತಕ್ಷಣವೇ ಗುರುತಿಸಲಾಗಿಲ್ಲವಾದರೂ, ನಂತರದಲ್ಲಿ ಇವು ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಪ್ರಸಿದ್ಧ ಮೈಸೂರು ರಾಕೆಟ್‌ಗಳೆಂದು ಗುರುತಿಸಲಾಯಿತು. ರಾಜ್ಯದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಉತ್ಖನನವನ್ನು ಮಂಜೂರು ಮಾಡಿತು; ಮತ್ತಿದು ರಾಕೆಟ್‌ಗಳ ದೊಡ್ಡ ಸಂಗ್ರಹದ ಪತ್ತೆಗೆ ಕಾರಣವಾಯಿತು.

ರಾಕೆಟ್‌ಗಳನ್ನು ಶಿವಮೊಗ್ಗದ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಇವು ಏಕರೂಪವನ್ನು ಹೊಂದಿರದೆ, ಅರ್ಧ ಅಡಿಯಿಂದ ಒಂದು ಅಡಿಗಳಷ್ಟು ಉದ್ದವಾಗಿವೆ. ಚಿಕ್ಕ ರಾಕೆಟ್ಟುಗಳು ಅರ್ಧ ಕಿಲೋಗ್ರಾಂಗಳಷ್ಟು ತೂಗಿದರೆ, ದೊಡ್ಡ ರಾಕೆಟ್ಟುಗಳು ಸುಮಾರು 2 ಕೆಜಿವರೆಗೆ ತೂಗುತ್ತವೆ. ಕೆಲವನ್ನು ಸುಲಭವಾಗಿ ಹಿಡಿಯಬಹುದಾದರೆ, ದಪ್ಪಗಿರುವ ಕೆಲವನ್ನು ಕೈಯಲ್ಲಿ ಹಿಡಿಯುವುದು ಕಷ್ಟಸಾಧ್ಯ. ಅಸಮಾನ್ಯ ಕುಟ್ಟಾಣಿಗಳಂತಿರುವ ರಾಕೆಟ್‌ಗಳನ್ನು ತುಂಡು-ತುಕಡಿ ಎಂದು ಭಾವಿಸಿದ್ದರಿಂದ, ನಾಗರಾಜ್ ರಾವ್ ಅವರು ಅವನ್ನು ಮಾರಾಟ ಮಾಡಲಿಲ್ಲ ಎಂಬುದು ಗಮನಾರ್ಹ. ಅಷ್ಟೇ ಅಲ್ಲದೇ, ಅವರು ಈ ಬಗ್ಗೆ ಪುರಾತತ್ವ ಇಲಾಖೆಗೆ ಮಾಹಿತಿ ನೀಡಬೇಕೆಂಬ ದೂರದೃಷ್ಟಿಯನ್ನು ಕೂಡ ಹೊಂದಿದ್ದರು.

ಮೈಸೂರು ರಾಕೆಟ್‌ಗಳು ಶಸ್ತ್ರಾಸ್ತ್ರ ತಂತ್ರಜ್ಞಾನದ ಪ್ರವರ್ತಕ ಎಂಬ ಸತ್ಯ ತಿಳಿದಿದ್ದರೂ, ಪರೀಕ್ಷೆಗಳನ್ನು ನಡೆಸಲು ಸಾಕಷ್ಟು ಮಾದರಿಗಳಿಲ್ಲದ ಕಾರಣ ಈ ರಾಕೆಟ್‌ಗಳನ್ನು ವಿವರವಾದ ಪರೀಕ್ಷೆಗಳಿಗೆ ಒಳಪಡಿಸಲು ಈ ಮೊದಲು ಸಾಧ್ಯವಾಗಿರಲಿಲ್ಲ. ಶಿವಮೊಗ್ಗದಲ್ಲಿನ ಉತ್ಖನನವು, ಈ ರಾಕೆಟ್ಟುಗಳ ಬಗ್ಗೆ ಸಂಪೂರ್ಣ ಪರೀಕ್ಷೆಯನ್ನು ನಡೆಸಲು ಅನುವು ಮಾಡಿಕೊಡುವ ಮೂಲಕ ಮೈಸೂರು ಸೈನ್ಯವನ್ನು ಈ ಸ್ಫೋಟಕಗಳು ಹೇಗೆ ಬಲಗೊಳಿಸಿದವು ಎಂಬುದನ್ನು ಶೋಧಿಸಲು ದಾರಿ ಮಾಡಿಕೊಟ್ಟಿತು. ಶಿವಮೊಗ್ಗ ಮೂಲದ ಸ್ವತಂತ್ರ ಸಂಶೋಧಕ ನಿಧಿನ್ ಜಿ ಓಲಿಕಾರ ಮತ್ತು ಶೇಜೇಶ್ವರ ಅವರು ಈ ಅಂಶವನ್ನೇ ಅಧ್ಯಯಿಸಲು ಪ್ರಯತ್ನಿಸಿದ್ದಾರೆ. ಅವರು ತಮ್ಮ ಇತ್ತೀಚಿನ ಸಂಶೋಧನೆಗಳ ಕುರಿತು ಪ್ರಬಂಧವೊಂದನ್ನು ಪ್ರಕಟಿಸಿದ್ದಾರೆ. (ರುದ್ರಪ್ಪ ಶೇಜೇಶ್ವರ ಮತ್ತು ನಿಧಿನ್ .ಜಿ. ಓಲಿಕಾರರ, ಸೆಪ್ಟೆಂಬರ್ 2018ರಲ್ಲಿ 2018gÀ°è Journal of the Arms and Armour Society ಯ 22ನೇ ಸಂಪುಟದ 6 ಸಂಚಿಕೆಯಲ್ಲಿ ಪ್ರಕಟವಾದ “Rockets from Mysore under Haidar Ali and Tipu Sultan: Preliminary Studies of ‘Tipu Rockets’ from the Nagara Find” ಎಂಬ ಶೀರ್ಷಿಕೆಯ ಲೇಖನ).

ಓಲಿಕಾರ ಅವರು ರಾಕೆಟ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವಿವರಿಸಿದರು ಮತ್ತು ಒಂದು ತುಂಡು ಕಾಗದವನ್ನು ತೆಗೆದುಕೊಂಡು ಅದನ್ನು ಟ್ಯೂಬುಗಳಂತೆ ಮಡಚುತ್ತಾ. “ಸ್ಟೀಲ್ ಪ್ಲೇಟ್‌ಗಳನ್ನು ಈ ರೀತಿಯ ಸಿಲಿಂಡರ್ ಟ್ಯೂಬ್‌ಗಳಂತೆ ಮಡಚಲಾಗಿದೆ. ನಂತರ, ಜೇಡಿ ಮಣ್ಣು ಉಷ್ಣ ನಿರೋಧಕವಾಗಿ ಕಾರ್ಯನಿರ್ವಹಿಸುವ ಕಾರಣ ಅವನ್ನು ಜೇಡಿಮಣ್ಣಿನಿಂದ ಲೇಪಿಸಿ, ಅದರಲ್ಲಿ ಸಾಲ್ಟ್‌ಪೀಟರ್ (ಪೊಟಾಸಿಯಮ್ ನೈಟ್ರೇಟ್) ತುಂಬಿಸಿ, ಲೋಹದ ಬಿಲ್ಲೆಗಳಿಂದ ಎರಡೂ ತುದಿಗಳನ್ನು ಮುಚ್ಚಲಾಗುತ್ತದೆ” ಎಂದು ವಿವರಿಸುತ್ತಲೇ, ಎರಡು ಕಾಗದಗಳ ತುಂಡನ್ನು ವೃತ್ತದ ಆಕಾರದಲ್ಲಿ ಕತ್ತರಿಸಿ ಅವುಗಳನ್ನು ಕಾಗದದ ಟ್ಯೂಬಿನ ಏರಡೂ ತುದಿಗಳನ್ನು ಮುಚ್ಚಿದರು.

ಮುಚ್ಚಲಾಗಿದ್ದ ಒಂದು ಸಣ್ಣ ತೂತನ್ನು ಗುರುತಿಸಬಹುದಾಗಿದ್ದ ರಾಕೆಟ್‌ಗಳನ್ನು ತೋರಿಸುತ್ತಾ, “ರೇಷ್ಮೆಯಿಂದ ಮಾಡಿದ ಫ್ಯೂಸ್ ಒಂದನ್ನು ಸಿಕ್ಕಿಸಲಾಗುತ್ತಿತ್ತು. ಈ ರಾಕೆಟ್‌ಗಳನ್ನು ಮಳೆಗಾಲದಲ್ಲಿಯೂ ಬಳಸಲಾಗುತ್ತಿದ್ದ ಕಾರಣಕ್ಕಾಗಿ ಬಹುಶಃ ಮತ್ತೊಂದು ಉಪಕರಣವನ್ನು (ಉತ್ಖನನ ನಡೆದ ಜಾಗದಲ್ಲಿಯೇ ಇದು ಕೂಡ ಸಿಕ್ಕಿದೆ) ಬಳಸಿ ಬಿಗಿಯಾಗಿ ಸೇರಿಸಲಾಗುತ್ತಿತ್ತು. ನಂತರ ರಾಕೆಟ್‌ಅನ್ನು ಚರ್ಮದ ಪಟ್ಟಿಗಳೊಂದಿಗೆ ಬಿದಿರು ಕೋಲಿಗೆ ಕಟ್ಟಲಾಗುತ್ತದೆ” ಎಂದರು ಓಲಿಕಾರರು. ಪ್ರಸ್ತುತ ಲಂಡನ್ನಿನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನ ಸಂಗ್ರಹದಲ್ಲಿರುವ ’ಮೈಸೂರು ರಾಕೆಟ್ ಮ್ಯಾನ್’ ಎಂದು ಕರೆಯಲ್ಪಡುವ ರಾಬರ್ಟ್ ಹೋಮ್ ಅವರ ವರ್ಣಚಿತ್ರವನ್ನು ಅವರು ತೋರಿಸುತ್ತಾ, “ಒಮ್ಮೆ ಫ್ಯೂಸ್‌ಗೆ ಬೆಂಕಿ ತಗುಲಿಸಿದರೆ ಸಾಕು, ರಾಕೆಟ್ ಎರಡರಿಂದ ಮೂರು ಮೈಲಿಗಳವರೆಗೆ ಚಲಿಸುತ್ತದೆ” ಎಂದು ಅವರು ವಿವರಿಸಿದರು.

ಮೈಸೂರಿನ ದೊರೆಗಳು ವಿವಿಧ ರೀತಿಯ ರಾಕೆಟ್‌ಗಳನ್ನು ಬಳಸುತ್ತಿದ್ದರು ಎಂದವರು ತಿಳಿಸಿದರು. ಅವುಗಳಲ್ಲಿ ಕೆಲವು ಶತ್ರು ಪಡೆಗಳ ಮೇಲೆ ದಾಳಿಯಿಡುವ ಮೊದಲು ಗಾಳಿಯಲ್ಲಿ ತೇಲಿದರೆ, ಇನ್ನೂ ಕೆಲವಯ ಮೊಣಕಾಲಿನ ಮಟ್ಟದಲ್ಲಿಯೇ ಶತ್ರು ಸೇನೆಗಳನ್ನು ನುಗ್ಗಿ ಹೋಗುತ್ತಿದ್ದವು. ಇದರಲ್ಲಿ ಕೆಲವಕ್ಕೆ ಬಿದಿರಿನ ಕೋಲುಗಳ ಜೊತೆಗೆ ಕತ್ತಿಗಳನ್ನು ಜೋಡಿಸಲಾಗಿ, ಅವು ಈಸ್ಟ್ ಇಂಡಿಯಾ ಕಂಪನಿಯ ಸೈನಿಕರನ್ನು ಕುಡುಗೋಲಿನಂತೆ ಇರಿಯುತ್ತಾ ಮಾರಣಾಂತಿಕ ರೂಪವನ್ನು ಪಡೆಯುತ್ತಿದ್ದವು.

ಈ ರಾಕೆಟ್‌ಗಳ ಬಗೆಗಿನ ಇನ್ನೂ ಆಸಕ್ತಿದಾಯಕ ಸಂಗತಿಯೆಂದರೆ, ಅವು ಅಚ್ಚಿನಿಂದ ಎರಕಹೊಯ್ದದ್ದಲ್ಲ. ಬದಲಿಗೆ ಅವುಗಳನ್ನು ಅತೀ ಕಡಿಮೆ ಮಟ್ಟದ ಇಂಗಾಲವನ್ನು ಹೊಂದಿದ್ದ ಉಕ್ಕಿನ ಹಾಳೆಗಳನ್ನು ಬಡಿದು ತಯಾರಿಸಲಾಗುತ್ತಿತ್ತು. ಈ ವಿಷಯವೂ ಕೂಡ ಅಂದಿನ ಕಾಲಕ್ಕೆ ಒಂದು ದೊಡ್ಡ ತಾಂತ್ರಿಕ ಪ್ರಗತಿಯಾಗಿತ್ತು.

ಇದನ್ನೂ ಓದಿ: ಮತ್ತೆ ಮತ್ತೆ ನೆನೆಯಬೇಕಾದ ‘ಟಿಪ್ಪುವಿನ ಸರ್ವಧರ್ಮ ಸಹಿಷ್ಣುತೆ’

ಓಲಿಕಾರ ಮತ್ತು ಶೇಜೇಶ್ವರರು ಬರೆಯುತ್ತಾರೆ: “ಕಬ್ಬಿಣಯುಕ್ತ ಲೋಹದ ಕವಚ ಹೊಂದಿದ್ದ ಮತ್ತು ನಿಯೋಜನೆಗೊಂಡಿದ್ದ ಸಂಖ್ಯೆಯ ಕಾರಣಕ್ಕೆ ಮೈಸೂರಿಯನ್ ರಾಕೆಟ್‌ಗಳಿಗೆ ಪ್ರಪಂಚದ ಬೇರೆಲ್ಲಿಯೂ ಸರಿಸಾಟಿಯಾದ ರಾಕೆಟ್‌ಗಳಿರಲಿಲ್ಲ ಎಂಬುದರಲ್ಲಿ ಸಂದೇಹವಿಲ್ಲ. ಇದು ಮೈಸೂರಿನ ತಾಂತ್ರಿಕ ಪರಿಣತಿಯ ಪರಾಕಾಷ್ಠೆಯನ್ನೂ ಹಾಗೂ ಪ್ರಯೋಗಗಳನ್ನು ಕೈಗೊಂಡು ಹೊಸತನವನ್ನು ಸಾಧಿಸಲು ಹೊಂದಿದ್ದ ಮೈಸೂರಿನ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ಕೈಗಾರಿಕಾ ಪ್ರಮಾಣಗಳಲ್ಲಿ ಕಬ್ಬಿಣದ ಕವಚಗಳನ್ನು ಹೊಂದಿರುತ್ತಿದ್ದ ರಾಕೆಟ್‌ಗಳನ್ನು ತಯಾರಿಸಲು ಬೇಕಾದ ಎಲ್ಲಾ ಅಗತ್ಯತೆಗಳನ್ನು ಮೈಸೂರು ಹೊಂದಿತ್ತು ಎಂದು ಕೂಡ ಅದು ತೋರಿಸುತ್ತದೆ. ಭಾರತದ ಬಹುತೇಕ ರಾಜ್ಯಗಳ ನಡುವಿನ ಪರಸ್ಪರ ವಿನಾಶಕಾರಿ ಕಲಹಗಳ ಕಾರಣವಾಗಿ ಅವುಗಳಲ್ಲಿ ಬಹಳಷ್ಟನ್ನು ಬ್ರಿಟನ್ನಿನ ಅಧೀನಕ್ಕೆ ಒಳಪಡಿಸುತ್ತಿದ್ದ ಕಾಲಘಟ್ಟದಲ್ಲಿ ಇಂತಹ ಸಾಮರ್ಥ್ಯದ ಪರಿಣಾಮವಾಗಿ, ಮೈಸೂರು ಇಪ್ಪತ್ತು ವರ್ಷಗಳ ಕಾಲ ವಸಾಹತುಶಾಹಿ ಅಲೆಯನ್ನು ತಡೆಯಲು ಸಾಧ್ಯವಾಯಿತು.”

ನಗರದಲ್ಲಿ ಅಷ್ಟೊಂದು ರಾಕೆಟ್‌ಗಳು ಪತ್ತೆಯಾಗಿದ್ದು ಏಕೆ? ನಗರವು ಕೆಳದಿ ಸಾಮ್ರಾಜ್ಯದ ಪ್ರಮುಖ ಪಟ್ಟಣವಾಗಿತ್ತು. ಅದನ್ನು ಹೈದರ್ ಅಲಿ 1759ರಲ್ಲಿ ವಶಪಡಿಸಿಕೊಂಡನು ಮತ್ತು ಈ ಮೂಲಕ ಮೈಸೂರು ಸಾಮ್ರಾಜ್ಯದ ಶಕ್ತಿ ಮತ್ತು ಸಂಪತ್ತನ್ನು ಗಣನೀಯವಾಗಿ ವಿಸ್ತರಿಸಿದನು. ಹೀಗಾಗಿ, ತದನಂತರದಲ್ಲಿ, ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರು ಉತ್ಪಾದನಾ ಘಟಕವನ್ನು ಈ ಪ್ರದೇಶದಲ್ಲಿ ಸ್ಥಾಪಿಸಿದರು ಎಂಬುದು ಆಶ್ಚರ್ಯಕರವಲ್ಲ.

ಉತ್ಖನನದ ಮೇಲ್ವಿಚಾರಣೆ ವಹಿಸಿದ್ದ ಕರ್ನಾಟಕದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆಯ ಇಲಾಖೆಯ ಆಯುಕ್ತರಾದ ಟಿ.ವೆಂಕಟೇಶ್ ಇದನ್ನು ಧ್ವನಿಸುತ್ತಲೇ ಹೇಳಿದರು, “ಈ ಸ್ಥಳದಲ್ಲಿ ರಾಕೆಟ್‌ಗಳು ಏಕೆ ಕಂಡುಬಂದಿವೆ ಎಂಬುದರ ಕುರಿತು ನಮಗೆ ಇನ್ನೂ ಖಚಿತವಾಗಿ ಹೇಳಲಾಗುವುದಿಲ್ಲವಾದರೂ, ಉತ್ಪಾದನಾ ಘಟಕವೊಂದು ಸುತ್ತಮುತ್ತಲ ಪ್ರದೇಶದಲ್ಲಿ ನೆಲೆಗೊಂಡಿದ್ದಿರಬಹುದು ಎಂದು ನಾವು ಬಲವಾಗಿ ನಂಬಿದ್ದೇವೆ” ಎಂದು.

ಶಿವಮೊಗ್ಗ ಮೂಲದ ಸ್ವತಂತ್ರ ಸಂಶೋಧಕರಾದ ಅಜಯ್ ಕುಮಾರರು ಈ ಪ್ರದೇಶದಲ್ಲಿ ಉತ್ಪಾದನಾ ಘಟಕ ಇದ್ದಿರಬಹುದು ಎಂಬ ಅರಿವಿನೊಂದಿಗೆ ಕಾರ್ಯಪ್ರವೃತ್ತರಾದರು. ಗೂಗಲ್ ಉಪಗ್ರಹ ಚಿತ್ರಣವನ್ನು (Google Satellite Imagery) ಬಳಸಿಕೊಂಡು, ಅವರು ದೊಡ್ಡ ಪ್ರಮಾಣದಲ್ಲಿ ಕಬ್ಬಿಣದ ಕಿಟ್ಟ (ಸ್ಲ್ಯಾಗ್) ಹೊಂದಿರುವ ಸ್ಥಳಗಳನ್ನು ಗುರುತಿಸಿದರು. 18ನೇ ಶತಮಾನದ ಸಮಕಾಲೀನ ವೃತ್ತಾಂತಗಳನ್ನು ಅಧ್ಯಯಿಸುತ್ತಾ, ಈ ಪ್ರದೇಶಗಳಲ್ಲಿ ಸುತ್ತಾಡುತ್ತಾ ಅಜಯ್ ಕುಮಾರ್ ತಮ್ಮ ಸಂಶೋಧನೆಗಳನ್ನು ಒಟ್ಟುಗೂಡಿಸಲು ಆರು ತಿಂಗಳುಗಳನ್ನು ತೆಗೆದುಕೊಂಡರು.

“ಈ ರಾಕೆಟ್‌ಗಳನ್ನು ತಯಾರಿಸಲು, ಕಬ್ಬಿಣದ ಅದಿರು, ಸಾಲ್ಟ್‌ಪೀಟರ್, ಬಿದಿರು, ರೇಷ್ಮೆ ಬತ್ತಿಗಳು, ಚರ್ಮದ ಪಟ್ಟಿಗಳು, ಸುಣ್ಣದ ಕಲ್ಲು, ಇದ್ದಿಲು ಮತ್ತು ಜೇಡಿಮಣ್ಣಿನ ಅಗತ್ಯವಿದೆ. ನನ್ನ ಸಂಶೋಧನೆಯ ಆಧಾರದ ಮೇಲೆ, ನಗರದಿಂದ 60-65 ಕಿಲೋಮೀಟರ್ ದೂರದಲ್ಲಿರುವ ತಮ್ಮಡಿಹಳ್ಳಿ ಮತ್ತು ಚಿಟ್ಟಿಹಾಳು (ಸ್ಥಳೀಯರು ಚಟ್ಟನಹಳ್ಳಿ ಎಂದು ಉಚ್ಚರಿಸುತ್ತಾರೆ) ಗ್ರಾಮಗಳಲ್ಲಿ ಉತ್ಪಾದನಾ ಘಟಕಗಳಾಗಿದ್ದಿರಬಹುದಾಗಿದ್ದ ಐದು ಸ್ಥಳಗಳನ್ನು ಗುರುತಿಸಿದ್ದೇನೆ. ಈ ಕಬ್ಬಿಣದ ಕಿಟ್ಟಗಳಲ್ಲಿ ಕಬ್ಬಿಣದ ತುಂಡುಗಳನ್ನು ನಾವು ಕಾಣಬಹುದು. ಅವು ಕಬ್ಬಿಣವನ್ನು ಕರಗಿಸಲು ಅಗತ್ಯವಾದ ಟ್ಯೂಯರ್‌ಯ (ಗಾಳಿ ಕೊಳವೆ) ಭಾಗವಾಗಿರಬೇಕು” ಎಂದು ಅವರು ಹೇಳಿದರು.

ಈ ರಾಕೆಟ್‌ಗಳನ್ನು ಬಾವಿಯಲ್ಲಿ ಏಕೆ ಎಸೆಯಲಾಯಿತು ಎಂಬುದು ಈಗಲೂ ಸ್ಪಷ್ಟಗೊಂಡಿಲ್ಲವಾದರೂ, ಈ ಆಕಸ್ಮಿಕವಾದ ಸಂಶೋಧನೆಯು, ಟಿಪ್ಪು ಸುಲ್ತಾನ್ ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿದ ಪ್ರಗತಿಪರ ರಾಜನೆಂಬ ಕಲ್ಪನೆಯನ್ನು ಸ್ಪಷ್ಟವಾಗಿ ಬಲಪಡಿಸುತ್ತದೆ. ಭಾರತವನ್ನು ನೇರವಾಗಿ ಆಳಲು ಈಸ್ಟ್ ಇಂಡಿಯಾ ಕಂಪನಿ ನಡೆಸಿದ ಪ್ರಯತ್ನಗಳ ವಿರುದ್ಧ ಗಟ್ಟಿಯಾಗಿ ನಿಂತು ಹೋರಾಡಿದ ಕೊನೆಯ ಭದ್ರಕೋಟೆಯಾಗಿದ್ದನು ಟಿಪ್ಪು ಸುಲ್ತಾನ್.

ಇದನ್ನೂ ಓದಿ: ಕನ್ನಡ ರಾಷ್ಟ್ರೀಯತೆಯ ಕನಸುಗಾರ ಟಿಪ್ಪು ಸುಲ್ತಾನ್‌…

ಟಿಪ್ಪು ಸುಲ್ತಾನ್ ಹಿಂದೂಗಳ ಕೊಲೆಗಾರನೆಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿಯವರು 2018ರ ಅಕ್ಟೋಬರ್ 30ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆರೋಪಿಸಿದರು. ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್‌ಪ್ರೆಸ್ ಅನ್ನು ಮರುನಾಮಕರಣ ಮಾಡುವಂತೆ ಕೇಂದ್ರ ಸರ್ಕಾರದ ರೈಲ್ವೆ ಸಚಿವರನ್ನು ಒತ್ತಾಯಿಸುವುದಾಗಿ ಕೂಡ ಹೇಳಿದರು.

ಟಿಪ್ಪು ಸುಲ್ತಾನನ ಲೆಗಸಿಯನ್ನು ಎತ್ತಿಹಿಡಿಯುವ ಆಚರಣೆಗಳಿಗೆ ಬಿಜೆಪಿಯು ಒಡ್ಡುವ ವಿರೋಧಕ್ಕೆ ಮೂಲವಿರುವುದು ಆತನ ಮುಸ್ಲಿಂ ಅಸ್ಮಿತೆಯಲ್ಲಿ. ಆದರೆ ಅವನು ಈ ಪ್ರದೇಶಕ್ಕೆ ಮತ್ತು ರಾಕೆಟ್ ತಂತ್ರಜ್ಞಾನಕ್ಕೆ ನೀಡಿದ ವಿವಿಧ ಕೊಡುಗೆಗಳನ್ನು ಕಡೆಗಣಿಸಲು ಸಾಧ್ಯವಿಲ್ಲ. ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರು ತಮ್ಮ ಸಾಮ್ರಾಜ್ಯದ ಕೇಂದ್ರಬಿಂದುವಾದ ದಕ್ಷಿಣ ಕರ್ನಾಟಕದ ಪ್ರದೇಶವನ್ನು ಆಳವಾಗಿ ಪ್ರಭಾವಿಸಿದರು.

ಕೃಪೆ: ಫ್ರಂಟ್‌ಲೈನ್

 

ವಿಖಾರ್ ಅಹ್ಮದ್ ಸಯೀದ್

ವಿಖಾರ್ ಅಹ್ಮದ್ ಸಯೀದ್
ಪತ್ರಕರ್ತರು, ಫ್ರಂಟ್‌ಲೈನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...