ಮಹಾಜನವೆಂಬ ಮೇಲುವರ್ಗ ಅಥವಾ ಮೇಲು ಜಾತಿ ಸಮುದಾಯಗಳ ಚಹರೆಗಳ ಚರಿತ್ರೆಯನ್ನು ಪ್ರಶ್ನಾತೀತ ಮತ್ತು ಆದರ್ಶೀಯ ಮಹಾಕಥನಗಳಂತೆ ನೋಡುವುದು ಸಂಸ್ಕೃತಿ ಮತ್ತು ಚರಿತ್ರೆ ನಿರೂಪಣೆಯ ಒಂದು ಬಗೆ. ಈ ಚಹರೆಗಳುಳ್ಳ ಸಮುದಾಯಗಳು ಉತ್ಪಾದಕ ವರ್ಗವಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಮುಂದಾಳತ್ವವನ್ನು ಹೊಂದಿರುತ್ತವೆ. ಈ ದೇಶದ ಸಾಮಾಜಿಕ ಚರಿತ್ರೆಯಲ್ಲಿ ಬಹುಜನವೆಂಬ ಕೆಳಜಾತಿ ಮತ್ತು ಆದಿವಾಸಿಗಳು ಸಮುದಾಯಗಳ ಚಹರೆಗಳ ಮೇಲೆ ಸಂಸ್ಕೃತಿ ಹೆಸರಲ್ಲಿ, ನಾಗರಿಕತೆಯ ಹೆಸರಲ್ಲಿ ಆಳುವ ವರ್ಗಗಳು ರೂಪಿಸಿದ ಗಾಯಗಳೇ ಹೆಚ್ಚು. ಇವು ಬಹುಜನ ಸಮುದಾಯಗಳನ್ನು ಅನುತ್ಪಾದಕ ಮತ್ತು ಅಧೀನವರ್ಗವಾಗಿಸಿ ಸಮಾಜದ ಅಂಚಿನಲ್ಲಿ ಪ್ರತ್ಯೇಕವಾಗಿ ಉಳಿಯಲು ಕಾರಣವಾಗುತ್ತವೆ. ಇನ್ನು ಆದಿವಾಸಿಗಳು ಹಾಗೂ ಅಲೆಮಾರಿಗಳ ಚಹರೆಗಳ ಬಗೆಗೆ ಯೋಚಿಸಿದರೆ, ಈ ನಾಗರಿಕವೆನಿಸಿಕೊಳ್ಳುವ ಈ ಸಮಾಜ ಊಹೆ ಕೂಡ ಮಾಡಲಾಗದ ಅನೂಹ್ಯವಾದ ರೀತಿಯಲ್ಲಿ, ತಬ್ಬಲಿ ಸಮುದಾಯಗಳಾಗಿ ಭಿನ್ನ ಸಮಾಜದ ಸಂಕೇತಗಳಾಗಿ ಉಳಿದಿವೆ. ತಮ್ಮ ಈ ಬಗೆಯ ಚಹರೆಗಳ ಕಾರಣಕ್ಕಾಗಿಯೇ ಈ ಸಮುದಾಯಗಳು ನಾಗರಿಕ ಜಗತ್ತಿನಾಚೆಗೆ ಏಕಾಂಗಿ ಹಾಗೂ ಅಜ್ಞಾತ ಜೀವಿಗಳಾಗಿವೆ. ಆದ್ದರಿಂದಲೇ ಚಹರೆಗಳು ಎಂದರೆ ಗಾಯಗಳೂ ಹೌದು. ಏಕೆಂದರೆ, ಈ ಚಹರೆಗಳು ಎಂಬ ಅನನ್ಯತೆಗಳು ’ಸಮುದಾಯದ ಆಳದ ನೋವಿನ ಫಲವೂ’ ಆಗಿರುತ್ತವೆ.

ಆದಿವಾಸಿಗಳು ಮತ್ತು ಅಲೆಮಾರಿಗಳ ಪಾಲಿಗೆ ಚಹರೆಗಳೆಂದರೆ ನಾಗರಿಕ ಎಂದು ಕರೆದುಕೊಳ್ಳುವ ಜಗತ್ತು ಪ್ರಜ್ಞಾಪೂರ್ವಕವಾಗಿ ನಡೆಸಿದ ದೌರ್ಜನ್ಯದ ಇತಿಹಾಸವೇ ಆಗಿದೆ. ನಾಗರಿಕ ಎಂದು ಕರೆದುಕೊಳ್ಳುವ ಜಗತ್ತಿನಲ್ಲಿ ಈ ಸಮುದಾಯಗಳನ್ನು ಅನಾಗರಿಕ ಎಂದು ವಿರೂಪಗೊಳಿಸಲಾಗಿದೆ. ಇಂತಹ ನಿರೂಪಣೆಗಳು ಪುರಾತನ ಚರಿತ್ರೆ ಮಾತ್ರ ಆಗಿರದೆ, ಸ್ವಾತಂತ್ರ್ಯೋತ್ತರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ಈ ಸಮುದಾಯಗಳನ್ನು ಅನ್ಯ ಜನಾಂಗವೆಂದೇ ಪ್ರತಿಬಿಂಬಿಸುತ್ತಿರುವುದು ದುರಂತ.

ಪ್ರೊ. ಎ. ಎಸ್ ಪ್ರಭಾಕರ್‌ರವರ ’ಚಹರೆಗಳೆಂದರೆ ಗಾಯಗಳೂ ಹೌದು’ ಎಂಬ ಕೃತಿ ಇಂತಹ ಹಲವಾರು ರಚನಾತ್ಮಕ ತಳಮಳಗಳ ಮೂಲಕ ಆದಿವಾಸಿಗಳ ಬಗೆಗಿನ ಅಪವ್ಯಾಖ್ಯಾನಗಳನ್ನು ಎದುರುಗೊಳ್ಳುತ್ತದೆ.

ವರ್ತಮಾನ, ಸಾಂಸ್ಕೃತಿಕ ಅಧ್ಯಯನಗಳು ಹಾಗೂ ಪ್ರಸ್ತುತ ಅಭಿವೃದ್ಧಿಯ ರಾಜಕಾರಣದ ಸನ್ನಿವೇಶಗಳಿಂದಾಗಿ ಈ ಬುಡಕಟ್ಟು ಹಾಗೂ ಅಲೆಮಾರಿಗಳು ಎಂಬ ಚಹರೆಗಳು ನಾಗರಿಕ ಪ್ರಪಂಚದಲ್ಲಿ ಮ್ಯೂಸಿಯಂನ ವಸ್ತುಗಳಂತೆಯೇ ಬಿಂಬಿತವಾಗುತ್ತಿವೆ. ಎಥ್ನಿಕ್ ಎಂಬ ಪದವು ನಾಗರಿಕವಲ್ಲದ, ಮುಖ್ಯವಾಹಿನಿಯಿಂದ ಹೊರತಾದ ಅಥವಾ ಮಾನವ ವಿಕಾಸದ ಚರಿತ್ರೆಯಲ್ಲಿ ಸ್ಥಗಿತಗೊಂಡ ಹಂತದ ಜನಸಮುದಾಯಗಳನ್ನು ಸೂಚಿಸುವ ಪರಿಕಲ್ಪನೆಯಾಗಿಯೇ ಇಂದಿಗೂ ಬಳಸುತ್ತಿದ್ದೇವೆ. ಪಶ್ಚಿಮದ ಈ ದೃಷ್ಟಿಕೋನವನ್ನೇ ನಮ್ಮ ವಿಶ್ವವಿದ್ಯಾಲಯಗಳು, ಸರ್ಕಾರದ ಅಭಿವೃದ್ದಿ ನೀತಿ ನಿರೂಪಣೆಗಳಿಗೆ ಬಳಸುತ್ತಿರುವುದರ ಹಿಂದೆ ಬುಡಕಟ್ಟು ಹಾಗೂ ಅಲೆಮಾರಿಗಳನ್ನು ಕೇವಲ ಮ್ಯೂಸಿಯಂ ಥಿಂಗ್ಸ್‌ ಎಂದು ನೋಡುವ ಅಮಾನುಷ ಗ್ರಹಿಕೆಗಳಿವೆ.

ಈ ಗ್ರಹಿಕೆಗಳ ಕೊರತೆಯ ಮತ್ತು ಬೌದ್ಧಿಕ ಅಹಂಕಾರದ ಕಾರಣಕ್ಕೆ ಈ ಸಮುದಾಯಗಳನ್ನು ಕೇವಲ ಅಧ್ಯಯನ ಸರಕು ಎಂಬಂತೆ ನೋಡುವಂತಾಗಿದೆ. ಹಾಗಾಗಿ, ಈ ಸಾಂಸ್ಕೃತಿಕ ಚಹರೆಗಳನ್ನು ಅನನ್ಯತೆಯ ನೆಪದಲ್ಲಿ ಮಾತ್ರ ಉಳಿಸುವ ಇಂತಹ ಅಧ್ಯಯನಗಳ ಹಿಂದಿನ ಸಾಂಸ್ಕೃತಿಕ ರಾಜಕಾರಣವು ತೀರಾ ಅಮಾನವೀಯವಾಗಿದೆ. ಸಮುದಾಯಗಳ ಮೇಲೆ ಈ ಚಹರೆಗಳು ಹೇರಲ್ಪಡುತ್ತಿವೆಯೇ ಹೊರತು, ಘನತೆಯ ಪ್ರತಿಷ್ಠಾಪಿಸುವಿಕೆಯ ಹಿನ್ನೆಲೆಯಲ್ಲಿ ಇವು ರೂಪುಗೊಳ್ಳುತ್ತಿಲ್ಲ. ಈ ಕಾರಣದಿಂದಲೇ ಆದಿವಾಸಿ ಹಾಗೂ ಅಲೆಮಾರಿ ಜನಾಂಗಗಳನ್ನು ಕುರಿತು ನಾವು ವಹಿಸಬೇಕಾದ ಎಚ್ಚರ ಮತ್ತು ಚಿಂತನೆಗಳ ಸ್ವರೂಪ ಬೇರೆಯದ್ದೇ ಆಗಿರಬೇಕು ಎಂಬ ಅರಿವು ಮತ್ತು ಸಂವೇದನೆಯನ್ನು ಈ ಪುಸ್ತಕ ಜಾಗೃತಗೊಳಿಸುತ್ತದೆ.

ನಮಗೊಂದು ತಾಯ್ನಾಡಿಲ್ಲ ಎಂದು ಅಂಬೇಡ್ಕರರು ಗಾಂಧಿಗೆ ಪ್ರತಿಕ್ರಿಯಿಸಿದ್ದಂತೆಯೇ ಆದಿವಾಸಿಗಳು ಹಾಗೂ ಅಲೆಮಾರಿಗಳ ಸ್ಥಿತಿ ಇಂದಿನ ಆಧುನಿಕ ಭಾರತದಲ್ಲಿ ಏರ್ಪಟ್ಟಿದೆ ಎಂಬುದನ್ನು ಅರಿಯಲು ಪ್ರಭಾಕರ್ ಅವರ ಈ ಕೃತಿ ನಿರ್ದಿಷ್ಟ ತೋರುಗೈಯಾಗಿ ಮಾರ್ಗದರ್ಶನ ಮಾಡುತ್ತದೆ. ಯಾವುದೇ ಸಮುದಾಯ ಇಂದು ತನ್ನ ಅಸ್ಮಿತೆಯನ್ನು ತಾನೇ ನಿರ್ಮಿಸಿಕೊಳ್ಳುವುದಕ್ಕೆ ನಿರಂತರ ಸಂಘರ್ಷದಲ್ಲಿಯೇ ಉಳಿಯುವಂತಹ ಸ್ಥಿತಿ ಒಳಗಾಗಿದೆ ಎಂಬುದೇ ಈ ದೇಶದ ಸಾಮಾಜಿಕ ಹಾಗೂ ರಾಜಕೀಯ ಸ್ಥಿತಿಗಳು ಹೇಗಿವೆ ಎಂಬುದರ ಚಿತ್ರಣವನ್ನು ನೀಡುತ್ತವೆ. ಅದರಲ್ಲೂ ಲೇಖಕರು ಹೇಳುವಂತೆ ಆದಿವಾಸಿಗಳು ಮತ್ತು ಅಲೆಮಾರಿಗಳು ಶಾಪಗ್ರಸ್ತ ಪಯಣಿಗರೇ ಆಗಿ ಇಂದಿಗೂ ತುಂಡುಭೂಮಿ ಹಾಗೂ ಬದುಕಿನ ಹಕ್ಕುಗಳಿಗಾಗಿ ನಿರಂತರ ಸಂಘರ್ಷದಲ್ಲಿದ್ದಾರೆ. ಭಾರತದಲ್ಲಿ ಆದಿವಾಸಿಗಳ ಪರವಾಗಿರುವ ಎಂತಹವೇ ರಾಷ್ಟ್ರೀಯ ನೀತಿಗಳನ್ನು ತಂದರೂ ಕೂಡ ಈ ಸಮುದಾಯಗಳನ್ನು
ಆಧುನಿಕ ಪ್ರಭುತ್ವಗಳು ಹೊರಹಾಕುವುತ್ತಿವೆ ಎಂಬುದೇ ದೊಡ್ಡ ವಿರೋಧಾಭಾಸ. ಈ ವಿರೋಧಾಭಾಸಗಳ ಹಿಂದೆ ರಾಜಕೀಯ-ಆರ್ಥಿಕ ಅಸಮಾನತೆಗಳ ಸಮಸ್ಯೆಗಳಿವೆ ಎಂಬುದನ್ನು ಅರ್ಥ ಮಾಡಿಕೊಳ್ಳದೆ ಸಾಂಸ್ಕೃತಿಕವಾಗಿ ಮಾತಾಡುವ ನಮ್ಮ ರೂಢಿಗಳೇ ಅಮಾನುಷವಾಗಿವೆ.

ಸಮಾನವಾದ ಮಾನವ ಘನತೆ ಹಾಗೂ ಬದುಕಿನ ಹಕ್ಕುದಾರಿಕೆಯನ್ನು ಸ್ಥಾಪಿಸಲು ರಚನಾತ್ಮಕವಾಗಿ ಈ ಸಮುದಾಯಗಳನ್ನು ಒಳಗೊಳ್ಳಬೇಕಾಗಿದ್ದ ಪ್ರಜಾಪ್ರಭುತ್ವ ಸರ್ಕಾರಗಳು ಈ ಸಮುದಾಯಗಳನ್ನು ಅನುತ್ಪಾದಕ ವರ್ಗವನ್ನಾಗಿಸುತ್ತಿವೆ. ಅದರಲ್ಲೂ ಅಲೆಮಾರಿಗಳು ನಿರ್ದಿಷ್ಟವಾದ ಆರ್ಥಿಕಮೂಲಗಳಿಲ್ಲದೆ ಇಂದಿಗೂ ಶಾಪಗ್ರಸ್ಥ ಪಯಣದ ಸಮುದಾಯಗಳಾಗಿಯೇ ಜೀವಿಸುತ್ತಿವೆ. ಹಾಗಾಗಿ ಭಾರತದ ಅಖಂಡತೆಯೊಳಗೆ ಈ ಆದಿವಾಸಿಗಳು ಹಾಗೂ ಅಲೆಮಾರಿಗಳ ಮೇಲೆ ನಾವು ಅಧೀನತೆಯ ಚಹರೆಗಳನ್ನು ಹೇರುತ್ತಿದ್ದೇವೆಯೇ ಹೊರತು, ಅವುಗಳನ್ನು ಈ ಜನಾಂಗಗಳೇ ತಮ್ಮ ಆತ್ಮಪ್ರತ್ಯಯದ ಮೇಲೆ ಕಟ್ಟಿಕೊಳ್ಳುವ ಅವಕಾಶಗಳನ್ನು ನಿರ್ಮಿಸುತ್ತಿಲ್ಲ. ಚರಿತ್ರೆ ಹೇರಿರುವ ಈ ಚಹರೆಗಳನ್ನೇ ಹೊತ್ತು ಸಾಗುತ್ತಿರುವ ಈ ಸಮುದಾಯಗಳು ಸ್ವತಂತ್ರ ಭಾರತದಲ್ಲಿ ಅಜ್ಞಾತವಾಗಿ ಜೀವಿಸುತ್ತಿವೆ. ಅಖಿಲ ಭಾರತದ ಮಟ್ಟದಲ್ಲಿ ಆದಿವಾಸಿಗಳ ಸ್ಥಿತಿ ನಿರ್ಗತಿಕತನದಿಂದ ಕೂಡಿದೆ. ಬದುಕಿನ ಹಕ್ಕುಗಳಿಂದ ವಂಚಿತರಾಗಿ ಹೈವೆ ಪಕ್ಕದಲ್ಲಿ ಅಜ್ಞಾತ ಜನವಾಗಿ ಜೀವಿಸುತ್ತಿರುವುದು, ಭೂಹೀನರು, ವಸತಿಹೀನರಾಗಿ ಬೇಡುವ ಸ್ಥಿತಿಗೆ ಬಂದಿವೆ. ಈ ಸನ್ನಿವೇಶಗಳು ದಿನೇ ದಿನೇ ತೀವ್ರವಾಗುತ್ತಿವೆ. ಈ ಕೃತಿ ಇಂತಹ ವಾಸ್ತವ ಕಠೋರ ಸತ್ಯಗಳ ಕಥನವಾಗಿ ನಮ್ಮಲ್ಲಿ ಗಾಢ ವಿಷಾದವನ್ನುಟ್ಟಿಸುತ್ತದೆ.

ಸ್ವಾತಂತ್ರ್ಯ ಬಂದು ಅದರ ಅಮೃತಮಹೋತ್ಸವವನ್ನು ಆಚರಿಸುತ್ತಿರುವ ಹೊತ್ತಲ್ಲಿ ಆದಿವಾಸಿಗಳು ಹಾಗೂ ಅಲೆಮಾರಿಗಳು ಇಂದಿಗೂ ನಮ್ಮವರಾಗದೆ ಪ್ರತ್ಯೇಕವಾಗಿರುವುದು ಅವರ ಸಾಂಸ್ಕೃತಿಕ ಹೆಮ್ಮೆಯ ಚಹರೆಯ ಪ್ರತೀಕವೇ? ಈ ಪ್ರತ್ಯೇಕತೆಯನ್ನು ಸರ್ಕಾರ ಹಾಗೂ ನಾಗರಿಕ ಸಮಾಜ ಕಾಯ್ದುಕೊಂಡು ಹೋಗುತ್ತಿದೆ ಎಂಬ ಕಣ್ಣೆದುರಿನ ಸತ್ಯಗಳ ನೆರಳಲ್ಲಿ ಈ ಅಮೃತ ಮಹೋತ್ಸವವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ದೇಶ ಅಥವಾ ರಾಷ್ಟ್ರೀಯ ಹಿತಾಸಕ್ತಿ ಅಂದರೆ, ಜನ ಸಮುದಾಯಗಳನ್ನು ಬಲಿಗೊಡುವುದೇ? ಪ್ರಜಾಪ್ರಭುತ್ವ, ಸಂವಿಧಾನದ ಆಶಯಗಳು ಹಾಗೂ ನಮ್ಮ ಸರ್ಕಾರದ ರೀತಿನೀತಿಗಳು ಯಾಕೆ ಈ ಸಮುದಾಯಗಳನ್ನು ಹೊರಗಿಡುತ್ತಿವೆ? ಈ ಪ್ರಶ್ನೆಗಳಿಗೆ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ನಾಗರಿಕರಾದ ನಾವುಗಳು ಉತ್ತರಿಸಬೇಕಾಗುತ್ತದೆ.

ಪಾರಂಪರಿಕವಾಗಿ ಕಾಡಿನಲ್ಲಿದ್ದು ಕಾಡನ್ನು ರಕ್ಷಿಸಿ ಉಳಿಸಿಕೊಂಡದ್ದ ಈ ಸಮುದಾಯಗಳನ್ನು ಭೂಹೀನರು, ನೆಲೆಹೀನರು ಎಂಬ ಹಣೆಪಟ್ಟಿ ಹಚ್ಚಿ ದಮನ ಮಾಡುವುದೇ ಅವರ ಪಾಲಿಗೆ ಉಳಿದಿರುವುದು. ವಸಾಹತುಶಕ್ತಿಯನ್ನು ತೀವ್ರವಾಗಿ ಎದುರಿಸಿದ ಈ ಸಮುದಾಯಗಳನ್ನು ಕಾಲಾಂತರದಲ್ಲಿಯೂ ಆಧುನಿಕ ಸರ್ಕಾರಗಳು ಅಭಿವೃದ್ಧಿಯ ಹೆಸರಲ್ಲಿ ದುಷ್ಟೀಕರಿಸಿದವು.

ಚರಿತ್ರೆಯ ಈ ವಿಕೃತ ದೃಷ್ಟಿಕೋನಗಳು ಶೈಕ್ಷಣಿಕವಾಗಿ, ಕಾನೂನಲ್ಲಿ ಹಾಗೂ ಸರ್ಕಾರ ರೂಪಿಸುವ ಅಭಿವೃದ್ಧಿಯ ನೀತಿ ನಿರೂಪಣೆಗಳ ಒಳಗೂ ನುಸುಳಿದ್ದಲ್ಲದೆ ಇಂದಿಗೂ ಇವೇ ದೃಷ್ಟಿಕೋನಗಳು ನಮ್ಮ ಅಧ್ಯಯನಕಾರರಲ್ಲಿ ಮುಂದುವರಿಯುತ್ತಿವೆ.

ನೆಹರೂರವರ ಅಭಿವೃದ್ಧಿ ಕಲ್ಪನೆಗಳು ಆದಿವಾಸಿಗಳು ಕಾಡಿನಲ್ಲಿಯೇ ಇರಬೇಕೆಂದೂ, ಆದಿವಾಸಿಗಳು ತಮ್ಮ ಸ್ವಯಂ ಆಡಳಿತದ ಹಕ್ಕೊತ್ತಾಯವನ್ನು ಬಿಟ್ಟು ಸರ್ವಶಕ್ತ ಭಾರತದ ಸಾರ್ವಭೌಮತ್ವಕ್ಕೆ ಶರಣಾಗಬೇಕೆಂದೂ ಒತ್ತಾಯಿಸುತ್ತವೆ. ಅಲೆಮಾರಿ ಸಮುದಾಯಗಳ ಕಲೆ, ಪರಂಪರೆ ಮೆಚ್ಚಿ ಧಣಿಗಳು ನೀಡಿದ ಇನಾಮ್ ಭೂಮಿ ಹೇಗೆ ಕ್ರಮೇಣ ಭೂ ಮಾಲೀಕರ ಕೈವಶವಾದವೋ ಹಾಗೆಯೇ ನೆಹರೂ ಅವರ ಉದಾರವಾದೀ ನೋಟಕ್ರಮ  ಹಾಗೂ ಅವರ ಕಾಳಜಿಗಳು ಆದಿವಾಸಿ ಸಮುದಾಯಗಳಿಗೆ ಅನುಪಯುಕ್ತವಾದವು.

ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಹೇಳುವಂತೆ ಆದಿವಾಸಿಗಳು ಕಾಡನ್ನು ತೊರೆದು ನಾಡಿಗೆ ಬರಬೇಕು. ಈ ದಿಶೆಯಲ್ಲಿ ಆ ಸಮುದಾಯಗಳೊಳಗೆ ಚಲನಶೀಲತೆ ಮೂಡುವಂತಹ ರಾಜಕೀಯ ಶಿಕ್ಷಣ ಹಾಗೂ ಆರ್ಥಿಕವಾದ ಸ್ವಾಯತ್ತತೆಯ ವ್ಯವಸ್ಥೆಗೆ ದೇಶ ತೆರೆದುಕೊಳ್ಳಬೇಕಾಗುತ್ತದೆ. ಈ ದೇಶದ ಹತಭಾಗ್ಯರ ಪ್ರತಿನಿಧಿಯಂತಿದ್ದ ಬಾಬಾ ಸಾಹೇಬರು, ಪರಂಪರೆಯೇ ತಮ್ಮನ್ನು ರಕ್ಷಿಸುತ್ತದೆ ಎಂಬ ಭಾವನೆಗಳನ್ನು ಬಿಟ್ಟು ತಮ್ಮ ಪ್ರತ್ಯೇಕತೆ ಆದಿವಾಸಿಗಳಿಗೆ ಜಡತೆಯಾಗದೆ ಚಲನಶೀಲತೆಯ ಪ್ರತೀಕವಾಗಬೇಕೆಂದೇ ಎಚ್ಚರಿಸಿದ್ದರು. ಆದರೆ ಈ ವಿಚಾರದಲ್ಲಿ ಪ್ರಬಲ ಕೇಂದ್ರ ಸರ್ಕಾರವಿರಬೇಕು ಎಂಬುದರ ವಿರೋಧಾಭಾಸದ ಕಾರಣ ಅಂಬೇಡ್ಕರರ ರಾಷ್ಟ್ರೀಯತೆಯನ್ನು ಬಪಂಥೀಯರು ಹೇಳುವ ರಾಷ್ಟ್ರೀಯತೆಗೆ ಹೋಲಿಸಬಾರದು. ಈ ವಿಚಾರದಲ್ಲಿ ಸಂವಿಧಾನ ಅರ್ಪಣಾ ಸಮಾರಂಭದಲ್ಲಿ ಅವರು ಹೇಳಿದ, ನಮ್ಮದು ವಿರೋಧಾಭಾಸಗಳ ಸಮಾಜ ಎಂಬುದನ್ನು ನಾವು ನೆನಪಿಟ್ಟುಕೊಂಡರೆ ಎಲ್ಲಿ ಎಡವುತ್ತಿದ್ದೇವೆ ಎಂಬುದು ಗೊತ್ತಾಗಬಹುದು. ರಾಷ್ಟ್ರೀಯತೆ ಎಂಬುದನ್ನು ಸಾಮಾಜಿಕ ಏಕರೂಪವೆಂಬಂತೆ ಭಾವಿಸುವ ನಮ್ಮ ಕಲ್ಪನೆಗಳು ಆದಿವಾಸಿಗಳು, ಅಲೆಮಾರಿ ಸಮುದಾಯಗಳ ಬಲಿ ಕೇಳುತ್ತಿರುತ್ತವೆ ಎಂಬುದನ್ನು ನಾವು ಮರೆಯಬಾರದು. ಸಮಷ್ಠಿ ಏಕತೆ ಎಂಬ ರಾಷ್ಟ್ರೀಯತೆಯ ಆದರ್ಶಗಳು ನಮ್ಮ ಸಾಮಾಜಿಕ ಚರಿತ್ರೆಯನ್ನು ಸರಳೀಕರಿಸಿ ಬಹುಜನರನ್ನು ತಮ್ಮ ಆದರ್ಶಗಳಿಗೆ ಬಲಿ ಕೇಳುತ್ತಿರುತ್ತವೆ.

ಮೇಲಾಗಿ ಚರಿತ್ರೆಯಲ್ಲಿನ ತೋರಿಕೆಯ ಗಣ್ಯತೆಯು ವರ್ತಮಾನದಲ್ಲಿ ಅದರ ಹಸಿವೆಯನ್ನು ನೀಗಿಸಲಾರದು ಎಂಬುದು ಸತ್ಯ. ವರ್ತಮಾನದ ಬಿಕ್ಕಟ್ಟುಳು ಎದುರಾಗದೆ ಒಂದು ನಿಶ್ಚಿತವಾದ ಆಧ್ಯಾತ್ಮದ ಆವರಣದಲ್ಲಿ ಮಾತಾಡುವುದು ಸನಾತನ ಹಾಗೂ ರಾಷ್ಟ್ರೀಯತೆಯ ಹೆಸರಲ್ಲಿನ ಹಿಪೋಕ್ರಸಿಯೇ ಆಗಿರುತ್ತದೆ. ಅಲ್ಲದೆ ರಾಷ್ಟ್ರೀಯತೆಯನ್ನು ಊಳಿಗಮಾನ್ಯಶಾಹಿ ಮೌಲ್ಯಗಳ ಭಾಗವಾಗಿ ನೋಡುತ್ತಿರುವ ಶಕ್ತಿರಾಜಕಾರಣವು ಸಂವಿಧಾನ ವಿರೋಧಿಯಾಗುವ ಬೆಳವಣಿಗೆಗಳಿಗೆ ಕಾರಣವಾಗಿದೆ. ಈ ಎಚ್ಚರದೊಳಗೆ ಸಾಂಸ್ಕೃತಿಕ ಅಧ್ಯಯನಗಳು ಮೂಡಬೇಕೆ ಹೊರತು, ಅವಾಸ್ತವಿಕ ಭ್ರಮೆಗಳಲ್ಲಿ ಸಮುದಾಯಗಳ ಚಹರೆಗಳನ್ನು ಅಮೂರ್ತಿಕರಿಸುವುದು ತುಂಬ ಅಪಾಯಕರ. ಇಂತಹ ಚಹರೆಗಳ ಕಣ್ಣೋಟಗಳು ಇಂದಿಗೂ ಬದಲಾಗದ ಕಾರಣ ಬ್ರಿಟಿಷರ ಕಾಲದಲ್ಲಿ ಭೂಹೀನರಾಗಿ, ನೆಲೆಹೀನರಾದ ಆದಿವಾಸಿಗಳ ಸ್ಥಿತಿ ಇಂದಿಗೂ ಬದಲಾಗಿಲ್ಲ.

ಮೇಲಾಗಿ ಅಸಂಬದ್ಧ ಹಾಗೂ ಅಸಂತಗವೆನಿಸುವ ಬುಡಕಟ್ಟು ಯೋಜನೆಗಳು ಈ ಸಮುದಾಯಗಳ ಪಾಲ್ಗೊಳ್ಳುವಿಕೆಯನ್ನೇ ಡಿಸ್ಮಿಸ್ ಮಾಡುತ್ತವೆ. ಹಾಗೆ ನೋಡಿದರೆ, ಸರ್‍ದಾರ್ ಸರೋವರದ ಅಣೆಕಟ್ಟು ಎತ್ತರವನ್ನು ಹೆಚ್ಚಿಸಿದ ಪರಿಣಾಮವಾಗಿ ನಿರಾಶ್ರಿತರಾದ ಆದಿವಾಸಿಗಳು, ಈಶಾನ್ಯ ಭಾರತದ ಆದಿವಾಸಿಗಳು ಮತ್ತು ಕರ್ನಾಟಕ ಕೇರಳದಲ್ಲಿ ಅಭಯಾರಣ್ಯ ಹಾಗೂ ರಾಷ್ಟ್ರೀಯ ಉದ್ಯಾನವನಗಳ ನಿರ್ಮಾಣದ ಕಾರಣಕ್ಕಾಗಿ ಆದಿವಾಸಿಗಳನ್ನು ಒಕ್ಕೆಲೆಬ್ಬಿಸಿರುವ ನಮ್ಮ ಸರ್ಕಾರಗಳು ಆದಿವಾಸಿಗಳನ್ನು ಅಭಿವೃದ್ಧಿ ವಿರೋಧೀ ಜನಾಂಗಗಳು ಎಂದು, ನಕ್ಸಲರು ಆದಿವಾಸಿಗಳನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂಬ ಅಪಾರ್ಥ ಸೃಷ್ಟಿಯಾಗುವಂತೆ ನೋಡಿಕೊಳ್ಳುತ್ತಿವೆ. ವಿಚಿತ್ರವೆಂದರೆ, ಈ ದೇಶದ ರಕ್ಷಣಾ ಸಚಿವರು ಮತ್ತು ಸರ್ಕಾರಗಳು ಆದಿವಾಸಿಗಳ ಮೇಲೆ ಆಪರೇಷನ್ ಗ್ರೀನ್ ಹಂಟ್ ಎಂದು ಕರೆದುಕೊಳ್ಳುವ ಸೈನ್ಯ ನುಗ್ಗಿಸಿ, ಅಪಾರ ಅರಣ್ಯ ಸಂಪತ್ತನ್ನು ಬಂಡವಾಳಶಾಹಿಗಳು ದೋಚಲು ಅನುವು ಮಾಡಿಕೊಡುತ್ತಿವೆ. ಇವುಗಳಿಗೆಲ್ಲ ರಾಷ್ಟ್ರೀಯ ಹಿತಾಸಕ್ತಿ ಮತ್ತು ಅಭಿವೃದ್ಧಿ ಎಂಬ ತೇಪೆ ಹಚ್ಚಲಾಗುತ್ತಿದೆ.

ಬಿರ್ಸಾ ಮುಂಡಾನ ’ಈ ಕಾಡು ನಮ್ಮದು’ ಎಂಬ ಆದರ್ಶಕಲ್ಪನೆಗಳನ್ನು ಈ ನಾಗರಿಕ ಸಮಾಜ ಹಾಗೂ ಪ್ರಭುತ್ವಗಳು, ರಾಷ್ಟ್ರ ವಿರೋಧಿ ಎಂದು ಏಕೆ ಗ್ರಹಿಸುತ್ತಿವೆ? ಬಂಡವಾಳಶಾಹಿಗಳಿಗೆ ನೆಲ ಜಲ ಹಾಗೂ ಕಾಡುಗಳನ್ನು ಅಭಿವೃದ್ಧಿಯ ಹೆಸರಲ್ಲಿ ಒಪ್ಪಿಸುತ್ತಿರುವ ನಮ್ಮ ಆಧುನಿಕ ಸರ್ಕಾರಗಳು ಏಕೆ ಆದಿವಾಸಿಗಳಿಗೆ ಭೂಮಿ ಹಾಗೂ ವಸತಿಯನ್ನು ಒದಗಿಸುತ್ತಿಲ್ಲ? ಬ್ರಿಟಿಷ್ ಸರ್ಕಾರಗಳು ಆದಿವಾಸಿಗಳನ್ನು ಅಪರಾಧಿಗಳು ಹಾಗೂ ಕಳ್ಳರು ಎಂದು ಬಿಂಬಿಸಿದಂತೆಯೇ ನಮ್ಮ ಸ್ವತಂತ್ರ ಭಾರತದ ಸರ್ಕಾರಗಳು ಆದಿವಾಸಿಗಳ ಬದುಕಿನ ಅಸ್ಮಿತೆಯ ಪ್ರಶ್ನೆಗಳನ್ನು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧ ಎಂದು ಅರ್ಥೈಸುವ ಹುನ್ನಾರ ಏಕೆ ಮಾಡುತ್ತಿವೆ? ಆದಿವಾಸಿಗಳನ್ನು ಒಳಗೊಳ್ಳದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಒಕ್ಕಲೆಬ್ಬಿಸಿ ಈ ಸಮುದಾಯಗಳನ್ನು ಅದೃಶ್ಯ ಜನಾಂಗಗಳನ್ನಾಗಿಸಲಾಗುತ್ತಿದೆ. ಈಗ ಆದಿವಾಸಿಗಳ ನಿರ್ನಾಮ, ಮುಂದೊಂದು ದಿನ ಸಂಪೂರ್ಣವಾಗಿ ಬಡವರನ್ನು ದೇಶಕ್ಕಾಗಿ ಬಲಿಗೊಡುವುದನ್ನು ರಾಷ್ಟ್ರೀಯ ಹಿತಾಸಕ್ತಿ ಎಂಬ ಪರಿಕಲ್ಪನೆಗೆ ಬಳಸಬಹುದೇನೋ ಎಂಬುದನ್ನು ನೆನಪಿಸಿ ದಿಗಿಲಾಗುತ್ತಿದೆ.

ಮೇಲಿನ ಸಂಕೀರ್ಣತೆಗಳು ಆದಿವಾಸಿ ಹಾಗೂ ಅಲೆಮಾರಿ ಸಮುದಾಯಗಳ ರೂಪಾಂತರ ಕಥನಗಳೇ ಆಗಿವೆ. ಚಹರೆಗಳು ಗಾಯಗಳೇ ಎಂಬ ಸತ್ಯವನ್ನು ಹಲವು ಹಿನ್ನೆಲೆಯಿಂದ ಪರಿಶೀಲಿಸಿ, ವಾಸ್ತವವನ್ನು ಖುದ್ದಾಗಿ ಗಮನಿಸಿ ಈ ಸಮುದಾಗಳ ಆಂತರ್ಯದ ಜೊತೆ ಇದ್ದುಕೊಂಡೆ ಆದಿವಾಸಿಗಳು ಹಾಗೂ ಅಲೆಮಾರಿ ಸಮುದಾಯಗಳ ಕಥನಗಳ ಚರಿತ್ರೆಯನ್ನು ಅಧ್ಯಯನಕ್ಕೆ ಒಳಪಡಿಸಿರುವ ಈ ಕೃತಿ ನಾವು ಇದುವರೆಗೆ ಕಾಣದಿರುವ ಸತ್ಯಗಳನ್ನು ಅನಾವರಣ ಮಾಡುತ್ತದೆ. ಒಟ್ಟು ಆದಿವಾಸಿ ಸಮುದಾಯಗಳ, ಅಲೆಮಾರಿ ಸಮುದಾಯಗಳ ಅಧ್ಯಯನಗಳ ಹಿಂದಿನ ಧೋರಣೆಗಳು, ಚರಿತ್ರೆ ಹಾಗೂ ಸಂಸ್ಕೃತಿ ಅಧ್ಯಯನದ ವಂಚನೆಗಳನ್ನಲ್ಲದೆ, ಈ ಸಮುದಾಯಗಳ ವರ್ತಮಾನದ ದುರಂತಗಳನ್ನು ಈ ಕೃತಿ ಮನಗಾಣಿಸುತ್ತದೆ.

ಸಮಗ್ರವಾದ ಒಂದು ಸ್ಥಳೀಯ ವರ್ಗಸಂಘರ್ಷದ ಸಾಧ್ಯತೆಗಳನ್ನು ಕೈಚೆಲ್ಲಿದ ಕರ್ನಾಟಕ ರೈತ ಹೋರಾಟ ಹಾಗೂ ದಸಂಸಗಳ ಮಿತಿಗಳನ್ನು ಈ ಕೃತಿ ವಿಮರ್ಶಿಸುತ್ತಲ್ಲದೆ, ಈ ವಿಚಾರದಲ್ಲಿ ಸಮುದಾಯಗಳ ವರ್ಗ ಸಂಘರ್ಷದ ಒಂದು ಸಮಗ್ರವಾದ ರಾಜಕೀಯ ತಿಳಿವಳಿಕೆಯನ್ನು ನೀಡುತ್ತದೆ. ಜೊತೆಗೆ ದಮನಿತರನ್ನು ಒಗ್ಗೂಡಿಸುವ ಸಾಂಸ್ಕೃತಿಕ ಅನನ್ಯತೆಯ ವಾಸ್ತವಾದಿ ಚಿಂತನೆಯನ್ನು ನಾವು ಪ್ರತಿಪಾದಿಸಬೇಕು ಎಂದೇ ಒತ್ತಾಯಿಸುತ್ತದೆ. ದುಡಿವವರು, ಕೆಳಜಾತಿಗಳು ಹಾಗೂ ಆದಿವಾಸಿಗಳು ಆತ್ಮಪ್ರತ್ಯಯ ಹೊಂದುವುದೆ ಮುಖ್ಯವಾಹಿನಿಯ ಜಾತಿ ಸಮಾಜಕ್ಕೆ ಕಿರಿಕಿರಿಯಾಗುತ್ತದೆ. ಜೊತೆಗೆ ರಾಷ್ಟ್ರೀಯತೆ ನೆಪದಲ್ಲಿ ಊಳಿಗಮಾನ್ಯ ಮೌಲ್ಯಗಳು ಇಂದು ನವ ಬಂಡವಾಳಶಾಹಿವರ್ಗದ ಜೊತೆಗೂಡಿ ಒಟ್ಟಾರೆಯಾಗಿ ದಮನಿತರನ್ನು ನಿರ್ಗತಿಕರು, ಭೂಹೀನರು, ನಿರಾಶ್ರಿತರನ್ನಾಗಿಸುತ್ತಿವೆ. ಹಾಗಾಗಿ ಕೇಂದ್ರ ಸರ್ಕಾರದ ಧೋರಣೆಗಳು ಸ್ಥಳೀಯತೆ ಹಾಗೂ ಪ್ರಾದೇಶಿಕತೆ ಜನವರ್ಗಗಳ ಚಹರೆಗಳನ್ನು ಆಪೋಶನ ತೆಗೆದುಕೊಳ್ಳುತ್ತಿವೆ. ಈ ಸತ್ಯಗಳಿಗೆ ಎದುರಾಗಿಯೇ ಸಮುದಾಯಗಳ ರಾಜಕೀಯ ಕೇಂದ್ರಿತವಾದ ವರ್ಗಸಂಘರ್ಷದ ತತ್ವ ರೂಪಿಸಬೇಕಿದೆ ಎಂಬ ರಾಜಕೀಯ ಮೀಮಾಂಸೆಯನ್ನು ಪರೋಕ್ಷವಾಗಿ ಈ ಕೃತಿ ಕಟ್ಟಿಕೊಡುತ್ತದೆ.

ಆದಿವಾಸಿಗಳು ಹಾಗೂ ಅಲೆಮಾರಿಗಳಿಗೆ ಎಲ್ಲರೂ ಜಿಗಣೆಗಳೇ ಎಂದು ಹೇಳುವುದು ಸೂಕ್ತವೆನಿಸುತ್ತದೆ. ಬ್ರಿಟಿಷ್ ಕಾನೂನುಗಳು, ಊಳಿಗಮಾನ್ಯವ್ಯವಸ್ಥೆ, ಸ್ವತಂತ್ರ ಭಾರತದ ಸರ್ಕಾರಗಳು, ಸಾಂಸ್ಕೃತಿಕ ಅಧ್ಯಯನಕಾರರು ಹಾಗೂ ವಿಶ್ವವಿದ್ಯಾಲಯಗಳು ಎಲ್ಲರೂ ಈ ಸಮುದಾಯಗಳ ಗಾಯಗಳನ್ನು ಉಳಿಸುತ್ತಿವೆ. ’ಚಹರೆಗಳೆಂದರೆ ಗಾಯಗಳೂ ಹೌದು’ ಎಂಬ ಕೃತಿಯನ್ನು ಓದುತ್ತಿದ್ದರೆ ಈ ತಪ್ಪೊಪ್ಪಿಗೆ ನಮ್ಮೆಲ್ಲರೊಳಗೂ ಸದ್ದಿಲ್ಲದೆ ಮೂಡುತ್ತದೆ.

ಪ್ರಕಾಶ್ ಮಂಟೇದ
ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಪ್ರಕಾಶ್ ವಿದ್ಯಾರ್ಥಿ ದೆಸೆಯಿಂದಲೂ ಹೋರಾಟಗಳಲ್ಲಿ ತೊಡಗಿಸಿಕೊಂಡವರು. ಸಮಕಾಲೀನ ಸಂಗತಿಗಳ ಬಗ್ಗೆ ಹೊಸ ನೋಟಗಳನ್ನು ನೀಡಬಲ್ಲ ಯುವ ಚಿಂತಕರು.


ಇದನ್ನೂ ಓದಿ: ‘ಚಹರೆಗಳೆಂದರೆ ಗಾಯಗಳೂ ಹೌದು’ ಒಂದು ಸಕಾಲಿಕ ಮೌಲಿಕ ಕೃತಿ – ನಾ ದಿವಾಕರ

LEAVE A REPLY

Please enter your comment!
Please enter your name here