ಕೊರೊನಾ ಸೃಷ್ಟಿಸಿದ್ದ ತಲ್ಲಣದಿಂದ ಜನರು ಈಗಷ್ಟೆ ಸುಧಾರಿಸಿಕೊಳ್ಳುತ್ತಿದ್ದರೂ, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವುದನ್ನು ನೋಡಿದಾಗ ಭಯವಾಗುವುದು ಇದ್ದೇ ಇದೆ. ಚೀನಾ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಕಡಿಮೆಯಾಗಿದ್ದ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರಮುಖ ನಗರಗಳು ಲಾಕ್‌ಡೌನ್ ಘೋಷಿಸಿವೆ.
ಇದೇ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೋವಿಡ್-19 ವೈರಸ್‌ನಿಂದ ರೂಪಾಂತರಗೊಂಡಿರುವ ಡೆಲ್ಟಾ ಪ್ಲಸ್‌ನಿಂದ ಸೋಂಕಿಗೆ ಒಳಗಾಗಿರುವ ಎರಡು ಪ್ರಕರಣಗಳು ಪತ್ತೆಯಾದ ಕಾರಣ ಕರ್ನಾಟಕದಲ್ಲಿ ಅನೇಕರು ಭಯಭೀತರಾಗಿದ್ದು, ಮತ್ತೊಮ್ಮೆ ಲಾಕ್‌ಡೌನ್ ಆಗಬಹುದು ಎಂಬ ವದಂತಿ ಎಲ್ಲೆಡೆ ಹರಡುತ್ತಿರುವ ಹಿನ್ನೆಲೆಯಲ್ಲೆ, ಕೋವಿಡ್ ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಮತ್ತೊಂದು ಲಾಕ್‌ಡೌನ್ ಆಗಬಹುದು ಎಂಬ ವದಂತಿಗಳನ್ನು ತಳ್ಳಿ ಹಾಕಿದೆ.
ಟಿಎಸಿಯ ಅಧ್ಯಕ್ಷರಾದ ಡಾ.ಎಂ.ಕೆ. ಸುದರ್ಶನ್ ಈ ವದಂತಿಯನ್ನು ತಳ್ಳಿಹಾಕಿದ್ದು, ’ಡೆಲ್ಟಾ ಪ್ಲಸ್ (ಎವೈ 4.2) ರೂಪಾಂತರ ಸೋಂಕಿತರ ಪ್ರಕರಣಗಳ ಆವಿಷ್ಕಾರದಿಂದಾಗಿ ಕರ್ನಾಟಕದಲ್ಲಿ ಮತ್ತೊಂದು ಲಾಕ್‌ಡೌನ್ ಮಾಡಬೇಕು ಎಂಬುವ ಟಿಎಸಿ ವರದಿಗಳು ಆಧಾರರಹಿತ ಮತ್ತು ಅವಾಸ್ತವಿಕವಾಗಿವೆ. ಕಳೆದ ಬಾರಿ ರಾಜ್ಯದಲ್ಲಿ ಪ್ರತಿದಿನ ಸುಮಾರು 50 ಸಾವಿರ ಕೋವಿಡ್ ಪ್ರಕರಣಗಳ ವರದಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಲಾಕ್‌ಡೌನ್ ಶಿಫಾರಸ್ಸು ಮಾಡಲಾಗಿತ್ತು ಎಂಬುದನ್ನು ಜ್ಞಾಪಿಸಿಕೊಳ್ಳಬಹುದು. ಕಳೆದ ಎರಡು ದಿನಗಳಿಂದ ಸೋಂಕಿತರ ಸಂಖ್ಯೆಯು 350ಕ್ಕಿಂತಲೂ ಕಡಿಮೆಯಾಗಿದೆ’ ಎಂದು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಡೆಲ್ಟಾ ಪ್ಲಸ್ ರೂಪಾಂತರದ ಎರಡು ಪ್ರಕರಣಗಳು ಬೆಂಗಳೂರಿನಲ್ಲಿ ದೃಢಪಟ್ಟಿವೆ ಎಂದು ತಿಳಿಸಿದ ಅವರು, ’ಭಾರತದಾದ್ಯಂತ ಜೀನೋಮಿಕ್ ಅನುಕ್ರಮದ ಮೂಲಕ 17 ಪ್ರಕರಣಗಳು ದಾಖಲಾಗಿದ್ದು, ಎರಡು ಪ್ರಕರಣಗಳು ಬೆಂಗಳೂರಿನಲ್ಲಿ ದೃಢಪಟ್ಟಿವೆ. ಸೋಂಕಿತರು ಚಿಕಿತ್ಸೆ ಪಡೆದಿದ್ದು, ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಂಚಿಕೊಂಡಿರುವ ದಾಖಲೆಯಲ್ಲಿ ಜುಲೈನಲ್ಲಿ 23 ಮತ್ತು 43 ವರ್ಷ ವಯೋಮಾನದ ಇಬ್ಬರಲ್ಲಿ ಈ ಸೋಂಕನ್ನು ಗುರುತಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
‘ಮಕ್ಕಳನ್ನು ಶಾಲೆಗೆ ಕಳುಹಿಸುವ ಪೋಷಕರು ಇಂತಹ ಆಧಾರರಹಿತ ವರದಿಗಳನ್ನು ಓದುವ ಮೂಲಕ ಭಯಪಡಬಾರದು. ನಾವು (ಟಿಎಸಿ) ರಾಜ್ಯದಲ್ಲಿ ಸಾಂಕ್ರಾಮಿಕ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ’ ಎಂದು ಸುದರ್ಶನ್ ತಿಳಿಸಿದರು.
ರಾಜ್ಯ ಆರೋಗ್ಯ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ ಈವರೆಗೆ, ಕರ್ನಾಟಕದಲ್ಲಿ 29.86 ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 29.40 ಲಕ್ಷ ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಬುಧವಾರ (ಅಕ್ಟೋಬರ್ 27) 8,430 ಸಕ್ರಿಯ ಪ್ರಕರಣಗಳಿದ್ದು, ಕಳೆದ ವರ್ಷ ಮಾರ್ಚ್ 10 ರಿಂದ 38,037 ಜನರು ಸೋಂಕಿಗೆ ಬಲಿಯಾಗಿದ್ದಾರೆ.
ಇದನ್ನೂ ಓದಿ: ದಲಿತರಿಗೆ ಕ್ಷೌರ ಮಾಡುವುದಿಲ್ಲ: ಮಂಡ್ಯ ಜಿಲ್ಲೆಯಲ್ಲಿ ಬಹಿರಂಗ ಅಸ್ಪೃಶ್ಯತೆ ಆಚರಣೆ


