ಲೋಹ್ರಿ

ಜಗತ್ತಿನ ಇತಿಹಾಸದಲ್ಲೆ ಅತೀ ದೊಡ್ಡ ರೈತ ಹೋರಾಟ ದೆಹಲಿಯ ಗಡಿಗಳಲ್ಲಿ ನಡೆಯುತ್ತಿದೆ. ಎರಡನೆ ಬಾರಿ ಭಾರಿ ಬಹುಮತದಿಂದ ಅಧಿಕಾರ ಹಿಡಿದ ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರದ ಸರ್ವಾಧಿಕಾರಿ ಧೋರಣೆ, ಅನ್ನದಾತರ ವಿಷಯದಲ್ಲಿ ಮುಗ್ಗರಿಸುವಂತೆ ಕಾಣುತ್ತಿದೆ. ಸಿಎಎ, ಎನ್‌ಆರ್‌ಸಿ ಕಾನೂನುಗಳನ್ನು ಪರಿಚಯಿಸುವವರೆಗೂ ಎಲ್ಲವನ್ನೂ ದಕ್ಕಿಸಿಕೊಂಡಿದ್ದ ಕೇಂದ್ರ ಸರ್ಕಾರ ಸಿಎಎ, ಎನ್‌ಆರ್‌‌ಸಿ ಕಾನೂನಿನ ವಿಷಯದಲ್ಲಿ ಅನಿರೀಕ್ಷಿತ ವಿರೋಧವನ್ನು ಎದುರಿಸಿತು. ಆದರೆ ಕೊರೊನಾ ಸಾಂಕ್ರಮಿಕದಿಂದಾಗಿ ಕೇಂದ್ರಕ್ಕೆ ಈ ಪ್ರತಿರೋಧದಿಂದ ತುಸು ಉಸಿರು ತೆಗೆದುಕೊಳ್ಳಲು ಸಾಧ್ಯವಾಯಿತು.

ಆದರೆ ದೇಶವಿಡಿ ಕೊರೊನಾ ಕಾಲದಲ್ಲಿ ಕಷ್ಟ ಪಡುತ್ತಿದ್ದರೆ ಆ ಕಷ್ಟಗಳಿಗೆ ಕಿವಿಗೊಡದೆ ತನ್ನ ಭಂಡತನವನ್ನು ಮುಂದುವರೆಸಿ ಕೃಷಿಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ಕೇಂದ್ರ ಜಾರಿ ಮಾಡಿತು. ಈ ಹೊತ್ತಲ್ಲಿ ಹೊತ್ತಿಕೊಂಡ ಕಿಡಿ ಇದೀಗ ದೆಹಲಿಯ ಗದ್ದುಗೆಯನ್ನು ನಡುಗಿಸುತ್ತಿದೆ. ಆರಂಭದಲ್ಲಿ ಕೇಂದ್ರ ಸರ್ಕಾರ ವಾಡಿಕೆಯಂತೆ ತನ್ನ ವಿರೋಧಿಗಳನ್ನು ಮಣಿಸಲು ಬಳಸುವ ಎಲ್ಲವನ್ನೂ ಮಾಡಿತು. ದೆಹಲಿಗೆ ಹೊರಟು ನಿಂತ ರೈತರನ್ನು ತಡೆಯಲು ಬಲ ಪ್ರಯೋಗಿಸಿತು. ಹರಿಯಾಣದ ಹೆದ್ದಾರಿಗಳನ್ನೇ ಅಗೆದು ವಾಹನಗಳನ್ನು ಹೋಗದಂತೆ ತಡೆಯಿತು. ದೇಶದ ಗಡಿಗಳಲ್ಲಿ ಹಾಕುವ ಮುಳ್ಳು ತಂತಿಗಳನ್ನು ಹಾಕಿ, ಪ್ರತಿಭಟನಾ ನಿರತ ರೈತರ ಮೇಲೆ ಲಾಠಿ ಚಾರ್ಜ್, ಆಶ್ರುವಾಯು, ಕೊರೆಯುವ ಚಳಿಯಲ್ಲೂ ಜಲಪಿರಂಗಿ ಸಿಡಿಸಿತು. ಆದರೆ ಒಂದು ಉದಾತ್ತಾ ಧ್ಯೇಯವನ್ನಿಟ್ಟುಕೊಂಡು ಬಂದಿದ್ದ ರೈತರನ್ನು ಇದ್ಯಾವುದು ನಡುಗಿಸಲಿಲ್ಲ.

ಆರಂಭದಲ್ಲಿ ರೈತರು ದೆಹಲಿಗೆ ತೆರಳಿ ಅಲ್ಲಿ ಪ್ರತಿಭಟನೆ ಮುಂದುವರೆಸುವುದಾಗಿ ಹೇಳಿದ್ದರೂ, ಕೇಂದ್ರ ಸರ್ಕಾರ ಅವರನ್ನು ದೆಹಲಿ ಪ್ರವೇಶಿಸಲು ಅನುಮತಿ ನೀಡಲಿಲ್ಲ. ಈ ಕಾರಣದಿಂದಲೇ ದೆಹಲಿಯ ಪ್ರಮುಖದ ಗಡಿಗಳಲ್ಲಿ ಕಳೆದ 50 ದಿಗಳಿಂದಲೂ ರೈತರು ಆಂದೋಲನವನ್ನು ಚಾಲ್ತಿಯಲ್ಲಿಟ್ಟಿದ್ದಾರೆ. ಇಲ್ಲೂ ಕೇಂದ್ರ ಸರ್ಕಾರ ತನ್ನ ಕ್ರೂರ ಬುದ್ದಿಯನ್ನು ತೋರಿಸುತ್ತಲೆ ಬಂದಿದೆ. ರೈತರನ್ನು ತುಕ್ಡೆ ಗ್ಯಾಂಗ್ ಎನ್ನುವುದು, ಖಾಲಿಸ್ತಾನಿ ಉಗ್ರರು ಎನ್ನುವುದು, ತಮ್ಮ ಮಾಧ್ಯಮಗಳನ್ನು ಬಳಸಿ ಕೊಂಡು ಆಂದೋಲನದ ವಿಶ್ವಾಸಾರ್ಹತೆಯನ್ನು ಕುಗ್ಗಿಸಲು ನೋಡಿತು. ಆದರೆ ಪ್ರತಿಭಟನಾ ನಿರತ ರೈತರು ಇವೆಲ್ಲವನ್ನೂ ಗೆದ್ದರು.

ರೈತರ ಹೋರಾಟ ಎಷ್ಟು ಬಲಗೊಳ್ಳುತ್ತಾ ಬಂದಿದೆಯೆಂದರೆ ಕೇಂದ್ರ ಸರ್ಕಾರದ ಮೈತ್ರಿ ಪಕ್ಷಗಳು ಒಂದೊಂದಾಗಿ ಅದರಿಂದ ಕಳಚಿಕೊಳ್ಳುತ್ತಲೆ ಇದೆ. ಕೊನೆಗೆ ಬಿಜೆಪಿ ನಾಯಕರು ರೈತರನ್ನು ಖಾಲಿಸ್ತಾನಿಗಳು ಎಂದು ಹೇಳಿರುವುದಕ್ಕೆ ಕೇಂದ್ರ ಸರ್ಕಾರ ಖೇದ ವ್ಯಕ್ತಪಡಿಸಿತು. ವಾರಕ್ಕೆ ಮೂರು ಬಾರಿ ಕೃಷಿ ಕಾನೂನಿನ ಪರ ಮಾತನಾಡುತ್ತಿದ್ದ ಪ್ರಧಾನಿ ಮೋದಿ ಮಾತು ನಿಲ್ಲಿಸಿದರು. ಯಾವುದೆ ಕಾರಣಕ್ಕೂ ಕಾನೂನನ್ನು ವಾಪಾಸು ಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ರೈತರ ಜೊತೆ ಮಾತುಕತೆಯನ್ನು ವಿಫಲಗೊಳಿಸುತ್ತಲೆ ಬರುತ್ತಿದ್ದ ಕೇಂದ್ರ ಸರ್ಕಾರ ಆರನೇ ಮಾತುಕತೆಯಲ್ಲಿ ರೈತರ ಎರಡು ಬೇಡಿಕೆಯನ್ನು ಮನ್ನಿಸುವುದಾಗಿ ಹೇಳಿಕೊಂಡಿತು.

ರೈತರ ಹೋರಾಟ ಯಾವ ಮಟ್ಟಿಗೆ ಸಫಲತೆಯನ್ನು ಕಂಡಿದೆ ಎಂದರೆ, ಕೃಷಿ ಕಾನೂನಿನ ವಿರುದ್ಧ ತಾವು ಅರ್ಜಿಯನ್ನು ಹಾಕದಿದ್ದರೂ ಅವುಗಳನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ. ಅದನ್ನು ಚರ್ಚೆ ಮಾಡಲು ಸಮಿತಿಯನ್ನು ರಚಿಸಿದೆ. ಆದರೆ ನ್ಯಾಯಾಲಯದ ಈ ಸಮಿತಿಯಲ್ಲಿ ಕಾನೂನಿನ ಪರವಿರುವವರು ಇದ್ದಾರೆಂದು ಸಮಿತಿಯನ್ನು ರೈತರ ಬಹಿಷ್ಕರಿಸಿದ್ದಾರೆ. ಸಮಿತಿ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಈ ಹಿಂದೆ ಕಾನೂನಿನ ಪರವಿದ್ದ ಭೂಪಿಂದರ್‌ ಸಿಂಗ್ ಮನ್ ತಾನು ಯಾವತ್ತೂ ಪಂಜಾಬ್ ಮತ್ತು ರೈತರ ಪರ ಎಂದು ಹೇಳಿ ಸಮಿತಿಯಿಂದ ಸ್ವಯಂ ಹೊರ ನಡೆದಿದ್ದಾರೆ. ಆದರೆ ರೈತರು ತಮಗೆ ತಡೆ ಹಿಡಿಯುವಿಕೆ ಬೇಕಿಲ್ಲ, ಕಾನೂನನ್ನು ರದ್ದು ಮಾಡುವವರೆಗೂ ತಮ್ಮ ಹೋರಾಟ ಜಾರಿಯಲ್ಲಿರುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ರೈತರು ಎಂಟನೆ ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಜನವರಿ 26 ರಂದು ದೆಹಲಿಗೆ ಟ್ರಾಕ್ಟರ್‌ ರ್‍ಯಾಲಿ ನಡೆಸುವುದಾಗಿ ಹೇಳಿದ್ದಾರೆ. ಇದನ್ನು ತಡೆ ಹಿಡಿಯಬೇಕೆಂದು ದೆಹಲಿ ಪೊಲೀಸರ ಮುಖಾಂತರ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಹೋಯಿತು. ಜೊತೆಗೆ ತಾನೆ ಸ್ವತಃ ಈ ರ್‍ಯಾಲಿಯನ್ನು ತಡೆಹಿಡಿಯಬೇಕೆಂದು ನ್ಯಾಯಾಲಯವನ್ನು ಸಂಪರ್ಕಿಸಿದೆ. ಆದರೆ ರೈತರು ತಮ್ಮ ರ್‍ಯಾಲಿ ನಡೆಸಿಯೆ ತೀರುತ್ತೇವೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಎಲ್ಲಿಯವರೆಗೆ ಇಕ್ಕಟ್ಟಿಗೆ ಸಿಲುಕಿದೆ ಎಂದರೆ, ಕೃಷಿ ಕಾನೂನಿನ ಪರ ಬಿಜೆಪಿ ಆಯೋಜಿಸಿದ್ದ 700 ಕ್ಕು ಹೆಚ್ಚು ಸಭೆಗಳನ್ನು ತಡೆ ಹಿಡಿಯಬೇಕು ಎಂದು ಬಿಜೆಪಿಯ ಹಿರಿಯ ನಾಯಕ, ಗೃಹ ಮಂತ್ರಿ ಅಮಿತ್ ಶಾ ಆದೇಶಿಸಿದ್ದಾರೆ. ಶುಕ್ರವಾರ(ನಾಳೆ) ರೈತರೊಡನೆ 9 ನೇ ಸುತ್ತಿನ ಮಾತುಕತೆ ನಡೆಯಲಿದೆ. ಆದರೆ ಈ ಮಾತುಕತೆಯಿಂದ ಏನೂ ಫಲವಿಲ್ಲ ಎಂದೇ ಇಲ್ಲಿವರೆಗಿನ ಮಾಹಿತಿ. ಈ ಮಾತುಕತೆಯ ಹೊರತಾಗಿಯೂ ರೈತರು ಗಣರಾಜ್ಯೋತ್ಸವದಂದು ನಡೆಯಲಿರುವ ಟ್ರಾಕ್ಟರ್‌ ರ್‍ಯಾಲಿಗೆ ಭರದಿಂದ ಸಿದ್ದತೆ ನಡೆಸುತ್ತಿದ್ದಾರೆ. ರೈತರ ಹೋರಾಟವು ಪ್ರಜಾಪ್ರಭುತ್ವ ಮಾದರಿಯ ಹೋರಾಟಗಳಲ್ಲಿ ಮತ್ತೇ ನಂಬಿಕೆಯನ್ನು ಚಿಗುರುವಂತೆ ಮಾಡುತ್ತಿದೆ. ಈ ಹೋರಾಟವು ಕೇಂದ್ರ ಸರ್ಕಾರದ ಎಲ್ಲಾ ಎಣಿಕೆಗಳನ್ನು ತಲೆಕೆಳಗಾಗಿಸಿದೆ. ಸರ್ಕಾರ ರೈತರ ಮಾತನ್ನು ಕೇಳುತ್ತದೆ, ಕೇಳಲೆ ಬೇಕಾಗಿದೆ.


ಇದನ್ನೂ ಓದಿ: ರೈತರ ಪ್ರತಿರೋಧದ ಹಿನ್ನೆಲೆ: ಸುಪ್ರೀಂ ಸಮಿತಿಯಿಂದ ಸ್ವಯಂ ಹೊರನಡೆದ ಭೂಪಿಂದರ್‌ ಮನ್

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here