ಇಂಡಿಯನ್-ಅಮೆರಿಕನ್ ಲೇಖಕಿ ಜುಂಪಾ ಲಾಹಿರಿಯ ’ವೇರ್ ಅಬೌಟ್ಸ್’ ಕಾದಂಬರಿಯ ವಿಮರ್ಶೆ

ಚೊಚ್ಚಲ ಕಥಾಸಂಕಲನಕ್ಕೆ ಪುಲಿಟ್ಜರ್ ಪ್ರಶಸ್ತಿ ಪಡೆದಿದ್ದ ಭಾರತೀಯ-ಅಮೆರಿಕನ್ ಲೇಖಕಿ ಜುಂಪಾ ಲಾಹಿರಿ ಇದೇ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಮತ್ತೆ ಸುದ್ದಿಯಲ್ಲಿದ್ದರು. ಆಕೆ ಇಟಾಲಿಯನ್ ಭಾಷೆಯಲ್ಲಿ ತಾನೇ ರಚಿಸಿರುವ ಕಾದಂಬರಿಯ (Dove mi Trovo) ಇಂಗ್ಲಿಷ್ ಅನುವಾದ ’ವೇರ್ ಅಬೌಟ್ಸ್’(ವಿಳಾಸ)ಗಾಗಿ ಈ ಬಾರಿ ಸುದ್ದಿಯಲ್ಲಿದ್ದದ್ದು. ’ದ ಲೋಲ್ಯಾಂಡ್’ ಕಾದಂಬರಿ ಪ್ರಕಟವಾದ ಸುಮಾರು ಎಂಟು ವರ್ಷಗಳ ನಂತರ ಆಕೆಯ ಸೃಜನಶೀಲ ಕೃತಿಯೊಂದು ಇಂಗ್ಲಿಷ್‌ನಲ್ಲಿ ಹೊರಬಂದಿದೆ ತನ್ನದೇ ಅನುವಾದದಲ್ಲಿ.

’ವೇರ್ ಅಬೌಟ್ಸ್’ (ವಿಳಾಸ) ಕಾದಂಬರಿ 46ರ ವಯಸ್ಸಿನ ಕೆಳ ಮಧ್ಯಮವರ್ಗದ ಹಿನ್ನೆಲೆಯಿಂದ ಬಂದ ಅವಿವಾಹಿತ ಸಾಹಿತ್ಯದ ಪ್ರಾಧ್ಯಾಪಕಿಯೊಬ್ಬಳ ಕಥೆ. ಆಕೆಯೇ ಕಥೆಯ ನಿರೂಪಕಿಯೂ ಕೂಡ. ಕೆಲ ನಿಲುವುಗಳಿಂದ ಸ್ತ್ರೀವಾದಿಯಂತೆ ಕಂಡರೂ, ಈಕೆ ಯಾವ ಸಿದ್ಧ ಸೂತ್ರಕ್ಕೂ ಸಿಕ್ಕಿಕೊಳ್ಳದೆ, ಎಲ್ಲಾ ಸಿದ್ಧ ಅಸ್ಮಿತೆಗಳಾಚೆಗೆ ಬದುಕುವ ಸಹಜ ವ್ಯಕ್ತಿತ್ವದವಳು. ಲಾಹಿರಿಯ ವೈಯಕ್ತಿಕ ಬದುಕು ಮತ್ತು ಹಿನ್ನೆಲೆ ತಿಳಿದವರಿಗೆ ನಿರೂಪಕಿ/ ಪ್ರಾಧ್ಯಾಪಕಿಯ ಪಾತ್ರ ಸ್ವಲ್ಪಮಟ್ಟಿಗೆ ಲಾಹಿರಿಯ ಸ್ವಂತ ಜೀವನದಿಂದ ಪ್ರೇರೇಪಿತವಾಗಿದೆ ಎನಿಸುತ್ತದೆ.

ಕಥೆಯುದ್ದಕ್ಕೂ ಒಂದೇ ನಗರಕ್ಕೆ ಕಟ್ಟಿಹಾಕಲ್ಪಟ್ಟವಳಂತೆ ಕಾಣುವ ಈಕೆಯ ಬದುಕು ಆಂತರ್ಯದಲ್ಲಿ ಚಲನಶೀಲವಾಗಿದೆ. ಸದಾ ಚಡಪಡಿಸುತ್ತಿರುವಂತೆ ಕಾಣುವ ಈಕೆ ಸೂಕ್ಷ್ಮ ಸಂವೇದನೆಗಳುಳ್ಳ ಚಿಕಿತ್ಸಾತ್ಮಕ ದೃಷ್ಟಿಕೋನದ ಚಿಂತನಶೀಲ ಮಹಿಳೆ. ಇಷ್ಟಪಡುವ ಏಕಾಂತ, ಕಳಚಿಕೊಂಡಿರುವ ಕುಟುಂಬ, ದೈನಂದಿನ ಚಟುವಟಿಕೆಗಳು – ಈ ಎಲ್ಲವುಗಳ ಜೊತೆ ಆಕೆ ಒಂದು ರೀತಿಯ ದ್ವಂದ್ವಾತ್ಮಕ ಸಂಬಂಧವನ್ನು ಹೊಂದಿದಂತಿದೆ. ತನ್ನೆಲ್ಲಾ ವೈರುಧ್ಯಗಳ ಜೊತೆಗೇ ಸಮಚಿತ್ತದಿಂದ ಬದುಕುವ, ಕೆಲವೊಮ್ಮೆ ಬದುಕಿನ ಸಾಮಾನ್ಯ ಗ್ರಹಿಕೆಗಳನ್ನೆಲ್ಲಾ ನಿರಸನಗೊಳಿಸುವಂತೆ ಕಾಣುವ ಈಕೆ, ಲಾಹಿರಿಯ ಇದುವರೆಗಿನ ಪಾತ್ರಗಳಲ್ಲೆಲ್ಲಾ ಹೆಚ್ಚು ಜೀವಂತಿಕೆಯ ಮತ್ತು ಸಂಕೀರ್ಣವಾದವಳು. ಅಂತಿಮವಾಗಿ ವೃತ್ತಿ ಸಂಬಂಧಿತ ಅವಕಾಶ ಬಂದಾಗ ದೀರ್ಘ ಸಹವಾಸದ ಬೇಕುಬೇಡದ ನಗರ ತೊರೆದು ವರ್ಷದಮಟ್ಟಿಗೆ ಪರದೇಶಕ್ಕೆ ಹೋಗುವ ಈಕೆ, ಹೊಸ ಬದುಕು ಕಾಣುವ ಸಂಕ್ರಮಣದ ಹುರುಪಿನೊಂದಿಗೆ ಅದನ್ನು ಒಪ್ಪಿಕೊಳ್ಳುತ್ತಾಳೆ.

’ಪ್ರತಿಸಲ ನನ್ನ ನೆರೆಹೊರೆಯಲ್ಲಿ ಬದಲಾವಣೆಗಳಾದಾಗ ತೀವ್ರ ದುಃಖವಾಗುತ್ತದೆ; ಬದಲಾವಣೆ ನನ್ನನ್ನು ನಡುಗಿಸುತ್ತದೆ’ – ಇಟಾಲಿಯನ್ ಲೇಖಕ ಇಟಲೋ ಸ್ವೇವೋನ ಈ ಎಪಿಗ್ರಾಫ್‌ನೊಂದಿಗೆ ಆರಂಭವಾಗುವ ಕಾದಂಬರಿ ನಿರೂಪಕಿ ಪರದೇಶಕ್ಕೆ ಚಲಿಸುತ್ತಿರುವ ಚಿತ್ರದೊಂದಿಗೆ ಮುಕ್ತಾಯವಾಗುತ್ತದೆ. ಪಯಣಿಸುತ್ತಿರುವ ರೈಲಿನಲ್ಲಿರುವ ನಿರೂಪಕಿಯ ಚಿತ್ರಣದೊಂದಿಗೆ ಕೊನೆಯಾಗುವ ಕೃತಿ ಸದಾ ಚಲನಶೀಲವಾಗಿರುವ ಬದುಕಿನ ಪ್ರಕ್ರಿಯೆಯ ಪ್ರತಿಮೆಯನ್ನು ಮುಂದಿಡುತ್ತದೆ.

“ದಿಗ್ಭ್ರಮೆಗೊಂಡ, ಕಳೆದುಹೋದ, ಗೊಂದಲಗೊಂಡ, ದಿಕ್ಕು ತಪ್ಪಿದ, ಬೇರು ಕಳಚಿದ, ಭಿನ್ನ ಹಾದಿ ತುಳಿದ, ಒಲ್ಲದ – ಈ ಪದಗಳೇ ನನ್ನ ನೆಲೆ ಮತ್ತು ಏಕೈಕ ಅಡಿಪಾಯ” – ತನ್ನೊಳಗನ್ನು ಈ ಪದಗಳಲ್ಲಿ ಚಿತ್ರಿಸುತ್ತಿರುವ ನಿರೂಪಕಿ, ಆ ಮೂಲಕ ಅದಕ್ಕೆ ಕಾರಣವಾದ ಕ್ಷಣಕ್ಷಣಕ್ಕೂ ಬದಲಾಗುತ್ತಿರುವ, ನಿತ್ಯ ತಲ್ಲಣದಲ್ಲಿರುವ ಮತ್ತು ತಲ್ಲಣವೇ ಸಹಜವಾಗಿರುವ ಲೋಕದ ಚಿತ್ರಣವನ್ನೂ ಮುಂದಿಡುತ್ತಿದ್ದಾಳೆ. ಹೀಗೆ ಅನಿತ್ಯ ಮತ್ತು ಅಸತ್ಯವಾಗಿರುವ (ಬದಲಾಗುತ್ತಲೇಯಿರುವ – ಅಶಾಶ್ವತ) ಲೋಕವನ್ನು ಅದಿರುವಂತೆ ಗ್ರಹಿಸದೆ, ನಮ್ಮೆಲ್ಲಾ ಸಾಮಾಜಿಕ ಸಾಂಸ್ಕೃತಿಕ ಸಂರಚನೆಗಳು/ಅಸ್ಮಿತೆಗಳು ಜಡಗೊಂಡು, ಅವೇ ಖಚಿತವೆಂಬಂತೆ ಗ್ರಹಿಸಿರುವ ಫಲವೇ ಮನುಷ್ಯನ ನೆಮ್ಮದಿಯ ಭಂಗ ಎನ್ನುವ ಬುದ್ಧ ತಾತ್ವಿಕತೆಯನ್ನು ಕೃತಿ ಸ್ಪರ್ಶಿಸಿದ ಅನುಭವವಾಗುತ್ತದೆ. ಇಂಥ ಅರಿವಿನ ಪರಿಣಾಮವೆಂಬಂತೆ ನಿರೂಪಕಿ ತಾನು ಮತ್ತು ಅನ್ಯ ಎಂಬ ಅವಳಿ ವಿರುದ್ಧಗಳ ದ್ವಂದ್ವ ಪ್ರಜ್ಞೆಯಿಂದ ಕಳಚಿಕೊಂಡು ನಿರುಮ್ಮಳವಾಗಿ ಮನೆ, ಸಂಬಂಧಗಳು, ಅಂತಿಮವಾಗಿ ದೇಶವನ್ನೂ ತೊರೆಯುತ್ತಾಳೆ.

ಇಂಡಿಯನ್-ಅಮೆರಿಕನ್ ವಲಸಿಗರ ಅಸ್ಮಿತೆಯ ಬಿಕ್ಕಟ್ಟಿನ ಕಷ್ಟಸುಖಗಳ ಕಥೆಗಳನ್ನ, ಅವುಗಳ ತಾತ್ವಿಕತೆಯನ್ನು ಗಂಭೀರವಾಗಿ ಪರಿಗಣಿಸದೆ, ಅಭಿರುಚಿಗಾಗಿ ಓದುವ ಜಾಡಿಗೆ ಬಿದ್ದಿದ್ದ ಇಂಗ್ಲಿಷ್‌ನ ಸಾಮಾನ್ಯ ಓದುಗರ ನಿರೀಕ್ಷೆಗಳನ್ನು ಈ ಕೃತಿ ಕದಲಿಸಿದಂತಿದೆ. ಅಚ್ಚರಿಯೆಂದರೆ ಬ್ರಿಟಿಷ್ ಲೇಖಕ ಟಿಮ್ ಪಾರ್ಕ್ಸ್ ದೃಷ್ಟಿಯಲ್ಲೂ ಕೂಡ ’ಈ ಕೃತಿ ಯಾವ ಹಂತದಲ್ಲೂ ಇಟಾಲಿಯನ್ ಸಂಸ್ಕೃತಿಯಿಂದ ಚೈತನ್ಯವನ್ನು ಪಡೆದಿಲ್ಲ ಮತ್ತು ಲಾಹಿರಿಯ ಬದುಕು ಇಟಲಿಯಲ್ಲಿ ಇನ್ನೂ ಗಟ್ಟಿಯಾಗಿ ನೆಲೆಕಂಡಿಲ್ಲವೇನೋ ಎನ್ನುವ ಭಾವನೆ ಮೂಡಿಸುತ್ತದೆ’ ಎಂಬ ನಿಲುವು. ಕೃತಿಯ ಆಶಯವನ್ನು ಅವರು ಗ್ರಹಿಸಿಲ್ಲವೆನಿಸುತ್ತದೆ. ಕೃತಿ ಇಟಾಲಿಯನ್ ಭಾಷೆಯಲ್ಲಿದ್ದರೂ, ಪಾತ್ರಗಳು ವ್ಯವಹರಿಸುವ ನಿರ್ದಿಷ್ಟ ಭಾಷೆ ಓದುಗರಿಗೆ ತಿಳಿಯುವುದಿಲ್ಲ. ಕೃತಿಯು ಆಂತರ್ಯದಲ್ಲಿ
ಕಥೆಯನ್ನು ನಿರ್ದಿಷ್ಟ ದೇಶ ಭಾಷೆ ಸಂಸ್ಕೃತಿಗಳಿಂದ ಮುಕ್ತಗೊಳಿಸಿ ಮಾನವ ಸಂಸ್ಕೃತಿ ಎಂಬ ವಿಶಾಲ ಪರಿಧಿಯಲ್ಲಿ ತರಲು ಉದ್ದೇಶಿಸುತ್ತದೆ. ಆಳದಲ್ಲಿ ರಾಷ್ಟ್ರ, ಭಾಷೆ, ಅಸ್ಮಿತೆ, ಮಾನವ ಬದುಕು ಮತ್ತು ಅವುಗಳ ನಡುವಿನ ಸಂಬಂಧದ ಸಂಕೀರ್ಣವಾದ ಮತ್ತು ಮುಖ್ಯವಾದ ತಾತ್ವಿಕ ಪ್ರಶ್ನೆಗಳನ್ನ ಎತ್ತುತ್ತದೆ.

ತಂತ್ರದ ದೃಷ್ಟಿಯಿಂದ ಈ ಕಾದಂಬರಿ ಸೂಕ್ಷ್ಮ ಮತ್ತು ಸಂಕೀರ್ಣ ಎನಿಸುವಂತಿದೆ. ಕಾದಂಬರಿಯ ಹೆಸರೇ ವಿಳಾಸ (ವೇರ್ ಅಬೌಟ್ಸ್). ಇಡೀ ಕಾದಂಬರಿಯಲ್ಲಿ ಘಟನಾವಳಿಗಳು ನಡೆಯುವ ದೇಶ ನಗರ ಪ್ರದೇಶ ಬೀದಿ ಯಾವುದರ ನಿರ್ದಿಷ್ಟ ವಿಳಾಸವೂ/ಹೆಸರೂ ಇಲ್ಲ. ಭೌಗೋಳಿಕ ಪ್ರದೇಶವೊಂದರ ಹೆಸರು ತಿಳಿದ ಕ್ಷಣವೇ ಸಂರಚನೆಗಳ ಜಾಡ್ಯಕ್ಕೆ ಬೀಳುವ ನಮ್ಮ ಮನಸ್ಸು ಅಲ್ಲಿಯ ಮುಖ್ಯಧಾರೆಯ ಜನಾಂಗ ಧರ್ಮ ಭಾಷೆಗಳ ಅಸ್ಮಿತೆಗಳಿಗೆ ಅದನ್ನು ನಿರ್ಬಂಧಿಸುತ್ತದೆ. ಈ ಭಾಷಿಕ ಸಂರಚನೆಗಳು ಲೋಕ ವ್ಯವಹಾರಕ್ಕೆ ಇರುವ ಸಂಕೇತಗಳಷ್ಟೇ ಎಂದು ತಿಳಿಯದೆ, ಅವುಗಳನ್ನೇ ಸತ್ಯವೆಂದು ಭ್ರಮಿಸಿರುವುದರ ಫಲವೇ ಮನುಕುಲದ ನಿರಂತರ ಕಲಹಗಳು. ಈ ಕೃತಿ ರಚನೆಯ ಹೊತ್ತಿನಲ್ಲಿ ಇಟಲಿಯಲ್ಲಿ ದೀರ್ಘಕಾಲದಿಂದ ಬಾಳಿಬದುಕಿದ ವಲಸಿಗ ಸಮುದಾಯಗಳಿಗೆ ಅನ್ಯರೆಂದು ಪೌರತ್ವವನ್ನು ನಿರಾಕರಿಸಲು ನಡೆದ ಬಲಪಂಥೀಯ ರಾಜಕಾರಣ,
ಅಮೆರಿಕದಲ್ಲಿ ಬಲಗೊಂಡ ಫ್ಯಾಸಿಸಂ ಮತ್ತು ಭಾರತದಲ್ಲಿಯ ಹಿಂದೂ ರಾಷ್ಟ್ರದಂಥ ಪರಿಕಲ್ಪನೆಗಳನ್ನು ಕಾದಂಬರಿ ತಾತ್ವಿಕವಾಗಿ ಮುಖಾಮುಖಿಯಾಗಿದೆ.

ಜನಾಂಗೀಯ ಅಸ್ಮಿತೆಯನ್ನಾಧರಿಸಿದ ಪೌರತ್ವವನ್ನು ಧಿಕ್ಕರಿಸುವ ಬೆಳವಣಿಗೆಗಳು ಮತ್ತು ಕೆನಡಾ, ಜರ್ಮನಿ, ಯುರೋಪಿಯನ್ ಒಕ್ಕೂಟದಲ್ಲಿ ಚಾಲ್ತಿಯಲ್ಲಿರುವ ಇಂತಹ ಹಲವಾರು ವಿಚಾರಗಳ ಹಿನ್ನಲೆಯಲ್ಲಿ ರಾಷ್ಟ್ರೋತ್ತರವಾದದ ನೆಲೆಯಿಂದಲೂ ಈ ಕೃತಿಯನ್ನು ಮುಖಾಮುಖಿಯಾಗಬಹುದು. ಎಲ್ಲಾ ಹೆಸರು ಸಂಕೇತ ಅಸ್ಮಿತೆಗಳನ್ನು ಹೊರಗಿಟ್ಟು, ಉಸಿರುಗಟ್ಟಿಸುವ ಅಸ್ಮಿತೆಯ ವ್ಯಾಧಿಗಳನ್ನು ಓದುಗನ ಪ್ರಜ್ಞೆಯ ಭಾಗವಾಗುವ ಮೊದಲೇ ಕೃತಿ ನಿರಸನಗೊಳಿಸಿದಂತೆ ಕಾಣುತ್ತದೆ. ನಿರೂಪಕಿ ಬೆಳೆಸಿಕೊಂಡಿರುವ ಸಂಕೀರ್ಣ ಮಾನವೀಯ ಸಂಬಂಧಗಳನ್ನು ನೋಡಿದರೆ, ’ರಾಷ್ಟ್ರವೆಂಬುದು ಅಮೂರ್ತ; ಅಲ್ಲಿ ಬಾಳಿ ಬದುಕುವ ಜನ ವಾಸ್ತವ’ ಎಂಬ ನೈಜೇರಿಯನ್ ನಾಟಕಕಾರ ವೋಲೆ ಸೋಯಿಂಕನ ಮಾತುಗಳು ಕೃತಿಯ ಒಟ್ಟಾರೆ ತಾತ್ವಿಕತೆಯಲ್ಲಿ ಹರಳುಗಟ್ಟಿಕೊಂಡಿವೆ ಎನಿಸುತ್ತದೆ. ನಿರೂಪಕಿಗೂ ಮತ್ತು ಇತರೆ ಯಾವ ಪಾತ್ರಗಳಿಗೂ ಹೆಸರಿಲ್ಲ. ಕೃತಿಯಲ್ಲಿ ಒಂದೇ ಒಂದು ಅಂಕಿತನಾಮವಿಲ್ಲ. ವ್ಯಕ್ತಿಯ ಹೆಸರು ಮತ್ತು ಅಡ್ಡ ಹೆಸರುಗಳು ಅವರ ಜನಾಂಗ ಧರ್ಮ ಜಾತಿಯೊಂದಿಗೆ ತಳುಕು ಹಾಕಿಕೊಳ್ಳುವ, ಆ ಮೂಲಕ ಸಂಕೇತಗಳೇ ಸತ್ಯವನ್ನು ನಿಯಂತ್ರಿಸುವಂತಾಗುವ ಸಾಧ್ಯತೆಯನ್ನು ತನ್ನ ತಂತ್ರದ ಮೂಲಕ ಕೃತಿ ದಾಟಿದೆ.

ವಿಮರ್ಶಕರೊಬ್ಬರು ಈ ಕೃತಿಗೆ ಸಂವಿಧಾನ (ಪ್ಲಾಟ್) ತುಂಬಾ ತೆಳುವಾಗಿದೆ ಅಥವಾ ಇಲ್ಲವೇ ಇಲ್ಲ ಎಂಬ ತಕರಾರು ಎತ್ತಿದ್ದಾರೆ. ಈ ವಿಮರ್ಶಕರು ನಿರಚನಾವಾದಿ ಪೀಟರ್ ಬ್ರೂಕ್ಸ್‌ನ ಸಂವಿಧಾನದ ವ್ಯಾಖ್ಯಾನವನ್ನು ಗಮನಿಸಬೇಕು. ಆತನ ದೃಷ್ಟಿಯಲ್ಲಿ ಕಥಾಸಂವಿಧಾನವೆಂಬುದು ಕಥನದ ದಿಕ್ಕು ಮತ್ತು ಉದ್ದೇಶಗಳನ್ನು ನಿಯಂತ್ರಿಸುವ, ಕಥನವು ಉದ್ದಕ್ಕೂ ಬಿಚ್ಚುತ್ತಾ ಹೋಗುವ ಅರ್ಥಗಳನ್ನು ಪರೀಕ್ಷಿಸುವ ಒಂದು ಕ್ರಿಯಾಶೀಲ ಪ್ರಕ್ರಿಯೆ. ಹಾಗಾಗಿ ಕೃತಿಯೊಂದರ ಸಂವಿಧಾನ ಸಿದ್ಧ ಅಂಶವಲ್ಲ; ಓದುವ ಕ್ರಿಯೆಯಲ್ಲಿ ನಿಧಾನವಾಗಿ ರೂಪುಗೊಳ್ಳುತ್ತ ಹೋಗುವ ಪ್ರಜ್ಞೆ. ಈ ದೃಷ್ಟಿಯಿಂದ ಈ ಕೃತಿಗೆ ಪ್ರಸ್ತುತ ಲೇಖನದಲ್ಲಿ ರೂಪುಗೊಂಡಿರುವ ಸಂವಿಧಾನವೂ ಕೂಡ ಆತ್ಯಂತಿಕವೇನಲ್ಲ.

ಒಟ್ಟು 46 ಅಧ್ಯಾಯಗಳಲ್ಲಿ ಒಂದನ್ನು ಹೊರತುಪಡಿಸಿ ಎಲ್ಲಾ ಅಧ್ಯಾಯದ ಶೀರ್ಷಿಕೆಯೂ ಒಂದೇಒಂದು ಉಪಸರ್ಗಾವ್ಯಯ, ಉಪಪದ ಮತ್ತು ರೂಢನಾಮಗಳಿಂದ (On the street , In the bookstore, By the sea) ಕೂಡಿ ಆಗಿವೆ. ಅಲ್ಲಿರುವ ಎಲ್ಲಾ ಪದಗಳು ಪರಸ್ಪರ ಸಂಬಂಧಗಳ ಮೂಲಕವೇ ಶೀರ್ಷಿಕೆಗೆ ಅಗತ್ಯ ಅರ್ಥ ನೀಡುತ್ತವೆಯೇ ಹೊರತು, ಯಾವೊಂದು ಪದವೂ ಸರ್ವ ಸ್ವತಂತ್ರವಾಗಿ ನಿಲ್ಲುವಂತಿಲ್ಲ. ಶೀರ್ಷಿಕೆಗಳ ಈ ಪ್ರತಿಮಾತ್ಮಕ ವಿನ್ಯಾಸವು ಶುದ್ಧ ಮತ್ತು ಪರಿಪೂರ್ಣ ಸಂಸ್ಕೃತಿ/ಅಸ್ಮಿತೆಗಳೆಂಬ ಪರಿಕಲ್ಪನೆಯ ಪೊಳ್ಳುತನವನ್ನು ನಿರಾಕರಿಸಿ, ಎಲ್ಲವೂ ಪರಸ್ಪರ ಸಂಬಂಧಗಳಲ್ಲಿ ಹುಟ್ಟಬೇಕಾದ ಸತ್ಯದ ಕಡೆ ಬೆರಳು ಮಾಡುವಂತಿದೆ. In My Head ಎಂಬುದು ಅತಿಹೆಚ್ಚು ಅಂದರೆ ಮೂರು ಅಧ್ಯಾಯಗಳಿಗೆ ಶೀರ್ಷಿಕೆಯಾಗಿದ್ದು ಮನುಷ್ಯನ ಸಂಸ್ಕೃತಿಗಳ ಮನೋಸಂರಚನೆಯನ್ನು ಧ್ವನಿಸುವಂತಿದೆ. ಏಕಪದ ಶೀರ್ಷಿಕೆಯ ಏಕೈಕ ಅಧ್ಯಾಯ ಬಯಲು (Nowhere). ಮನುಷ್ಯ ಸಂಸ್ಕೃತಿಗಳು ಜೀವಂತವಾಗಿರಲು ತಾವು ಇದುವರೆಗೆ ಕಟ್ಟಿಕೊಂಡಿರುವ ಕೃತಕ ಸಂರಚನೆಗಳನ್ನು ಕಳಚಿಕೊಳ್ಳಬೇಕಾದ ಅಗತ್ಯತೆಯನ್ನು ಈ ಶೀರ್ಷಿಕೆ ಪ್ರತಿಮಾತ್ಮಕವಾಗಿ ಸೂಚ್ಯವಾಗಿಸುತ್ತಿದೆ.

ತನ್ನದೆಂಬ ವಿಳಾಸ ಮತ್ತು ಅಸ್ಮಿತೆಗಳ ಉಸಿರುಗಟ್ಟಿಸುವಿಕೆಯಿಂದ ಬಿಡುಗಡೆಗೊಂಡು ಸಹಮಾನವರೊಂದಿಗೆ ಒಂದಾಗಲು ಬಯಸುವ ಪರಿಶುದ್ಧ ಮನುಷ್ಯರ ವಿಳಾಸವನ್ನು ಈ ಕೃತಿ ಪರಿಚಯಿಸುವಂತಿದೆ. ಕಾದಂಬರಿಯ ಮುಕ್ತಾಯ ಇಂಥ ಒಂದು ಪ್ರತಿಮೆಯನ್ನು ಕಟ್ಟಿಕೊಡುವಂತಿದೆ. ಕಾದಂಬರಿಯ ಕೊನೆಭಾಗದಲ್ಲಿ ರೈಲಿನ ಕಂಪಾರ್ಟಮೆಂಟ್ ಪ್ರವೇಶಿಸಿ ನಿರೂಪಕಿಯ ಎದುರು ಸೀಟಿನಲ್ಲಿ ಕುಳಿತುಕೊಳ್ಳುವ ಅತ್ಯಂತ ಲವಲವಿಕೆಯ ಮತ್ತು ಚೈತನ್ಯದ ಐದು ಜನ ವಿದೇಶಿಗರ ಚಿತ್ರಣವಿದೆ. ಅವರಲ್ಲೊಬ್ಬಳು ಮಹಿಳೆ. ಅತ್ಯಂತ ಮಾನವೀಯ ಆಪ್ತತೆಯಲ್ಲಿ ಮಾತನಾಡುವ, ನಗುವ, ತಾಯಿ ಮಕ್ಕಳೆಂಬಂತೆ ಒಬ್ಬರು ಮತ್ತೊಬ್ಬರಿಗೆ ಊಟದ ತುತ್ತು ತಿನ್ನಿಸುವ, ಪುರುಷನೊಬ್ಬ ಮಹಿಳೆಯ ಕೂದಲನ್ನು ಸರಿಪಡಿಸಿ ಜಡೆ ಹಾಕುವ, ನಿರೂಪಕಿಗೂ ಕೂಡ ತಿಂಡಿತಿನಿಸುಗಳನ್ನು ಹಂಚಿ ಲವಲವಿಕೆಯಿಂದ ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುವ ಇವರನ್ನು ನಿರೂಪಕಿ ಆಸಕ್ತಿ ಮತ್ತು ಅಚ್ಚರಿಯಿಂದ ಗಮನಿಸುತ್ತಾಳೆ. ತನಗೆ ತಿಳಿಯದ ಭಾಷೆಯಲ್ಲಿ ಮಾತನಾಡುತ್ತಿರುವ ಇವರು ಒಡಹುಟ್ಟಿದವರೆ? ಸೋದರರ ಮಕ್ಕಳೇ? ಮೂವರು ಅಣ್ಣತಮ್ಮಂದಿರು ಮತ್ತು ಒಂದು ವಿವಾಹಿತ ಜೋಡಿಯೆ? ಆಕೆಗೆ ಗೊತ್ತಿಲ್ಲ. ಮರುಕ್ಷಣ ಅವರೆಲ್ಲ ಅಪರಿಚಿತರು ಅಥವಾ ಸ್ನೇಹಿತರೂ ಇರಬಹುದೆನಿಸುತ್ತದೆ. ರೈಲು ಆ ದೇಶದ ಗಡಿಯಲ್ಲಿರುವಾಗ ಮಹಿಳೆ ತನ್ನ ಸಂಗಡಿಗರಿಗೆ ತಿಳಿಯದ ನಿರೂಪಕಿಯ ಭಾಷೆಯಲ್ಲಿಯೇ ವಿದಾಯ ಹೇಳುವುದನ್ನು ಕಲಿಸುತ್ತಿದ್ದಾಳೆ, ಅವರು ಕುತೂಹಲ ಮತ್ತು ವಿನೋದದಿಂದ ಕಲಿಯುತ್ತಿದ್ದಾರೆ. ಈ ದೃಶ್ಯ ಅವರೆಲ್ಲಾ ಅಕ್ಕಪಕ್ಕದ ದೇಶಗಳಲ್ಲಿರುವ ಸಂಬಂಧಿಕರು ಅಥವಾ ಗಡಿಗಳ ಹಂಗಿಲ್ಲದೇ ಸಂಬಂಧಿಕರಂತೆ ಬದುಕುತ್ತಿರುವ ನೆರೆ ದೇಶಗಳ ಸ್ನೇಹಿತರೂ ಆಗಿರುವ ಸಾಧ್ಯತೆಯನ್ನು ಮುಂದಿಡುತ್ತದೆ.

ಅವರ ಸಹಜ ಆಪ್ತತೆಗಳಲ್ಲಿರುವ ಮಾನವೀಯ ಸೆಳೆತಗಳು ನಿರೂಪಕಿಯನ್ನು ತಟ್ಟುತ್ತವೆ; ಬದುಕೆಂದರೆ ಇದೇ ಅಲ್ಲವೇ ಎನ್ನಿಸುವಷ್ಟು; ಅವರು ನೀಡಲು ಮುಂದಾದ ಊಟದಲ್ಲಿ ಒಂದು ತುತ್ತನ್ನು ಅವರ ಕೈಯಿಂದ ತಿನ್ನಲಿಲ್ಲವಲ್ಲ ಎಂದು ಪಶ್ಚಾತ್ತಾಪ ಪಡುವಷ್ಟು. ಮನದೊಳಗಿನ ಮತ್ತು ಹೊರಗಿನ ಗಡಿಗಳೆಲ್ಲಾ ನಿಶಬ್ದದಲ್ಲಿ ಕರಗಿಹೋಗಿ ವ್ಯಕ್ತಿಯ ಚೇತನ ಅನಿಕೇತನವಾಗುವ ಆಶಯ ತಕ್ಷಣ ಸುಳಿದು ಹೋದಂತಾಗುತ್ತದೆ. ಬಯಲು (ನೋವೇರ್) ಎಂಬ ಅಧ್ಯಾಯದಲ್ಲಿ “ಎಲ್ಲಾ ಹೇಳಿಕೇಳಿ ಆದಮೇಲೆ ಭೂಮಿಕೆ (ಸೆಟ್ಟಿಂಗ್) ಮುಖ್ಯವಾಗುವುದಿಲ್ಲ…. ಜೀವನವಿಡೀ ನಾನು ಮಾಡುತ್ತಲೇ ಬಂದಿರುವ ಒಂದೇ ಒಂದು ಸಂಗತಿಯೆಂದರೆ ಚಲಿಸುತ್ತಲೇ ಇರುವುದು” ಎಂದು ನಿರೂಪಕಿ ಹೇಳುತ್ತಾಳೆ. ಈ ಮಾತು ಅಸ್ಮಿತೆ ಮತ್ತು ಅಸ್ತಿತ್ವದ ಬಿಕ್ಕಟ್ಟಿನ ಸಮಯದಲ್ಲಿ ಸ್ವಭಾವತಃ ಚಿಂತನಶೀಲಳಾದ ನಿರೂಪಕಿ ಎಲ್ಲ ಮನೋಸಂರಚನೆಗಳನ್ನು ನಿರಸನಗೊಳಿಸಿ, ಬದುಕಿನ ಅರ್ಥವನ್ನು ಅದರ ಜಂಗಮತ್ವದಲ್ಲಿ ಕಾಣುತ್ತಿರುವುದರ ಕುರುಹಿನಂತಿದೆ.

ಮೂಲತಃ ಇಟಾಲಿಯನ್ ಭಾಷೆಯಲ್ಲಿ ಈ ಕೃತಿ ರಚಿತವಾದದ್ದು ಬರೀ ಆ ಭಾಷೆಯ ಮೇಲಿನ ವ್ಯಾಮೋಹದಿಂದ ಅಲ್ಲ. ಇದನ್ನು ಲಾಹಿರಿಯ ವಸಾಹತೋತ್ತರ ನಿಲುವಿನ ಸಾಂಸ್ಕೃತಿಕ ರಾಜಕಾರಣದ ತಾತ್ವಿಕತೆಯ ದೃಷ್ಟಿಯಿಂದ ಗ್ರಹಿಸಬೇಕು. ಭಾಷೆ ಎಂಬುದು ಒಂದು ಸಾಂಸ್ಕೃತಿಕ ಉತ್ಪನ್ನ. ಫ್ರ್ಯಾಂಜ್ ಫ್ಯಾನನ್ ಹೇಳುವಂತೆ ‘ಒಂದು ಭಾಷೆಯನ್ನು ತನ್ನದಾಗಿಸಿಕೊಂಡಿರುವ ವ್ಯಕ್ತಿ ಆ ಭಾಷೆಯು ವ್ಯಕ್ತಗೊಳಿಸುವ ಮತ್ತು ಅದರಲ್ಲಿ ಗೃಹೀತವಾಗಿರುವ ವಿಶ್ವವನ್ನು ತನ್ನದಾಗಿಸಿಕೊಳ್ಳುತ್ತಾನೆ’. ಹಾಗಾಗಿ ನಾವು ಭಾಷೆಯನ್ನು ಬಳಸುವ ಬದಲಾಗಿ ಬಹಳಷ್ಟು ಸಲ ಭಾಷೆಯೇ ನಮ್ಮನ್ನು ಬಳಸುತ್ತದೆ. ಇಂಗ್ಲಿಷ್ ತೃತೀಯ ಜಗತ್ತಿನ ಸ್ಥಳೀಯ ಸಂಸ್ಕೃತಿಗಳಲ್ಲಿ ಉಂಟುಮಾಡಿರುವ ಸಾಂಸ್ಕೃತಿಕ ವಿಸ್ಮೃತಿ ಮತ್ತು ಬಂಡವಾಳಶಾಹಿ ಪ್ರಾಯೋಜಿತ ಏಕಶಿಲಾಕೃತಿಯ ಯಾಜಮಾನ್ಯ ಸಂಸ್ಕೃತಿ ಆಘಾತಕಾರಿ ಎಂಬ ಅರಿವು ಲಾಹಿರಿಗಿದೆ. ತನ್ನ ಅಸ್ಮಿತೆಯ ಒಂದು ಭಾಗವಾಗಿರುವ ಇಂಗ್ಲಿಷ್ ಭಾಷೆ ಮತ್ತು ಸಂಸ್ಕೃತಿಯನ್ನು ಸಂಪೂರ್ಣ ತಿರಸ್ಕರಿಸದಿದ್ದರೂ, ಇಂಗ್ಲಿಷ್‌ನಲ್ಲಿ ಸೃಜನಶೀಲ ಕೃತಿಗಳ ರಚನೆಯನ್ನು ನಿಲ್ಲಿಸಿ, ಅದರಲ್ಲಿರುವ ದಬ್ಬಾಳಿಕೆಯನ್ನು ತಾತ್ವಿಕವಾಗಿ ಮುಖಾಮುಖಿಯಾಗುವ ಪ್ರಯತ್ನವನ್ನು ಲಾಹಿರಿ ಮಾಡಿದ್ದಾರೆ.

ಆಕೆಯ ಬಾಲ್ಯದಲ್ಲಿ, ಅಮ್ಮ ಇಚ್ಛಿಸದ ಇಂಗ್ಲಿಷ್ ಮನೆಯೊಳಗಿನ ಸಂಸ್ಕೃತಿಗೆ ಒಗ್ಗದ ಭಾಷೆ; ಆದರೆ ಪರಿಸರ ಹೇರುತ್ತಲೇ ಬಂದ ಭಾಷೆ. ಅದರೊಂದಿಗೆ ಇರಿಸುಮುರಿಸು ನಿರಂತರ ಚಾಲ್ತಿಯಲ್ಲಿತ್ತು. ಲಾಹಿರಿಯೇ ಹೇಳುವಂತೆ “ನನ್ನ ಮಟ್ಟಿಗೆ ಇಂಗ್ಲಿಷ್ ಎಂದರೆ ಬಿಗುವಿನ ಸಂಘರ್ಷ; ಬಹುಶಃ ನನ್ನೆಲ್ಲಾ ಆತಂಕದ ಮೂಲವಾಗಿರುವ ನಿರಂತರ ಸೋಲಿನ ಪ್ರಜ್ಞೆ; ವ್ಯಾಖ್ಯಾನಿಸಿಕೊಂಡು ಪಳಗಿಸಿಕೊಳ್ಳಬೇಕಾದ ಸಂಸ್ಕೃತಿ; ಗತದ ಭಾರ. ಇದರಿಂದ ರೋಸಿ ಹೋಗಿದ್ದೇನೆ… ಇಂಗ್ಲಿಷ್ ಭಾಷೆ ಮತ್ತು ಅದು ಪ್ರತಿನಿಧಿಸುವ ಸಂಸ್ಕೃತಿಯಿಂದ ಪಾರಾಗಲು ಹೆಣಗಾಡುತ್ತಿದ್ದೇನೆ”. ಆರಂಭದಲ್ಲಿ ಇಂಗ್ಲಿಷ್‌ಅನ್ನು ಇಚ್ಛಿಸಿದರೂ, ಆಕೆ ಬೆಳೆದಂತೆಲ್ಲ ಅದು ಕ್ರಮೇಣ ಅವಳನ್ನೇ ಗುಮಾನಿಯಿಂದ ಅನ್ಯಗೊಳಿಸುವ, ಆಕೆಯದಲ್ಲದ ಯಜಮಾನ್ಯ ಸಂಸ್ಕೃತಿಯೊಂದರ ಭಾಗವಾಗಿತ್ತು. ಈ ಹಿಂದೆ ಇಂತಹದ್ದೇ ಬಿಕ್ಕಟ್ಟಿನಲ್ಲಿ ನೈಜೀರಿಯನ್ ಬರಹಗಾರ ಗೂಗಿ ಥಿಯಾಂಗೋ ಯಜಮಾನ್ಯದ ಪ್ರತೀಕವಾದ ಇಂಗ್ಲಿಷನ್ನು ಬಿಟ್ಟು ಬರವಣಿಗೆಗೆ ಪುನಹ ತನ್ನ ಮೂಲ ಬುಡಕಟ್ಟು ಮಾತೃಭಾಷೆ ಗಿಕುಯು ಆರಿಸಿಕೊಂಡದ್ದಿದೆ.

ಆದರೆ ಲಾಹಿರಿಗೆ ಮಾತೃಭಾಷೆ ಬೆಂಗಾಲಿಯೊಂದಿಗಿನ ಪಡಿಪಾಟಲು ವಿಚಿತ್ರ. ಆಕೆಗೆ ಬೆಂಗಾಲಿ ಓದು-ಬರಹ ಗೊತ್ತಿಲ್ಲ. ಇಂಗ್ಲೆಂಡಿನಲ್ಲಿ ಹುಟ್ಟಿ ಅಮೆರಿಕದ ರೋಡ್‌ಐಲ್ಯಾಂಡ್‌ನಲ್ಲಿ ಬೆಳೆದ ಆಕೆಗೆ ಬೆಂಗಾಲಿಯೂ ಪೋಷಕರಿಂದ ಹೇರಲ್ಪಟ್ಟ ಭಾಷೆ. ಒಂದು ರೀತಿಯಲ್ಲಿ ಮಾತೃಭಾಷೆಯೂ ಆಕೆಗೆ ಪರಕೀಯ. ಇಂಥ ಹಿನ್ನೆಲೆಯಲ್ಲಿ ಬೆಳೆದು ಲೇಖಕಿಯಾಗಿ ಕೀರ್ತಿಯ ಉತ್ತುಂಗದಲ್ಲಿರುವಾಗಲೇ, ಉಸಿರುಗಟ್ಟಿಸುತ್ತಿದ್ದ ಇಂಗ್ಲಿಷ್ ಭಾಷೆ ಮತ್ತು ಸಂಸ್ಕೃತಿಯಲ್ಲಿನ ದಬ್ಬಾಳಿಕೆಯಿಂದ ದೂರವಾಗಿ ಇಟಲಿಯ ರೋಮ್ ನಗರಕ್ಕೆ ಕುಟುಂಬಸಮೇತ ವಲಸೆಹೋದ ಲಾಹಿರಿ, ಕಾಲೇಜುಹಂತದಲ್ಲಿ ಅಧ್ಯಯನ ಮಾಡಿದ್ದ ಇಟಾಲಿಯನ್ ಭಾಷೆಯನ್ನು ಕಲಿತು ಸದ್ಯ ಅದರಲ್ಲಿಯೇ ಸೃಜನಶೀಲ ಸಾಹಿತ್ಯದ ರಚನೆಯಲ್ಲಿ ನಿರತರಾಗಿದ್ದಾರೆ.

ಬರೀ ಹೇರಿಕೆಗಳನ್ನೇ ನಮ್ಮ ಅಸ್ಮಿತೆಗಳೆಂದು ಭ್ರಮಿಸಿಕೊಳ್ಳಬೇಕೆ ಎಂಬ ತಾತ್ವಿಕ ಪ್ರಶ್ನೆಯನ್ನು ಲಾಹಿರಿಯ ಪ್ರಸ್ತುತ ಕಾದಂಬರಿ, ಆಕೆಯ ಒಟ್ಟಾರೆ ಬದುಕು ಮತ್ತು ಇತ್ತೀಚಿನ ನಡೆಗಳು ಉತ್ತರಿಸಿದಂತಿವೆ. ಅಸ್ಮಿತೆಯೂ ಕೂಡ ವ್ಯಕ್ತಿಯ ವೈಚಾರಿಕತೆ, ಚಿಂತನಶೀಲತೆ ಮತ್ತು ಸ್ವಾತಂತ್ರ್ಯದ ಫಲವಾಗಿರಬೇಕು ಎಂಬ ನಿಲುವನ್ನು ಇವು ವ್ಯಕ್ತಪಡಿಸುವಂತಿವೆ. ವ್ಯಕ್ತಿಸ್ವಾತಂತ್ರ್ಯದ ಪ್ರತೀಕವಾದ ಅಮೆರಿಕನ್ ಸಂಸ್ಕೃತಿಯನ್ನು ಪ್ರತಿನಿಧಿಸುವ ಮತ್ತು ಅದರಲ್ಲಿರುವ ಯಜಮಾನ್ಯದ ಗುಣಗಳನ್ನು ವಿರೋಧಿಸುವ ಎರಡೂ ಕೆಲಸವನ್ನು ಏಕಕಾಲಕ್ಕೆ ಲಾಹಿರಿಯ ನಡೆಗಳು ಮಾಡಿವೆ.

ವಾಸ್ತವದಲ್ಲಿ ಒಂದು ಅಸ್ಮಿತೆಯೊಂದಿಗೆ ಬದುಕಬೇಕಾಗಿರುವುದು ನಮ್ಮ ಅನಿವಾರ್ಯತೆ. ಆದರೆ ಅಸ್ಮಿತೆ ಜಡವಲ್ಲ; ಚಲನಶೀಲ. ಹುಟ್ಟಿನ ಕಾರಣದಿಂದ ಆಕಸ್ಮಿಕವಾಗಿ ನಮ್ಮದಾಗುವ ಭಾಷೆ ಸಂಸ್ಕೃತಿ ಜಾತಿ ಜನಾಂಗ ಧರ್ಮಗಳೆಂಬ ಅಸ್ಮಿತೆಗಳನ್ನು ಅವುಗಲ್ಲಿರುವ ಎಲ್ಲ ಅನಿಷ್ಟಗಳ ಸಮೇತ ಕಡ್ಡಾಯವಾಗಿ ಹೇರಿಕೊಳ್ಳದೆ ನಮ್ಮ ಅರಿವು ಮತ್ತು ಆಚರಣೆಗಳ ಮೂಲಕ ಅನುಸಂಧಾನಗೊಳ್ಳುತ್ತಾ ಅವುಗಳನ್ನು ಮುರಿದು ಕಟ್ಟಿಕೊಳ್ಳಬೇಕೆಂಬುದನ್ನ ನಾವು ತಿಳಿಯಬೇಕಿದೆ. ಅಸ್ಮಿತೆ ಎಂಬುದು ಒಂದು ಅಂತಿಮ ಸ್ಥಿತಿಯಲ್ಲ. ಸದಾ ರೂಪುಗೊಳ್ಳುತ್ತಲೇಯಿರುವ ಒಂದು ಪ್ರಕ್ರಿಯೆ. ಅದು ಅರಿವು ಮತ್ತು ಆಚರಣೆಗಳ ನಡುವಿನ ಅನುಸಂಧಾನದ ಮೂಲಕ ನಿರಂತರವಾಗಿ ಶೋಧಿಸಿಕೊಳ್ಳುತ್ತಾ ವಿಮರ್ಶಿಸಿಕೊಳ್ಳುತ್ತಾ ರೂಪುಗೊಳ್ಳುವ ಅಥವಾ ರೂಪುಗೊಳ್ಳಬೇಕಾದ ಒಂದು ಸಂಗತಿ. ಈ ದೃಷ್ಟಿಯಿಂದ ವ್ಯಕ್ತಿಯೊಬ್ಬ ಯಾವ ಧರ್ಮವನ್ನು ಆಚರಿಸಬೇಕು, ಯಾರನ್ನು ವಿವಾಹವಾಗಬೇಕು ಎಂದು ನಿರ್ದೇಶಿಸಲು ಕಾನೂನು ರೂಪಿಸಲು ಪ್ರಯತ್ನಿಸುತ್ತಿರುವ ಪ್ರಭುತ್ವಗಳ ನಡೆ ಪ್ರಶ್ನಾರ್ಹವಾಗುತ್ತದೆ.

ಮಿತಮಾತು ಮತ್ತು ವ್ಯಂಗ್ಯ ಲಾಹಿರಿಯ ಭಾಷೆಯ ಪ್ರಧಾನ ಲಕ್ಷಣಗಳು. ಈ ಇಡೀ ಕಾದಂಬರಿ ವಿದ್ಯಾವಂತ ಚಿಂತನಶೀಲ ಮಹಿಳೆಯೊಬ್ಬಳ ಭಾಷೆಯಲ್ಲಿ /ದೃಷ್ಟಿಕೋನದಲ್ಲಿ ನಿರೂಪಿತವಾಗಿದೆ. ಈ ಭಾಷೆಯಲ್ಲಿ ನಮ್ಯತೆ, ಅನಿಶ್ಚಿತತೆ, ಚಲನಶೀಲತೆ, ನಿರುಮ್ಮಳತೆ ಇದೆ.

ಆಧುನಿಕೋತ್ತರ ಬದುಕಿನ ಭಾಗವಾಗಿಯೇ ಹುಟ್ಟುವ ಈಕೆಯ ಕಥೆಗಳು ಕೆಲವೊಮ್ಮೆ ಪಾರ್ಶ್ವಿಕ ಸತ್ಯಗಳಂತೆ ಕಾಣುವುದು ಸಹಜ. ಹೊಸ ಓದುಗರ ಗ್ರಹಿಕೆಗೆ ಈ ಕೃತಿಯನ್ನು ರೂಪಿಸಿರುವ ಲಾಹಿರಿಯ ಸುಪ್ತವಾದ ವಲಸಿಗ ಪ್ರಜ್ಞೆ ತುಸು ಅಡ್ಡಿಯಾಗಬಹುದು. ಇಂಗ್ಲಿಷ್‌ನಲ್ಲಿ ರಚಿಸಿದ ಈಕೆಯ ಬೇರೆಲ್ಲಾ ಕಥೆಗಳಂತೆ ಇದು ಕೂಡ ಗಂಭೀರವಾಗಿದ್ದು, ಸ್ವಲ್ಪಮಟ್ಟಿಗೆ ವಿನೋದ ಮತ್ತು ಹಾಸ್ಯದ ಕೊರತೆಯಿಂದ ಬಳಲುವುದು ಒಂದು ಮಿತಿ ಎನ್ನಬಹುದು.

ಇಂಗ್ಲಿಷ್ ಪತ್ರಿಕೆಗಳಲ್ಲಿ ಈ ಕೃತಿಯ ಕುರಿತಾಗಿ ಬಂದ ವಿಮರ್ಶೆಗಳಲ್ಲಿ ಕೃತಿಯ ಬಗ್ಗೆ ಮೆಚ್ಚುಗೆ ಇದ್ದರೂ, ಅದು ಎತ್ತುವ ಗಂಭೀರ ತಾತ್ವಿಕ ಪ್ರಶ್ನೆಗಳ ಯಾವ ಚರ್ಚೆಯೂ ಇರದಿರುವುದು ಲಾಹಿರಿಯ ಕಲಾತ್ಮಕ ಅಭಿವ್ಯಕ್ತಿ ಮತ್ತು ಸೃಜನಶೀಲತೆಯ ಗೆಲುವು ಎನ್ನುವುದು ಸೂಕ್ತ.

ಡಾ. ಸಿ. ಬಿ. ಐನಳ್ಳಿ

ಡಾ. ಸಿ. ಬಿ. ಐನಳ್ಳಿ
ಸಹಾಯಕ ಪ್ರಾಧ್ಯಾಪಕರು, ಇಂಗ್ಲಿಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ


ಇದನ್ನೂ ಓದಿ: ಚಹರೆಗಳೆಂದರೆ ಗಾಯಗಳೂ ಹೌದು; ರಚನಾತ್ಮಕ ತಳಮಳಗಳ ದಮನಿತ ಸಮುದಾಯಗಳ ಕಥನ

LEAVE A REPLY

Please enter your comment!
Please enter your name here