ದೆಹಲಿ- ಹರಿಯಾಣದ ಗಡಿಯಾದ ಟಿಕ್ರಿ ಬಳಿ ವೇಗದೂತ ಲಾರಿಯೊಂದು ಡಿವೈಡರ್‌ಗೆ ಗುದ್ದಿದ ಪರಿಣಾಮ ಡಿವೈಡರ್ ಮೇಲೆ ಕುಳಿತಿದ್ದ ಮೂವರು ರೈತ ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಮೂವರು ಮಹಿಳೆಯರು ಡಿವೈಡರ್ ಮೇಲೆ ಆಟೋಗಾಗಿ ಕಾದು ಕುಳಿತಿದ್ದಾಗ ಲಾರಿ ಹರಿದು ಈ ದುರ್ಘಟನೆ ಸಂಭವಿಸಿದೆ. ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಅಸುನೀಗಿದ್ದಾರೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮೂವರು ಮಹಿಳೆಯರು ಪಂಜಾಬ್ ರಾಜ್ಯದ ಮಾನ್ಸ ಜಿಲ್ಲೆಯವರು ಎಂದು ಪೊಲೀಸರು ತಿಳಿಸಿದ್ದಾರೆ.
ಒಕ್ಕೂಟ ಸರ್ಕಾರದ 3 ಕೃಷಿ ಕಾಯ್ದೆಗಳ ವಿರುದ್ಧ ಕಳೆದ 11 ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿರುವ ಟಿಕ್ರಿ ಗಡಿ ಬಳಿ ಈ ಘಟನೆ ಸಂಭವಿಸಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಲಖಿಂಪುರ್ ಖೇರಿ ಹತ್ಯಾಕಾಂಡದ ನಂತರ ಸಂಭವಿಸಿರುವ ಮತ್ತೊಂದು ದುರಂತ ಇದಾಗಿದೆ. ಅಕ್ಟೋಬರ್ 3 ರಂದು ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ, ಒಕ್ಕೂಟ ಸರ್ಕಾರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಆಂದೋಲನ ಮಾಡುತ್ತಿದ್ದ ರೈತರ ಗುಂಪು, ಯುಪಿಯ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಭೇಟಿಯ ವಿರುದ್ಧ ಪ್ರತಿಭಟನೆ ನಡೆಸಿ ವಾಪಾಸಾಗುತ್ತಿದ್ದರು. ಆಗ ಏಕಾಏಕಿ ಅವರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾರವರ ಮಗ ಆಶಿಶ್ ಮಿಶ್ರಾ ಮತ್ತು ಆತನ ಬೆಂಬಲಿಗರು ಕಾರು ಹರಿಸಿರುವ ಆರೋಪ ಎದುರಿಸುತ್ತಿದ್ದಾರೆ. ಘಟನೆಯಲ್ಲಿ ನಾಲ್ಕು ರೈತರು ಮೃತಪಟ್ಟರೆ ಹಲವರು ಗಾಯಗೊಂಡಿದ್ದರು. ಆನಂತರ ನಡೆದ ಹಿಂಸಾಚಾರದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಮತ್ತು ಒಬ್ಬ ಪತ್ರಕರ್ತ ಹತ್ಯೆಯಾಗಿದ್ದರು.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ ಪ್ರಕರಣ: ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ತರಾಟೆ


