ಕರ್ನಾಲ್‌: ಮುಂದುವರೆದ ಪ್ರತಿಭಟನೆ, ಸರ್ಕಾರಿ ಕಚೇರಿಗಳ ಹೊರಗೆ ಜಮಾಯಿಸಿರುವ ರೈತರು
PC:[email protected]

ಹರಿಯಾಣದ ಕರ್ನಾಲ್‌ನಲ್ಲಿ ರೈತರ ಮಂಗಳವಾರ (ಸೆ.7) ಆರಂಭಿಸಿರುವ ಪ್ರತಿಭಟನೆ ಮುಂದುವರೆದಿದೆ. ರೈತರ ತಲೆ ಒಡೆಯಲು ಆದೇಶ ನೀಡಿದ್ದ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಆಗಿರುವ ಆಯುಷ್‌ ಸಿನ್ಹಾ ವಿರುದ್ಧ ಕೈಗೊಳ್ಳಬೇಕು ಎಂದು ರೈತರು  ಕರ್ನಾಲ್ ಮಿನಿ ಸೆಕ್ರೆಟರಿಯೆಟ್ ಮುತ್ತಿಗೆ ಹಾಕಿದ್ದಾರೆ.

ಮಂಗಳವಾರ ನಡೆದ ಕಿಸಾನ್ ಮಹಾಪಂಚಾಯತ್ ಬಳಿಕ ಪ್ರತಿಭಟನೆ ಅನಿರ್ಧಿಷ್ಟಾವಧಿಯ ಧರಣಿಯಾಗಿ ಮಾರ್ಪಟ್ಟಿದೆ. ಮಿನಿ ಸೆಕ್ರೆಟರಿಯೇಟ್ ಹೊರಗೆ ಬುಧವಾರ ಬೆಳಿಗ್ಗೆ ಧರಣಿ ಮುಂದುವರೆದಿದ್ದು, ರೈತರು ಅಲ್ಲಿಯೇ ರಾತ್ರಿಯನ್ನು ಕಳೆದಿದ್ದಾರೆ.

ಕಳೆದ ಆಗಸ್ಟ್ 28 ರ ಪ್ರತಿಭಟನೆಯಲ್ಲಿ ರೈತರ ಮೇಲೆ ನಡೆದ ಮಾರಣಾಂತಿಕ ಲಾಠಿ ಚಾರ್ಜ್ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ರೈತರು ಮತ್ತು ಹರಿಯಾಣ ಸರ್ಕಾರದ ಜೊತೆ ನಡೆಸಿದ ಮಾತುಕತೆ ವಿಫಲವಾಗಿದ್ದರಿಂದ ಪ್ರತಿಭಟನಾ ನಿರತ ರೈತರು ಸರ್ಕಾರಿ ಕಚೇರಿಗಳ ಹೊರಗೆ ಬಿಡಾರ ಹೂಡಿ ಪ್ರತಿಭಟನೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ರೈತ ಹೋರಾಟ: ಸೆ.27ಕ್ಕೆ ಭಾರತ್‌ ಬಂದ್‌ಗೆ ಕರೆ ನೀಡಿದ ರೈತ ಸಂಘಟನೆಗಳು

 

“ಹರಿಯಾಣ ಆಡಳಿತವು ಎಸ್‌ಡಿಎಮ್‌ನ ಹಿಂದಿನ ಕ್ರಮದ ವಿವರಣೆಯನ್ನು ನೀಡಲು ಪ್ರಯತ್ನಿಸಿದೆ. ನಾವು ನಮ್ಮ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ರೈತರೊಂದಿಗೆ ಸಭೆ ನಡೆಸುತ್ತೇವೆ” ಎಂದು ಕರ್ನಾಲ್‌ನಲ್ಲಿ ಬಿಕೆಯು ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಮಂಗಳವಾರ ಸಂಜೆ ಕರ್ನಾಲ್‌ನ ಮಹಾಪಂಚಾಯತ್ ಸ್ಥಳದಿಂದ ಸರ್ಕಾರಿ ಕಚೇರಿಗಳಿಗೆ ಘೇರಾವ್ ಮಾಡಲು ರೈತ ಸಂಘಗಳು ಮಿನಿ ಸೆಕ್ರೆಟರಿಯೇಟ್ ಕಡೆಗೆ ಹೊರಟಿದ್ದವು. ಕೆಲವು ರೈತರು ಬ್ಯಾರಿಕೇಡ್‌ಗಳನ್ನು ತಳ್ಳಿ ಮುಂದೆ ಹೋದ ಕಾರಣ ಪೊಲೀಸರು ರೈತರ ಮೇಲೆ ಜಲ ಫಿರಂಗಿಗಳನ್ನು ಬಳಸಿದ್ದಾರೆ. ಆದರೂ, ಈ ಸ್ಥಳಕ್ಕೆ ತಲುಪುವ ದಾರಿಯಲ್ಲಿ ಪೊಲೀಸರೊಂದಿಗೆ ಯಾವುದೇ ಗಂಭೀರ ಘರ್ಷಣೆ ನಡೆದಿಲ್ಲ.

ಸದ್ಯ ರೈತರು ಪ್ರತಿಭಟನೆ ನಡೆಸುತ್ತಿರುವ ಮಿನಿ ಸೆಕ್ರೆಟರಿಯೇಟ್ ಹೊರಗೆ ರೈತರಿಗಾಗಿ ಲಾಂಗರ್‌ಗಳನ್ನು ಆಯೋಜಿಸಲಾಗಿದೆ.

ಹರಿಯಾಣ ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥರಾಗಿರುವ ಗುರ್ನಾಮ್ ಸಿಂಗ್ ಚೌದುನಿ, ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಧರಣಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಇತ್ತ, ಜಿಲ್ಲೆಯಲ್ಲಿ ಇನ್ನೊಂದು ದಿನ ಮೊಬೈಲ್ ಇಂಟರ್ನೆಟ್ ಸ್ಥಗಿತವನ್ನು ಬುಧವಾರ ಮಧ್ಯರಾತ್ರಿಯವರೆಗೆ (23:59 ಗಂಟೆ) ವಿಸ್ತರಿಸಲಾಗಿದೆ. ಸೆಕ್ಷನ್ 144 ಸಿಆರ್‌ಪಿಸಿ ಅಡಿಯಲ್ಲಿ ಜನರು ಸೇರುವುದನ್ನು ನಿಷೇಧಿಸಲಾಗಿದೆ.


ಇದನ್ನೂ ಓದಿ: ಹರಿಯಾಣದ ಕರ್ನಾಲ್‌ನಲ್ಲಿ ಇಂದು ರೈತ ಪ್ರತಿಭಟನೆ: ಇಂಟರ್‌ನೆಟ್ ಸ್ಥಗಿತಗೊಳಿಸಿದ ಸರ್ಕಾರ

LEAVE A REPLY

Please enter your comment!
Please enter your name here