ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ಕಡಬ ಹೋಬಳಿ ವ್ಯಾಪ್ತಿಗೆ ಸೇರಿದ ಬ್ಯಾಲಹಳ್ಳಿಯಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘವು ದಲಿತರು ಹಾಲು ಕೊಳ್ಳದಂತೆ ಅನಪೇಕ್ಷಿತ ನಿಲುವನ್ನು ತಾಳಿದೆ.
ಸುಮಾರು 15 ದಲಿತ ಕುಟುಂಬಗಳು ಇರುವ ಹಳ್ಳಿ ಇದಾಗಿದ್ದು, ಲಿಂಗಾಯತ-ವೀರಶೈವ, ನಾಯಕ ಸಮುದಾಯಗಳು ಇವೆ. ಮರಾಠಿ ಭಾಷೆ ಮಾತನಾಡುವ ಸಮುದಾಯವಿರುವ ಮರಾಠಿ ಪಾಳ್ಯವು ಬ್ಯಾಲಹಳ್ಳಿಗೆ ಹೊಂದಿಕೊಂಡಂತೆ ಇದೆ.
ಬ್ಯಾಲಹಳ್ಳಿಯಲ್ಲಿರುವ ಮಾದಿಗ ಸಮುದಾಯವು ಮೊದಲಿನಿಂದಲೂ ಆರ್ಥಿಕವಾಗಿ ಹಿಂದುಳಿದಿದೆ. ಸ್ವತಃ ಹಸು ಕಟ್ಟಿಕೊಳ್ಳುವಷ್ಟು ಶಕ್ತಿ ಇಲ್ಲದ ಕುಟುಂಬಗಳು ಇವು. ಈ ಬಡ ಕುಟುಂಬಗಳು ದಲಿತ ಕಾಲೋನಿ ಪಕ್ಕದಲ್ಲಿನ ಹಾಲು ಉತ್ಪಾದಕರ ಸಂಘದಿಂದ ಮೊದಲಿನಿಂದಲೂ ಹಾಲು ಖರೀದಿಸುತ್ತಿದ್ದವು.
ಸಾಮಾನ್ಯವಾಗಿ 100 ಎಂ.ಎಲ್., 200 ಎಂ.ಎಲ್. ಹಾಲು ಖರೀದಿಸಿ ಚಹಾ ಮಾಡಿಕೊಂಡು ಕುಡಿದು ಕೂಲಿಗೆ ಹೋಗುತ್ತಿದ್ದರು. ಆದರೆ ಈಗ ಚಹಾ ಕಾಯಿಸಿಕೊಳ್ಳಲು ಅರ್ಧ ಲೀಟರ್ ಅಥವಾ ಒಂದು ಲೀಟರ್ ಹಾಲನ್ನಷ್ಟೇ ಖರೀದಿಸಬೇಕು. ಇಲ್ಲವಾದರೆ ಹಾಲು ಕೊಡುವುದಿಲ್ಲ ಎಂದು ಇಲ್ಲಿನ ಸಹಕಾರ ಸಂಘ ಹೇಳಿದೆ.
ಇದನ್ನೂ ಓದಿರಿ: ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಕೋರ್ಟ್‌ಗೆ ಶರಣಾದ RSS ಮುಖಂಡ
ಅರ್ಧ ಲೀಟರ್ ಹಾಲು ತೆಗೆದುಕೊಂಡು ನಾವು ಏನು ಮಾಡಲಿ? ನಮಗೆ ದಿನಕ್ಕೆ ಅರ್ಧ ಲೀಟರ್, ಒಂದು ಲೀಟರ್ ಹಾಲು ಖರೀದಿಸಲು ಸಾಧ್ಯವಾಗದು. ದಯವಿಟ್ಟು ಮೊದಲಿನಂತೆ ನೂರು ಎಂ.ಎಲ್., ಇನ್ನೂರು ಎಂ.ಎಲ್. ಹಾಲು ನೀಡಿ ಎಂದು ಗೋಗರೆಯುವಂತಾಗಿದೆ.
“ಹಾಲನ್ನು ಪರೀಕ್ಷಿಸಿದ ನಂತರ ಗುಣಮಟ್ಟದ ಹಾಲನ್ನು ಖರೀದಿಸಲು ಈ ಮೊದಲು ಅವಕಾಶವಿತ್ತು. ಸಣ್ಣ ಅವ್ಯವಹಾರವೇನೋ ಸಂಘದಲ್ಲಿ ನಡೆದಿದ್ದು, ಹೀಗಾಗಿ ಸಂಘದ ಸದಸ್ಯರು, ಪದಾಧಿಕಾರಿಗಳ ನಡುವೆ ಗಲಾಟೆಯಾದಂತಿದೆ. ಇನ್ನು ಮುಂದೆ ಚಿಲ್ಲರೆ ಲೆಕ್ಕದಲ್ಲಿ ಹಾಲನ್ನೇ ಮಾರುವುದು ಬೇಡ. ಅರ್ಧ ಅಥವಾ ಒಂದು ಲೀಟರ್ ಹಾಲನ್ನು ಖರೀದಿಸಿದರೆ ಲೆಕ್ಕ ಸಿಗುತ್ತದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಒಳಗೊಳಗೆ ಅವರು ಭ್ರಷ್ಟಾಚಾರ ಮಾಡಿಕೊಂಡು, ನಮಗೆ ಹಾಲು ನೀಡುವುದನ್ನು ನಿಲ್ಲಿಸುವುದು ಎಷ್ಟು ಸರಿ?” ಎಂದು ದಲಿತರು ಕೇಳುತ್ತಿದ್ದಾರೆ.
“ತುಮಕೂರು ಹಾಲು ಒಕ್ಕೂಟದ ಪದಾಧಿಕಾರಿಗಳು ಬ್ಯಾಲಹಳ್ಳಿಗೆ ಬಂದು ಸಾಮಾನ್ಯ ಸಭೆ ನಡೆಸಿದ ಸಂದರ್ಭದಲ್ಲಿ ದಲಿತರು ಪ್ರಶ್ನಿಸಿದ್ದಾರೆ. ಹಾಲು ಒಕ್ಕೂಟದಲ್ಲಿ ಈ ಥರದ ನಿಯಮವೇನೂ ಇಲ್ಲ. ಅದು ಇಲ್ಲಿನ ಸಂಘದವರು ಮಾಡಿರುವ ತೀರ್ಮಾನ. ಸಂಘದೊಂದಿಗೆ ಮಾತನಾಡಿ ಒಂದು ನಿರ್ಧಾರಕ್ಕೆ ಬನ್ನಿ ಎಂದು ಒಕ್ಕೂಟದವರು ತಿಳಿಸಿದ್ದಾರೆ. ಮೊದಲಿನಂತೆ ಹಾಲು ಕೊಡಿ ಎಂದು ಕೇಳುತ್ತಿದ್ದರೂ ಕಿವಿಗೆ ಹಾಕಿಕೊಳ್ಳಲಿಲ್ಲ” ಎನ್ನುತ್ತಾರೆ ದಲಿತ ಮುಖಂಡ ಬಿ.ಸಿ.ರೇಣುಕಪ್ಪ.
ಸಂಘದ ಕಾರ್ಯದರ್ಶಿ ಶಂಕರಪ್ಪ ಪ್ರತಿಕ್ರಿಯೆ
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಸಂಘದ ಕಾರ್ಯದರ್ಶಿ ಶಂಕರಪ್ಪ, “ಅವರು ತೆಗೆದುಕೊಳ್ಳುವುದು ನೂರು ಎಂ.ಎಲ್., ಇನ್ನೂರು ಎಂ.ಎಲ್. ಹಾಲು ಅಷ್ಟೇ. ಎರಡು ಲೀಟರ್ ಒಟ್ಟಿಗೆ ತೆಗೆದುಕೊಂಡು ಹಂಚಿಕೊಂಡು ಬಿಡಿ ಎಂದು ಮೀಟಿಂಗ್‌ನಲ್ಲಿ ತಿಳಿಸಿದ್ದೇವೆ. ಹಾಲು ಕೊಡಬೇಕೆಂದೇನೂ ಇಲ್ಲ. ಸಂಘ ಹಾಲು ಖರೀದಿಸಲು ಮಾತ್ರ ಇರುವುದು. ಆದರೂ ಜನರ ಹಿತಾದೃಷ್ಟಿಯಿಂದ ಮೊದಲಿನಿಂದಲೂ ಹಾಲು ಮಾರಲಾಗುತ್ತಿತ್ತು” ಎಂದರು.
ಇದನ್ನೂ ಓದಿರಿ: ಗುಜರಾತ್: ರಾಮಮಂದಿರ ಪ್ರವೇಶಿಸಿದ ದಲಿತ ಕುಟುಂಬಕ್ಕೆ ಮಾರಣಾಂತಿಕ ಹಲ್ಲೆ
“ಒಂದು ಲೀಟರ್‌ಗೆ 36 ರೂ.ಗಳಿಗೆ ಕೊಡುತ್ತೇವೆ. ನೂರು ಎಂ.ಎಲ್. ತೆಗೆದುಕೊಂಡರೆ 3.60 ರೂ. ತೆಗೆದುಕೊಳ್ಳಬೇಕು. ಆದರೆ 40 ಪೈಸೆ ಚಿಲ್ಲರೆ ಇರುವುದಿಲ್ಲವಲ್ಲ. ನಾಲ್ಕು ರೂ. ತೆಗೆದುಕೊಳ್ಳಬೇಕಾಗುತ್ತದೆ. 40 ಪೈಸೆ ಚಿಲ್ಲರೆಗೂ ಕೆಲವರು ತಕರಾರು ತೆಗೆದರು. ಹೀಗಾಗಿ ಚಿಲ್ಲರೆ ಕೊಡಲು ಆಗಲ್ಲ. ಅರ್ಧ ಲೀಟರ್, ಕಾಲು ಲೀಟರ್ ತೆಗೆದುಕೊಳ್ಳಿ ಎಂದೆವು. ಅಷ್ಟು ತೆಗೆದುಕೊಳ್ಳಲು ಶಕ್ತಿ ಇಲ್ಲ ಅಂದರೆ ನಾವೇನು ಮಾಡಲಿ” ಎಂದು ಸಂಘದ ನಡೆಯನ್ನು ಸಮರ್ಥಿಸಿಕೊಂಡರು.
“ಒಟ್ಟಿಗೆ ತೆಗೆದುಕೊಂಡು ಹೋಗಿ ಎಂದರೂ ಆಗಲ್ಲ. ಲೀಟರ್‌ಗೆ ನಲವತ್ತು ರೂಪಾಯಿ ಏರಿಕೆಯಾದರೆ ಇದೆಲ್ಲ ಸಮಸ್ಯೆಯಾಗಲ್ಲ” ಎಂದು ಪ್ರತಿಕ್ರಿಯೆ ನೀಡಿದರು ಶಂಕರಪ್ಪ.
ಶಂಕರಪ್ಪ ಅವರು ಹೀಗೆ ಹೇಳುತ್ತಿದ್ದಾರೆಂದು ದಲಿತ ಮುಖಂಡರಿಗೆ ತಿಳಿಸಿದಾಗ, “ಎಲ್ಲ ಅಳತೆ ಮಾಪನಗಳು ಅವರ ಬಳಿಯೇ ಇರುತ್ತವೆ. ಅಳತೆ ಮಾಡಿಕೊಡಲು ಆಗುವುದಿಲ್ಲವೇ? ಇವೆಲ್ಲ ತಾತ್ಸರ ಮನೋಭಾವವಷ್ಟೇ. ನಾವು ನಾಲ್ಕು ರೂಪಾಯಿ ಕೊಡಲು ಸಿದ್ಧರಿದ್ದೇವೆ. ಸಂಘದೊಳಗೆ ಆಗಿರುವ ಕಿತಾಪತಿಗೆ ನಮ್ಮನ್ನು ಬಲಿಪಶು ಮಾಡಲಾಗಿದೆ” ಎಂದರು.
ಮುಜರಾಯಿ ದೇವಾಲಯಕ್ಕೆ ಪ್ರವೇಶಿಸಲು ಹೆದರಿಕೆ
ಬ್ಯಾಲಹಳ್ಳಿ ಗ್ರಾಮದಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿದ ತೊಳಸಮ್ಮ ದೇವಸ್ಥಾನವಿದ್ದು, ಸವರ್ಣೀಯ ಸಮುದಾಯದ ಹಿಡಿತದಲ್ಲಿದೆ. ದೇವಾಲಯಕ್ಕೆ ಪ್ರವೇಶಿಸಬೇಕೆಂಬ ಆಸೆ ಅನೇಕ ದಲಿತರಿಗಿದ್ದರೂ ಧೈರ್ಯ ಸಾಲದೆ ಸುಮ್ಮನಾಗಿದ್ದಾರೆ. ಅಲ್ಲದೆ ದೇವಾಲಯದ ಹೊರಗೆ ಹಾಕಿರುವ ಬೋರ್ಡ್ ಅನ್ನು ಅಳಿಸಿ ಹಾಕುವ ಪ್ರಯತ್ನವನ್ನು ಸವರ್ಣೀಯ ಜಾತಿಗಳು ಮಾಡಿವೆ.

ಊರಿನ ಬಸ್ ನಿಲ್ದಾಣದಲ್ಲಿ ದೇವಾಲಯವಿದ್ದು, ಮುಜರಾಯಿ ಇಲಾಖೆಯು ದೇವಾಲಯದ ಹೊರಗೆ, “ಯಾವುದೇ ಜಾತಿ, ಜನಾಂಗ, ಧರ್ಮ, ಲಿಂಗ ಭೇದವಿಲ್ಲದೆ ಪ್ರವೇಶ ಮಾಡಬಹುದು” ಎಂದು ಬೋರ್ಡ್ ಹಾಕಿದೆ. ‘ಜಾತಿ, ಜನಾಂಗ, ದೇವಾಲಯ ಪ್ರವೇಶ’ ಇತ್ಯಾದಿ ಪದಗಳನ್ನು ಕಾಣದಂತೆ ಕೆರೆದು ಹಾಕಲಾಗಿದೆ.
ಒಂದು ಚಿಲ್ಲರೆ ನೆಪದಲ್ಲಿ ಹಾಲು ನೀಡಲು ನಿರಾಕರಣೆ, ಮತ್ತೊಂದು ಕಡೆ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯ ಪ್ರವೇಶಿಸಲು ಅಡ್ಡಿ, ಆತಂಕ… ಇದು ಬ್ಯಾಲಹಳ್ಳಿಯ ಪರಿಸ್ಥಿತಿಯಾಗಿದೆ.

ಇದನ್ನೂ ಓದಿರಿ: ದಲಿತರಿಗೆ ಕ್ಷೌರ ಮಾಡುವುದಿಲ್ಲ: ಮಂಡ್ಯ ಜಿಲ್ಲೆಯಲ್ಲಿ ಬಹಿರಂಗ ಅಸ್ಪೃಶ್ಯತೆ ಆಚರಣೆ


