ಮುಂಬೈ ಕರಾವಳಿಯ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಮೇಲೆ ಎನ್‌ಸಿಬಿ ದಾಳಿ ನಡೆಸಿ ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದ ಪ್ರಕರಣದ ವಿವಾದಾತ್ಮಕ ಸ್ವತಂತ್ರ ಸಾಕ್ಷಿಯಾಗಿದ್ದ ಕೆ.ಪಿ ಗೋಸಾವಿಯನ್ನು ವಂಚನೆ ಪ್ರಕರಣದಲ್ಲಿ ಪುಣೆಯಲ್ಲಿ ಬಂಧಿಸಲಾಗಿದೆ.
ಗೋಸಾವಿ ಎನ್‌ಸಿಬಿಯ ಸಾಕ್ಷಿಯಾಗಿದ್ದರೂ ಇಷ್ಟು ದಿನ ನಾಪತ್ತೆಯಾಗಿದ್ದ. 2018ರ ವಂಚನೆ ಪ್ರಕರಣ ಆತನ ಮೇಲಿದ್ದು ಆತನ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಯಾಗಿತ್ತು. ತನಗೆ ಮಹಾರಾಷ್ಟ್ರದಲ್ಲಿ ಜೀವ ಬೆದರಿಕೆಯಿರುವುದರಿಂದ ಉತ್ತರ ಪ್ರದೇಶದ ಲಕ್ನೋದಲ್ಲಿ ಪೊಲೀಸರ ಮುಂದೆ ಶರಣಾಗುವುದಾಗಿ ಈತ ಮೂರು ದಿನದ ಹಿಂದೆ ಹೇಳಿಕೆ ನೀಡಿದ್ದ. ಆತನ ಆರೋಪವನ್ನು ಪೊಲೀಸರು ತಳ್ಳಿ ಹಾಕಿದ್ದರು.
ತನ್ನನ್ನು ಖಾಸಗಿ ತನಿಖಾಧಿಕಾರಿ ಎಂದು ಹೇಳಿಕೊಳ್ಳುವ ಕೆ.ಪಿ. ಗೋಸಾವಿ, ಬಂಧಿತ ಆರೋಪಿ ಆರ್ಯನ್ ಖಾನ್ ಅವರೊಂದಿಗೆ ಸೆಲ್ಫಿ ಮತ್ತು ಹಲವಾರು ವಿಡಿಯೊಗಳನ್ನು ತೆಗೆದುಕೊಳ್ಳುವುದು ಮಾಡಿದ್ದರು. ಈತ ಪ್ರಕರಣದ ‘ಸ್ವತಂತ್ರ ಸಾಕ್ಷಿ’ ಎಂದು ಎನ್‌ಸಿಬಿ ಹೇಳಿತ್ತು. ಸದ್ಯ ದಾಳಿ ನಡೆದ ಅಕ್ಟೋಬರ್ 2 ರಂದು ಕೇಸ್‌ನ ಸ್ವತಂತ್ರ ಸಾಕ್ಷಿ, ಬಿಜೆಪಿ ಕಾರ್ಯಕರ್ತ, ಬಂದರಿನಲ್ಲಿರುವ ಎನ್‌ಸಿಬಿ ಕಚೇರಿಯ ಒಳಗೆ ಎನ್‌ಸಿಬಿ ಅಧಿಕಾರಿಗಳೊಟ್ಟಿಗೆ ಕಾಣಿಸಿಕೊಂಡಿರುವ ಪೋಟೋಗಳು ವೈರಲ್ ಆಗಿವೆ. ಅದರೊಂದಿಗೆ ಎನ್‌ಸಿಬಿ ದಾಳಿಗೆ ಮಾಹಿತಿ ಒದಗಿಸಿದ್ದಾರೆ ಎನ್ನಲಾಗಿರುವ ಬಿಜೆಪಿ ಕಾರ್ಯಕರ್ತ ಮನೀಷ್ ಭಾನುಸಾಲಿ ಮತ್ತು ಅಂದು ದಾಳಿಯಲ್ಲಿ ಬಂಧಿಸಲ್ಪಟ್ಟ ಇಬ್ಬರೊಂದಿಗೆ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಮಾತುಕತೆ ನಡೆಸುತ್ತಿರುವುದು ವೈರಲ್ ಆಗಿದೆ.

PC: NDTV (ದಾಳಿ ದಿನ ಮುಂಬೈ ಬಂದರಿನ ಒಳಗಿನ ಫೋಟೋಗಳು, ಕೆಪಿ ಗೋಸಾವಿ ಜೊತೆ ಸಮೀರ್ ವಾಂಖೆಡೆ ಕಾಣಿಸಿಕೊಂಡಿರುವುದು)
ಇತ್ತ ಬಿಜೆಪಿ ಕಾರ್ಯಕರ್ತ ಮನೀಷ್ ಭಾನುಸಾಲಿ ಮತ್ತು ಗೋಸಾವಿ ಕೇವಲ ಮಾಹಿತಿದಾರ ಮತ್ತು ಸಾಕ್ಷಿಯಾಗಿದ್ದಲ್ಲಿ, ಎನ್‌ಸಿಬಿ ದಾಳಿಯಲ್ಲಿ ಭಾಗವಹಿಸಲು ಮತ್ತು ಬಂಧಿತರೊಂದಿಗೆ ಸಂವಹನ ನಡೆಸಲು ಹೇಗೆ ಅನುಮತಿ ನೀಡಲಾಗಿದೆ ಎಂಬುದು ಹಲವರ ಪ್ರಶ್ನೆಯಾಗಿದೆ. ಹಾಗಾಗಿ ಇಡೀ ಪ್ರಕರಣವೇ ನಕಲಿ ಎಂದು ಮಹಾರಾಷ್ಟ್ರ ಸರ್ಕಾರ ವಾದಿಸುತ್ತಿದೆ.
ಆರ್ಯನ್ ಖಾನ್ ಪ್ರಕರಣದಲ್ಲಿ ಬಂಧಿತನಾಗಿರುವ ಕೆ.ಪಿ ಗೋಸಾವಿಯ ವೈಯಕ್ತಿಕ ಅಂಗರಕ್ಷಕ ಎಂದು ಹೇಳಿಕೊಳ್ಳುವ ಪ್ರಭಾಕರ್ ಸೈಲ್, ಅಕ್ಟೋಬರ್ 3 ರಂದು ಸ್ಯಾಮ್ ಡಿಸೋಜಾ ಮತ್ತು ಕೆ.ಪಿ ಗೋಸಾವಿ ನಡುವೆ 18 ಕೋಟಿ ರೂಪಾಯಿ ಒಪ್ಪಂದದ ಬಗ್ಗೆ ನಡೆದ ಸಂಭಾಷಣೆಯನ್ನು ಕೇಳಿದ್ದೇನೆ ಎಂದು ಹೇಳಿದ್ದಾರೆ. ಇದರಲ್ಲಿ 8 ಕೋಟಿ ರೂಪಾಯಿಗಳನ್ನು ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆಗೆ ನೀಡಬೇಕಾಗುತ್ತದೆ ಎಂದು ಹೇಳಿದ್ದರು ಎಂದು ಆರೋಪಿಸಿದ್ದಾರೆ.
ಅಕ್ಟೋಬರ್ 3 ರ ಸಂಜೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ, ಕೆ.ಪಿ ಗೋಸಾವಿ ಮತ್ತು ಇನ್ನೊಬ್ಬ ವ್ಯಕ್ತಿ ಸ್ಯಾಮ್ ಡಿಸೋಜಾ ಅವರು ಕಾರಿನೊಳಗೆ 15 ನಿಮಿಷಗಳ ಸಭೆ ನಡೆಸಿದರು ಎಂದಿದ್ದಾರೆ. ಈ ಪ್ರಕರಣದಲ್ಲಿ ಎನ್‌ಸಿಬಿ ಹೆಸರಿಸಿರುವ ಒಂಬತ್ತು ಸಾಕ್ಷಿಗಳಲ್ಲಿ ಪ್ರಭಾಕರ್ ಸೈಲ್ ಕೂಡ ಒಬ್ಬರು. ಆದರೆ ಈ ಆರೋಪವನ್ನು ಎನ್‌ಸಿಬಿ ನಿರಾಕರಿಸಿದೆ.
ಇದನ್ನೂ ಓದಿ: ಮುಂಬೈ ಡ್ರಗ್ಸ್ ಪ್ರಕರಣದ ಸಾಕ್ಷಿ, ಬಿಜೆಪಿ ಕಾರ್ಯಕರ್ತ, ಎನ್‌ಸಿಬಿ ಅಧಿಕಾರಿ ಮಾತುಕತೆಯ ಪೋಟೋಗಳು ವೈರಲ್